ಸಾರ್ವಜನಿಕ ಉದ್ದಿಮೆಗಳು ಮತ್ತು ಸಂಸ್ಥೆಗಳ ಉಳಿವಿಗಾಗಿ ಸಿಪಿಐ(ಎಂ) ರಾಜ್ಯ ಸಮ್ಮೇಳನ ನಿರ್ಣಯ

ಸಾರ್ವಜನಿಕ ಉದ್ದಿಮೆಗಳು ಮತ್ತು ಸಂಸ್ಥೆಗಳನ್ನು ಖಾಸಗಿ ಬಂಡವಾಳದಾರರ ಲೂಟಿಗೆ ಒಪ್ಪಿಸದೇ ಉಳಿಸಿಕೊಳ್ಳಬೇಕೆಂದು ಭಾರತ ಕಮ್ಯೂನಿಸ್ಟ್ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) 23ನೇ ರಾಜ್ಯ ಸಮ್ಮೇಳನ ನಿರ್ಣಯವನ್ನು ಅಂಗೀಕರಿಸಿದೆ.

ಸಾರ್ವಜನಿಕ ಉದ್ದಿಮೆಗಳು, ಸಾರ್ವಜನಿಕ ಸಂಪನ್ಮೂಲಗಳು, ಸಾರ್ವಜನಿಕ ಸೇವೆಗಳು, ಹೀಗೆ ಸಮಾಜಕ್ಕೆ ಸೇರಿದ, ಜನಸಮೂಹಗಳ ಉಪಯೋಗಕ್ಕೆ ಇರಬೇಕಾದ ಎಲ್ಲವನ್ನೂ ಖಾಸಗಿ ಬಂಡವಾಳದಾರರ ಲೂಟಿಗೆ ಒಪ್ಪಿಸಿಬಿಡುವ ನವಉದಾರೀಕರಣ ನೀತಿಗಳು ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಆಡಳಿತದಲ್ಲಿ ಅವ್ಯಾಹತವಾಗಿ ಹೆಚ್ಚಾಗಿದೆ. ಸ್ವಾತಂತ್ರ‍್ಯಾ ನಂತರದ ಭಾರತದ ಬೆಳವಣಿಗೆಯ ಪಥದಲ್ಲಿಯೇ ಇದರ ಅಂತರ್ಗತ ಬೀಜಗಳು ಹುದುಗಿದ್ದರೂ, 1991 ರಲ್ಲಿ ರಾವ್-ಸಿಂಗ್ ಜೋಡಿಯ ನೇತೃತ್ವದಲ್ಲಿ ಆರಂಭವಾದ ಖಾಸಗೀಕರಣ, ಉದಾರೀಕರಣ, ಜಾಗತೀಕರಣ (ಎಲ್‌ಪಿಜಿ) ನೀತಿಗಳು ನಿರಂತರವಾಗಿ ಹೆಚ್ಚಾಗುತ್ತಾ ಮೋದಿ ಸರ್ಕಾರದಲ್ಲಿ ಅದರ ಶಿಖರ ಬಿಂದುವನ್ನು ತಲುಪಿವೆ. ಸಾರ್ವಜನಿಕ ಉದ್ದಿಮೆಗಳನ್ನು ದೇಶೀ ಮತ್ತು ವಿದೇಶೀ ಖಾಸಗಿ ಬಂಡವಾಳಿಗರಿಗೆ ಒಪ್ಪಿಸುವ, ಸಾರ್ವಜನಿಕ ಸಂಪನ್ಮೂಲಗಳ ನಿಯಂತ್ರಣ ಮತ್ತು ನಿರ್ವಹಣೆಯನ್ನು ಖಾಸಗೀಕರಿಸುವ, ಶಿಕ್ಷಣ, ಆರೋಗ್ಯ, ಮುಂತಾದ ಸಾರ್ವಜನಿಕ ಸೇವೆಗಳ ಸರ್ಕಾರಿ ವೆಚ್ಚವನ್ನು ಪೂರ್ಣವಾಗಿ ಕಡಿತಗೊಳಿಸಿ ಖಾಸಗಿಯವರ ಕೃಪಾಕಟಾಕ್ಷಕ್ಕೆ ಜನರನ್ನು ನೂಕುವ ಕೆಲಸವನ್ನು ಪ್ರಸಕ್ತ ಬಿಜೆಪಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕೈಗೊಂಡಿವೆ.

ಹಿಂದೆ ವಾಜಪೇಯಿ ಸರ್ಕಾರದ ಸಂದರ್ಭದಲ್ಲಿ, ಸಾರ್ವಜನಿಕ ಉದ್ದಿಮೆಗಳ ಬಂಡವಾಳ ಹಿಂತೆಗೆಯಲೆಂದೇ ಒಬ್ಬ ಮಂತ್ರಿಯನ್ನು ನೇಮಕ ಮಾಡಲಾಗಿತ್ತು. ನಂತರ ಎಡಪಕ್ಷಗಳ ಬೆಂಬಲಿತ ಯುಪಿಎ-1 ರ ಸಂದರ್ಭದಲ್ಲಿ ಈ ಪ್ರಕ್ರಿಯೆಗೆ ಸ್ವಲ್ಪ ತಡೆ ಸಿಕ್ಕಿತ್ತು. ಅಪಾರ ಸಂಪತ್ತನ್ನು ಹೊಂದಿರುವ ಹಲವಾರು ನಷ್ಟ ಅಥವಾ ರೋಗಪೀಡಿತ ಸಾರ್ವಜನಿಕ ಉದ್ದಿಮೆಗಳನ್ನು ಸಂಪೂರ್ಣವಾಗಿ ಅತ್ಯಂತ ಕಡಿಮೆ ಬೆಲೆಗೆ ಮಾರುವ ಮಾತುಗಳನ್ನು ಸರ್ಕಾರಗಳು ಆಡುತ್ತಿದ್ದವು. ಅಗತ್ಯವಾದ ಬಂಡವಾಳ ಹೂಡಿಕೆ ಮಾಡಿ ಆಧುನೀಕರಣಗೊಳಿಸಿದ್ದರೆ ಬಹುತೇಕ ಉದ್ದಿಮೆಗಳು ಲಾಭದ ಲಯಕ್ಕೆ ಬರುತ್ತಿದ್ದವು. ಆದರೆ ಸರ್ಕಾರ ಅದನ್ನು ಮಾಡಲಿಲ್ಲ. ಇದರ ಜೊತೆಗೆ ಈಗ ವ್ಯೂಹಾತ್ಮಕ ಮತ್ತು ಮೂಲ ವಲಯಗಳಲ್ಲಿರುವ ಬಹುತೇಕ ಲಾಭದಾಯಕ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಿಸಲು ಸರ್ಕಾರ ತೀರ್ಮಾನಿಸಿರುವುದು ಆತಂಕಕಾರಿ ಸಂಗತಿಯಾಗಿದೆ.

2018-19 ರಲ್ಲಿ ಪ್ರಮುಖ ಸಾರ್ವಜನಿಕ ಉದ್ದಿಮೆಗಳಾದ ಓಎನ್‌ಜಿಸಿ, ಕೋಲ್ ಇಂಡಿಯಾ ಲಿ., ಬಿಹೆಚ್‌ಇಎಲ್, ಮುಂತಾದವುಗಳಲ್ಲಿ ಬಂಡವಾಳ ಹಿಂತೆಗೆತ ಮಾಡಲಾಗಿದ್ದರೆ, ಹೆಚ್‌ಎಸ್‌ಸಿಸಿ (ಇಂಡಿಯಾ) ಲಿ., ಡ್ರೆಡ್ಜಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ., ನ್ಯಾಷನಲ್ ಕನ್‌ಸ್ಟ್ರಕ್ಷನ್ ಕಾರ್ಪೊರೇಷನ್ ಲಿ., ಮುಂತಾದವುಗಳಲ್ಲಿ ವ್ಯೂಹಾತ್ಮಕ ಬಂಡವಾಳ ಹಿಂತೆಗೆತ ಮಾಡಲಾಗಿದೆ. ಅಪಾರ ಲಾಭ ಮಾಡುತ್ತಿರುವ ಸಾರ್ವಜನಿಕ ಉದ್ದಿಮೆಗಳ ಬಳಿಯಿದ್ದ ಮಿಗುತಾಯ ಮತ್ತು ಮೀಸಲು ನಿಧಿಗಳನ್ನು ಕೇಂದ್ರ ಸರ್ಕಾರ ವಶಪಡಿಸಿಕೊಂಡಿದೆ ಮತ್ತು ಈ ಮೂಲಕ ಅದರ ಮಾರುಕಟ್ಟೆ ಮೌಲ್ಯವನ್ನು ತಗ್ಗಿಸಿ ಅವುಗಳನ್ನು ಖಾಸಗಿಯವರು ಕಡಿಮೆ ಬೆಲೆಗೆ ಕೊಳ್ಳಲು ಅನುಕೂಲ ಮಾಡಲಾಗಿದೆ.

ರಕ್ಷಣೆ, ಉಕ್ಕು, ವಿದ್ಯುತ್, ವಿಮೆ, ಔಷಧಿ, ವಿಮಾನಯಾನ, ಇಂಜಿನಿಯರಿಂಗ್, ಬೃಹತ್ ಕಾಮಗಾರಿ, ಪೆಟ್ರೋಲಿಯಂ, ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ದೇಶದ ಸ್ವಾವಲಂಬನೆಯನ್ನು ಕಾಪಾಡುತ್ತಿರುವ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಿಸಲು ಮೋದಿ ಸರ್ಕಾರವು ಪ್ರಕಟಿಸಿದೆ. ಸುಮಾರು 300 ಸಾರ್ವಜನಿಕ ಉದ್ದಿಮೆಗಳನ್ನು ಎರಡು ಡಜನ್ ಸಂಖ್ಯೆಗೆ ಇಳಿಸುವುದಾಗಿ, ಮತ್ತು ನಾಲ್ಕು ವ್ಯೂಹಾತ್ಮಕ ವಲಯಗಳಲ್ಲಿ 3 ಅಥವಾ 4 ಉದ್ದಿಮೆಗಳನ್ನು ಮಾತ್ರ ಉಳಿಸಿಕೊಳ್ಳುವ ಉದ್ದೇಶವನ್ನು ಮೋದಿ ಸರ್ಕಾರ ಪ್ರಕಟಿಸಿದೆ. ಬಿಇಎಂಎಲ್, ಭದ್ರಾವತಿಯ ವಿಐಎಸ್‌ಎಲ್, ಸೇಲಂ ಮತ್ತು ದುರ್ಗಾಪುರ್ ಸ್ಟೀಲ್, ಬಿಪಿಸಿಎಲ್, ಸೆಂಟ್ರಲ್ ಎಲೆಕ್ಟ್ರಾನಿಕ್ಸ್ ಮುಂತಾದ 26 ಸಾರ್ವಜನಿಕ ಉದ್ದಿಮೆಗಳ ಶೇ.100 ರಷ್ಟು ಷೇರುಗಳನ್ನು ಮಾರಾಟ ಮಾಡಲು ತೀರ್ಮಾನಿಸಿದೆ. ಏರ್ ಇಂಡಿಯಾವನ್ನು ಟಾಟಾ ಕಂಪನಿಗೆ ಚಿನ್ನದ ತಟ್ಟೆಯಲ್ಲಿಟ್ಟು ಕೊಡಲಾಗಿದೆ. ಎನ್‌ಟಿಪಿಸಿ, ಸಿಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ, ಇಂಡಿಯನ್ ರೈಲ್ವೆ, ರೈಲ್‌ಟೆಲ್, ಟಿಸಿಐಎಲ್, ಹೆಚ್‌ಪಿಸಿಎಲ್, ಮುಂತಾದ 50 ಕ್ಕೂ ಹೆಚ್ಚಿನ ಲಾಭದಾಯಕ ಉದ್ದಿಮೆಗಳ ಆಸ್ತಿಗಳನ್ನು ಮಾರಲು ಗುರುತಿಸಲಾಗಿದೆ.

1956 ರಲ್ಲಿ ಕೇವಲ 5 ಕೋಟಿ ಮೂಲ ಬಂಡವಾಳದಲ್ಲಿ ಆರಂಭಿಸಲಾದ ಎಲ್‌ಐಸಿ ಇಂದು 38 ಲಕ್ಷ ಕೋಟಿಗೂ ಹೆಚ್ಚಿನ ಆಸ್ತಿಯನ್ನು ಹೊಂದಿದೆ. ತೆರಿಗೆ ರೂಪದಲ್ಲಿ ಪ್ರತಿ ವರ್ಷ 10 ಸಾವಿರ ಕೋಟಿ ರೂಗಳನ್ನು ಮತ್ತು ಡಿವಿಡೆಂಡ್ ರೂಪದಲ್ಲಿ ಸುಮಾರು 2.7 ಸಾವಿರ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರಕ್ಕೆ ನೀಡುವ ಎಲ್‌ಐಸಿ ಕಾಯ್ದೆಗೆ ತಿದ್ದುಪಡಿ ತಂದು ಶೇ.49 ರಷ್ಟು ಷೇರು ಮಾರಾಟಕ್ಕೆ ಮುಂದಾಗಿದೆ. ಬ್ಯಾಂಕ್ ವಿಲೀನೀಕರಣದ ಹಿಂದೆ ಬೃಹತ್ ಕಾರ್ಪೊರೇಟ್‌ಗಳಿಗೆ ಮಾರಾಟ ಮಾಡುವ ಹುನ್ನಾರವಿದೆ. ಸ್ವತಂತ್ರ ಭಾರತದಲ್ಲೇ ಮೊದಲ ಬಾರಿಗೆ ಎನ್ನುವಂತೆ ದೇಶದ ಕೇಂದ್ರ ಬ್ಯಾಂಕ್‌ನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದಿದೆ.

ದೇಶದ ರಕ್ಷಣಾ ಪಡೆಗಳಿಗೆ ಬೇಕಾದ ಉತ್ಪನ್ನಗಳನ್ನು ತಯಾರಿಸುತ್ತಿದ್ದ 41 ಆರ್ಡಿನೆನ್ಸ್ ಫ್ಯಾಕ್ಟರಿಗಳ 273 ಉತ್ಪನ್ನಗಳ ಪೈಕಿ 182 ಉತ್ಪನ್ನಗಳನ್ನು ಖಾಸಗಿಯವರಿಗೆ ನೀಡಲಾಗಿದೆ. ಇದರಿಂದ 7 ಫ್ಯಾಕ್ಟರಿಗಳಲ್ಲಿ ಪೂರ್ಣವಾಗಿ ಕೆಲಸವೇ ಇರುವುದಿಲ್ಲ ಮತ್ತು 14 ಫ್ಯಾಕ್ಟರಿಗಳಲ್ಲಿ ಶೇ.50 ಕೆಲಸ ಇರುವುದಿಲ್ಲ. 50 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಾರೆ. ದೇಶ ರಕ್ಷಣೆ ವಿಚಾರದಲ್ಲೂ ಕಾರ್ಪೊರೇಟ್‌ಗಳ ಹಿತವನ್ನೇ ಆದ್ಯತೆಯನ್ನಾಗಿ ಮೋದಿ ಸರ್ಕಾರ ಮಾಡಿಕೊಂಡಿದೆ. ರಫೇಲ್ ಯುದ್ಧ ವಿಮಾನಗಳ ವಿಚಾರದಲ್ಲೂ ರಿಲಯನ್ಸ್ ಕಂಪನಿಗೆ ಲಾಭ ಮಾಡಿಕೊಡಲು ನಮ್ಮ ಹೆಮ್ಮೆಯ ಹೆಚ್‌ಎಎಲ್‌ನ್ನು ಬಲಿ ಕೊಡಲಾಗಿದೆ.

741 ಕಿ.ಮೀ. ಉದ್ದದ ಕೊಂಕಣ್ ರೈಲ್ವೆಯನ್ನು ಕೇವಲ 750 ಕೋಟಿ ರೂ.ಗಳಿಗೆ ಖಾಸಗಿಯವರಿಗೆ ಬಿಟ್ಟುಕೊಡಲು ಮೋದಿ ಸರ್ಕಾರ ತೀರ್ಮಾನಿಸಿದೆ. ಇದರ ಅಸಲಿ ಮೌಲ್ಯ ಏನಿಲ್ಲವೆಂದರೂ ಇದಕ್ಕಿಂತ 30 ಪಟ್ಟು ಹೆಚ್ಚಾಗಿದೆ! ಪಶ್ಚಿಮ ಘಟ್ಟಗಳಲ್ಲಿ ದೀರ್ಘವಾಗಿ ಕ್ರಮಿಸುವ ಕೊಂಕಣ್ ರೈಲ್ವೆಯ ಹಾದಿಯಲ್ಲಿ ದೇಶದ ಪ್ರಮುಖ ಮೂರು ನೌಕಾ ನೆಲೆಗಳು, ನಾಲ್ಕು ಬೃಹತ್ ಬಂದರುಗಳು, ಮೂರು ತೈಲ ಸಂಸ್ಕರಣಾ ಘಟಕಗಳು, ನೂರಾರು ಸಂಪರ್ಕ ರೈಲ್ವೆಗಳು ಬರುತ್ತವೆ. ಇಂತಹ ಎಲ್ಲಾ ಸಾರ್ವಜನಿಕ ಸಂಸ್ಥೆಗಳು ಖಾಸಗಿಯವರಿಗೆ ಅತ್ಯಂತ ಅಗ್ಗವಾಗಿ ವರ್ಗಾವಣೆಯಾಗಲಿವೆ. ದೇಶದ ಅತ್ಯಂತ ಅಗ್ಗದ ಸಾರಿಗೆಯಾದ ರೈಲ್ವೆಯನ್ನು ಖಾಸಗೀಕರಿಸಲು ರೈಲ್ವೆ ಡೆವಲಪ್‌ಮೆಂಟ್ ಅಥಾರಿಟಿಯನ್ನು ಸ್ಥಾಪಿಸಲಾಗಿದೆ. ಇದರ ಮೂಲಕ ರೈಲ್ವೆ ಟ್ರಾಕ್‌ಗಳನ್ನು ಖಾಸಗಿಯವರಿಗೆ ನೀಡಲಾಗುವುದು. ಪ್ರಯಾಣ ಮತ್ತು ಸರಕು ಸಾರಿಗೆ ದರಗಳನ್ನು ಇದು ನಿಗದಿ ಮಾಡಲಿದೆ. ಶೇ.47 ರಷ್ಟು ಸಬ್ಸಿಡಿ ಇರುವ ರೈಲ್ವೆ ಪ್ರಯಾಣ ದರಗಳು ಮುಂದೆ ಇಲ್ಲವಾಗಲಿವೆ.

ಕಳೆದ ವರ್ಷದ ಬಜೆಟ್‌ನಲ್ಲಿ ಘೋಷಣೆ ಮಾಡಲಾದ ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ (ಎನ್‌ಎಂಪಿ) ಅಡಿಯಲ್ಲಿ ದೇಶದ ಬಹುತೇಕ ಸಾರ್ವಜನಿಕ ಉದ್ದಿಮೆಗಳನ್ನು ಮತ್ತು ಸಂಸ್ಥೆಗಳನ್ನು 40 ವರ್ಷಗಳ ದೀರ್ಘಾವಧಿ ಭೋಗ್ಯಕ್ಕೆ ಖಾಸಗಿಯವರಿಗೆ ಹಸ್ತಾಂತರಿಸಲಾಗುವುದು. ಎನ್‌ಹೆಚ್‌ಎಐ ಅಧೀನದ ಶೇ.22 ರಷ್ಟು ಅಂದರೆ 26,700 ಕಿ.ಮೀ.ಗಳಷ್ಟಿ ರಾಷ್ಟ್ರೀಯ ಹೆದ್ದಾರಿಗಳನ್ನು, 400 ರೈಲ್ವೆ ನಿಲ್ದಾಣಗಳನ್ನು, 90 ಪ್ಯಾಸೆಂಜರ್ ರೈಲುಗಳನ್ನು, 25 ಪ್ರಮುಖ ವಿಮಾನ ನಿಲ್ದಾಣಗಳನ್ನು, 14,197 ಬಿಎಸ್‌ಎನ್‌ಎಲ್‌ ಟವರ್‌ಗಳನ್ನು, 2.86 ಲಕ್ಷ ಕಿ.ಮೀ. ಭಾರತ್‌ನೆಟ್ ಓಎಫ್‌ಸಿ ಲೈನುಗಳನ್ನು, 160 ಕಲ್ಲಿದ್ದಲು ಗಣಿಗಳನ್ನು, 28,608 ಸರ್ಕ್ಯೂಟ್ ಕಿ.ಮೀ. ವಿದ್ಯುತ್ ಸಾಗಾಣಿಕೆ ಲೈನುಗಳನ್ನು, ಎನ್‌ಹೆಚ್‌ಪಿಸಿ ಮತ್ತು ಎನ್‌ಟಿಪಿಸಿ ವಿದ್ಯುತ್ ಉತ್ಪಾದನಾ ಘಟಕಗಳನ್ನು, IOCL, HPCL ªÀÄvÀÄÛ GAIL  ಐಒಸಿಎಲ್‌, ಹೆಚ್‌ಪಿಸಿಎಲ್‌ ಮತ್ತು ಜಿಎಐಎಲ್ ಪೆಟ್ರೋಲಿಯಂ ಮತ್ತು ಅದರ ಉತ್ಪನ್ನಗಳ ಪೈಪ್‌ಲೈನ್‌ಗಳನ್ನು, 9 ಪ್ರಮುಖ ಬಂದರುಗಳ 31 ಪ್ರಾಜೆಕ್ಟುಗಳನ್ನು, ಎಫ್‌ಸಿಐ ಮತ್ತು ಸೆಂಟ್ರಲ್ ವೇರ್‌ಹೌಸಿಂಗ್ ಕಾರ್ಪೊರೇಷನ್‌ನ ಶೇ.39 ರಷ್ಟು ಸಂಗ್ರಹಣಾ ಸಾಮರ್ಥ್ಯವನ್ನು, ಕ್ರೀಡಾಂಗಣಗಳನ್ನು, ಹೀಗೆ ಎಲ್ಲಾ ಸಾರ್ವಜನಿಕ ರಂಗಗಳ ಆಸ್ತಿಗಳನ್ನು ಮತ್ತು ಸಂಪತ್ತುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಇದಕ್ಕೆ ಪೂರಕವಾಗಿ ರಾಜ್ಯದ ಬಿಜೆಪಿ ಸರ್ಕಾರವೂ ಕಾಯ್ದೆ ಮತ್ತು ಕಾನೂನುಗಳನ್ನು ಬದಲಾಯಿಸುತ್ತಿದೆ.

ಸ್ವಾತಂತ್ರ‍್ಯಾ ನಂತರ ಭಾರತದಲ್ಲಿ ಸಾರ್ವಜನಿಕ ಉದ್ದಿಮೆಗಳು ವ್ಯಾಪಕ ಕೈಗಾರಿಕಾ ನೆಲೆಯನ್ನು ಒದಗಿಸಿದವು. ವಿದ್ಯುತ್, ರೈಲ್ವೇ, ರಸ್ತೆ, ಸಂಪರ್ಕ, ಕಬ್ಬಿಣ/ಉಕ್ಕು, ರಕ್ಷಣೆ, ಹಡಗು, ಕಲ್ಲಿದ್ದಲು, ಸಿಮೆಂಟ್, ಪೆಟ್ರೋಲಿಯಂ, ವಿಮೆ, ಬ್ಯಾಂಕಿಂಗ್, ಬಾಹ್ಯಾಕಾಶ ಸಂಶೋಧನೆ, ವಿಜ್ಞಾನ ತಂತ್ರಜ್ಞಾನ, ಹೀಗೆ ಎಲ್ಲಾ ಪ್ರಮುಖ ರಂಗಗಳಲ್ಲಿ ದೇಶಕ್ಕೆ ಒಂದು ಸ್ವಾವಲಂಬಿ ಆರ್ಥಿಕತೆಯನ್ನು ನಿರ್ಮಿಸುವಲ್ಲಿ ಸಾರ್ವಜನಿಕ ಉದ್ದಿಮೆಗಳು ಮಹತ್ವದ ಪಾತ್ರ ವಹಿಸಿವೆ. ಈ ಉದ್ದಿಮೆಗಳು ಸ್ಥಾಪನೆಯಾದಲೆಲ್ಲಾ ವ್ಯವಸ್ಥಿತವಾದ ನಗರಗಳೇ ನಿರ್ಮಾಣವಾಗಿವೆ, ಹೆಚ್ಚಿನ ನಾಗರಿಕ ಸೌಲಭ್ಯಗಳು, ಹೆಚ್ಚಿನ ಉದ್ಯೋಗಗಳು ಲಭ್ಯವಾಗಿವೆ. ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ದೊರೆತಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ನೆರವಾಗಿದೆ. ಒಟ್ಟಾರೆ ದೇಶದ ಸ್ವಾವಲಂಬನೆ, ಸಾರ್ವಭೌಮತೆ ರಕ್ಷಣೆಗೆ ಸಾರ್ವಜನಿಕ ಉದ್ದಿಮೆಗಳು ಕೆಲಸ ಮಾಡಿವೆ.

ಈ ಹಿನ್ನೆಲೆಯಲ್ಲಿ ಕೇಂದ್ರದ ಮೋದಿ ಸರ್ಕಾರದ ಸಾರ್ವಜನಿಕ ಉದ್ದಿಮೆಗಳನ್ನು ಮತ್ತು ಸಂಸ್ಥೆಗಳನ್ನು ಮಾರಾಟ ಮಾಡುವ ದೇಶ ವಿರೋಧಿ ಕ್ರಮಗಳನ್ನು ಗಂಗಾವತಿಯಲ್ಲಿ ನಡೆಯುತ್ತಿರುವ ಸಿಪಿಐ(ಎಂ) ರಾಜ್ಯ ಸಮ್ಮೇಳನವು ತೀವ್ರವಾಗಿ ವಿರೋಧಿಸುತ್ತದೆ. ಇದಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿರುವ ರಾಜ್ಯ ಬಿಜೆಪಿ ಸರ್ಕಾರದ ಕ್ರಮಗಳನ್ನೂ ಸಿಪಿಐ(ಎಂ) ಸಮ್ಮೇಳನವು ವಿರೋಧಿಸುತ್ತದೆ.

Leave a Reply

Your email address will not be published. Required fields are marked *