ಚಂಪಾ: ರಾಜಿ ಇಲ್ಲದ ಬರಹಗಾರ, ರಾಜಿ ಇಲ್ಲದ ಹೋರಾಟಗಾರ

ಕಾವ್ಯವನ್ನು ಖಡ್ಗವಾಗಿಸಿದ ಅಪರೂಪದ ಕನ್ನಡ ಬರಹಗಾರರಲ್ಲಿ ಪ್ರಮುಖರಾದ ಚಂದ್ರಶೇಖರ ಪಾಟೀಲ ನಮ್ಮನ್ನು (2022 ಜನವರಿ 10) ಅಗಲಿದ್ದಾರೆ. ಯಾವ ಕಾಲಘಟ್ಟದಲ್ಲಿ ಅವರಂತಹ ದಿಟ್ಟ ಜನಪರ ಬರಹಗಾರರ ಅಗತ್ಯವಿತ್ತೋ ಅಂತಹ ಸಮಯದಲ್ಲಿ ಅವರು ಕಣ್ಮರೆಯಾಗಿರುವುದು ನಾಡಿಗಾದ ಭಾರೀ ದೊಡ್ಡ ನಷ್ಟವಾಗಿದೆ. ಇಂದಿರಾಗಾಂಧಿಯವರ ಸರ್ವಾಧಿಕಾರವನ್ನು ಅವರು ತಮ್ಮ ಕವನಗಳಲ್ಲಿ ಕಟುವಾಗಿ ಠೀಕಿಸಿದ್ದರು ಮತ್ತು ಅದಕ್ಕಾಗಿ ಜೈಲಿಗೂ ಹೋಗಿದ್ದರು. ದೇಶದಲ್ಲಿ ಇಂದು ಮತ್ತೆ ಭಯಾನಕವಾದ ಸರ್ವಾಧಿಕಾರ ತಲೆ ಎತ್ತುತ್ತಿದೆ. ಸಾಂವಿಧಾನಿಕ ಹಕ್ಕುಗಳಿಗೆ ಅಪಾಯದ ಲಕ್ಷಣಗಳು ಕಾಣತೊಡಗಿವೆ. ಬರಹಗಾರರು, ಸಾಹಿತಿಗಳು ಮೌನಕ್ಕೆ ಜಾರುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳು ಆಳುವವರ ಯಜಮಾನಿಕೆಗೆ ತಲೆ ಹಾಕುತ್ತಿದ್ದಾರೆ. ಪ್ರಶ್ನೆ ಮಾಡುವವರನ್ನು ಜೈಲಿಗಟ್ಟುತ್ತಿದ್ದಾರೆ. ನಾಡಿಗೆ ನಾಡೇ ಬಿಕೋ ಎನ್ನುವಂತೆ ಭಾಸವಾಗುತ್ತದೆ. ಇಂತಹ ಸಮಯದಲ್ಲಿ `ಚಂಪಾ’ ರವರ ನಿರ್ಗಮನ ಒಪ್ಪಲಾಗದ ಆಫಾತ.

ಪ್ರೊಫೆಸರ್ ಚಂದ್ರಶೇಖರ ಪಾಟೀಲ ಒಬ್ಬ ಲೋಹಿಯಾವಾದಿ. ಮಾರ್ಕ್ಸ್‌ವಾದ ಮತ್ತು ಲೋಹಿಯಾವಾದದ ನಡುವೆ ಗಂಭೀರ ಚರ್ಚೆ ನಡೆಯುತ್ತಿದ್ದ ಕಾಲವದು. ಪ್ರೊ. ಚಂಪಾ ತಮ್ಮ ನಿಲುಮೆಯನ್ನು ಎಂದೂ ಬದಲಾಯಿಸುತ್ತಿರಲಿಲ್ಲ. ಅವರ ಜತೆಯಲ್ಲಿ ಬಿಟ್ಟು ಬಿಡದ ಚರ್ಚೆಯಲ್ಲಿ ತೊಡಗುವವರು  ಮಾರ್ಕ್ಸ್‌ವಾದದ ವಿದ್ಯಾರ್ಥಿಗಳು, ವಿ.ಎನ್. ಹಳಕಟ್ಟೆ, ಸಿದ್ದನಗೌಡ ಪಾಟೀಲ, ಯಡೆಯೂರು ಮಹಾಬಲ ಮೊದಲಾದವರು ಎರಡೂ ವಿಚಾರಧಾರೆಯ ಈ ಎರಡೂ ತಂಡಗಳು ಆಳವಾದ ಅಧ್ಯಯನದೊಂದಿಗೆ ವಾದ ವಿವಾದಗಳಲ್ಲಿ ತೊಡಗುತ್ತಿದ್ದರು. ಯಾರೊಬ್ಬರು ಸೋಲನ್ನೊಪ್ಪುತ್ತಿರಲಿಲ್ಲ.

ಸಾಂಧರ್ಭಿಕ ವಾದ ಪ್ರತಿಪಾದಗಳು ನಡೆಯುತ್ತಿದ್ದರೂ ಎರಡೂ ಪಂಗಡಗಳ ನಡುವೆ ದ್ವೇಷ ಇರುತ್ತಿರಲಿಲ್ಲ. ಪ್ರೊ. ಚಂಪಾ ಏರ್ಪಡಿಸುತ್ತಿದ್ದ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಈ ಯುವ ಕಮ್ಯೂನಿಸ್ಟರು ಸಂಪೂರ್ಣ ಸಹಕಾರ ನೀಡುತ್ತಿದ್ದರು. ಡಾ. ದೇಶಪಾಂಡೆ, ಪ್ರೊ. ಕೃಷ್ಣಮೂರ್ತಿ ಮೊದಲಾದವರ ಮಾರ್ಗದರ್ಶನ ಈ ಯುವಕರಿಗೆ ಸಿಗುತಿತ್ತು. ತಾತ್ವಿಕ ಭಿನ್ನಾಭಿಪ್ರಾಯಗಳೇನೇ ಇರಲಿ, ಎಲ್ಲ ಜನಪರ ಚಿಂತನೆ ಮತ್ತು ಹೋರಾಟಗಳಲ್ಲಿ ಅವರು ಒಟ್ಟಿಗೆ ಇರುತ್ತಿದ್ದರು. ಚಂಪಾ ಅವರ ಮಾತುಗಳು, ಅವರ ಸಾಹಿತ್ಯ ಕೃತಿಗಳು ಅಂದಿನ ಧಾರವಾಡದ ವಿದ್ಯಾರ್ಥಿ ಸಮುದಾಯದ ಮೇಲೆ ಗಾಢವಾದ ಪ್ರಭಾವ ಬೀರುತಿತ್ತು. ಪರಸ್ಪರ ಅಭಿಪ್ರಾಯಗಳು ಎಷ್ಟೇ ಭಿನ್ನವಾಗಿದ್ದರೂ ಅವರ ನಡುವೆ ಪರಸ್ಪರ ಗೌರವ ಇರುತಿತ್ತು.

ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರವರ ಬಗ್ಗೆ ಅವರಿಗೆ ಅಪಾರ ಗೌರವವಿತ್ತು. ಮೊನಚಾದ ಭಾಷೆಯಲ್ಲಿ ಅವರು ಜಾತಿ ಪದ್ಧತಿಯನ್ನು, ಸಾಮಾಜಿಕ ಅಸ್ಪೃಶ್ಯತೆಯನ್ನು ಖಂಡಿಸುತ್ತಿದ್ದರು. ಹೀಗಾಗಿ ದಲಿತ ವಿದ್ಯಾರ್ಥಿಗಳ ದೊಡ್ಡ ಸಮೂಹ ಅವರನ್ನು ಬೆಂಬಲಿಸುತಿತ್ತು. ತಾನೊಂದು ಮೇಲ್ಜಾತಿಯಲ್ಲಿ ಹುಟ್ಟಿದರೂ ಅವರು ಮೇಲ್ಜಾತಿಯವರ ಢೋಂಗಿತನವನ್ನು ಖಂಡಿಸಲು ಹಿಂಜರಿಯುತ್ತಿರಲಿಲ್ಲ. ಅವರ ಸಾವಿನಿಂದ ನಾಡಿನ ಅಮೂಲ್ಯ ದನಿಯೊಂದು ಶಾಶ್ವತವಾಗಿ ಮೌನವಾಗಿದೆ. ಅವರ ಎಲ್ಲ ವಿಚಾರಗಳನ್ನು ಎಲ್ಲರೂ ಒಪ್ಪದಿರಬಹುದು. ಅವರು ತಮ್ಮ ಅಭಿಪ್ರಾಯವನ್ನು ಯಾರ ಮೇಲೂ ಹೇರುತ್ತಿರಲಿಲ್ಲ.

ಇನ್ನೊಂದು ಸರ್ವಾಧಿಕಾರ ತಲೆಎತ್ತುವ ಮುನ್ನ ನಾವು ಅದನ್ನು ಎದುರಿಸಲು ಸಜ್ಜಾಗಬೇಕಾಗಿದೆ. ಪಾಟೀಲರ ವೈಚಾರಿಕ ಸಂಘರ್ಷದ ದಾರಿಯನ್ನು ನಾವು ಉಳಿಸಿಕೊಳ್ಳಬೇಕಾಗಿದೆ.

Leave a Reply

Your email address will not be published. Required fields are marked *