ಕೋವಿಡ್ ಮೂರನೇ ಅಲೆ ಎದುರಿಸಲು ಸಜ್ಜಾಗದ ಸರ್ಕಾರ

ನಿತ್ಯಾನಂದಸ್ವಾಮಿ

ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ವೇಗವಾಗಿ ವ್ಯಾಪಿಸುತ್ತಿದೆ. ಕೊರೊನಾ ರೂಪಾಂತರಿ ತಳಿ ಒಮೈಕ್ರಾನ್ ಸೊಂಕಿನ ಲಕ್ಷಣಗಳು ಹೆಚ್ಚಾಗಿ ಕಂಡು ಬರದಿದ್ದರೂ ಕೋವಿಡ್ ಸಾಂಕ್ರಾಮಿಕದ ಲಕ್ಷಣಗಳಾದ ಕೆಮ್ಮು, ಜ್ವರ, ನೆಗಡಿ ಪೀಡಿತರ ಸಂಖ್ಯೆ ಸಾಮಾನ್ಯವಾಗತೊಡಗಿದೆ. ಸೋಂಕಿನ ತೀವ್ರತೆ ಕಡಿಮೆ ಇದ್ದುದರಿಂದ ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಹೋಗದೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಕೊರೊನಾ ಸೋಕಿತರೆಷ್ಟು? ಬೇರೆ ಕಾಯಿಲೆ ಪೀಡಿತರೆಷ್ಟು ಎಂಬ ಸ್ಪಷ್ಟ ಮಾಹಿತಿ ಸರ್ಕಾರದಲ್ಲಿ ಇಲ್ಲ. ಆರೋಗ್ಯ ಕ್ಷೇತ್ರದ ತಜ್ಞರ ಪ್ರಕಾರ ಪೆಬ್ರುವರಿ ತಿಂಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಆತಂಕದ ಮಟ್ಟ ತಲಪಲಿದೆ. ಬಸವರಾಜ ಬೊಮ್ಮಾಯಿ ಸರ್ಕಾರ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗದಿರುವುದು ದೇಶಕಂಡ ಬಹುದೊಡ್ಡ ದುರಂತವಾಗಲಿದೆ.

ಕೋವಿಡ್ ಮೊದಲ ಅಲೆಯಲ್ಲಿ 9 ಲಕ್ಷಕ್ಕೂ ಹೆಚ್ಚು ಮಂದಿ ಕೋವಿಡ್ ಪೀಡಿತರಾಗಿದ್ದರು. 12 ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು. ಎರಡನೇ ಅಲೆಯಲ್ಲಿ 20 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿತರಾಗಿ 25 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಎರಡನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ದಿಢೀರ್‌ ಹೆಚ್ಚಾದ ಕಾರಣದಿಂದಾಗಿ ಎರಡನೇ ಅಲೆ ಮುಗಿಯುವ ಹೊತ್ತಿಗೆ ರಾಜ್ಯದಲ್ಲಿ 37 ಸಾವಿರಕ್ಕೂ ಹೆಚ್ಚು ಜನ ಅಸುನೀಗಿದ್ದರು.

ಬಸವರಾಜ ಬೊಮ್ಮಾಯಿ ಸರ್ಕಾರ ಮುಂದೆ ಬರಬಹುದಾದ ಅನಿರೀಕ್ಷಿತ ಗಂಡಾಂತರವನ್ನು ಎದುರಿಸಲು ಸಜ್ಜಾಗುತ್ತಿಲ್ಲ. ಸರ್ಕಾರದ ಸಿದ್ಧತೆ ಕೇವಲ ಲಾಕ್‌ಡೌನ್ ಘೋಷಣೆಗೆ ಸೀಮಿತವಾಗಿದೆ. ಮುಂಬರುವ ದಿನಗಳಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಬಹುದು. ಆಗ ಹಾಸಿಗೆಗಳ ಕೊರತೆ ಉಂಟಾಗಬಹುದು. ಹಾಸಿಗೆಗಳಿಗಾಗಿ ಸೋಂಕಿತರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಬೇಕಾಗಬಹುದು. ತ್ರೀವ್ರ ಆರೋಗ್ಯ ಸಮಸ್ಯೆ ಇರುವವವರಿಗೆ ತುರ್ತು ಚಿಕಿತ್ಸೆ ಒದಗಿಸಲು ತೀವ್ರ ನಿಗಾ ಘಟಕ (ಐಸಿಯು)ಗಳು ಅಗತ್ಯಕ್ಕೆ ತಕ್ಕಂತೆ ಪೂರೈಸಲು ವ್ಯವಸ್ಥೆ ಇರಬೇಕು. ಸೋಂಕಿತರಿಗೆ ಆಮ್ಲಜನಕವನ್ನು ಒದಗಿಸಲು ಅಗತ್ಯ ಪ್ರಮಾಣದಲ್ಲಿ ವೆಂಟಿಲೇಟರ್‌ ಗಳನ್ನು ಕೊರತೆಯಾಗದಂತೆ ಒದಗಿಸುವ ವ್ಯವಸ್ಥೆ ಇರಬೇಕು.

ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಹಾಸಿಗೆಗಳಲ್ಲದೆ ಅಗತ್ಯ ಔಷಧ, ಆಮ್ಮಜನಕ ಸೇರಿದಂತೆ ರೋಗ ಸಂಬಂಧಿಸಿದ ಯಾವುದೇ ಔಷದೋಪಚಾರಗಳ ಯಾವುದೇ ಕೊರತೆಯಾಗದಂತೆ ಸರ್ಕಾರ ಪೂರ್ವಸಿದ್ಧತೆ ಮಾಡಿಕೊಂಡಿರಬೇಕು. ಆದರೆ ಬಸವರಾಜ ಬೊಮ್ಮಾಯಿ ಸರ್ಕಾರವಾಗಲಿ, ಆರೋಗ್ಯ ಇಲಾಖೆಯಾಗಲಿ ಇಂತಹ ವಿಷಯಗಳಿಗೆ ಕಾಳಜಿ ತೋರುವುದು ಕಾಣುತ್ತಿಲ್ಲ. ಸರ್ಕಾರದ ಈ ಬೇಜವಾಬ್ದಾರಿತನ ಅಕ್ಷ್ಯಮ್ಯವಾಗಿದೆ. ಕೊರೊನಾ ಸೋಂಕು ಶೀಘ್ರಗತಿಯಲ್ಲಿ ಹಳ್ಳಿಗಳಿಗೆ ಹರಡುತ್ತಿದೆ. ಮೂರನೇ ಅಲೆ ಮಕ್ಕಳಲ್ಲಿ ಹೆಚ್ಚು ಪರಿಣಾಮ ಉಂಟುಮಾಡುತ್ತಿದೆ. ಶಾಲೆ, ಕಾಲೇಜು, ವಿದ್ಯಾರ್ಥಿ ನಿಲಯಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಕಳವಳಕಾರಿ ಸಮಯದಲ್ಲಿ ಸರ್ಕಾರ ಮಲಗಿಕೊಳ್ಳಬಾರದು. ಎಚ್ಚರವಾಗಿದ್ದು ಸಜ್ಜಾಗಿರಬೇಕು.

ಸಧ್ಯಕ್ಕೆ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿಲ್ಲ. ಆದರೆ ಪರಿಸ್ಥಿತಿ ಬದಲಾಗಬಹುದು. ಹೀಗಾಗಿ ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯೊಲು ಅಂಬುಲೆನ್ಸ್ ಸೇವೆ ಅಷ್ಟೇನು ಬೇಕಾಗಿಲ್ಲ. ಮೂರನೇ ಅಲೆ ಉಲ್ಬಣಗೊಂಡರೆ ಗಣನೀಯ ಸಂಖ್ಯೆಯಲ್ಲಿ ಅಂಬುಲೆನ್ಸ್ ಸೇವೆ ಬೇಕಾಗುವುದು. ಸರ್ಕಾರ ಮೊದಲೇ ಸಜ್ಜಾಗಿರದಿದ್ದರೆ ರೋಗಿಗಳನ್ನು ಸಕಾಲದಲ್ಲಿ ಆಸ್ಪತ್ರೆಗಳಿಗೆ ತಲುಪಿಸಲಾಗದೆ ಅವರು ಪ್ರಾಣ ಕಳೆದುಕೊಳ್ಳುವಂತಾಗಬಹುದು. ಹಿಂದಿನ ಸಂದರ್ಭದಲ್ಲಿ ಹೀಗಾಗಿತ್ತು. ಅಂಬುಲೆನ್ಸ್ ಸೇವೆಯ ಕೊರತೆಯಿಂದ ಸಾವಿರಾರು ಜನ ಸಾಯುವಂತಾಯಿತು.

ಕೋವಿಡ್ ಚಿಕಿತ್ಸೆಗೆ ನಿಗದಿತ 2 ಲಕ್ಷ ಹಾಸಿಗೆಗಳಲ್ಲಿ 50 ಸಾವಿರ ಹಾಸಿಗೆಗಳು ಮಾತ್ರ ಸರ್ಕಾರಿ ಉಳಿದೆಲ್ಲವೂ ಖಾಸಗಿ ಆಸ್ಪತ್ರೆಗಳಿಗೆ ಸೇರಿವೆ. ಈ ಆಸ್ಪತ್ರೆ ವ್ಯವಸ್ಥೆಯನ್ನು ಜನ ಸಾಮಾನ್ಯರ ಹಿತಕ್ಕಾಗಿ ಮಾಡಲಾಗಿದೆಯಾ ಖಾಸಗಿ ಆಸ್ಪತ್ರೆಗಳು ಲಾಭಗಳಿಸಲು ನೀಡಲಾಗುತ್ತಿದೆಯಾ ಎಂಬ ಪ್ರಶ್ನೆ ಬಲವಾಗಿ ಎದ್ದು ಬರುತ್ತದೆ. ಆರೋಗ್ಯ ಸೇವೆ ಇಂದು ಲಾಭದಾಯಕ ದಂಧೆಗಳಲ್ಲಿ ಒಂದಾಗಿದೆ. ಇಲ್ಲಿ ರೋಗಿ ಮತ್ತು ಆತನ ಆರೋಗ್ಯ ಮುಖ್ಯವಲ್ಲ. ಇಲ್ಲಿ ವೈದ್ಯ ಮತ್ತು ಆತ ಗಳಿಸುವ ಲಾಭವೇ ಮುಖ್ಯ. ಇಂತಹ ಲಾಭಕೋರ ಖದೀಮರ ಪರವಾಗಿರುವ ಸರ್ಕಾರಗಳು ಅಧಿಕಾರ ವಹಿಸಿಕೊಳ್ಳುತ್ತವೆ. ಕೊರೊನಾದಂತಹ ಸಾಂಕ್ರಾಮಿಕ ಹಬ್ಬಿ ಹರಡುವುದನ್ನು ಅವರು ಸ್ವಾಗತಿಸುತ್ತಾರೆ. ಇಂತಹ ಪ್ರವೃತ್ತಿಯನ್ನು ಎಲ್ಲರೂ ಸೇರಿ ಖಂಡಿಸಬೇಕಾಗಿದೆ. ಆರೋಗ್ಯ ಎಲ್ಲರ ಹಕ್ಕಾಗುವಂತೆ ಹೋರಾಡಬೇಕಾಗಿದೆ.

Leave a Reply

Your email address will not be published. Required fields are marked *