ಕೋಲಾರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕೆಂದು ಸಿಪಿಐ(ಎಂ) ಆಗ್ರಹ

ಗಣರಾಜ್ಯೋತ್ಸವ ಅಂಗವಾಗಿ ಕೋಲಾರ ನಗರದಲ್ಲಿರುವ ಅಂಬೇಡ್ಕರ್‌ ಪ್ರತಿಮೆಗೆ ಮಾಲಾಪರ್ಣೆ ಮಾಡಿದ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ಸದಸ್ಯರು ಸಂವಿಧಾನ ಪೀಠಿಕೆ ಓದುವ ಮೂಲಕ ಆಚರಣೆ ಮಾಡಿದರು.

ಕೋಲಾರ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಮುಂಬರುವ ಬಜೆಟ್‌ನಲ್ಲಿ ಹೆಚ್ಚಿನ ಹಣ ಕಾಯ್ದಿರಿಸಲು ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಿಪಿಐ(ಎಂ) ಪಕ್ಷದ ಸದಸ್ಯರು ಮನವಿ ಸಲ್ಲಿಸಿದರು.

ಅವಿಭಜಿತ ಕೋಲಾರ ಜಿಲ್ಲೆ ಪ್ರಾರಂಭದಿಂದಲೂ ಬರಪೀಡಿತವಾಗಿದ್ದು ಯಾವುದೇ ನದಿ ನಾಲೆಗಳಿಲ್ಲದೇ ಕುಡಿಯಲು ಮತ್ತು ಕೃಷಿಗೆ ಕೊಳವೆ ಬಾವಿಗಳನ್ನು ಆಶ್ರಯಿಸಿ ಅತ್ಯಂತ ಸಂಕಷ್ಟ ಪರಿಸ್ಥಿತಿಯಲ್ಲಿ ಜನಜೀವನ ಮಾಡಲು ತೊಳಲಾಡುತ್ತಿದ್ದಾರೆ. ಕೃಷಿ ಪ್ರಧಾನವಾಗಿರುವಂತಹ ನಮ್ಮ ಜಿಲ್ಲೆಯ ಜನತೆ ಹಲವಾರು ಕಷ್ಟಗಳ ಮಧ್ಯೆ ಚಿನ್ನ, ಮಾವು, ಹಾಲು, ರೇಷ್ಮೆ, ಆಲೂಗಡ್ಡೆ, ಟೊಮೊಟೋ ಇನ್ನಿತರ ಬೆಳೆಗಳನ್ನು ಬೆಳೆದು ಕೃಷಿ ಮತ್ತು ಕೈಗಾರಿಕಾ ಉತ್ಪಾದನೆಯಲ್ಲಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸುತ್ತಿದ್ದಾರೆ. ಇದರೊಂದಿಗೆ ಕಲೆ ಸಾಹಿತ್ಯ ಉದ್ಯಮ ಉದ್ಯೋಗ ಸೇವೆ ಕಲೆ ಕ್ರೀಡೆ  ರಾಜಕೀಯ ಕ್ಷೇತ್ರ ಸೇರಿದಂತೆ ಹತ್ತಾರು ಕ್ಷೇತ್ರಗಳಿಂದ ನಮ್ಮ ಚಿನ್ನದ ಜಿಲ್ಲೆಯ ಜನತೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ ಎಂದರು.

ಇಂತಹ ಶ್ರಮಜೀವಿಗಳ ಜಿಲ್ಲೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಯಾವುದೇ ರೀತಿಯಾದ ಗುರುತರವಾದ ಯೋಜನೆಗಳು ಜಾರಿಯಾಗದಿರುವುದು ನೋವಿನ ಸಂಗತಿ, ಅತ್ಯಂತ ಕ್ರಿಯಾಶೀಲ ಪ್ರಬುದ್ಧ ರಾಜಕೀಯ ನಾಯಕರು ಜಿಲ್ಲೆಯನ್ನು ಹಲವಾರು ಬಾರಿ ಪ್ರತಿನಿಧಿಸುತ್ತಿದ್ದರೂ ಜಿಲ್ಲೆಯ ಅಭಿವೃದ್ಧಿಗಾಗಿ ಕೊಡುಗೆಗಳು ಸಾಲದಾಗಿದೆ. ಜಿಲ್ಲೆಯ ಜನರ ಆಶಯಗಳಿಗೆ ಈಗಲಾದರೂ ಜನಪ್ರತಿನಿಧಿಗಳು ಸ್ಪಂದಿಸಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಕೆಲವು ಯೋಜನೆಗಳನ್ನು ತರಲು ತಾವುಗಳು ಪ್ರಯತ್ನ ಪಡಲೇಬೇಕಾಗಿದೆ. ಈ ನಿಟ್ಟಿನಲ್ಲಿ ನಿಮ್ಮೊಂದಿಗೆ ಜಿಲ್ಲೆಯ ಜನತೆ ಹಾಗೂ ನಮ್ಮ ಪಕ್ಷ ಸಂಪೂರ್ಣವಾಗಿ ಇರುತ್ತದೆ ಎಂದರು.

ಹಲವಾರು ಸಮಾವೇಶ, ವಿಚಾರ ಸಂಕಿರಣಗಳಿಂದ ಜಿಲ್ಲೆಯ ಜನರ ಅಭಿವೃದ್ಧಿಗಾಗಿ ವ್ಯಕ್ತವಾದ ಕೆಲವು ಬೇಡಿಕೆಗಳನ್ನು ತಮಗೆ ಮನವಿ ಮೂಲಕ ತಿಳಿಸುತ್ತಿದ್ದು, ಮುಂಬರುವ ಬಜೆಟ್ ಅಧಿವೇಶನದಲ್ಲಿ ನಮ್ಮ ಜಿಲ್ಲೆಗೆ ಅನ್ಯಾಯವಾಗದಂತೆ ಜಿಲ್ಲೆಯ ಅಭಿವೃದ್ಧಿಯಲ್ಲಿ ಅತ್ಯಂತ ಕಾಳಜಿ ವಹಿಸುತ್ತಿರುವ ತಾವುಗಳು ಈ ಬೇಡಿಕೆಗಳನ್ನು ಜಾರಿಗೊಳಿಸಲು ಪರಿಣಾಮಕಾರಿ ಜಾರಿ ಮಾಡಬೇಕು. ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಮತ್ತು ಇಂಜನಿಯರಿಂಗ್ ಕಾಲೇಜು ಸ್ಥಾಪನೆ, ಕೆರೆಗಳಿಗೆ ಹರಿಸುತ್ತಿರುವ ಕೆಸಿ ವ್ಯಾಲಿ ನೀರನ್ನು ಮೂರನೇ ಹಂತದ ಶುದ್ದೀಕರಣ ಮಾಡಬೇಕು. ಜಿಲ್ಲೆಗೆ ಡಾ ಪರಮಶಿವ ವ್ಯಕ್ತ ವರದಿಯಂತೆ ನೀರಾವರಿ ಯೋಜನೆಗಳು ಜಾರಿಯಾಗಬೇಕು ಹಾಗೂ ಒತ್ತುವರಿಯಾಗಿರುವ ಜಿಲ್ಲೆಯ ಕೆರೆ, ಕುಂಟೆ, ರಾಜಕಾಲುವೆಗಳನ್ನು ತೆರವುಗೊಳಿಸಿ, ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಅಭಿವೃದ್ಧಿಗಾಗಿ ರೈಲ್ವೆ ಸಂಪರ್ಕ ಮಾರ್ಗಗಳನ್ನು ವಿಸ್ತರಣೆ ಮಾಡಬೇಕು ಹಾಗೂ ಈಗಾಗಲೇ ಮಂಜೂರಾಗಿರುವ ರೈಲ್ವೆ ಮಾರ್ಗಗಳನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರಬೇಕು ಮತ್ತು ಜಿಲ್ಲೆಯಲ್ಲಿ ರೈಲ್ವೆ ಕೋಚ್‌ ಪ್ಯಾಕ್ಟರಿ ಹಾಗೂ ರೈಲ್ವೆ ವರ್ಕ್ ಶಾಫ್ ಪ್ರಾರಂಭಿಸಬೇಕು. ತಾಲ್ಲೂಕುಗಳಿಂದ ರಾಷ್ಟ್ರೀಯ ಹೆದ್ದಾರಿಗಳೊಂದಿಗೆ ರಸ್ತೆಗಳ ಆಗಲೀಕರಣ ಹಾಗೂ ವರ್ತುಲ ರಸ್ತೆಗಳನ್ನು ನಿರ್ಮಾಣ ಮಾಡಬೇಕು.

ಜಿಲ್ಲೆಯಲ್ಲಿ ಟೊಮೋಟೊ, ಆಲೂಗಡ್ಡೆ, ಹಾಲು, ರೇಷ್ಮೆ, ಮಾವು ಒಳಗೊಂಡಂತಹ ಕೃಷಿಯಾಧಾರಿತ ಕೈಗಾರಿಕೆಗಳ ಸ್ಥಾಪನೆ ಮಾಡಬೇಕು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕೈಗಾರಿಕಾ ಪ್ರದೇಶಗಳನ್ನು ಆರಂಭಿಸಬೇಕು. ಇದರಲ್ಲಿ ಸ್ಥಳೀಯರಿಗೆ ಖಾಯಂ ಉದ್ಯೋಗ ನೀಡಬೇಕು ಮತ್ತು ಜಿಲ್ಲೆಯ ಕೈಗಾರಿಕೆಗಳಲ್ಲಿ ಕಾರ್ಮಿಕ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದರು.

 ಜಿಲ್ಲೆಯ ಹೆಮ್ಮೆಯ ಚಿನ್ನದ ಗಣಿ ಬಿಜಿಎಂಎಲ್‌ನ್ನು ಪುನಃಶ್ವೇತನಗೊಳಿಸಬೇಕು. ಹಿಂದಿನ ಕಾರ್ಮಿಕರಿಗೆ ಕಾರ್ಮಿಕ ಕಾನೂನು ರೀತ್ಯ ಪರಿಹಾರ ಮತ್ತು ಕಾರ್ಮಿಕರ ವಾಸದ ಮನೆಗಳನ್ನು ಕಾರ್ಮಿಕರಿಗೆ ನೀಡಬೇಕು. ಬೆಮೆಲ್ ಖಾಸಗೀಕರಣ ಮಾಡದಂತೆ ಸರ್ಕಾರದ ಮೇಲೆ ಒತ್ತಡ ತರಬೇಕು. ಎಲ್ಲಾ ಆಸ್ಪತ್ರೆಗಳನ್ನು ಉನ್ನತೀಕರಿಸಿ, ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಬೇಕು ಮತ್ತು ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ಮತ್ತು ಎಲ್ಲಾ ತಾಲ್ಲೂಕುಗಳಲ್ಲಿ ಇಎಸ್‌ಐ ಆಸ್ಪತ್ರೆ ಘಟಕಗಳನ್ನು ಆರಂಭಿಸಬೇಕು. ಜನಸಂಖ್ಯೆಗೆ ತಕ್ಕಂತೆ ಅನುದಾನವನ್ನು ಹೆಚ್ಚಿಸಿ ಬಿಡುಗಡೆ ಮಾಡಬೇಕು ಮತ್ತು ಅನುದಾನದ ಹಣವನ್ನು ಸಮಪರ್ಕವಾಗಿ ಸಂಪೂರ್ಣ ಖರ್ಚು ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ, ತಾಲೂಕು ಕಾರ್ಯದರ್ಶಿ ಟಿ.ಎಂ.ವೆಂಕಟೇಶ್ ಮುಖಂಡರಾದ ವಿಜಯಕೃಷ್ಣ, ವಿ. ನಾರಾಯಣರೆಡ್ಡಿ, ಎಂ. ಭೀಮರಾಜ್ ಕೆ.ವಿ.ಮಂಜುನಾಥ್, ಮುಂತಾದವರು ಇದ್ದರು.

Leave a Reply

Your email address will not be published. Required fields are marked *