ಕೃಷಿ ಕೂಲಿಕಾರರ ಒಂದು ಸಮಗ್ರ ಕಾಯ್ದೆಯ ಜಾರಿಗಾಗಿ ಆಗ್ರಹಿಸಿ ಸಿಪಿಐ(ಎಂ) ರಾಜ್ಯ ಸಮ್ಮೇಳನ ನಿರ್ಣಯ

ಕೃಷಿ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಕೃಷಿ ಕೂಲಿಕಾರರ ಬಗ್ಗೆ ಒಂದು ಸಮಗ್ರ ಕಾಯ್ದೆಯ ಜಾರಿಯಾಗಬೇಕೆಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕರ್ನಾಟಕ 23ನೇ ರಾಜ್ಯ ಸಮ್ಮೇಳನವು ನಿರ್ಣಯವನ್ನು ಅಂಗೀಕರಿಸಿದೆ.

ಕೃಷಿ ಕೂಲಿಕಾರರು ಕೃಷಿ ಉತ್ಪಾದನೆಯಲ್ಲಿ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುತ್ತಾರೆ. ಅವರೇ ನಮ್ಮ ದೇಶದ ಬಡ ಜನತೆಯ ಬಹುದೊಡ್ಡ ವಿಭಾಗ ಅವರು ಆರ್ಥಿಕ ಶೋಷಣೆಗೂ ಸಾಮಾಜಿಕ ದಮನಕ್ಕೂ ಒಳಪಟ್ಟವರು, ಅವರು ನಮ್ಮ ದೇಶದ ದುಡಿಯುವ ಜನ ವಿಭಾಗಗಳ ಬಹುದೊಡ್ಡ ವಿಭಾಗ, ಅವರಿಗೆ ತಮ್ಮ ಹಕ್ಕುಗಳನ್ನು ರಕ್ಷಣೆ ಮಾಡಲು ಯಾವ ಸಮಗ್ರ ಕಾನೂನಿನ ಬಲವಿಲ್ಲ. ಈ ನಮ್ಮ ದೇಶದಲ್ಲಿ ಗಿಡ ಮರಗಳ ರಕ್ಷಣೆಗೆ ಕಾನೂನುಗಳಿವೆ, ಪಶು ಪಕ್ಷಿಗಳ ರಕ್ಷಣೆಗೆ ಕಾನೂನುಗಳಿವೆ, ಆದರೆ ಕೂಲಿಕಾರರ ರಕ್ಷಣೆಗೆ ಕಾನೂನುಗಳಿಲ್ಲ ದೇಶ ಸ್ವತಂತ್ರವಾಗಿ 75 ವರ್ಷಗಳು ಕಳೆದರೂ ಕೃಷಿ ಕೂಲಿಕಾರರ ವೇತನ, ಕೆಲಸದ ಪರಿಸ್ಥಿತಿ ಮತ್ತು ಸಾಮಾಜಿಕ ಭದ್ರತೆಯನ್ನು ಒಳಗೊಳ್ಳುವ ಸಮಗ್ರ ಕಾನೂನ್ನೊಂದನ್ನು ಅಂಗೀಕರಿಸುವ ಆಳುವ ಸರ್ಕಾರಗಳು ವಿಫಲವಾಗಿವೆ.

ಕೇಂದ್ರದಲ್ಲಿ ಇದುವರೆಗೆ ಆಡಳಿತ ನಡೆಸಿದ ಯಾವುದೇ ಸರ್ಕಾರ ಇಂತಹ ಒಂದು ಕಾನೂನನ್ನು ಅಂಗೀಕರಿಸುವಲ್ಲಿ ವಿಫಲವಾಗಿದೆ. ಕಳೆದ ಮೂರುವರೆ ದಶಕಗಳಿಂದ ಅಂತಹ ಮಸೂದೆಯೊಂದು ಅಂಗೀಕಾರಕ್ಕಾಗಿ ಸರ್ಕಾರದ ಮುಂದೆ ಕಾಯುತ್ತಿದೆ. ಇದು ಆಳುವ ಸರ್ಕಾರಗಳ ವರ್ಗ ಸ್ವರೂಪವನ್ನು ತೋರಿಸುತ್ತದೆ.

ಕೇವಲ ತ್ರಿಪುರ ಮತ್ತು ಕೇರಳ ರಾಜ್ಯಗಳಲ್ಲಿ ಮಾತ್ರ ಕೃಷಿ ಕೂಲಿಕಾರ್ಮಿಕರಿಗಾಗಿ ಸಮಗ್ರವಾದ ಕಲ್ಯಾಣ ಕಾನೂನುಗಳನ್ನು ರಚಿಸಲಾಗಿದೆ. ಕೇರಳದಲ್ಲಿರುವ ಎಡ ಪ್ರಜಾಸತ್ತಾತ್ಮಕ ರಂಗದ ಸರಕಾರ ಹಾಗೂ ತ್ರಿಪುರದಲ್ಲಿ ಹಿಂದೆ ಎಡರಂಗದ ಸರ್ಕಾರ ಆಡಳಿತವನ್ನು ವಹಿಸಿಕೊಂಡದ್ದು ಇದಕ್ಕೆ ಕಾರಣವಾಗಿತ್ತು, ಕೃಷಿ ಕೂಲಿಕಾರರ ಬಲಿಷ್ಠ ಚಳುವಳಿಯು ಈ ಎರಡು ರಾಜ್ಯಗಳಲ್ಲಿ ಕೃಷಿ ಕೂಲಿಕಾರರ ಸಮಗ್ರ ಕಾನೂನನ್ನು ರಚಿಸಲು ಕಾರಣವಾಗಿದೆ. ತಮಿಳುನಾಡಿನಲ್ಲಿಯೂ ಸಹ ಇಂತಹ ಕಾನೂನೊಂದು ಅಸ್ತಿತ್ವದಲ್ಲಿತ್ತು, ಆದರೆ ನಂತರ ಕೃಷಿ ಕೂಲಿಕಾರರ ಕಾಯ್ದೆಯನ್ನು ರದ್ದುಮಾಡಿ ಕೃಷಿ ಕೂಲಿಕಾರರ ಕಲ್ಯಾಣ ಯೋಜನೆಯನ್ನು ರೂಪಿಸಲಾಯಿತು.

ಪ್ರಸಕ್ತ ಕಾಲಘಟ್ಟದಲ್ಲಿ ಕೃಷಿ ರಂಗದಲ್ಲಿ ಬಿಕ್ಕಟ್ಟು ಆಳವಾಗುತ್ತಿದ್ದು, ಕೃಷಿ ಕೂಲಿಕಾರರ ಸಂಖ್ಯೆ ಹೆಚ್ಚಾಗುತ್ತಿರುವಾಗ ಮತ್ತು ನವ ಉದಾರವಾದಿ ಆರ್ಥಿಕ ನೀತಿಗಳ ಪರಿಣಾಮವಾಗಿ ಕೃಷಿ ರಂಗದಲ್ಲಿ ಕೃಷಿ ಕೂಲಿಕಾರರಿಗೆ ಸಿಗುತ್ತಿರುವ ಕೆಲಸ ಕಡಿಮೆಯಾಗುತ್ತಿರುವಾಗ ಕಲ್ಯಾಣ ರಾಜ್ಯದ ಪರಿಕಲ್ಪನೆ ಕ್ಷೀಣಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿ ಕೂಲಿಕಾರರಿಗೆ ಒಂದು ಸಮಗ್ರವಾದ ಕೇಂದ್ರೀಯ ಶಾಸನ ಅತಿ ಅಗತ್ಯವಾಗಿದೆ, ಕೇಂದ್ರ ಸರ್ಕಾರವು ಕಾರ್ಮಿಕ ಕಾನೂನುಗಳನ್ನು ಬಲಹೀನಗೊಳಿಸಿ ಕಾರ್ಮಿಕರ ಕಾಯ್ದೆಗಳ ಸಂಹಿತೆಯನ್ನು ರೂಪಿಸಲು ಹೊರಟಿರುವಾಗ ಕೃಷಿ ಕೂಲಿಕಾರರು ಇತರ ಸಮಾನ ಮನಸ್ಕರ ಸಂಘಟನೆಗಳೊಂದಿಗೆ ಸೇರಿಕೊಂಡು ಜಂಟಿಯಾಗಿ ಹಾಗೂ ಸ್ವತಂತ್ರವಾಗಿ ಕೃಷಿ ಕೂಲಿಕಾರ್ಮಿಕರ ಸಮಗ್ರ ಕೇಂದ್ರಿಯ ಶಾಸನಕ್ಕಾಗಿ ಒತ್ತಾಯಿಸುವುದು ಅತ್ಯಗತ್ಯವಾಗಿದೆ.

ಗಂಗಾವತಿಯಲ್ಲಿ 2022ರ ಜನವರಿ 2 ರಿಂದ 4ರವರೆಗೆ ನಡೆಯುತ್ತಿರುವ ಸಿಪಿಐ(ಎಂ) 23ನೇ ಸಮ್ಮೇಳನವು ಕೃಷಿ ಕೂಲಿಕಾರರು ರಾಜ್ಯ ಒಂದು ಸಮಗ್ರ ಕೇಂದ್ರಿಯ ಶಾಸನಕ್ಕಾಗಿ ನಡೆಸುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ.

Leave a Reply

Your email address will not be published. Required fields are marked *