ಸಿಪಿಐ(ಎಂ) 23ನೇ ಮಹಾಧಿವೇಶನ: ಎಪ್ರಿಲ್ 6-10, 2022

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)ನ 23ನೇ ಮಹಾಧಿವೇಶನವನ್ನು ಕೇರಳದ ಕಣ್ಣೂರಿನಲ್ಲಿ ನಡೆಸಲು ಈ ಹಿಂದೆ ಕೇಂದ್ರ ಸಮಿತಿ ನಿರ್ಧರಿಸಿದ್ದು, ಜನವರಿ 7 ರಿಂದ 9 ರ ವರೆಗೆ ಹೈದರಾಬಾದಿನಲ್ಲಿ ನಡೆದ ಕೇಂದ್ರ ಸಮಿತಿಯ ಸಭೆ ಮಹಾಧಿವೇಶನವನ್ನು ಎಪ್ರಿಲ್ 6ರಿಂದ 10  ವರೆಗೆ ನಡೆಸಲು ನಿರ್ಧರಿಸಿದೆ. ಸಭೆಯ ನಂತರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಪ್ರಕಟಿಸಿದ್ದಾರೆ.

ಈ ಸಭೆಯಲ್ಲಿ ಕೇಂದ್ರ ಸಮಿತಿ ಮಹಾಧಿವೇಶನದ ಮುಂದೆ ಇಡಲಿರುವ ಕರಡು ರಾಜಕೀಯ ನಿರ್ಣಯದ ಕುರಿತು ಚರ್ಚೆ ನಡೆಸಿ  ಸರ್ವಾನುಮತದಿಂದ ಅಂಗೀಕರಿಸಿತು. ಚರ್ಚೆ ಮತ್ತು ಕೇಂದ್ರ ಸಮಿತಿ ಸದಸ್ಯರು ಸೂಚಿಸಿದ ನಿರ್ದಿಷ್ಟ ತಿದ್ದುಪಡಿಗಳ ಆಧಾರದಲ್ಲಿ ಕರಡನ್ನು ಅಂತಿಮಗೊಳಿಸಲು ಪೊಲಿಟ್‌ ಬ್ಯುರೊಗೇ ಸಭೆಗೆ ಅಧಿಕಾರ ನೀಡಿತು.

ಈ ವಿಷಯದಲ್ಲಿ ಟಿಪ್ಪಣಿ ಮಾಡುತ್ತ, ಸಿಪಿಐ(ಎಂ) ಒಂದು ಚೈತನ್ಯಪೂರ್ಣ ಆಂತರಿಕ ಪ್ರಜಾಪ್ರಭುತ್ವವನ್ನು ಅನುಸರಿಸುತ್ತದೆ ಎಂದು ಯೆಚುರಿ ನೆನಪಿಸಿದರು. ಪಕ್ಷದ ಸಂವಿಧಾನದ ಪ್ರಕಾರ ಕರಡು ರಾಜಕೀಯ ನಿರ್ಣಯವನ್ನು ಮಹಾಧಿವೇಶನ ಕರೆಯುವ ಎರಡು ತಿಂಗಳ ಮೊದಲು ಪಕ್ಷದ ಸದಸ್ಯರ ನಡುವೆ ವ್ಯಾಪಕ ಚರ್ಚೆಗೆ ಬಿಡುಗಡೆ ಮಾಡಬೇಕು. ಅದರ ಪ್ರಕಾರ ಫೆಬ್ರುವರಿ 2022ರ ಆರಂಭದಲ್ಲಿ ಇದನ್ನು ಬಿಡುಗಡೆ ಮಾಡಲಾಗುವುದು ಎಂದು ಯೆಚುರಿ ಹೇಳಿದರು. ಪಕ್ಷದ ಪ್ರತ್ರಿಯೊಬ್ಬ ಸದಸ್ಯರು ನಿರ್ದಿಷ್ಟ ತಿದ್ದುಪಡಿಗಳನ್ನು ಮತ್ತು ಸೂಚನೆಗಳನ್ನು ನೇರವಾಗಿ ಕೇಂದ್ರ ಸಮಿತಿಗೆ ಕಳಿಸಬಹುದಾಗಿದೆ. ಇವನ್ನೆಲ್ಲ ಕಲೆಹಾಕಿ ಮಹಾಧಿವೇಶನ-ಪೂರ್ವ ತಿದ್ದುಪಡಿಗಳನ್ನು ಕುರಿತ ಒಂದು ವರದಿಯನ್ನು ಕರಡು ನಿರ್ಣಯದ ಜತೆಗೆ ಮಹಾಧಿವೇಶನದಲ್ಲಿ ಮಂಡಿಸಲಾಗುವುದು.

ಮುಂಬರುವ ಚುನಾವಣೆಗಳು: ಬಿಜೆಪಿಯನ್ನು ಸೋಲಿಸುವುದು ಪ್ರಥಮ ಗುರಿ

ಈ ನಡುವೆ ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ವಿಧಾನಸಭೆಗಳಿಗೆ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿರುವ  ಬಗ್ಗೆ ಮಾತಾಡುತ್ತ, ಈ ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸುವುದು ಪ್ರಥಮ ಗುರಿ ಎಂದು ಯೆಚುರಿ ಹೇಳಿದರು. ಈ ರಾಜ್ಯಗಳಲ್ಲಿ ಬಿಜೆಪಿ-ವಿರೋಧಿ ಮತಗಳನ್ನು ಗರಿಷ್ಟ ಪ್ರಮಾಣದಲ್ಲಿ ಕ್ರೊಢೀಕರಿಸಲು ಸೂಕ್ತ ಕಾರ್ಯತಂತ್ರಗಳನ್ನು ಸಿಪಿಐ(ಎಂ) ಅಂಗೀಕರಿಸುತ್ತದೆ ಎಂದು ಅವರು ಹೇಳಿದರು. ಬಿಜೆಪಿಯನ್ನು ಸೋಲಿಸುವುದಕ್ಕೂ ಮತ್ತು ಜನಸಾಮಾನ್ಯರ ಬದುಕನ್ನು ಉತ್ತಮಪಡಿಸುವುದಕ್ಕೂ, ಸಂವಿಧಾನಿಕ ವ್ಯವಸ್ಥೆಯನ್ನು ಕಾಯ್ದುಕೊಳ್ಳುವುದಕ್ಕೂ ಅವಿಚ್ಛಿನ್ನ ಸಂಬಂಧವಿದೆ ಎಂದು ಅವರು ವಿವರಿಸಿದರು.

ಮೋದಿ ಸರಕಾರ ಅನುಸರಿಸುತ್ತಿರುವ ಆರ್ಥಿಕ ಧೋರಣೆಗಳಿಂದ ಜನರು ಹೆಚ್ಚೆಚ್ಚು ಅಸಂತೃಪ್ತರಾಗಿದ್ದಾರೆ. ಜನಗಳ ಜೀವ ಮತ್ತು ಜೀನಾಧಾರಗಳನ್ನು ರಕ್ಷಿಸುವಲ್ಲಿ ಕೇಂದ್ರ ಸರಕಾರದ ಸಂಪೂರ್ಣ ವಿಫಲತೆ ಕೋವಿಡ್ ಘಟ್ಟದಲ್ಲಿ ಎದ್ದು ಕಂಡಿದೆ ಎಂದ ಯೆಚುರಿಯವರು ಸರಕಾರದ ಲಸಿಕೆ ಧೋರಣೆ ಅತಾರ್ಕಿಕವಾಗಿದೆ ಎಂದು ದೂಷಿಸಿದರು.

ಕೇಂದ್ರ ಸರಕಾರ ಕಳೆದ ಏಳು ವರ್ಷಗಳಲ್ಲಿ ಪೆಟ್ರೋ-ಉತ್ಪನ್ನಗಳ ಮಾರಾಟದ ಮೂಲಕ ಸಂಗ್ರಹಿಸಿದ ಪರೋಕ್ಷ ತೆರಿಗೆಗಳು ಮತ್ತು ಸಬ್ಸಿಡಿಗಳ ಮೇಲೆ ಮಾಡಿದ ವೆಚ್ಚಗಳನ್ನು ಕುರಿತಂತೆ ಒಂದು ಶ್ವೇತಪತ್ರವನ್ನು ಪ್ರಕಟಿಸಬೇಕು ಎಂದು ಯೆಚುರಿ ಆಗ್ರಹಿಸಿದರು.

ಮೋದಿ ಆಳ್ವಿಕೆಯ ನಿರ್ಲಕ್ಷ್ಯಪೂರ್ಣ ಧೋರಣೆಗಳಿಂದಾಗಿ ಬಡತನ, ನಿರುದ್ಯೋಗ ಮತ್ತು ಹಸಿವು ಸ್ವಾತಂತ್ರ್ಯದ 75 ವರ್ಷಗಳಲ್ಲಿ ಹಿಂದೆಂದೂ ಕಾಣದ ಮಟ್ಟವನ್ನು ತಲುಪಿವೆ ಎಂದು ಅವರು ಹೇಳಿದರು.

ಚುನಾವಣೆಯಲ್ಲಿ ಹಣದ ಪಾತ್ರವನ್ನು ಚುನಾವಣಾ ಆಯೋಗ ನಿಯಂತ್ರಿಸಬೇಕು

ಈ ಚುನಾವಣೆಗಳನ್ನು ನಡೆಸುವಾಗ ಚುನಾವಣಾ ಆಯೋಗ ತನ್ನ ಸಂವಿಧಾನಿಕ ಅಧಿಕಾರಗಳನ್ನು ಚಲಾಯಿಸಬೇಕು, ತನ್ನ ಹಕ್ಕನ್ನು ಎತ್ತಿ ಹಿಡಿಯಬೇಕು ಎಂದು ಯೆಚುರಿ ಆಯೋಗಕ್ಕೆ ಕರೆ ನೀಡಿದರು. ಪ್ರಸಕ್ತ ವ್ಯವಸ್ಥೆ ನೀತಿ ಸಂಹಿತೆಯ ಉಲ್ಲಂಘನೆಗಳನ್ನು ತಡೆಯುವಲ್ಲಿ ವಿಫಲವಾಗಿದೆಯಾದ್ದರಿಂದ ಚುನಾವಣಾ ಪ್ರಕ್ರಿಯೆಯನ್ನು ಸುಧಾರಿಸುವ ಅಗತ್ಯವಿದೆ. ಈ ಚುನಾವಣೆಗಳಲ್ಲಿ ಹಣದ ಪಾತ್ರವನ್ನು ನಿಯಂತ್ರಿಸಲು ಕ್ರಮಗಳನ್ನು ಅಯೋಗ ಯುದ್ದೋಪಾದಿಯಲ್ಲಿ ಕೈಗೊಳ್ಳಬೇಕಾಗಿದೆ.

ಬಿಜೆಪಿ ಅಸಂವಿಧಾನಿಕವಾಗಿ ಸ್ಥಾಪಿಸಿರುವ ಚುನಾವಣಾ ಬಾಂಡುಗಳ ಮೂಲಕ ಆಳುವ ಬಿಜೆಪಿ ಅಪಾರ ಸಂಪತ್ತನ್ನು ರಾಶಿ ಹಾಕಿದೆ ಎಂದು ನೆನಪಿಸಿದ ಯೆಚುರಿ, ಚುನಾವಣಾ ಬಾಂಡುಗಳ ಮೂಲಕ ಸಂಗ್ರಹವಾದ ರಾಜಕೀಯ ದೇಣಿಗೆಗಳಲ್ಲಿ 80% ಬಿಜೆಪಿಯ ಪಾಲಾಗಿದೆ ಎಂಬ ವರದಿಗಳನ್ನು ಉಲ್ಲೇಖಿಸುತ್ತ, ಇದರ ಸಹಾಯದಿಂದ ಅದಕ್ಕೆ ಹಣಬಲದ ಪ್ರಯೋಗದ ಮೂಲಕ ಚುನಾವಣಾ ಪ್ರಕ್ರಿಯೆಯನ್ನೇ ಬದಿಗೊತ್ತಲು ಸಾಧ್ಯವಾಗಿದೆ ಎಂದು ಅವರು ಹೇಳಿದರು. ಈ ಚುನಾವಣಾ ಬಾಂಡುಗಳ ಮೂಲಕ ಬಿಜೆಪಿ ರಾಜಕೀಯ ಭ್ರಷ್ಟಾಚಾರಕ್ಕೆ ಸಾಂಸ್ಥಿಕ ಸ್ವರೂಪವನ್ನು ಕೊಟ್ಟಿದೆ, ಅದನ್ನು ಕಾನೂನುಬದ್ಧಗೊಳಿಸಿದೆ ಎಂದು ಯೆಚುರಿ ಖೇದ ವ್ಯಕ್ತಪಡಿಸಿದರು.

ಪರ್ಯಾಯ ರಂಗ ಚುನಾವಣೆಗಳ ಮೊದಲು ಇಲ್ಲ

ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತ, ಸಾರ್ವತ್ರಿಕ ಚುನಾವಣೆಗಳ ಮೊದಲು ಒಂದು ಅಖಿಲ ಭಾರತ ಪರ್ಯಾಯ ರಂಗವನ್ನು ರಚಿಸುವ ಸಾಧ್ಯತೆ ಇಲ್ಲೆಂದು ಯೆಚುರಿ ಸ್ಪಷ್ಟೀಕರಿಸಿದರು. ಈ ಹಿಂದೆ ರಾಷ್ಟ್ರೀಯ ರಂಗವಾಗಲೀ, ಸಂಯುಕ್ತ ರಂಗವಾಗಲೀ, ಎನ್‌ಡಿಎ ಮತ್ತು ಯುಪಿಎಯಾಗಲೀ ಎಲ್ಲವೂ ಚುನಾವಣಾ ನಂತರದ ಸನ್ನಿವೇಶದಲ್ಲಿಯೇ ರಚನೆಗೊಂಡವು ಎಂದು ಪತ್ರಕರ್ತರಿಗೆ ಅವರು ನೆನಪಿಸಿದರು.

ಚುನಾವಣಾ ಹೊಂದಾಣಿಕೆಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತ, ಆಯಾಯ ರಾಜ್ಯದಲ್ಲಿ ಉಂಟಾಗುವ ಮೂರ್ತ ಸನ್ನಿವೇಶಕ್ಕೆ ಅನುಗುಣವಾಗಿ ಈ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.

ಬಿಜೆಪಿಯನ್ನು ಸೋಲಿಸುವುದನ್ನು ತನ್ನ ರಾಜಕೀಯ ಗುರಿಯಾಗಿ ಹೊಂದಿರುವ ಯಾವುದೇ ರಾಜಕೀಯ ಸಂರಚನೆಯನ್ನು ಪಕ್ಷ ಸ್ವಾಗತಿಸುವುದಾಗಿಯೂ ಯೆಚುರಿ ಹೇಳಿದರು. ಸಮಾಜವಾದಿ ಪಾರ್ಟಿ ಬಿಜೆಪಿಯನ್ನು ಸೋಲಿಸುವ ಸಾಮರ್ಥ್ಯ ಇರುವ ಒಂದು ಪಕ್ಷವಾದ್ದರಿಂದ ಉತ್ತರಪ್ರದೇಶದಲ್ಲಿ ಮುಂಬರುವ ಚುನಾವಣೆಗಳಲ್ಲಿ ಸಿಪಿಐ(ಎಂ) ಅದನ್ನು ಬೆಂಬಲಿಸುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಎಡಪಕ್ಷಗಳು ಸಮಾನ ನಿಲುವನ್ನು ರೂಪಿಸಲು ಸಮಾಲೋಚನೆಗಳು ನಡೆಯುತ್ತಿವೆ ಎಂದೂ ಅವರು ತಿಳಿಸಿದರು.

ಇನ್ನೊಂದು ಪ್ರಶ್ನೆಗೆ ಉತ್ತರ ನೀಡುತ್ತ, ಬಿಜೆಪಿ ಕುರಿತಂತೆ ತನ್ನ ನಿಲುವನ್ನು ಟಿಆರ್‌ಎಸ್ ಮುಖ್ಯಸ್ಥರು  ಪ್ರಕಟಪಡಿಸಬೇಕಾಗಿದೆ ಎಂದು ಯೆಚುರಿ ಹೇಳಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಿಪಿಐ(ಎಂ) ತೆಲಂಗಾಣ ರಾಜ್ಯ ಕಾರ್ಯದರ್ಶಿ ತಮ್ಮಿನೇನಿ ವೀರಭದ್ರಂ, ಇದುವರೆಗೆ ಬಿಜೆಪಿಯನ್ನು ಸೋಲಿಸಬೇಕೆಂಬ ಯಾವ ಕರೆಯೂ ಟಿಆರ್‌ಎಸ್ ಪಕ್ಷದಿಂದ ಬಂದಿಲ್ಲ ಎಂದರು. ಟಿಆರ್‌ಎಸ್ ಸರಕಾರ ಕೂಡ ಜನ-ವಿರೋಧಿ ನೀತಿಗಳನ್ನೇ ಅನುಸರಿಸುತ್ತದೆ, ಅವುಗಳ ವಿರುದ್ಧ ತೀವ್ರ ಹೋರಾಟ ನಡೆಯುತ್ತಿದೆ ಎಂದೂ ಅವರು ಹೇಳಿದರು.

Leave a Reply

Your email address will not be published. Required fields are marked *