ಒಕ್ಕೂಟತತ್ವ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಮೌಲ್ಯಗಳ ಬಗ್ಗೆ ತಾತ್ಸಾರ

ಪ್ರಕಾಶ್ ಕಾರಟ್

prakash karat
ಪ್ರಕಾಶ್ ಕಾರಟ್

ಮೋದಿ ಸರಕಾರದ ಪಕ್ಷಪಾತಿ ಹಾಗೂ ಸಂಕುಚಿತ ಧೋರಣೆಯಿಂದಾಗಿ ಗಣರಾಜ್ಯೋತ್ಸವ ಪರೇಡ್ನಲ್ಲಿ ದಕ್ಷಿಣ ಭಾರತದ ರಾಜ್ಯಗಳು ಅಕ್ಷರಶಃ ಪ್ರಾತಿನಿಧ್ಯ ಕಳೆದುಕೊಂಡಿವೆ. ಪ್ರತಿಪಕ್ಷಗಳ ಆಡಳಿತವಿರುವ ಮೂರು ರಾಜ್ಯಗಳ ಸ್ತಬ್ಧ ಚಿತ್ರಗಳನ್ನು ದುರುದ್ದೇಶದಿಂದ ತಿರಸ್ಕರಿಸಿರುವುದು ಕೇಂದ್ರ ಸರ್ಕಾರದ ಆಳವಾದ ಒಕ್ಕೂಟವಿರೋಧಿ ಧೋರಣೆಯನ್ನು ಸ್ಪಷ್ಟಪಡಿಸುತ್ತದೆ. ಜನವರಿ 26 ಭಾರತೀಯ ಗಣರಾಜ್ಯ ಹಾಗೂ ಭಾರತವನ್ನು ರಾಜ್ಯಗಳ ಒಕ್ಕೂಟ ಎಂದು ನಿರೂಪಿಸಿರುವ ಸಂವಿಧಾನದ ಆಗಮನವನ್ನು ಸಂಕೇತಿಸುವ ದಿನ. ಸಂವಿಧಾನದ ಮೂಲ ಆಚಾರ ಸೂತ್ರವನ್ನೇ ಮೋದಿ ಸರಕಾರ ಉಲ್ಲಂಘಿಸುತ್ತಿದೆ.

2022ರ ಜನವರಿ 26ರಂದು ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುವ ಗಣರಾಜ್ಯ ದಿನದ ಪರೇಡ್‌ನಲ್ಲಿ ಪ್ರಸ್ತುತಪಡಿಸಲು ಕೆಲವು ರಾಜ್ಯಗಳು ಪ್ರಸ್ತಾಪಿಸಿದ ಸ್ತಬ್ಧ ಚಿತ್ರಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ಬಿಜೆಪಿ ಆಡಳಿತಗಾರರ ಮನೋಭಾವಕ್ಕೆ ಹಿಡಿದ ಕನ್ನಡಿಯಾಗಿದೆ.

ಕೇರಳ, ಬಂಗಾಳ ಮತ್ತು ತಮಿಳುನಾಡಿನ ಟ್ಯಾಬ್ಲೋಗಳಿಗೆ ಅವಕಾಶ ನಿರಾಕರಿಸಿರುವುದು ಒಕ್ಕೂಟ ತತ್ವಕ್ಕೆ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಸಾಮಾಜಿಕ-ಸಾಂಸ್ಕೃತಿಕ ಪರಂಪರೆಗಳಿಗೆ ಮಾಡಿದ ತೀವ್ರ ಅವಮಾನವಾಗಿದೆ.

ಸ್ವಾತಂತ್ರ್ಯದ 75ನೇ ವರ್ಷಾಚರಣೆ ಈ ವರ್ಷದ ಗಣರಾಜ್ಯ ದಿನ ಪರೇಡ್‌ನ ವಿಷಯವಸ್ತು ಆಗಿದೆ. ಅದಕ್ಕೆ ಅನುಗುಣವಾಗಿ ಬಂಗಾಳ ಸರಕಾರ, ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಅವರು ಸ್ಥಾಪಿಸಿದ್ದ ಆಝಾದ್ ಹಿಂದ್ ಸೇನೆ(ಇಂಡಿಯನ್ ನ್ಯಾಷನಲ್ ಆರ್ಮಿ-ಐಎನ್‌ಎ)ಯ ಪಾತ್ರವನ್ನು ಬಿಂಬಿಸುವ ಟ್ಯಾಬ್ಲೋವನ್ನು ಸಿದ್ಧಪಡಿಸಿತ್ತು. ಅದನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ತಮಿಳುನಾಡು ರಾಜ್ಯದ ಪ್ರಮುಖ ಸ್ವಾತಂತ್ರ್ಯ ಸೇನಾನಿಗಳಾದ ವಿ.ಒ. ಚಿದಂಬರಂ, ಸ್ವಾತಂತ್ರ್ಯ ಸಂಗ್ರಾಮದ ರಾಷ್ಟ್ರ ಕವಿ ಸುಬ್ರಮಣ್ಯ ಭಾರತಿ ಮತ್ತಿತರರಿಗೆ ಸಂಬಂಧಿಸಿದ ಸ್ತಬ್ಧಚಿತ್ರವನ್ನು ಪ್ರಸ್ತಾಪಿಸಿತ್ತು. ಅದಕ್ಕೂ ಕೇಂದ್ರದ ಅನುಮತಿ ಸಿಕ್ಕಿಲ್ಲ.

ಯಾರು ಹೆಚ್ಚು ಪ್ರಸ್ತುತ?

ಇನ್ನೂ ಆಘಾತದ ಸಂಗತಿಯೆಂದರೆ, ಮಹಾನ್ ಜಾತಿವಾದ-ವಿರೋಧಿ ಹಾಗೂ ಪುನರುತ್ಥಾನದ ಮಹಾವ್ಯಕ್ತಿ ನಾರಾಯಣ ಗುರು ಅವರನ್ನು ಚಿತ್ರಿಸುವ ಕೇರಳದ ಟ್ಯಾಬ್ಲೊ ತಿರಸ್ಕರಿಸಿದ್ದು. ನಾರಾಯಣ ಗುರು ಬದಲು ಆದಿ ಶಂಕರಾಚಾರ್ಯರ ಪ್ರತಿಮೆ ಇರಲೆಂಬುದು ಕೇಂದ್ರದ ತಜ್ಞರ ಸಮಿತಿಯ ಅಭಿಪ್ರಾಯವಾಗಿದೆ ಎಂದು ವರದಿಯಾಗಿದೆ. ಆದರೆ ಕೇರಳ ಸರ್ಕಾರ ನಾರಾಯಣ ಗುರು ಚಿತ್ರಣಕ್ಕೇ ಪಟ್ಟು ಹಿಡಿದಾಗ ಅದನ್ನು ತಿರಸ್ಕರಿಸಲಾಗಿದೆ.

20ನೇ ಶತಮಾನದ ಆರಂಭದ ಸಮಾಜ ಸುಧಾರಕ ಹಾಗೂ ಪುನರುತ್ಥಾನ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೂ ಕೊಡುಗೆ ಕೊಟ್ಟ ನಾರಾಯಣ ಗುರುಗಿಂತ ಬ್ರಾಹ್ಮಣ್ಯವನ್ನು ಮರುಸ್ಥಾಪನೆ ಮಾಡಿದ 8ನೇ ಶತಮಾನದ ಧಾರ್ಮಿಕ ವ್ಯಕ್ತಿ ಹೇಗೆ ಹೆಚ್ಚು ಪ್ರಸ್ತುತರಾಗುತ್ತಾರೆ ಎಂಬುದನ್ನು ಆಳುವ ವ್ಯವಸ್ಥೆಯ ಹಿಂದುತ್ವವಾದಿ ಧೋರಣೆಯೇ ವಿವರಿಸಲು ಸಾಧ್ಯ. ಕೇರಳದ ಟ್ಯಾಬ್ಲೊ ಮೇಲೆ ಆದಿ ಶಂಕರಾಚಾರ್ಯರನ್ನು ಹೇರಿಕೆ ಮಾಡಲು ತಜ್ಞರ ಸಮಿತಿ ಮೊಂಡು ಹಠ ಹಿಡಿದಿದ್ದು ಶ್ರೀ ನಾರಾಯಣ ಗುರು ಅವರಿಗೆ ಮಾತ್ರವಲ್ಲ ಕೇರಳದ ಇಡೀ ಪ್ರಗತಿಪರ ಸಾಮಾಜಿಕ-ಸಾಂಸ್ಕೃತಿಕ ಪರಂಪರೆಗೇ ಎಸಗಿದ ಅವಮಾನವಾಗಿದೆ.

ಅಸಮರ್ಥನೀಯ ಸಮರ್ಥನೆ

ತಮ್ಮ ರಾಜ್ಯಗಳ ಟ್ಯಾಬ್ಲೊಗಳನ್ನು ತಿರಸ್ಕರಿಸಿದ್ದನ್ನು ಪ್ರತಿಭಟಿಸಿ ಬಂಗಾಳ ಮತ್ತು ತಮಿಳು ನಾಡು ರಾಜ್ಯಗಳ ಮುಖ್ಯಮಂತ್ರಿಗಳು ಬರೆದ ಪತ್ರಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಉತ್ತರ ಬರೆದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಟ್ಯಾಬ್ಲೊ ಆಯ್ಕೆಗೆ ಒಂದು ಉತ್ತಮ ವ್ಯವಸ್ಥೆಯಿದೆ. ಈಗಿನ ಆಯ್ಕೆ ಸರಿಯಾಗಿದೆ ಎಂದು ಅಸಮರ್ಥನೀಯ ಸಮರ್ಥನೆ ನೀಡಿದ್ದಾರೆ. ತಜ್ಞರ ಸಮಿತಿಯಲ್ಲಿ ಕಲೆ, ಸಂಸ್ಕೃತಿ, ಸಂಗೀತ, ವಾಸ್ತುಶಿಲ್ಪ ಮತ್ತಿತರ ಕ್ಷೇತ್ರಗಳ ಪ್ರಮುಖರು ತಜ್ಞರು ಇರುತ್ತಾರೆ ಎಂದು ಸಿಂಗ್ ಹೇಳಿದ್ದಾರೆ. ಈ ತಜ್ಞರು ಯಾರು ಎಂದು ದೇಶಕ್ಕೆ ಗೊತ್ತಾಗಬೇಕು. ದೇಶದ 75ನೇ ಸ್ವಾತಂತ್ರ್ಯೋತ್ಸವ ವಿಷಯವಸ್ತುವಾಗಿರುವ ಗಣ ರಾಜ್ಯ ಪರೇಡ್‌ನಲ್ಲಿ ಆದಿ ಶಂಕರಾಚಾರ್ಯ ಹೆಚ್ಚು ಪ್ರಸ್ತುತರಾಗುತ್ತಾರೆ ಎಂದು ಪರಿಗಣಿಸಿದವರು ಯಾರು ಎನ್ನುವುದೂ ದೇಶಕ್ಕೆ ತಿಳಿಯಬೇಕು.

ಕೇಂದ್ರೀಯ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ) ಕೂಡ ನೇತಾಜಿ ಕುರಿತ ಸ್ತಬ್ಧ ಚಿತ್ರ ಸಿದ್ಧಪಡಿಸಿದೆ ಎಂದು ಬಂಗಾಳ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ರಕ್ಷಣಾ ಮಂತ್ರಿ ಉಲ್ಲೇಖಿಸಿದ್ದಾರೆ. ನೇತಾಜಿಯಂಥ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ನಾಯಕನಿಗೆ ಜನ್ಮ ನೀಡಿದ ಹೆಮ್ಮೆಯಿರುವ ಬಂಗಾಳ ರಾಜ್ಯಕ್ಕಿಂತ ಕೇಂದ್ರೀಯ ಸಚಿವಾಲಯದ ಇಲಾಖೆಯೊಂದಕ್ಕೆ ಆದ್ಯತೆ ನೀಡುವುದು ಎಷ್ಟು ಸರಿ?.

RD tableux 190122
ವ್ಯಂಗ್ಯಚಿತ್ರ ಕೃಪೆ: ಪಿ.ಮಹಮ್ಮದ್

ಮೋದಿ ಸರಕಾರದ ಪಕ್ಷಪಾತಿ ಹಾಗೂ ಸಂಕುಚಿತ ಧೋರಣೆಯಿಂದಾಗಿ ಗಣ ರಾಜ್ಯೋತ್ಸವ ಪರೇಡ್‌ನಲ್ಲಿ ದಕ್ಷಿಣ ಭಾರತದ ರಾಜ್ಯಗಳು ಅಕ್ಷರಶಃ ಪ್ರಾತಿನಿಧ್ಯ ಕಳೆದುಕೊಂಡಿವೆ. ಪ್ರತಿಪಕ್ಷಗಳ ಆಡಳಿತವಿರುವ ಮೂರು ರಾಜ್ಯಗಳ ಸ್ತಬ್ಧ ಚಿತ್ರಗಳನ್ನು ದುರುದ್ದೇಶದಿಂದ ತಿರಸ್ಕರಿಸಿರುವುದು ಕೇಂದ್ರ ಸರ್ಕಾರದ ಆಳವಾದ ಒಕ್ಕೂಟ-ವಿರೋಧಿ ಧೋರಣೆಯನ್ನು ಸ್ಪಷ್ಟಪಡಿಸುತ್ತದೆ. ಜನವರಿ 26 ಭಾರತೀಯ ಗಣರಾಜ್ಯ ಹಾಗೂ ಭಾರತವನ್ನು ರಾಜ್ಯಗಳ ಒಕ್ಕೂಟ ಎಂದು ನಿರೂಪಿಸಿರುವ ಸಂವಿಧಾನದ ಆಗಮನವನ್ನು ಸಂಕೇತಿಸುವ ದಿನ. ಸಂವಿಧಾನದ ಈ ಮೂಲ ಆಚಾರ ಸೂತ್ರವನ್ನೇ ಮೋದಿ ಸರಕಾರ ಉಲ್ಲಂಘಿಸುತ್ತಿದೆ.

 ಅನು: ವಿಶ್ವ

 

Leave a Reply

Your email address will not be published. Required fields are marked *