ಕಸ್ತೂರಿ ರಂಗನ್ ಸಮಿತಿಯ ವರದಿಯನ್ನು ತಿರಸ್ಕರಿಸಲು ಸಿಪಿಐ(ಎಂ) ರಾಜ್ಯ ಸಮ್ಮೇಳನ ಒತ್ತಾಯ

ಕಸ್ತೂರಿ ರಂಗನ್ ಸಮಿತಿಯ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕುಮ, ಜನಪರ ಸಮಿತಿಯೊಂದನ್ನು ರಚಿಸಿ ಪುನರ್ ಅಧ್ಯಯನ ನಡೆಸಬೇಕೆಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ 2022ರ ಜನವರಿ 2 ರಿಂದ 4ರವರೆಗೆ ನಡೆದ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಕರ್ನಾಟಕ 23ನೇ ರಾಜ್ಯ ಸಮ್ಮೇಳನವು ನಿರ್ಣಯವನ್ನು ಅಂಗೀಕರಿಸಿ ಒತ್ತಾಯಿಸಿದೆ.

ಪಶ್ಚಿಮ ಘಟ್ಟ ಪ್ರದೇಶವು ನಮ್ಮ ದೇಶದ ಹವಾಮಾನವನ್ನು ನಿರ್ಣಯಿಸುವಲ್ಲಿ ನಿರ್ಣಾಯಿಕ ಪಾತ್ರ ವಹಿಸುತ್ತಿದೆ. ಇಂತಹ ಈ ಪ್ರದೇಶವು ಪರಿಸರ ವೈಪರಿತ್ಯಕ್ಕೆ ಒಳಗಾಗಿದ್ದು ಅದಕ್ಕೆ ಆ ಪ್ರದೇಶದಲ್ಲಿ ವಾಸಿಸುತ್ತಿರುವ ಜನಸಾಮಾನ್ಯರೇ ಕಾರಣವೆಂದು ಆಳುವ ವರ್ಗಗಳು ಪ್ರಚಾರ ಮಾಡುತ್ತಿವೆ. ಕೇಂದ್ರ-ರಾಜ್ಯ ಸರಕಾರಗಳು ಅನುಸರಿಸಿಕೊಂಡಿರುವ ಬಂಡವಾಳಶಾಹಿ-ಪರವಾದ ತಪ್ಪಾದ ಧೋರಣೆಗಳು, ಅರಣ್ಯ ಕಾಯಿದೆಯಲ್ಲಿರುವ ದೋಷಗಳು, ಅಧಿಕಾರರೂಢ ಪಕ್ಷಗಳ ಬೆಂಬಲಿಗರು ಸ್ವಾರ್ಥಕ್ಕಾಗಿ ಈ ಪ್ರದೇಶವನ್ನು ಕೊಳ್ಳೆ ಹೊಡೆಯುತ್ತಿರುವುದು ಪರಿಸರ ನಾಶದ ಇಂತಹ ಬೆಳವಣಿಗೆಗೆ ಕಾರಣವಾಗಿದ್ದರೂ ಜನಸಾಮಾನ್ಯರನ್ನೇ ಗುರಿಯಾಗಿಸಲಾಗುತ್ತಿದೆ.

ಇಂತಹ ಸ್ವಾರ್ಥ ಬಂಡವಾಳಶಾಹಿಪರ ಚಿಂತನೆಯ ಸರಕಾರಗಳು ರಚಿಸುವ ಸಮಿತಿಗಳೂ ಸಹ ಇದೇ ಜನವಿರೋಧಿ ನಿಲುಮೆಯನ್ನು ಪ್ರತಿಪಾದಿಸುತ್ತವೆ.

ಪಶ್ಚಿಮಘಟ್ಟ ಪ್ರದೇಶದ ಪರಿಸರ ನಾಶಕ್ಕೆ ಕಾರಣಗಳನ್ನು ಕಂಡು ಹಿಡಿದು ಪರಿಹಾರ ಮಾರ್ಗಗಳನ್ನು ಸೂಚಿಸುವಂತೆ ನಿರ್ದೇಶಿಸಿ ಡಾ.ಮಾಧವ ಗಾಡ್ಗೀಳ್‌ ರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಲಾಗಿತ್ತು. ಆ ಸಮಿತಿಯ ವರದಿಗೆ ಕಟುವಾದ ವಿರೋಧ ಬಂದ ಹಿನ್ನೆಲೆಯಲ್ಲಿ ಡಾ.ಕಸ್ತೂರಿ ರಂಗನ್ ಸಮಿತಿಯನ್ನು ನೇಮಿಸಲಾಗಿತ್ತು. ಆದರೆ ಆ ಸಮಿತಿಯ ವರದಿಯೂ ಸಹ ಪಶ್ಚಿಮ ಘಟ್ಟ ಶ್ರೇಣಿಗಳನ್ನು ಒಳಗೊಂಡಿರುವ ರಾಜ್ಯಗಳ ಜನತೆ ತಿರಸ್ಕರಿಸಿದ್ದರು. ಆದುದರಿಂದ ಜನಪರ ಸಂಘಟನೆಗಳು ಮತ್ತು ಜನಪರ ಚಿಂತನೆಯ ವ್ಯಕ್ತಿಗಳು ಒಳಗೊಂಡಿರುವ ಸಮಿತಿಯನ್ನು ರಚಿಸಿ ಅಧ್ಯಯನ ನಡೆಸಬೇಕೆನ್ನುವುದು ಸಾರ್ವತ್ರಿಕ ಅಭಿಪ್ರಾಯವಾಗಿತ್ತು. ಇದೇ ಪ್ರಕಾರ ಕಸ್ತೂರಿ ರಂಗನ್ ಸಮಿತಿಯ ವರದಿಯನ್ನು ತಿರಸ್ಕರಿಸಬೇಕೆಂದು ಮತ್ತು ಅಧ್ಯಯನಕ್ಕಾಗಿ ಜನಪರ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ಸಮಿತಿಯೊಂದನ್ನು ರಚಿಸಬೇಕೆನ್ನುವುದು ನಮ್ಮ ಪಕ್ಷದ ಬೇಡಿಕೆಯೂ ಆಗಿತ್ತು.

ಭಾರತೀಯ ಜನತಾ ಪಕ್ಷ ವಿರೋಧ ಪಕ್ಷವಾಗಿ ಇದ್ದಾಗ ಈ ವರದಿಗಳನ್ನು ಆಮೂಲಾಗ್ರವಾಗಿ ವಿರೋಧಿಸಿತ್ತು. ಮಾತ್ರವಲ್ಲದೆ ಈ ವರದಿಯನ್ನು ತಿರಸ್ಕರಿಸಿ ಜನಪರ ಸಂಘಟನೆಗಳ ಪ್ರತಿನಿಧಿಗಳನ್ನು ಸಮಿತಿಯನ್ನು ರಚಿಸಬೇಕೆನ್ನುವ ಬೇಡಿಕೆಗೆ ಆ ಪಕ್ಷವೂ ಅಂದು ಬೆಂಬಲಿಸಿತ್ತು. ಆ ಸಮಿತಿಗಳ ವರದಿಗಳ ವಿರುದ್ಧ ನಡೆಯುತ್ತಿದ್ದ ಚಳುವಳಿಗಳಲ್ಲಿ ಆ ಪಕ್ಷದವರೂ ಸಕ್ರಿಯವಾಗಿ ಭಾಗಿಗಳಾಗಿದ್ದರು. ಆದರೆ ಅವರ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಅವರು ಜನ ವಿರೋಧಿಯಾಗಿ ತಮ್ಮ ನಿಲುವು ಬದಲಾಯಿಸಿದರು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಭಾರತೀಯ ಜನತಾ ಪಕ್ಷದ ನರೇಂದ್ರ ಮೋದಿ ಸರಕಾರ ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ಅಫಿಡಾವಿಟ್ ಮಂಡಿಸಿ ‘ತಾನು ಕಸ್ತೂರಿರಂಗನ್ ಸಮಿತಿಯ ವರದಿಯನ್ನು ಅಂಗೀಕರಿಸುವುದಾಗಿಯೂ ಅದನ್ನೇ ಅನುಷ್ಠಾನಕ್ಕೆ ತರುವುದಾಗಿಯೂ’ ಒಪ್ಪಿಕೊಂಡಿತು. ಆದುದರಿಂದ ಈಗ ಅದನ್ನು ಅನುಷ್ಠಾನಕ್ಕೆ ತರಲು ಮುಂದಡಿ ಇಡುತ್ತಿದೆ. ಈ ಪ್ರಕ್ರಿಯೆಯ ಭಾಗವಾಗಿ “ಜನರಿಗೆ ತೊಂದರೆಯಾಗದಂತೆ ವರದಿಯನ್ನು ಅನುಷ್ಠಾನಕ್ಕೆ ತರಲು” ಬೇಕಾದ ಉಪಕ್ರಮಗಳನ್ನು ಅನುಸರಿಸಲು ಕೇಂದ್ರ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದೆ.

ಭಾರತೀಯ ಜನತಾ ಪಕ್ಷದ ದ್ವಂದ್ವ ಧೋರಣೆಯನ್ನು ಗಮನಿಸಬೇಕೆಂದು ಜನತೆಯನ್ನು ಪಕ್ಷವು ವಿನಂತಿಸುತ್ತದೆ. ಕಸ್ತೂರಿ ರಂಗನ್ ಸಮಿತಿಯ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕೆಂದು ಮತ್ತು ಜನಪರ ಸಮಿತಿಯೊಂದನ್ನು ರಚಿಸಿ ಪುನರ್ ಅಧ್ಯಯನ ನಡೆಸಬೇಕೆಂದು ನಮ್ಮ ಪಕ್ಷವು ಒತ್ತಾಯಿಸುತ್ತದೆ.

Leave a Reply

Your email address will not be published. Required fields are marked *