ಬಿಜೆಪಿ ದಕ್ಷಿಣ ಭಾರತದಲ್ಲಿ ವಿಸ್ತರಿಸದಂತೆ ತಡೆಯಬೇಕಾಗಿದೆ: ಬಿ.ವಿ. ರಾಘವುಲು

ಕರ್ನಾಟಕದ ಹೆಬ್ಬಾಗಿಲಿನಿಂದ ಒಳಗೆ ಬಂದು ದಕ್ಷಿಣ ಭಾರತಕ್ಕೆ ವಿಸ್ತರಿಸುವ ಬಿಜೆಪಿಯ ಹಂಬಲ, ಹುನ್ನಾರಗಳನ್ನು ತಡೆಯಬೇಕಾಗಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬುರೊ ಸದಸ್ಯ ಕಾಮ್ರೇಡ್‌ ಬಿ.ವಿ. ರಾಘವುಲು ಕರೆ ನೀಡಿದರು. ಅವರು 23ನೆಯ ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದರು.

ಈ ಹೋರಾಟದಲ್ಲಿ ಕರ್ನಾಟಕ ರಾಜ್ಯ ಸಿಪಿಐ(ಎಂ) ಘಟಕಕ್ಕೆ ಪ್ರಧಾನ ಪಾತ್ರ ಮತ್ತು ಗುರುತರ ಜವಾಬ್ದಾರಿಯಿದೆ. ಅದಕ್ಕೆ ಆ ಸಾಮರ್ಥ್ಯವೂ ಇದೆ. ದಕ್ಷಿಣದ ಹೆಚ್ಚಿನ ರಾಜ್ಯಗಳಲ್ಲಿ ಕೇಂದ್ರ ಮತ್ತು ರಾಜ್ಯಗಳಲ್ಲಿ ಭಿನ್ನ ಪಕ್ಷಗಳು ಅಧಿಕಾರದಲ್ಲಿರುವ, ಎರಡು ಮತ್ತು ಹೆಚ್ಚು ಶತ್ರುಗಳಿರುವ ಸಂಕೀರ್ಣ ರಾಜಕೀಯ ಪರಿಸ್ಥಿತಿಯಿದೆ. ಇದಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷ ಆಡಳಿತ ನಡೆಸುತ್ತಿರುವುದರಿಂದ ರಾಜಕೀಯ ಪರಿಸ್ಥಿತಿಯು ಸ್ಪಷ್ಟ ಮತ್ತು ಸರಳವಿದೆ ಎಂದು ಅವರು ಮುಂದುವರೆದು ಹೇಳಿದರು.

ಕರ್ನಾಟಕದಲ್ಲಿರುವ ಮೂರು ಪಕ್ಷಗಳ ನಡುವೆ ಸಾಮ್ಯತೆಗಳೂ ಇವೆ. ಮೂರು ಪಕ್ಷಗಳಲ್ಲಿರುವ ಸಾಮ್ಯವೆಂದರೆ ಅವು ಬಂಡವಾಳಶಾಹಿ-ಭೂಮಾಲಕ ಪಕ್ಷಗಳು ಎಂಬುದು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಗುತ್ತೇದಾರಿ ಬೂರ್ಜ್ವಾ ಮತ್ತು ಭೂಮಾಲಕ ಪಕ್ಷಗಳು ಮತ್ತು ನವ-ಉದಾರವಾದ ಪ್ರತಿಪಾದಿಸಿ ಬೆಂಬಲಿಸುವ ಪಕ್ಷಗಳು. ಜೆಡಿ(ಎಸ್) ಪ್ರಾಂತೀಯ ಬಂಡವಾಳಶಾಹಿ-ಭೂಮಾಲಕ ಪಕ್ಷ. ಇವು ಮೂರರ ನಡುವೆ ಸ್ಪಷ್ಟ ಭಿನ್ನತೆಗಳೂ ಇವೆ. ಪ್ರಾದೇಶಿಕ ಅಸ್ಮಿತೆಗೆ ಪ್ರಾಧಾನ್ಯತೆ ಕೊಡುತ್ತವೆ. ಪ್ರಾಂತೀಯ ಪಕ್ಷಗಳು ಯಾವಾಗಲೂ ಅವಕಾಶವಾದದಿಂದ ಕೂಡಿರುತ್ತವೆ. ಜೆಡಿ(ಎಸ್) ನಲ್ಲಿ ತಂದೆ ಬಿಜೆಪಿಗೆ ವಿರುದ್ಧ, ಮಗ ಬಿಜೆಪಿ ಪರ. ನವ-ಉದಾರವಾದವನ್ನು ಕೆಲವೊಮ್ಮೆ ಬೆಂಬಲಿಸುತ್ತವೆ, ಕೆಲವೊಮ್ಮೆ ವಿರೋಧಿಸುತ್ತವೆ. ನವ-ಉದಾರವಾದ ಮತ್ತು ಕೋಮುವಾದ ಇವೆರಡರ ಬಗೆಗೂ ಜೆಡಿ-ಎಸ್ ಧೋರಣೆ ಗೊಂದಲಮಯವಾಗಿವೆ. ಬಿಜೆಪಿ ಕಟುವಾದ ಕೋಮುವಾದಿ ಪಕ್ಷ, ಕಾಂಗ್ರೆಸ್ ಪಾರಂಪರಿಕವಾಗಿ ಸೆಕ್ಯುಲರ್ ಪಕ್ಷ. ಆದರೆ ಆರ್‌ಎಸ್‌ಎಸ್ ನ್ನು ವಿಮರ್ಶೆ ಮಾಡಿದ್ದಕ್ಕೆ ಕಾಂಗ್ರೆಸ್ ಪಕ್ಷವು ತನ್ನ ನಾಯಕನೊಬ್ಬನನ್ನೇ ಅಮಾನತ್ತು ಮಾಡಿದೆ. ಎರಡೂ ಮತೀಯರನ್ನು ಓಲೈಸುವ ಮೃದು ಕೋಮುವಾದಿ ಧೋರಣೆ ಅನುಸರಿಸುತ್ತದೆ. ಈ ಮೂರು ಪಕ್ಷಗಳ ಸಾಮ್ಯತೆ ಮತ್ತು ಭಿನ್ನತೆಗಳನ್ನು ಸ್ಪಷ್ಟವಾಗಿ ಅರಿತುಕೊಂಡು ರಾಜಕೀಯ ಕಾರ್ಯಾಚರಣೆ ರೂಪಿಸಬೇಕು ಎಂದು ಕಾಮ್ರೇಡ್‌ ಬಿ.ವಿ. ರಾಘವುಲು ಸೂಚಿಸಿದರು.

ದಿಟ್ಟ ಸಮರಧೀರ ಹೋರಾಟಗಳು ಸಂಘಟನೆಯಾಗಿ ಕ್ರೋಢಿಕರಣವಾಗುತ್ತಿಲ್ಲ. ಹೋರಾಟಗಳು ತಾರ್ಕಿಕ ಅಂತ್ಯಕ್ಕೆ ಹೋಗುತ್ತಿಲ್ಲ. ಪಕ್ಷದ ಸದಸ್ಯತ್ವದಲ್ಲಿ ಯುವಜನರ ಪ್ರಮಾಣ ಶೇ.13ಕ್ಕೆ ಕುಸಿದಿದೆ. ದಲಿತರು ಮತ್ತು ಅಲ್ಪಸಂಖ್ಯಾತರ ನಡುವೆ ಸಾಕಷ್ಟು ಕೆಲಸ ಮಾಡಿದರೂ ಪಕ್ಷದ ಹತ್ತಿರ ಬರುತ್ತಿಲ್ಲ. ಇವು ವರದಿಯ ಮೇಲೆ ಚರ್ಚೆಯಲ್ಲಿ ಪ್ರತಿನಿಧಿಗಳು ಎತ್ತಿದ ಕೆಲವು ಪ್ರಮುಖ ಪ್ರಶ್ನೆಗಳು ಎಂದು ಕಾಮ್ರೇಡ್‌ ಬಿ.ವಿ. ರಾಘವುಲು ನಿರೂಪಿಸಿದರು.

ಬಿಜೆಪಿಯ ಕಾರ್ಪೊರೇಟ್-ಪರ ಕೋಮುವಾದಿ ದಾಳಿಗಳನ್ನು ಸೋಲಿಸಲು, ಜನರ ಪ್ರೀತಿ ಸಂಪಾದಿಸಲು ನವ-ಉದಾರವಾದಿ ನೀತಿಗಳನ್ನು ಸೋಲಿಸುವುದು ಒಂದೇ ಮಾರ್ಗ. ಮೇಲ್ಪಟ್ಟದ ನವ-ಉದಾರವಾದದ ನೀತಿಗಳ (ಖಾಸಗೀಕರಣ, ಡಿಜಿಟಲೀಕರಣ, ನೋಟು ನಿಷೇಧ, ಜಿ.ಎಸ್.ಟಿ ಇತ್ಯಾದಿ) ವಿಶ್ಲೇಷಣೆ ಮತ್ತು ದುಡಿಯುವ ಜನರ ಮೇಲೆ ಪರಿಣಾಮಗಳ ಅಧ್ಯಯನಗಳನ್ನು ಕೇಂದ್ರ ಸಮಿತಿ ಮಾಡಿದೆ. ಕೆಲಸದ ಸ್ಥಳಗಳಲ್ಲಿ ಮೇಲ್ಪಟ್ಟದ ಇಂತಹ ನವ-ಉದಾರವಾದಿ ನೀತಿಗಳ ವಿರುದ್ಧ ಪ್ರತಿರೋಧ ಒಡ್ಡಲಾಗುತ್ತಿದೆ ಎಂದು ಕಾಮ್ರೇಡ್‌ ಬಿ.ವಿ. ರಾಘವುಲು ವಿವರಿಸಿದರು.

ನವ-ಉದಾರವಾದಿ ನೀತಿಗಳ ಭಾಗವಾಗಿ, ಸೀಮಿತವಾಗಿಯಾದರೂ ಜಾರಿಯಾಗಿದ್ದ ಕಲ್ಯಾಣ ರಾಜ್ಯ ವ್ಯವಸ್ಥೆಯ ವಿದ್ಯುತ್, ನೀರು, ಶಿಕ್ಷಣ, ಆರೋಗ್ಯ ಮುಂತಾದ ಉಚಿತ ಸೇವೆಗಳಿಗೆ ಬೆಲೆ ಪಾವತಿ ಮಾಡುವ ಸೇವೆಗಳಾಗಿವೆ. ಈ ಬದಲಾವಣೆಗಳ ಹಿನ್ನೆಲೆಯಲ್ಲಿ ದುಡಿಯುವ ಜನರ ಜೀವನದ ಮೇಲೆ – ರಾಜ್ಯ, ಪ್ರದೇಶ, ಜಿಲ್ಲೆ, ನಗರ/ತಾಲೂಕು, ಗ್ರಾಮ/ವಾರ್ಡು ಮಟ್ಟದವರೆಗಿನ ಇತ್ಯಾದಿ – ಸ್ಥಳೀಯ ಮಟ್ಟದಲ್ಲಿ ಅದರ ನಿರ್ದಿಷ್ಟ ಪರಿಣಾಮಗಳು ಮತ್ತು ಅದರ ವಿರುದ್ಧ ನಿರ್ದಿಷ್ಟ ಹೋರಾಟಗಳನ್ನು ರೂಪಿಸುವ ಕೆಲಸವನ್ನು ಕೈಗೆತ್ತಿಕೊಳ್ಳಬೇಕಾಗಿದೆ. ವಾಸಪ್ರದೇಶಗಳಲ್ಲಿ ಬಸ್ತಿಗಳಲ್ಲಿ ಜನರ ದೈನಿಕ ಜೀವನವನ್ನು ಬಾಧಿಸುವ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ ಎಂದು ಕಾಮ್ರೇಡ್‌ ಬಿ.ವಿ. ರಾಘವುಲು ವಿಷದಪಡಿಸಿದರು.

ಈಗ ದುಡಿಯುವ ಜನರ ಜತೆ ಕೆಲಸದ ಸ್ಥಳದಲ್ಲಿ ಮಾತ್ರ ಪಕ್ಷ ಮತ್ತು ಸಾಮೂಹಿಕ ಸಂಘಟನೆಗಳು ಹೋರಾಡುತ್ತಿದ್ದು, ಸ್ಥಳೀಯವಾಗಿ ಜನರ ಸಾಮಾಜಿಕ, ಸಾಂಸ್ಕೃತಿಕ ಜೀವನದಲ್ಲಿ ಮಧ್ಯಪ್ರವೇಶ ಮಾಡುವುದನ್ನು ಬೂರ್ಜ್ವಾ ಪಕ್ಷಗಳಿಗೆ ಬಿಡುತ್ತಿದ್ದೇವೆ. ಅವರು ಅಲ್ಲೊಂದು ಇಲ್ಲೊಂದು ‘ಉಚಿತ ಸೇವೆ’, ‘ದಾನ’ಗಳ ಮೂಲಕ ಅವರ ಮೇಲೆ ರಾಜಕೀಯ ಹಿಡಿತ ಸಾಧಿಸುತ್ತಿದ್ದಾರೆ. ಕೆಲಸದ ಸ್ಥಳದಲ್ಲಿ ದುಡಿಯುವ ಜನರ ಜೀವನೋಪಾಯಗಳ ರಕ್ಷಣೆಗೆ ಹೋರಾಡುತ್ತಲೇ, ಪಕ್ಷ ಸ್ಥಳೀಯ ಮಟ್ಟದಲ್ಲಿ ಜನರ ಸಾಮಾಜಿಕ, ಸಾಂಸ್ಕೃತಿಕ ಜೀವನದಲ್ಲಿ ಮಧ್ಯಪ್ರವೇಶ ಮಾಡಿದಾಗ ಮಾತ್ರ ಜನ ಸ್ಪಂದಿಸುತ್ತಾರೆ ಎಂದು ಕಾಮ್ರೇಡ್‌ ಬಿ.ವಿ. ರಾಘವುಲು ತಿಳಿಸಿದರು.

ಹಿಂದುತ್ವ ಕೋಮುವಾದವನ್ನು ಸೋಲಿಸಲು ರಾಜಕೀಯ ಸೈದ್ಧಾಂತಿಕ ದಾಳಿ ಮಾತ್ರ ಸಾಕಾಗುವುದಿಲ್ಲ. ಸಾಂಸ್ಕೃತಿಕ ಚಟುವಟಿಕೆಗಳ ಅಗತ್ಯವಿದೆ. ಆಯಾ ಜನವಿಭಾಗಗಳ ಸಾಂಸ್ಕೃತಿಕ ವಿನ್ಯಾಸ, ಪರಂಪರೆ, ಅಭಿವ್ಯಕ್ತಿಗಳನ್ನು ಬಳಸಬೇಕು. ದಿನನಿತ್ಯದ ಅವರ ಜೀವನದಲ್ಲಿ ಹಾಸುಹೊಕ್ಕಾಗಿ ಮಧ್ಯಪ್ರವೇಶಿಸಬೇಕು. ಪ್ರತಿಯೊಂದು ಸಾಮೂಹಿಕ ರಂಗ ಸಾಂಸ್ಕೃತಿಕ ತಂಡವೊಂದನ್ನು ಹೊಂದಿ ಮಧ್ಯಪ್ರವೇಶ ಮಾಡಬೇಕು. ಅದೇ ರೀತಿಯಲ್ಲಿ ಸಾಮಾಜಿಕ ದಮನದ ವಿಳಯಗಳನ್ನೂ ಎತ್ತಿಕೊಳ್ಳಬೇಕು. ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆ ವಿಷಯಗಳನ್ನು ಎತ್ತಿ, ಮುಸ್ಲಿಂ ವಿರೋಧದ ಮರೆಯಲ್ಲಿ ಹಿಂದೂ ಸಮಾಜದ ವೈರುಧ್ಯಗಳನ್ನು ಮುಚ್ಚುವ ಹುಸಿ ಐಕ್ಯತೆ ಸ್ಥಾಪಿಸುವ ಸಂಘ ಪರಿವಾರದ ಹುನ್ನಾರವನ್ನು ಒಡೆಯಬೇಕು ಎಂದು ಕಾಮ್ರೇಡ್‌ ಬಿ.ವಿ. ರಾಘವುಲು ವಿವರಿಸಿದರು.

ಅದೇ ರೀತಿಯಲ್ಲಿ ಯುವಜನರನ್ನು ನಿರುದ್ಯೋಗದ ಪ್ರಶ್ನೆಯ ಸುತ್ತ ಮಾತ್ರ ಮುಟ್ಟಲು ಸಾಧ್ಯವಿಲ್ಲ. ನವ-ಉದಾರೀಕರಣದ ನಂತರ ಎಲ್ಲ ಕೆಳಮಟ್ಟದ ಉದ್ಯೋಗಗಳಲ್ಲಿ, ಗ್ರ‍್ರಾಮೀಣ ಕೂಲಿಕಾರರಲ್ಲಿ ಯುವಜನರ ಸಂಖ್ಯೆ ಜಾಸ್ತಿ ಆಗಿದೆ. ನಮ್ಮ ಸಾಮೂಹಿಕ ಸಂಘಟನೆಗಳು ಸಂಘಟಿಸುವ ತಲುಪುವ ಎಲ್ಲ ರಂಗಗಳಲ್ಲೂ ಯುವಜನರು ಇದ್ದಾರೆ. ಹಾಗಾಗಿ ಯುವಜನರನ್ನು ತಲುಪಿ ಸಂಘಟಿಸುವುದು ಸಹ  ಎಲ್ಲ ಸಾಮೂಹಿಕ ರಂಗಗಳ ಜವಾಬ್ದಾರಿಯಾಗಿದೆ ಎಂದು ಕಾಮ್ರೇಡ್‌ ಬಿ.ವಿ. ರಾಘವುಲು ಒತ್ತಿ ಹೇಳಿದರು.

Leave a Reply

Your email address will not be published. Required fields are marked *