ಜೀವ ರಕ್ಷಿಸಿ-ಜೀವನ ಉಳಿಸಿ-ಜೀವಿಸಲು ಬಿಡಿ ಎಂಬ ಘೋಷಣೆಯೊಂದಿಗೆ ರಾಜ್ಯಾದ್ಯಂತ ಪ್ರತಿಭಟನಾ ಪ್ರದರ್ಶನ

ಕೋವಿಡ್ ವಾರಾಂತ್ಯ ಕರ್ಪ್ಯೂ ವಾಪಸ್ಸು ಪಡೆದು ಹಲವು ಕ್ಷೇತ್ರಗಳಿಗೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಸಡಲಿಕೆ ಮಾಡಿದ ರಾಜ್ಯ ಸರ್ಕಾರ ಜನರು ತಮ್ಮ ಹಕ್ಕುಗಳ ಸಂರಕ್ಷಣೆಗಾಗಿ ಹಾಗೂ ರೈತ, ಕಾರ್ಮಿಕ, ಜನ ವಿರೋಧಿ ನೀತಿಗಳು, ಕಾನೂನುಗಳ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಲು ಇರುವ ಸಂವಿಧಾನದ ಮೂಲಭೂತ ಹಕ್ಕಾಗಿರುವ ಪ್ರತಿಭಟನೆಯ ಮೇಲೆ ನಿರ್ಬಂಧ ಮುಂದುವರೆಸಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವೆಂದು ಏಳು ಪಕ್ಷಗಳ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನಗಳು ನಡೆದಿವೆ.

‘ಜೀವ ರಕ್ಷಿಸಿ, ಜೀವನ ಉಳಿಸಿ, ಜೀವಿಸಲು ಬಿಡಿ’ ಎನ್ನುವ ಘೋಷಣೆಯೊಂದಿಗೆ ಇಂದು ಮನೆ ಮನೆಯಿಂದ, ಕಚೇರಿ-ಕಾರ್ಖಾನೆಗಳ ಮುಂಭಾಗ ಕೋವಿಡ್ ನಿಯಮಗಳನ್ನು ಪಾಲಿಸಿ ರಾಜ್ಯದಾದ್ಯಂತ ಪ್ರತಿಭಟನೆ ಮಾಡಲು ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳು ಕರೆ ನೀಡಿದ್ದವು.

ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) –ಸಿಪಿಐ(ಎಂ), ಭಾರತ ಕಮ್ಯುನಿಸ್ಟ್ ಪಕ್ಷ –ಸಿಪಿಐ, ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯ (ಕಮ್ಯುನಿಸ್ಟ್)- ಎಸ್‌ಯುಸಿಐ(ಸಿ), ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ, ಲೆನಿನ್‌ವಾದಿ) (ಲಿಬರೇಷನ್) –ಸಿಪಿಐ(ಎಂಎಲ್‌)-(ಲಿಬರೇಷನ್‌), ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ – ಎಐಎಫ್‌ಬಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ (ಅಂಬೇಡ್ಕರ್‌ವಾದ) –ಆರ್‌ಪಿಐ, ಸ್ವರಾಜ್ ಇಂಡಿಯಾ ರಾಜ್ಯ ಘಟಕದ ಸಮಿತಿಯ ಕರೆ ಮೇರೆಗೆ ಪ್ರತಿಭಟನೆಗಳು ನಡೆದಿವೆ.

ಕೋವಿಡ್ 3ನೇ ಅಲೆ ದಿನೆ ದಿನೇ ಸಾವಿರಾರು ಸಂಖ್ಯೆಯಲ್ಲಿ ಹೆಚ್ಚಳಗೊಳ್ಳುತ್ತದೆ. ವಾರಾಂತ್ಯ ಲಾಕ್ ಡೌನ್ ಮತ್ತಿತರ ಕ್ರಮಗಳಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಪರಿಹಾರ ಒದಗಿಸಲು ಸಾಧ್ಯವಾಗದ ರಾಜ್ಯದ ಬಿಜೆಪಿ ಸರ್ಕಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಸ್ಪತ್ರೆಗೆ ದಾಖಲಾಗುವ ಕೋವಿಡ್ ಸೋಕಿಂತರ ದರ ಆಧರಿಸಿ ವಾರಾಂತ್ಯ ಕರ್ಫ್ಯೂ ವಾಪಸ್ಸು ಪಡೆದಿದೆ. ಅಲ್ಲದೇ ಮದುವೆ ಸಮಾರಂಭಗಳಿಗೆ ಹೊರಾಂಗಣದಲ್ಲಿ 200, ಒಳಾಂಗಣದಲ್ಲಿ 100 ಮಂದಿಗೆ ಅವಕಾಶ, ದೇವಾಲಯಗಳಲ್ಲಿ ದರ್ಶನ, ಮಳಿಗೆಗಳಲ್ಲಿ, ಸಿನಿಮಾ, ಹೋಟೆಲುಳಲ್ಲಿ ಶೇ 50:50, ಸೇರಿದಂತೆ ಮತ್ತಿತರ ವಾಣಿಜ್ಯ ಚಟುವಟಿಕೆಗಳಿಗೆ ಕೆಲ ನಿಬಂಧನೆಗಳಿಗೆ ಒಳಪಟ್ಟು ವಾರಪೂರ್ತಿ ನಡೆಸಲು ಅನುವುಗೊಳಿಸಿದೆ. ಕೋವಿಡ್ ಸೋಂಕಿಗೆ ಒಳಗಾದ ಜನರಿಗೆ ಪರಿಹಾರವಾಗಲಿ, ಕಾರ್ಮಿಕರಿಗೆ ವೇತನವಾಗಲಿ ನೀಡುವ ಕುರಿತು ಆದೇಶಿಸಿಲ್ಲ.

ಸರ್ಕಾರ ತನ್ನ ವೈಪಲ್ಯಗಳನ್ನು ಮರೆಮಾಚಲು ಹಾಗೂ ಜನಾಕ್ರೋಶವನ್ನು ತಡೆಯಲು ಪ್ರತಿಭಟನೆಗಳ ಮೇಲೆ ನಿಬಂಧನೆಗಳನ್ನು ವಿಧಿಸಿದೆ.

ಸಿಪಿಐ(ಎಂ) ಪಕ್ಷದ ರಾಜ್ಯ ಸಮಿತಿ ಕಛೇರಿ ಇಎಂಎಸ್‌ ಭವನ ಮುಂಭಾಗ ನಡೆದ ಮತ ಪ್ರದರ್ಶನದಲ್ಲಿ ರಾಜ್ಯ ಸಾಮಾನ್ಯ ಶಾಖೆ ಕಾರ್ಯದರ್ಶಿ ಎಸ್.ವೈ. ಗುರುಶಾಂತ್ ಮಾತನಾಡಿ ಕೊರೊನಾ ಸೋಂಕಿನ ಪಿಡುಗಿಗೆ ಅಪಾರ ಸಂಖ್ಯೆಯಲ್ಲಿ ಜನ ಬಲಿಯಾಗಿದ್ದಾರೆ ಮತ್ತು ಈ ಅವಧಿ ಹೊರಿಸಿದ ಅಪಾರ ಸಂಕಷ್ಟಗಳ ಕುರಿತು ವಿವರಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನತೆಯ ಜೀವ- ಜೀವನವನ್ನು ಸಂರಕ್ಷಿಸಲು ಪರಿಹಾರವನ್ನು ಘೋಷಿಸಬೇಕು’ ಎಂದು ಆಗ್ರಹಿಸಿದರು.

ಕೊರೊನಾ ಎರಡು ಅಲೆಗಳ ಬಿಕ್ಕಟ್ಟಿನ ಸಂಕಷ್ಟದ ಸಂದರ್ಭವನ್ನು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ತಮ್ಮ ಜನವಿರೋಧಿ ನೀತಿಗಳನ್ನು ಜಾರಿಗೊಳಿಸಲು  ದುರುಪಯೋಗ ಮಾಡಿಕೊಳ್ಳುತ್ತಿರುವುದು ಮತ್ತು ತಮ್ಮ ನೀತಿಗಳಿಂದ ಬೇಸತ್ತ ಜನರ ಹೋರಾಟಗಳು ಬೆಳೆದು ಬರದಂತೆ ಜನತೆಯನ್ನು  ಕೋಮುವಾದಿ, ಮತೀಯವಾದಿ  ನೆಲೆಗಳಿಂದ ವಿಭಜಿಸಲು, ಹಿಂಸಾಚಾರ, ದ್ವೇಷ ಹೆಚ್ಚಿಸಲು ಯತ್ನಿಸುತ್ತಿರುವುದನ್ನು ಅವರು ಖಂಡಿಸಿದರು.

ಸಿಪಿಐ(ಎಂ) ರಾಜ್ಯ ಮುಖಂಡ ಜಿ.ಎನ್ ನಾಗರಾಜ್ “ನೆರೆಹೊರೆಯ ಪಾಕಿಸ್ತಾನ, ಬಾಂಗ್ಲಾದೇಶ ಗಳಂತಹ ಸಣ್ಣ ದೇಶಗಳು ಕೊರೊನಾ ಸಂಕಷ್ಟದಲ್ಲಿ ಜನತೆಗೆ ನೀಡಿದ ಪರಿಹಾರದಷ್ಟಾದರೂ ಕೊಡದ ಕೇಂದ್ರ ಸರಕಾರದ ನೀತಿಯನ್ನು ಖಂಡಿಸಿದರು.

ಎಡಪಕ್ಷಗಳು ಮತ್ತು ಇತರೆ ಪ್ರಜಾಸತ್ತಾತ್ಮಕ ಪಕ್ಷಗಳು ಆಗ್ರಹಿಸುತ್ತಿರುವ ಪ್ರಮುಖ ಬೇಡಿಕೆಗಳನ್ನು ಸಿಪಿಐ(ಎಂ) ರಾಜ್ಯ ಸಮಿತಿಯ ಸದಸ್ಯ, ಕಾರ್ಮಿಕ ಮುಖಂಡ ಕೆ.ಮಹಾಂತೇಶ್ ಮಂಡಿಸಿದರು.

ಈ ಪ್ರತಿಭಟನೆಯಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಸಿ.ಬಯ್ಯಾರೆಡ್ಡಿ,  ಬ್ಯಾಂಕ್ ನೌಕರರ ಅಖಿಲ ಭಾರತ ಮುಖಂಡ ರತ್ನಾಕರ್ ಶೆಣೈ,  ಸಿಪಿಐ(ಎಂ) ರಾಜ್ಯ ಸಮಿತಿಯ ಸದಸ್ಯ, ಚಂದ್ರಪ್ಪ ಹೊಸ್ಕೇರಾ, ಮೋನಪ್ಪ, ಕರ್ನಾಟಕ ರಾಜ್ಯ ಅಂಗವಿಕಲರ ಸಂಘಟನೆ ರಾಜ್ಯ ಕಾರ್ಯದರ್ಶಿ ಜಿ.ಎನ್. ಯಶಸ್ವಿ, ಮುಖಂಡರಾದ ರಾಜನ್, ನಾಗರಾಜ್, ನಿತಿನ್ ಮುಂತಾದವರು ಭಾಗವಹಿಸಿದ್ದರು.

ಸಿಪಿಐ(ಎಂ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿ ಕಛೇರಿ, ಜ್ಯೋತಿಬಸು ಭವನ ಮುಂಭಾಗ ನಡೆದ ಮತ ಪ್ರದರ್ಶನದಲ್ಲಿ ನಗರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮತ್ತಷ್ಟು ವೈದ್ಯಕೀಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಸೋಂಕು ಹರಡದಂತೆ ಎಚ್ಚರವಹಿಸಬೇಕು, ಸೋಂಕಿತರಿಗೆ ಪರಿಹಾರ, ಸೋಂಕಿತ ಕಾರ್ಮಿಕರಿಗೆ ವೇತನ ಖಾತ್ರಿ ಮಾಡಬೇಕು ಹಾಗೂ ಕೋವಿಡ್ ನಿಬಂಧನೆಗಳಿಗೆ ಒಳಪಟ್ಟು ಜನರು ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳ ಮೂಲಕ ಪ್ರತಿಭಟನೆಗಳನ್ನು ನಡೆಸಿ ತಮ್ಮ ಮೂಲಭೂತ ಹಕ್ಕುನ್ನು ಚಲಾಯಿಸಲು ಪ್ರತಿಭಟನೆಗಳ ಮೇಲಿನ ನಿರ್ಬಂಧಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.

ಸಿಪಿಐ(ಎಂ) ಪಕ್ಷದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ಬುಗತಗಹಳ್ಳಿ‌ ಶಾಖೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ತೆರಿಗೆ ರಹಿತ ಪ್ರತಿ ಕುಟುಂಬಕ್ಕೂ ರೂ. 10 ಸಾವಿರ ಪರಿಹಾರ ಮೊತ್ತ ನೀಡಬೇಕು. ತಲಾ ಹತ್ತು ಕೆ.ಜಿ. ಅಕ್ಕಿ ಒದಗಿಸಬೇಕು ಆಗ್ರಹಿಸಿ ರೈತ, ಕೂಲಿ ಕಾರ್ಮಿಕರ ಪ್ರತಿಭಟನೆ ನಡೆಸಿದರು.

ಕೋವಿಡ್ ಮೂರನೇ ಅಲೆ ತಡೆಗಟ್ಟಲು ಕ್ರಮ ಹಾಗೂ ಎಲ್ಲಾ ಜನರಿಗೆ ಕನಿಷ್ಠ ಪರಿಹಾರಕ್ಕೆ ಒತ್ತಾಯಿಸಿ ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳು ಕರೆ ನೀಡಿದ್ದ ಮನೆ- ಮನೆಯಿಂದ ಪ್ರತಿಭಟನೆಯ ಭಾಗವಾಗಿ ಮೈಸೂರು ಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆದವು. ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಸಲ್ಲಿಸಿದರು.

ಉಳಿದಂತೆ, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಕಲಬುರಗಿ, ಕೋಲಾರ, ಉತ್ತರ ಕನ್ನಡ, ಉಡುಪಿ, ತುಮಕೂರು, ಧಾರವಾಡ, ಬಳ್ಳಾರಿ, ಬೀದರ್‌, ಕೊಪ್ಪಳ, ಯಾದಗಿರಿ, ವಿಜಯಪುರ, ಹಾಸನ, ಮತ್ತತರ ಕಡೆಗಳಲ್ಲಿ 7 ಪಕ್ಷಗಳ ಮುಖಂಡರು, ಕಾರ್ಯಕರ್ತರು ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಿದರು.

Leave a Reply

Your email address will not be published. Required fields are marked *