ರಾಜ್ಯ ಬಿಜೆಪಿಯಲ್ಲಿ ಆರಂಭವಾಗಿದೆ ತಳಮಳ

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಿತು. ಎಲ್ಲಾ ಸಚಿವರು, ಸಂಸದರು ಹಾಗೂ ಶಾಸಕರು ಕಾರ್ಯಕಾರಣಿಗೆ ಬಂದಿರಲಿಲ್ಲ. ಬಿ.ಎಸ್. ಯಡಿಯೂರಪ್ಪ, ಜಾರಕಿಹೊಳಿ ಮುಂತಾದವರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಯಡಿಯೂರಪ್ಪ ವಿದೇಶಿ ಪ್ರವಾಸದಲ್ಲಿದ್ದರು. ʻಎಲ್ಲರೂ ಬರಲೇಬೇಕು ಎಂದೇನಿಲ್ಲ’ ಎಂದು ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಮಾಧ್ಯಮದವರಿಗೆ ಹೇಳಿದರು ಎಂದು ವರದಿಯಾಗಿದೆ. ಆದರೆ ಕೆಲವರ ಗೈರು ಹಾಜರಿ ಪಕ್ಷದಲ್ಲಿ ಎಲ್ಲವು ಸರಿಯಿಲ್ಲ ಎಂಬುದು ಸ್ವಷ್ಪವಾಗುತ್ತದೆ. ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷದೊಳಗಿನ ಈ ಬೆಳವಣಿಗೆ ತಳಮಳವನ್ನು ಉಂಟುಮಾಡಲು ಆರಂಭಿಸಿರುವುದು ಬಿಜೆಪಿ ನಾಯಕರಿಗೆ ತಲೆನೋವಿನ ವಿಷಯವಾಗಿದೆ.

ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯಲ್ಲಿ 25 ಸ್ಥಾನಗಳ ಪೈಕಿ ಕನಿಷ್ಠ 18 ಸ್ಥಾನಗಳನ್ನು ಗೆಲ್ಲಬಹುದೆಂಬ ಭರವಸೆ ರಾಜ್ಯ ಬಿಜೆಪಿಗೆ ಇತ್ತು ಎನ್ನಲಾಗುತ್ತದೆ. ಆದರೆ ಆ ನಿರೀಕ್ಷೆ ಯಶಸ್ವಿಯಾಗಲಿಲ್ಲ. ಮುಂಬರುವ 2023 ರ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡು ಕೆಲಸ ಮಾಡಬೇಕೆಂದು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಪಕ್ಷದ ಶಾಸಕರಿಗೆ, ಸಚಿವರಿಗೆ ಮತ್ತು ಪದಾಧಿಕಾರಿಗಳಿಗೆ ಎಚ್ಚರಿಕೆಯ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ರಾಜ್ಯ ಬಿಜೆಪಿಯಲ್ಲಿ ಮತ್ತೊಮ್ಮೆ ನಾಯಕತ್ವದ ಗೊಂದಲ ತಲೆದೋರಿದ್ದು ಗುಟ್ಟಿನ ವಿಷಯವಾಗಿರಲಿಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿ ಉಂಟಾದ ಹಿನ್ನೆಡೆಯಿಂದಾಗಿ ತೆರೆಮರೆಯಲ್ಲಿ ಮುಖ್ಯಮಂತ್ರಿ ಬದಲಾವಣೆಯ ಸುದ್ದಿಗೆ ರೆಕ್ಕೆ ಪುಕ್ಕ ಬಂದಿದ್ದವು. ಅರುಣ್ ಸಿಂಗ್ ನೀಡಿದ ಎಚ್ಚರಿಕೆ ತಾತ್ಕಾಲಿಕವಾಗಿ ತೇಪೆ ಹಚ್ಚುವುದರಲ್ಲಿ ಯಶಸ್ವಿಯಾಗಿದೆ.

ಈಗಾಗಲೇ ಅಧಿಕಾರ ಅನುಭವಿಸಿರುವ ಸಚಿವರನ್ನು ಕೈಬಿಟ್ಟು ಸಂಪೂರ್ಣ ಹೊಸ ಸಚಿವ ಸಂಪುಟ ರಚನೆ ಮಾಡಬೇಕೆಂಬ ಬೇಡಿಕೆ ಇತ್ತೀಚೆಗೆ ಬಿಜೆಪಿ ವಲಯದಲ್ಲಿ ಜೋರಾಗಿ ಕೇಳಿ ಬರಲಾರಂಭಿಸಿದೆ. ಬಸವರಾಜ ಬೊಮ್ಮಾಯಿ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ನಾಲ್ಕು ತಿಂಗಳು ಕಳೆದಿವೆ. ಇಷ್ಟರಲ್ಲೆ, ಈ ತನಕ ಮಂತ್ರಿಗಿರಿ ಪಡೆದಿರುವ ಎಲ್ಲಾ ಹಿರಿಯರನ್ನು ಸಚಿವ ಸಂಪುಟದಿAದ ಕೈಬಿಟ್ಟು ಈವರೆಗೆ ಅವಕಾಶ ಸಿಗದೇ ಇರುವ ಹೊಸಬರಿಗೆ ಹಾಗೂ ಅನುಭವಿಗಳಿಗೆ ಅವಕಾಶ ನೀಡಬೇಕೆಂದು ಒಕ್ಕೊರಲಿನ ಆಗ್ರಹ ಹುಬ್ಬಳಿಯಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಪ್ರತಿಧ್ವನಿಸಿದೆ.

ಈ ವಿದ್ಯಮಾನಗಳ ಜೊತೆಯಲ್ಲಿ ಬೊಮ್ಮಾಯಿ ಸರ್ಕಾರದ ಕೆಲವು ಧೋರಣೆಗಳು ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಜನರ ಅತೃಪ್ತಿ ಹೆಚ್ಚಾಗುತ್ತಿದೆ. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಜಾನುವಾರ ಹತ್ಯೆ ನಿಷೇಧ ಕಾಯ್ದೆ, ಬಿಟ್ ಕಾಯಿನ್ ಪ್ರಕರಣ, 40 ಪರ್ಸೆಂಟ್ ಹಗರಣದ ಆರೋಪ ಮತಾಂತರ ನಿಷೇಧ ಕಾಯ್ದೆ ಮುಂತಾದ ನೀತಿಗಳು ಜನಸಾಮಾನ್ಯರಲ್ಲಿ ತೀವ್ರ ಅಸಮಾಧಾನವನ್ನು ಉಂಟುಮಾಡಿದೆ. ಇತರ ಪರಿಣಾಮ ಸರ್ಕಾರದ ಮೇಲೆ ಆಗದೆ ಇರಲಾರದು. ಆದ್ದರಿಂದ ಪಕ್ಷದೊಳಗಿನ ಬೆಳವಣಿಗೆ ಬಿಜೆಪಿ ನಾಯಕತ್ವಕ್ಕೆ ತಲೆ ನೋವು ಉಂಟುಮಾಡಿದೆ. ಮುಂಬರುವ ವಿಧಾನಸಭಾ ಚುನಾವಣೆ ಬಿಜೆಪಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ.

ಜನ ಭ್ರಮನಿರಸನಗೊಳುತ್ತಿದ್ದಾರೆ. ಕೇವಲ ಭರವಸೆಗಳಿಗೆ ಮನಸೋಲುವ ಕಾಲ ಮುಗಿದು ಹೋಗಿದೆ. ಕೇವಲ ಮಾತಿಗೆ ಮರಳಾಗುವ ಪರಿಸ್ಥಿತಿ ಉಳಿದಿಲ್ಲ. ಜನರಿಗೆ ಕೆಲಸ ಮಾಡುವ ಸರ್ಕಾರ ಬೇಕು. ಅಂತಹ ಸರ್ಕಾರವನ್ನು ಅವರು ಹುಡುಕಲಾರಂಭಿಸಿದ್ದಾರೆ. ಬಿಜೆಪಿಯವರಿಗೂ ಇದು ಅರ್ಥವಾಗಲಾರಂಭಿಸಿದೆ. ಹೀಗಾಗಿ ಪಕ್ಷದಲ್ಲಿ ಹಿಂದಿಲ್ಲದ ನಡುಕ ಉಂಟಾಗಿದೆ.

Leave a Reply

Your email address will not be published. Required fields are marked *