ಎಲ್ಲರಿಗೂ ಉಚಿತ, ಸಾರ್ವತ್ರಿಕ ಆರೋಗ್ಯ ವ್ಯವಸ್ಥೆಗಾಗಿ, ಒಟ್ಟಾವ ಸಮಿತಿ ಶಿಫಾರಸ್ಸುಗಳ ಜಾರಿಗಾಗಿ ಸಿಪಿಐ(ಎಂ) ರಾಜ್ಯ ಸಮ್ಮೇಳನದ ನಿರ್ಣಯ

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ 2022ರ ಜನವರಿ 2 ರಿಂದ 4ರವರೆಗೆ ನಡೆಯುತ್ತಿರುವ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕರ್ನಾಟಕ 23ನೇ ರಾಜ್ಯ ಸಮ್ಮೇಳನವು ಸಮಸ್ತರಿಗೂ ಉಚಿತ, ಸಾರ್ವತ್ರಿಕ ಆರೋಗ್ಯ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ನಿರ್ಣಯವನ್ನು ಅಂಗೀಕರಿಸಿದೆ.

ಕೋವಿಡ್-19 ಕಾಯಿಲೆ ಇಡೀ ಜಗತ್ತನ್ನೇ ಆವರಿಸಿದೆ. ಜನಸಾಮಾನ್ಯರು ಹೆಚ್ಚಾಗಿ ಈ ಕಾಯಿಲೆಗೆ ಬಲಿಯಾಗಿದ್ದಾರೆ. ಭಾರತದಲ್ಲೂ ಕೂಡ ಅತ್ಯಧಿಕ ಸಂಖ್ಯೆಯಲ್ಲಿ ಜನರು ಸಾವಿಗೀಡಾಗಿದ್ದಾರೆ. ವ್ಯಾಕ್ಸಿನೇಷನ್ ಇದ್ದರೂ ಕೂಡ ಜನಸಾಮಾನ್ಯರನ್ನು ಈ ಕಾಯಿಲೆಯಿಂದ ಕಾಪಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದು ಸಿಪಿಐ(ಎಂ) 23ನೆಯ ರಾಜ್ಯ ಸಮ್ಮೇಳನವು ಗಮನಿಸಿದೆ.

ಈಗಲಾದರೂ ಎಲ್ಲರಿಗೂ ಸಾರ್ವತ್ರಿಕ ಆರೋಗ್ಯ ಒದಗಿಸುವ ದೆಸೆಯಲ್ಲಿ ವೈದ್ಯಕೀಯ ಸಂಸ್ಥೆಗಳು ಮತ್ತು ಸರ್ಕಾರಗಳು, ಮನುಷ್ಯನ ಆರೋಗ್ಯವನ್ನು ಕಾಪಾಡಲು ಬೇಕಾಗಿರುವುದು `ಒಟ್ಟಾವ ಸನ್ನದು’ (Ottawa charter) ನಲ್ಲಿರುವ ತೀರ್ಮಾನಗಳ ಅನುಷ್ಠಾನ ಎಂದೂ ಸಮೇಳನವು ಪ್ರತಿಪಾದಿಸುತ್ತದೆ.

ಕ್ರಿ.ಶ. 1918 ರಲ್ಲಿ ಇಂತಹುದೇ ಸಾಂಕ್ರಾಮಿಕ ರೋಗ ಹಬ್ಬಿದ ಸಂದರ್ಭದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನರು ಸಾವಿಗೀಡಾಗಿದ್ದರು. ಆ ಸೋಂಕು ತಗ್ಗಿದ ಮೇಲೆ ಕ್ರಿ.ಶ. 1928 ರಲ್ಲಿ ಲೆನಿನ್ ರವರ ನೇತೃತ್ವದ ಸಮಾಜವಾದಿ ಸರ್ಕಾರ ರಷ್ಯಾದಲ್ಲಿ ಆರೋಗ್ಯ ಸೇವೆಗಳನ್ನು ಉಚಿತವಾಗಿ ಜನರಿಗೆ ನೀಡಿತು. ಇದಾದ ಬಳಿಕ ಇಡೀ ಯುರೋಪ್ ಖಂಡದಲ್ಲಿ ಎಲ್ಲಾ ದೇಶಗಳಲ್ಲೂ ಕೂಡ `ನ್ಯಾಷನಲ್ ಹೆಲ್ತ್ ಸ್ಕೀಮ್(NHS)’ ಎಂಬುದು ಜಾರಿಯಾಗಿ ಸಾಮಾನ್ಯ ಜನರಿಗೆ ಅರೋಗ್ಯ ಸೌಲಭ್ಯಗಳು ಉಚಿತವಾಗಿ ಸಿಗುವಂತೆ ಮಾಡಲಾಯಿತು. ಇಂದಿಗೂ ಕೂಡ ಬಹುತೇಕ ದೇಶಗಳಲ್ಲಿ ಈ ರೀತಿಯ ಆರೋಗ್ಯ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಅಮೆರಿಕಾ ಮಾತ್ರ ಖಾಸಗೀಕರಣವನ್ನು ಆಧರಿಸಿದ `ಆರೋಗ್ಯ ವಿಮೆ’ ಯ ಪದ್ಧತಿಯನ್ನು ಅಂದಿನಿಂದ ಇಂದಿನವರೆಗೂ ಅನುಸರಿಸುತ್ತಾ ಬಂದಿದೆ. ಕೋವಿಡ್-19 ರಿಂದ ಅತಿ ಹೆಚ್ಚು ಜನರ ಸಾವು ಸಂಭವಿಸಿರುವುದು ಅಮೆರಿಕಾದಲ್ಲಿಯೇ ಎನ್ನುವುದು ಕೂಡ ಗಮನಿಸಬೇಕಾಗಿದೆ. ಹಾಗಾಗಿ ಈಗಲಾದರೂ ಭಾರತ ದೇಶದಲ್ಲಿ ಈ ಆರೋಗ್ಯ ವಿಮೆ ಎನ್ನುವುದನ್ನು ಅನುಸರಿಸದೇ ಎಲ್ಲಾ ಜನರಿಗೆ ಎಲ್ಲಾ ಆರೋಗ್ಯ ಸೇವೆಗಳು ಉಚಿತವಾಗಿ ಸಿಗುವಂತಾಗಬೇಕು ಎಂದು ಸಮ್ಮೇಳನವು ಒತ್ತಾಯಿಸುತ್ತದೆ.

ಇಂದು ನಮ್ಮ ದೇಶದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಖರ್ಚು ಮಾಡುತ್ತಿರುವುದು, ನಮ್ಮ ದೇಶದ ಒಟ್ಟು ಉತ್ಪಾದನೆಯಲ್ಲಿ ಶೇ 1% ರಷ್ಟು ಮಾತ್ರ. ಇದರಿಂದ ನಮ್ಮ ಜನರು ತಮ್ಮ ಆರೋಗ್ಯಕ್ಕಾಗಿ ತಮ್ಮ ಜೇಬಿನಿಂದ ಮಾಡಬೇಕಾದ ಖರ್ಚು ಶೇ.63% (ಇದು ಪ್ರಪಂಚದಲ್ಲಿಯೇ ಅತಿ ಹೆಚ್ಚು). ನಮ್ಮ ದೇಶವು ಇಂದು ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳಿಂದ ಬಳಲುತ್ತಿದೆ. (Double burden). ಪ್ರತಿ ವರ್ಷ ನಮ್ಮ ದೇಶದಲ್ಲಿ 8 ಕೋಟಿ ಜನರು ತಮ್ಮ ಆರೋಗ್ಯ ಖರ್ಚಿನಿಂದಾಗಿ ಬಡತನ ರೇಖೆಗಿಂತ ಕೆಳಗೆ ತಳ್ಳಲ್ಪಡುತ್ತಿದ್ದಾರೆ. ಸರ್ಕಾರವು ಆರೋಗ್ಯ ವೆಚ್ಚವನ್ನು ಒಟ್ಟು ಉತ್ಪಾದನೆಯಲ್ಲಿ ಕನಿಷ್ಠ ಶೇಕಡಾ 5% ರಷ್ಟು ಖರ್ಚು ಮಾಡಬೇಕು ಎಂದು 23ನೆಯ ರಾಜ್ಯ ಸಮ್ಮೇಳನವು ಸರಕಾರವನ್ನು ಆಗ್ರಹಿಸುತ್ತದೆ.

ಕರ್ನಾಟಕ ರಾಜ್ಯದ ಜನರಿಗೆ ಆರೋಗ್ಯ ಸೇವೆಗಳು ಸಾರ್ವತ್ರಿಕವಾಗಿ ಉಚಿತವಾಗಿ ಸಿಗುವಂತಾಗಬೇಕು. ಹಾಗೆ ಆಗಬೇಕಾದರೆ ನಮ್ಮ ಸರ್ಕಾರ ಈ ಕೂಡಲೇ ಸರ್ ಜೋಸೆಫ್ ಬೋರ್ ರವರ ಶಿಫಾರಸ್ಸುಗಳನ್ನು ಜಾರಿ ಮಾಡಬೇಕು ಎಂದು 23ನೆಯ ರಾಜ್ಯ ಸಮ್ಮೇಳನವು ಸರಕಾರವನ್ನು ಒತ್ತಾಯಿಸುತ್ತದೆ.

18 ಅಕ್ಟೋಬರ್ 1943, ಎರಡನೆಯ ಪ್ರಪಂಚ ಯುದ್ಧದ ಸಮಯ ಹಾಗೂ ಕ್ವಿಟ್ ಇಂಡಿಯಾ ಚಳುವಳಿಯ ನಂತರ ಅಂದಿನ ಭಾರತ ಸರ್ಕಾರವು ಭಾರತದಲ್ಲಿ ಜನರ ಆರೋಗ್ಯ ಪರಿಸ್ಥಿತಿಯ ಹಾಗೂ ಆರೋಗ್ಯ ವ್ಯವಸ್ಥೆಯ ಕುರಿತು ಅಧ್ಯಯನ ಮಾಡಿ ಶಿಫಾರಸ್ಸುಗಳನ್ನು ಕೊಡುವಂತೆ ಸರ್ ಜೋಸೆಫ್ ಬೋರ್ ನೇತೃತ್ವದ ಸಮಿತಿಗೆ ಸೂಚಿಸಿತ್ತು. ಅದರಂತೆ, ಬೋರ್ ರವರು ತಮ್ಮ ವರದಿಯಲ್ಲಿ, ಜನಸಾಮಾನ್ಯರ ಆರೋಗ್ಯ ಪರಿಸ್ಥಿತಿಯು ತುಂಬಾ ಹೀನಾಯವಾಗಿದೆ ಎಂದು ಹೇಳುತ್ತಾ ಅದಕ್ಕೆ ಕಾರಣಗಳಾಗಿ ನೈರ್ಮಲ್ಯವಿಲ್ಲದ ವಾಸಸ್ಥಳಗಳು, ಪೌಷ್ಟಿಕ ಆಹಾರದ ಕೊರತೆ, ಆರೋಗ್ಯ ಸೇವಾ ಸಂಸ್ಥೆಗಳ ಕೊರತೆ, ಸಾಮಾನ್ಯ ಹಾಗೂ ಆರೋಗ್ಯ ಶಿಕ್ಷಣದ ಕೊರತೆ, ನಿರುದ್ಯೋಗ ಹಾಗೂ ಬಡತನ ಇವುಗಳನ್ನು ಉಲ್ಲೇಖಿಸಿದ್ದಾರೆ. (ಇಂದಿಗೂ ಈ ಎಲ್ಲಾ ಕಾರಣಗಳು ಪ್ರಸ್ತುತವಾಗಿವೆ).

ಹಾಗೆಯೇ ಆ ವರದಿಯ ತೀರ್ಮಾನಗಳಾಗಿ ಈ ಕೆಳಕಂಡ ಮೂರು ಅಂಶಗಳನ್ನು ಅವರು ಹೇಳುತ್ತಾರೆ ಎನ್ನುವುದನ್ನು ಸರಕಾರಕ್ಕೆ ನೆನಪಿಸ ಬಯಸುತ್ತೇವೆ. ಅವುಗಳೆಂದರೆ:

1) ಆರೋಗ್ಯ ಸೇವೆಗಳು ಎಲ್ಲಾ ಜನರಿಗೆ ದೊರಕಬೇಕು ಹಾಗೂ ಉಚಿತವಾಗಿರಬೇಕು. ಇವು ಸರ್ಕಾರದ ಜವಾಬ್ದಾರಿ ಆಗಬೇಕು.

2) ಆರೋಗ್ಯ ಸಂಸ್ಥೆಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಪೂರ್ಣಾವಧಿ ವೈದ್ಯರನ್ನು ಅವರಿಗೆ ತಕ್ಕ ಸಂಬಳವನ್ನು ಕೊಟ್ಟು ನಿಯೋಜಿಸಬೇಕು.

3) ಪೂರ್ಣಾವಧಿ ವೈದ್ಯರು ಖಾಸಗಿಯಾಗಿ ವೈದ್ಯ ವೃತ್ತಿಯನ್ನು ಮಾಡುವಂತಿಲ್ಲ.

ಕಮಿಟಿಯ ಶಿಫಾರಸ್ಸುಗಳನ್ನು ಜಿಲ್ಲೆಯ ಆರೋಗ್ಯ ಯೋಜನೆ ಎಂದು ಕರೆಯುತ್ತಾರೆ. ಈ ಯೋಜನೆಯಂತೆ ಪ್ರತಿ 10,000 ರಿಂದ 20,000 ಜನಸಂಖ್ಯೆಗೆ 75 ಹಾಸಿಗೆಯುಳ್ಳ ಆಸ್ಪತ್ರೆ ಅದರಲ್ಲಿ 6 ವೈದ್ಯರು (ಫಿಜಿಶಿಯನ್, ಶಸ್ತ್ರಚಿಕಿತ್ಸಾ ತಜ್ಞ ಹಾಗೂ ಪ್ರಸೂತಿ ತಜ್ಞ) ಇರಬೇಕು.

ತಾಲ್ಲೂಕು ಮಟ್ಟದಲ್ಲಿ 650 ಹಾಸಿಗೆಯುಳ್ಳ ಆಸ್ಪತ್ರೆ ಅದರಲ್ಲಿ 140 ವೈದ್ಯರು ಇರಬೇಕು.

ಜಿಲ್ಲಾ ಮಟ್ಟದಲ್ಲಿ, 2500 ಹಾಸಿಗೆಯುಳ್ಳ ಆಸ್ಪತ್ರೆ ಅದರಲ್ಲಿ 269 ವೈದ್ಯರು ಇರಬೇಕು.

ಈ ಶಿಫಾರಸ್ಸುಗಳನ್ನು ಜಾರಿ ಮಾಡಿದ್ದರೆ ಇಂದು ಕೋವಿಡ್-19 ಸೋಂಕಿಗೆ ಇಷ್ಟೊಂದು ಜನರನ್ನು ಬಲಿ ಕೊಡುವ ಸಂದರ್ಭವೇ ಇರುತ್ತಿರಲಿಲ್ಲ. ಇನ್ನು ಮುಂದೆ ಬರುವಂತಹ ಸಾಂಕ್ರಾಮಿಕ ಕಾಯಿಲೆಗಳನ್ನು ಎದುರಿಸಬೇಕಾದರೆ ಈ ಶಿಫಾರಸುಗಳನ್ನು ಈಗಲಾದರೂ ಮಾಡಬೇಕಾಗುತ್ತದೆ. (ಇಂದು ಕರ್ನಾಟಕದ ವೈದ್ಯಕೀಯ ಸಂಸ್ಥೆಯಲ್ಲಿ ನೊಂದಾಯಿತ ವೈದ್ಯರು ಸುಮಾರು 1,20,000 ಇರುತ್ತಾರೆ, ಮೇಲೆ ವಿವರಿಸಿರುವ ಜಿಲ್ಲಾ ಆರೋಗ್ಯ ಯೋಜನೆಯನ್ನು ಜಾರಿಗೆ ತರಬೇಕಾದರೆ ನಮಗೆ ಬೇಕಾಗಿರುವುದು ಕೇವಲ 60,500 ವೈದ್ಯರುಗಳು ಮಾತ್ರ).

ಕೇರಳ ರಾಜ್ಯದಲ್ಲಿ ಸಿಪಿಐ(ಎಂ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗದ (ಎಲ್‌ಡಿಎಫ್‌) ಸರ್ಕಾರ ಶೇಕಡಾ 95% ರಷ್ಟು ಕೋವಿಡ್-19 ಸೋಂಕಿನಿಂದ ಬಳಲಿದ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆಯನ್ನು ನೀಡಿತು. ಇಡೀ ದೇಶದಲ್ಲಿ ಅತ್ಯಂತ ವಿಸ್ತೃತ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಇರುವುದು ಕೇರಳ ರಾಜ್ಯದಲ್ಲಿ. ಆದ್ದರಿಂದ ಕೋವಿಡ್-19 ಸೋಂಕು ಹೆಚ್ಚಿದ್ದರೂ ಸಾವಿನ ಪ್ರಮಾಣ ಕಡಿಮೆ ಇದೆ ಎಂಬುದೂ ಗಮನಾರ್ಹ.

ಸಿಪಿಐ(ಎಂ) 23ನೇ ರಾಜ್ಯ ಸಮ್ಮೇಳನವು ಕರ್ನಾಟಕ ರಾಜ್ಯದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ವಿಸ್ತರಿಸಲು ಸರ್ಕಾರವನ್ನು ಒತ್ತಾಯಿಸುತ್ತದೆ. ಅದಕ್ಕಾಗಿ ಪಕ್ಷವು ವಿಶಾಲವಾದ ನೆಲೆಯಲ್ಲಿ ಪರ್ಯಾಯಕ್ಕಾಗಿ ಹೋರಾಡಲು ಜನತೆಗೆ ಕರೆ ನೀಡುತ್ತದೆ.

Leave a Reply

Your email address will not be published. Required fields are marked *