ಸಂವಿಧಾನ ವಿರೋಧಿ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆಯ ವಿಧೇಯಕ ವಾಪಾಸ್ಸಾತಿಗಾಗಿ ರಾಜ್ಯವ್ಯಾಪಿ ಪ್ರತಿಭಟನೆ

ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ತರಾತುರಿಯಲ್ಲಿ ರಾಜ್ಯದ ಬಿಜೆಪಿ ಸರಕಾರ ಮಂಡಿಸಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ವಿಧೇಯಕ – 2021 ಆಳುವ ವರ್ಗಗಳು ತಾವು ಬಯಸಿದಾಗಲೆಲ್ಲಾ ರಾಜ್ಯದಲ್ಲಿ ಅಶಾಂತಿಯನ್ನುಂಟು ಮಾಡುವ ದುರುದ್ದೇಶದಿಂದ ಹೆಣೆಯಲಾಗಿದೆ.

ಕೋಮು ಹಾಗೂ ಜಾತಿ ದ್ವೇಷಗಳನ್ನು ಮುಂದುವರೆಸುವ ಮತ್ತು  ದುಡಿಯುವ ಜನತೆಯನ್ನು ವಿಭಜಿಸಿ ಆಳಲು, ಮತಾಂಧ ಹಾಗೂ ಜಾತಿವಾದಿ ಪುಂಡಾಟಿಕೆಗೆ  ನೆರವಾಗುವ ದುರುದ್ದೇಶದಿಂದ  ರೂಪಿಸಲಾದ  ಸಂವಿಧಾನ ವಿರೋಧಿ ವಿಧೇಯಕವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ಸಿಪಿಐ(ಎಂ) ಖಂಡಿಸಿದೆ.

ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ವಿಧೇಯಕವನ್ನು ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿ ಸಿಪಿಐ(ಎಂ) ಪಕ್ಷದ ವತಿಯಿಂದ ಇಂದು ರಾಜ್ಯವ್ಯಾಪಿ ಪ್ರತಿಭಟನೆ ನಡೆದಿದೆ.

ವಿಧೇಯಕವನ್ನು ಖಂಡಿಸಿ ಜನವರಿ 2 ರಿಂದ 4ರ ವರೆಗೆ ನಡೆದ ಸಿಪಿಐ(ಎಂ) ಕರ್ನಾಟಕ ರಾಜ್ಯ 23ನೇ ಸಮ್ಮೇಳನವು ಆಗ್ರಹಿಸಿದ್ದವು. ಕೂಡಲೇ ಅದನ್ನು ವಾಪಾಸು ಪಡೆಯುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ. ಅದರ ಮುಂದುವರಿದ ಭಾಗವಾಗಿ ಇಂದು ರಾಜ್ಯದ ಎಲ್ಲೆಡೆ ಕೋವಿಡ್ ನಿಯಮ ಪಾಲಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ವಿಧೇಯಕವು ವ್ಯಕ್ತಿಯು ತನಗಿಷ್ಠವಾದ ಮತವನ್ನು ಆಚರಿಸುವುದಕ್ಕೆ ಸರಕಾರದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುತ್ತದೆ. ಆ ಮೂಲಕ  ವ್ಯಕ್ತಿಯು ತನಗಿಷ್ಠವಾದ ಮತಧರ್ಮವನ್ನು ಆಚರಿಸುವ, ಭಾರತ ಸಂವಿಧಾನ ಕೊಡ ಮಾಡಿದ ಹಕ್ಕನ್ನು ನಗ್ನವಾಗಿ ಉಲ್ಲಂಘಿಸುತ್ತದೆ. ಅದೇ ರೀತಿ, ಮತಾಂತರದ ಧಾರ್ಮಿಕ ವಿಧಿ, ವಿಧಾನಗಳನ್ನು ಪ್ರತಿರೋಧಿಸುತ್ತದೆ.

ಬಲಾತ್ಕಾರ ಮತ್ತು ಆಮಿಷದ ಮತಾಂತರವನ್ನು ತಡೆಯುವ ಉದ್ದೇಶದ್ದು ಎಂದು ಹೇಳಲಾದ ಈ ಕಾಯ್ದೆಯು ಹಲವು ಕರಾಳ ಸ್ವರೂಪದ ಅಘಾತಕಾರಿ ಕಟ್ಟಳೆಗಳನ್ನು ನಿಯಮಗಳನ್ನು ಒಳಗೊಂಡಿದ್ದು ನಮ್ಮ ಸಮಾಜದ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿ ಮಾಡಿಕೊಂಡಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.

ಈ ಮುಂಚೆ ಬಲವಂತದ ಮತಾಂತರವನ್ನು ತಡೆಯುವ ಉದ್ದೇಶದಿಂದ ಮತಾಂತರ ನಿಷೇಧ ಕಾಯ್ದೆ ತರಲಾಗುವುದೆಂದು ಪ್ರಚುರಗೊಳಿಸಲಾಗಿತ್ತು. ಸಿಪಿಐ(ಎಂ) ಪಕ್ಷ ಯಾವುದೇ ವ್ಯಕ್ತಿಯನ್ನು ಯಾವುದೇ ಮತಗಳು ಬಲವಂತವಾಗಿ, ಮತಾಂತರ ಹಾಗೂ ಮರು ಮತಾಂತರ ಮಾಡುವ  ದೌರ್ಜನ್ಯದ ಕ್ರಮಗಳನ್ನು ಬಲವಾಗಿ ವಿರೋಧಿಸುತ್ತದೆ.

ಈಗಾಗಲೇ ಮತಾಂತರ ಗೊಂಡಿರುವ ವ್ಯಕ್ತಿಗಳ ಮೇಲೆ ಮತ್ತು ಅಂತಹ ಮತಾಂತರಗೊಂಡಿರುವ ವ್ಯಕ್ತಿಗಳಿರುವ ಧಾರ್ಮಿಕ ಸಂಸ್ಥೆಗಳು ಹಾಗೂ ಅದರ ಮುಖಂಡರ ಮೇಲೆ  ಧಾಳಿ ನಡೆಸಲು ಮತಾಂಧ ಹಾಗೂ ಜಾತಿವಾದಿ ಪುಂಡರಿಗೆ  ಕಲಂ – 4 ಕುಮ್ಮಕ್ಕು ನೀಡುತ್ತದೆ.

ಕುಟುಂಬದ ಸದಸ್ಯರು ಮಾತ್ರವಲ್ಲಾ, ಸಹವರ್ತಿಗಳು, ಯಾರು ಬೇಕಾದರೂ ಬಲವಂತದ ಮತಾಂತರವೆಂದು ದೂರು ನೀಡಲು ಅವಕಾಶ ಮಾಡಿಕೊಡುತ್ತದೆ. ಆ ಮೂಲಕ ಮತಾಂಧ ಪುಂಡರು ದುರುಪಯೋಗ ಮಾಡಲು ಈ ಕಲಂ ಅವಕಾಶ ಮಾಡಿಕೊಟ್ಟಿದೆ ಮಾತ್ರವಲ್ಲಾ ಆಪಾದಿತರೇ ತಮ್ಮನ್ನು ಸಮರ್ಥಿಸಿಕೊಳ್ಳಲು ಹೇಳುತ್ತದೆ.

ಇದು ಧಾರ್ಮಿಕ ಸ್ವಾತಂತ್ರ್ಯದ ಸಂರಕ್ಷಣೆಯ ಹೆಸರಿನಲ್ಲಿ ಅಪ್ರತ್ಯಕ್ಷವಾಗಿ, ಜಾತಿ ತಾರತಮ್ಯ, ಅಸ್ಪೃಶ್ಯಾಚರಣೆ ಗಳನ್ನು ಪೋಷಿಸಲು ಮತ್ತು ವಂಚಕ ಜಾತಿ ಪದ್ದತಿಯಲ್ಲಿ ಶೋಷಿತರು ಸಿಲುಕಿ ನರಳುವಂತೆ ಮಾಡುವ ಸಂಚನ್ನು ಹೊಂದಿದೆ. ಯುವಕ- ಯುವತಿಯರ ಅಂತರ್ಜಾತೀಯ ಮತ್ತು ಅಂತರ್ಧಮೀಯ ವೈವಾಹಿಕ ಹಕ್ಕನ್ನು ನಿರ್ಬಂಧಿಸುತ್ತದೆ.

ಸ್ವತಂತ್ರ ಭಾರತದ ಸಂವಿಧಾನದ 25 ನೇ ಅನುಚ್ಛೇಧವು ದೇಶದ ಪ್ರತಿಯೊಬ್ಬ ಪ್ರಜೆಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತ್ರಿ ಪಡಿಸುತ್ತದೆ. ಧಾರ್ಮಿಕ ಸ್ವಾತಂತ್ರ್ಯ ಎಂದರೆ ದೇಶದ ಯಾವುದೇ ಪ್ರಜೆಯು ತನಗೆ ಇಷ್ಟ ಬಂದ ಮತಧರ್ಮವನ್ನು ಅನುಸರಿಸಬಹುದು, ಯಾವುದೇ ಧರ್ಮದ ವಿಚಾರಗಳನ್ನು ಪ್ರಚಾರ ಮಾಡಬಹುದು.  ಹಾಗೆಯೇ ಯಾವುದೇ ವ್ಯಕ್ತಿಗೆ ಯಾವುದೇ ಮತಧರ್ಮವನ್ನು ಅನುಸರಿಸುವ, ಇಲ್ಲವೆ  ಅನುಸರಿಸದೇ ಇರುವ ಸ್ವಾತಂತ್ರ್ಯ ಸಹ ಇರುತ್ತದೆ. ಇದು ಧಾರ್ಮಿಕ ಸ್ವಾತಂತ್ರ್ಯವಾಗಿದ್ದು ಈ ಧಾರ್ಮಿಕ ಹಕ್ಕು ದೇಶದ ಪ್ರತಿಪ್ರಜೆಯ ಮೂಲಭೂತ ಹಕ್ಕಾಗಿದೆ.

ರಾಜ್ಯ ಮತ್ತು ಕೇಂದ್ರ ಸರಕಾರಗಳು ಜನರ ಗಮನವನ್ನು  ಆಳುವ ಸರಕಾರಗಳ ವೈಫಲ್ಯಗಳ ಕಡೆಯಿಂದ  ಬೇರೆಡೆಗೆ ಸೆಳೆದು ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿವೆ. ಇಂತಹ ಪಿತೂರಿಗಳ ಭಾಗವಾಗಿ ‘ಮತಾಂತರ, ‘ಲವ್ ಜಿಹಾದ್’ ಮುಂತಾದ ಹೆಸರಿನಲ್ಲಿ  ಜನರ ಒಗ್ಗಟ್ಟನ್ನು ಮುರಿಯುವಂತಹ ಉದ್ದೇಶದಿಂದಲೇ ಬಲವಂತದ ಮತಾಂತರ ನಿಷೇಧದ ಹೆಸರಿನ ಈ ಕಾಯ್ದೆಯನ್ನು  ತರಲಾಗಿದೆ ಎಂಬುದು ನಿಚ್ಚಳ.

ಆದ್ದರಿಂದ ಇಂತಹ ಪ್ರಜಾಸತ್ತೆಯ ವಿರೋಧಿ ವಿಧೇಯಕವನ್ನು ತಕ್ಷಣ ವಾಪಾಸು ಪಡೆಯಲು ಸಿಪಿಐ(ಎಂ) ಪಕ್ಷವು ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

Leave a Reply

Your email address will not be published. Required fields are marked *