ಕರ್ನಾಟಕದ ಕೃಷಿ ಪರಿಸ್ಥಿತಿ: 2018-21

cpim rajya sammelanaಭಾರತದ ಪ್ರಮುಖ ಎಡಪಕ್ಷ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ)ದ 23ನೇ ಮಹಾಧಿವೇಶನ ಎಪ್ರಿಲ್ ತಿಂಗಳಲ್ಲಿ ಕೇರಳದ ಕಣ್ಣೂರಿನಲ್ಲಿ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಕರ್ನಾಟಕ ರಾಜ್ಯ ಸಮ್ಮೇಳನ ಜನವರಿ 2 ರಿಂದ 4 ರ ವರೆಗೆ ಗಂಗಾವತಿಯಲ್ಲಿ ನಡೆಯಲಿದೆ. ಕರ್ನಾಟಕದ ಜನತೆಯ, ಅದರಲ್ಲೂ ಕಾರ್ಮಿಕರ, ರೈತರ ಮತ್ತು ಇತರ ದುಡಿಯುವ ಜನವಿಭಾಗಗಳ ಹಿತರಕ್ಷಣೆಯಲ್ಲಿ ಕಳೆದ ಮೂರು ವರ್ಷಗಳ ಅನುಭವಗಳು ಮತ್ತು ಅದರ ಬೆಳಕಿನಲ್ಲಿ ಮುನ್ನಡೆಯ ದಾರಿಯನ್ನು ರೂಪಿಸುವುದು ಈ ಸಮ್ಮೇಳನದ ಪ್ರಮುಖ ಕಾರ್ಯಸೂಚಿ. ದುಡಿಯುವ ಜನವಿಭಾಗಗಳ ನಡುವೆ ಕೆಲಸ ಮಾಡುತ್ತಿರುವವರ ಪ್ರತಿನಿಧಿಗಳು ಇದನ್ನು ಆಮೂಲಾಗ್ರವಾಗಿ ಚರ್ಚಿಸಲಿದ್ದಾರೆ. ಇದಕ್ಕಾಗಿ ರಾಜ್ಯ ಮುಖಂಡತ್ವ ಸಿದ್ಧಪಡಿಸಿರುವ ಕರಡು ವರದಿಯ ಕೆಲವು ಅಂಶಗಳನ್ನು ಇಲ್ಲಿ ನಮ್ಮ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ.

ರಾಜ್ಯದ ಕೃಷಿಯು ಎರಡು ವರ್ಷಗಳ ಅತಿವೃಷ್ಟಿಯ ಪರಿಣಾಮಗಳನ್ನು ಎದುರಿಸುತ್ತಿರುವಾಗಲೇ, ರಾಜ್ಯ ಬಿಜೆಪಿ ಸರ್ಕಾರವು ತಂದಿರುವ ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಕೃಷಿ ಉತ್ಪನ್ನ ಮಾರುಕಟ್ಟೆ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆ, ಭೂಕಂದಾಯ ತಿದ್ದುಪಡಿ ಕಾಯ್ದೆಗಳಿಂದಾಗಿಯು ಬಾಧಿತವಾಗಿದೆ. ಅದೇ ವೇಳೆ ಕೋವಿಡ್-೧೯ ಮೊದಲ ಅಲೆ ಹಾಗೂ ಎರಡನೇ ಅಲೆಯ ವೇಳೆಗಳ ಲಾಕ್ಡೌನ್‌ನಿಂದಾಗಿ ಉಂಟಾದ ಆರ್ಥಿಕ ಪರಿಣಾಮಗಳನ್ನು ಅನುಭವಿಸುತ್ತಿದೆ. ಬೆಳೆದ ಬೆಳೆಗಳಿಗೆ ಮಾರುಕಟ್ಟೆಯ ಕೊರತೆ, ಮಾರುಕಟ್ಟೆ ತಲುಪುವ ಸಾಧನದ ಕೊರತೆ, ಲಾಭದಾಯಕ ಬೆಲೆಯು ಸಿಗದ ಸಂಕಷ್ಟಗಳು ಕೋವಿಡ್‌ನಿಂದಾಗಿ ಲಾಕ್ಡೌನ್ ವೇಳೆ ತೀವ್ರಗೊಂಡಿವ. ಅದೇ ವೇಳೆ ಕೃಷಿ ಲಾಗುವಾಡುಗಳ ಪೂರೈಕೆಯಲ್ಲಿನ ವ್ಯತ್ಯಾಸಗಳು, ಕೊರತೆಯೊಂದಿಗೆ, ಸಾಲಗಳ ಲಭ್ಯತೆಯ ಕೊರತೆಯನ್ನು ಹಾಗೂ ಸಾಲ ತೀರಿಸಲಾಗದ ಬಾಧೆಯನ್ನು ರಾಜ್ಯದ ಕೃಷಿ ಪರಿಸ್ಥಿತಿಯು ಎದುರಿಸಿರುವಾಗಲೇ, ಬೆಲೆ ಕುಸಿತ ಮತ್ತು ಪರಿಹಾರ ದೊರಕದ, ಅತಿವೃಷ್ಠಿಯಿಂದ ಬೆಳೆನಾಶದ ಸಂಕಷ್ಟಗಳಿಗೆ ತುತ್ತಾಗಿದೆ.

೨೦೧೮-೧೯ರ ಸಾಲಿನ ವರದಿಯ ಪ್ರಕಾರ ರಾಜ್ಯದ ಒಟ್ಟು ಭೌಗೋಳಿಕ ವಿಸ್ತೀರ್ಣ ೧೯೦.೫೦ ಲಕ್ಷ ಹೆಕ್ಟೇರುಗಳ ಪೈಕಿ ನಿವ್ವಳ ಬಿತ್ತನೆಯಾದ ಕ್ಷೇತ್ರ ೧೦೬.೬೪ ಲಕ್ಷ ಹೆ.ಗಳಷ್ಟಿದ್ದು, ಶೇ.೫೬ ರಷ್ಟಾಗಿರುತ್ತದೆ. ಶೇಕಡ ೮ ರಷ್ಟು ವಿಸ್ತೀರ್ಣ ಚಾಲ್ತಿ ಸಾಗುವಳಿಯಿಲ್ಲದ ಬೀಳುಬಿಟ್ಟ ಜಮೀನು ಹಾಗೂ ಇತರೆ ಬೀಳು ಜಮೀನಾಗಿರುತ್ತದೆ. ಶೇಕಡ ೧೬ ವಿಸ್ತೀರ್ಣ ಅರಣ್ಯಕ್ಕೊಳಪಟ್ಟಿದೆ. ಶೇಕಡ ೮ ರಷ್ಟು ವ್ಯವಸಾಯೇತ್ತರ ಉದ್ದೇಶಗಳಿಗೆ ಉಪಯೋಗವಾಗಿದ್ದರೆ, ೪ ಶೇಖಡವು ಬಂಜರು ಮತ್ತು ವ್ಯವಸಾಯ ಮಾಡಲು ಯೋಗ್ಯವಾಗಿರುವುದಿಲ್ಲ. ಶೇಕಡ ೨ ಸಾಗುವಳಿ ಯೋಗ್ಯವಾದ ಬಂಜರು ಪ್ರದೇಶವಾಗಿದ್ದರೆ, ಉಳಿದ ಶೇಕಡ ೬ ವಿಸ್ತೀರ್ಣವು ಖಾಯಂ ಗೋಮಾಳ, ಇತರೆ ಹುಲ್ಲುಗಾವಲು ವಿಸ್ತೀರ್ಣವಾಗಿದೆ. ರಾಜ್ಯದಲ್ಲಿ ೪.೦೩ ಲಕ್ಷ ಹೆಕ್ಟೇರ್ ಪ್ರದೇಶವು ಸಾಗುವಳಿ ಯೋಗ್ಯವಾದ ಬಂಜರು ಪ್ರದೇಶವಾಗಿದೆ. ಇದನ್ನು ಭೂಹೀನರಿಗೆ ವಿತರಿಸಲು ಒತ್ತಾಯಿಸಬೇಕಿದೆ.

Karnatakada krushi paristiti Kostaka 01

೨೦೧೫-೧೬ರ ಕೃಷಿ ಗಣತಿಯ ಅಂಕಿ ಅಂಶಗಳ ಪ್ರಕಾರ (ವಿವರಗಳು ಕೋಷ್ಟಕ ೧ ರಲ್ಲಿವೆ) ಭೂ ಹಿಡುವಳಿದಾರರ ಒಟ್ಟು ಸಂಖ್ಯೆ ೮೬.೮೧ ಲಕ್ಷ ಇದ್ದು, ಹಿಡುವಳಿಯ ಒಟ್ಟು ವಿಸ್ತೀರ್ಣವು ೧೧೮.೦೫ ಲಕ್ಷ ಹೆಕ್ಟೇರ್ ಇರುತ್ತದೆ. ಸಣ್ಣ ಮತ್ತು ಅತಿ ಸಣ್ಣ ಭೂ ಹಿಡುವಳಿದಾರರು ೮೦ ಶೇಕಡರಷ್ಟಿದ್ದು ಅವರ ಹಿಡುವಳಿ ಗಾತ್ರ ೪೪ ಶೇಕಡದಷ್ಟಿದೆ. ಅರೆ ಮಧ್ಯಮ, ಮಧ್ಯಮ ಹಿಡುವಳಿದಾರರು ಶೇ.೧೯.೩೫ ರಷ್ಟಿದ್ದು, ದೊಡ್ಡ ಹಿಡುವಳಿದಾರರು ೦.೬೫ ರಷ್ಟಿದ್ದಾರೆ.

೧೯೯೫-೯೬ರ ನಂತರ ನಿರಂತರವಾಗಿ ಅತಿ ಸಣ್ಣ ಮತ್ತು ಸಣ್ಣ ಹಿಡುವಳಿದಾರರ ಸಂಖ್ಯೆ ಮತ್ತು ಅವರ ಕೈಯಲ್ಲಿನ ಹಿಡುವಳಿ ವಿಸ್ತೀರ್ಣವು ಹೆಚ್ಚುತ್ತಾ ಬಂದಿದೆ. ಅದೇ ವೇಳೆ ಅರೆ ಮಧ್ಯಮ, ಮಧ್ಯಮ ಮತ್ತು ದೊಡ್ಡ ಹಿಡುವಳಿದಾರರ ಸಂಖ್ಯೆ ಹಾಗೂ ಹಿಡುವಳಿ ವಿಸ್ತೀರ್ಣ ಎರಡೂ ಕಡಿಮೆಯಾಗುತ್ತ ಬಂದಿದೆ.

ರಾಜ್ಯದಲ್ಲಿ ಒಟ್ಟು ಭೂ ಹಿಡುವಳಿದಾರರಲ್ಲಿ ೫೪.೯೨ ಶೇಕಡ ಅತಿ ಸಣ್ಣ ಭೂಹಿಡುವಳಿದಾರರಿದ್ದಾರೆ. ರಾಜ್ಯದ ರಾಮನಗರ, ಉಡುಪಿ, ಮಂಡ್ಯ ಜಿಲ್ಲೆಗಳಲ್ಲಿ ಶೇಕಡ ೭೭.೪೯ ರಿಂದ ೮೩.೦೨ ಶೇಕಡ ಸಣ್ಣ ಹಿಡುವಳಿದಾರರಿದ್ದಾರೆ. ಮೈಸೂರು, ದಕ್ಷಿಣ ಕನ್ನಡ, ಹಾಸನ, ಉತ್ತರ ಕನ್ನಡ, ಬೆಂಗಳೂರು ನಗರ ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಸೇರಿ ಒಟ್ಟು ೮ ಜಿಲ್ಲೆಗಳಲ್ಲಿ ೬೫.೫೨ ರಿಂದ ೭೭.೪೮ ಶೇಕಡ ಅತಿಸಣ್ಣ ಹಿಡುವಳಿದಾರರಿದ್ದಾರೆ. ತುಮಕೂರು, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ ಸೇರಿ ಒಟ್ಟು ೫ ಜಿಲ್ಲೆಗಳಲ್ಲಿ ೪೭.೮೨ ರಿಂದ ೬೫.೫೧ ಶೇಕಡ ಅತಿ ಸಣ್ಣ ಹಿಡುವಳಿದಾರರಿದ್ದಾರೆ. ಕೊಡಗು, ಚಿತ್ರದುರ್ಗ, ಬಳ್ಳಾರಿ, ಹಾವೇರಿ, ಕೊಪ್ಪಳ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಯಾದಗಿರಿ ಮತ್ತು ಬೀದರ್ ಸೇರಿ ೧೦ ಜಿಲ್ಲೆಗಳಲ್ಲಿ ೩೦.೩೪ ರಿಂದ ೪೭.೬೧ ಶೇಕಡ ಸಣ್ಣ ಹಿಡುವಳಿದಾರರಿದ್ದಾರೆ. ಗದಗ, ಧಾರವಾಡ, ವಿಜಯಪುರ ಮತ್ತು ಕಲ್ಬುರ್ಗಿ ಸೇರಿ ಒಟ್ಟು ೪ ಜಿಲ್ಲೆಗಳಲ್ಲಿ ೧೭.೩೮ ರಿಂದ ೩೦.೩೩ ಶೇಕಡ ಅತಿ ಸಣ್ಣ ಹಿಡುವಳಿದಾರರಿದ್ದಾರೆ.

೨೦೧೪ ರಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ಕೃಷಿ ಬೆಲೆ ಆಯೋಗವು ಈಗಾಗಲೇ ಎರಡು ಅವಧಿಗಳನ್ನು ಪೂರೈಸಿದ್ದು, ೨೦೨೦-೨೩ ರವರೆಗೆ ಮೂರನೆ ಅವಧಿಗೆ ಮುಂದುವರಿಸಲಾಗಿದೆ. ಆಯೋಗವು ೨೦೨೧ ನವೆಂಬರ್ ೨೩ ರಂದು ಮುಖ್ಯಮಂತ್ರಿಯವರಿಗೆ ಸಲ್ಲಿಸಿರುವ ವಿಸ್ತೃತ ವರದಿಯಲ್ಲಿ ಹೊಲಕ್ಕೊಂದು ಕೆರೆ ನಿರ್ಮಾಣ, ತೋಟಗಾರಿಕಾ ಮಾರಾಟ ಮಹಾಮಂಡಳಿ ರಚನೆ, ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ಕೇಂದ್ರ ಸರ್ಕಾರವು ರಾಜ್ಯದಿಂದಲೇ ಆಹಾರ ಧಾನ್ಯ ಸಂಗ್ರಹಿಸುವುದು ಸೇರಿ ಈ ಕೆಳಗಿನ ಪ್ರಮುಖ ೭ ಶಿಫಾರಸ್ಸುಗಳನ್ನು ಮಾಡಿದೆ.

೧) ಕೃಷಿ ಉತ್ಪನ್ನಗಳು ಕನಿಷ್ಟ ಬೆಂಬಲ ಬೆಲೆಗಿಂತಲೂ ಕಡಮೆ ಬೆಲೆಗೆ ಮಾರಾಟ ಆಗದ ರೀತಿಯಲ್ಲಿ ’ಶಾಸನ ಬದ್ಧ ಕನಿಷ್ಟ ಬೆಲೆ’ ಕಾಯ್ದೆ ಜಾರಿಗೊಳಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು.

೨) ಕೃಷಿ ಯಂತ್ರಗಳ ಖರೀದಿಗೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಶೇ.೯೦, ಮಧ್ಯಮ ರೈತರಿಗೆ ಶೇ.೭೫, ದೊಡ್ಡ ರೈತರಿಗೆ ಶೇ.೫೦ ರಷ್ಟು ರಿಯಾಯಿತಿ ನೀಡಬೇಕು.

೩) ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್.ಡಿ.ಆರ್.ಎಫ್) ಮಾರ್ಗಸೂಚಿ ಬದಲಿಸಿ, ಪ್ರತಿ ಹೆಕ್ಟೇರ್ ಕೃಷಿ ಮತ್ತು ವಾಣಿಜ್ಯ ಬೆಳೆಗಳಿಗೆ ರೂ.೫೦ ಸಾವಿರ, ಬಹುವಾರ್ಷಿಕ ಬೆಳೆಗಳಿಗೆ ರೂ. ೧ ಲಕ್ಷ ಪರಿಹಾರಧನ ನೀಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು.

೪) ಬೆಳೆ ವಿಮೆಯಲ್ಲಿರೈತರು ನೋಂದಣಿ ಕಡ್ಡಾಯಗೊಳಿಸಬೇಕು. ಕಿಸಾನ್ ಸಮ್ಮಾನ್ ಹಣದಲ್ಲಿ ವಿಮಾಕಂತು ಭರಿಸಬಹುದು.

೫) ಕೃಷಿ ಯಂತ್ರಗಳು ದೊರಕುವಂತೆ ಮಾಡಲು ಓಲಾ, ಊಬರ್ ಮಾದರಿ ವ್ಯವಸ್ಥೆ ಅಭಿವೃದ್ಧಿ ಪಡಿಸಬೇಕು.

೬) ರೈತ ಸಂಶೋಧಕರಿಗೆ ಪ್ರೋತ್ಸಾಹ ನೀಡಲು ’ರೈತ ಆವಿಷ್ಕಾರ ನಿಧಿ’ ಸ್ಥಾಪಿಸಬೇಕು.

೭) ಎ.ಪಿ.ಎಂ.ಸಿಗಳನ್ನು ಸದೃಢಗೊಳಿಸಲು ಮಾರುಕಟ್ಟೆ ಶುಲ್ಕವನ್ನು ಶೇ.೦.೬೦ ರಿಂದ ಶೆ.೧ಕ್ಕೆ ಹೆಚ್ಚಿಸಬೇಕು.

೨೦೧೯-೨೦ ರಲ್ಲಿ ರೂ. ೬೧೮ ಕೋಟಿಯಷ್ಟಿದ್ದ ರಾಜ್ಯದ ಎ.ಪಿ.ಎಂ.ಸಿ. ಮಾರುಕಟ್ಟೆ ಶುಲ್ಕದ ಸಂಗ್ರಹವು ೨೦೨೦-೨೧ ರಲ್ಲಿ ರೂ. ೨೯೪ ಕೋಟಿ ರೂ. ಗಳಿಗೆ ಇಳಿಕೆಯಾಗಿ ರಾಜ್ಯದ ಎ.ಪಿ.ಎಂ.ಸಿ. ಮಾರುಕಟ್ಟೆಗಳು ಸಂಕಷ್ಟಕ್ಕೆ ಸಿಲುಕಿರುವುದನ್ನು ವರದಿಯು ಗುರುತಿಸಿದೆ. ಕೇಂದ್ರ ಬಿಜೆಪಿ ರೂಪಿಸಿದ್ದ ಕೃಷಿ ಕಾಯ್ದೆಗಳಿಗೆ ಪೂರಕವಾಗಿ ರಾಜ್ಯ ಬಿಜೆಪಿ ಸರ್ಕಾರವು ತಂದಿರುವ ಕೃಷಿ ಮಾರುಕಟ್ಟೆ ತಿದ್ದುಪಡಿ ಕಾಯ್ದೆ-೨೦೨೦ರ ನೇರ ಪರಿಣಾಮ ಇದಾಗಿದೆ ಎಂಬುದನ್ನು ಗಮನಿಸಬೇಕಿದೆ. ಅದೇ ರೀತಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯಲ್ಲಿ ಕೃಷಿಕರಲ್ಲದವರಿಗೂ ಕೃಷಿ ಭೂಮಿ ಖರೀದಿಗೆ ಅವಕಾಶ ಕಲ್ಪಿಸಿರುವ ಕಾರಣ ಕೃಷಿ ಭೂಮಿ ಮಾರಾಟ ನೊಂದಾವಣಿಯು ರಾಜ್ಯ ಉಪ ನೋಂದಾವಣಾಧಿಕಾರಿಗಳ ಕಚೇರಿಗಳಲ್ಲಿ ೭೧ ಶೇಕಡ ಹೆಚ್ಚಳಗೊಂಡಿರುವ ವರದಿಗಳಿವೆ.

ಭಾರತದ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆ ಮೇಲಿನ ಕೋವಿಡ್-೧೯ ಪರಿಣಾಮ ಕುರಿತು ನಬಾರ್ಡ್ ೨೦೨೦ ಆಗಸ್ಟ್‌ನಲ್ಲಿ ಪ್ರಕಟಿಸಿರುವ ವರದಿಯಲ್ಲಿ ರಾಜ್ಯದ ೨೬ ಜಿಲ್ಲೆಗಳಲ್ಲಿ ನಡೆಸಿದ ಸರ್ವೇಕ್ಷಣೆಯಂತೆ ವಾರದ ಸಂತೆಗಳು ನಡೆಯದ ಕಾರಣ ರಾಜ್ಯದ ೨೨ ಜಿಲ್ಲೆಗಳ ರೈತರ ಬೆಳೆಗಳು ಮಾರಾಟವಾಗದೆ ಮತ್ತು ಕೃಷಿ ಕೂಲಿಕಾರರು ಸಿಗದೆ ನಷ್ಟ ಅನುಭವಿಸಿದ್ದಾರೆ. ೧೪ ಜಿಲ್ಲೆಗಳಲ್ಲಿ ಒಟ್ಟಾರೆ ಕೃಷಿ ಉತ್ಪಾದನೆ ಕಡಿಮೆಯಾಗಿದ್ದರೆ ೧೦ ಜಿಲ್ಲೆಗಳಲ್ಲಿ ಹಿಂದಿನ ಉತ್ಪಾದನೆಯಷ್ಟೆ ಉಳಿದಿದೆ, ೨ ಜಿಲ್ಲೆಗಳಲ್ಲಿ ಹೆಚ್ಚಳವಾಗಿದೆ ಎಂದು ವರದಿಯು ಗುರುತಿಸಿದೆ.

’ರಾಷ್ಟ್ರೀಯ ಸ್ಯಾಂಪಲ್ ಸರ್ವೆಯ-೨೦೧೯’ರ ಗ್ರಾಮೀಣ ಭಾರತದಲ್ಲಿನ ಕೃಷಿ ಕುಟುಂಬಗಳು ಮತ್ತು ಭೂಮಿ ಹಾಗೂ ಜಾನುವಾರು ಹಿಡುವಳಿ ವರದಿಯು ರಾಜ್ಯದ ಒಟ್ಟು ೭೭.೫೮ ಲಕ್ಷ ಗ್ರಾಮೀಣ ಕುಟುಂಬಗಳಲ್ಲಿ ೪೨.೫ ಲಕ್ಷ ಕೃಷಿ ಆಧಾರಿತ ಕುಟುಂಬಗಳಾದರೆ ೩೫.೦೮ ಲಕ್ಷ ಕುಟುಂಬಗಳು ಕೃಷಿಯೇತ್ತರ ಕುಟುಂಬಗಳಾಗಿವೆ. ಅಂದರೆ ಶೇಕಡ ೪೫.೨ ಶೇಕಡ ಕುಟುಂಬಗಳು ಕೃಷಿಯೇತ್ತರ ಜೀವನಾಧಾರ ಹೊಂದಿವೆ ಎಂದು ಗುರುತಿಸಿದೆ. ಅದರಲ್ಲಿ ೨೬.೫ ಶೇಕಡ ಪರಿಶಿಷ್ಟ ಜಾತಿ, ೮.೫ ಪರಿಶಿಷ್ಟ ಪಂಗಡ, ೪೫.೭ ಇತರೆ ಹಿಂದುಳಿದ ಜಾತಿ, ೧೯.೩ ಇತರರಿದ್ದಾರೆ. ಕೃಷಿ ಆಧಾರಿತ ೫೪.೮ ಕುಟುಂಬಗಳಲ್ಲಿ ೧೪.೬ ಪರಿಶಿಷ್ಟ ಜಾತಿ, ೯.೨ ಪರಿಶಿಷ್ಟ ಪಂಗಡ, ೫೬.೫ ಇತರೆ ಹಿಂದುಳಿದ ಜಾತಿ ಮತ್ತು ೧೯.೬ ಇತರರಿದ್ದಾರೆ ಎಂದು ಗುರುತಿಸಿದೆ. (ವಿವರಗಳಿಗೆ ಕೋಷ್ಟಕ ೨ ನೋಡಿ)

Karnatakada krushi paristiti Kostaka 02

ಕೃಷಿಯೇತ್ತರ ಕುಟುಂಬಗಳಲ್ಲಿ ೭೫.೮ ಶೇಕಡ ಕುಟುಂಬಗಳು ಒಂದು ಎಕರೆಗಿಂತ ಕಡಿಮೆ ಭೂ ಹಿಡುವಳಿ ಹೊಂದಿದ್ದಾರೆ. ೩೯.೭ ಶೇಕಡ ಕುಟುಂಬಗಳು ಒಂದು ಗುಂಟೆಗಿಂತ ಕಡಿಮೆ ಭೂ ಹಿಡುವಳಿ ಹೊಂದಿದ್ದಾರೆ. ಕೃಷಿ ಆಧಾರಿತ ಕುಟುಂಬಗಳಲ್ಲಿ ೧೪ ಶೇಕಡ ಕುಟುಂಬಗಳು ಒಂದು ಎಕರೆಗಿಂತ ಕಡಿಮೆ ಭೂ ಹಿಡುವಳಿ ಹೊಂದಿದ್ದಾರೆ. ಒಂದರಿಂದ ಎರಡುವರೆ ಎಕರೆ ಭೂ ಹಿಡುವಳಿ ಹೊಂದಿರುವವರ ಪ್ರಮಾಣ ೩೭.೯ ಶೇಕಡವಾಗಿದೆ. ಎರಡುವರೆಯಿಂದ ಐದು ಎಕರೆ ಭೂ ಹಿಡುವಳಿ ಹೊಂದಿರುವವರು ೨೫.೯ ಶೇಕಡವಾದರೆ, ಐದರಿಂದ ೧೦ ಎಕರೆ ಹಿಡುವಳಿದಾರರ ಪ್ರಮಾಣವು ೧೬.೪ ಶೇಕಡ, ಹತ್ತರಿಂದ ಇಪ್ಪತ್ತೈದು ಎಕರೆ ಹಿಡುವಳಿದಾರರು ೫.೨ ಶೇಕಡ ಮತ್ತು ೨೫ ಎಕರೆಗಿಂತ ಹೆಚ್ಚು ಹಿಡುವಳಿದಾರರು ೦.೬ ಶೇಕಡವಾಗಿದ್ದಾರೆ. ರಾಜ್ಯದಲ್ಲಿ ೮.೪ ಶೇಕಡ ಅಂದರೆ ೬.೫೨ ಲಕ್ಷ ಭೂಹೀನ ಗ್ರಾಮೀಣ ಕುಟುಂಬಗಳಿವೆ ಎಂದು ವರದಿ ಗುರುತಿಸಿದೆ. ಈ ಅಂಶಗಳು ಕೃಷಿ ಕೂಲಿಕಾರರ ಸಂಖ್ಯೆ ಹೆಚ್ಚಳವಾಗಿರುವುದನ್ನು ಒಂದೆಡೆ ಸೂಚಿಸುವಾಗಲೇ ಕೃಷಿಯೇತ್ತರ ಕುಟುಂಬಗಳ ಸಂಖ್ಯೆಯ ಹೆಚ್ಚಳವು ಕೃಷಿಯೇತ್ತರ ಗ್ರಾಮೀಣ ಕಾರ್ಮಿಕರ ಸಂಖ್ಯೆ ಹೆಚ್ಚಳವನ್ನು ಸೂಚಿಸುತ್ತವೆ. ಪರಿಣಾಮವಾಗಿ ಅದೇ ವೇಳೆ ಗ್ರಾಮೀಣ ಕೃಷಿ ಚಟುವಟಿಕೆಗಳಲ್ಲಿ ಯಾಂತ್ರಿಕೃತ ಕೃಷಿ ಪದ್ಧತಿಯು ಹೆಚ್ಚುತ್ತಿರುವುದನ್ನು ಈ ಕಾಲಾವಧಿಯಲ್ಲಿ ಕಾಣಬಹುದಾಗಿದೆ.

ಗ್ರಾಮೀಣ ಕುಟುಂಬಗಳ ಸರಾಸರಿ ಮಾಸಿಕ ಆದಾಯವು ರಾಜ್ಯದಲ್ಲಿ ೧೩೪೪೧ ರೂ. ಗಳಾಗಿದೆ. ಅದರಲ್ಲಿ ವೇತನದ ಪಾಲು ರೂ.೪೫೭೬, ಭೂಮಿ ಭೋಗ್ಯದಿಂದ ರೂ.೧೦೪, ಬೆಳೆಗಳಿಂದ ರೂ.೬೮೩೫, ಜಾನುವಾರು ಸಾಕಾಣಿಕೆಯಿಂದ ರೂ.೧೬೬೩, ಕೃಷಿಯೇತ್ತರ ವ್ಯವಹಾರದಿಂದ ರೂ.೨೬೫ ಸೇರಿದೆ. ರಾಷ್ಟ್ರೀಯ ಸರಾಸರಿ ರೂ.೧೦೨೧೮ ಆಗಿದ್ದರೆ, ಮೇಗಾಲಯದಲ್ಲಿ ರೂ.೨೯೩೪೮, ಪಂಜಾಬಿನಲ್ಲಿ ರೂ.೨೬೭೦೧, ಹರಿಯಾಣದಲ್ಲಿ ರೂ.೨೨೮೪೧ ಮಾಸಿಕ ಸರಾಸರಿ ಆದಾಯವನ್ನು ಕೃಷಿ ಕುಟುಂಬಗಳು ಹೊಂದಿವೆ. ಗ್ರಾಮೀಣ ಕುಟುಂಬಗಳ ಸರಾಸರಿ ಮಾಸಿಕ ಆದಾಯದ ಲೆಕ್ಕದಲ್ಲಿ ರಾಜ್ಯವು ೯ನೇ ಸ್ಥಾನದಲ್ಲಿದೆ ಎಂದು ವರದಿಯು ಗುರುತಿಸಿದೆ.

Karnatakada krushi paristiti Kostaka 03

ರಾಜ್ಯದಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಜನತೆಯ ಮಾಸಿಕ ಆದಾಯದ ಮೂಲಗಳಲ್ಲಿ ಹೈನುಗಾರಿಕೆಯು ಒಂದು ಪ್ರಮುಖ ಮೂಲವಾಗಿದೆ. ರಾಜ್ಯದ ೧೪ ಜಿಲ್ಲಾ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ೧೪,೯೦೪ ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿನ ೨೫.೫೦ ಲಕ್ಷ ರೈತರು ಸದಸ್ಯತ್ವ ಹೊಂದಿದ್ದರೆ, ೮.೯೦ ಲಕ್ಷ ಸದಸ್ಯರು ಮಾತ್ರ ಸಕ್ರಿಯರಾಗಿದ್ದಾರೆ. ರಾಜ್ಯದ ಹೈನುಗಾರಿಕೆಯು ವಿದೇಶಿ ಹಾಲಿನ ಆಮದು ಮತ್ತು ಕೇಂದ್ರ ಬಿಜೆಪಿ ಸರ್ಕಾರವು ೨೦೨೧ ರಲ್ಲಿ ಆರಂಭಿಸಿರುವ ನೂತನ ಸಹಕಾರ ಸಚಿವಾಲಯ ಮತ್ತು ನೂತನ ಸಹಕಾರ ನೀತಿಯ ಸವಾಲನ್ನು ಎದುರಿಸುತ್ತಿದೆ. ಖಾಸಗಿ ಹಾಲು ಉತ್ಪಾದಕ ಕಂಪನಿಗಳ ಪೈಪೋಟಿಯನ್ನು ಮೆಟ್ಟಿ ನಿಂತಿರುವ ರಾಜ್ಯದ ಸಹಕಾರಿ ಹೈನುಗಾರಿಕೆಯು, ಪ್ರಸಕ್ತ ಕೋವಿಡ್ ಲಾಕ್ಡೌನ್ ವೇಳೆ ಬೇಡಿಕೆ ಕುಸಿತ ಮುಂತಾದ ಸಮಸ್ಯೆ ಎದುರಿಸಿದೆ. ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಲಾಭದಾಯಕ ಬೆಲೆ ಸಿಗದ ಸಂಕಷ್ಟ ಎದುರಿಸುತ್ತಿದ್ದಾರೆ. ಸಾಲದ ಬಲೆಗೆ ಸಿಲುಕುತ್ತಿದ್ದಾರೆ. ಕುಕ್ಕುಟೋದ್ಯಮವು ನಿರಂತರ ವಿವಿಧ ಹಕ್ಕಿ ಜ್ವರಗಳ ಅಪಾಯ ಎದುರಿಸುತ್ತಿದೆ.

ವಿವಿಧ ಬೆಳೆಗಳು, ಬೆಂಬಲ ಬೆಲೆ ಹೆಚ್ಚಳವಾಗದ ಸಮಸ್ಯೆಯೊಂದಿಗೆ ವಿವಿಧ ರೀತಿಯ ರೋಗ ಬಾಧೆಯನ್ನು ಎದುರಿಸುತ್ತಿವೆ. ಅದಕ್ಕೆ ಅಗತ್ಯ ಪರಿಹಾರ ನೀಡದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕ್ರಮಗಳಿಂದಾಗಿ ಸಮಸ್ಯೆಗಳು ಬಿಗಡಾಯಿಸುತ್ತಿವೆ. ಕೃಷಿ ಲಾಗವಾಡುಗಳ ಬೆಲೆಗಳ ಹೆಚ್ಚಳ, ಬೀಜ, ಗೊಬ್ಬರ ಮುಂತಾದವುಗಳಿಗೆ ಸಬ್ಸಿಡಿಗಳ ಕಡಿತ ಒಂದೆಡೆ ಉತ್ಪಾದನೆ ವೆಚ್ಚ ಹೆಚ್ಚಿಸಿದ್ದರೆ, ಅದಕ್ಕೆ ತಕ್ಕ ಬೆಂಬಲ ಬೆಲೆ ಹೆಚ್ಚಳವಾಗದಿರುವುದು ಸಂಕಷ್ಟಗಳ ಹೆಚ್ಚಳಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ೨೦೧೯-೨೦ ಕ್ಕೆ ಹೋಲಿಕೆಯಲ್ಲಿ ೨೦೨೦-೨೧ ರಲ್ಲಿ ರಾಜ್ಯದಲ್ಲಿನ ಒಟ್ಟು ಆಹಾರ ಧಾನ್ಯ ಉತ್ಪಾದನೆಯು ೨೫ ಸಾವಿರ ಟನ್ ನಷ್ಟು ಅಲ್ಪ ಪ್ರಮಾಣದ ಹೆಚ್ಚಳ ಕಂಡರೆ, ದ್ವಿದಳ ಧಾನ್ಯಗಳ ಉತ್ಪಾದನೆ ೨.೨೭ ಲಕ್ಷ ಟನ್‌ಗಳಷ್ಟು ಕುಸಿತವಾಗಿದೆ. ಹತ್ತಿ ಉತ್ಪಾದನೆ ೪.೧೮ ಲಕ್ಷ ಟನ್ ಕುಸಿತವಾಗಿದೆ. ೫೦ ಲಕ್ಷ ಟನ್ ಉತ್ಪಾದನೆ ಹೆಚ್ಚಳ ಕಂಡಿರುವ ಕಬ್ಬು ಬೆಳೆಯು ಕಾರ್ಖಾನೆ ಮತ್ತು ಲಾಭದಾಯಕ ಬೆಲೆ ಸಿಗದ ಹಾಗೂ ಹಿಂದಿನ ಸಾಲಿನ ಬಾಕಿ ಬಾರದ ಸಮಸ್ಯೆಯನ್ನು ಎದುರಿಸುತ್ತಿದೆ. ರೇಷ್ಮೆ ಬೆಳೆ ಬೆಲೆ ಕುಸಿದು, ವಿದೇಶಿ ಆಮದು ರೇಷ್ಮೆಯ ಸವಾಲನ್ನು ಎದುರಿಸುತ್ತಿದೆ. ಭಾರತೀಯ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯ ಮೇಲಿನ ಕೋವಿಡ್-೧೯ರ ಪರಿಣಾಮ ಅಂದಾಜಿಸಿರುವ ನಬಾರ್ಡ್‌ನ ೨೦೨೦ ಆಗಸ್ಟ್ ವರದಿಯು, ರಾಜ್ಯದ ಕೃಷಿ ಉತ್ಪನ್ನಗಳ ಬೆಲೆಯು ಶೇಕಡ ೧೫ ಮತ್ತು ತೋಟಗಾರಿಕೆ ಬೆಳೆಗಳ ಬೆಲೆಗಳು ಶೇಕಡ ೨೩ರಷ್ಟು ಇಳಿಕೆಯಾಗಿವೆ ಎಂದು ಗುರುತಿಸಿದೆ.

ರಾಜ್ಯದ ಗ್ರಾಮೀಣ ಕುಟುಂಬಗಳು ಸರಾಸರಿ ರೂ.೧,೨೬,೨೪೦ ತಲಾ ಸಾಲವನ್ನು ಹೊಂದಿವೆ. ೩೭.೩ ಶೇಕಡ ಸಾಲವನ್ನು ಶೆಡ್ಯೂಲ್ ವಾಣಿಜ್ಯ ಬ್ಯಾಂಕ್‌ಗಳಿಂದ, ೧೧ ಶೇಕಡ ಸಾಲವನ್ನು ಆರ್.ಆರ್.ಬಿ. ಗಳಿಂದ, ೧೩.೬ ಶೇಕಡ ಸಾಲವನ್ನು ಸಹಕಾರ ಸಂಘಗಳಿಂದ, ೩.೭ ಶೇಕಡ ಸಾಲವನ್ನು ಸಹಕಾರಿ ಬ್ಯಾಂಕ್‌ಗಳಿಂದ ಮತ್ತು ೫.೧ ಶೇಕಡ ಸಾಲವನ್ನು ಸ್ವಸಹಾಯ ಗುಂಪುಗಳಿಂದ ಗ್ರಾಮೀಣ ಕುಟುಂಬಗಳು ಪಡೆದಿವೆ ಎಂದು ವರದಿಯಲ್ಲಿ ಗುರುತಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿನ ಸಂಕಷ್ಟವನ್ನು ಇದು ತೋರುತ್ತದೆ.

Leave a Reply

Your email address will not be published. Required fields are marked *