ಪ್ರಧಾನ ಮಂತ್ರಿಗಳು ತಕ್ಷಣ ಮದ್ಯ ಪ್ರವೇಶಿಸಿ, ಸಂಬಂಧಿಸಿದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ ನದಿ ನೀರಿನ ವಿವಾದ ಪರಿಹರಿಸಿ

ಕರ್ನಾಟಕ ರಾಜ್ಯದ ಬೆಂಗಳೂರು ಹಾಗೂ ಹುಬ್ಬಳ್ಳಿ- ಧಾರವಾಡದ ಅವಳಿ ನಗರಗಳ ಕುಡಿಯುವ ನೀರಿಗಾಗಿ ಮತ್ತು ವಿದ್ಯುತ್ ಉತ್ಪಾದನೆಯ ಸಮಸ್ಯೆಯ ಪರಿಹಾರಕ್ಕಾಗಿ ಕರ್ನಾಟಕ ಸರಕಾರ ಕಳಸಾ – ಬಂಡೋರಿ ಹಾಗೂ ಮೇಕೆದಾಟು ಯೋಜನೆ ರೂಪಿಸಿರುವುದೇನು ಸರಿಯೇ, ಆದರೇ, ಆ ಯೋಜನೆಗಳ ಜಾರಿಗೆ ಸಂಬಂಧಿಸಿ ಮಹದಾಯಿ ಹಾಗೂ ಕಾವೇರಿ ನದಿ ಪ್ರದೇಶದ ರಾಜ್ಯಗಳು ಎತ್ತಿರುವ ತಕರಾರುಗಳಿಗೆ ಪರಿಹಾರ ಹುಡುಕದೇ ಅವುಗಳು ಜಾರಿಯಾಗುವ ಸಂಭವಗಳಿಲ್ಲ. ಅಂತಹ ಪರಿಹಾರವೂ ಬೇಗನೆ ದೊರೆಯಬೇಕೆಂದರೆ ಅನ್ಯ ಕ್ರಮಗಳಿಗಿಂತ ರಾಜಕೀಯ ಪರಿಹಾರದ ಕ್ರಮಕ್ಕೆ ಮುಂದಾಗುವುದು ಸೂಕ್ತವಾಗಿದೆ. ಆದ್ದರಿಂದ, ತಕ್ಷಣವೇ ಪ್ರಧಾನ ಮಂತ್ರಿಗಳು, ಮಧ್ಯ ಪ್ರವೇಶಿಸಿ ಮಹದಾಯಿ ಹಾಗೂ ಕಾವೇರಿ ನೀರು ಬಳಕೆಯ ವಿಚಾರದಲ್ಲಿ ಸಂಬಂದಿಸಿದ ರಾಜ್ಯಗಳ ಮುಖ್ಯ ಮಂತ್ರಿಗಳ ಸಭೆ ನಡೆಸಿ ಈ ಸಮಸ್ಯೆಯ ಇತ್ಯರ್ಥಕ್ಕೆ ರಾಜಕೀಯ ಪರಿಹಾರದ ಕ್ರಮವಹಿಸಲು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಒತ್ತಾಯಿಸುತ್ತದೆ.

ಒಕ್ಕೂಟ ಸರಕಾರ ಈ ಕುರಿತಂತೆ ಕ್ರಮವಹಿಸದೇ ಇರುವುದರಿಂದ ಜಲವಿವಾದಗಳು ದೀರ್ಘ ಕಾಲ ವಿವಾದಗಳಾಗಿಯೇ ಉಳಿಯುವಂತಾಗಿದೆ. ಈ ಕುರಿತಂತೆ ಉದಾಸೀನ ಸಲ್ಲದಾಗಿದೆಯೆಂದು ಸಿಪಿಐ(ಎಂ) ಒಕ್ಕೂಟ ಸರಕಾರದ ಕ್ರಮವನ್ನು ಖಂಡಿಸಿದೆ.

ಅಂತರರಾಜ್ಯ ವಿವಾದಗಳು ಉದ್ಭವಿಸಿದ ಕೂಡಲೇ ಅದನ್ನು ವಿಳಂಬವಿಲ್ಲದೆ ಸಮ್ಮತ ಪರಿಹಾರ ಕಂಡುಕೊಳ್ಳಲು ಸರ್ವ ಪ್ರಯತ್ನ ಮಾಡುವುದು, ಪರಸ್ಪರ ದ್ವೇಷ ಬೆಳೆಯದಂತೆ ನೋಡಿಕೊಳ್ಳುವುದು  ಒಕ್ಕೂಟ ಸರ್ಕಾರದ ಹೊಣೆಗಾರಿಕೆಯಾಗಿದೆ.

ಕರ್ನಾಟಕ ರಾಜ್ಯ ಸರಕಾರವೂ ಈ ದಿಶೆಯಲ್ಲಿ ಒಕ್ಕೂಟ ಸರಕಾರದ ಮೇಲೆ ಅಗತ್ಯ ಒತ್ತಡವನ್ನು ಹಾಕಬೇಕು, ತಾನಾಗಿಯೇ ಪರಿಹಾರ ಸಿಗಲಿ ಎಂದು ಕಾದು ಕುಳಿತುಕೊಳ್ಳುವ ನೀತಿಯು, ಜನವಿರೋಧಿ ನೀತಿಯಾಗುತ್ತದೆ. ವಿವಾದಗಳನ್ನು ಸ್ವಾರ್ಥದ ರಾಜಕೀಯಕ್ಕೆ ಬಳಸಿಕೊಳ್ಳುವ ದುರುದ್ದೇಶದಿಂದ ಅದನ್ನು ಬೆಳೆಯಬಿಡಲಾಗುತ್ತದೆ ಎಂದು ಸಿಪಿಐ(ಎಂ) ಠೀಕಿಸಿದೆ.

ಇಂತಹ ಉದಾಸೀನ ಹಾಗೂ ಜನ ವಿರೋಧಿ ನಿಲುಮೆಗಳು, ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ನೀತಿಗಳ ಭಾಗವಾಗಿವೆ ಎಂದಿದೆ. ಎಲ್ಲ ಸಾರ್ವಜನಿಕ ರಂಗದ ಕುಡಿಯುವ ಹಾಗೂ ನೀರಾವರಿ ಯೋಜನೆಗಳನ್ನು ಮತ್ತು ಸಾರ್ವಜನಿಕ ರಂಗದ ವಿದ್ಯುತ್ ಉತ್ಪಾದನೆಯನ್ನು ಖಾಸಗೀಕರಣಕ್ಕೆ ಒಳಪಡಿಸುವ ದುರುದ್ದೇಶ ಹೊಂದಿರುವುದರಿಂದ, ಇಂತಹ ಸಾರ್ವಜನಿಕ ರಂಗದ ಕೆಲಸಗಳು ನೆನೆಗುದಿಗೆ ಬೀಳುವಂತಾಗಿವೆ ಎಂದು ಸಿಪಿಐ(ಎಂ) ವಿವರಿಸಿದೆ. ಇಂತಹ ಖಾಸಗೀಕರಣದ ಯೋಚನೆ/ ಯೋಜನೆಗಳನ್ನು ಒಕ್ಕೂಟ ಹಾಗು ರಾಜ್ಯ ಸರಕಾರಗಳು ಕೈಬಿಟ್ಟು ಸಾರ್ವಜನಿಕ ರಂಗದ ಯೋಜನೆಗಳು ರೂಪುಗೊಳ್ಳಲು ಅಗತ್ಯ ರಾಜಕೀಯ ಪರಿಹಾರ ಹುಡುಕುವಂತೆ ಒತ್ತಾಯಿಸಿದೆ.

ಸರಕಾರಗಳ ಇಂತಹ ಜನ ವಿರೋದಿ ನಿಲುಮೆಗಳಿಂದಾಗಿ ಕಳಸಾ- ಬಂಡೋರಿ ನಾಲಾ ಹಾಗೂ ಮೇಕೆದಾಟು ಯೋಜನೆಗಳು ದಶಕಗಳಿಂದ ನೆನೆಗುದಿಗೆ ಬೀಳುವಂತಾಗಿವೆ.ಇದರಿಂದಾಗಿ ಹಲವು ದಶಕಗಟ್ಟಲೆ ಕುಡಿವ ನೀರು ಇಲ್ಲದೆ ಜನರು ಒದ್ದಾಡಿ ಸಂಕಟಪಡುವಂತಾದರೇ. ನೀರಾವರಿ, ವಿದ್ಯುತ್‌ಗಳ ಮೂಲಕ ದೇಶದ ಕೃಷಿ, ಕೈಗಾರಿಕೆಯ ಬೆಳವಣಿಗೆಗೆ ನೆರವಾಗಬಹುದಾದ ರಾಷ್ಟ್ರೀಯ ಸಂಪತ್ತು ವ್ಯರ್ಥವಾಗುತ್ತದೆ.

ಇವುಗಳ ಕುರಿತಂತೆ ಮಹದಾಯಿ ವಿಚಾರದಲ್ಲಿ ಮಹಾರಾಷ್ಟ್ರ ಹಾಗೂ ಗೋವಾ ಸರಕಾರಗಳ ಜೊತೆ ಮತ್ತು ಮೇಕೆದಾಟು ವಿಚಾರದಲ್ಲಿ ತಮಿಳ್ನಾಡು ರಾಜ್ಯದ ಜೊತೆಯಲ್ಲಿ ಅವರಿಗಿರುವ ಆತಂಕಗಳಿಗೆ ಸಂಬಂದಿಸಿ ಸೂಕ್ತ ಪರಿಹಾರಗಳನ್ನು  ಕಂಡು ಕೊಳ್ಳಲು ಒಕ್ಕೂಟ ಸರಕಾರದ ನೇತೃತ್ವದಲ್ಲಿ ನಡೆಸಲಾಗುವ ಈ ಜಂಟಿ ಸಭೆಗಳು ಅಗತ್ಯ ಕ್ರಮವಹಿಸದೇ, ರಾಜ್ಯದ ನೀರಿನ ಮತ್ತು ವಿದ್ಯುತ್ ಸಮಸ್ಯೆಗಳಿಗೆ ನೈಜ ಪರಿಹಾರವಿಲ್ಲವಾಗಿದೆ ಎಂದು ಸಿಪಿಐ(ಎಂ) ಹೇಳಿದೆ.

ಕರ್ನಾಟಕದ ಎಲ್ಲ ಸಂಸದರು ಪಕ್ಷ ಭೇದ ಮರೆತು ಇವುಗಳ ಇತ್ಯರ್ಥಕ್ಕೆ ಒಕ್ಕೂಟ ಸರಕಾರ ಮತ್ತು ಪ್ರಧಾನ ಮಂತ್ರಿಗಳು ಮದ್ಯ ಪ್ರವೇಶಿಸುವಂತೆ ಒತ್ತಾಯಿಸಬೇಕೆಂದು ಸಿಪಿಐ(ಎಂ) ಕರೆ ನೀಡಿದೆ.

ಯು. ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *