ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ನಿಯಂತ್ರಣಕ್ಕೆ ಒತ್ತಾಯಿಸಿ ನಿರ್ಣಯ

ದೌರ್ಜನ್ಯ ಅತ್ಯಾಚಾರ ಅಪಹರಣಗಳಂಥಹ ಸಂಗತಿಗಳು ಪ್ರತಿ ಕ್ಷಣ ನಡೆಯುತ್ತಿರುವ ಸುತ್ತಲಿನ ವಿದ್ಯಮಾನಗಳಾಗಿವೆ. ಇದು ಯಾವುದೇ ನಾಗರಿಕ ಸಮಾಜ ನಾಚಿ ತಲೆ ತಗ್ಗಿಸಬೇಕಾದ ಮತ್ತು ಯಾವುದೇ ಕಾರಣಕ್ಕೂ ಒಪ್ಪಬಾರದ ಸಂಗತಿ. ಯಾವುದೇ ದೌರ್ಜನ್ಯಗಳು ಕೇವಲ ದೇಹ ಮಾತ್ರವಲ್ಲ, ಎಂದೆಂದಿಗೂ ಮರೆಯಲಾಗದ ಆಳವಾದ ಮಾನಸಿಕ ಆಘಾತವನ್ನೂ ಉಂಟುಮಾಡುತ್ತವೆ. ಅದರಲ್ಲಿಯೂ ಲೈಂಗಿಕ ದೌರ್ಜನ್ಯಗಳು ಅದೂ ಮಕ್ಕಳ ಮೇಲೆ ನಡೆದಾಗ ಅವು ಎಂದಿಗೂ ಮಾಯದ ಗಾಯಗಳು ಎಂಬುದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು.

ತನ್ನ ದೇಹ, ಗಾತ್ರ, ಸೌಷ್ಟವಗಳ ಹಂಗಿಲ್ಲದೇ ಆಡಿಕೊಂಡು ಬೆಳೆಯಬೇಕಾದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳನ್ನು ನಡೆಸುವ ವಿಕೃತ ಮನೋವೃತ್ತಿಗಳು ಸಮಾಜಕ್ಕೆ ಹತ್ತಿದ ಕಳಂಕಗಳೆಂದೇ ಭಾವಿಸಬೇಕು. ಪುರುಷ ಪ್ರಧಾನ ಪಾಳೆಯಗಾರೀ ಮೌಲ್ಯಗಳ ವಿಜೃಂಭಿತ ಅತಿರೇಕಗಳಲ್ಲಿ, ಪುರುಷನ ವಿಕೃತ ಕಾಮವೂ ಒಂದು ಭಾಗವೇ ಆಗಿರುತ್ತದೆ. ಹೆಣ್ಣೆಂಬ ದೇಹವೇ ತನ್ನ ಭೋಗಕ್ಕಿರುವ ವಸ್ತು ಎಂಬ ಮನೋಭಾವದ ದ್ಯೋತಕವನ್ನು ಇಲ್ಲಿ ಕಾಣುತ್ತೇವೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ವಿಶ್ವದಾದ್ಯಂತ ನಡೆಯುತ್ತದೆ ಎನ್ನುತ್ತವೆ ಅಧ್ಯಯನಗಳು. ಸರಿ ಸುಮಾರು 15 ಮಿಲಿಯನ್ ಹೆಣ್ಣು ಮಕ್ಕಳು ತಮ್ಮ ಹದಿಹರೆಯದಲ್ಲಿ ಲೈಂಗಿಂಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಪ್ರತಿ 3ರಲ್ಲಿ 1 ಮಗು ಬೆದರಿಕೆಗೆ ಒಳಗಾಗುತ್ತದೆ ಮತ್ತು ಈ ಕ್ಷುದ್ರ ಕೆಲಸವನ್ನು ಮಾಡುವವರು ಬಹುತೇಕ ಮಗುವಿನ ಪರಿಚಯಸ್ಥರು, ಕುಟುಂಬದವರು, ನೆರೆಹೊರೆಯವರು ಎಂಬುದು ಇನ್ನೂ ಅಸಹನೀಯ ಸಂಗತಿಯಾಗಿದೆ. ಬಹುತೇಕ ಪ್ರಕರಣಗಳು ಈಗಲೂ ಸಮಾಜದ ನಡವಳಿಕೆಯ ಮತ್ತು ಹುಸಿ ಪ್ರತಿಷ್ಠೆಯನ್ನು ಕಾಯ್ದುಕೊಳ್ಳುವ ಪೃವೃತ್ತಿಯಿಂದ ದೂರಾಗಿ ದಾಖಲಾಗುವುದೇ ಇಲ್ಲ.

ಲೈಂಗಿಕ ದೌರ್ಜನ್ಯವೆಂದರೆ ಕೇವಲ ಬಲವಂತದ ದೈಹಿಕ ಸಂಪರ್ಕ, ಅತ್ಯಾಚಾರಗಳು ಮಾತ್ರವಲ್ಲದೇ ಇತ್ತೀಚಿನ ವರ್ಷಗಳಲ್ಲಿ ಸೈಬರ್ ಅಪರಾಧಗಳೂ ಜರುಗುತ್ತಿವೆ ಮತ್ತು ಲಾಕ್‌ಡೌನ್ ಅವಧಿಯಲ್ಲಿ ಅದು ಹೆಚ್ಚಳವಾಗಿದೆ ಎನ್ನುತ್ತದೆ ಅಧ್ಯಯನಗಳು.

ಕರ್ನಾಟಕದ ಪರಿಸ್ಥಿತಿಯನ್ನು ನೋಡಿದರೆ ಕಳೆದ ನಾಲ್ಕು ವರ್ಷಗಳಲ್ಲಿ ವರದಿಯಾಗಿ ದಾಖಲೆಯಾದ ಪ್ರಕರಣಗಳಲ್ಲಿ ಅತೀವ ಹೆಚ್ಚಳವಾಗಿದೆ.

2018 ರಿಂದ 2021ರ ವರೆಗಿನ ದಾಖಲಾದ ದೌರ್ಜನ್ಯಗಳ ಪಟ್ಟಿ ಹೀಗಿದೆ:

2018     2019     2020     2021

ಅತ್ಯಾಚಾರ        1410     1613     1574     1761

ವರದಕ್ಷಿಣೆ          651       583       567       709

ಕೌಟುಂಬಿಕ        74        108       180       223

2020ರಲ್ಲಿ ಸೈಬರ್ ಪ್ರಕರಣದಲ್ಲಿ 1340% ಮಕ್ಕಳನ್ನೇ ಗುರಿಯಾಗಿಸಿ ನಡೆದ ಪ್ರಕರಣಗಳಿವೆ. 223 ಬಾಲ್ಯ ವಿವಾಹಗಳು ನಡೆದಿವೆ ಎಂದೂ ವರದಿಗಳಾಗಿವೆ. ಅಲ್ಲದೇ ಲಾಕ್‌ಡೌನ್ ಸಂದರ್ಭದಲ್ಲಿ ಅತಿ ಹೆಚ್ಚು ಬಾಲ್ಯವಿವಾಹಗಳಾಗಿವೆ.

ಮಕ್ಕಳ ಮೇಲೆ ನಡೆಯುವ ಈ ತೆರನ ದೌರ್ಜನ್ಯಗಳನ್ನು ತಡೆಗಟ್ಟಲೆಂದೇ ಇರುವ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಯ ಕಾನೂನು) ಕಾನೂನು 2012 ಜಾರಿಯಲ್ಲಿದೆ. ಈ ಕಾನೂನಿನ ಅಡಿಯಲ್ಲಿಯೇ ದಾಖಲಾಗುತ್ತಿರುವ ಅಪರಾಧಗಳಲ್ಲಿ ಪ್ರತಿ ವರ್ಷ ಏರಿಕೆಯಾಗುತ್ತಿದೆಯಾದರೂ ಶಿಕ್ಷೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. 2017 ರಲ್ಲಿ 3.3% ಇದ್ದುದು 2018ರಲ್ಲಿ 0.69%ಗೆ ಇಳಿದಿದೆ ಎನ್ನುತ್ತದೆ ಒಂದು ವರದಿ. ಇದಕ್ಕೆ ಕಾರಣ ತನಿಖಾ ಹಂತದಲ್ಲಿಯೇ ಇರುವ ಲೋಪದೋಷಗಳು ಮತ್ತು ಈ ಸಮಾಜ ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಉಂಟು ಮಾಡುವ ಘಾಸಿಯನ್ನು ಅರ್ಥ ಮಾಡಿಕೊಳ್ಳದಿರುವಷ್ಟು ಸಂವೇದನಾ ಶೂನ್ಯವಾಗಿರುವುದು. ಮತ್ತು ಅದು ಇಡೀ ಸಮಾಜದ ಮೇಲೆ ನಡೆಯುವ ದೌರ್ಜನ್ಯವೆಂದು ಅರ್ಥಮಾಡಿಕೊಳ್ಳದಿರುವುದು.

ರಾಜ್ಯದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ವೇದಿಕೆಗಳಿವೆ, ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ಮಧ್ಯ ಪ್ರವೇಶದ ನಂತರ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಪಾಲಿಸಿಯನ್ನೂ ತರಲಾಗಿದೆಯಾದರೂ ಇವೆಲ್ಲವೂ ಪ್ರಕರಣಗಳ ತೀವ್ರತೆಯನ್ನು ಕಡಿಮೆ ಮಾಡುವಲ್ಲಿ ವಿಫಲವಾಗಿವೆ.

ಬಾಹ್ಯೋಪಚಾರದ ಬೇಟಿ ಬಚಾವ್ ಬೇಟೀ ಪಢಾವ್ ನಂಥಹ ಘೋಷಣೆಗಳು ನಿಜವಾದ ಬದಲಾವಣೆಯನ್ನು ತರಲಾರವು.

ಕೋವಿಡ್, ವೈರಾಣುವಿನ ಉಪಟಳ ತಡೆಗಟ್ಟಲು ಬಳಸಿದ ಲಾಕ್‌ಡೌನ್ ನಂಥಹ ಕ್ರಮಗಳಿಂದಾಗಿ ತಂದ ಆನ್‌ಲೈನ್ ಪಠ್ಯಕ್ರಮಗಳು ಕೂಡ ಮಕ್ಕಳ ಮೇಲೆ ಸೈಬರ್ ಅಪರಾಧದ ಹೆಚ್ಚಳಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು.

ಮಕ್ಕಳ ಮೇಲೆ ನಡೆಯುವ ಕ್ರೂರ ದೌರ್ಜನ್ಯಗಳನ್ನು ನಿಯಂತ್ರಿಸಲು ಕರ್ನಾಟಕ ಸರಕಾರ ಮುಂದಾಗಬೇಕು. ಬಾಲ್ಯವಿವಾಹ, ಮಾನವ ಸಾಗಾಣಿಕೆಗಳನ್ನು ತಡೆಗಟ್ಟುವ ಕಾನೂನುಗಳನ್ನು ಸಮರ್ಪಕವಾಗಿ ಜಾರಿ ಮಾಡಬೇಕು ಎಂದು ಜನವರಿ 2 ರಿಂದ 4 2022 ರಲ್ಲಿ ಗಂಗಾವತಿಯಲ್ಲಿ ನಡೆದ ಸಿಪಿಐ(ಎಂ) ಪಕ್ಷದ 23ನೇ ರಾಜ್ಯ ಸಮ್ಮೇಳನವು ಒತ್ತಾಯಿಸುತ್ತದೆ.

Leave a Reply

Your email address will not be published. Required fields are marked *