ಬಂಜರು, ಬಗರ್ ಹುಕುಂ, ಅರಣ್ಯ ಭೂಮಿಯಲ್ಲಿನ ರೈತ ಭೂಮಿ ಹಕ್ಕನ್ನು ಮಾನ್ಯ ಮಾಡಲು ಆಗ್ರಹಿಸಿ ಸಿಪಿಐ(ಎಂ) ರಾಜ್ಯ ಸಮ್ಮೇಳನ ನಿರ್ಣಯ

ತಲತಲಾಂತರಗಳಿಂದ ಬುಡಕಟ್ಟು ಮತ್ತು ಬುಡಕಟ್ಟೇತರ ರೈತರು ತಮ್ಮ ಜೀವನಕ್ಕಾಗಿ ಬಂಜರು ಭೂಮಿಯಲ್ಲಿ, ಕಂದಾಯ ಭೂಮಿ ಬಗರ್ ಹುಕುಂ ಸಾಗುವಳಿ ಮತ್ತು ಅರಣ್ಯ ಭೂಮಿಯಲ್ಲಿ ವಾಸ ಮತ್ತು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಸ್ವಾತಂತ್ರ್ಯ ನಂತರ ಅಧಿಕಾರ ವಹಿಸಿಕೊಂಡ ಹಲವಾರು ಸರಕಾರಗಳು ಹಕ್ಕುಪತ್ರ ಕೊಡುವುದಾಗಿ ಆಶ್ವಾಸನೆ ನೀಡುತ್ತಾ ಬಂದರು. ಕೆಲವು ಜಿಲ್ಲೆಗಳ ಶೇ. 10-20 ಜನರಿಗೆ ಮಂಜೂರಿ ನೀಡಿದರು. ಆದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸಿಲ್ಲ.

ರಾಜ್ಯದಲ್ಲಿ ಸುಮಾರು 4 ಲಕ್ಷ 83 ಸಾವಿರ ಬಗರ್ ಹುಕುಂ ಅರ್ಜಿಗಳು ಬಾಕಿ ಉಳಿದಿವೆ. ಕಂದಾಯ ಭೂಮಿಯ ಕೆಲವು ಭಾಗವನ್ನು 2010ರಲ್ಲಿ ಸರಕಾರ ಅರಣ್ಯ ಇಂಡೀಕರಣ ಕಾನೂನಿನ ಮೂಲಕ ಅರಣ್ಯ ಇಲಾಖೆಗೆ ವರ್ಗಾಯಿಸಿದ ಪರಿಣಾಮ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಲ್ಲಿ ತೊಡಕಾಗಿದೆ. ಇನ್ನೊಂದು ಕಡೆ ಸರಕಾರ ಬಗರ್ ಹುಕುಂ ಅಕ್ರಮ-ಸಕ್ರಮ ಸಮಿತಿಗಳನ್ನು ರಾಜ್ಯದ ಎಲ್ಲ ತಾಲೂಕುಗಳಲ್ಲಿ ರಚಿಸಿಲ್ಲ. ರಚಿಸಿದಲ್ಲಿ ಸಭೆ ಸೇರಿ ಅರ್ಜಿ ವಿಲೇವಾರಿ ಕೆಲಸ ನಡೆಯುತ್ತಿಲ್ಲ. ನಮೂನೆ 50, 53ರಲ್ಲಿ ಅರ್ಜಿ ಹಾಕಿಕೊಂಡರು. ನಂತರ ನಮೂನೆ 57ರಲ್ಲಿ ಅರ್ಜಿ ಹಾಕಿದರು ಹಾಗೆಯೇ ಬಾಕಿ ಉಳಿದಿವೆ. 94 ಸಿ ಮತ್ತು 94 ಸಿಸಿ ಯಡಿಯಲ್ಲೂ ಅರ್ಜಿ ಹಾಕಿದವು ವಿಲೇವಾರಿ ಆಗಿಲ್ಲ.

ಅರಣ್ಯ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು 1980ರ ಅರಣ್ಯ ಕಾಯ್ದೆ ಅಡ್ಡಿಯಾಗುತ್ತಿದೆಯೆಂದು 2005 ರಲ್ಲಿ ಯುಪಿಎ ಸರಕಾರ ಇದ್ದಾಗ ಎಡಪಕ್ಷಗಳ ಒತ್ತಾಯದ ಮೇರೆಗೆ ಬುಡಕಟ್ಟು ಮತ್ತು ಇತರೆ ಅರಣ್ಯ ವಾಸಿಗಳಿಗೆ ಅರಣ್ಯ ಜಮೀನಿನ ಹಕ್ಕು ನೀಡಲು ಒಂದು ಕಾನೂನು ಬಂದಿತು. ಆ ಕಾನೂನು ಅಡಿ ಅರ್ಜಿ ಹಾಕಿಕೊಂಡು 13 ವರ್ಷಗಳಿಂದ ಬಡ ರೈತರು ಕಾಯುತ್ತಿದ್ದಾರೆ. ಬುಡಕಟ್ಟು ಇಲಾಖೆಗೆ ಉಸ್ತುವಾರಿ ವಹಿಸಲಾಗಿದ್ದು, ಅರ್ಜಿಗಳು ಹಾಗೆಯೇ ಬಾಕಿ ಇವೆ. ಬುಡಕಟ್ಟು ಅರ್ಜಿಗಳನ್ನು ಕೆಲವು ಜಿಲ್ಲೆಗಳಲ್ಲಿ ಮಾನ್ಯ ಮಾಡಿ ಹಕ್ಕು ಪತ್ರ ನೀಡಿದ್ದಾರೆ. ಅದು ಕೆಲವು ಬಾಕಿ ಇವೆ. ಇತರೆ ಅರಣ್ಯ ವಾಸಿಗಳ ಅರ್ಜಿಗಳು ಇತ್ಯರ್ಥ ಆಗಿಲ್ಲ. 3 ತಲೆಮಾರು ಅಥವಾ 75 ವರ್ಷದ ದಾಖಲೆ ಬೇಕು ಎನ್ನುವದು ಪ್ರಮುಖ ಅಡ್ಡಿಯಾಗಿದೆ. ವಿಭಾಗ ಮಟ್ಟದಲ್ಲಿ ತಿರಸ್ಕೃತವಾಗಿ ಜಿಲ್ಲಾ ಮಟ್ಟದ ಸಮಿತಿಗೆ ಮೇಲ್ಮನವಿಯನ್ನು ಹಲವಾರು ಜಿಲ್ಲೆಗಳಲ್ಲಿ ಹಾಕಲಾಗಿದೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಅರ್ಜಿ ತೆಗೆದುಕೊಳ್ಳಲು ಕೆಲಸ ನಡೆದೆ ಇಲ್ಲ. ಕೆಲವು ಕಡೆ ಗುಪ್ತವಾಗಿ ಇಟ್ಟು ಅರ್ಜಿ ತೆಗೆದುಕೊಳ್ಳುವ ಪ್ರಕ್ರಿಯೆ ನಡೆದಿಲ್ಲ. ರಾಜ್ಯದಲ್ಲಿ 2 ಲಕ್ಷಕ್ಕೂ ಮೇಲ್ಪಟ್ಟು ಅರಣ್ಯವಾಸಿಗಳ ಅರ್ಜಿಗಳನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಹಲವಾರು ಹಂತದ ಹೋರಾಟಗಳು ನಡೆದರೂ ಇದಕ್ಕೊಂದು ಪರಿಹಾರ ಕಂಡುಕೊಳ್ಳುವಲ್ಲಿ ಸರಕಾರಗಳು ವಿಫಲವಾಗಿವೆ. ಅರಣ್ಯ ಇಲಾಖೆಯವರು ನಿರಂತರವಾಗಿ ಬಡ ಜನರಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಮಧ್ಯ ಉತ್ತರ ಕನ್ನಡ ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಅಭಯಾರಣ್ಯಗಳು ಘೋಷಣೆಯಾಗಿರುವುದರಿಂದ ಅಲ್ಲಿ ಅರಣ್ಯ ಅತಿಕ್ರಮಣ ತೆರವಿಗೆ ಸೂಚನೆ ನೀಡಲಾಗುತ್ತಿದೆ.

ಈ ಎಲ್ಲ ಪ್ರಶ್ನೆಗಳ ಆಧಾರದಲ್ಲಿ ಬಂಜರು, ಬಗರ್ ಹುಕುಂ ಮತ್ತು ಅರಣ್ಯ ಭೂಮಿ ಪ್ರಶ್ನೆಯನ್ನು ಬಗೆಹರಿಸಲು ರಾಜ್ಯ ಸರಕಾರ ಕ್ರಮ ತೆಗೆದುಕೊಳ್ಳಬೇಕೆಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ 2022ರ ಜನವರಿ 2 ರಿಂದ 4ರವರೆಗೆ ನಡೆದ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) 23ನೇ ಕರ್ನಾಟಕ ರಾಜ್ಯ ಸಮ್ಮೇಳನವು ಒತ್ತಾಯಿಸುತ್ತದೆ.

Leave a Reply

Your email address will not be published. Required fields are marked *