ಉಚಿತ-ಸಾರ್ವತ್ರಿಕ-ಕಡ್ಡಾಯ ಶಿಕ್ಷಣ ಕಾಯ್ದೆಗೆ ಒತ್ತಾಯಿಸಿ-ಐಸಿಡಿಎಸ್‌ ಯೋಜನೆ ಬಲಪಡಿಸಲು ನಿರ್ಣಯ

6 ವರ್ಷದೊಳಗಿನ ಮಕ್ಕಳಿಗೆ ಉಚಿತ, ಸಾರ್ವತ್ರಿಕ, ಕಡ್ಡಾಯ ಪೂರ್ವ ಪ್ರಾಥಮಿಕ ಶಿಕ್ಷಣದ ಕಾಯ್ದೆ ರಚನೆಗೆ ಆಗ್ರಹಿಸಿ ಮತ್ತು ಐಸಿಡಿಎಸ್ ಯೋಜನೆಯನ್ನು ಬಲಪಡಿಸಲು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) 23ನೇ ರಾಜ್ಯ ಸಮ್ಮೇಳನ ನಿರ್ಣಯ

1974 ರಾಷ್ಟ್ರೀಯ ಮಕ್ಕಳ ನೀತಿಯ ಶಿಫಾರಸ್ಸಿನ ಮೇರೆಗೆ 1975ರಲ್ಲಿ ಐಸಿಡಿಎಸ್ ಯೋಜನೆ ಪ್ರಾರಂಭವಾಗಿ ಇಂದಿಗೆ 46 ವರ್ಷಗಳಾಗಿವೆ. ಮಹಿಳೆ ಮತ್ತು ಮಕ್ಕಳ ಸರ್ವಾಂಗೀಣ ಉನ್ನತಿಗೆ ಈ ಯೋಜನೆ ವಿಶ್ವದಲ್ಲೇ ಗಮನ ಸೆಳೆದಿದೆ. ಆದರೆ, ಜಾಗತೀಕರಣದ ನೀತಿಗಳ ಪರಿಣಾಮವಾಗಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗಾಗಿನ ಕಾರ್ಯಕ್ರಮಗಳಿಗೆ ಕೊಡಬೇಕಾದ ಒತ್ತನ್ನು ಕೊಡದಿರುವ ಹಿನ್ನೆಲೆಯಲ್ಲಿ ಸರ್ಕಾರಗಳು ಸತತವಾಗಿ ಅನುದಾನಗಳನ್ನು ಕಡಿತ ಮಾಡುತ್ತಲೇ ಬಂದಿವೆ. ಈ ಕಾರಣದಿಂದ ಮಕ್ಕಳ ಮತ್ತು ಮಹಿಳೆಯರ ಅಪೌಷ್ಠಿಕತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸ್ವತಃ ಸರ್ಕಾರವೇ ಇದಕ್ಕೆ ಕಾರಣವಾಗಿದೆ.

ಈಗಾಗಲೇ ಬಹುಚರ್ಚೆಯಲ್ಲಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ಇದು ಮೇಲ್ನೋಟಕ್ಕೆ ಒಳ್ಳೆಯ ಸ್ಫೂರ್ತಿದಾಯಕ ಮಾತುಗಳನ್ನಾಡಿದೆ. ಆದರೆ ಪ್ರಾಯೋಗಿಕತೆ ಮತ್ತು ಶಿಫಾರಸ್ಸುಗಳು ಎರಡನ್ನು ಗಮನಿಸಿದಾಗ ತೀರಾ ನಿರಾಶಾದಾಯಕವಾಗಿವೆ ಮಾತ್ರವಲ್ಲ ಅಪಾಯಕಾರಿಯಾಗಿದೆ.

ಪ್ರಮುಖವಾಗಿ ಎನ್.ಇ.ಪಿ. ಯಲ್ಲಿ ಐಸಿಡಿಎಸ್ ಬಗ್ಗೆ ಮೆಚ್ಚುಗೆ ಇಲ್ಲ. 3 ವರ್ಷದ ವಯಸ್ಸಿನ ಕೆಳಗಿನ ಮಕ್ಕಳ ಬಗ್ಗೆ ಏನೇನೂ ಹೇಳಿಲ್ಲ. ಬದಲಿಗೆ 3 ವರ್ಷದ ಮೇಲ್ಪಟ್ಟ ಮಕ್ಕಳು ಶೈಕ್ಷಣಿಕ ವ್ಯವಸ್ಥೆಯಡಿ ಬರಬೇಕೆಂದು ಪ್ರತಿಪಾದಿಸುತ್ತದೆ. ಜಗತ್ತಿನ ಮಾರುಕಟ್ಟೆಯನ್ನು ಎದುರಿಸಬೇಕೆಂದರೆ ಮನುಷ್ಯ ಮಗುವಾಗಿರುವಾಗಿನಿಂದಲೇ ಸ್ಪರ್ಧೆಯನ್ನು ಎದುರಿಸಬೇಕು ಎನ್ನುತ್ತದೆ. ಇದರಿಂದಾಗಿ 4-5 ವರ್ಷದ ಮಕ್ಕಳಿಗೆ ಪ್ರತ್ಯೇಕ ‘ಬಾಲವಾಟಿಕಾ’ ಎನ್ನುವ ವ್ಯವಸ್ಥೆಯನ್ನು ತರಬೇಕೆಂಬ ಶಿಫಾರಸ್ಸು ಇದೆ. ಈ ಶಿಫಾರಸ್ಸು ಜಾರಿಯಾದರೆ ಅಂಗನವಾಡಿ ಕೇಂದ್ರಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೇಗೆಂದರೆ, 40% ದೈಹಿಕ ಬೆಳವಣಿಗೆ, 85% ಮಾನಸಿಕ ಬೆಳವಣಿಗೆಯಾಗುವುದು ಮಗುವಿನ 6 ವರ್ಷದೊಳಗಿನ ಹಂತದಲ್ಲಿ. ಈ ಮಹತ್ವದ ಬೆಳವಣಿಗೆಯಾಗುವ ಸಂದರ್ಭದಲ್ಲಿ ಮಕ್ಕಳಿಗೆ ಬೇಕಾದ ಪೂರಕ ಪೌಷ್ಠಿಕ ಆಹಾರ, ಪ್ರಾಥಮಿಕ ಆರೋಗ್ಯ ಸೌಲಭ್ಯಗಳನ್ನು ಕೊಡಲಿಕ್ಕಾಗಿಯೇ ಐಸಿಡಿಎಸ್ ಯೋಜನೆಯ ಮುಖಾಂತರ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಿರುವುದು.

Early Childhood Care and Education (ECCE) ಶಿಕ್ಷಣವನ್ನು 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಕೊಡಲಾಗುತ್ತಿದೆ. ಆದರೆ ಎನ್.ಇ.ಪಿ. ಯಿಂದ ಅಂಗನವಾಡಿ ಕೇಂದ್ರಗಳಿಗೆ ಕೇವಲ 3-4 ವರ್ಷದ ಮಕ್ಕಳು ಮಾತ್ರ ಉಳಿಯುತ್ತಾರೆ. ಮಾತ್ರವಲ್ಲದೇ 6 ವರ್ಷದೊಳಗಿನ ಮಕ್ಕಳಿಗೆ ಪರೀಕ್ಷೆ, ಸ್ಪರ್ಧೆಯಂತಹ ಔಪಚಾರಿಕ ಕ್ರಮಗಳು ಬಂದರೆ ಮಗುವಿನ ಮೆದುಳಿನ ಮೇಲೆ ನಕರಾತ್ಮಾಕ ಪರಿಣಾಮ ಬೀರುವ ಸಂಭವವಿರುತ್ತದೆ. ಮತ್ತು ಒಂದೊಂದು ಸರ್ಕಾರ ಬಂದಾಗ ಒಂದೊಂದು ರೀತಿಯ ನೀತಿಗಳನ್ನು ರೂಪಿಸುವುದರಿಂದ ಈ ಕೆಳಕಂಡಂತೆ ನಿರ್ಣಯವನ್ನು ತೆಗೆದುಕೊಳ್ಳಬೇಕಿದೆ.

6 ತಿಂಗಳಿಂದ 3 ವರ್ಷಕ್ಕೆ ಶಿಶುಪಾಲನ ಕೇಂದ್ರ

3 ರಿಂದ 6 ವರ್ಷ ಅಂಗನವಾಡಿ ಕೇಂದ್ರ

6 ವರ್ಷದಿಂದ ಮಗು 1 ನೇ ತರಗತಿಗೆ ಸೇರಬೇಕು ಮತ್ತು

6 ವರ್ಷದೊಳಗಿನ ಮಗುವಿಗೆ ಉಚಿತ, ಸಾರ್ವತ್ರಿಕ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯ ಮಾಡಲು ಪ್ರತ್ಯೇಕ ಕಾಯ್ದೆ ರೂಪಿಸಬೇಕು.

ಐಸಿಡಿಎಸ್ ಯೋಜನೆಯನ್ನು ಖಾಯಂ ಮಾಡಿ ಬಲಿಷ್ಠಗೊಳಿಸುವ ಬದಲಿಗೆ ಸತತವಾಗಿ ಅನುದಾನವನ್ನು ಕಡಿತ ಮಾಡಿ ಈ ಯೋಜನೆಯನ್ನೇ ದುರ್ಬಲಗೊಳಿಸಲಾಗುತ್ತಿದೆ. ಈ ಯೋಜನೆಗೆ ಕೊಡುವ ಒಟ್ಟಾರೆ ಅನುದಾನದಲ್ಲೇ ಪೋಷಣ್ ಅಭಿಯಾನದಂಥ ಗುರಿ ನಿರ್ದೇಶಿತ ಯೋಜನೆಗಳನ್ನು (ಗುರಿ ನಿರ್ಧರಿತ ಯೋಜನೆ targeted scheme) ತಂದು ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ ಬಾಣಂತಿಯರಿಗೆ ಸೀಮಂತ, ಮಕ್ಕಳಿಗೆ ಅನ್ನಪ್ರಾಶನದಂತಹ ಸಾಂಪ್ರದಾಯಿಕ ಮೌಲ್ಯಗಳನ್ನು ತುರುಕುವ ಪ್ರಯತ್ನಗಳಿಗೆ ಸೀಮಿತಗೊಳಿಸುತ್ತದೆ. ಈ ಕಾರ್ಯಕ್ರಮಗಳು ಪೌಷ್ಠಿಕತೆಯನ್ನು ಹೆಚ್ಚಿಸುವ ಕಾರ್ಯಕ್ರಮಗಳೆಂದು ದೊಡ್ಡ ಪ್ರಮಾಣದಲ್ಲಿ ಪ್ರಚಾರಗಳನ್ನು ಕೊಟ್ಟು ಅಂಕಿ ಅಂಶಗಳಿಂದ ಉತ್ತರವನ್ನು ಸಿದ್ಧಪಡಿಸಲಾಗುತ್ತದೆ. ಮತ್ತೊಂದೆಡೆ ನೀತಿ ಆಯೋಗದ ಶಿಫಾರಸ್ಸುಗಳಂತೆ ಆಹಾರ ಪದಾರ್ಥಗಳ ಪೂರೈಕೆಗೆ ಬದಲಾಗಿ ನೇರ ನಗದು ವರ್ಗಾವಣೆಯನ್ನು ಮಾಡುವ ಪ್ರಯತ್ನಗಳು ಈಗಾಗಲೇ ನಡೆಯುತ್ತಿದೆ. ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಕೊಡುವ ಹೆಸರಿನಲ್ಲಿ ವೇದಾಂತ, ಪ್ರಥಮ್ ಇನ್ನು ಮುಂತಾದ ಎನ್.ಜಿ.ಓ.ಗಳಿಗೆ ಕೊಡಲಾಗುತ್ತಿದೆ ಹಾಗೂ ಶಿಶುಪಾಲನ ಕೇಂದ್ರಗಳನ್ನು ನಡೆಸಲಿಕ್ಕೂ ಕೂಡ ಎನ್.ಜಿ.ಒ ಗಳಿಗೆ ಈಗಾಗಲೇ ಕೊಡಲಾಗುತ್ತಿದೆ. ಮತ್ತೊಂದೆಡೆ ಶಿಕ್ಷಣ ಇಲಾಖೆ ಎಲ್.ಕೆ.ಜಿ-ಯುಕೆಜಿ ಗಳನ್ನು ಪ್ರಾರಂಭಿಸುವುದರಿಂದಲೂ ಅಂಗನವಾಡಿಗಳಿಗೆ ಮಕ್ಕಳ ಕೊರತೆ ಪ್ರಾರಂಭವಾಗುತ್ತದೆ.

ಐಸಿಡಿಎಸ್ ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ಮಾಡದೇ ಇರುವುದರಿಂದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೆಲಸಗಳನ್ನು ಅಂಗನವಾಡಿ ನೌಕರರ ಮೇಲೆ ಹೇರಿ ಐಸಿಡಿಎಸ್ ಕೆಲಸಗಳು ಕುಂಠಿತಗೊಳ್ಳಲು ಸರ್ಕಾರವೇ ನೇರವಾಗಿ ಹೊಣೆಯಾಗಿದೆ. ರಾಜ್ಯ ಸರ್ಕಾರವು ಅಧಿಕಾರ ವಿಕೇಂದ್ರೀಕರಣದ ಹೆಸರಿನಲ್ಲಿ 28-10-2021 ರಂದು “ಸಮಗ್ರ ಶಿಶು ಅಭಿವೃದ್ಧಿ ಸೇವೆಗಳಲ್ಲಿ ಪಂಚಾಯತಿಗಳ ಪಾತ್ರ” ಕುರಿತು ಜಂಟಿ ಸುತ್ತೋಲೆ ಹೊರಡಿಸಿದೆ. ‘ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕಾಂಶ ಸಮಿತಿಗಳು ಗ್ರಾಮ ಮತ್ತು ಸ್ಥಳೀಯ ಮಟ್ಟದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ (ಐಸಿಡಿಎಸ್) ಕಾರ್ಯಕ್ರಮದ ನಿರ್ವಹಣೆ ಮತ್ತು ಮೇಲ್ವಿಚಾರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದೂ, ಅದಕ್ಕಾಗಿ ಮೇಲ್ವಿಚಾರಣೆ ಸಮಿತಿಯನ್ನು ರಚಿಸಿದೆ ಎಂದೂ, ಅಂಗನವಾಡಿ ಕೇಂದ್ರಗಳ ಕಾರ್ಯನಿರ್ವಹಣೆಯ ಕ್ರಮಬದ್ಧತೆಯನ್ನು ಪರಿಶೀಲನೆ ಮಾಡುವುದಾಗಿಯೂ ಆದೇಶದಲ್ಲಿ ಹೇಳಲಾಗಿದೆ. ಪಾಳೇಗಾರಿ ಭೂಮಾಲಕ ವರ್ಗಕ್ಕೆ ಸೇರಿದವರು ಅಥವಾ ಅವರ ಹಿಡಿತದಲ್ಲಿರುವವರೇ ಇಂದು ಜನಪ್ರತಿನಿಧಿಗಳ ಸ್ಥಾನದಲ್ಲಿರುವ, ಗ್ರಾಮ ಪಂಚಾಯ್ತಿಗಳ ಕಣ್ಣೋಟವನ್ನೇ ಬದಲಾಯಿಸುತ್ತಿರುವ ಸಂದರ್ಭ ಕರ್ನಾಟಕದಲ್ಲಿ ಇರುವಾಗ ಈ ಆದೇಶ ಅಂಗನವಾಡಿ ಕೇಂದ್ರಗಳ ಮೇಲೆ ಮತ್ತು ಅಂಗನವಾಡಿ ನೌಕರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

Shantha N Ghanteಕೆಲಸದ ಭದ್ರತೆ ಕುರಿತು ಯಾವುದೇ ನಿಯಮಗಳಿಲ್ಲದ, ಕೇವಲ ಗೌರವ ಧನದಲ್ಲಿರುವ, ಯಾವುದೇ ಕಾರ್ಮಿಕ ಕಾನೂನುಗಳಾಗಲೀ, ಸೇವಾ ನಿಯಮಗಳಾಗಲಿ ಇಲ್ಲದೇ ಹಲವು ತರಹದ ನೋವು ಮತ್ತು ಅಭದ್ರತೆಯಲ್ಲಿ ಕನಿಷ್ಟ ಗೌರವಧನಕ್ಕೆ ದುಡಿಯುವ ಅಂಗನವಾಡಿ ಮಹಿಳೆಯರಿಗೆ ಈ ಸುತ್ತೋಲೆಯಿಂದ ದುಷ್ಠರಿಣಾಮವಾಗುತ್ತದೆ. ಆದ್ದರಿಂದ ಈ ಸುತ್ತೋಲೆಯನ್ನು ಸಂಪೂರ್ಣವಾಗಿ ವಾಪಸ್ ಪಡೆಯಬೇಕು ಮಾತ್ರವಲ್ಲ, ಸರ್ಕಾರಗಳು ಅನುದಾನ ಕಡಿತ ಮಾಡಿ ಗ್ರಾಮ ಪಂಚಾಯತಿಗಳಿಗೆ ಇದರ ಸಂಪೂರ್ಣ ಹೊಣೆ ಹಾಕುವುದನ್ನು ವಿರೋಧಿಸಬೇಕಿದೆ.

ಹೊಸ ಶಿಕ್ಷಣ ನೀತಿ, ಪಂಚಾಯತ್ ಹಿಡಿತಕ್ಕೆ ಅಂಗನವಾಡಿ ಕೇಂದ್ರಗಳನ್ನು ವಹಿಸುವ ಆದೇಶಗಳ ವಿರುದ್ಧ ಹಾಗೂ ಅಂಗನವಾಡಿ ನೌಕರರ ಸೇವಾ ಜೇಷ್ಠತೆಯನ್ನೂ ಒಳಗೊಂಡು ಮತ್ತಿತರ ಸವಲತ್ತುಗಳಿಗಾಗಿ ಜನವರಿ 10 ರಿಂದ ನಡೆಯುತ್ತಿರುವ ಅಂಗನವಾಡಿ ನೌಕರರ ಹೋರಾಟವನ್ನು ಬೆಂಬಲಿಸಬೇಕೆಂಬ ನಿರ್ಣಯವನ್ನು, ಗಂಗಾವತಿಯಲ್ಲಿ ನಡೆಯುತ್ತಿರುವ ಸಿಪಿಐ(ಎಂ) 23ನೇ ರಾಜ್ಯ ಸಮ್ಮೇಳನ ಅಂಗೀಕರಿಸುತ್ತದೆ.

ಮಂಡನೆ: ಜಿ.ಎನ್‌. ನಾಗರಾಜ್‌

ಅನುಮೋದನೆ: ಶಾಂತಾ ಎನ್‌. ಘಂಟೆ

Leave a Reply

Your email address will not be published. Required fields are marked *