ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಸಿಪಿಐ(ಎಂ) ರಾಜ್ಯ ಸಮ್ಮೇಳನ ನಿರ್ಣಯ

ರಾಜ್ಯವ್ಯಾಪಿಯಾಗಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಅನಿಯಂತ್ರಿತವಾಗಿ ನಡೆಯುತ್ತಿವೆ. ಇವುಗಳನ್ನು ತಡೆಯಲು ವಿಫಲವಾಗಿರುವ ಕೇಂದ್ರ ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), 23ನೇ ಕರ್ನಾಟಕ ರಾಜ್ಯ ಸಮ್ಮೇಳನವು ತೀವ್ರವಾಗಿ ಖಂಡಿಸುತ್ತದೆ.

ಪಾಳೇಗಾರಿ ಮೌಲ್ಯಗಳು ಮತ್ತು ನವ ಉದಾರೀಕರಣ ನೀತಿಗಳ ಪರಿಣಾಮಗಳು ಮಹಿಳೆಯರನ್ನು ತೀವ್ರ ಸಂಕಷ್ಟಕ್ಕೆ ದೂಡಿವೆ. ಕೋವಿಡ್ ಸಂದರ್ಭದಲ್ಲಿ ಏಕಾಏಕಿ ಘೋಷಿಸಿದ ಲಾಕ್‌ಡೌನ್ ಕಾರಣದಿಂದ ಮಹಿಳೆಯರು ಮನೆಯಿಂದ ಹೊರಬರಲಾಗದೆ ಪರಿಹಾರದ ದಾರಿಗಳೂ ಇಲ್ಲದೆ ಹಲವು ದೌರ್ಜನ್ಯಗಳಿಗೆ ಬಲಿಯಾದರು. ಅದಕ್ಕೆ ಪರ್ಯಾಯ ಪರಿಹಾರಗಳ ವ್ಯವಸ್ಥೆಯನ್ನು ರೂಪಿಸದ ಕೇಂದ್ರ – ರಾಜ್ಯ ಸರ್ಕಾರಗಳು, ಮಹಿಳಾ ಅಯೋಗಗಳು 2020–21ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಕಡಿಮೆಯಾಗಿವೆ ಎಂದು ಸಮರ್ಥನೆ ನೀಡಿವೆ.

2019-2020ರಲ್ಲಿ ದೇಶದಲ್ಲಿ ನಡೆದ ಬಾಲ್ಯ ವಿವಾಹಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. 2018-2019 ಕ್ಕೆ ಹೋಲಿಸಿದರೆ ಶೇಕಡಾ 66ರಷ್ಟು ಹೆಚ್ಚಳವಿದೆ. ಶಾಲೆಗಳು ಇಲ್ಲದಿರುವುದು, ಬದುಕಿನ ಆಭದ್ರತೆ, ಹೆಣ್ಣು ಮಕ್ಕಳ ಸುರಕ್ಷತೆಯ ಸಮಸ್ಯೆಗಳಿಗೆ ಪರಿಹಾರವಾಗಿ ಬಾಲ್ಯ ವಿವಾಹಗಳು ನಡೆದಿರುವುದು ಸಮೀಕ್ಷೆಗಳಿಂದ ದೃಡಪಟ್ಟಿದೆ. ಕೌಟುಂಬಿಕ ದೌರ್ಜನ್ಯ 2019–2020ರಲ್ಲಿ ಶೇಕಡಾ 115.5 ರಷ್ಟು ಹೆಚ್ಚಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇನ್ನೂ ಬೆಳಕಿಗೆ ಬಾರದ ಪ್ರಕರಣಗಳು ಸಾಕಷ್ಟಿವೆ.  ಲಾಕ್‌ಡೌನ್ ಮತ್ತು ಲಾಕ್‌ಡೌನ್‌ ತೆರವುಗೊಂಡ ನಂತರದ ಸಮಯದಲ್ಲಿಯೂ ದುಡಿಮೆಯನ್ನು ಕೈಗೊಳ್ಳುವ ಮಹಿಳೆಯರು ಮನೆಯಿಂದಲೇ ಕೆಲಸ ಮಾಡುವ ಹೊಸ ಸ್ವರೂಪಗಳಲ್ಲಿ ಆನ್‌ಲೈನ್‌ ಕಿರುಕುಳವನ್ನು ಅನುಭವಿಸುತ್ತಿರುವ ಘಟನೆಗಳು  ವರದಿಯಾಗುತ್ತಿವೆ. ಹಾಗೆಯೇ ವರದಕ್ಷಿಣೆ ಕಿರುಕುಳ, ಯುವಜನರ ಆಯ್ಕೆ ಹಕ್ಕುಗಳ ಮೇಲೆ ದಾಳಿ, ಮಹಿಳೆಯರ ಸಾಕಾಣಿಕೆ, ಅತ್ಯಾಚಾರದಂತಹ ಘಟನೆಗಳು ಹೆಚ್ಚಾಗಿವೆ. ಇತ್ತೀಚೆಗೆ ಮಧ್ಯ ರಾತ್ರಿಯಲ್ಲಿ ಮಹಿಳೆಯರಿಗೆ ಕಾಲ್ ಮಾಡಿ ಅಶ್ಲೀಲವಾಗಿ ಮಾತನಾಡುವುದು, ಲೈಂಗಿಕತೆಗೆ ಆಹ್ವಾನಿಸುವುದು, ಅಶ್ಲೀಲ ಚಿತ್ರಗಳನ್ನು ಕಳಿಸುವಂತಾ ಕೃತ್ಯಗಳು ನಡೆಯುತ್ತಿದ್ದು, ಹೊರಗೆ ಹೇಳಿಕೊಳ್ಳಲಾರದ ಪರಿಸ್ಥಿತಿಯಲ್ಲಿ ಮಾನಸಿಕ ಕಿರುಕುಳಗಳನ್ನು ಮಹಿಳೆಯರು ಅನುಭವಿಸುತ್ತಿದ್ದಾರೆ.

ಮಹಿಳೆಯರ ದೌರ್ಜನ್ಯಗಳ ಪ್ರಕರಣಗಳ ಸಂಖ್ಯೆಗನುಗುಣವಾಗಿ ಮಹಿಳಾ ಸಾಂತ್ವನ ಕೇಂದ್ರಗಳನ್ನು, ಮಹಿಳಾ ಪೊಲೀಸ್ ಠಾಣೆಗಳನ್ನು, ತ್ವರಿತಗತಿಯ ನ್ಯಾಯಲಯಗಳನ್ನು ಹೆಚ್ಚಿಸುವ ಸಮುದಾಯವನ್ನು ಮತ್ತು ಶಿಕ್ಷಣವನ್ನು ಲಿಂಗ ಸಂವೇದನಾಶೀಲಗೊಳಿಸುವ ಮೂಲಕ ತುರ್ತು ಕ್ರಮಗಳಿಗೆ ಸರ್ಕಾರ ಮುಂದಾಗಬೇಕಿತ್ತು. ಬದಲಿಗೆ ಕೋವಿಡ್ ಅವಧಿಯಲ್ಲಿ ಆರ್ಥಿಕ ಬಿಕ್ಕಟ್ಟಿನ ಕಾರಣ ನೀಡಿ ಹಲವು ಜಿಲ್ಲೆಗಳಲ್ಲಿ ಸಾಂತ್ವನ ಕೇಂದ್ರಗಳನ್ನು ಮುಚ್ಚಲಾಗಿದೆ. ದೀರ್ಘ ಮತ್ತು ದುಬಾರಿ ಕಾನೂನು ಪ್ರಕ್ರಿಯೆಗಳೇ ಹಿಂಸಾತ್ಮಕವಾಗಿರುವುದರಿಂದ ನ್ಯಾಯಕ್ಕಾಗಿನ ಹೋರಾಟಗಳಿಂದ ಒಂದು ದೂರ ಉಳಿಯುವುದು, ಇಲ್ಲವೇ ಪ್ರಕ್ರಿಯೆಯಿಂದ ಹೊರಬರುವ ಮಹಿಳೆಯರ ಸಂಖ್ಯೆ ಗಣನೀಯವಾಗಿದೆ.

ಸಂಪ್ರದಾಯದ ರಕ್ಷಣೆಯ ಹೆಸರಿನಲ್ಲಿ ಅಂತರ್ ಜಾತಿ ಮತ್ತು ಅಂತರ್ ಧರ್ಮೀಯ ಯುವಜನರು ಒಂದೆಡೆ ಮತೀಯ ಗೂಂಡಾಗಿರಿಗೆ ಮತ್ತೊಂದೆಡೆ ತಮ್ಮ ಪೋಷಕರಿಂದಲೇ ಅವಮರ್ಯಾದೆಯ ಹೆಸರಿನಲ್ಲಿ ನಡೆಯುತ್ತಿರುವ ದಾಳಿಗಳಿಗೆ ಬಲಿಯಾಗುತ್ತಿದ್ದಾರೆ. ಮರ್ಯಾದೆ ಹೆಸರಿನಲ್ಲಿ ನಡೆಯುತ್ತಿರುವ ಅಪರಾಧಗಳನ್ನು ನಿಯಂತ್ರಿಸಲು ವಿಶೇಷ ಕಾನೂನನ್ನು ಜಾರಿಗೆ ತರಲು ದೇಶವ್ಯಾಪಿ ಹೋರಾಟಗಳು ನಡೆಯುತ್ತಿದ್ದರು, ಪ್ರಭುತ್ವ ಅದಕ್ಕೆ ಆದ್ಯ ಗಮನ ನೀಡಲಿಲ್ಲ. ಬದಲಿಗೆ ಯುವಜನರ ಆಯ್ಕೆಯ ಹಕ್ಕುಗಳನ್ನು ನಿರ್ಬಂಧಿಸಲು ಮತಾಂತರ ನಿಷೇಧ ಮಸೂದೆಯನ್ನು ಜಾರಿ ಮಾಡುವ ಹಿಡನ್ ಅಜೆಂಡಾವನ್ನು ಮುನ್ನಲೆಗೆ ತರಲೊರಟಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ವ್ಯವಸ್ಥೆಯು ಸೇರಿ ಲಿಂಗ ಸಮಾನತೆಯ ವಿಷಯದಲ್ಲಿ ಅಸಂವೇದನಾಶೀಲವಾಗಿರುವುದು ಪ್ರಜಾಪ್ರಭುತ್ವ ಚಳುವಳಿಗೆ ಒಂದು ಸವಾಲಾಗಿದೆ.

ಈ ಹಿಂದೆ ಮಹಿಳೆಯರ ಮೇಲಿನ ದೌರ್ಜನ್ಯಗಳ ನಿಯಂತ್ರಣಕ್ಕೆ 2018ರಲ್ಲಿ ಉಗ್ರಪ್ಪ ಸಮಿತಿ 6017 ಪುಟದ ವರದಿಯಲ್ಲಿ 135 ಶಿಫಾರಸ್ಸುಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರ ಅದನ್ನು ಅಂಗೀಕರಿಸದ ಕಾರಣ ಧೂಳು ಹಿಡಿಯುವಂತಾಗಿದೆ. ಅದರಲ್ಲಿರುವ ಪ್ರಮುಖ ಶಿಫಾರಸ್ಸುಗಳನ್ನು ಅಂಗೀಕರಿಸುವ ಮೂಲಕ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ನಿಯಂತ್ರಣಕ್ಕೆ ಸರ್ಕಾರ ಮುಂದಾಗಬೇಕು.

ಈ ಹಿನ್ನಲೆಯಲ್ಲಿ ಮಹಿಳೆ ಮತ್ತು ಮಕ್ಕಳ ಸುರಕ್ಷತೆ ಸರ್ಕಾರದ ಆದ್ಯ ಕರ್ತವ್ಯವಾಗಬೇಕು. ನ್ಯಾಯಮೂರ್ತಿ ವರ್ಮಾ ಸಮಿತಿಯ ಶಿಫಾರಸ್ಸುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು, ತಪ್ಪಿತಸ್ಥರು ಯಾರೇ ಆಗಿದ್ದರು ಶಿಕ್ಷಿಸುವ ರಾಜಕೀಯ ಇಚ್ಛಾಶಕ್ತಿಯನ್ನು ಪ್ರಕಟಿಸಬೇಕೆಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯ ಸಮ್ಮೇಳನವು ಒತ್ತಾಯಿಸುತ್ತದೆ.

Leave a Reply

Your email address will not be published. Required fields are marked *