ಕೋವಿಡ್ ಪರಿಹಾರ ಬಿಡುಗಡೆಗೆ ಒತ್ತಾಯಿಸಿ ಸಿಪಿಐ(ಎಂ) ರಾಜ್ಯ ಸಮ್ಮೇಳನ ನಿರ್ಣಯ

ಕೋವಿಡ್-19 ಸೋಂಕು ದೇಶದಲ್ಲಿ 2020 ರಿಂದಲೂ ಭಾದಿಸುತ್ತಿವೆ. ಮೊದಲನೇ, ಎರಡನೇ ಅಲೆ ಸದ್ಯಕ್ಕೆ ಇಳಿಮುಖವಾಗಿದ್ದು ಮೂರನೇ ಅಲೆಯ ಭಯ ಜನತೆಯನ್ನ ಆತಂಕ್ಕೀಡುಮಾಡಿದೆ. ಸರ್ಕಾರದ ವರದಿಗಳ ಪ್ರಕಾರ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 30,03,265, ಅಧಿಕೃತವಾಗಿ ಸಾವನಪ್ಪಿದವರ ಸಂಖ್ಯೆ 38,299. ಅನಧಿಕೃತ ವರದಿಗಳ ಪ್ರಕಾರ ಮೊದಲನೇ, ಎರಡನೇ ಅಲೆಯಲ್ಲಿ ಮೃತ ಪಟ್ಟವರ ಸಂಖ್ಯೆ ರಾಜ್ಯದಲ್ಲಿ 1 ಲಕ್ಷ ದಾಟಿದೆ ಎನ್ನುತ್ತವೆ. ಬಿಜೆಪಿ ಸರ್ಕಾರ ಪರಿಹಾರ ನೀಡುವ ಮತ್ತಿತರ ನೆಪಗಳನ್ನು ಮುಂದೆ ಮಾಡಿ ಸಾವಿನ ವರದಿಗಳು ಹೊರ ಬರದಂತೆ ಆಡಳಿತಾತ್ಮಕ ಕ್ರಮಕೈಗೊಂಡಿವೆ ಎನ್ನುವುದು ಮೇಲ್ನೊಟ್ಟಕ್ಕೆ ಕಂಡು ಬರುವ ಕಹಿ ಸತ್ಯವಾಗಿರುತ್ತದೆ.

ಯಾವುದೇ ಮೂನ್ಸೂಚನೆ ನೀಡದೇ ಯಾವುದೇ ಕ್ರಮವಹಿಸದೇ ಸರ್ಕಾರ ಲಾಕ್‌ಡೌನ್ ಘೋಷಿಸಿ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೇ, ಆಕ್ಸಿಜನ್ ಸಿಗದೇ ಸರಿಯಾದ ಚಿಕಿತ್ಸೆ ಸಿಗದೇ ವೆಚ್ಚ ಭರಿಸಲಾಗದೇ ಸೋಂಕಿನಿಂದ ಸಾವಿರಾರು ಜನರು ಅಸುನೀಗಿದ್ದರೆ, ಸಾವಿರಾರು ಮೃತ ದೇಹಗಳಿಗೆ ಘನತೆಯ ಅಂತ್ಯಕ್ರಿಯೆ ನಡೆಸಲು ಸಾಧ್ಯವಾಗಿಲ್ಲ. ಸಾವಿರಾರು ಕುಟುಂಬಗಳು ದುಬಾರಿ ಆಸ್ಪತ್ರೆ ಬಿಲ್‌ಗಳನ್ನು ಪಾವತಿಸಲಾಗದೇ ಮೃತ ದೇಹಗಳನ್ನು ಕೊಂಡೋಯ್ಯಲು ಸಾಧ್ಯವಾಗಲಿಲ್ಲ. 700ಕ್ಕೂ ಅಧಿಕ ಮಕ್ಕಳು ತಂದೆ, ತಾಯಿ ಇಬ್ಬರನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

ಪರಿಸ್ಥಿತಿ ಹೀಗಿರುವಾಗ ಸರ್ಕಾರಗಳು ಲಾಕ್‌ಡೌನ್ ಘೋಷಿಸಿ ಕೈತೊಳೆದುಕೊಂಡಿತು. ಪಕ್ಷ ಹಾಗೂ ಸಂಘಟನೆಗಳ ಒತ್ತಾಯಕ್ಕೆ ಮಣಿದು ಆರಂಭದಲ್ಲಿ 1,100 ಕೋಟಿ ನಂತರ 500 ಕೋಟಿ ಆರ್ಥಿಕ ನೆರವು ಘೋಷಿಸಿತು. ಹಾಗೆ ಪ್ರಕಟಿಸಿದ ಆರ್ಥಿಕ ನೆರವು ಸಂಪೂರ್ಣವಾಗಿ ಅಸಂಘಟಿತ ಕಾರ್ಮಿಕರಿಗೆ ದೊರೆಯಲಿಲ್ಲ. ಮಾಸಿಕ 10 ಸಾವಿರ ಕೋವಿಡ್ ಪರಿಹಾರ ಧನ ನೀಡಬೇಕೆಂದು ಬೇಡಿಕೆ ಇಟ್ಟು ಅಂತಹ ಕ್ಲಿಷ್ಠಕರ ಪರಿಸ್ಥಿತಿಯಲ್ಲಿ ಹೋರಾಟ ನಡೆಸಿದರೂ ಕೇವಲ 3 ಸಾವಿರ ಆರ್ಥಿಕ ನೆರವು ಘೋಷಿಸಿತು.

ನ್ಯಾಯಾಲಯದ ಮಧ್ಯ ಪ್ರವೇಶದ ನಂತರ ರೇಷನ್ ಕಿಟ್‌ಗಳನ್ನು ನೀಡಲು ನಿರ್ಧರಿಸಲಾಯಿತು. ಆದರೂ ಕಳಪೆ ಕಿಟ್ಟುಗಳನ್ನು ವಿತರಿಸಿತು. ಅಲ್ಲದೆ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕಲ್ಯಾಣ ನಿಧಿಯನ್ನು ಕಿಟ್ ಹೆಸರಿನಲ್ಲಿ ದುರುಪಯೋಗಪಡಿಸಿಕೊಂಡು ಬಿಜೆಪಿ ಎಂಎಲ್‌ಎಗಳ ಮೂಲಕ ವಿತರಿಸಿ ತನ್ನ ಸರ್ಕಾರದ ಸಾಧನೆ ಎಂಬಂತೆ ಬಿಂಬಿಸಿತು. ರಾಜ್ಯದ ಜನಸಂಖ್ಯೆಯಲ್ಲಿ 3 ಕೋಟಿಯಷ್ಟು ಜನ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಅಲೆಯಲ್ಲಿ ಅತಿ ಹೆಚ್ಚು ಬದುಕನ್ನು ಕಳೆದುಕೊಂಡದ್ದು ಅಸಂಘಟಿತ, ವಲಸೆ ಕಾರ್ಮಿಕರು ಆದರೆ ಅಸಂಘಟಿತ-ವಲಸೆ ಕಾರ್ಮಿಕರಿಗೆ ಆಹಾರ ಕಿಟ್ಟು ಕೊಡಬೇಕೆಂಬ ನ್ಯಾಯಾಲಯದ ನಿರ್ದೇಶನ ಇದ್ದರೂ ಅವುಗಳು ಸರಿಯಾಗಿ ತಲುಪಲು ಬೇಕಾದ ಹಣಕಾಸಿನ ನೆರವು ಸಿಗದ ಪರಿಣಾಮ ಲಕ್ಷಾಂತರ ಕುಟುಂಬಗಳು ಆಹಾರ ಕಿಟ್‌ನಿಂದ ವಂಚಿತವಾಗಿವೆ.

ಕೋವಿಡ್ ನಿಯಂತ್ರಣಕ್ಕಾಗಿ ಜೀವ ಒತ್ತೆ ಇಟ್ಟು ಕೆಲಸ ಮಾಡುತ್ತಿರುವವರು ಕೋವಿಡ್ ವಾರಿಯರ್ಸ್‌ ಗಳಾದ ಸ್ಕೀಂ ನೌಕರರಿಗೆ ಹಾಗೂ ಅಸಂಘಟಿತ ವಲಯದ 10 ವಿಭಾಗಕ್ಕೆ ಘೋಷಿಸಿದ ಮೊದಲನೇ, ಎರಡನೇ ಅಲೆಯ ಆರ್ಥಿಕ ನೆರವು ರೂ.3000 ಹಾಗೂ ರೂ.2000 ಗಳನ್ನು ಪಡೆಯಲು ಸರ್ಕಾರ ವಿಧಿಸಿದ ಮಾನದಂಡಗಳಿಂದ ಬಹಳಷ್ಟು ಕಾರ್ಮಿಕರು ಈ ಪರಿಹಾರ ಪಡೆಯುವಲ್ಲಿ ವಂಚಿತರಾದರು.

ಕೋವಿಡ್ ವಾರಿಯರ್ಸ್‌ಗಳು, ಆರೋಗ್ಯ ಕಾರ್ಯಕರ್ತರು, ಆಶಾ, ಅಂಗನವಾಡಿ, ಗ್ರಾಮ ಪಂಚಾಯ್ತಿ, ಮುನ್ಸಿಪಲ್, ಕೊರೊನಾ ತಡೆಗಟ್ಟಲು ಕೆಲಸ ಮಾಡಿದ ಇವರಿಗೆ ಕೇವಲ ಕೊರೊನಾ ಪೀಡಿತರಾಗಿ ಸಾವನಪ್ಪಿದವರಿಗೆ ಮಾತ್ರವೇ 30 ಲಕ್ಷ ರೂ. ಗಳನ್ನು ಪರಿಹಾರವಾಗಿ ನೀಡಿತಲ್ಲ ವಿನಃ ಇದೇ ಸಂದರ್ಭದಲ್ಲಿ ಕೆಲಸ ಮಾಡಿ ಕೋವಿಡೇತರ ಕಾಯಿಲೆಗಳಿಂದ ಮೃತಪಟ್ಟವರಿಗೆ ಯಾವ ಪರಿಹಾರ ಇಲ್ಲದೆ ವಂಚಿತರಾಗಿದ್ದಾರೆ. ಮೃತಪಟ್ಟ ನೌಕರರ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿವೆ. ಆದ್ದರಿಂದ ಎಲ್ಲಾ ಕೋವಿಡ್ ವಾರಿಯರ್ಸ್‌ಗಳಿಗೂ ಆರ್ಥಿಕ ಭದ್ರತೆ ಸಿಗುವಂತೆ ವ್ಯವಸ್ಥೆ ಮಾಡಬೇಕೆಂದು. ಅಷ್ಟೆ ಅಲ್ಲ ಕೋವಿಡ್‌ನಿಂದ ಮೃತರಾದ ಎಲ್ಲರಿಗೂ ಸರ್ಕಾರ 1 ಲಕ್ಷ ರೂ. ಗಳ ಪರಿಹಾರ ಎಂದು ಘೋಷಿಸಿದ್ದು ಘೋಷಣೆಯಾಗಿ ಉಳಿದಿದೆಯಲ್ಲಾ ವಿನಃ ಇನ್ನ ಜಾರಿ ಆಗಲಿಲ್ಲ. ಮೃತ ಕುಟುಂಬಗಳಿಗೆ ಹಾಗೂ ವಾರಿಯರ್ಸ್‌ಗಳಿಗೆ ಘೋಷಿಸಿದಂತೆ ತಕ್ಷಣ ಪರಿಹಾರದ ಹಣ ಬಿಡುಗಡೆ ಮಾಡಬೇಕೆಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ 2022ರ ಜನವರಿ 2 ರಿಂದ 4ರವರೆಗೆ ನಡೆಯುತ್ತಿರುವ 23ನೇ ಸಿಪಿಐ(ಎಂ) ರಾಜ್ಯ ಸಮ್ಮೇಳನ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ಒತ್ತಾಯಿಸುತ್ತದೆ.

Leave a Reply

Your email address will not be published. Required fields are marked *