ಕರ್ನಾಟಕದ ರಾಜಕೀಯ ಪರಿಸ್ಥಿತಿ: ರಾಜ್ಯದ ವಿಧಾನಸಭಾ ಚುನಾವಣೆ-2018

cpim rajya sammelanaಭಾರತದ ಪ್ರಮುಖ ಎಡಪಕ್ಷ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ದ 23ನೇ ಮಹಾಧಿವೇಶನ ಎಪ್ರಿಲ್ ತಿಂಗಳಲ್ಲಿ ಕೇರಳದ ಕಣ್ಣೂರಿನಲ್ಲಿ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಕರ್ನಾಟಕ ರಾಜ್ಯ ಸಮ್ಮೇಳನ ಜನವರಿ 2 ರಿಂದ 4 ರ ವರೆಗೆ ಗಂಗಾವತಿಯಲ್ಲಿ ನಡೆಯಲಿದೆ. ಕರ್ನಾಟಕದ ಜನತೆಯ, ಅದರಲ್ಲೂ ಕಾರ್ಮಿಕರ, ರೈತರ ಮತ್ತು ಇತರ ದುಡಿಯುವ ಜನವಿಭಾಗಗಳ ಹಿತರಕ್ಷಣೆಯಲ್ಲಿ ಕಳೆದ ಮೂರು ವರ್ಷಗಳ ಅನುಭವಗಳು ಮತ್ತು ಅದರ ಬೆಳಕಿನಲ್ಲಿ ಮುನ್ನಡೆಯ ದಾರಿಯನ್ನು ರೂಪಿಸುವುದು ಈ ಸಮ್ಮೇಳನದ ಪ್ರಮುಖ ಕಾರ್ಯಸೂಚಿ. ದುಡಿಯುವ ಜನವಿಭಾಗಗಳ ನಡುವೆ ಕೆಲಸ ಮಾಡುತ್ತಿರುವವರ ಪ್ರತಿನಿಧಿಗಳು ಇದನ್ನು ಆಮೂಲಾಗ್ರವಾಗಿ ಚರ್ಚಿಸಲಿದ್ದಾರೆ. ಇದಕ್ಕಾಗಿ ರಾಜ್ಯ ಮುಖಂಡತ್ವ ಸಿದ್ಧಪಡಿಸಿರುವ ಕರಡು ವರದಿಯ ಕೆಲವು ಅಂಶಗಳನ್ನು ಇಲ್ಲಿ ನಮ್ಮ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ.

ಸಿಪಿಐ(ಎಂ) ಕರ್ನಾಟಕ 23ನೆಯ ರಾಜ್ಯ ಸಮ್ಮೇಳನದ ಕರಡು ವರದಿಯ ಆಯ್ದ ಭಾಗಗಳು

ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ಕಾರಣಗಳು

ಸಂಘಪರಿವಾರದ ಕೋಮು ಧೃವೀಕರಣ ಬಿಜೆಪಿಯನ್ನು ಬಲಪಡಿಸಿತು. ಜಾತ್ಯಾತೀತ ಮತಗಳ ವಿಭಜನೆ ಬಿಜೆಪಿಗೆ ನೆರವಾಯಿತು. ಮತಾಂಧತೆಯನ್ನು ಪ್ರಚೋದಿಸುವ ಎಸ್‌ಡಿಪಿಐ ಕರಾವಳಿಯಲ್ಲಿ ನಾಮಪತ್ರಗಳನ್ನು ಸಲ್ಲಿಸಿ ನಂತರ ಕಾಂಗ್ರೆಸ್ ಪರವಾಗಿ ವಾಪಸ್ ಪಡೆದದ್ದು ಬಿಜೆಪಿಗೆ ಹಿಂದುತ್ವ ಪರ ಮತಗಳನ್ನು ಕ್ರೋಡೀಕರಿಸಲು ಸಹಾಯವಾಯಿತು. ಕೆಜೆಪಿಯನ್ನು ಬಿಜೆಪಿಯೊಳಗೆ ವಿಲೀನಗೊಳಿಸಿದ್ದು ಬಿಜೆಪಿಗೆ ಲಾಭವಾಯಿತು. ಲಿಂಗಾಯತ ಪ್ರಾಬಲ್ಯದ ಪ್ರದೇಶದಲ್ಲಿ ವಿಲೀನಗೊಳಿಸಿದ್ದು ಬಿಜೆಪಿಗೆ ಲಾಭವಾಗಿದೆ. ಲಿಂಗಾಯತ ಪ್ರಾಬಲ್ಯದ ಪ್ರದೇಶದಲ್ಲಿ ಯಡಿಯೂರಪ್ಪನವರನ್ನು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿದ್ದು ಬಿಜೆಪಿಗೆ ಲಾಭವಾಯಿತು. ನವ ಮತದಾರರು ಮತ್ತು ಯುವಜನರು ಬಿಜೆಪಿಯನ್ನು ಗಣನೀಯವಾಗಿ ಬೆಂಬಲಿಸಿದರು. ಮುದ್ರಣ/ದೃಶ್ಯ/ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲಾಯಿತು. ವ್ಯಾಪಕವಾಗಿ ಹಣವನ್ನು ವಿತರಣೆ ಮಾಡಲಾಯಿತು. ಇತ್ತ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಮತ್ತು ಇತರ ಎಡ ಮತ್ತು ಪ್ರಗತಿಪರ ಶಕ್ತಿಗಳು ನಿರಂತರವಾಗಿ ನಡೆಸಿದ ಪ್ರಚಾರ ಪ್ರಕ್ಷೋಭೆ ಬಿಜೆಪಿ ಪೂರ್ಣಬಹುಮತವನ್ನು ಪಡೆಯುವುದನ್ನು ತಡೆಯಲು ಯಶಸ್ವಿಯಾಗಿದೆ.

ಕಾಂಗ್ರೆಸ್ ಹಿನ್ನಡೆಗೆ ಪ್ರಮುಖ ಕಾರಣಗಳು

ಕಾಂಗ್ರೆಸ್ ಆಡಳಿತ ಜನಪರವಾಗಿರಲಿಲ್ಲ, ಜನವಿರೋಧಿಯಾದ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ನೀತಿಗಳನ್ನೇ ಅದು ಜಾರಿಗೆ ತಂದಿತು. ಅದರ ಆಂತರಿಕ ಕಿತ್ತಾಟದಿಂದ ಕಾಂಗ್ರೆಸ್ ಜನರ ವಿಶ್ವಾಸವನ್ನು ಕಳೆದುಕೊಂಡಿತು. ಕೋಮು ಸೌಹಾರ್ಧತೆಗೆ ನಿರಂತರ ಧಕ್ಕೆ ತರುತ್ತಿದ್ದ ಸಂಘಪರಿವಾರದ ಶಕ್ತಿಗಳನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸುವಲ್ಲಿ ಅದು ವಿಫಲವಾಯಿತು. ಅಲ್ಪ ಸಂಖ್ಯಾತರ ಮೇಲೆ ಹಿಂದುತ್ವ ಶಕ್ತಿಗಳ ಆಕ್ರಮಣ ದೃಢವಾಗಿ ತಡೆಗಟ್ಟದಿರುವುದು, ಸದಾಶಿವ ಆಯೋಗದ ಒಳ ಮೀಸಲಾತಿ ಕುರಿತಾದ ವರದಿ ದಲಿತರನ್ನು ವಿಭಜಿಸಲು ಕಾರಣವಾಗಿದ್ದು ಕಾಂಗ್ರೆಸ್ ವಿರುದ್ಧ ಜನರ ಅತೃಪ್ತಿ ತೀವ್ರಗೊಳ್ಳಲು ಕಾರಣವಾಯಿತು.

ಜೆಡಿ(ಎಸ್) ಸಾಧನೆ ನಗಣ್ಯ

ಹೆಸರು ಜಾತ್ಯಾತೀತ ಎಂದಿದ್ದರೂ ಕೋಮುವಾದದ ವಿರುದ್ಧ ದೃಢವಾದ ಹೋರಾಟ ನಡೆಸುವಲ್ಲಿ ಅದು ಉದಾಸೀನವಾಗಿರುವುದರಿಂದ ಕರಾವಳಿಯಲ್ಲಿ ಮತ್ತು ಮಲೆನಾಡಿನಲ್ಲಿ ಒಂದು ಸ್ಥಾನವನ್ನೂ ಗೆಲ್ಲಲಾಗಲಿಲ್ಲ. ಕಾಂಗ್ರೆಸಿನ ಅಹಿಂದಾ ರಾಜಕಾರಣದಿಂದಾಗಿ ಜೆಡಿ(ಎಸ್)ಗೆ ದಕ್ಷಿಣ ಕರ್ನಾಟಕದ ಒಕ್ಕಲಿಗ ಭೂಮಾಲಕ ಬಂಡವಾಳಶಾಹಿ ಸಮುದಾಯದ ನಡುವೆ ಪ್ರಾಬಲ್ಯ ಉಳಿಸಿಕೊಳ್ಳಲು ನೆರವಾಗಿದೆ. ಲಿಂಗಾಯತ ಪ್ರಾಬಲ್ಯದ ಉತ್ತರ ಮತ್ತು ಮಧ್ಯ ಕರ್ನಾಟಕದಲ್ಲಿ ಈಗಲೂ ನೆಲೆಯನ್ನು ಉಳಿಸಿಕೊಂಡಿದೆ.

ಆಪರೇಷನ್ ಕಮಲದ ಕೊಳಕು ರಾಜಕಾರಣ

ಇತ್ತ ಬಿಜೆಪಿ, ತನಗೆ ಅಗತ್ಯ ಸಂಖ್ಯಾಬಲ ಇಲ್ಲದಿದ್ದರೂ ಜನಾದೇಶ ಇಲ್ಲದಿದ್ದರೂ ಅಧಿಕಾರವನ್ನು ಗಿಟ್ಟಿಸಿಕೊಳ್ಳುವ ದುರಾಸೆಯನ್ನು ಕೈಬಿಟ್ಟಿರಲಿಲ್ಲ. ಹೈಕಮಾಂಡ್ ಆದೇಶಕ್ಕಾಗಿ ಅದು ದೆಹಲಿಯತ್ತ ಮುಖ ಮಾಡಿತ್ತು. ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೇರವಾಗಿ ಆಖಾಡಕ್ಕಿಳಿದು ಕರ್ನಾಟಕದಲ್ಲಿ ಬಿಜೆಪಿ ಯಾವುದೇ ಸಂದರ್ಭದಲ್ಲಿ ತನ್ನ ಸರ್ಕಾರವನ್ನು ರಚನೆ ಮಾಡಿಯೇ ತೀರುತ್ತದೆ, ಎಂಬ ದಾಟಿಯಲ್ಲಿ ಘೋಷಿಸಿದರು. ದೇಶದ ಸಂವಿಧಾನದ ರಕ್ಷಣೆಯ ಹೊಣೆ ಹೊತ್ತು ಪ್ರಮಾಣ ವಚನ ಸ್ವೀಕರಿಸಿದ್ದ ಪ್ರಧಾನಿ ಕರ್ನಾಟಕದಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿ ಈ ರೀತಿ ಘೋಷಿಸಿದ್ದು ಬಿಜೆಪಿಯ ಆಪರೇಷನ್ ಕಮಲದ ಕೊಳಕು ರಾಜಕಾರಣಕ್ಕೆ ನಾಂದಿ ಹಾಡಿತು. ತನ್ನ ನೇತೃತ್ವದ ಸರ್ಕಾರ ರಚನೆಗಾಗಿ ಬಿಜೆಪಿ ಬಿರುಸಿನ ಚಟುವಟಿಕೆ ನಡೆಸಿತು. ಕೇಂದ್ರ ಸರ್ಕಾರದ ಐದು ಮಂದಿ ಮಂತ್ರಿಗಳು ರಾಜ್ಯದಲ್ಲಿ ಬೀಡು ಬಿಟ್ಟರು. ರಾಜ್ಯದ ಜನತೆ ತನಗೆ ಬಹುಮತ ಮತ್ತು ಜನಾದೇಶ ನೀಡಿದೆ ಎಂದು ಎಂದು ಬಿಜೆಪಿ ಸುಳ್ಳು ಪ್ರಚಾರ ಮಾಡಿತು.

ಕಾಂಗ್ರೆಸ್ ಮತ್ತು ಜೆಡಿ(ಎಸ್) ಮೈತ್ರಿಕೂಟಕ್ಕೆ ಸ್ಪಷ್ಟವಾದ ಬಹುಮತವಿದ್ದರೂ ರಾಜ್ಯಪಾಲರು ನಿಷ್ಪಕ್ಷಪಾತಿಯಾಗಿ ವರ್ತಿಸುವ ಬದಲು ಅತಿ ಹೆಚ್ಚು ಶಾಸಕರನ್ನು ಹೊಂದಿದ ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನಿಸುವುದಾಗಿ ಹೇಳಿ ಯಡಿಯೂರಪ್ಪರವರಿಗೆ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಿದರು ಮಾತ್ರವಲ್ಲ ವಿಶ್ವಾಸ ಮತಕ್ಕೆ ಯಡಿಯೂರಪ್ಪ ಕೇವಲ ಒಂದು ವಾರ ಸಮಯಾವಕಾಶ ಕೋರಿದರೂ ರಾಜ್ಯಪಾಲರು ಯಡಿಯೂರಪ್ಪಗೆ ಹೇಗಾದರೂ ಮಾಡಿ ಬಹುಮತ ಸಾಬೀತು ಪಡಿಸಲು ಅನುಕೂಲವಾಗುವಂತೆ 15 ದಿನಗಳ ಸಮಯವಕಾಶ ನೀಡಿದರು. ರಾಜ್ಯಪಾಲರು ಹೀಗೆ ಅಧಿಕಾರ ದುರುಪಯೋಗ ಮಾಡಿ ಕೇಂದ್ರ ಬಿಜೆಪಿ ಸರ್ಕಾರದ ಅಡಿಯಾಳಾಗಿ ವರ್ತಿಸಿದ್ದು ದೇಶಾದ್ಯಂತ ವ್ಯಾಪಕ ಖಂಡನೆಗೆ ಗುರಿಯಾಯಿತು. ರಾಜ್ಯಪಾಲರ ಈ ಸಂವಿಧಾನ ವಿರೋಧಿ ಕ್ರಮವನ್ನು ಕಾಂಗ್ರೇಸ್ ಪಕ್ಷವು ಎರಡು ಬಾರಿ ಸುಪ್ರಿಂ ಕೋರ್ಟ್ ಮುಂದೆ ಪ್ರಶ್ನಿಸಿತು. ಯಡಿಯೂರಪ್ಪರವರಿಗೆ ವಿಶ್ವಾಸ ಮತ ಕೋರಲು ರಾಜ್ಯ ಪಾಲರು 15 ದಿನಗಳ ಸಮಯವಕಾಶ ನೀಡಿದ್ದನ್ನು ಸುಪ್ರಿಂ ಕೋರ್ಟ್ ರದ್ದು ಪಡಿಸಿತು ಮಾತ್ರವಲ್ಲ ವಿಶ್ವಾಸ ಮತ ಕೋರಲು ಸಮಯವಕಾಶವನ್ನು ಕಡಿತಮಾಡಿ ಆದೇಶ ಹೊರಡಿಸಿತು. ಅದೇ ಸಮಯದಲ್ಲಿ ಆಂಗ್ಲೊ ಇಂಡಿಯನ್ ಒಬ್ಬರನ್ನು ಮೇಲ್ಮನೆಗೆ ನೇಮಕ ಮಾಡಿದ್ದನ್ನು ತಡೆಹಿಡಿಯಲಾಯಿತು. ಇದು ಪ್ರಜಾಪ್ರಭುತ್ವಕ್ಕೆ ಸಂದ ಜಯವಾಗಿತ್ತು.

ಯಡಿಯೂರಪ್ಪನವರಿಗೆ ಬಹುಮತ ಸಾಬೀತು ಪಡಿಸಲು ಕಾಂಗ್ರೇಸ್ ಮತ್ತು ಜೆಡಿಎಸ್ ಶಾಸಕರನ್ನೇ ನೆಚ್ಚುವ ಪರಿಸ್ಥಿತಿಯಲ್ಲದೆ ಬೇರೆ ದಾರಿ ಇರಲಿಲ್ಲ. ಯಾವುದೇ ಮುಚ್ಚುಮರೆ ಇಲ್ಲದ ಕುದುರೆ ವ್ಯಾಪರ ಅಥವ ಆಪರೇಷನ್ ಕಮಲ ಭರ್ಜರಿಯಾಗಿ ನಡೆಯಿತು. ಅಧಿಕಾರದ ದುರಾಸೆ ಮತ್ತು ನೂರಾರು ಕೋಟಿ ರೂಗಳ ಭಾರೀ ಮೊತ್ತದ ಹಣದ ಆಮಿಷವನ್ನು ಒಡ್ಡಲಾಯಿತು. ಕೇಂದ್ರ ಸರ್ಕಾರದ ಆದಾಯ ತೆರಿಗೆ ಮತ್ತು ಅಬಕಾರಿ ಇಲಾಖೆಯ ದಾಳಿಯ ಬೆದರಿಕೆ ಹಾಕಲಾಯಿತು. ಈ ಎಲ್ಲ ಅಕ್ರಮ ಪ್ರಯತ್ನಗಳ ನಂತರವೂ ಯಡಿಯೂರಪ್ಪನವರಿಗೆ ವಿಶ್ವಾಸ ಮತಗಳಿಸಲು ಸಾಧ್ಯವಾಗಲಿಲ್ಲ.

ಮೈತ್ರಿ ಸರಕಾರವನ್ನು ಅಸ್ತಿರಗೊಳಿಸಲು ಬಿಜೆಪಿಯ ತಂತ್ರ

ಬಿಜೆಪಿಯ ಸಂವಿಧಾನ ವಿರೋಧಿ ನಡೆಗಳನ್ನು, ಕೇಂದ್ರ ಸರ್ಕಾರದ ಮತ್ತು ರಾಜಭವನದ ಅಧಿಕಾರ ದುರುಪಯೋಗ ದೇಶಾದ್ಯಂತ ತೀವ್ರ ಠೀಕೆಗೆ ಒಳಗಾಯಿತು. ಮತೀಯವಾದಿ ಹಾಗೂ ಸರ್ವಾಧಿಕಾರಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಮತ್ತು ಅತಂತ್ರ ರಾಜಕೀಯ ಪರಿಸ್ಥಿತಿಯನ್ನು ತೊಲಗಿಸಲು ಹಾಗೂ ಜನತೆಯ ಮೇಲೆ ಇನ್ನೊಂದು ಚುನಾವಣೆ ಹೇರಲ್ಪಡುವುದನ್ನು ತಡೆಯಲು ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ಸರಕಾರದ ರಚನೆಯನ್ನು ಸಿಪಿಐ(ಎಂ) ಸ್ವಾಗತಿಸಿತು. ರಾಜ್ಯಪಾಲರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿ ವಾಪಸ್ ಹೋಗಬೇಕೆಂದು ಪಕ್ಷದ ಸಮಿತಿಗಳು ಹಾಗೂ ಘಟಕಗಳು ಪ್ರತಿಭಟಿಸಿ ಒತ್ತಾಯಿಸಿದವು.

ರಾಜ್ಯಪಾಲರಿಗೆ ಮೈತ್ರಿಕೂಟವನ್ನು ಸರಕಾರ ರಚಿಸುವಂತೆ ಆಹ್ವಾನ ನೀಡದೆ ಬೇರೆ ಆಯ್ಕೆ ಇರಲಿಲ್ಲ. ಜೆಡಿಎಸ್‌ನ ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಿ ಮತ್ತು ಕಾಂಗ್ರೇಸಿನ ಡಾ. ಜಿ. ಪರಮೇಶ್ವರ್‌ರವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಹೆಚ್.ಡಿ. ಕುಮಾರಸ್ವಾಮಿಯವರು ಬಹುಮತ ಸಾಬೀತು ಪಡಿಸುವ ಮೂಲಕ ವಿಶ್ವಾಸ ಮತವನ್ನು ಗೆದ್ದರು ಆದರೆ ಮೈತ್ರಿ ಕೂಟದ ಎರಡೂ ಪಕ್ಷಗಳಲ್ಲಿದ್ದ ಮಂತ್ರಿ ಸ್ಥಾನ ಆಕಾಂಕ್ಷಿಗಳ ನಡುವೆ ಅನಾರೋಗ್ಯಕರ ಸ್ವರ್ಧೆ ತ್ರೀವ್ರಗೊಳ್ಳತೊಡಗಿತು. ಇಂತಹ ಸಂದರ್ಭಕ್ಕಾಗಿ ಹೊಂಚುಹಾಕುತ್ತಿದ್ದ ಬಿಜೆಪಿ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಯಿತು. ಮಂತ್ರಿ ಖಾತೆ ಸಿಗದೆ ಅಸಂತೃಪ್ತರಾದ ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ತಮ್ಮ ಪಕ್ಷಗಳನ್ನು ಬಿಟ್ಟು ಬಿಜೆಪಿ ಸೇರಲು ಬಹಿರಂಗ ಆಹ್ವಾನ ನೀಡುವ ಮೂಲಕ ಮೈತ್ರಿ ಸರ್ಕಾರವನ್ನು ಅಸ್ತಿರಗೊಳಿಸಲು ಬಿಜೆಪಿ ವಿಳಂಬ ಮಾಡಲಿಲ್ಲ. ಬಹುತೇಕ ದೃಶ್ಯ ಮಾಧ್ಯಮಗಳು ಬಿಜೆಪಿ ವಕ್ತಾರರಂತೆ ಕಾರ್ಯನಿರ್ವಹಿಸುತ್ತಾ ಕಾಂಗ್ರೆಸ್-ಜೆಡಿಸ್ ಪಕ್ಷಗಳು ಈ ಹಿಂದೆ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದನ್ನು ಜನತೆಗೆ ಪದೇ ಪದೇ ತೋರಿಸುವ ಮೂಲಕ ಮೈತ್ರಿ ಸರ್ಕಾರದ ಪಕ್ಷಗಳ ನಡುವಿನ ಬಿರುಕನ್ನು ಹಿಗ್ಗಿಸಲು ಕಾರಣವಾದವು. ಅಂತಿಮವಾಗಿ ಬಿಜೆಪಿಯ ತಂತ್ರ ಕುತಂತ್ರಗಳಿಗೆ ಒಳಗಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ 14 ಜನ ಶಾಸಕರು ಮತ್ತು ಇಬ್ಬರು ಸ್ವತಂತ್ರ ಶಾಸಕರು ಪಕ್ಷಾಂತರ ಮಾಡಿ ಬಿಜೆಪಿಯ ಅಧಿಕಾರ ಲಾಲಸೆಯನ್ನು ತೃಪ್ತಿಪಡಿಸಿದರು.

ಕೋವಿಡ್-19 ರ ಹಾವಳಿ

ಈ ಅವಧಿಯಲ್ಲಿ ಧುತ್ತೆಂದು ತಲೆದೋರಿದ ಕೋವಿಡ್-19 ಅತ್ಯಂತ ಆಘಾತಕಾರಿ ಬೆಳವಣಿಗೆಯಾಗಿದೆ. ದೇಶಾದ್ಯಂತ ಮತ್ತು ರಾಜ್ಯದಲ್ಲಿ ಹಾಗೂ ದೇಶ ವಿದೇಶಗಳಲ್ಲಿ ಲಕ್ಷ ಲಕ್ಷಗಟ್ಟಲೆ ಅಮಾಯಕರನ್ನು ಅದು ಬಲಿ ಪಡೆಯಿತು. ದೂರದ ರಾಜ್ಯಗಳಿಂದ ಹೊಟ್ಟೆಪಾಡಿಗಾಗಿ ಕರ್ನಾಟಕದ ನಗರಗಳಿಗೆ ವಲಸೆ ಬಂದವರು ಅಕ್ಷರಶಃ ಬೀದಿಪಾಲಾದರು. ಅವರಿಗೆ ಕೆಲಸ ಇಲ್ಲದೆ ಇಲ್ಲಿಯೇ ಉಳಿಯಲು ಸಾಧ್ಯವಿರಲಿಲ್ಲ. ವಾಪಸ್ ತಮ್ಮ ಊರುಗಳಿಗೆ ತೆರಳಲು ಬಸ್, ರೈಲು ಪ್ರಯಾಣ ಸೌಕರ್ಯ ಇರಲಿಲ್ಲ. ಅವರಲ್ಲಿ ಹಲವರು ಅನಿವಾರ್ಯವಾಗಿ ನೂರಾರು ಕಿ.ಮೀ. ನಡೆದುಕೊಂಡೇ ಹೋಗಲು ಪ್ರಯತ್ನ ಪಟ್ಟರು. ದಾರಿಯಲ್ಲಿ ಊಟವಿಲ್ಲದೆ, ಕುಡಿಯಲು ನೀರು ದೊರೆಯದೆ ನರಳುವಂತಾಯಿತು.

ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ. ಕನಿಷ್ಠ ಚಿಕಿತ್ಸೆಯ ಕೊರತೆ. ಜೀವ ಉಳಿಸುವ ಆಮ್ಲಜನಕದ ಕೊರತೆ, ಶಾಲೆಗಳು ಮುಚ್ಚಿರುವುದರಿಂದ ಮಕ್ಕಳಿಗೆ ಶಿಕ್ಷಣವೂ ಇಲ್ಲ ಮಧ್ಯಾಹ್ನದ ಊಟವೂ ಇಲ್ಲ. ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ. ಹಸಿವು ತಾಳಲಾಗದೆ ಆತ್ಮಹತ್ಯೆ ಮಾಡಿಕೊಂಡವರು ಹಲವರು. ಸತ್ತವರ ಶವಗಳ ಅಂತ್ಯಸಂಸ್ಕಾರ ಮಾಡಲು ಸ್ಥಳವಿಲ್ಲ. ಕೆಲವು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆಯಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿರಲಿಲ್ಲ. ಕುಡಿಯಲು ಬಿಸಿ ನೀರು ದೊರೆಯದಂತಹ ಪರಿಸ್ಥಿತಿ ಕೆಲವು ಆಸ್ಪತ್ರೆಗಳಲ್ಲಿ ಕಂಡುಬAದಿತ್ತು. ಸರ್ಕಾರದ ಪೂರ್ವಸಿದ್ಧತೆಯಿಲ್ಲದೆ ಲಾಕ್‌ಡೌನ್ ಹೊರತುಪಡಿಸಿ ಯಾವುದೇ ಪರಿಣಾಮಕಾರಿ ನೆರವು ಹರಿದು ಬರಲಿಲ್ಲ. ಬಡವರ ಪಾಲಿಗೆ ಈ ಲಾಕ್‌ಡೌನ್ ಬಹುತೇಕವಾಗಿ ಜೈಲು ಶಿಕ್ಷೆಗಿಂತ ಹೆಚ್ಚು ಭೀಕರವಾಗಿರುತ್ತಿತ್ತು. ಅವರ ಆದಾಯ ಹೆಚ್ಚಿಸದೆ, ಅವರಿಗೆ ಪೌಷ್ಠಿಕ ಆಹಾರ ದೊರೆಯದೆ ಅವರು ಸಾಂಕ್ರಾಮಿಕ ಮುಕ್ತರಾಗಲು ಸಾಧ್ಯವಿರಲಿಲ್ಲ.

ಆದರೂ ಅನೇಕ ಮಂದಿ ವೈದ್ಯರು, ಆರೋಗ್ಯ ಕಾರ್ಯಕರ್ತರ ಸೇವೆ ಶ್ಲಾಘನೀಯವಾಗಿದೆ. ಬಾಗೇಪಲ್ಲಿಯ ನಮ್ಮ ಡಾ. ಅನಿಲ್ ಕುಮಾರ್ ರಂತವರು ಸ್ವಯಂ ಸೇವಕ ತಂಡದೊಂದಿಗೆ ಹಳ್ಳಿ ಹಳ್ಳಿಗಳಿಗೆ ಸಂಚರಿಸಿ ಸಂತ್ರಸ್ತರಿಗೆ ಅವರು ಚಿಕಿತ್ಸೆ ನೀಡಿದ್ದಾರೆ. ನಮ್ಮ ಕಾರ್ಮಿಕ ರಂಗದ ಕಾರ್ಯಕರ್ತರು ಹಸಿವೆಯಿಂದ ಬಾಧಿತರಾದವರಿಗೆ ಆಹಾರದ ಕಿಟ್‌ಗಳನ್ನು ಅವರ ಮನೆಬಾಗಿಲಿಗೆ ತಲುಪಿಸಿದ್ದಾರೆ. ಕಾಮ್ರೇಡ್‌ ಮಾರುತಿ ಮಾನ್ಪಡೆ, ಕಾಮ್ರೇಡ್‌ ವಿಠಲ ಭಂಡಾರಿ, ಕಾಮ್ರೇಡ್‌ ಪುರುಷೋತ್ತಮ ಕಲಾಲಬಂಡಿ ಮೊದಲಾದ ನಮ್ಮ ನೆಚ್ಚಿನ ಕಾರ್ಯಕರ್ತರು ಈ ಭೀಕರ ಸಾಂಕ್ರಾಮಿಕಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಪಕ್ಷದ ಕಾರ್ಯಕರ್ತರು ಬಡ ಕುಟುಂಬಗಳಿಗೆ ಉಚಿತ ಪಡಿತರ, ತಿಂಗಳಿಗೆ ರೂ.7500/- ರಂತೆ ಪರಿಹಾರ ನೀಡಲು ಒತ್ತಾಯಿಸಿ ಹೋರಾಟಗಳನ್ನು ನಡೆಸಿದ್ದಾರೆ. ಎಲ್ಲರೂ ತಪ್ಪದೆ ಲಸಿಕೆ ಹಾಕಿಕೊಳ್ಳುವಂತೆ ಅವರ ಮನವೊಲಿಸುವ ಕೆಲಸವನ್ನು ಮಾಡಿದ್ದಾರೆ.

ನಮ್ಮ ಅಂಗನವಾಡಿ, ಬಿಸಿಯೂಟ, ಆಶಾ ಮೊದಲಾದ ಕಾರ್ಯಕರ್ತರು ತಮ್ಮ ಜೀವದ ಹಂಗು ತೊರೆದು ಸೋಂಕಿತರ ಸೇವೆಯನ್ನು ಮಾಡಿದ್ದಾರೆ. ಅವರಲ್ಲಿ ನೂರಾರು ಮಂದಿ ವಾರಿಯರ್ಸ್ ಸೋಂಕಿಗೆ ಒಳಗಾಗಿ ಪ್ರಾಣತೆತ್ತಿದ್ದಾರೆ. ಬೆಂಗಳೂರು, ಮಂಗಳೂರು, ಉಡುಪಿ, ತುಮಕೂರು ಮೊದಲಾದ ಕಡೆಗಳಲ್ಲಿ ನಮ್ಮ ಕಾರ್ಯಕರ್ತರು ಸೋಂಕಿತರಿಗೆ ಆಹಾರದ ಕಿಟ್ಸ್, ಆಸ್ಪತ್ರೆಗಳಲ್ಲಿ ಹಾಸಿಗೆ, ಶವಗಳ ಅಂತ್ಯಸAಸ್ಕಾರ ಮೊದಲಾದ ಕಾರ್ಯಗಳಲ್ಲಿ ತೊಡಗಿ ಮಾನವೀಯತೆಯನ್ನು ಮೆರೆದಿದ್ದಾರೆ.

Leave a Reply

Your email address will not be published. Required fields are marked *