ಅಭಿವ್ಯಕ್ತಿ ಸ್ವಾತಂತ್ರ ಮತ್ತು ಸಾಂಸ್ಕೃತಿಕ ಸಂವೇದನೆಗಳನ್ನು ರಕ್ಷಿಸಲು ಒತ್ತಾಯಿಸಿ ಸಿಪಿಐ(ಎಂ) ರಾಜ್ಯ ಸಮ್ಮೇಳನ ನಿರ್ಣಯ

ಅಭಿವ್ಯಕ್ತಿ ಸ್ವಾತಂತ್ರ ಮತ್ತು ಸಾಂಸ್ಕೃತಿಕ ಸಂವೇದನೆಗಳನ್ನು ರಕ್ಷಿಸಬೇಕೆಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ 2022ರ ಜನವರಿ 2 ರಿಂದ 4ರವರೆಗೆ ನಡೆದ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕರ್ನಾಟಕ 23ನೇ ರಾಜ್ಯ ಸಮ್ಮೇಳನದಲ್ಲಿ ನಿರ್ಣಯವನ್ನು ಅಂಗೀಕರಿಸಿದೆ.

ಭಾರತದ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರವೂ ಅತಿ ಮುಖ್ಯವಾದುದು. ಇತ್ತೀಚಿನ ವರ್ಷಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ನಡೆದಿರುವ ದುರ್ದಾಳಿಗಳು ಜನರ ಮೂಲಭೂತ ಹಕ್ಕುಗಳ ಮೇಲೆ ನಡೆದಿರುವ ಧಾಳಿಗಳಾಗಿವೆ.

ತಾನು ಸುಮಾರು ಒಂದು ಶತಮಾನದ ಹಿಂದೆ ಬಿತ್ತಿದ ಬೀಜದ ಹುಲುಸಾದ ಪೈರನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘವಿಂದು ಕೊಯ್ಯುತ್ತಿದೆ. ಒಂದು ಸ್ಪಷ್ಟವಾದ ಧರ್ಮಾಂಧತೆಯ ಸೂತ್ರವನ್ನೇ ಇಟ್ಟುಕೊಂಡು ನೇಯ್ದ ಬಲೆಯಲ್ಲಿ ಇಂದು ಇಡೀ ದೇಶವನ್ನು ಕೆಡವಲಾಗುತ್ತಿದೆ.

ಎಲ್ಲ ಸಾಂಸ್ಕೃತಿಕ ಪರಿಸರಗಳನ್ನು ನಯ ವಂಚನೆಯಿಂದ ಆಕ್ರಮಿಸಿಕೊಳ್ಳುತ್ತ ನಡೆದು ಬಂದು, ಈಗ ಅಧಿಕಾರದ ಕೇಂದ್ರದಲ್ಲಿಯೂ ಪ್ರಾಬಲ್ಯವನ್ನು ಸ್ಥಾಪಿಸಿದೆ. ಮತ್ತು ಅದನ್ನು ಬಹಳ ಸಮರ್ಥವಾಗಿ ಜನವಿರೋಧೀ ಸಿದ್ದಾಂತಕ್ಕೆ ಅನುಗುಣವಾಗಿ ನಡೆಸುತ್ತಿದೆ. ಮತ್ತು ಅದಕ್ಕೆ ಸಾಮೂಹಿಕ ಸಮ್ಮತಿ ಪಡೆಯುವ ಹುನ್ನಾರು ಚಾಲ್ತಿಯಲ್ಲಿದೆ.

ಇದರ ಭಾಗವಾಗಿಯೇ ಇಂದು ಸರಕಾರದ ನೀತಿಗಳನ್ನು ಪ್ರತಿಭಟಿಸಿದರೆ ದೇಶದ್ರೋಹವೆನಿಸಿಕೊಳ್ಳುತ್ತಿದೆ. ಚಿಂತಕರನ್ನು, ಪತ್ರಕರ್ತರನ್ನು ವಿನಾಕಾರಣ ಜೈಲಿಗೆ ತಳ್ಳಲಾಗುತ್ತಿದೆ. ಸರಕಾರದ ಎಲ್ಲ ತನಿಖಾ ಸಂಸ್ಥೆಗಳನ್ನೂ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಸಾಂಸ್ಕೃತಿಕ ಚಹರೆಗಳೆಲ್ಲವನ್ನೂ ವಿರೂಪಗೊಳಿಸಲಾಗುತ್ತಿದೆ. ಕರ್ನಾಟಕದಲ್ಲಿ ಇತ್ತೀಚಿನ ಕೆಲವು ಉದಾಹರಣೆಗಳನ್ನು ಗಮನಿಸಿದರೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಿಂದಿಕ್ಕಿ ಹಿಂದುತ್ವ ದೇಶವನ್ನಾಗಿಸುವ ಪ್ರಯೋಗಶಾಲೆಯಾಗಿ ಬಳಕೆಯಾಗುತ್ತಿದೆ ಎಂಬುದನ್ನು ಗುರುತಿಸಬಹುದಾಗಿದೆ.

ಅಲ್ಪಸಂಖ್ಯಾತರನ್ನು ಪ್ರತ್ಯೇಕಗೊಳಿಸುವ ಗುಪ್ತ ಕಾರ್ಯಸೂಚಿಯ ಕಾರ್ಯವಿಧಾನವಾದ ಸಿ.ಎ.ಎ., ಎನ್.ಆರ್.ಸಿ. ಪ್ರತಿಭಟನೆಯ ಸಂದರ್ಭದಲ್ಲಿ ನಾಟಕ ಪ್ರದರ್ಶನ ಮಾಡಿಸಿದರೆಂದು ಶಿಕ್ಷಕಿ ಮತ್ತು ಮಗುವಿನ ತಾಯಿಯನ್ನು ಬಂಧಿಸಿದ ಘಟನೆ ನಡೆಯಿತು. ಕೊನೆಗೆ ಆರೋಪ ಸಾಬೀತುಪಡಿಸದೇ ಮುಖಭಂಗ ಅನುಭವಿಸಿದ ಪ್ರಕರಣ, ಕವನ ಬರೆದ ಕವಿಯ ಮೇಲೆ ಹೂಡಿದ ಮೊಕದ್ದಮೆಗಳು ಕೆಲವು ಉದಾಹರಣೆಗಳು.

ಕರ್ನಾಟಕದ ಎಲ್ಲ ಅಕಾಡೆಮಿಗಳು ಮತ್ತು ನಿಗಮ ಮಂಡಳಿಗಳಲ್ಲಿ ಆರ್.ಎಸ್.ಎಸ್. ನ ಅನುಯಾಯಿಗಳನ್ನು ತುಂಬಲಾಗಿದೆ.  ಕನ್ನಡ ಸಾಹಿತ್ಯ ಪರಿಷತ್‌ ನಂಥಹ ಸ್ವಾಯತ್ತ ಸಂಸ್ಥೆಗಳಲ್ಲಿಯೂ ಸಂಘೀ ರಾಜಕೀಯವನ್ನು ಬೆರೆಸಿರುವುದು ಮತ್ತಷ್ಟು ದೃಷ್ಟಾಂತಗಳು.

ರಂಗಭೂಮಿಯನ್ನೂ ಕೋಮುವಾದೀಕರಣಗೊಳಿಸುವ ಕೆಲಸ ರಾಜಾರೋಷವಾಗಿಯೇ ನಡೆದಿದೆ. ಮೈಸೂರು ರಂಗಾಯಣದ ನಿರ್ದೇಶಕರು ತಾನೊಬ್ಬ ಆರ್.ಎಸ್.ಎಸ್. ಕಾರ್ಯಕರ್ತ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಬಹುರೂಪಿಯಂಥಹ ಉತ್ತಮ ಸಾಂಸ್ಕೃತಿಕ ಹಬ್ಬವನ್ನೂ ಕೋಮುವಾದಿ, ಭಾಷಣ ಚತುರ, ಚಕ್ರವರ್ತಿ ಸೂಲಿಬೆಲೆಯಂಥವರನ್ನು ಆಹ್ವಾನಿಸಿ, ಅದನ್ನು ವಿರೋಧಿಸಿದವರನ್ನೆಲ್ಲ ಮಾವೋವಾದಿಗಳೆಂದು ದೂಷಿಸಿದ್ದಾರೆ. ರಂಗಾಯಣ ಉಳಿಸಿ ಹೆಸರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ನಾವು ಅದನ್ನು ಬೆಂಬಲಿಸುತ್ತೇವೆ.

ಗಂಗಾವತಿ ತಾಲುಕಿನ ಆನೆಗೊಂದಿಯಲ್ಲಿ ಆಂಜನೇಯ ಹುಟ್ಟಿದ ಸ್ಥಳವೆಂದು ಪ್ರತೀತಿ ಪಡೆದಿರುವುದು ಅಂಜನಾದ್ರಿ ಬೆಟ್ಟ. ಇಲ್ಲೀಗ ಹನುಮ ಮಾಲೆಯ ಹೆಸರಿನ ಆಚರಣೆಯೊಂದು ಪ್ರಖ್ಯಾತವಾಗುತ್ತಿದೆ. ಇಲ್ಲಿ ತಳ ಸಮುದಾಯದ ಯುವಕರನ್ನು ಮತಿಭ್ರಮಣೆಗೊಳಿಸಲಾಗುತ್ತಿದೆ. ದೊಡ್ಡ ಸಂಖ್ಯೆಯಲ್ಲಿ ಯುವಕರು ಅಲ್ಲಿ ಪಾಲ್ಗೊಳ್ಳುತ್ತಿರುವುದು ಇದಕ್ಕೆ ಒಂದು ಉದಾಹರಣೆಯಾಗಿದೆ.

ಜನರ ಆರ್ಥಿಕ ಸಂಕಷ್ಟಗಳು ಹೆಚ್ಚಿದಂತೆಲ್ಲ ಅವರ ತಲೆಗೆ ದೈವಭಕ್ತಿಯ ಅಫೀಮು ತುಂಬಿಸುವ ಕೆಲಸವನ್ನು ಯೋಜನಾಬದ್ಧವಾಗಿ ಮಾಡಲಾಗುತ್ತಿದೆ. ದತ್ತ ಮಾಲೆ, ಶಿವಮಾಲೆ, ಓಂ ಶಕ್ತಿ, ಅಯ್ಯಪ್ಪ ಮಾಲೆಗಳು ಜನರನ್ನು ಭ್ರಾಮಕ ಲೋಕಕ್ಕೆ ಸೆಳೆಯುತ್ತಿವೆ.

ಅಂಚಿಗೆ ತಳ್ಳಲ್ಪಟ್ಟ ಸಮುದಾಯದ ಮನಸ್ಸುಗಳನ್ನೂ ಕೋಮುಗ್ರಸ್ತಗೊಳಿಸುವ ಕೆಲಸ ಮಾಡುತ್ತಲೇ, ಆದಿವಾಸಿ ಬುಡಕಟ್ಟು ಸಮುದಾಯಗಳ ಭಾಷೆ ಸಂಸ್ಕೃತಿಗಳನ್ನು ನಾಶ ಮಾಡುತ್ತಲೂ ಇದ್ದಾರೆ. ದಸರಾ ಸಂದರ್ಭದಲ್ಲಿ ತ್ರಿಶೂಲ ದೀಕ್ಷೆಯನ್ನು ಹೀಗೆ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ಯುವಕರಿಗೆ ಕೊಟ್ಟು ಅದನ್ನು ವೈರಲ್ ಮಾಡಿದರು. ಕೊರಗ ಸಮುದಾಯದ ವಿವಾಹ ಸಂಭ್ರಮಕ್ಕೆ ನುಗ್ಗಿ ಮನ ಬಂದಂತೆ ಪೊಲೀಸರು ಥಳಿಸಿದರು. ಇವು ಕೇವಲ ಘಟನೆಗಳಲ್ಲ, ಬದಲಿಗೆ ಏಕ ಸಂಸ್ಕೃತಿಯ ಹೇರುವಿಕೆಯ ಭಾಗವಾಗಿರುವ ಸಾಂಸ್ಕೃತಿಕ ರಾಷ್ಟ್ರೀಯತೆಯ ಸಂಚಾಗಿಯೇ ನೋಡಬೇಕು.

ಆರ್ಥಿಕ ಬೇಡಿಕೆಗಳಿಗೆ ಎಡ ಸಿದ್ದಾಂತದ ಸಂಘಟನೆಗಳನ್ನು ದುಡಿಯುವ ಜನ ಅವಲಂಭಿಸುತ್ತಾರೆ. ಅದೇ ಜನ ಸಮೂಹವನ್ನು ತನ್ನ ಕುಟಿಲ ಸಾಂಸ್ಕೃತಿಕ ರಾಜಕಾರಣಗಳ ಮೂಲಕ ಆರ್.ಎಸ್.ಎಸ್. ತನ್ನ ವಶಕ್ಕೆ ತೆಗೆದುಕೊಳ್ಳುತ್ತಿದೆ. ಮಧ್ಯಮ ವರ್ಗ ಅವರ ಈ ಕುಟಿಲ ಕಾರಸ್ಥಾನದ ವಾಹಕರು ಹಾಗೂ ಕಾರ್ಮಿಕ ವರ್ಗ ಅದರ ವಾಹನಗಳಾಗಿ ಬಳಸಲ್ಪಡುತ್ತಿದ್ದಾರೆ. ಪ್ರಭುತ್ವದ ಆಲೋಚನಾ ಕ್ರಮವನ್ನು ಜನರೊಳಗೆ ಇಳಿಸಲು ಇವರೊಂದು ಸಮರ್ಥ ಮಾಧ್ಯಮವಾಗಿ ಕಾರ್ಯ ನಿರ್ವಹಿಸುತ್ತಾರೆ. ಹಾಗಾಗಿಯೇ ನಮ್ಮ ಲಕ್ಷ್ಯ ಕೇವಲ ಆರ್ಥಿಕ ಬೇಡಿಕೆಗಳಿಗೆ ಸೀಮಿತವಾಗದೇ, ಮುಂದಿನ ತಲೆಮಾರನ್ನು ಆರ್.ಎಸ್.ಎಸ್. ಸಿದ್ದಾಂತಕ್ಕೆ ಬಲಿಯಾಗದೇ ಇರುವಂತೆ ಸಾಂಸ್ಕೃತಿಕ ಮಧ್ಯಪ್ರವೇಶದ ಮೂಲಕ ತಡೆ ಹಿಡಿಯುವುದು ಆಗಬೇಕು. ಬಾಲಸಂಘಗಳ ಪ್ರಾಮುಖ್ಯತೆಯನ್ನೂ ಸಾಂಸ್ಕೃತಿಕ ಮಧ್ಯಪ್ರವೇಶದ ಭಾಗವಾಗಿಯೇ ಗುರುತಿಸಬೇಕು.

ಸಂಸ್ಕೃತಿ ಎಂಬುದು ಜನ ಜೀವನದ ಭಾಗವಾಗಿರುವಾಗ ನೆಲಮೂಲದ ಕೂಡಿ ಬಾಳುವ ಸಂಸ್ಕೃತಿಯನ್ನು ಹಾಳುಗೆಡಹಿ ಒಂದು ದೇಶ ಒಂದು ಸಂಸ್ಕೃತಿಯೆಂಬ ವಾದವನ್ನು ಹರಿಬಿಡಲಾಗುತ್ತಿದೆ. ಜನರಲ್ಲಿ ದ್ವೇಷ, ಹಿಂಸೆಗಳನ್ನು ತುಂಬುವ ಕೆಲಸ ಯಾವ ಎಗ್ಗು ಸಿಗ್ಗಿಲ್ಲದೇ ನಡೆಯುತ್ತಿದೆ. ಜನರ ಆಹಾರದ ಸಂಸ್ಕೃತಿಯ ಮೇಲೆ ಹಲ್ಲೆ, ಯುವ ಜನರ ಆಯ್ಕೆ ಹಕ್ಕುಗಳ ಮೇಲೆ ಹಲ್ಲೆ, ಜನರ ಧಾರ್ಮಿಕ ಆಯ್ಕೆಗಳ ಮೇಲೆ ಧಾಳಿ ಇವು ನೇರವಾದ ಸಾಂಸ್ಕೃತಿಕ ರಾಜಕಾರಣಗಳಾಗಿದ್ದು ಸಶಕ್ತ ಸಾಂಸ್ಕೃತಿಕ ಮಧ್ಯಪ್ರವೇಶವಷ್ಟೇ ಇದಕ್ಕೆ ಉತ್ತರವಾಗಬಲ್ಲುದು. ಇತ್ತೀಚಿನ ಮತಾಂತರ ನಿಷೇಧ ಕಾಯ್ದೆ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರ ಘರ್ ವಾಪಸೀ ಹೆಸರಿನ ನಗೆಪಾಟಲಾದ ಹೇಳಿಕೆಗಳು ಬಿ.ಜೆ.ಪಿ ಮತ್ತದರ ದ್ವೇಷಧರ್ಮ ಪ್ರಚಾರಕ್ಕೆ ನೇರ ಉದಾಹರಣೆಗಳಾಗಿವೆ.

ಕೂಡುಸಂಸ್ಕೃತಿಯನ್ನು ಗೌರವಿಸುವ ರಾಜ್ಯದ ಎಲ್ಲ ಜನರೂ ನಾಡಿನ ಮೂಲಸೆಲೆಯಾದ ಸಹಬಾಳ್ವೆಯ ಸಾಮರಸ್ಯದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಲು ಪಣತೊಡಬೇಕೆಂದು 23ನೇ ರಾಜ್ಯ ಸಿಪಿ.ಐ.(ಎಂ.) ಸಮ್ಮೇಳನವು ಕರೆ ನೀಡುತ್ತದೆ. ಮತ್ತು ಸರಕಾರವೊಂದಕ್ಕೆ ಇರಬೇಕಾದ ಕನಿಷ್ಟ ರಾಜನೀತಿಯನ್ನು ಪಾಲಿಸಬೇಕೆಂದು ಒತ್ತಾಯಿಸುತ್ತದೆ.

Leave a Reply

Your email address will not be published. Required fields are marked *