ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ವಿಕೃತ ಮರು-ಬರವಣಿಗೆಯ ಹುನ್ನಾರ

ಪ್ರಕಾಶ್‌ ಕಾರಟ್‌

KaratA copy
ಪ್ರಕಾಶ್‌ ಕಾರಟ್‌

1863ರಲ್ಲಿ ಸ್ವಾಮಿ ವಿವೇಕಾನಂದ ಹಾಗೂ 1879ರಲ್ಲಿ ಜನಿಸಿದ ರಮಣ ಮಹರ್ಷಿ ಇವರಿಬ್ಬರೂ 1857ರ ಬಂಡಾಯಕ್ಕೆ ಸ್ಫೂರ್ತಿದಾತರು ಎಂಬ ತೀರಾ ಹಾಸ್ಯಾಸ್ಪದ ಹೇಳಿಕೆ ನೀಡಿರುವ ಕೇಂದ್ರ ವಾರ್ತೆ ಮತ್ತು ಪ್ರಸಾರ ಸಚಿವಾಲಯ ‘ಅನಾಮಿಕ ಸ್ವಾತಂತ್ರ್ಯ ಹೋರಾಟಗಾರರತ್ತ ಬೆಳಕು ಹರಿಸುವ ಉದ್ದೇಶದಿಂದ ಅಮೃತ ಮಹೋತ್ಸವ ಆಚರಣೆಗಳ್ನು ಆರಂಭಿಸಲಾಗಿದೆ’ ಎಂದು ಪ್ರಕಟಿಸಿರುವುದು, ವಾಸ್ತವವಾಗಿ, ಬ್ರಿಟಿಷರೊಂದಿಗೆ ಶಾಮೀಲಾಗಿದ್ದ ಆರ್‌ಎಸ್‌ಎಸ್/ಹಿಂದುತ್ವ ಶಕ್ತಿಗಳನ್ನು ಸ್ವಾತಂತ್ರ್ಯ ಸಂಗ್ರಾಮದ ‘ಹೀರೊ’ಗಳಂತೆ ಬಿಂಬಿಸುವ ಕಳ್ಳ ಮಾರ್ಗ. ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಪರಂಪರೆಯನ್ನು ಮುಂದೊಯ್ಯುತ್ತ ಎಲ್ಲ ಭಾರತೀಯರು ಹೆಚ್ಚು ಸಮಾನತೆ, ನ್ಯಾಯ ಮತ್ತು ಭಾರತೀಯ ಸಂವಿಧಾನ ಖಾತರಿಪಡಿಸಿರುವ ಭ್ರಾತೃತ್ವದತ್ತ ಮುಂದೆ ಸಾಗಬೇಕಾದರೆ ಭಾರತೀಯ ಗಣರಾಜ್ಯದ ಸ್ವರೂಪವನ್ನು ಬದಲಾಯಿಸುವ ಇಂತಹ ಕುಟಿಲ ಅಜೆಂಡಾವನ್ನು ಸೋಲಿಸಲೇಬೇಕು.

ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆ- ಆಝಾದೀ ಕಾ ಅಮೃತ ಮಹೋತ್ಸವ್ ಆಚರಣೆ ಸಂಬಂಧ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಕಟಣೆಯನ್ನು ಪ್ರೆಸ್ ಇನ್‌ಫರ್ಮೇಶನ್ ಬ್ಯೂರೋ (ಪಿಐಬಿ) ಜನವರಿ 11ರಂದು ಬಿಡುಗಡೆ ಮಾಡಿದೆ. ಬ್ರಿಟಷ್ ಆಡಳಿತದಿಂದ ಸ್ವಾತಂತ್ರ್ಯಕ್ಕಾಗಿ ಭಾರತದ ಜನರು ಮಾಡಿದ ಮಹಾನ್ ಹೋರಾಟದ ಇತಿಹಾಸವನ್ನು ವಿರೂಪಗೊಳಿಸುವ ಹಾಗೂ ಅದರ ಮರು-ಬರವಣಿಗೆ ಮಾಡುವ ಮೋದಿ ಸರ್ಕಾರದ ಉದ್ದೇಶವನ್ನು ಈ ಪ್ರಕಟಣೆ ಬಟಾಬಯಲುಗೊಳಿಸುತ್ತದೆ.

‘ಸ್ವಾತಂತ್ರ್ಯ ಹೋರಾಟವು ಬ್ರಿಟಿಷ್ ಆಡಳಿತದ ವಿರುದ್ಧ ಮಾತ್ರ ಸೀಮಿತವಾಗಿರಲಿಲ್ಲ. ಅದಕ್ಕೂ ಮುಂಚೆಯೂ ಭಾರತ ದಾಸ್ಯವನ್ನು ಅನುಭವಿಸಿತ್ತು’ ಎಂದು ಪ್ರಕಟಣೆ ಹೇಳಿದೆ. ಈಗ ಸ್ಥಾಪಿತವಾಗಿರುವಂತೆ, ಭಾರತೀಯ ಉಪಖಂಡದ ಭೌಗೋಳಿಕ ನಕಾಶೆಯು ನಾನಾ ಅರಸೊತ್ತಿಗೆಗಳು ಹಾಗೂ ಬ್ರಿಟಿಷರು ಕರೆಯುತ್ತಿದ್ದಂತೆ ‘ಪ್ರಿನ್ಸ್ಲಿ ಸ್ಟೇಟ್ಸ್’ (ರಾಜ ಸಂಸ್ಥಾನ)ಗಳಾಗಿ ವಿಭಜನೆಗೊಂಡಿತ್ತು. ಬ್ರಿಟಿಷರನ್ನು ಒದ್ದೋಡಿಸಲು ಸ್ವಾತಂತ್ರ್ಯ ಚಳವಳಿ ಯಶಸ್ವಿಯಾದ ನಂತರ, ಇಂಥ 650ಕ್ಕೂ ಹೆಚ್ಚು ರಾಜ ಸಂಸ್ಥಾನಗಳನ್ನು ಭಾರತ ಒಕ್ಕೂಟದಲ್ಲಿ ತರಬೇಕಿತ್ತು. ಇದರ ಆಧಾರದಲ್ಲಿ ಸಂವಿಧಾನ ರಚನಾಸಭೆಯು ಭಾರತೀಯ ಸಂವಿಧಾನವನ್ನು ರಚಿಸಿತು. ದೇಶ 1947 ಆಗಸ್ಟ್ 15ರಂದು ಸ್ವಾತಂತ್ರ್ಯ ಗಳಿಸಿದ ಎರಡುವರೆ ವರ್ಷದ ನಂತರ, 1950ರಲ್ಲಿ ಅಂಗೀಕರಿಸಿದ ಸಂವಿಧಾನದ ಮೂಲಕ ಜಾತ್ಯತೀತ-ಪ್ರಜಾಸತ್ತಾತ್ಮಕ ಭಾರತ ಗಣರಾಜ್ಯ ರಚನೆಯನ್ನು ಘೋಷಿಸಲಾಯಿತು. ಬ್ರಿಟಿಷ್ ವಸಾಹತುಶಾಹಿಯನ್ನು ಯಶಸ್ವಿಯಾಗಿ ಸೋಲಿಸಿದ ನಂತರ ಭಾರತ ಸ್ವತಂತ್ರ ದೇಶವಾಯಿತು.

ಈ ಮಹಾನ್ ಸ್ವಾತಂತ್ರ್ಯ ಸಂಗ್ರಾಮದ ಭಾಗವಾಗಿರದಿದ್ದ ಆರ್‌ಎಸ್‌ಎಸ್ ಮತ್ತು ಹಿಂದುತ್ವ ಸಿದ್ಧಾಂತದ ಪೂರ್ವಜರು ನಮ್ಮ ಸ್ವಾತಂತ್ರ್ಯ ಸಾಧನೆಗೆ ಹಾಗೂ ಜಾತ್ಯತೀತ-ಜನತಾಂತ್ರಿಕ ಗಣರಾಜ್ಯ ನೀಡುವಲ್ಲಿ ಧರ್ಮ ತಾರತಮ್ಯವಿಲ್ಲದೆ ಎಲ್ಲ ಭಾರತೀಯರು ಮಾಡಿದ್ದ ಅಪಾರ ತ್ಯಾಗಬಲಿದಾನಗಳ ಬಗ್ಗೆ ಅಜ್ಞಾನಿಗಳಾಗಿದ್ದಾರೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ಸ್ವಾಮಿ ವಿವೇಕಾನಂದ ಮತ್ತು ರಮಣ ಮಹರ್ಷಿ 1857ರ ಬಂಡಾಯ, ಅಂದರೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಫೂರ್ತಿಯಾಗಿದ್ದರು ಎಂದು ವಾರ್ತೆ ಮತ್ತು ಪ್ರಸಾರ ಸಚಿವಾಲಯ ಹೇಳಿದೆ. ಸ್ವಾಮಿ ವಿವೇಕಾನಂದ ಜನಿಸಿದ್ದು 1863ರಲ್ಲಿ ಹಾಗೂ ರಮಣ ಮಹರ್ಷಿ ಜನನವಾಗಿದ್ದು 1879ರಲ್ಲಿ. ಆದ್ದರಿಂದ ಇವರಿಬ್ಬರೂ 1857ರ ಬಂಡಾಯಕ್ಕೆ ಸ್ಫೂರ್ತಿದಾತರು ಎನ್ನುವುದು ತೀರಾ ಹಾಸ್ಯಾಸ್ಪದ ಎಂದು ಬೇರೆ ಹೇಳಬೇಕಾಗಿಲ್ಲ.

dharmasansadboosters281221
“ಧರ್ಮಸಂಸದ್”ಗಳು ಬೂಸ್ಟರ್ ಡೋಸ್‌ಗಳನ್ನು ಕಳಿಸಲು ಪ್ರಯತ್ನಿಸುತ್ತಿವೆ.. ವ್ಯಂಗ್ಯಚಿತ್ರ: ಅಲೋಕ್ ನಿರಂತರ್

ಕುತ್ಸಿತ ಉದ್ದೇಶ-ಅಪಪ್ರಚಾರ

1857ರ ‘ಘದರ್’, ಭಾರತೀಯ ಜನತೆಯ ಒಂದು ಐಕ್ಯ ಬಂಡಾಯವಾಗಿತ್ತು. ಹಿಂದೂಗಳು ಮತ್ತು ಮುಸ್ಲಿಮರಿಬ್ಬರೂ ಅದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಾಂತ್ಯಾ ಟೋಪೆ ಮತ್ತಿತರ 1857ರ ಬಂಡಾಯದ ನಾಯಕರೊಂದಿಗೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಭಾರತವು ಬ್ರಿಟಿಷ್ ಆಡಳಿತದಿಂದ ಸ್ವತಂತ್ರವಾಗಿದೆ ಎಂದು ದೆಹಲಿಯ ಕೆಂಪು ಕೋಟೆಯಿಂದ ಘೋಷಿಸಿದ್ದರು. ಮೊಘಲ್ ಆಡಳಿತಗಾರ ಬಹಾದುರ್ ಷಾ ಝಫರ್‌ರನ್ನು ಸ್ವತಂತ್ರ ಭಾರತದ ಸಾರ್ವಭೌಮ ಎಂದು ಹೆಸರಿಸಿದ್ದರು. ಬಹಾದುರ್ ಷಾ ಝಪರ್‌ರನ್ನು ಆರ್‌ಎಸ್‌ಎಸ್ ಶಬ್ದಭಂಡಾರದಲ್ಲಿ ಅಪಹಾಸ್ಯದಿಂದ ‘ಬಾಬರ್ ಕೀ ಔಲಾದ್’ (ಬಾಬರ್‌ನ ಸಂತಾನ) ಎಂದು ಕರೆಯಲಾಗುತ್ತದೆ.

ಮುಸ್ಲಿಮರ ನರಹತ್ಯೆಗೆ ಧರ್ಮ ಸಂಸದ್‌ಗಳಲ್ಲಿ ಕರೆ ನೀಡುವುದು, ಮುಸ್ಲಿಂ ಮಹಿಳೆಯರನ್ನು ಗುರಿ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಆ್ಯಪ್‌ಗಳನ್ನು ಹರಿಯಬಿಡುವುದು ಮತ್ತು ಮುಂಬರುವ ಅಸೆಂಬ್ಲಿ ಚುನಾವಣೆ 80% ಹಾಗೂ 20% ನಡುವಣ ಹೋರಾಟ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಹೇಳುವುದು (ಉತ್ತರ ಪ್ರದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಸುಮಾರು 19% ಇದೆ) – ಇವೇ ಮೊದಲಾದವುಗಳ ಹಿನ್ನೆಲೆಯಲ್ಲಿ ನೋಡಿದರೆ ಈ ಎಲ್ಲ ಅಪಪ್ರಚಾರಗಳು ಭಾರತೀಯ ಗಣರಾಜ್ಯದ ಜಾತ್ಯತೀತ ಪ್ರಜಾತಾಂತ್ರಿಕ ಸ್ವರೂಪವನ್ನು ಬದಲಾಯಿಸುವ ಆರ್‌ಎಸ್‌ಎಸ್ ಮತ್ತು ಮೋದಿ ಸರ್ಕಾರದ ಕುತ್ಸಿತ ಉದ್ದೇಶವನ್ನು ಬಹಿರಂಗಪಡಿಸುತ್ತದೆ.

ಭಾರತೀಯ ಸಂವಿಧಾನ ಹೇಳಿರುವಂಥ ಜಾತ್ಯತೀತ ಪ್ರಜಾಸತ್ತಾತ್ಮಕ ಭಾರತ ಗಣರಾಜ್ಯದ ಸ್ಥಾನದಲ್ಲಿ ಉನ್ಮತ್ತ ಅಸಹನೆಯೇ ಜೀವಾಳವಾದ ಧರ್ಮಾಧಾರಿತ ಫ್ಯಾಸಿಸ್ಟ್ ‘ಹಿಂದುತ್ವ ರಾಷ್ಟ್ರ’ ಸ್ಥಾಪಿಸುವುದೇ ಈ ಹುನ್ನಾರವಾಗಿದೆ. ಇದು ಸ್ವಾತಂತ್ರ್ಯಕ್ಕಾಗಿ ಭಾರತೀಯ ಜನತೆ ಮಾಡಿದ ಮಹಾನ್ ಹೋರಾಟದ ಸಿದ್ಧಾಂತಕ್ಕೇ ತದ್ವಿರುದ್ಧವಾದುದಾಗಿದೆ.

‘ಅನಾಮಿಕ ಸ್ವಾತಂತ್ರ್ಯ ಹೋರಾಟಗಾರರತ್ತ ಬೆಳಕು ಹರಿಸುವ ಉದ್ದೇಶದಿಂದ ಅಮೃತ ಮಹೋತ್ಸವ ಆಚರಣೆಗಳ್ನು ಆರಂಭಿಸಲಾಗಿದೆ’ ಎಂದು ಪಿಐಬಿ ಪ್ರಕಟಣೆ ಹೇಳಿದೆ. ಆರ್‌ಎಸ್‌ಎಸ್/ಹಿಂದುತ್ವ ಶಕ್ತಿಗಳನ್ನು ಸ್ವಾತಂತ್ರ್ಯ ಸಂಗ್ರಾಮದ ‘ಹೀರೊ’ಗಳಂತೆ ಬಿಂಬಿಸುವುದಕ್ಕಾಗಿ ಕಳ್ಳ ಮಾರ್ಗವಿದು. ವಾಸ್ತವವಾಗಿ ಈ ಶಕ್ತಿಗಳು ಬ್ರಿಟಿಷರೊಂದಿಗೆ ಶಾಮೀಲಾಗಿದ್ದರೆನ್ನುವುದು ಕಟು ಸತ್ಯ. ಆರ್‌ಎಸ್‌ಎಸ್‌ಗೆ ಸಹಾನುಭೂತಿ ಹೊಂದಿದವರು ಕೂಡ (ವಾಲ್ಟರ್ ಕೆ ಆ್ಯಂಡರ್‌ಸನ್ ಮತ್ತು ಶ್ರೀಧರ್ ಡಿ ದ್ಯಾಮ್ಲೆ 1987ರಲ್ಲಿ ಬರೆದ ‘ಬ್ರದರ್‌ಹುಡ್ ಇನ್ ಸ್ಯಾಫ್ರನ್’ ಕೃತಿ ಮುಂತಾದವು ಅವುಗಳಲ್ಲಿ ಪ್ರಮುಖವಾದವುಗಳು) ವಿಮೋಚನಾ ಸಮರದಲ್ಲಿ ಆರ್‌ಎಸ್‌ಎಸ್ ಹಾಜರಿ ಶೂನ್ಯವಾಗಿತ್ತು ಹಾಗೂ ಅದರ ಫಲವಾಗಿ ಅವರು ಬ್ರಿಟಿಷರಿಂದ ಲಾಭ ಪಡೆದುಕೊಂಡಿದ್ದರು ಎಂದು ಸವಿವರವಾಗಿ ಬರೆದಿದ್ದಾರೆ. ‘ಸಂಘವು ಏನಿದ್ದರೂ ಕಾನೂನು ಚೌಕಟ್ಟಿನಲ್ಲೇ ಇತ್ತು. ವಿಶೇಷವಾಗಿ ಹೇಳಬೇಕೆಂದರೆ 1942 ಆಗಸ್ಟ್‌ ನಲ್ಲಿ ಸ್ಫೋಟಗೊಂಡ ಗಲಭೆಗಳಲ್ಲಿ ಭಾಗವಹಿಸುವುದರಿಂದ ದೂರವೇ ಉಳಿದಿತ್ತು’ ಎಂದು ಬಾಂಬೆ ಪ್ರಾಂತ್ಯದ ಗೃಹ ಇಲಾಖೆ 1942ರ ಕ್ವಿಟ್ ಇಂಡಿಯಾ ಚಳವಳಿ ವೇಳೆ ಹೀಗೆ ಟಿಪ್ಪಣಿ ಮಾಡಿತ್ತು (ಆ್ಯಂಡರ್‌ಸನ್ ಮತ್ತು ದ್ಯಾಮ್ಲೆ ಉಲ್ಲೇಖ; ಪುಟ 44). ‘ಹಿಂದುತ್ವ ರಾಷ್ಟ್ರ’ ಸ್ಥಾಪನೆಯ ತುಡಿತವೇ ಆರ್‌ಎಸ್‌ಎಸ್ ಬ್ರಿಟಿಷರ ಮಿತ್ರನೇ ಆಗಿ ಬಿಡುವಂತೆ ಮಾಡಿತ್ತು.

80-20 magic risk 120122
ಉ.ಪ್ರ.: 80-20 ಮ್ಯಾಜಿಕ್ ಟ್ರಿಕ್ ಒಡೆದು ಆಳು ವ್ಯಂಗ್ಯಚಿತ್ರ: ಸುಭಾನಿ, ಡೆಕ್ಕನ್ ಕ್ರಾನಿಕಲ್

ಕುಟಿಲ ಅಜೆಂಡಾ

ಬ್ರಿಟಷರೊಂದಿಗೆ ತಾನು ಕೈ ಜೋಡಿಸಿದ ಬಗ್ಗೆ ಇಂಥ ಸ್ಥಾಪಿತ ದಾಖಲೆಗಳಿದ್ದರೂ ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಕಮ್ಯೂನಿಸ್ಟರ ಪಾತ್ರದ ಬಗ್ಗೆ ಅವಿರತ ಅಪಪ್ರಚಾರ ನಡೆಸುತ್ತಿದೆ. ಕ್ವಿಟ್ ಇಂಡಿಯಾ ಆಂದೋಲನದಲ್ಲಿ ಕಮ್ಯೂನಿಸ್ಟರ ‘ಪಾತ್ರ’ ಏನೆಂಬುದನ್ನು ಸಾರಲು 1992 ಆಗಸ್ಟ್ 9ರಂದು ಆ ಚಳವಳಿಯ 50ನೇ ವಾರ್ಷಿಕೋತ್ಸವದ ಸಂದರ್ಭ ಭಾರತದ ಅಂದಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಸಂಸತ್ತಿನ ಮಧ್ಯ ರಾತ್ರಿ ಅಧಿವೇಶನದಲ್ಲಿ ಹೇಳಿರುವುದೇ ದೊಡ್ಡ ಸಾಕ್ಷಿಯಾಗಿದೆ. ‘ಕಾನ್ಪುರ, ಜಮ್ಷೆಡ್‌ಪುರ ಮತ್ತು ಅಹಮದಾಬಾದ್‌ನ ಗಿರಣಿಗಳಲ್ಲಿ ನಡೆದ ದೊಡ್ಡ ಪ್ರಮಾಣದ ಮುಷ್ಕರಗಳ ನಂತರ ಲಂಡನ್‌ನಲ್ಲಿರುವ ವಿದೇಶಾಂಗ ಸಚಿವರಿಗೆ (ಸೆಕ್ರಟರಿ ಆಫ್ ಸ್ಟೇಟ್) ದೆಹಲಿಯಿಂದ ಹೋದ 1942 ಸೆಪ್ಟೆಂಬರ್ 5ನೇ ದಿನಾಂಕದ ಪತ್ರವು ಭಾರತ ಕಮ್ಯೂನಿಸ್ಟ್ ಪಕ್ಷದ ಧೋರಣೆ ಬಗ್ಗೆ ವರದಿ ಮಾಡಿತ್ತು. ಅದು, ಅಂದರೆ ಕಮ್ಯೂನಿಸ್ಟ್ ಪಕ್ಷವು ಬ್ರಿಟಷ್-ವಿರೋಧಿ ಕ್ರಾಂತಿಕಾರಿಗಳನ್ನು ಹೊಂದಿದೆ ಎನ್ನುವುದು ಅದರ ಅನೇಕ ಸದಸ್ಯರ ವರ್ತನೆಯಿಂದ ಸ್ಪಷ್ಟವಾಗುತ್ತದೆ ಎಂದು ಆ ಪತ್ರದಲ್ಲಿ ಹೇಳಲಾಗಿತ್ತು’ ಎಂದು ರಾಷ್ಟ್ರಪತಿ ಶರ್ಮಾ ನೆನಪಿಸಿದ್ದರು.

ಇದಕ್ಕಿಂತ ಹೆಚ್ಚಿಗೆ ಏನಾದರೂ ಹೇಳಬೇಕೇ?. ಸ್ವತಂತ್ರ ಭಾರತದ ಒಬ್ಬ ಚುನಾಯಿತ ರಾಷ್ಟ್ರಪತಿಯವರು ಭಾರತೀಯ ಸಂಸತ್ತಿನಲ್ಲಿ ಅಧಿಕೃತ ಸಮಾರಂಭವೊಂದರಲ್ಲಿ ಮಾತನಾಡುವಾಗ ‘ಕಮ್ಯೂನಿಸ್ಟರು ಸದಾ ಬ್ರಿಟಿಷ್-ವಿರೋಧಿ ಕ್ರಾಂತಿಕಾರಿಗಳಾಗಿದ್ದರು’ ಎನ್ನುವ ಮೂಲಕ ವಿಚಾರವನ್ನು ಸುಸ್ಪಷ್ಟಪಡಿಸಿದ್ದಾರೆ.

ಭಾರತೀಯ ಗಣರಾಜ್ಯದ ಸ್ವರೂಪವನ್ನು ಬದಲಾಯಿಸುವ ಕುಟಿಲ ಅಜೆಂಡಾವನ್ನು ಸೋಲಿಸಲೇಬೇಕು. ಇದು ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಪರಂಪರೆಯನ್ನು ಮುಂದೊಯ್ಯುತ್ತ ಎಲ್ಲ ಭಾರತೀಯರು ಹೆಚ್ಚು ಸಮಾನತೆ, ನ್ಯಾಯ ಮತ್ತು ಭಾರತೀಯ ಸಂವಿಧಾನ ಖಾತರಿಪಡಿಸಿರುವ ಭ್ರಾತೃತ್ವದತ್ತ ಮುಂದೆ ಸಾಗಬೇಕಾದರೆ ಅತ್ಯಗತ್ಯ.

ಸ್ವತಂತ್ರ ಭಾರತದ ಸ್ವರೂಪವನ್ನು ಬದಲಾಯಿಸಲು ಪ್ರಯತ್ನಿಸುವ ಈ ಶಕ್ತಿಗಳನ್ನು ‘ಇಂಡಿಯಾ, ಅಂದರೆ ಭಾರತ’ ಕ್ಕಾಗಿ ಸೋಲಿಸಲೇಬೇಕು.

ಅನು: ವಿಶ್ವ

Leave a Reply

Your email address will not be published. Required fields are marked *