ದೌರ್ಜನ್ಯದ ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಮತ್ತು ಕುಟುಂಬಗಳ ಪುನರ್ವಸತಿಗಾಗಿ ಒತ್ತಾಯಿಸಿ ಸಿಪಿಐ(ಎಂ) ರಾಜ್ಯ ಸಮ್ಮೇಳನ ನಿರ್ಣಯ

ಕರ್ನಾಟಕದಲ್ಲಿ ಈಗಲೂ ದೌರ್ಜನ್ಯದ ದೇವದಾಸಿ ಪದ್ಧತಿಗೆ ಒಂದು ಲಕ್ಷದಷ್ಠು ಕುಟುಂಬಗಳು ಸಿಲುಕಿ ನಲುಗುತ್ತಿವೆ. ಇದೊಂದು ಸಾಮಾಜಿಕ ದೌರ್ಜನ್ಯವಾಗಿದೆ. ದೌರ್ಜನ್ಯದ ದೇವದಾಸಿ ಪದ್ದತಿ ಕಾಯ್ದೆ- 2020ಕ್ಕೆ ಅಗತ್ಯ ತಿದ್ದುಪಡಿ ತಂದು ಇವರ ಜೊತೆ ಸಹಬಾಳ್ವೆ ನಡೆಸುವವರಿಗೆ ಸೂಕ್ತ ಹೊಣೆಗಾರಿಕೆಯನ್ನು ನಿಗದಿಸದೇ ಇರುವುದರಿಂದ ಮತ್ತು ದಲಿತರ ಸಂಕಷ್ಟವನ್ನು ದುರ್ಬಳಕೆ ಮಾಡಿ ಬಾಲಕಿಯರನ್ನು ಬಲವಂತವಾಗಿ ದೇವದಾಸಿ ಪದ್ದತಿಗೆ ದೂಡುವವರ ಮೇಲೆ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದಲೂ ಹಾಗೂ ವೈಜ್ಣಾನಿಕವಾದ ಹಾಗೂ ಸಮರ್ಪಕವಾದ ಪುನರ್ವಸತಿ ಕ್ರಮಗಳನ್ನು ರಾಜ್ಯ ಸರಕಾರ ಕೈಗೊಳ್ಳದೆ ಇರುವುದರಿಂದಲೂ ಈ ಪದ್ದತಿ ಈಗಲೂ ಅಲ್ಲೂ ಇಲ್ಲೂ ಕದ್ದು ಮುಚ್ಚಿ ಮುಂದುವರೆಯುತ್ತಿದೆ. ಇದನ್ನು ನಿರ್ಮೂಲನೆ ಮಾಡಲು ಅಗತ್ಯ ಕಾನೂನು ತಿದ್ದುಪಡಿ ಮತ್ತು ಸಮರ್ಪಕ ಪುನರ್ವಸತಿ ಕ್ರಮಗಳನ್ನು ಕೈಗೊಳ್ಳುವಂತೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕರ್ನಾಟಕ 23ನೇ ರಾಜ್ಯ ಸಮ್ಮೇಳನ ಕರ್ನಾಟಕ ಸರಕಾರವನ್ನು ಬಲವಾಗಿ ಒತ್ತಾಯಿಸುತ್ತದೆ.

ಕೇವಲ ದೌರ್ಜನ್ಯಕ್ಕೀಡಾದ ಮಹಿಳೆಯರನ್ನೇ ಅಪರಾಧಿಗಳನ್ನಾಗಿಸುವ ದೇವದಾಸಿ ಪದ್ಧತಿಯನ್ನು ನಿಷೇಧಿಸುವ ಕಾನೂನಿನಿಂದ ದಲಿತ ಮಹಿಳೆಯರನ್ನು ರಕ್ಷಿಸಲು ಮತ್ತು ಈ ದೌರ್ಜನ್ಯ ದ ಪದ್ದತಿಯನ್ನು ತೊಡೆಯಲು ಸಾಧ್ಯವಿಲ್ಲ. ಒಂದೆಡೆ, ದಲಿತ  ಹಾಗೂ ದೇವದಾಸಿ ಮಹಿಳೆಯರ ಕುಟುಂಬದ ಎಲ್ಲ ಸದಸ್ಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ, ಸಬಲೀರಣಗೊಳಿಸುವ ಗಂಭೀರ ಪುನರ್ವಸತಿ ಕಾರ್ಯಕ್ರಮಗಳನ್ನು ವ್ಯಾಪಕವಾಗಿ, ತುರ್ತಾಗಿ ನಡೆಸಬೇಕು ಮತ್ತು ಇದಕ್ಕಾಗಿ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯಗಳ ಒದಗಿಸುವ ಅನುದಾನದಲ್ಲಿ ಹೆಚ್ಚಿನ ಮೊತ್ತವನ್ನು ಕಾಯ್ದಿರಿಸಬೇಕು. ಇನ್ನೊಂದೆಡೆ, ಈ ಕಾನೂನು, ಅಪರಾಧಿ ಸಾಮಾಜಿಕ ದೌರ್ಜನ್ಯವನ್ನು ಮರೆಮಾಚುವಂತಿದೆ. ಮುತ್ತು ಕಟ್ಟಿಸುವವನು, ಸಹ ಬಾಳ್ವೆ ನಡೆಸುವವನು, ಮಾತ್ರವಲ್ಲಾ, ಸಾಮಾಜಿಕ ಅಗತ್ಯಗಳ ಹೆಸರಿನಲ್ಲಿ ಬಲವಂತವಾಗಿ ದೂಡುವವರನ್ನು ಅಪರಾಧಿಗಳೆಂದು ಪರಿಗಣಿಸುವುದಿಲ್ಲ. ಸಹ ಬಾಳ್ವೆ ನಡೆಸುವ ಅಪರಾಧಿಗಳಿಗೆ ಯಾವುದೇ ಹೊಣೆಗಾರಿಕೆ ನೀಡದೇ ರಕ್ಷಿಸುವ ಕೆಲಸ ಮಾಡುತ್ತಿದ್ದು ಈ ದಿಶೆಯಲ್ಲಿ ಅದನ್ನು ತಕ್ಷಣ ತಿದ್ದುಪಡಿ ಮಾಡಿ ಜಾರಿಗೊಳಿಸಬೇಕಿದೆ.

ಆದ್ದರಿಂದ, ಮಾಸಿಕ 3,000 ರೂ.ಗಳ ಸಹಾಯಧನವನ್ನು ಹೆಚ್ಚಿಸಿ, ವಯೋ ಭೇದವಿಲ್ಲದೇ ಎಲ್ಲ ದೇವದಾಸಿ ಮಹಿಳೆಯರಿಗೂ, ಪರಿತ್ಯಕ್ತ ದೇವದಾಸಿ ಮಹಿಳೆಯರ ಹೆಣ್ಣು ಮಕ್ಕಳಿಗೂ ದೊರೆಯುವಂತೆ ವಿಸ್ತರಿಸಬೇಕು.

ದೇವದಾಸಿ ಮಹಿಳೆಯರ ಹಾಗೂ ದಲಿತ ಕುಟುಂಬಗಳ ಸಮೀಕ್ಷೆ ನಡೆಸಿ ಆ ಕುಟುಂಬಗಳನ್ನು ಸ್ವಾವಲಂಬಿಯಾಗಿಸಲು ಅಗತ್ಯ ಪುನರ್ವಸತಿ ಯೋಜನೆಯನ್ನು ಸಂಕಷ್ಠದ ತೀವ್ರತೆಯ ಆಧಾರದಲ್ಲಿ ಮತ್ತು ವಯೋಮಾನದ ಆಧಾರದಲ್ಲಿ ಒಂದು ಕಡೆಯಿಂದ ಜಾರಿಗೊಳಿಸಬೇಕು ಫಲಾನುಭವಿಗಳ ಆಯ್ಕೆ ಹೆಸರಿನಲ್ಲಿ ವಂಚಿಸುವುದನ್ನು ತಕ್ಷಣವೇ ನಿಲ್ಲಿಸಬೇಕು.

ದೇವದಾಸಿ ಮಹಿಳೆಯರ ಮಕ್ಕಳ ನಡುವಿನ ಮದುವೆಗೆ ಪ್ರೋತ್ಸಾಹ ಧನವನ್ನು ವಿಸ್ತರಿಸಬೇಕೆಂದು ಸಿಪಿಐ(ಎಂ) ರಾಜ್ಯ ಸಮ್ಮೇಳನವು ಒತ್ತಾಯಿಸುತ್ತದೆ.

Leave a Reply

Your email address will not be published. Required fields are marked *