ಸಿಪಿಐ(ಎಂ) 23ನೇ ಮಹಾಧಿವೇಶನದ ಕರಡು ರಾಜಕೀಯ ನಿರ್ಣಯ

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) 23ನೇ ಮಹಾಧಿವೇಶನ

ಕರಡು ರಾಜಕೀಯ ನಿರ್ಣಯ

(ಜನವರಿ 7ರಿಂದ 9 ವರೆಗೆ ಹೈದರಾಬಾದಿನಲ್ಲಿ ನಡೆದ ಕೇಂದ್ರ ಸಮಿತಿಯಲ್ಲಿ ಅಂಗೀಕರಿಸಿದ್ದು)

ಪುಸ್ತಕ ಆವೃತ್ತಿಯಲ್ಲಿ ಓದಲು ಕ್ಲಿಕ್‌ ಮಾಡಿರಿ…….

0.1  ಸರಕಾರದಲ್ಲಿರುವ ಬಿಜೆಪಿ, ಫ್ಯಾಸಿಸ್ಟ್-ರೀತಿಯ ಆರೆಸ್ಸೆಸ್ ನ ಹಿಂದುತ್ವ ಅಜೆಂಡಾವನ್ನು ಆಕ್ರಾಮಕವಾಗಿ ಬೆಂಬತ್ತಿದ್ದು, 22ನೆಯ ಮಹಾಧಿವೇಶನದ ನಂತರದ ಅವಧಿಯಲ್ಲಿ ಬಿಜೆಪಿ ಇನ್ನಷ್ಟು ಕ್ರೋಢಿಕೃತಗೊಂಡಿರುವುದು ಕಂಡಿದೆ. ಕೋಮುವಾದಿ-ಕಾರ್ಪೊರೆಟ್ ಕೂಟವನ್ನು ಬಲಗೊಳಿಸುವ ಉನ್ಮತ್ತ ನವ-ಉದಾರವಾದಿ ಸುಧಾರಣೆಗಳನ್ನು ಬೆಂಬತ್ತುತ್ತಾ, ರಾಷ್ಟ್ರೀಯ ಆಸ್ತಿಗಳ ಲೂಟಿ ಮಾಡುತ್ತಾ, ಚಮಚಾ ಬಂಡವಾಳಶಾಹಿಯನ್ನು ಪ್ರೋತ್ಸಾಹಿಸುತ್ತಾ, ರಾಜಕೀಯ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸುತ್ತಾ ಮತ್ತು ಪೂರ್ಣ ಪ್ರಮಾಣದ ಸರ್ವಾಧಿಕಾರವನ್ನು ಹೇರುತ್ತಾ ಬಿಜೆಪಿ ಹಲವು ಶೂಲಗಳ ದಾಳಿಯನ್ನು ಸಜ್ಜುಗೊಳಿಸಿದೆ.

0.2 ಕೋಮುವಾದಿ ರಾಷ್ಟ್ರವಾದದ ಉನ್ಮಾದಕಾರಿ ಕಥನವನ್ನು ಹರಿಯಬಿಟ್ಟ ಬಿಜೆಪಿ 2019ರ ಚುನಾವಣೆಗಳ ನಂತರ ಇನ್ನೂ ಹೆಚ್ಚಿನ ಸೀಟು ಮತ್ತು ಮತಗಳಿಕೆಗಳೊಂದಿಗೆ ಮತ್ತೆ ಸರಕಾರ ರಚಿಸಿತು. ಆಗಿನಿಂದ, ಉನ್ಮತ್ತ ಕೋಮುವಾದಿ ಧ್ರುವೀಕರಣ ಹರಿತಗೊಳಿಸುತ್ತಾ ಮತ್ತು ನಮ್ಮ ಜಾತ್ಯತೀತ ಪ್ರಜಾಸತ್ತಾತ್ಮಕ ಸಂವಿಧಾನದ ಅಡಿಪಾಯ ಬುಡಮೇಲು ಮಾಡುತ್ತಾ, ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಸರ್ಜಿಸಿ ಸಂವಿಧಾನದ 370 ಮತ್ತು 35ಎ ಕಲಮುಗಳನ್ನು ರದ್ದುಗೊಳಿಸಿತು; ಸಂವಿಧಾನ-ವಿರೋಧಿ ಪೌರತ್ವ ತಿದ್ದುಪಡಿ ಕಾಯಿದೆ(ಸಿಎಎ)ಯನ್ನು ಮಾಡಿತು; ಅಯೋಧ್ಯೆಯಲ್ಲಿ ಮಂದಿರವನ್ನು ಕಟ್ಟಲು ಆರಂಭಿಸಿತು ಮತ್ತು ಕಟುವಾದ ಪ್ರತಿಬಂಧಕ ಬಂಧನ ಕಾನೂನುಗಳ ದುರ್ಬಳಕೆ ಮಾಡಿ ಜನತೆಯ ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ಮೇಲೆ ನಿರ್ದಯವಾಗಿ ದಾಳಿ ಮಾಡಿತು. ಭಾರತದ ಸಂವಿಧಾನಾತ್ಮಕ ಗಣತಂತ್ರದ ಸ್ವರೂಪವನ್ನೇ ಬದಲಾಯಿಸಲು ನಿರಂತರ ಪ್ರಯತ್ನಗಳು ಸಾಗಿವೆ.

0.3 ಈ ಅವದಿಯಲ್ಲಿ, ಮೋದಿ ಸರಕಾರದ ನೀತಿಗಳಿಗೆ ದುಡಿಯುವ ಜನರ ವಿವಿಧ ವಿಭಾಗಗಳಿಂದ ಪ್ರತಿರೋಧ ಹೆಚ್ಚುತ್ಥಾ ಬಂದಿದೆ.  ಹೊಸ ಕಾರ್ಮಿಕ ಸಂಹಿತೆ ಮತ್ತು ಖಾಸಗೀಕರಣದ ವಿರುದ್ಧ ಕಾರ್ಮಿಕ ವರ್ಗ ಹಲವು ಕ್ಷೇತ್ರವಾರು ಮತ್ತು ಸಾರ್ವತ್ರಿಕ ಮುಷ್ಕರಗಳನ್ನು ನಡೆಸಿತು. ಸಂವಿಧಾನ ಮತ್ತು ಪೌರತ್ವವನ್ನು ಬುಡಮೇಲು ಮಾಡುವುದರ ವಿರುದ್ಧ ಸಾಮೂಹಿಕ ಪ್ರತಿಭಟನೆಯಾಗಿ ಸಿಎಎ-ವಿರೋಧಿ ಚಳುವಳಿ ಬೆಳೆದು ಬಂದಿತು. ರೈತರ ಅತ್ಯಂತ ದೊಡ್ಡದಾದ ಮತ್ತು ದೀರ್ಘವಾದ ಹೋರಾಟ ಮೂರು ಕೃಷಿ ಕಾಯಿದೆಗಳನ್ನು ಹಿಂತೆಗೆಯುವುದರೊಂದಿಗೆ ಚಾರಿತ್ರಿಕ ವಿಜಯ ಸಾಧಿಸಿತು.

0.4 ಈ ನಾಲ್ಕು ವರ್ಷಗಳಲ್ಲಿ, ಬಿಜೆಪಿ ಸರಕಾರವು ಯು.ಎಸ್ ವ್ಯೂಹಾತ್ಮಕ, ರಾಜಕೀಯ ಮತ್ತು ಭದ್ರತಾ ವಿನ್ಯಾಸಗಳಿಗೆ ಪೂರ್ಣವಾಗಿ ಶರಣಾಗಿದ್ದು, ಯು.ಎಸ್ ಸಾಮ್ರಾಜ್ಯಶಾಹಿಯ ದೃಢ ಅಡಿಯಾಳು ಸಹಾಯಕನಾಗಿ ಹೊಮ್ಮಿದೆ. ಇದು ಭಾರತದ ಪರಿಸ್ಥಿತಿಯ ಮೇಲೆ ನೇರ ಪರಿಣಾಮ ಬೀರಬಲ್ಲ ಪ್ರಮುಖ ಅಂತರ‍್ರಾಷ್ಟ್ರೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಡೆಯುತ್ತಿದೆ.

ಅಂತರ‍್ರಾಷ್ಟ್ರೀಯ ಪರಿಸ್ಥಿತಿ

1.1 ಪಕ್ಷದ 22ನೆಯ ಮಹಾಧಿವೇಶನದ ನಂತರದ ಅಂತರ‍್ರಾಷ್ಟ್ರೀಯ ಪರಿಸ್ಥಿತಿಯ ಪ್ರಮುಖ ಗುಣಲಕ್ಷಣಗಳು ಈ ಕೆಳಗಿನಂತಿವೆ :

  1. ವಿನಾಶಕಾರಿ ಕೋವಿಡ್-19 ಮಹಾಸೋಂಕು ಮತ್ತು ಹೊಸ ರೂಪಾಂತರ ತಳಿಗಳು ಬರುತ್ತಿದ್ದು ಅದರ ಮುಂದುವರೆಯುತ್ತಿರುವ ಪರಿಣಾಮಗಳು
  2. ಕೋವಿಡ್‌-19 ಮಹಾಸೋಂಕು ಮತ್ತು ಅದಕ್ಕೆ ಸಂಬಂಧಿತ ಸಮಸ್ಯೆಗಳನ್ನು ಬಂಡವಾಳಶಾಹಿ ಮತ್ತು ಸಮಾಜವಾದಿ ದೇಶಗಳು ನಿಭಾಯಿಸಿದ ರೀತಿಗಳಲ್ಲಿ ವ್ಯತ್ಯಾಸಗಳು
  3. ಜಾಗತಿಕ ಆರ್ಥಿಕ ಹಿಂಜರಿತ ಆಳಗೊಳ್ಳುತ್ತಿರುವುದು
  4. ಆರ್ಥಿಕ ಹಿಂಜರಿತಕ್ಕೆ ಯಾವುದೇ ಪರಿಹಾರ ಒದಗಿಸುವಲ್ಲಿ ನವ-ಉದಾರವಾದದ ದಿವಾಳಿತನ. ಇದಕ್ಕೆ ಪ್ರತಿಯಾಗಿ, ಆರ್ಥಿಕ ಚೇತರಿಕೆಗೆ ರೂಪಿಸಿದ ಉತ್ತೇಜನ ಪ್ಯಾಕೇಜುಗಳು, ಗರಿಷ್ಠ ಲಾಭದ ನವ-ಉದಾರವಾದಿ ಹಾದಿಯನ್ನು ಇನ್ನಷ್ಟು ಬಲಪಡಿಸುತ್ತಿರುವುದು.
  5. ಜಾಗತಿಕ ಆರ್ಥಿಕದ ಮೇಲೆ ಹಣಕಾಸು ಬಂಡವಾಳದ ಹಿಡಿತ ಇನ್ನಷ್ಟು ಬಲಗೊಂಡಿರುವುದು.
  6. ಹೆಚ್ಚುತ್ತಿರುವ – ಜಾಗತಿಕ ಹಸಿವು; ಬಡತನದ ಮಟ್ಟಗಳು; ನಿರುದ್ಯೋಗ; ಮತ್ತು ಶಿಕ್ಷಣದಿಂದ ವಂಚನೆ – ಇವುಗಳ ಜತೆಗೆ, ಜನತೆಯ ಜೀವನ ಮತ್ತು ಜೀವನೋಪಾಯಗಳ ಮೇಲೆ ವಿನಾಶಕಾರಿ ಪರಿಣಾಮಗಳು.
  7. ಜಾಗತಿಕ ಶಕ್ತಿಯಾಗಿ ಚೀನಾದ ಹೆಚ್ಚುತ್ತಿರುವ ಪ್ರಭಾವ
  8. ಚೀನಾವನ್ನು ನಿಗ್ರಹಿಸಿ ಒಂಟಿಯಾಗಿಸಲು ಯು.ಎಸ್ ಸಾಮ್ರಾಜ್ಯಶಾಹಿಯ ಪ್ರಯತ್ನಗಳು
  9. ಬಲಪಂಥೀಯತೆಯತ್ತ ಜಾಗತಿಕ ರಾಜಕಾರಣದ ಚಲನೆಯ ಮುಂದುವರಿಕೆ ಮತ್ತು ಅದರ ವಿರುದ್ಧ ಬೆಳೆಯುತ್ತಿರುವ ಪ್ರತಿರೋಧಗಳು
  10. ಯು.ಎಸ್ ಸಾಮ್ರಾಜ್ಯಶಾಹಿಯ ಆಕ್ರಮಣಶೀಲತೆಯ ವಿರುದ್ಧ ಲ್ಯಾಟಿನ್ ಅಮೆರಿಕದಲ್ಲಿ ಬೆಳೆಯುತ್ತಿರುವ ಪ್ರತಿರೋಧ. ಜನಪ್ರಿಯ ಜನತಾ ಹೋರಾಟಗಳಿಂದಾಗಿ ಚಿಲಿ, ವೆನೆಜುವೇಲಾ, ಬೊಲಿವಿಯ, ಪೆರು ಮತ್ತು ಹೊಂಡುರಾಸ್ ಗಳಲ್ಲಿ ಎಡ, ಪ್ರಗತಿಪರ ಶಕ್ತಿಗಳ ಚುನಾವಣಾ ವಿಜಯಗಳು.
  11. ಯು.ಎಸ್-ನಾಟೋ ಪಡೆಗಳು ಹಿಂತೆಗೆದ ಮೇಲೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ಅಲ್ಲಿ ಹೊಮ್ಮುತ್ತಿರುವ ಹೊಸ ಸ್ಥಿತಿ
  12. ನಮ್ಮ ನೆರೆಹೊರೆಯಲ್ಲಿ ಭಾರತ ಹೆಚ್ಚೆಚ್ಚು ಒಂಟಿಯಾಗಿರುವುದು. ಹೆಚ್ಚಿನ ನೆರೆಯ ದೇಶಗಳೊಂದಿಗೆ ಸಂಬಂಧಗಳು ಹದಗೆಟ್ಟಿರುವುದು.
  13. ಜಾಗತಿಕ ತಾಪಮಾನ ಏರಿಕೆಯಿಂದ ಉಂಟಾಗಿರುವ ಗಂಭೀರ ಅಪಾಯಗಳು ಮತ್ತು ಹವಾಮಾನ ಬದಲಾವಣೆಯ ಬಗ್ಗೆ ನಿರ್ಣಾಯಕ ಕಾರ್ಯಾಚರಣೆಯ ಅಗತ್ಯ.

ವಿನಾಶಕಾರಿ ಕೋವಿಡ್‌ ಮಹಾಸೋಂಕು

1.2 ಡಿಸೆಂಬರ್ 2019ರಲ್ಲಿ ಕೋವಿಡ್‌-19 ಮಹಾಸೋಂಕು ಹರಡಿ ಜಾಗತಿಕವಾಗಿ ಪ್ರಮುಖ ವಿಷಯವಾಗಿ ಉಳಿದಿದ್ದು, ತನ್ನ ಹಾವಳಿಯನ್ನು ಮುಂದುವರೆಸಿದೆ. ಕೊರೊನಾ ವೈರಸ್ ವೇಗವಾಗಿ ರೂಪಾಂತರ ಹೊಂದುತ್ತಿದ್ದು, ಹೊಸ ತಳಿಗಳು ಹೊರಬರುತ್ತಿವೆ. ಓಮಿಕ್ರಾನ್ ಈ ಸರಣಿಯಲ್ಲಿ ಇತ್ತೀಚಿನದ್ದಾಗಿದ್ದು ಅದರ ಸೋಂಕಿನ ವೇಗದ ಪ್ರಮಾಣ ಜಾಗತಿಕವಾಗಿ ಹೆಚ್ಚಿದೆ. ಕೋವಿಡ್‌ ಮಹಾಸೋಂಕು ಆರಂಭವಾಗಿ ಸುಮಾರು 30 ಕೋಟಿ ಜನರು ಬಾಧಿತರಾಗಿದ್ದಾರೆ ಮತ್ತು ಸುಮಾರು 55 ಲಕ್ಷ ಜನ ಈಗಾಗಲೇ ಸತ್ತಿದ್ದಾರೆ.

1.3 ಜಾಗತಿಕ ವ್ಯಾಕ್ಸೀನ್ ಅಸಮಾನತೆ: ವ್ಯಾಕ್ಸಿನೇಶನ್ ಅಭಿಯಾನ ಸಾರ್ವತ್ರಿಕ ಜಾಗತಿಕ ಕಾರ್ಯಕ್ರಮವೊಂದರ ಮೂಲಕ  ಇನ್ನಷ್ಟು ತೀವ್ರಗೊಳ್ಳದೆ, ಮಹಾಸೋಂಕು ತನ್ನ ಹಾವಳಿಯನ್ನು ಮುಂದುವರೆಸುತ್ತದೆ. ಎಲ್ಲರೂ ಅಪಾಯದಿಂದ ಮುಕ್ತರಾಗುವ ವರೆಗೆ, ಯಾರೂ ಅಪಾಯ-ಮುಕ್ತರಾಗುವುದಿಲ್ಲ. ಹೆಚ್ಚಿನ ಮಟ್ಟದ ಜಾಗತಿಕ ವ್ಯಾಕ್ಸೀನ್ ಅಸಮಾನತೆ ಇದನ್ನು ಆಗಗೊಡುತ್ತಿಲ್ಲ. ಈ ವ್ಯಾಕ್ಸೀನ್ ಅಸಮಾನತೆ ಹೊಸ ರೂಪಾಂತರಿ ತಳಿಗಳು ಹುಟ್ಟಿ ಹರಡುವುದಕ್ಕೂ ಅವಕಾಶ ಒದಗಿಸುತ್ತದೆ. ಶ್ರೀಮಂತ ಅಭಿವೃದ್ಧ ದೇಶಗಳು, ತಮ್ಮ ಜನಸಂಖ್ಯೆಯ ಅಗತ್ಯಕ್ಕಿಂತ ಹೆಚ್ಚು ದಾಸ್ತಾನು ಮತ್ತು ಬಳಕೆ ಮಾಡಿರುವುದು, ಇದಕ್ಕೆ ಕಾರಣವಾಗಿರುವ ಒಂದು ಅಂಶ. ಹೆಚ್ಚಿನ ಆದಾಯದ ದೇಶಗಳ ಜನಸಂಖ್ಯೆಯ ಸುಮಾರು ಶೇ.70 ಭಾಗ ವ್ಯಾಕ್ಸೀನ್ ಪಡೆದಿದ್ದಾರೆ. ಆದರೆ ಕಡಿಮೆ ಆದಾಯದ ದೇಶಗಳಲ್ಲಿ ಕೇವಲ ಶೇ. 2.5 ಭಾಗ ವ್ಯಾಕ್ಸೀನ್ ಪಡೆದಿದ್ದಾರೆ. ಹೆಚ್ಚಿನ ಆದಾಯದ ದೇಶಗಳ ಜನಸಂಖ್ಯೆಯ ಸುಮಾರು ಶೇ.150 ರಷ್ಟು ಡೋಸುಗಳನ್ನು ಕೊಡಲಾಯಿತು. ಆದರೆ ಕಡಿಮೆ ಆದಾಯದ ದೇಶಗಳಲ್ಲಿ ಕೇವಲ ಶೇ.7 ರಷ್ಟು ಡೋಸುಗಳನ್ನು ಮಾತ್ರ ಕೊಡಲಾಯಿತು. ಇಡೀ ಆಫ್ರಿಕಾ ಖಂಡದಲ್ಲಿ ಶೇ.10ಕ್ಕಿಂತಲೂ ಕಡಿಮೆ ವಯಸ್ಕರು ಪೂರ್ಣ ವ್ಯಾಕ್ಸೀನ್ ಪಡೆದಿದ್ದಾರೆ. ಹೆಚ್ಚಿನ ಆದಾಯದ ದೇಶಗಳು, ಸುಲಭ ಲಭ್ಯತೆಗಾಗಿ ವ್ಯಾಕ್ಸೀನ್ ಗಳಿಗೆ ಬೌದ್ಧಿಕ ಆಸ್ತಿ ಪದ್ಧತಿಯನ್ನು ಮತ್ತು ಪೇಟೆಂಟ್ ಹಕ್ಕುಗಳನ್ನು ಲಗಾವು ಮಾಡದಿರಲು ನಿರಾಕರಿಸಿದ್ದು ಈ ವ್ಯಾಕ್ಸೀನ್ ಅಸಮಾನತೆಗೆ ಕಾರಣವಾಗಿರುವ ಇನ್ನೊಂದು ಅಂಶ. ದೈತ್ಯ ಫಾರ್ಮಾ (ಅಥವಾ ಔಷಧಿ) ಕಂಪನಿಗಳ ಸೂಪರ್ ಲಾಭಗಳನ್ನು ರಕ್ಷಿಸುವ ಉದ್ದೇಶದ ಈ ನಿರಾಕರಣೆಯು, ದುಬಾರಿ ಬೆಲೆಗಳಿಗೆ ಹಾಗೂ ಆ ಮೂಲಕ ಬಡ ದೇಶಗಳಿಗೆ ವ್ಯಾಕ್ಸೀನ್ ಖರೀದಿಯನ್ನು ಮತ್ತು ಸ್ಥಳೀಯವಾಗಿ ವ್ಯಾಕ್ಸೀನ್ ಉತ್ಪಾದನೆಯ ಸಾಧ್ಯತೆಯನ್ನು ಪ್ರತಿಬಂಧಿಸಲು ಕಾರಣವಾಗಿದೆ.

1.4 ಅಸಮರ್ಪಕ ಸಾರ್ವಜನಿಕ ಆರೋಗ್ಯ ಸೇವೆ: ಬಂಡವಾಳಶಾಹಿ ವ್ಯವಸ್ಥೆಯಡಿಯಲ್ಲಿ ಯಾವುದಕ್ಕೂ ಸಾಲದ ಅಸಮರ್ಪಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಕೋವಿಡ್‌ ಮಹಾಸೋಂಕು ಪೂರ್ಣವಾಗಿ ಬಯಲುಮಾಡಿದೆ. ಇದು ಅಭಿವೃದ್ಧಿಶೀಲ ದೇಶಗಳಲ್ಲಂತೂ ಢಾಳಾಗಿ ಕಾಣುತ್ತಿತ್ತು. ಲಾಭ ಗರಿಷ್ಠಗೊಳಿಸುವ ನವ-ಉದಾರವಾದಿ ನೀತಿಗಳಿಂದಾಗಿ ದೊಡ್ಡ ಪ್ರಮಾಣದಲ್ಲಿ ಆರೋಗ್ಯ ಸೇವೆಯ ಖಾಸಗೀಕರಣವಾಗಿದೆ. ಸೀಮಿತ ಆರೋಗ್ಯ ಸೇವೆಯು ಲಭ್ಯವಿರುವಲ್ಲಿ ಕೂಡಾ, ಅವು ಆರೋಗ್ಯ ವಿಮೆ ಕಂಪನಿಗಳ ಮೂಲಕವಾಗಿವೆ. ಆರೋಗ್ಯ ವಿಮೆ ಸರಕಾರದ ಹಣದಿಂದ ನಡೆಯುವಂಥದ್ದಲ್ಲ, ಆರೋಗ್ಯ ವಿಮೆ ಕಂಪನಿಗಳ ಪರವಾಗಿ ಮಾತ್ರ ಇರುವಂಥವು. ಖಾಸಗಿ ಆರೋಗ್ಯ ಸೇವೆ ಲಕ್ಷಾಂತರ ಬಡವರ ನಿಲುಕಿಗೆ ಮೀರಿರುವುದು ಅವರ ಜೀವ ಉಳಿಸುವ ಮತ್ತು ಮಹಾಸೋಂಕಿನ ಹರಡುವಿಕೆಯನ್ನು ತಡೆಯುವ ಸಾಧ್ಯತೆಯನ್ನು ಕಡಿಮೆ ಮಾಡಿದೆ. ವ್ಯಾಕ್ಸೀನ್ ಅಸಮಾನತೆಯ ಜತೆಗೆ, ಇದು ಜನರ ಜೀವದ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರಿದೆ, ಅದರಲ್ಲೂ ವಿಶೇಷವಾಗಿ ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ.

1.5 ಸಮಾಜವಾದಿ ದೇಶಗಳು: ಸಮಾಜವಾದಿ ದೇಶಗಳು, ತಮ್ಮ ಜನ-ಕೇಂದ್ರಿತ ನೀತಿಗಳಿಂದಾಗಿ ಮತ್ತು ಸಾರ್ವಜನಿಕ ಆರೋಗ್ಯ ಸೇವೆ ವ್ಯವಸ್ಥೆಗಳಿಂದಾಗಿ, ಮಹಾಸೋಂಕನ್ನು ನಿಭಾಯಿಸಿದ ರೀತಿ ಇದಕ್ಕೆ ತದ್ವಿರುದ್ಧವಾಗಿತ್ತು. ಬಂಡವಾಳಶಾಹಿಗಿಂತ ಅವರು ಮಹಾಸೋಂಕಿನ ಸವಾಲನ್ನು ಹೆಚ್ಚು ದಕ್ಷತೆಯಿಂದ ನಿಭಾಯಿಸಲು ಸಾಧ್ಯವಾಯಿತು. ಇದು ಸಮಾಜವಾದದ ಶ್ರೇಷ್ಠತೆಯನ್ನು ಮತ್ತೊಮ್ಮೆ ಎತ್ತಿತೋರಿಸಿದೆ. ಮಹಾಸೋಂಕು ಚೀನಾವನ್ನು ಕಠಿಣ ಪರೀಕ್ಷೆಗೆ ಒಳಪಡಿಸಿದ್ದು, ಅದನ್ನು ನಿಗ್ರಹಿಸಲು ಅದಕ್ಕೆ ಸಾಧ್ಯವಾಗಿದೆ. ಆರ್ಥಿಕ ಚಟುವಟಿಕೆಗಳನ್ನು ಮತ್ತೆ ಆರಂಭಿಸಿ, ಆರ್ಥಿಕವನ್ನು ಚೇತರಿಕೆಯತ್ತ ಒಯ್ಯಲು ಸಹ ಸಾಧ್ಯವಾಗಿದೆ. ನೂರಕ್ಕೂ ಹೆಚ್ಚು ದೇಶಗಳಿಗೆ ಅದು ವ್ಯಾಕ್ಸೀನನ್ನು ಸರಬರಾಜು ಮಾಡಿದೆ. ಕ್ಯೂಬಾ, ಯು.ಎಸ್ ನ ಕ್ರೂರ ಆರ್ಥಿಕ ದಿಗ್ಬಂಧನಗಳಿಂದ ತೀವ್ರ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದರೂ, ಔಷಧಿ ಮತ್ತು ವೈದ್ಯಕೀಯ ಉಪಕರಣಗಳನ್ನು ಆಮದು ಮಾಡಲು ಅಸಾಧ್ಯವಾಗಿದ್ದರೂ, ತನ್ನದೇ ವ್ಯಾಕ್ಸೀನುಗಳನ್ನು ಅಭಿವೃದ್ಧಿಪಡಿಸಿತು. 50ಕ್ಕೂ ಹೆಚ್ಚು ದೇಶಗಳಿಗೆ ವೈದ್ಯಕೀಯ ತಂಡಗಳನ್ನು ಕಳಿಸಿತು ಮತ್ತು ವ್ಯಾಕ್ಸೀನನ್ನು ಸರಬರಾಜು ಮಾಡಿತು. ಅದೇ ರೀತಿಯಲ್ಲಿ, ವಿಯೆಟ್ನಾಂ, ಮೊದಲ ಅಲೆಯಲ್ಲಿ ಮಹಾಸೋಂಕಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಗ್ರಹಿಸಿತು ಮತ್ತು ನಂತರದ ಡೆಲ್ಟಾ ಅಲೆಯನ್ನೂ ನಿಭಾಯಿಸುತ್ತಿದೆ.

ಜಾಗತಿಕ ಬಂಡವಾಳಶಾಹಿ ಬಿಕ್ಕಟ್ಟು

1.6 2008ರ ಜಾಗತಿಕ ಹಣಕಾಸು ಕರಗುವಿಕೆಯು ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸಿದ ನಂತರ, ಜಾಗತಿಕ ಬಂಡವಾಳಶಾಹಿ ಅದರ ಹಿಂದಿನ ಮಟ್ಟಕ್ಕೆ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಐ.ಎಂ.ಎಫ್ ಪ್ರಕಾರ, ಜಾಗತಿಕ ಜಿಡಿಪಿ ಬೆಳವಣಿಗೆ ದರ 2009ರಲ್ಲಿ ಶೇ.5.4ರಿಂದ ಮಹಾಸೋಂಕಿನ ಮೊದಲು 2019ರಲ್ಲಿ ಶೇ.2.8ಕ್ಕೆ ಇಳಿದಿತ್ತು. ಮಹಾಸೋಂಕಿಗೆ ಸಂಬಂಧಿತ ಲಾಕ್‌ಡೌನ್ ಮತ್ತು ಉತ್ಪಾದನಾ ಘಟಕಗಳು ಮುಚ್ಚಿದ್ದರಿಂದ, 2020ರಲ್ಲಿ ಜಾಗತಿಕ ಆರ್ಥಿಕತೆ ಶೇ.4.4ರಷ್ಟು ಕುಗ್ಗಿತು. ಐ.ಎಂ.ಎಫ್ ಮತ್ತು ವಿಶ್ವಬ್ಯಾಂಕ್ ಮುಂಬರುವ ವರ್ಷಗಳಲ್ಲಿ ಆರೋಗ್ಯಕರ ಬೆಳವಣಿಗೆಯ ಪಥದ ಮುನ್ಸೂಚನೆಗಳನ್ನು ನೀಡಿವೆ. ಆದರೆ ಅವು, ಮುಂದುವರೆಯುತ್ತಿರುವ ಜಾಗತಿಕ ವ್ಯಾಕ್ಸೀನ್ ಅಸಮಾನತೆ ಯಾವುದೇ ಪ್ರಮುಖ ಆರ್ಥಿಕ ಚೇತರಿಕೆ ಆಗದಂತೆ ತಡೆಯುವ ಅಂಶಗಳೂ ಆಗಬಹುದೆಂದು ಎಚ್ಚರಿಕೆಯನ್ನೂ ಕೊಟ್ಟಿದೆ. ಜಾಗತಿಕ ಉತ್ಪಾದನೆಯು 2022ರಲ್ಲಿ, ಮಹಾಸೋಂಕಿಗಿಂತ ಮುಂಚಿನ ಮಟ್ಟಕ್ಕಿಂತ ಶೇ.2 ಕಡಿಮೆ ಇರುತ್ತದೆ ಎಂದು ವಿಶ್ವಬ್ಯಾಂಕ್ ಹೇಳಿದೆ.

1.7 ಯು.ಎಸ್, ಇ.ಯು. ಉತ್ತೇಜಕ ಪ್ಯಾಕೇಜುಗಳು: ಅಂತರ‍್ರಾಷ್ಟ್ರೀಯ ಸಂಘಟನೆಗಳ ಜಾಗತಿಕ ಉತ್ಪಾದನೆಯ ಈ ಆಶಾದಾಯಕ ಅಂದಾಜುಗಳು, ಬಹುಪಾಲು ಯು.ಎಸ್ ಮತ್ತು ಯುರೋ ಕೂಟ(ಇಯು)ಗಳು ಘೋಷಿಸಿರುವ ಹೊಸ ಉತ್ತೇಜಕ ಪ್ಯಾಕೇಜುಗಳು ಸೃಷ್ಟಿಸಬಹುದಾದ ಚೇತರಿಕೆಯ ನಿರೀಕ್ಷೆಯನ್ನು ಆಧರಿಸಿವೆ. ಯು.ಎಸ್ 1.9 ಲಕ್ಷ ಕೋಟಿ ಡಾಲರು ಪ್ಯಾಕೇಜು ಘೋಷಿಸಿದರೆ, ಯುರೋ ಪಾರ್ಲಿಮೆಂಟ್ 1.8 ಲಕ್ಷ ಕೋಟಿ ಯುರೋ (2.2 ಲಕ್ಷ ಕೋಟಿ ಡಾಲರ್) ಪ್ಯಾಕೇಜಿಗೆ ತನ್ನ ಬಜೆಟಿನಿಂದ ನೀಡಲು ಅನುಮೋದನೆ ನೀಡಿದೆ. ಈ ಪ್ಯಾಕೇಜುಗಳು ದುಡಿಯುವ ಜನ ಮತ್ತು ಮಧ್ಯಮ ವರ್ಗಗಳಿಗೆ ಬಹಳ ಸೀಮಿತವಾದ ನೇರ ಪ್ರಯೋಜನ ಒದಗಿಸಿವೆ. ಆದರೆ ಈ ಪ್ಯಾಕೇಜುಗಳಿಂದ ದೈತ್ಯ ಉದ್ಯಮಗಳ ಮತ್ತು ಹಣಕಾಸು ಬಂಡವಾಳಗಳ ಅದೃಷ್ಟ ಮಾತ್ರ ಖುಲಾಯಿಸಿದೆ. ಇದು ನವ-ಉದಾರವಾದದ ಗರಿಷ್ಠ ಲಾಭದ ಅಜೆಂಡಾವನ್ನು ಮುಂದೊತ್ತಿದೆ ಎಂಬುದು ಸ್ಪಷ್ಟ. ಮಹಾಸೋಂಕಿನ ಆರಂಭದಿಂದ ಕೊಡಲಾದ ಎಲ್ಲ ಮೂಲಗಳಿಂದ ಬಂದ ಜಾಗತಿಕ ಹಣಕಾಸು ಉತ್ತೇಜಕಗಳನ್ನು ಕೂಡಿಸಿದರೆ ಸುಮಾರು 16.9 ಲಕ್ಷ ಕೋಟಿ ಡಾಲರುಗಳಷ್ಟಾಗುತ್ತದೆ ಎಂದು ಐ.ಎಂ.ಎಫ್ ಅಂದಾಜು ಮಾಡಿದೆ. ಈ ಪ್ಯಾಕೇಜುಗಳ ಸುಮಾರು ಶೇ. 86 ಪಾಲನ್ನು ಅಭಿವೃದ್ಧ ದೇಶಗಳು ಹೊಡೆದುಕೊಂಡಿವೆ. ಈ ಪ್ಯಾಕೇಜಿನ ಬಹುಪಾಲು ಹಣಕಾಸು ವ್ಯವಸ್ಥೆಯಿಂದ ಹೋಗುವ ಮುಂಗಡ ಮತ್ತು ಸಾಲಗಳಿಗೆ ತೆಗೆದಿಡಲಾಗಿದೆ. ಜನತೆಗೆ ನೇರ ಪ್ರಯೋಜನಕ್ಕಾಗಿ ತೆಗೆದಿರಿಸುವ ಪ್ರಮಾಣ ತೀರಾ ಕಡಿಮೆ. ಈ ಪ್ಯಾಕೇಜುಗಳಿಗೆ ಸಂಪನ್ಮೂಲದ ಮೂಲ ಸರಕಾರಿ ಬಾಂಡುಗಳು ಮತ್ತು ಪ್ರಮುಖವಾಗಿ ಶೇರು ಮಾರುಕಟ್ಟೆಯಲ್ಲಿ ಮಾರುವ-ಕೊಳ್ಳುವ ಪರಿಕರಗಳು. ಇದು ಶೇರು ಮಾರುಕಟ್ಟೆಯಲ್ಲಿ ಉಬ್ಬರಕ್ಕೆ ಕಾರಣವಾಗಿದ್ದು, ಈ ಮಾರುಕಟ್ಟೆಗಳಲ್ಲಿ ಅಭೂತಪೂರ್ವ ಸುಗ್ಗಿ ಕಂಡುಬರುತ್ತಿದೆ.

1.8 ಹೆಚ್ಚುತ್ತಿರುವ ಅಸಮಾನತೆಗಳು: ಈ ಉತ್ತೇಜಕ ಪ್ಯಾಕೇಜುಗಳಿಗೆ ಹಣಕಾಸು ಒದಗಿಸಿದ ವಿಧಾನವು ಶೇರು ಮಾರುಕಟ್ಟೆಯಲ್ಲಿ ಸುಗ್ಗಿಗೆ ಕಾರಣವಾದರೆ, ಇದು ಅಸಹ್ಯ ಅಸಮಾನತೆಗಳು ಬೆಳೆಯಲೂ ಕಾರಣವಾಗಿದೆ. ಜಗತ್ತಿನ ಶತಕೋಟ್ಯಾಧೀಶರ ಸಂಪತ್ತು ಜುಲೈ 2020ರಲ್ಲಿ 10.2 ಲಕ್ಷ ಕೋಟಿ ಡಾಲರುಗಳ ಹೊಸ ಉತ್ತುಂಗವನ್ನು ತಲುಪಿತು. ಜಗತ್ತಿನ ಹತ್ತು ಅತಿ ಶ್ರೀಮಂತರ ಸಂಪತ್ತು ಕಳೆದ ವರ್ಷದಲ್ಲಿ 413 ಶತಕೋಟಿ ಡಾಲರಿನಷ್ಟು ಏರಿತು. ಇದು ವಿಶ್ವಸಂಸ್ಥೆಯು ಕೋವಿಡ್‌ ಪರಿಹಾರಕ್ಕೆ ಅಗತ್ಯ ಎಂದು ಕೋರಿದ ಮಾನವೀಯ ನಿಧಿಯ 11 ಪಟ್ಟು. ಕೋವಿಡ್‌ ವ್ಯಾಕ್ಸೀನ್ ಉತ್ಪಾದಿಸಿದ ದೈತ್ಯ ಫಾರ್ಮಾ ಕಂಪನಿಗಳು ಹೊಸ ಜಾಗತಿಕ ಶತಕೋಟ್ಯಾಧೀಶರ ಹುಟ್ಟಿಗೆ ಕಾರಣವಾದವು. ಸಂಪತ್ತಿನ ಇಂತಹ ಅಶ್ಲೀಲ ಸಂಪತ್ತಿನ ಸಾಂದ್ರೀಕರಣವು, ಬಂಡವಾಳಶಾಹಿ ಶೋಷಣೆ ಮತ್ತು ಶೇಖರಣೆಯ ಸಹಜಗುಣವೇ ಆಗಿದೆ. ಕಂಪನಿಗಳಿಗೆ ಶೇ. 15ರಷ್ಟು ಜಾಗತಿಕ ಕನಿಷ್ಠ ತೆರಿಗೆ ವಿಧಿಸಲು 136 ದೇಶಗಳು ಒಪ್ಪಿವೆ. ಆದರೂ ದೈತ್ಯ ಕಾರ್ಪೊರೇಟುಗಳು ಮತ್ತು ಸೂಪರ್-ಶ್ರೀಮಂತರ ತೆರಿಗೆಕಳ್ಳತನವನ್ನು ಪರಿಣಾಮಕಾರಿಯಾಗಿ ನಿಲ್ಲಿಸಲು ಸಾಧ್ಯವೇ ಎಂಬುದರ ಕುರಿತು ಗಂಭೀರ ಅನುಮಾನಗಳಿವೆ.

1.9 ಜಾಗತಿಕ ಹಣಕಾಸು: ಆದಾಯ ಮತ್ತು ಸಂಪತ್ತಿನ ಅಸಮಾನತೆಗಳನ್ನು ಹೆಚ್ಚಿಸುವ ಪ್ರಕ್ರಿಯೆಯನ್ನು ಅಂತರ‍್ರಾಷ್ಟ್ರೀಯ ಹಣಕಾಸು ಬಂಡವಾಳ ನಾಯಕತ್ವದ ನವ-ಉದಾರವಾದವು ಕ್ರೋಡೀಕರಿಸಿದೆ. ನವ-ಉದಾರವಾದದ ಗರಿಷ್ಠ ಲಾಭದ ಗುರಿಯನ್ನು ಕ್ರೋಡೀಕರಿಸಿರುವುದರ ಸೂಚಕವಿದು. 22ನೆಯ ಪಕ್ಷದ ಮಹಾಧಿವೇಶನ ಗಮನಿಸಿದಂತೆ, ಆರ್ಥಿಕ ಬಿಕ್ಕಟ್ಟಿಗೆ ಯಾವುದೇ ಪರಿಹಾರವನ್ನು ಒದಗಿಸುವುದರಲ್ಲಿ ನವ-ಉದಾರವಾದವು ತನ್ನ ದಿವಾಳಿಕೋರತನವನ್ನು ಸಾಬೀತುಪಡಿಸಿದೆ. ಮೊದಲನೆಯದಾಗಿ, ಈ ಬಿಕ್ಕಟ್ಟು ಉಂಟಾಗಿರುವುದೇ ಅದರ ನೀತಿಗಳು ಮತ್ತು ಕಟ್ಟಳೆಗಳಿಂದ. ಗರಿಷ್ಠ ಲಾಭದ ಅದರ ಏಕಮಾತ್ರ ಒತ್ತು ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸುತ್ತಿದೆ. ಆದರೆ, ಅದು ಜಾಗತಿಕ ಮಹಾಸೋಂಕು ಉಂಟುಮಾಡಿದ ಪರಿಸ್ಥಿತಿಯನ್ನು ಬಳಸಿಕೊಂಡು, ಅದನ್ನು ಇನ್ನಷ್ಟು ಕ್ರೋಢೀಕರಿಸಲು ಪ್ರಯತ್ನಿಸುತ್ತಿದೆ. ಅದು ವಿನ್ಯಾಸಗೊಳಿಸಿದ ಉತ್ತೇಜಕ ಪ್ಯಾಕೇಜುಗಳು ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರಾಗಿಸುವುದನ್ನು ಮುಂದುವರಿಸುತ್ತಿದೆ. ಅದು ಆರ್ಥಿಕದ ಮೇಲೆ ಜಾಗತಿಕ ಹಣಕಾಸು ಬಂಡವಾಳದ ಹಿಡಿತವನ್ನು ಬಲಪಡಿಸುವ ಪರಿಸ್ಥಿತಿಗಳನ್ನು ನಿರ್ಮಾಣ ಮಾಡುತ್ತಿದೆ. ಆರ್ಥಿಕದ ಮೇಲೆ ಮಾತ್ರವಲ್ಲ, ಹಲವು ದೇಶಗಳಲ್ಲಿ ಆಕ್ರಾಮಕ ನವ-ಉದಾರವಾದಿ ನೀತಿಗಳ ಪರವಾಗಿರುವ ರಾಜಕೀಯ ಶಕ್ತಿಗಳನ್ನು ರೂಪಿಸುವ ಪರಿಸ್ಥಿತಿಗಳನ್ನು ಸಹ ನಿರ್ಮಾಣ ಮಾಡುತ್ತಿದೆ.

ಹೆಚ್ಚುತ್ತಿರುವ ಜನತೆಯ ಸಂಕಷ್ಟಗಳು

1.10 ಮಹಾಸೋಂಕಿನ ಮತ್ತು ಜಾಗತಿಕ ಆರ್ಥಿಕ ಹಿಂಜರಿತದ ಜಂಟಿ ಆಘಾತಗಳು ಜಗತ್ತಿನ ಬಹುಪಾಲು ಜನರ ಮೇಲೆ – ತೀವ್ರಗೊಂಡ ಬಂಡವಾಳಶಾಹಿ ಆರ್ಥಿಕ ಶೋಷಣೆ; ಜಾಗತಿಕ ಹಸಿವಿನ ಮಟ್ಟಗಳು ಹೆಚ್ಚುತ್ತಿರುವುದು; ಬಡತನದ ಮಟ್ಟಗಳು ಹೆಚ್ಚುತ್ತಿರುವುದು; ನಾಗಾಲೋಟದಲ್ಲಿರುವ ನಿರುದ್ಯೋಗ: ಮತ್ತು ಜಗತ್ತಿನ ಬಹುಪಾಲು ಮಕ್ಕಳಿಗೆ ಶಿಕ್ಷಣದ ಅವಕಾಶಗಳ ತೀವ್ರ ನಿರಾಕರಣೆ – ಈ ವಿನಾಶಕಾರಿ ಪರಿಣಾಮಗಳನ್ನು ಬೀರುತ್ತಿವೆ.

1.11 ಹೆಚ್ಚುತ್ತಿರುವ ಹಸಿವು: ಹಸಿವಿನಿಂದ ಪ್ರತಿ ನಿಮಿಷಕ್ಕೆ 11 ಜನ ಸಾಯುತ್ತಿದ್ದಾರೆಂದು ಆಕ್ಸ್‌ಫಾಮ್ ಅಂದಾಜು ಮಾಡಿದೆ. 2020ರಲ್ಲಿ, ಜಾಗತಿಕ ಜನಸಂಖ್ಯೆಯ ಹತ್ತನೆಯ ಒಂದು ಭಾಗ ಅಂದರೆ 81.1 ಕೋಟಿ ಜನ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ; 15 ಕೋಟಿ ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ; 4.5 ಕೋಟಿ ಮಕ್ಕಳು ಕೃಶವಾಗಿದ್ದಾರೆ – ಎಂದು ಯುನಿಸೆಫ್ ಅಂದಾಜು ಮಾಡಿದೆ.  ಕಳೆದ ವರ್ಷ ಇನ್ನೂ 18 ಕೋಟಿ ಜನರಿಗೆ ಮರುಕಳಿಸುವ ಹಸಿವು ಕಾಡುತ್ತಿದ್ದು, ಜಾಗತಿಕ ಜನಸಂಖ್ಯೆಯ ಶೇ. 30 ಜನ ಅಂದರೆ 237 ಕೋಟಿ ಜನ 2020ರಲ್ಲಿ ಸಾಕಷ್ಟು ಆಹಾರವಿಲ್ಲದೆ ನರಳುತ್ತಿದ್ದರು – ಒಂದೇ ವರ್ಷದಲ್ಲಿ 32 ಕೋಟಿ ಹೆಚ್ಚಳ.

1.12 ಬಡತನ: ಕಡು ಬಡತನ ಎದುರಿಸುತ್ತಿರುವ ಜನರ ಸಂಖ್ಯೆ 2021ರ ಕೊನೆಯ ಹೊತ್ತಿಗೆ 74.5 ಕೋಟಿ ಮುಟ್ಟುತ್ತದೆ ಎಂದು ಹೇಳಲಾಗಿತ್ತು, ಅಂದರೆ 10 ಕೋಟಿ ಹೆಚ್ಚಳ, ಜಗತ್ತಿನಲ್ಲಿ ಮಹಿಳೆಯರ ಉದ್ಯೋಗ ನಷ್ಟದಿಂದ 2020ರಲ್ಲಿ ಕನಿಷ್ಠ 80 ಕೋಟಿ ಡಾಲರು ಆದಾಯ ಕೊರತೆಯಾಗಿದೆ. ಇನ್ನೂ 4.7 ಕೋಟಿ ಮಹಿಳೆಯರು 2021ರಲ್ಲಿ ಕಡು ಬಡತನವನ್ನು ಎದುರಿಸುತ್ತಾರೆ ಎನ್ನಲಾಗಿದೆ.

1.13 ನಿರುದ್ಯೋಗ: ಜಾಗತಿಕ ನಿರುದ್ಯೋಗ 2019ರಲ್ಲಿ 18.7 ಕೋಟಿಯಿಂದ ಹೆಚ್ಚಿ 2022ರಲ್ಲಿ 20.5 ಕೋಟಿ ಮುಟ್ಟುತ್ತದೆ ಎನ್ನಲಾಗಿದೆ. ಐ.ಎಲ್.ಒ. ಜಾಗತಿಕ ಬಿಕ್ಕಟ್ಟಿನ ಪರಿಣಾಮವಾಗಿ ಉದ್ಯೋಗ ನಷ್ಟ 2020ರಲ್ಲಿ 7.5 ಕೋಟಿ ಮುಟ್ಟಿದೆ ಎಂದಿದೆ. ಅಂದರೆ, 2020ರಲ್ಲಿ ಜಾಗತಿಕ ಉದ್ಯೋಗದ ಗಂಟೆಗಳು ಶೇ. 8.8 ರಷ್ಟು ಕಡಿಮೆಯಾದವು. ಇದು 25.5 ಕೋಟಿ ಪೂರ್ಣ ಪ್ರಮಾಣದ ಉದ್ಯೋಗಕ್ಕೆ ಸಮಾನ. ಮಹಿಳೆಯರ ಉದ್ಯೋಗಗಳು 2019ರಲ್ಲಿ ಶೇ. 3.9ರಷ್ಟು ಕಡಿಮೆಯಾಗಿದ್ದು, 2020ರಲ್ಲಿ ಶೇ. 5ರಷ್ಟು ಕಡಿಮೆಯಾಯಿತು. ಜಾಗತಿಕವಾಗಿ ವಯಸ್ಕರ ಉದ್ಯೋಗಗಳು ಶೇ. 3.7ರಷ್ಟು ಕಡಿಮೆಯಾದರೆ, ಯುವಜನರ ಉದ್ಯೋಗ ಶೇ. 8.7ರಷ್ಟು ಕಡಿಮೆಯಾಯಿತು. ಕೋವಿಡ್‌-ಪೂರ್ವದಲ್ಲಿ ನಿರುದ್ಯೋಗ, ಭಾಗಶಃ ಉದ್ಯೋಗ ಮತ್ತು ಕೆಟ್ಟ ಕೆಲಸದ ಪರಿಸ್ಥಿತಿಗಳು ನಿರಂತರವಾಗಿ ಹೆಚ್ಚಿದ್ದ ಪರಿಸ್ಥಿತಿಯ ಮೇಲೆ, ಮೇಲೆ ಹೇಳಿದ ಉದ್ಯೋಗ ಮತ್ತು ಕೆಲಸದ ಗಂಟೆಗಳ ತೀವ್ರ ಕಡಿತಗಳು ಬಂದಿವೆ.

1.14 ತೀವ್ರಗೊಂಡಿರುವ ಶೋಷಣೆ: ನವ-ಉದಾರವಾದದ ಗರಿಷ್ಟ ಲಾಭದ ಕಟ್ಟಳೆಗಳು ದೀರ್ಘ ಬಂಡವಾಳಶಾಹಿ ಬಿಕ್ಕಟ್ಟಿಗೆ ಪರಿಸ್ಥಿತಿ ಸೃಷ್ಟಿ ಮಾಡುತ್ತದೆ. ದುಡಿಯುವ ಜನರ ಆರ್ಥಿಕ ಶೋಷಣೆಯನ್ನು ಅವು ತೀವ್ರಗೊಳಿಸುವುದರಿಂದ, (ಸರಕು-ಸೇವೆಗಳಿಗೆ) ಸ್ಥಳೀಯ ಬೇಡಿಕೆಯನ್ನು ತಗ್ಗಿಸುತ್ತದೆ. ಅದು ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. 2008ರಿಂದ ನಿರಂತರ ಬಿಕ್ಕಟ್ಟು ಮತ್ತು ಸ್ಥಗಿತತೆಗಳಿಂದಾಗಿ ಯು.ಕೆ., ಇಟಲಿ, ಜಪಾನ್ ಇತ್ಯಾದಿ ಅಭಿವೃದ್ಧ ದೇಶಗಳಲ್ಲಿ ನಿಜಬೆಲೆಯಲ್ಲಿ ಕೂಲಿ ಕಡಿಮೆಯಾಯಿತು. 2008ರ ನಂತರದ ಮಿತವ್ಯಯಗಳ ಕ್ರಮಗಳಿಂದಾಗಿ ಈ ಶತಮಾನದ ಮೊದಲ ಎರಡು ದಶಕಗಳಲ್ಲಿ, ಕಾರ್ಮಿಕರ ಉತ್ಪಾದಕತೆಯು (ಶೇ. 21.8) ನಿಜಕೂಲಿ (ಶೇ. 14.3) ಗಿಂತ ವೇಗವಾಗಿ ಏರಿತು. 400 ಕೋಟಿ ಜನರಲ್ಲಿ ಶೇ. 70 ಭಾಗ ಜನಕ್ಕೆ ಯಾವುದೇ ಸಾಮಾಜಿಕ ಭದ್ರತೆಯಿಲ್ಲ ಅಥವಾ ಸೀಮಿತ ಭಾಗಶಃ ಸಾಮಾಜಿಕ ಭದ್ರತೆಯಿದೆ. 2019 ಮತ್ತು 2020 ನಡುವೆ ಉದ್ಯೋಗ ನಷ್ಟಗಳಿಂದಾಗಿ, ಜಾಗತಿಕ ಕಾರ್ಮಿಕರ ಆದಾಯದಲ್ಲಿ ಶೇ. 10.7 ರಷ್ಟು (ಸುಮಾರು 3.5 ಲಕ್ಷ ಕೋಟಿ ಡಾಲರುಗಳಷ್ಟು) ಕಡಿಮೆಯಾಯಿತು. ಇದು 2021ರಲ್ಲಿ ಇನ್ನಷ್ಟು ಕೆಟ್ಟಿತು. ಇಂತಹ ತೀವ್ರ ಶೋಷಣೆಯು ಬಂಡವಾಳಶಾಹಿ ಮತ್ತು ಅದರ ಪರಭಕ್ಷಕ ಗುಣದ ಭಾಗವೇ ಆಗಿದೆ.

1.15 ಶೈಕ್ಷಣಿಕ ಅವಕಾಶದ ವಂಚನೆ: ಯುನೆಸ್ಕೊ ಪ್ರಕಾರ, ಜಗತ್ತಿನ ಮಕ್ಕಳ ಶೇ. 90 ಭಾಗದಷ್ಟು ಮಕ್ಕಳ ಶಿಕ್ಷಣದಲ್ಲಿ ಮಹಾಸೋಂಕಿನ ಅವಧಿಯಲ್ಲಿ ತೀವ್ರ ಭಂಗವುಂಟಾಯಿತು. ಮೇ 2021ರ ವರೆಗೆ 26 ದೇಶಗಳಲ್ಲಿ ಶಾಲೆಗಳು ಪೂರ್ಣವಾಗಿ ಮತ್ತು 55 ದೇಶಗಳಲ್ಲಿ ಭಾಗಶಃ ಮುಚ್ಚಿದ್ದವು. ಶಿಕ್ಷಣದಿಂದ ಅವರಿಗೆ ನಿರಾಸೆಯಾಗಿದ್ದು ಮಕ್ಕಳು ಕೆಲಸ ಮಾಡಲು ಆರಂಭಿಸಿದ್ದಾರೆ. ಆಯಾ ದೇಶದ ಕಾನೂನಿನ ಪ್ರಕಾರ ಉಚಿತ ಅಥವಾ ಭಾಗಶಃ ಸಬ್ಸಿಡಿ ಇರುವ ಶಿಕ್ಷಣ ವ್ಯವಸ್ಥೆಯಿಂದ ಅವರನ್ನು ಹೊರಹಾಕಲಾಗಿದೆ. ಅಂದರೆ ಕೋಟ್ಯಾಂತರ ಮಕ್ಕಳಿಗೆ ಇದು ಬರಿಯ ಶಿಕ್ಷಣದ ತಾತ್ಕಾಲಿಕ ತಡೆಯಲ್ಲ, ಅದರ ಒಂದೇ ಏಟಿನ ಕೊನೆಯಾಗಿದೆ. ಮಹಾಸೋಂಕಿನ ಅವಧಿಯಲ್ಲಿ, ಆನ್‌ಲೈನ್ ಶಿಕ್ಷಣವು ಈ ಕ್ಷೇತ್ರದಲ್ಲಿದ್ದ “ಡಿಜಿಟಲ್ ಕಂದಕ”ವನ್ನು ಇನ್ನಷ್ಟು ಬಯಲುಮಾಡಿದೆ.

ಬಲಪಂಥದತ್ತ ರಾಜಕಾರಣದ ಚಲನೆ

1.16 ಪಕ್ಷದ 21ನೆಯ ಮಹಾಧಿವೇಶನದ ಕಾಲದಿಂದ, ಜಾಗತಿಕವಾಗಿ ಪ್ರತಿಗಾಮಿ ಶಕ್ತಿಗಳು ಮತ್ತು ಚಳುವಳಿಗಳ ಉದಯವನ್ನು ಗಮನಿಸಿದ್ದೇವೆ. 22ನೆಯ ಮಹಾಧಿವೇಶನದಲ್ಲಿ ಜಾಗತಿಕವಾಗಿ ಇನ್ನಷ್ಟು ಬಲಪಂಥದತ್ತ ರಾಜಕಾರಣದ ಚಲನೆಯನ್ನು ಗಮನಿಸಿದ್ದೇವೆ. ಮಹಾಸೋಂಕು ಮತ್ತು ಸಂಬಂಧಿತ ಆರೋಗ್ಯ ತುರ್ತು ಪರಿಸ್ಥಿತಿಗಳ ಪರಿಣಾಮವಾಗಿ ಆರ್ಥಿಕ ಬಿಕ್ಕಟ್ಟು ಇನ್ನಷ್ಟು ಆಳಗೊಳ್ಳುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ, ಬಲಪಂಥದತ್ತ ರಾಜಕಾರಣದ ಚಲನೆಯ ಪ್ರವೃತ್ತಿ ಮುಂದುವರೆದಿದೆ.

1.17 ಪಕ್ಷದ 22ನೆಯ ಮಹಾಧಿವೇಶನದ ರಾಜಕೀಯ ನಿರ್ಣಯ ಹೀಗೆ ಹೇಳಿತ್ತು: “ತೀವ್ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ, ಬೆಳೆಯುವ ಜನತೆಯ ಅತೃಪ್ತಿಯನ್ನು ಯಾರು ಅಣಿಗೊಳಿಸುತ್ತಾರೆ ಎಂಬುದರ ಕುರಿತು ರಾಜಕೀಯ ಸಮರ ಕಾಣಿಸಿಕೊಳ್ಳುತ್ತದೆ. ಜನತೆಯ ಅತೃಪ್ತಿಯನ್ನು ಸಜ್ಜುಗೊಳಿಸಿ ರಾಜಕೀಯ ಬಲಪಂಥ ಮುನ್ನಡೆ ಸಾಧಿಸುತ್ತದೆ ಮತ್ತು ಎಡ ಹಾಗೂ ಪ್ರಗತಿಪರ ಶಕ್ತಿಗಳು ಪ್ರಮುಖ ಬದಲಿ ರಾಜಕೀಯ ಶಕ್ತಿಯಾಗಿ ಹೊಮ್ಮದಂತೆ ಖಾತ್ರಿಪಡಿಸುತ್ತದೆ.” (ಪ್ಯಾರಾ 1.14)

1.18 ಬಲಪಂಥೀಯ ಶಕ್ತಿಗಳು ದುಡಿಯುವ ಜನರ ಸಂಘಟಿತ ಐಕ್ಯ ಪ್ರತಿಭಟನೆಗಳು ಬಲಗೊಳ್ಳುವುದನ್ನು ಅಡ್ಡಿಪಡಿಸಲು ಪ್ರಯತ್ನಿಸುತ್ತವೆ. ತೀವ್ರಗೊಳ್ಳುತ್ತಿರುವ ಶೋಷಣೆಯ ವಿರುದ್ಧ ಜನತೆಯ ಐಕ್ಯತೆಯನ್ನು ಒಡೆಯಲು ಭಾವನಾತ್ಮಕ ಉದ್ರೇಕಗಳನ್ನು ಬಡಿದೆಬ್ಬಿಸುತ್ತವೆ, ವಿಚ್ಛಿದ್ರಕಾರಿ ಕರೆಗಳನ್ನು ಪೋಷಿಸುತ್ತವೆ ಮತ್ತು ಜನಾಂಗವಾದ, ಅನ್ಯರ ಕುರಿತು ಹಗೆ/ಭಯ, ಧಾರ್ಮಿಕ ಪಂಥವಾದ, ಮೂಲಭೂತವಾದ, ಸಂಕುಚಿತ ಪ್ರವೃತ್ತಿಗಳಿಗೆ ಉತ್ತೇಜನ ಕೊಡುತ್ತವೆ.

1.19 ಸಮಾನ ಶಕ್ತಿಯೊಂದಿಗೆ ವಿರೋಧಿಸುವ ಪ್ರವೃತ್ತಿಗಳು: ಆದರೆ ಬಲಪಂಥದತ್ತ ರಾಜಕೀಯ ಚಲನೆಯನ್ನು ಸಮಾನ ಶಕ್ತಿಯೊಂದಿಗೆ ವಿರೋಧಿಸುವ ಪ್ರವೃತ್ತಿಗಳು ಸಹ ಬೆಳೆಯುತ್ತಿವೆ. ಇದನ್ನು ಬೊಲಿವಿಯ, ವೆನೇಜುವೇಲಾ, ನಿಕರಗುವ, ಪೆರು, ಚಿಲಿ ಇತ್ಯಾದಿ ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ‘ಕರಿಯರ ಜೀವ ಉಳಿಯಬೇಕು” (ಬ್ಲಾಕ್ ಲೈವ್ಸ್ ಮ್ಯಾಟರ್) ಎಂಬ ಪ್ರತಿರೋಧ ಸಹ ಟ್ರಂಪ್ ಅನ್ನು ಸೋಲಿಸುವುದರಲ್ಲಿ ಪಾತ್ರ ವಹಿಸಿತು. 1959ರ ನಂತರ ಇಂದು ಸ್ಕ್ಯಾಂಡಿನೆವಿಯದ (ಉತ್ತರ ಯುರೋಪಿನ ಸ್ವೀಡನ್, ನಾರ್ವೆ ಇತ್ಯಾದಿ) ಎಲ್ಲ ಐದು ದೇಶಗಳಲ್ಲಿ ಸೋಶಿಯಲ್-ಡೆಮೊಕ್ರಾಟಿಕ್ ಅಥವಾ ನಡು-ಎಡ ಸರಕಾರಗಳು ಇವೆ.

ಬೆಳೆಯುತ್ತಿರುವ ಪ್ರತಿಭಟನೆಗಳು

1.20 ಪಕ್ಷದ 22ನೆಯ ಮಹಾಧಿವೇಶನದ ನಂತರದ ಅವಧಿಯಲ್ಲಿ, ಮಹಾಸೋಂಕು-ಪೂರ್ವ ಆರ್ಥಿಕ ಬಿಕ್ಕಟ್ಟು, ಅದರ ಪರಿಣಾಮವಾಗಿ ತರಲಾದ ಮಿತವ್ಯಯ ಕ್ರಮಗಳು, ತೀವ್ರಗೊಂಡ ಶೋಷಣೆ ಹಾಗೂ ಮಹಾಸೋಂಕಿನ ಅವಧಿಯಲ್ಲಿ ಹೇರಲಾದ ಸಂಕಷ್ಟಗಳು, ಲಾಕ್‌ಡೌನ್ ಮತ್ತು ಜನತೆಯ ಕಲ್ಯಾಣಗಳಿಗೆ ಅಸಮರ್ಪಕ ಹೂಡಿಕೆ – ಇವುಗಳ ವಿರುದ್ಧ ಪ್ರತಿರೋಧಗಳು ಬೆಳೆದಿವೆ. ಮಹಾಸೋಂಕು ಇದ್ದಾಗ್ಯೂ, ಮುಷ್ಕರಗಳು ಮತ್ತು ಪ್ರತಿಭಟನಾ ಪ್ರದರ್ಶನಗಳು ಜಗತ್ತಿನ ಹಲವು ಭಾಗಗಳಲ್ಲಿ ನಡೆದಿವೆ. ಇಂತಹ ಪ್ರತಿಭಟನೆಗಳು ಲ್ಯಾಟಿನ್ ಅಮೆರಿಕದಲ್ಲಿ ಬಲವಾಗಿ ಎದ್ದು ಕಾಣುವಂತಿದ್ದವು. ಅರ್ಜೆಂಟಿನಾ, ಬ್ರೆಜಿಲ್, ಕೊಲಂಬಿಯಾ, ಚಿಲಿ, ಇಕ್ವಡೊರ್, ಮೆಕ್ಸಿಕೊ ಮತ್ತು ಉರುಗುವೆ ಇತ್ಯಾದಿ ದೇಶಗಳಲ್ಲಿ ದೊಡ್ಡ ಮುಷ್ಕರಗಳು ಮತ್ತು ಮತಪ್ರದರ್ಶನಗಳು ನಡೆದವು.

1.21 ಯುರೋಪಿನಲ್ಲಿ, ಕೈಗಾರಿಕಾ ಕಾರ್ಮಿಕರು ಹಾಗೂ ಡಾಕ್ಟರುಗಳು, ನರ್ಸುಗಳು, ಆರೋಗ್ಯ ಸೇವಾ ಕಾರ್ಮಿಕರು, ಶಿಕ್ಷಕರು ಇತ್ಯಾದಿ ಸೇವಾ ವಲಯಗಳಲ್ಲಿ ದುಡಿಯುತ್ತಿರುವವರ ವಿಭಾಗಗಳು ಮತ್ತಿತರರು ಮುಷ್ಕರ ಹೂಡಿದರು. ಜಾಗತಿಕ ದೈತ್ಯ ಕಂಪನಿ ಅಮೆಜಾನ್ ನ ವಿವಿಧ ದೇಶಗಳ ಘಟಕಗಳ ಕಾರ್ಮಿಕರು, ಈ ಕಂಪನಿಯಲ್ಲಿ ಯೂನಿಯನುಗಳು ನಿಷಿದ್ಧವಾಗಿದ್ದರೂ, ಮುಷ್ಕರ ಹೂಡಿದರು. ಈ ಪ್ರತಿಭಟನೆಗಳಲ್ಲಿ, ಮಿತವ್ಯಯದ ನೀತಿಗಳಿಂದ ಹದಗೆಟ್ಟಿದ್ದ ಅಥವಾ ಕಡಿತಗೊಂಡಿದ್ದ – ಕೆಲಸದ ಪರಿಸ್ಥಿತಿಗಳು, ವೇತನಗಳು ಮತ್ತು ಇತರ ಸಾಮಾಜಿಕ ಕಲ್ಯಾಣದ ಕ್ರಮಗಳನ್ನು – ವಿವಿಧ ಮಟ್ಟಗಳಲ್ಲಿ ಉತ್ತಮಪಡಿಸಲು ಮತ್ತು ಮಹಾಸೋಂಕಿನ ವಿರುದ್ಧ ಸಾಕಷ್ಟು ರಕ್ಷಣಾಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಲಾಯಿತು, ಫ್ರಾನ್ಸ್ ನಲ್ಲಿ, ಕಾರ್ಮಿಕ ಕಾನೂನು ಬದಲಾವಣೆಗಳ ವಿರುದ್ಧ ಪ್ರತಿಭಟನೆಗಳು ಮತ್ತು ಹೆಚ್ಚಿನ ತೆರಿಗೆ ಹೊರೆಯ ವಿರುದ್ಧ ‘ಯೆಲ್ಲೊ ವೆಸ್ಟ್ಸ್’ (ಹಳದಿ ಕೋಟು) ಸಮರಶೀಲ ಚಳುವಳಿಗಳು ನಡೆದವು. ಹಲವು ಇತರ ದೇಶಗಳಲ್ಲಿ ಕಾರ್ಮಿಕರು ಕಾರ್ಮಿಕ ಕಾನೂನುಗಳಲ್ಲಿ ಬದಲಾವಣೆಗಳು, ವೇತನ ಪಿಂಚಣಿಗಳಲ್ಲಿ ಕಡಿತಗಳು, ದೀರ್ಘ ಕೆಲಸದ ಅವಧಿ – ಇವುಗಳ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಪೊರ್ಚುಗಲ್ ನಂತಹ ದೇಶಗಳಲ್ಲಿ ಕಾರ್ಮಿಕರ ಹೋರಾಟಗಳ ಒತ್ತಡದಿಂದಾಗಿ ‘ಮನೆಯಿಂದ ಕೆಲಸ’ ಕುರಿತು ನಿಯಮಗಳನ್ನು ರೂಪಿಸಲೇಬೇಕಾಯಿತು. ಗ್ರೀಸ್ ನಲ್ಲಿ ದೊಡ್ಡ ಮುಷ್ಕರ ಕಾರ್ಯಾಚರಣೆಗಳು ನಡೆದವು. ಕಾರ್ಮಿಕರ ಈ ಮುಷ್ಕರಗಳ ಮುಖ್ಯ ಗುಣಲಕ್ಷಣವೆಂದರೆ ಇವುಗಳಿಗೆ ರೈತರು, ಮಹಿಳೆಯರು, ಹಸಿರು(ಪರಿಸರ) ಕಾರ್ಯಕರ್ತರು, ವಿದ್ಯಾರ್ಥಿಗಳು, ಯುವಜನರ ಬೆಂಬಲ ದೊರತು ಅವರೂ ಪ್ರತಿಭಟನಾ ಪ್ರದರ್ಶನಗಳಲ್ಲಿ ಸೇರಿಕೊಂಡರು. ಹಲವು ದೇಶಗಳಲ್ಲಿ ಇಂತಹ ಪ್ರತಿಭಟನಾ ಕಾರ್ಯಾಚರಣೆಗಳು ಚುನಾವಣೆಗಳಲ್ಲಿ ಪ್ರಗತಿಪರ ಮತ್ತು ಬಲಪಂಥೀಯೇತರ ಶಕ್ತಿಗಳ ಪರವಾದ ಪರಿಣಾಮ ಬೀರಿದವು.

ಚೀನಾದ ಜಾಗತಿಕ ಉದಯ

1.22 ಚೀನಾ ಮಹಾಸೋಂಕನ್ನು ನಿಗ್ರಹಿಸುವಲ್ಲಿ ಮತ್ತು ಆರ್ಥಿಕವನ್ನು ಪುನಶ್ಚೇತನಗೊಳಿಸುವಲ್ಲಿ ಪರಿಣಾಮಕಾರಿಯಾಗಿತ್ತು. ಅದು ಜಗತ್ತಿನ ಎರಡನೆಯ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ತನ್ನ ಜಾಗತಿಕ ಸ್ಥಾನವನ್ನು ಕ್ರೋಢೀಕರಿಸಿಕೊಂಡಿದೆ. ಚೀನಾ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆಯ ಶತಮಾನೋತ್ಸವದ ಸಮಯದಲ್ಲಿ ಜುಲೈ 2021ರಲ್ಲಿ, ಅದು ಎರಡು ಶತಮಾನದ ಗುರಿಗಳಲ್ಲಿ ಒಂದನ್ನು ಸಾಧಿಸಿದೆ ಎಂದು ಘೋಷಿಸಲಾಯಿತು. 2020ರ ಮೊದಲು – ಆರೋಗ್ಯಕರ ಜಿಡಿಪಿ ಬೆಳವಣಿಗೆಯ ದರ; ಜನತೆಯ ಆದಾಯ, ಶಿಕ್ಷಣ, ಆರೋಗ್ಯ ಮತ್ತು ಜೀವನ ಮಟ್ಟಗಳಲ್ಲಿ – ಉತ್ತಮ ಮಟ್ಟಗಳನ್ನು ಸಾಧಿಸುವ ‘ಸಾಧಾರಣ ಸಮೃದ್ಧ ಸಮಾಜ’ ಸ್ಥಾಪಿಸುವ ಗುರಿಯನ್ನು ಸಾಧಿಸಲಾಗಿದೆ.

1.23 ಫೆಬ್ರುವರಿ 2021ರಲ್ಲಿ, ಕಡು ಬಡತನವನ್ನು ತೊಡೆದು ಹಾಕಿದ್ದಾಗಿ ಚೀನಾ ಅಧಿಕೃತವಾಗಿ ಘೋಷಣೆ ಮಾಡಿತು. ವಿಶ್ವ ಬ್ಯಾಂಕಿನ ಬಡತನದ ಮಟ್ಟಗಳ ಶ್ರೇಣಿಯ ಪ್ರಕಾರ, ಜಾಗತಿಕ ಬಡತನವನ್ನು ಶೇ. 70ರಷ್ಟು ಕಡಿತ ಮಾಡುವಲ್ಲಿ ಚೀನಾದ ಕೊಡುಗೆಯಿದೆ. 2021ರ ಮೊದಲ ಮೂರು ತ್ರೈಮಾಸಿಕಗಳಲ್ಲಿ ಚೀನಾ ಶೇ. 9.89 ಜಿಡಿಪಿ ಬೆಳವಣಿಗೆ ಕಂಡಿತು. ಇದು ಅದರ ಗುರಿಯಾಗಿದ್ದ ಶೇ. 6ಕ್ಕಿಂತ ಬಹಳ ಹೆಚ್ಚು ಎಂದು ಗಮನಿಸಬೇಕು. 2006 ರಿಂದ ಈಚೆಗೆ ಪ್ರತಿ ವರ್ಷದಲ್ಲಿ, ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಸರಾಸರಿ ಶೇ. 30ರಷ್ಟು ಪಾಲು ಚೀನಾದ್ದು ಇದೆ.

1.24 ಯು.ಎಸ್-ಚೀನಾ ಸಂಘರ್ಷ: ಚೀನಾದ ಜಾಗತಿಕ ಪ್ರಭಾವ ಹೆಚ್ಚುತ್ತಿರುವುದು, ತನ್ನ ಜಾಗತಿಕ ಯಜಮಾನಿಕೆಗೆ ಬೆದರಿಕೆ ಎಂದು ಪರಿಗಣಿಸುವ ಯು.ಎಸ್. ಗೆ ಗಾಬರಿಯಾಗಿದೆ. ಆರ್ಥಿಕ ಶಕ್ತಿಯಾಗಿ ಚೀನಾದ ದೃಢ ಬೆಳವಣಿಗೆ, ಮಹಾಸೋಂಕಿನ ವಿರುದ್ಧ ಅದರ ಪರಿಣಾಮಕಾರಿ ಹೋರಾಟ ಮತ್ತು ಆರ್ಥಿಕವನ್ನು ಬೇಗನೆ ಮತ್ತೆ ತೆರೆದು ಸಾಧಿಸಿದ ಚೇತರಿಕೆ – ಇವೆಲ್ಲ ತನ್ನ ಜಾಗತಿಕ ಪ್ರಾಬಲ್ಯಕ್ಕೆ ಸವಾಲು ಹಾಕುವ ಬೆದರಿಕೆ ಎಂದು ಯು.ಎಸ್. ಸಾಮ್ರಾಜ್ಯಶಾಹಿ ಹೆಚ್ಚೆಚ್ಚಾಗಿ ಪರಿಗಣಿಸುತ್ತಿದೆ. ಚೀನಾ ತನ್ನ ವ್ಯೂಹಾತ್ಮಕ ಎದುರಾಳಿಯೆಂದು ವರ್ಗೀಕರಿಸಿದ್ದು, ಚೀನಾವನ್ನು ನಿಗ್ರಹಿಸಲು ಮಾತ್ರವಲ್ಲ ಒಂಟಿಯಾಗಿಸಲು ಯು.ಎಸ್. ಸರಣಿ ಕ್ರಮಗಳನ್ನು ಆರಂಭಿಸಿದೆ. ಅದು ಚೀನಾದ ಆರ್ಥಿಕತೆಯನ್ನು ದುರ್ಬಲಗೊಳಿಸಲು ಆರ್ಥಿಕ ಮತ್ತು ವಾಣಿಜ್ಯ ಕ್ರಮಗಳನ್ನು ಕೈಗೊಂಡಿದೆ; ಹಾಂಗ್‌ಕಾಂಗ್ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಸಮಸ್ಯೆಗಳನ್ನು ಎತ್ತಿದೆ; ಕ್ಸಿಂಜಿಯಾಂಗ್ ಪ್ರಾಂತ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಸಮಸ್ಯೆಯನ್ನು ಎತ್ತಿದೆ; ಈವರೆಗಿನ ‘ಒಂದು ಚೀನಾ’ ನೀತಿಯನ್ನು ಕೆಡಿಸಲು ತೈವಾನ್ ಗೆ ಮಿಲಿಟರಿ ಸರಬರಾಜುಗಳನ್ನು ಪೂರೈಸುತ್ತಿದೆ; ದಕ್ಷಿಣ ಚೀನಾ ಸಮುದ್ರದಲ್ಲಿ ಯಾವುದೇ ಅಡ್ಡಿಯಿಲ್ಲದೆ ಓಡಾಡುವ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದೆ ಮತ್ತು ಚೀನಾದ ಮೇಲೆ ಸೈಬರ್ ಯುದ್ಧ ಹೂಡಿರುವ ಆಪಾದನೆಗಳನ್ನು ಮಾಡುತ್ತಿದೆ.

1.25 ಒಂದು ಮಿಲಿಟರಿ ಮತ್ತು ವ್ಯೂಹಾತ್ಮಕ ಕೂಟವಾಗಿ ‘ಕ್ವಾಡ್’ (QUAD – ಯು.ಎಸ್., ಜಪಾನ್, ಆಸ್ಟ್ರೇಲಿಯಾ ಮತ್ತು ಭಾರತ ದೇಶಗಳ ಕೂಟ) ರಚನೆಯ ನಂತರ, ಯು.ಎಸ್. ಈಗ ಹೊಸ ಭದ್ರತಾ ಪಾಲುದಾರಿಕೆ ‘ಔಕಸ್’ (AUKUS – ಯು.ಎಸ್., ಆಸ್ಟ್ರೇಲಿಯ ಮತ್ತು ಯು.ಕೆ.ಗಳ ಕೂಟ) ಆರಂಭಿಸಿದೆ. ಇದು ‘ಇಂಡೊ-ಪೆಸಿಫಿಕ್’ನಲ್ಲಿ, ವಿಶೇಷವಾಗಿ ಭಾರತ ಮಹಾಸಾಗರದಲ್ಲಿ, ಚೀನಾದ ಪ್ರಭಾವ ಮತ್ತು ಉಪಸ್ಥಿತಿಯನ್ನು ತಗ್ಗಿಸುವ ಉದ್ದೇಶ ಹೊಂದಿದೆ. ಈ ದೇಶಗಳ ಜಂಟಿ ಮಿಲಿಟರಿ ಉಪಸ್ಥಿತಿ, ಜಂಟಿ ಮಿಲಿಟರಿ ಕವಾಯಿತು ಮತ್ತು ವ್ಯಾಪಕ ‘ಯುದ್ಧ ಆಟ’ಗಳ ಮೂಲಕ, ಯು.ಎಸ್. ಸಾಮ್ರಾಜ್ಯಶಾಹಿ ಚೀನಾವನ್ನು ಒಂಟಿಯಾಗಿಸಲು ಪ್ರಯತ್ನಿಸುತ್ತಿದೆ.

1.26 ಟ್ರಂಪ್ ಆಡಳಿತ ಚೀನಾದ ಮೇಲೆ ಹೇರಿದ ಆರ್ಥಿಕ ದಿಗ್ಬಂಧನಗಳನ್ನು, ಬಿಡೆನ್ ಆಡಳಿತದ ಅಡಿಯಲ್ಲಿ ಯು.ಎಸ್. ಮುಂದುವರಿಸಿದೆ. ಇದರ ಫಲವಾಗಿ 2018 ಮತ್ತು 2020 ಗಳ ನಡುವೆ ಚೀನಾದಿಂದ ಯು.ಎಸ್. ಗೆ ಸರಕುಗಳ ಆಮದು ಮತ್ತು ದ್ವಿಪಕ್ಷೀಯ ಸೇವೆಗಳ ವಹಿವಾಟು ಕುಗ್ಗಿದೆ. ಆದರೆ 2020ರಲ್ಲಿ, ಚೀನಾ 659.5 ಶತಕೋಟಿ ಡಾಲರಿನ ವ್ಯಾಪಾರದೊಂದಿಗೆ, ಯು.ಎಸ್. ನ ಅತಿ ದೊಡ್ಡ ವಾಣಿಜ್ಯ ಪಾಲುದಾರನಾಗಿದೆ. ಎರಡೂ ದೇಶಗಳಲ್ಲಿ ಹೂಡಿಕೆ ಮತ್ತು ಸಾಲಗಳು ಪರಸ್ಪರ ಹೆಣೆದುಕೊಂಡಿರುವುದರಿಂದ, ಯು.ಎಸ್. ಚೀನಾದ ಜತೆ ವಾಣಿಜ್ಯವಿಲ್ಲದೆ ಇರಲು ಸಾಧ್ಯವಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ ಹೊಸಶೋಧದಲ್ಲಿ ತನ್ನ ಪಾರಮ್ಯವನ್ನು ಉಳಿಸಿಕೊಳ್ಳಲು, 5ಜಿ ಜಾಲಗಳಲ್ಲಿ ಚೀನಾ ಭಾಗವಹಿಸುವುದರಿಂದ ಹೊರಗಿಡುವುದು ಮುಂತಾದ ಕ್ರಮಗಳ ಮೂಲಕ, ಈ ಕ್ಷೇತ್ರದಲ್ಲಿ ಚೀನಾದ ವಿಸ್ತರಣೆಯನ್ನು ಸೀಮಿತಗೊಳಿಸಲು ಶತಪ್ರಯತ್ನ ಮಾಡುತ್ತಿದೆ.

1.27 ಯು.ಎಸ್. ಚೀನಾವನ್ನು ಒಂಟಿಯಾಗಿಸುವ ಜಾಗತಿಕ ಪ್ರಯತ್ನದಲ್ಲಿ, ಜಿ7, ಯುರೋ ಕೂಟ ಮತ್ತು ನ್ಯಾಟೋಗಳನ್ನು ಅಣಿನೆರೆಸುತ್ತಿದೆ. ಚೀನಾದ ಬೆಲ್ಟ್ ಅಂಡ್ ರೋಡ್ ಇನಿಶಿಯೆಟಿವ್(Belt and Road Initiative)ನ್ನು (150 ದೇಶಗಳು ಸೇರಿರುವ ಪ್ರಮುಖ ಜಾಗತಿಕ ಮೂಲಸೌಕರ್ಯದ ವಾಣಿಜ್ಯ ಪಥ) ಎದುರಿಸಲು, ಬಿಲ್ಡ್ ಬ್ಯಾಕ್ ಬೆಟರ್ ವರ್ಲ್ಡ್(Build Back Better World) ಎಂಬ ಒಂದು ಪ್ರತಿ-ಯೋಜನೆಯನ್ನು ಜಿ7 ಘೋಷಿಸುವಂತೆ ಯು.ಎಸ್. ಮಾಡಿತು. ನ್ಯಾಟೋ ಶೃಂಗಸಭೆಯಲ್ಲಿ, ಯು.ಎಸ್. ಪ್ರಭಾವದಿಂದ, ಚೀನಾ ಒಂದು ಭದ್ರತಾ ಬೆದರಿಕೆ ಎಂದು ಘೋಷಿಸುವ ಹೇಳಿಕೆ ನೀಡಲಾಯಿತು. ಚೀನಾದ ಮಾನವ ಹಕ್ಕುಗಳ ಸಮಸ್ಯೆಯ ವಿಷಯದಲ್ಲಿ ಚೀನಾದ ಕೆಲವು ಅಧಿಕಾರಿಗಳ ಮೇಲೆ ದಿಗ್ಬಂಧನ ಹಾಕುವುದರಲ್ಲಿ ಯು.ಎಸ್., ಕೆನಡಾ, ಯು.ಕೆ. ಗಳೊಂದಿಗೆ ಯುರೋ ಕೂಟ ಸಹಕರಿಸಿದರೂ, ಆರ್ಥಿಕ ಮತ್ತು ವ್ಯವಹಾರದ ವಿಷಯಗಳಲ್ಲಿ ಅವುಗಳ ಜತೆ ಪೂರ್ಣ ಐಕ್ಯ ನಿಲುವಿಗೆ ಒಪ್ಪುತ್ತಿಲ್ಲ. ಫ್ರಾನ್ಸ್ ಮತ್ತು ಇಟಲಿ ಚೀನಾದಿಂದ ‘ಕಳಚಿ’ಕೊಳ್ಳಲು ಉತ್ಸುಕರಾಗಿಲ್ಲ. ಯುರೋ ಕೂಟ ಮಾನವ ಹಕ್ಕುಗಳ ವಿಷಯದಲ್ಲಿ ಚೀನಿ ಅಧಿಕಾರಿಗಳ ಮೇಲೆ ದಿಗ್ಬಂಧನ ವಿಧಿಸಿದ್ದಕ್ಕೆ ಪ್ರತಿಯಾಗಿ, ಚೀನಾ ಯುರೋ ಕೂಟದ ಕೆಲವು ಅಧಿಕಾರಿಗಳು ಮತ್ತು ಸಂಸ್ಥೆಗಳ ಮೇಲೆ ದಿಗ್ಬಂಧನ ವಿಧಿಸಿದ್ದು, ಯುರೋ ವಾಣಿಜ್ಯ ಮಂಡಳಿಯಲ್ಲಿ ಗಾಬರಿ ಹುಟ್ಟಿಸಿದೆ. ಯು.ಎಸ್.-ರಶ್ಯಾ ಶೃಂಗಸಭೆಯಲ್ಲಿ, ರಶ್ಯಾ ಮತ್ತು ಚೀನಾಗಳ ನಡುವೆ ಅವುಗಳ ವ್ಯೂಹಾತ್ಮಕ ಪಾಲುದಾರಿಕೆಯ ವಿಷಯದಲ್ಲಿ ಒಡಕು ಮೂಡಿಸಲು ಮಾಡಿದ ಪ್ರಯತ್ನ ವಿಫಲವಾಯಿತು.

1.28 ಯು.ಎಸ್.-ಚೀನಾ ಸಂಘರ್ಷವು ಸಾಮ್ರಾಜ್ಯಶಾಹಿ ಮತ್ತು ಸಮಾಜವಾದಗಳ ನಡುವಿನ ಕೇಂದ್ರೀಯ ವೈರುಧ್ಯಗಳ ಮೇಲೆ ಪರಿಣಾಮ ಬೀರಲಿದೆ.

ಚೀನಾ-ರಷ್ಯಾ ಪಾಲುದಾರಿಕೆ

1.29 ಇತ್ತೀಚಿನ ವರ್ಷಗಳಲ್ಲಿ ಚೀನಾ ಮತ್ತು ರಷ್ಯಾದ ನಡುವಿನ ವ್ಯೂಹಾತ್ಮಕ ಪಾಲುದಾರಿಕೆ ಆಳಗೊಂಡಿದೆ ಮಾತ್ರವಲ್ಲದೆ ಬಲಿಷ್ಟಗೊಂಡಿದೆ. ಯುಎಸ್-ನ್ಯಾಟೋ ಮತ್ತು ರಷ್ಯಾ ನಡುವೆ ಉಕ್ರೇನ್ ವಿಷಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದ ಸಂದರ್ಭದಲ್ಲಿ ಮತ್ತು, ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಚೀನಾವನ್ನು ಒಂಟಿಯಾಗಿಸಲು ಯುಎಸ್ ಒತ್ತಡದ ಹಿನ್ನೆಲೆಯಲ್ಲಿ, ಡಿಸೆಂಬರ್ 2021ರಲ್ಲಿ ಕ್ಸಿ ಜಿನ್ ಪಿಂಗ್-ಪುತಿನ್ ರ ನಡುವೆ ವರ್ಚುವಲ್ ಸಭೆ ನಡೆಯಿತು. ನವೆಂಬರ್ 2021 ರಲ್ಲಿ, ರಷ್ಯಾ ಮತ್ತು ಚೀನಾದ ರಕ್ಷಣಾ ಮಂತ್ರಿಗಳು 2021-25ರ ಅವಧಿಯಲ್ಲಿ ನಿಕಟ ಮಿಲಿಟರಿ ಸಹಕಾರಕ್ಕಾಗಿ ಮಾರ್ಗಸೂಚಿಗೆ ಸಹಿ ಹಾಕಿವೆ. ಚೀನಾ ಮತ್ತು ರಷ್ಯಾದ ನಡುವಿನ ವ್ಯೂಹಾತ್ಮಕ ಸಂಬಂಧಗಳನ್ನು ಬಲಪಡಿಸುವುದು, ಯುಎಸ್ ನೇತೃತ್ವದ ಯಜಮಾನಿಕೆ ಪ್ರಾಬಲ್ಯದ ಮೈತ್ರಿಗೆ ಪ್ರತಿ-ಭಾರದ ಕಾರ್ಯ ನಿರ್ವಹಿಸಲಿದೆ.

ಉಕ್ರೇನಿನಲ್ಲಿ ಸಂಘರ್ಷ

 1.30 ರಷ್ಯಾ ಮತ್ತು ಪಾಶ್ಚಿಮಾತ್ಯ ಒಕ್ಕೂಟ, ನ್ಯಾಟೋ ನಡುವೆ ಉಕ್ರೇನ್ ಯಾವಾಗಾದರೂ ಸಿಡಿಯಬಲ್ಲ ಕಿಡಿ ಆಗಿ ಮಾರ್ಪಟ್ಟಿದೆ. ಸೋವಿಯತ್ ಒಕ್ಕೂಟದ ಪತನದ ನಂತರ ನ್ಯಾಟೋ ವನ್ನು ಪೂರ್ವಕ್ಕೆ ವಿಸ್ತರಿಸಲು ಪಶ್ಚಿಮದ ಕೂಟವು ಗಂಭೀರ ಪ್ರಯತ್ನ ಮಾಡುತ್ತಾ ಬಂದಿದೆ. ಪೂರ್ವ ಯುರೋಪಿನ ಎಲ್ಲಾ ದೇಶಗಳು ಈಗ ಯುರೋಪಿಯನ್ ಕೂಟ (ಇಯೂ) ಮತ್ತು ನ್ಯಾಟೋದ ಭಾಗವಾಗಿವೆ. ಹಿಂದಿನ ಸೋವಿಯತ್ ಒಕ್ಕೂಟದ ಗಣರಾಜ್ಯವಾದ ಉಕ್ರೇನ್ ನ್ಯಾಟೋ ಕಕ್ಷೆಗೆ ಸೇರ್ಪಡೆಯಾಗುವುದನ್ನು ರಷ್ಯಾ ಬಲವಾಗಿ ವಿರೋಧಿಸುತ್ತದೆ. ಕ್ರಿಮಿಯಾವನ್ನು ಉಕ್ರೇನಿನಿಂದ ಪ್ರತ್ಯೇಕಿಸಿದ್ದು ಮತ್ತು ಪೂರ್ವದ ಡಾನ್ಬಾಸ್ ಪ್ರದೇಶದಲ್ಲಿನ ಸಂಘರ್ಷ ಉಕ್ರೇನ್ ನಲ್ಲಿನ ಜಗ್ಗಾಟದ ಫಲಗಳಾಗಿವೆ. ಉಕ್ರೇನಿನ ಗಡಿಯಲ್ಲಿನ ರಷ್ಯಾದ ಪಡೆಗಳ ಚಲನೆ, ಉಕ್ರೇನ್ ಜೊತೆ ನ್ಯಾಟೋ ಸಂಬಂಧಗಳನ್ನು ಬಲಪಡಿಸುವ ನವೀಕೃತ ಪ್ರಯತ್ನಗಳ ಪರಿಣಾಮವಾಗಿದೆ. ಉಕ್ರೇನ್ ನ ವಿರುದ್ಧ ರಷ್ಯಾ ಮಿಲಿಟರಿ ಆಕ್ರಮಣ ಮಾಡಿದರೆ, ಜಿ-7 ಮತ್ತು ಇಯೂ ರಷ್ಯಾದ ವಿರುದ್ಧ ಕಠಿಣ ನಿರ್ಬಂಧಗಳನ್ನು ಹೇರುವ ಬೆದರಿಕೆ ಒಡ್ಡಿವೆ. ಉಕ್ರೇನ್ ಪಶ್ಚಿಮ ಮೈತ್ರಿಗೆ ಸೇರ್ಪಡೆಗೊಳ್ಳುವ ಪ್ರಯತ್ನವನ್ನು, ನಾಟೋ ದಾಟಬಾರದ ‘ಲಕ್ಷ್ಮಣ ರೇಖೆ’ಯೆಂದು ರಷ್ಯಾ ಬಗೆಯುತ್ತದೆ.

ಪ್ರಮುಖವಾದ ವಿಶ್ವ ಸಾಮಾಜಿಕ ವೈರುಧ್ಯಗಳು

1.31 ಬೆಳೆಯುತ್ತಿರುವ ಚೀನಾ-ಯು.ಎಸ್. ಸಂಘರ್ಷ ಹಾಗೂ ಕ್ಯೂಬಾ ಮತ್ತು ಉತ್ತರ ಕೊರಿಯಾ (ಡಿ.ಪಿ.ಆರ್.ಕೆ.)ಗಳತ್ತ  ಮುಂದುವರಿದಿರುವ ಯು.ಎಸ್. ಸಾಮ್ರಾಜ್ಯಶಾಹಿಯ ಆಕ್ರಮಣಕಾರಿ ನಿಲುವುಗಳು, ಸಾಮ್ರಾಜ್ಯಶಾಹಿ ಮತ್ತು ಸಮಾಜವಾದದ ನಡುವಿನ ಕೇಂದ್ರ ವೈರುಧ್ಯಗಳು ಹರಿತಗೊಳ್ಳುತ್ತಿರುವುದರ ಮೇಲೆ ಪರಿಣಾಮ ಬೀರುತ್ತಿವೆ.

1.32 ಸಾಮ್ರಾಜ್ಯಶಾಹಿಗಳ ನಡುವಿನ ವೈರುಧ್ಯಗಳ ವಲಯದಲ್ಲಿ, ಪ್ರಮುಖವಾಗಿ ಟ್ರಂಪ್ ನ ನೀತಿಗಳಿಂದಾಗಿ ಸಾಮ್ರಾಜ್ಯಶಾಹಿ ಮೈತ್ರಿಯ ಒಗ್ಗಟ್ಟಿನ ಮೇಲೆ ಹೆಚ್ಚು ವ್ಯತಿರಿಕ್ತ ಪರಿಣಾಮ ಬೀರಿತ್ತು ಎಂದು ನಮ್ಮ 22ನೇ ಮಹಾಧಿವೇಶನದಲ್ಲಿ ನಾವು ಗಮನಿಸಿದ್ದೆವು. ರಷ್ಯಾ ಮತ್ತು ಚೀನಾ ವಿರುದ್ಧ ಎಲ್ಲ ಯುರೋಪಿಯನ್ ಒಕ್ಕೂಟ ಮತ್ತು ನ್ಯಾಟೋ ಮಿತ್ರರಾಷ್ಟ್ರಗಳನ್ನು ಒಟ್ಟುಗೂಡಿಸಲು ಬಿಡನ್ ಆಡಳಿತ ಪ್ರಯತ್ನಿಸುತ್ತಿದ್ದರೂ ಸಹಾ, ವ್ಯತ್ಯಾಸಗಳು ಹಾಗೆಯೇ ಉಳಿದಿವೆ.

 1.33 ಸಾಮ್ರಾಜ್ಯಶಾಹಿ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ನಡುವಿನ ವೈರುಧ್ಯಗಳು ಸಹ, ಲ್ಯಾಟಿನ್ ಅಮೇರಿಕಾ, ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ಯು.ಎಸ್. ಸಾಮ್ರಾಜ್ಯಶಾಹಿಯ ಆಕ್ರಮಣಶೀಲ ಮಧ್ಯಪ್ರವೇಶದ ಮೂಲಕ ಬೆಳೆಯುತ್ತಿವೆ.  ಅಭಿವೃದ್ಧಿಶೀಲ ದೇಶಗಳ ಸಾಲದ ಹೊರೆಯು ತಾಳಲಾರದ ಮಟ್ಟ ಮುಟ್ಟಿದೆ. ಶ್ರೀಮಂತ ರಾಷ್ಟ್ರಗಳು ಜಾಗತಿಕ ತಾಪಮಾನ ಏರಿಕೆಯ ಚಾರಿತ್ರಿಕ ಜವಾಬ್ದಾರಿಯನ್ನು ಹೊರಲು ನಿರಾಕರಿಸುತ್ತಿವೆ ಮತ್ತು ಹವಾಮಾನ ಹೊಂದಾಣಿಕೆ ಕ್ರಮಗಳಿಗೆ ಹಣಕಾಸು ನೀಡಲು ನಿರಾಕರಿಸುತ್ತಿವೆ.

 1.34 ಕಾರ್ಮಿಕರ ಹಕ್ಕುಗಳ ಮೇಲೆ ಹೆಚ್ಚಿದ ಆಕ್ರಮಣಗಳು, ಕಾರ್ಮಿಕ ವರ್ಗ ಮತ್ತು ದುಡಿಯುವ ಜನರ ಮೇಲೆ ಕಠಿಣ ಮಿತವ್ಯಯ ಕ್ರಮಗಳು, ಉದ್ಯೋಗ ನಷ್ಟಗಳು ಮತ್ತು ಕಾರ್ಮಿಕರ ಬದಲಿಗೆ ಹೊಸ ತಂತ್ರಜ್ಞಾನಗಳ ಅಳವಡಿಸುವಿಕೆಗಳೊಂದಿಗೆ ತೀವ್ರಗೊಂಡ ಶೋಷಣೆಯ ಜತೆಗೆ, ಬಂಡವಾಳಶಾಹಿಯ ‘ಕಾರ್ಮಿಕ ಮತ್ತು ಬಂಡವಾಳ’ಗಳ ನಡುವಿನ ಮೂಲಭೂತ ವೈರುಧ್ಯವು ತೀವ್ರಗೊಳ್ಳುತ್ತಿದೆ.  ಈ ಆಕ್ರಮಣಗಳ ವಿರುದ್ದ ಕಾರ್ಮಿಕ ವರ್ಗದಿಂದ ಪ್ರತಿರೋಧವೂ  ಬೆಳೆದಿದೆ.

ಯು.ಎಸ್. ಸಾಮ್ರಾಜ್ಯಶಾಹಿಯ ಆಕ್ರಮಣಶೀಲತೆ

 1.35 ಪ್ರಪಂಚದ ವಿವಿಧ ಭಾಗಗಳಲ್ಲಿ, ಸಾಮ್ರಾಜ್ಯಶಾಹಿಯು ತನ್ನ ಜಾಗತಿಕ ಪ್ರಾಬಲ್ಯವನ್ನು ಕಾಪಾಡಿಕೊಳ್ಳಲು ಆಕ್ರಮಣಕಾರಿಯಾಗಿ ಮಧ್ಯಪ್ರವೇಶಿಸುತ್ತಿದೆ. 2020 ರಲ್ಲಿ, ಯು.ಎಸ್. ಮಿಲಿಟರಿ ವೆಚ್ಚವು ಅಂದಾಜು 778 ಶತಕೋಟಿ ಡಾಲರ್ ತಲುಪಿತು. ಇದು 2019ಕ್ಕಿಂತ 4.4 ಶೇಕಡಾ ಹೆಚ್ಚಳವಾಗಿದೆ; ಇದು ಯು.ಎಸ್. ಮಿಲಿಟರಿ ವೆಚ್ಚದ ಹೆಚ್ಚಳದ ಸತತ ಮೂರನೇ ವರ್ಷವಾಗಿದೆ. ಆದಾಗ್ಯೂ, ಪ್ರಪಂಚದ ಅನೇಕ ಭಾಗಗಳಲ್ಲಿ, ಸಾಮ್ರಾಜ್ಯಶಾಹಿ ಬೆಂಬಲಿತ ಸರಕಾರಗಳ ವಿರುದ್ಧ ಪ್ರತಿರೋಧಗಳು ಸಹ ಬೆಳೆಯುತ್ತಿವೆ ಮತ್ತು ಯು.ಎಸ್. ಸಾಮ್ರಾಜ್ಯಶಾಹಿಯ ಯಜಮಾನಿಕೆಗೆ ಸವಾಲು ಒಡ್ಡುತ್ತಿವೆ.

ಲ್ಯಾಟಿನ್ ಅಮೆರಿಕ

 1.36 22ನೇ ಮಹಾಧಿವೇಶನದ ನಂತರದ ಅವಧಿಯಲ್ಲಿ ಲ್ಯಾಟಿನ್ ಅಮೇರಿಕಾವು ಬಲಪಂಥೀಯ ಪ್ರತಿದಾಳಿಗೆ ಸಾಕ್ಷಿಯಾಯಿತು. ಬ್ರೆಜಿಲ್ ನಲ್ಲಿ, 2018ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಬಲಪಂಥೀಯ ಅಭ್ಯರ್ಥಿಯಾಗಿ ಜೈರ್ ಬೋಲ್ಸೊನಾರೊ ಗೆದ್ದರು. ಇವರು ಬಲಪಂಥೀಯ ನಿರಂಕುಶ ಆಡಳಿತವನ್ನು ಸ್ಥಾಪಿಸಲು ಮುಂದಾದರು. ಬೊಲಿವಿಯಾದಲ್ಲಿ, 2019ರ ಚುನಾವಣೆಯಲ್ಲಿ MASನ ಇವೊ ಮೊರೇಲ್ಸ್ ಗೆದ್ದ ನಂತರ ಯು.ಎಸ್. ಬೆಂಬಲಿತ ಕ್ಷಿಪ್ರಧಂಗೆ ನಡೆಯಿತು. ಧಂಗೆ ನಡೆದ ಕಾರಣ ಮೊರೇಲ್ಸ್ ದೇಶ ತೊರೆಯಬೇಕಾಯಿತು. ಹೊಂಡುರಾಸ್ ನಲ್ಲಿ ನಡೆದ ಚುನಾವಣೆಯಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳ ಆರೋಪಗಳ ಹೊರತಾಗಿಯೂ, ಯು.ಎಸ್. ಮಧ್ಯಪ್ರವೇಶದಿಂದ ಅಧ್ಯಕ್ಷರನ್ನು  ಮರುಸ್ಥಾಪಿಸಲಾಯಿತು. ವೆನೆಜುವೆಲಾದಲ್ಲಿ, ಯು.ಎಸ್. ಬೆಂಬಲಿತ ಬಲಪಂಥೀಯ ಶಕ್ತಿಗಳು ನಿಕೋಲಸ್ ಮಡುರೊ ಸರ್ಕಾರವನ್ನು ಉರುಳಿಸಲು ಗಂಭೀರವಾಗಿ ಪ್ರಯತ್ನಿಸುತ್ತಿವೆ.

1.37 ಇದಕ್ಕೆ ವಿರುದ್ಧವಾಗಿ, ಜನಪ್ರಿಯ ಮತ್ತು ಎಡ ಶಕ್ತಿಗಳು ಸರ್ವಾಧಿಕಾರ ಮತ್ತು ಬಲಪಂಥೀಯ ಆರ್ಥಿಕ ನೀತಿಗಳ ವಿರುದ್ದ ನಿರಂತರವಾಗಿ ಹೋರಾಡುತ್ತಿವೆ. ಇದರಿಂದ ಎಡಪಕ್ಷಗಳು ಮತ್ತೆ ನೆಲೆಗಳನ್ನು ಪಡೆಯುತ್ತಿದ್ದು ಮುನ್ನಡೆಗಳನ್ನು ಸಾಧಿಸುತ್ತಿವೆ. ಅರ್ಜೆಂಟೀನಾದಲ್ಲಿ, ಪ್ರಸ್ತುತ ಬಲಪಂಥೀಯ ಅಧ್ಯಕ್ಷರನ್ನು 2019ರಲ್ಲಿ ಪೆರೋನಿಸ್ಟ್ ಅಭ್ಯರ್ಥಿಯಿಂದ ಸೋಲಿಸಲಾಯಿತು. ಅತ್ಯಂತ ಗಮನಾರ್ಹ ಹೋರಾಟವು ಬೊಲಿವಿಯಾದಲ್ಲಿ ನಡೆಯಿತು. ಅಲ್ಲಿ ಅಕ್ಟೋಬರ್ 2020ರಲ್ಲಿ, ಅಧ್ಯಕ್ಷೀಯ ಚುನಾವಣೆಯಲ್ಲಿ MAS ಅಭ್ಯರ್ಥಿ ಭರ್ಜರಿ ಜಯಗಳಿಸಿದ್ದಾರೆ. ಈ ವಿಜಯದಿಂದಾಗಿ, ಹೊಸ ಸರ್ಕಾರವು ಪ್ರತಿಗಾಮಿ ಆಡಳಿತದ ನೀತಿಗಳನ್ನು ಹಿಂದಕ್ಕೆ ತಳ್ಳಿದೆ. ಆ ನಂತರ, ಎಡ ಮತ್ತು ನಡು-ಎಡ ಅಭ್ಯರ್ಥಿಗಳು ಪೆರು ಮತ್ತು ಹೊಂಡುರಾಸ್ ನಲ್ಲಿ ಗೆದ್ದಿದ್ದಾರೆ. (ಎರಡು ದೇಶಗಳು ಸರ್ವಾಧಿಕಾರಿ ಆಡಳಿತಗಳು ಮತ್ತು ಕ್ಷಿಪ್ರಧಂಗೆಗಳ ಇತಿಹಾಸವನ್ನು ಹೊಂದಿವೆ).

1.38 ಡಿಸೆಂಬರ್ 2021ರಲ್ಲಿ, ಚಿಲಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡ ಮೈತ್ರಿಕೂಟದ ಅಭ್ಯರ್ಥಿ ಗೇಬ್ರಿಯಲ್ ಬೋರಿಕ್ ಗೆಲುವು, ಒಂದು ಪ್ರಮುಖ ಮೈಲಿಗಲ್ಲಾಗಿದೆ. ಸಂವಿಧಾನವನ್ನು ಬದಲಾಯಿಸುವ ಚಳುವಳಿಯ ಗೆಲುವು ಮತ್ತು ಎಡ ಮತ್ತು ಪ್ರಗತಿಪರ ಶಕ್ತಿಗಳ ಪ್ರಾಬಲ್ಯವಿರುವ ಸಂವಿಧಾನ ಸಭೆಯ ಆಯ್ಕೆಯ ಹಿನ್ನೆಲೆಯಲ್ಲಿ ಈ ಯಶಸ್ಸು ಬಂದಿದೆ. ಈ ಪ್ರಗತಿಶೀಲ ಫಲಿತಾಂಶಗಳಿಗೆ ಈಕ್ವೆಡಾರ್ ಮಾತ್ರ ಹೊರತಾಗಿದೆ. ಅಲ್ಲಿ ಬಲಪಂಥೀಯರು ಅಧ್ಯಕ್ಷ ಸ್ಥಾನವನ್ನು ಗೆದ್ದಿದ್ದಾರೆ.

1.39 ಬ್ರೆಜಿಲ್ ನಲ್ಲಿ, ಹೆಚ್ಚುತ್ತಿರುವ ಜನತೆಯ ಪ್ರತಿಭಟನೆಗಳನ್ನು ಬೋಲ್ಸನಾರೊ ಅವರ ವಿನಾಶಕಾರಿ ಆಡಳಿತವು ಎದುರಿಸುತ್ತಿದೆ. ಮಾಜಿ ಅಧ್ಯಕ್ಷ ಲೂಲಾರವರು ಭ್ರಷ್ಟಾಚಾರ ಆರೋಪದಿಂದ ಮುಕ್ತರಾಗಿದ್ದು, 2022ರಲ್ಲಿ ನಡೆಯುವ ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಬೋಲ್ಸನಾರೊ ಅವರು ಲುಲಾರಿಂದ ಪ್ರಬಲ ಸವಾಲನ್ನು ಎದುರಿಸಲಿದ್ದಾರೆ. ಲುಲಾ ಅವರ ಗೆಲುವು ಯು.ಎಸ್. ಬೆಂಬಲಿತ ಬಲಪಂಥೀಯ ಶಕ್ತಿಗಳ ವಿರುದ್ಧ ನಡೆಯುತ್ತಿರುವ ಹೋರಾಟಗಳ ಮೇಲೆ ದೊಡ್ಡ ಪರಿಣಾಮ ಬೀರಲಿವೆ. ಕೊಲಂಬಿಯಾ ದೀರ್ಘಕಾಲದಿಂದ ಯು.ಎಸ್. ಬೆಂಬಲಿತ ಬಲಪಂಥೀಯ ಶಕ್ತಿಗಳ ಭದ್ರ ಕೋಟೆಯಾಗಿದೆ. ಎಡ ನೇತೃತ್ವದ ಕಾರ್ಮಿಕ ವರ್ಗದ ಹೋರಾಟಗಳಿಗೆ ಕೊಲಂಬಿಯಾ ಇದೀಗ ಸಾಕ್ಷಿಯಾಗಿದೆ. ಇಲ್ಲಿ ಎಡ ಪಂಥೀಯರು 2022ರ ಅಧ್ಯಕ್ಷೀಯ ಚುನಾವಣೆಯಲ್ಲಿ ದೊಡ್ಡ ಸವಾಲನ್ನು ಒಡ್ಡಲಿದ್ದಾರೆ.

 1.40 ವೆನೆಜುವೆಲಾ, ಯುಎಸ್ ಮತ್ತು ಬಲಪಂಥೀಯ ಶಕ್ತಿಗಳು ಆರಂಭಿಸಿದ ಹೈಬ್ರಿಡ್ ಯುದ್ಧವನ್ನು ಧೈರ್ಯದಿಂದ ಎದುರಿಸಿದೆ. ಅವು ನಿರ್ಬಂಧಗಳ ಮೂಲಕ ಮಡೊರೊ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದವು.  ವಿದೇಶದಲ್ಲಿ ಅದರ ಆಸ್ತಿಗಳನ್ನು ಕಿತ್ತುಕೊಳ್ಳುವುದು, ಸಶಸ್ತ್ರ ಗುಂಪುಗಳನ್ನು ಉತ್ತೇಜಿಸುವುದು ಮತ್ತು ಸಾಮಾಜಿಕ ಮತ್ತು ಆರ್ಥಿಕ ಅಶಾಂತಿಯ ಪ್ರಯತ್ನಗಳು, ಆಹಾರ, ಇಂಧನ ಮತ್ತು ಅಗತ್ಯ ಸರಕುಗಳ ತೀವ್ರ ಕೊರತೆಯ ಹೊರತಾಗಿಯೂ, ಜನಪ್ರಿಯ ಶಕ್ತಿಗಳು ಒಗ್ಗಟ್ಟಿನಿಂದ ಉಳಿದಿವೆ ಮತ್ತು ಅಶಾಂತಿಯನ್ನು ಉತ್ತೇಜಿಸುವ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಲಾಗಿದೆ. ಇದರ ನಡುವೆ ನವೆಂಬರ್ 2021ರಲ್ಲಿ ನಡೆದ ಪ್ರಾಂತೀಯ ಚುನಾವಣೆಯಲ್ಲಿ, ಆಡಳಿತಾರೂಢ ಯುನೈಟೆಡ್ ಸೋಷಿಯಲಿಸ್ಟ್ ಪಾರ್ಟಿ (PSUV) 23 ಗವರ್ನರ್ ಹುದ್ದೆಗಳಲ್ಲಿ 19 ನ್ನು ಗೆದ್ದಿದೆ.

ಪಶ್ಚಿಮ ಏಷ್ಯಾ

 1.41 ಪಶ್ಚಿಮ ಏಷ್ಯಾದಲ್ಲಿನ ವಿದ್ಯಮಾನಗಳ ಪ್ರಮುಖವಾದ ಲಕ್ಷಣವೆಂದರೆ, ಪ್ಯಾಲೇಸ್ಟಿನ್ ಮತ್ತು ಇರಾನ್ ವಿರುದ್ಧ ಇಸ್ರೇಲ್ ಆಕ್ರಮಣಕಾರಿ ನಿಲುವು ಮುಂದುವರಿದಿರುವುದು. ಟ್ರಂಪ್ ಆಡಳಿತದಿಂದ ಜೆರುಸೆಲೆಮ್ ಇಸ್ರೇಲಿನ ರಾಜಧಾನಿಯಾಗಿ ಮಾನ್ಯತೆ ಮತ್ತು ಪಶ್ಚಿಮ ದಂಡೆಯಲ್ಲಿ ಕಾನೂನು ಬಾಹಿರ ವಸತಿಗಳ ಅನುಮೋದನೆಗಳಿಂದ ಕುಮ್ಮಕ್ಕು ಪಡೆದ ನೆತನ್ಯಾಹು ನೇತೃತ್ವದಲ್ಲಿ ಇಸ್ರೇಲ್ ಪೂರ್ವ ಜೆರುಸಲೆಮ್ ಮತ್ತು ಅಲ್-ಅಕ್ಸಾ ಮಸೀದಿಯಲ್ಲಿ ಹೊಸ ಪ್ರಚೋದನೆಯನ್ನು ಉಂಟು ಮಾಡಿತು. ಗಾಜಾ ಪಟ್ಟಿಯ ವಿರುದ್ಧ ಆಕ್ರಮಣ ಮತ್ತೊಂದು ದಾಖಲೆಯಾಗಿದೆ. ನಾಲ್ಕು ಅರಬ್ ದೇಶಗಳು – ಯು.ಎ.ಇ., ಮೊರಾಕೊ, ಬಹ್ರೇನ್ ಮತ್ತು ಸುಡಾನ್ – ಇಸ್ರೇಲ್ ನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಲು ನೆರವು ನೀಡುವ ಮೂಲಕ, ಇಸ್ರೇಲಿಗೆ ಮತ್ತೊಂದು ರಾಜತಾಂತ್ರಿಕ ಯಶಸ್ಸನ್ನು ಯುಎಸ್ ಸುಗಮಗೊಳಿಸಿತು.

1.42 ಟ್ರಂಪ್ ಏಕಪಕ್ಷೀಯವಾಗಿ ಪರಮಾಣು ಒಪ್ಪಂದದಿಂದ ಹಿಂದೆ ಸರಿದ ನಂತರ, ಯುಎಸ್ ಹೇರಿದ ನವೀಕೃತ ನಿರ್ಬಂಧಗಳನ್ನು ಇರಾನ್ ಎದುರಿಸುತ್ತಿದೆ. ಬಿಡೆನ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಪರಮಾಣು ಒಪ್ಪಂದದ ಪುನರುಜ್ಜೀವನದ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ, ಮೊದಲು ನಿರ್ಬಂಧಗಳನ್ನು ಹಿಂತೆಗೆದುಕೊಳ್ಳಲು ಯು.ಎಸ್. ಹಿಂಜರಿಯುತ್ತಿರುವುದರಿಂದ, ಇಲ್ಲಿಯವರೆಗೆ ಯಾವುದೇ ಪ್ರಗತಿಯಾಗಿಲ್ಲ. ಹೊಸ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಆಡಳಿತದಲ್ಲಿ ಇರಾನ್ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಚೀನಾದೊಂದಿಗೆ ವ್ಯೂಹಾತ್ಮಕ ಮತ್ತು ಆರ್ಥಿಕ ಸಂಬಂಧಗಳ 25 ವರ್ಷಗಳ ದೂರಗಾಮಿ ಒಪ್ಪಂದಕ್ಕೆ ಇರಾನ್ ಸಹಿ ಮಾಡಿದೆ.

1.43 ಕಳೆದ ಎರಡು ದಶಕಗಳಲ್ಲಿ ಪಶ್ಚಿಮ ಏಷ್ಯಾವು, ಸಾಮ್ರಾಜ್ಯಶಾಹಿ ಆಕ್ರಮಣಶೀಲತೆ ಮತ್ತು ಯು.ಎಸ್. ನಿಂದ ದೇಶಗಳ ಸ್ವಾಧೀನ ಪಡಿಸಿಕೊಳ್ಳುವಿಕೆಗಳ  ಅತ್ಯಂತ ಕೆಟ್ಟದಾದ ರೂಪಗಳನ್ನು ಕಂಡ ಪ್ರದೇಶವಾಗಿದೆ. ಮೊದಲು ಇರಾಕ್, ನಂತರ ಲಿಬಿಯಾ ಮತ್ತು ಸಿರಿಯಾ ಇವುಗಳಿಗೆ ಸಾಕ್ಷಿಯಾದವು. ಯು.ಎಸ್. ಪಡೆಗಳು ವಾಪಸ್ಸಾದ ನಂತರ, ಇರಾಕ್ ಇನ್ನೂ ಪಂಥೀಯ ಕಲಹಗಳು ಹಾಗೂ ಅಲ್‌ಖೈದಾ ಮತ್ತು ISIS ವಿರುದ್ಧ ಸುದೀರ್ಘ ಹೋರಾಟಗಳ ನಡುವೆ ಸ್ಥಿರಗೊಳ್ಳಲು ಹೆಣಗಾಡುತ್ತಿದೆ. ಹಲವು ವರ್ಷಗಳ ಅಂತರ್ಯುದ್ಧದ ನಂತರ ಲಿಬಿಯಾ ಶಾಂತಿಯನ್ನು ಸ್ಥಾಪಿಸಲು ಮತ್ತು ಏಕೀಕೃತ ಪ್ರಭುತ್ವವನ್ನು ರಚಿಸಲು, ಅನಿಶ್ಚಿತ ಪ್ರಯತ್ನದಲ್ಲಿ ತೊಡಗಿದೆ. ಆದರೆ, ಪ್ರತಿಸ್ಪರ್ಧಿ ಶಸ್ತ್ರಾಸ್ತ್ರ ಸುಸಜ್ಜಿತವಾದ ಬಣಗಳು ಹಿಡಿತ ಸಾಧಿಸುತ್ತಿವೆ. ಸಿರಿಯಾದಲ್ಲಿ, ಅಲ್ಲಿನ ಸರಕಾರ ಬದಲಾವಣೆ ಮಾಡುವಲ್ಲಿ ಯು.ಎಸ್. ನ ವೈಫಲ್ಯದ ಮತ್ತು ಏಳು ವರ್ಷಗಳ ವಿನಾಶಕಾರಿ ಅಂತರ್ಯುದ್ಧಗಳ ನಂತರ, ಅಸ್ಸಾದ್ ಸರ್ಕಾರವು ಒಂದು ಪ್ರಾಂತ್ಯ ಬಿಟ್ಟರೆ ಇಡೀ ದೇಶದಲ್ಲಿ ತನ್ನ ಹಿಡಿತವನ್ನು ಕ್ರೋಢೀಕರಿಸಿದೆ. ಟರ್ಕಿಯ ಗಡಿಯಲ್ಲಿರುವ ಪ್ರಾಂತ ಇನ್ನೂ ಉಗ್ರಗಾಮಿ ಬಂಡುಕೋರರ ನಿಯಂತ್ರಣದಲ್ಲಿ ಇದೆ.

1.44 ಈ ಎಲ್ಲಾ ಮೂರು ದೇಶಗಳು ಮತ್ತು ಇತರ ಪ್ರದೇಶಗಳು ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿವೆ. ಲೆಬನಾನ್ ಆರ್ಥಿಕ ಕುಸಿತದತ್ತ ಸಾಗಿದೆ.

ಆಫ್ರಿಕಾ

 1.45 ಆಫ್ರಿಕಾದ ಹಲವು ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಶಸ್ತ್ರ ಇಸ್ಲಾಮಿಸ್ಟ್ ಗುಂಪುಗಳ ವಿರುದ್ದ ಹೋರಾಡುವ, ಮತ್ತು ಆಫ್ರಿಕನ್ ಖಂಡದಲ್ಲಿ ಚೀನಿಯರ ವ್ಯಾಪಕ ಪ್ರಭಾವವನ್ನು ಎದುರಿಸುವ ಹೆಸರಿನಲ್ಲಿ, ‘ಆಫ್ರಿಕಾಮ್’ (ಯು.ಎಸ್. ಸೇನೆಯ ಆಫ್ರಿಕನ್ ಕಮಾಂಡ್ ಅಥವಾ ವಿಭಾಗ) ಮೂಲಕ ತನ್ನ ಮಿಲಿಟರಿ ಹೆಜ್ಜೆಗುರುತನ್ನು ಯು.ಎಸ್. ಹೆಚ್ಚಿಸಿಕೊಂಡಿದೆ. ಆಫ್ರಿಕಾದ 15 ದೇಶಗಳ 29 ಸ್ಥಳಗಳಲ್ಲಿ ಯು.ಎಸ್.ನ ವಿಶೇಷ ಸೇನಾ ನೆಲೆಗಳಿವೆ. ಪಶ್ಚಿಮದಲ್ಲಿ ಸಹೇಲಿಯನ್ ಪ್ರದೇಶದ ಮತ್ತು ಪೂರ್ವದಲ್ಲಿ ಹಾರ್ನ್ ಆಫ್ ಆಫ್ರಿಕಾದ ಹೆಚ್ಚಾಗಿ ಕೇಂದ್ರೀಕೃತವಾಗಿದೆ. ಇದು ಈಗಾಗಲೇ ಪಶ್ಚಿಮ ಆಫ್ರಿಕಾದ ವಿವಿಧ ದೇಶಗಳಲ್ಲಿ ನೆಲೆಗೊಂಡಿರುವ ಫ್ರೆಂಚ್ ಪಡೆಗಳನ್ನು ಹೊರತುಪಡಿಸಿ ಇರುವ ಮಿಲಿಟರಿ ನೆಲೆಗಳು.

ಸಮಾಜವಾದಿ ದೇಶಗಳು – ಯು.ಎಸ್. ಸಾಮ್ರಾಜ್ಯಶಾಹಿಯ ಪ್ರತಿಕೂಲ ಚಲನೆಗಳು

1.46 ಮಹಾಸೋಂಕಿನ ಬಿಕ್ಕಟ್ಟನ್ನು ಅವಕಾಶವಾಗಿ ಬಳಸಿಕೊಂಡು, ಆರು ದಶಕಗಳ ಹಿಂದಿನ ಆರ್ಥಿಕ ದಿಗ್ಬಂಧನವನ್ನು  ಬಿಗಿಗೊಳಿಸಿ, ಸಮಾಜವಾದಿ ಕ್ಯೂಬಾವನ್ನು ಅಸ್ಥಿರಗೊಳಿಸಲು ಯು.ಎಸ್. ಸಾಮ್ರಾಜ್ಯಶಾಹಿ ಪ್ರಯತ್ನಿಸುತ್ತಿದೆ.   ಕ್ಯೂಬಾದೊಂದಿಗೆ ಆರ್ಥಿಕ ಸಂಬಂಧಗಳನ್ನು ಹೊಂದುವ, ವಿಶ್ವದ ಯಾವುದೇ ದೇಶಗಳ ಮೇಲೆ ಆರ್ಥಿಕ ನಿರ್ಬಂದಗಳನ್ನು ಹೇರುವುದಾಗಿ ಬೆದರಿಕೆ ಹಾಕುತ್ತಾ, ಕ್ಯೂಬಾದ ಕೆಲವು ವಿಭಾಗಗಳ ಜನರನ್ನು ಕಮ್ಯುನಿಸ್ಟ್ ಪಕ್ಷ ಮತ್ತು ಸಮಾಜವಾದದ ವಿರುದ್ಧ ಬಂಡಾಯವೇಳಲು ಯು.ಎಸ್.  ಪ್ರಚೋದಿಸಿದೆ. ದಿಗ್ಬಂದನದ ಹೇರಿಕೆಯಿಂದ ಕ್ಯೂಬಾ ಎದುರಿಸಿದ ಆರ್ಥಿಕ ಸಂಕಷ್ಟವನ್ನು ಬಳಸಿಕೊಳ್ಳಲು ಪ್ರತಿ-ಕ್ರಾಂತಿಕಾರಿ ಶಕ್ತಿಗಳ ಮೂಲಕ ಪ್ರಯತ್ನಿಸಲಾಯಿತು. ಆದಾಗ್ಯೂ, ಆ ಪ್ರಯತ್ನಗಳು ವಿಫಲವಾಗಿವೆ. ಕ್ಯೂಬಾ ಮತ್ತು ಉತ್ತರ ಕೊರಿಯಾ (ಡಿ.ಪಿ.ಆರ್.ಕೆ.) ಗಳನ್ನು ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವ ದೇಶಗಳೆಂದು ಮತ್ತೊಮ್ಮೆ ವರ್ಗೀಕರಿಸಲಾಗಿದೆ. ಪರಮಾಣು-ಅಸ್ತ್ರ ಸಜ್ಜಿತ ವಲಯವಾದ ಕೊರಿಯನ್ ಪರ್ಯಾಯ ದ್ವೀಪದಲ್ಲಿ ಯು.ಎಸ್. ಪ್ರಚೋದನಕಾರಿ ಮಿಲಿಟರಿ ವ್ಯಾಯಾಮಗಳನ್ನು ನಡೆಸುತ್ತಿದೆ. ತನ್ನ ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕಲು ಯುಎಸ್ ನಿರಾಕರಿಸಿದ್ದರಿಂದ ಯುಎಸ್-ಉತ್ತರ ಕೊರಿಯಾ (ಡಿ.ಪಿ.ಆರ್.ಕೆ.) ಮಾತುಕತೆ ವಿಫಲವಾಗಿದೆ.

ದಕ್ಷಿಣ ಏಷ್ಯಾದ ದೇಶಗಳು

1.47 ಈ ಪ್ರದೇಶದ ಪ್ರಮುಖವಾದ ಜಾಗತಿಕ ಬೆಳವಣಿಗೆ ಎಂದರೆ, ಅವಮಾನಕರ ರೀತಿಯಲ್ಲಿ ಯುಎಸ್  ಅಫ್ಘಾನಿಸ್ತಾನದಿಂದ ತನ್ನ ಸೇನಾ ಪಡೆಗಳ ವಾಪಸಾತಿ. ಇದು 20 ವರ್ಷಗಳ ಸುದೀರ್ಘ ಯುದ್ಧವನ್ನು ಕೊನೆಗೊಳಿಸಿತು. ಇದರಿಂದ ಯು.ಎಸ್. ಸಾಮ್ರಾಜ್ಯಶಾಹಿಗೆ ಹಿನ್ನಡೆಯಾಗಿದೆ. ಯು.ಎಸ್.-ನ್ಯಾಟೋ ಪಡೆಗಳ ವಾಪಸಾತಿಯಿಂದಾಗಿ ಅಶ್ರಫ್ ಘನಿ ಸರ್ಕಾರ ಪತನವಾಯಿತು ಮತ್ತು ಆಗಸ್ಟ್ 2021ರಲ್ಲಿ ತಾಲಿಬಾನ್ ದೇಶದ ನಿಯಂತ್ರಣ ಪಡೆಯಲು ಕಾರಣವಾಯಿತು. ತಾಲಿಬಾನ್ ಸರ್ಕಾರದ ರಚನೆ, ಅದರ ಹಿಂದಿನ ಆಡಳಿತದ ಕರಾಳ ಅನುಭವದಿಂದಾಗಿ ಗಂಭೀರ ಆತಂಕಕ್ಕೆ ಕಾರಣವಾಗಿದೆ. ರಷ್ಯಾ, ಚೀನಾ, ಇರಾನ್ ಮತ್ತು ಮಧ್ಯ ಏಷ್ಯಾ, ಅಫ್ಘಾನಿಸ್ತಾನದೊಂದಿಗೆ ಗಡಿಯನ್ನು ಹೊಂದಿರುವ ದೇಶಗಳಾಗಿವೆ. ತಾಲಿಬಾನ್ ಜೊತೆಗಿನ ಇವರ ಪರಸ್ಪರ ಪ್ರತಿಕ್ರಿಯೆಗಳ ಮಟ್ಟಗಳು ವಿಭಿನ್ನವಾಗಿವೆ. ಪಾಕಿಸ್ತಾನವು, ತಾಲಿಬಾನ್ ನ ಸ್ಥಿರ ಬೆಂಬಲಿಗ ದೇಶ. ತಾಲಿಬಾನ್ ಆಡಳಿತದ ಅಂತರ‍್ರಾಷ್ಟ್ರೀಯ ಸಂಬಂಧಗಳನ್ನು ಸುಗಮಗೊಳಿಸಲು ಪಾಕಿಸ್ತಾನವು ಇದೀಗ ಪ್ರಮುಖ ಪಾತ್ರ ವಹಿಸುತ್ತದೆ. ಅಫ್ಘಾನಿಸ್ತಾನದಲ್ಲಿನ ಈ ಬೆಳವಣಿಗೆಗಳ ಕುರಿತಂತೆ ಭಾರತ ಒಂಟಿಯಾಗಿಸಲ್ಪಟ್ಟಿದೆ. ಈಗ ಮಾನವೀಯ ನೆರವು ಒದಗಿಸುವ ಮೂಲಕ ಆ ದೇಶದೊಂದಿಗೆ ಮರು-ಸಂಪರ್ಕದ ಮಾರ್ಗಗಳನ್ನು ಹುಡುಕುತ್ತಿದೆ.

1.48 ದಕ್ಷಿಣ ಏಷ್ಯಾದಲ್ಲಿನ ಬೆಳವಣಿಗೆಗಳಲ್ಲಿ ಭಾರತದ ಪ್ರತ್ಯೇಕತೆ ಮತ್ತೊಂದು ಅಭಿವ್ಯಕ್ತಿಯನ್ನು ಕಂಡುಕೊಂಡಿತು. 8 ಸಾರ್ಕ್ ಸದಸ್ಯರಲ್ಲಿ 5 ಸದಸ್ಯ ದೇಶಗಳು – ಅಫ್ಘಾನಿಸ್ತಾನ, ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ – ಚೀನಾ ಆರಂಭಿಸಿದ ದಕ್ಷಿಣ ಏಷ್ಯಾ ಫೋರಂ ಗೆ ಸೇರಿದವು. 2014 ರಿಂದ ಸಾರ್ಕ್ ನ ಯಾವುದೇ ಶೃಂಗಸಭೆಗಳು ನಡೆದಿಲ್ಲ. 2016 ರಲ್ಲಿ ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತ ನಿರಾಕರಿಸಿತು. ಭಾರತವು ಸಾರ್ಕ್ ಅನ್ನು ಪುನರುಜ್ಜೀವನಗೊಳಿಸಲು ಉತ್ಸುಕವಾಗಿಲ್ಲ ಎಂಬ ಅನಿಸಿಕೆ ಬಲವಾಗಿದೆ. ಬದಲಾಗಿ, ಬಂಗಾಳ ಕೊಲ್ಲಿ ತೀರವನ್ನು ಹಂಚಿಕೊಳ್ಳುವ ಭಾರತದ 7 ನೆರೆಯ ದೇಶಗಳನ್ನು ಒಳಗೊಂಡ, ‘ಬಹು ವಲಯಗಳ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಬಂಗಾಳ ಕೊಲ್ಲಿ ಉಪಕ್ರಮ’ (BIMSTEC)ದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದೆ.

ಭಾರತದ ನೆರೆಹೊರೆಯ ದೇಶಗಳು

1.49 22ನೇ ಮಹಾಧಿವೇಶನದ ನಂತರದ ಅವಧಿಯ ಗಮನಾರ್ಹ ಗುಣಲಕ್ಷಣಗಳೆಂದರೆ, ದಕ್ಷಿಣ ಏಷಿಯಾದ ದೇಶಗಳಲ್ಲಿ ಸರ್ವಾಧಿಕಾರದ ಉದಯವಾಗಿ, ಕೋಮುವಾದ ಮತ್ತು ಮೂಲಭೂತವಾದ ಮತ್ತಷ್ಟು ಬೆಳವಣಿಗೆಯಾಗಿದೆ. ನೆರೆಹೊರೆಯ ಹೆಚ್ಚಿನ ದೇಶಗಳಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರು ಬಹುಸಂಖ್ಯಾತಾವಾದಿ ಶಕ್ತಿಗಳ ದಾಳಿಗೆ ಒಳಗಾಗಿದ್ದಾರೆ.

1.50 ಬಾಂಗ್ಲಾದೇಶ: ಇತ್ತೀಚಿನ ವರ್ಷಗಳಲ್ಲಿ, ಬಾಂಗ್ಲಾದೇಶದ ಆರ್ಥಿಕ ಸಾಧನೆ ಮತ್ತು ಜಿಡಿಪಿ ಬೆಳವಣಿಗೆಯ ದರವು, ದಕ್ಷಿಣ ಏಷ್ಯಾದ ಇತರ ಎಲ್ಲಾ ದೇಶಗಳಿಗಿಂತ ಹೆಚ್ಚಾಗಿದೆ. ಇದರ ಮಾನವ ಅಭಿವೃದ್ಧಿ ಸೂಚಕಗಳು ಗಣನೀಯವಾದ ಪ್ರಮಾಣದಲ್ಲಿ ಸುಧಾರಿಸಿದೆ ಮತ್ತು ಇದು ಭಾರತಕ್ಕಿಂತ ಮುಂದಿದೆ. ಇತ್ತೀಚಿನ ದುರ್ಗಾ ಪೂಜೆ ಆಚರಣೆಯ ವೇಳೆ ಹಿಂದೂ ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳು, ಮೂಲಭೂತವಾದಿ ಶಕ್ತಿಗಳು ಹೇಗೆ ತೊಡಕುಗಳನ್ನು ಸೃಷ್ಟಿಸುವುದನ್ನು  ಮುಂದುವರೆಸಿದ್ದಾರೆ ಎಂಬುದರ ಸೂಚನೆಯಾಗಿದೆ.

1.51 ಪಾಕಿಸ್ತಾನ: ಇಮ್ರಾನ್ ಖಾನ್ ಸರ್ಕಾರ ಗಂಭೀರ ಆರ್ಥಿಕ ಪರಿಸ್ಥಿತಿಯಿಂದಾಗಿ ಬಾರಿ ದೊಡ್ಡ ಪ್ರಮಾಣದ ಜನತೆಯ  ಅಸಮಾಧಾನವನ್ನು ಎದುರಿಸುತ್ತಿದೆ. ಮಹಾಸೋಂಕು ಬಿಕ್ಕಟ್ಟನ್ನು ಮತ್ತಷ್ಟು ಆಳಗೊಳಿಸಿದೆ. ಆಹಾರ ಬೆಲೆಗಳ (2021ರ ಮೊದಲ ಒಂಬತ್ತು ತಿಂಗಳಲ್ಲಿ ಸರಾಸರಿ 18 ಶೇಕಡಾ) ಹೆಚ್ಚಳ ಮತ್ತು ನಿರುದ್ಯೋಗವು ಜನರ ನಿರಾಶೆಯ ಮೂಲವಾಗಿದೆ.  ಪ್ರಧಾನ ಮಂತ್ರಿ ಮತ್ತು ಸೇನಾ ಮುಖ್ಯಸ್ಥರ ನಡುವಿನ ನಿಕಟ ಸಂಪರ್ಕದಲ್ಲಿ ಸಹ ತೊಡಕು ಮೂಡಿದೆ. ಪಾಕಿಸ್ತಾನಿ ತಾಲಿಬಾನ್ ಗಡಿನಾಡಿನ ಬುಡಕಟ್ಟು ಪ್ರದೇಶಗಳಲ್ಲಿ ಪ್ರಾರಂಭಿಸಿದ ಭಯೋತ್ಪಾದಕರ ದಾಳಿಯಿಂದ ದೇಶವು ತತ್ತರಿಸಿದೆ. ಉಗ್ರಗಾಮಿ ಇಸ್ಲಾಮಿಸ್ಟ್ ತೆಹ್ರೀಕ್-ಎ-ಲಬ್ಬೈಕ್ ಉಗ್ರವಾದ ಪ್ರತಿಭಟನೆಗಳಿಂದ ಸರ್ಕಾರವು ತನ್ನ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುತ್ತಿದೆ. ಈ ಉಗ್ರಗಾಮಿ ಸಂಘಟನೆಗಳ ಚಟುವಟಿಕೆಗಳು ಭಾರತದ ವಿರುದ್ಧವೇ ನಡೆಯುತ್ತಿವೆ. ಪಾಕಿಸ್ತಾನವೇ ಮೂಲಭೂತವಾದ ಮತ್ತು ಭಯೋತ್ಪಾದನೆಗಳ ವಿಷವರ್ತುಲದಿಂದ ನರಳುತ್ತಿದ್ದರೂ, ಅಲ್ಲಿಯ ಅಧಿಕಾರಿಗಳು ಮಾತ್ರ, ಭಾರತದ ವಿರುದ್ದ ದಾಳಿ ನಡೆಸುತ್ತಿರುವ ಆ ಉಗ್ರರಿಗೆ ಆಶ್ರಯ ನೀಡುವುದನ್ನು ಮುಂದುವರೆಸಿದ್ದಾರೆ. ಅಲ್ಲಿನ ಮಿತಿಮೀರಿದ ಸೈನ್ಯದ ಪಾತ್ರವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮಿತಿಗೊಳಿಸುವುದನ್ನು ಮತ್ತು ನಿರಂಕುಶ ಪ್ರಭುತ್ವವನ್ನು ಬೆಳೆಸುವುದಕ್ಕೆ ಕುಮ್ಮಕ್ಕು ನೀಡುತ್ತಿದೆ.

1.52 ಶ್ರೀಲಂಕಾ: ನವೆಂಬರ್ 2020ರ ಸಂಸತ್ತಿನ ಚುನಾವಣೆಯಲ್ಲಿ ಮಹಿಂದಾ ರಾಜಪಕ್ಸೆ ಅವರ ನೇತೃತ್ವದ ಶ್ರೀಲಂಕಾ ಪೀಪಲ್ಸ್ ಫ್ರೀಡಂ ಮೈತ್ರಿಯ ಭರ್ಜರಿ ಗೆಲುವು, ರಾಜಪಕ್ಸೆ ಕುಟುಂಬದ ಹಿಡಿತವನ್ನು ಕ್ರೋಢೀಕರಿಸಿದೆ. ರಾಜಪಕ್ಸೆ ಕುಟುಂಬದ ಎಲ್ಲಾ ನಾಲ್ವರು ಸಹೋದರರು ಸರ್ಕಾರದಲ್ಲಿ ಅಧಿಕಾರವನ್ನು ಹೊಂದಿದ್ದಾರೆ. ಅಧ್ಯಕ್ಷ ರಾಜಪಕ್ಸೆ ಅಡಿಯಲ್ಲಿ, ಸರ್ಕಾರದಲ್ಲಿ ಮಿಲಿಟರಿ ಸಿಬ್ಬಂದಿಗಳಿರುವ ಸರ್ವಾಧಿಕಾರಿ ಆಡಳಿತವನ್ನು ಸ್ಥಾಪಿಸಲಾಗಿದೆ. ಸಿಂಹಳೀಯ ಬೌದ್ಧ ರಾಷ್ಟ್ರೀಯತೆಯ ಮೇಲೆ ಅವಲಂಬಿಸಿದ್ದು, ಆಡಳಿತ ತಮಿಳು ಮತ್ತು ಮುಸ್ಲಿಂ ಅಲ್ಪಸಂಖ್ಯಾತರ ಇಬ್ಬರಿಗೂ ಪ್ರತಿಕೂಲವಾಗಿದೆ. ರಾಜಪಕ್ಸೆ ಆಡಳಿತದ ಆರ್ಥಿಕ ನೀತಿಗಳು, ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಕೃಷಿ ಉತ್ಪಾದನೆ ಕುಸಿಯುತ್ತಿದೆ ಮತ್ತು ಗಂಭೀರ ವಿದೇಶಿ ವಿನಿಮಯ ಬಿಕ್ಕಟ್ಟು ತಲೆದೋರಿದೆ. ಆಹಾರದ ಕೊರತೆ ಮತ್ತು ಹಣದುಬ್ಬರವು  ಜನರ ಜೀವನಾಧರದ ಮೇಲೆ ಕೆಟ್ಟ ಪರಿಣಾಮ ಬೀರಿದೆ.

 1.53 ಅಂತರ್ಯುದ್ಧದ ಸಮಯದಲ್ಲಿ ಯುದ್ಧ ಅಪರಾಧಗಳ ಬಗ್ಗೆ ಸ್ವತಂತ್ರ ತನಿಖೆ ಮುಂದುವರಿಸಲು ಸರ್ಕಾರ ನಿರಾಕರಿಸಿದೆ. ಉತ್ತರ ಮತ್ತು ಪೂರ್ವ ಪ್ರಾಂತ್ಯಗಳಿಗೆ ಅಧಿಕಾರ ವಿಕೇಂದ್ರೀಕರಣಗೊಳಿಸುವ, ಯಾವುದೇ ಕ್ರಮಗಳನ್ನು ಜಾರಿಗೊಳಿಸುವ ಲಕ್ಷಣಗಳು ಕಾಣುತ್ತಿಲ್ಲ.  ಭಾರತ ಸರ್ಕಾರವು, ಶ್ರೀಲಂಕಾ ಸಂವಿಧಾನದ 13ಎ  ಕಲಮಿನ ಅಕ್ಷರಶಃ ಮತ್ತು ಸಾರಸತ್ವವನ್ನು ಜಾರಿಗೊಳಿಸಲು ತನ್ನ ಪ್ರಯತ್ನವನ್ನು ಮುಂದುವರಿಸಬೇಕು.

1.54 ನೇಪಾಳ: ಕಮ್ಯುನಿಸ್ಟ್ ಪಕ್ಷ (ಏಕೀಕೃತ ಮಾರ್ಕ್ಸ್‌ವಾದಿ-ಲೆನಿನ್‌ವಾದಿ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ (ಮಾವೋವಾದಿ ಕೇಂದ್ರ) – ಈ ಎರಡು ಪಕ್ಷಗಳು ವಿಲೀನಗೊಂಡು, ನೇಪಾಳ ಕಮ್ಯುನಿಸ್ಟ್ ಪಕ್ಷ(ಎನ್.ಸಿ.ಪಿ.)ವನ್ನು ರಚಿಸಿಕೊಂಡವು.  2019ರಲ್ಲಿ ನಡೆದ ಸಂಸತ್ ಚುನಾವಣೆಗಳಲ್ಲಿ ಎನ್.ಸಿ.ಪಿ. ಭರ್ಜರಿ ಗೆಲುವು ಸಾಧಿಸಿ, ಸರ್ಕಾರವನ್ನು ರಚಿಸಿತು. ಆದರೆ, ಶೀಘ್ರದಲ್ಲೇ ಪಕ್ಷದೊಳಗಿನ ಬಣಗಳ ತಿಕ್ಕಾಟಗಳಿಂದಾಗಿ ಸರ್ಕಾರದ ಮೇಲೆ ಪರಿಣಾಮ ಬೀರಿತು.  ಎನ್.ಸಿ.ಪಿ.ಯ ಒಂದು ವಿಭಾಗದ ಸಂಸದರು ಬೆಂಬಲ ಹಿಂಪಡೆದ ಪರಿಣಾಮವಾಗಿ, ಪ್ರಧಾನಿ ಕೆ.ಪಿ.ಓಲಿ ನೇತೃತ್ವದ ಬಣ ಅಲ್ಪಮತಕ್ಕೆ ಕುಸಿಯಿತು. ಪ್ರಧಾನಿ ಸಂಸತ್ತನ್ನು ವಿಸರ್ಜನೆ ಮಾಡಿದ್ದು, ಅಸಂವಿಧಾನಿಕವೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರಿಂದ ಪ್ರಧಾನಿ ರಾಜೀನಾಮೆ ನೀಡಬೇಕಾಯಿತು. ಇದರ ಪರಿಣಾಮದಿಂದ, ನೇಪಾಳಿ ನೇತೃತ್ವದ ಕಾಂಗ್ರೆಸ್ ಪಕ್ಷದ ನಾಯಕ ಶೇರ್ ಬಹದ್ದೂರ್ ದೇವುಬಾ ರವರು ಸಿಪಿಎನ್-ಯು.ಎಮ್.ಎಲ್ ಗೆ ಸೇರಿದ ಮತ್ತೊಂದು ಬಣದ ಬೆಂಬಲ ಪಡೆದು ಸರ್ಕಾರ ರಚಿಸಿದರು.

1.55 ಎನ್.ಸಿ.ಪಿ.ಯಲ್ಲಿನ ಒಡಕು ಮತ್ತು ಓಲಿ ಸರ್ಕಾರದ ಪತನ, ನೇಪಾಳದಲ್ಲಿ ಎಡ ಚಳುವಳಿಗೆ ಹಿನ್ನಡೆಯಾಗಿದೆ.  ಇದರಿಂದಾಗಿ, ಬಲಪಂಥೀಯ ಶಕ್ತಿಗಳು ಮಧ್ಯಪ್ರವೇಶಿಸಲು ದಾರಿ ತೆರೆದಂತಾಗಿದೆ. ಧರ್ಮ ಮತ್ತು ರಾಜಕೀಯವನ್ನು ಬೆರೆಸುವ ಹೆಚ್ಚುತ್ತಿರುವ ಪ್ರವೃತ್ತಿಯು ನೇಪಾಳದಲ್ಲಿ ಪ್ರಜಾಸತ್ತಾತ್ಮಕವಾಗಿ ಅಂಗೀಕರಿಸಲ್ಪಟ್ಟ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಜಾತ್ಯತೀತತೆಯ ತತ್ವಗಳಿಗೆ ಕೆಟ್ಟದ್ದನ್ನು ಉಂಟು ಮಾಡಲಿದೆ.

 1.56 ಮ್ಯಾನ್ಮಾರ್: 2021ರ ಫೆಬ್ರವರಿಯಲ್ಲಿ ನಡೆದ ಕ್ರೂರ ಮಿಲಿಟರಿ ದಂಗೆ, ಜನರಿಂದ ಚುನಾಯಿತ ಸರ್ಕಾರವನ್ನು ಉರುಳಿಸಿತು. ಇದರಿಂದಾಗಿ ದೇಶಾದ್ಯಂತ ಹತ್ತಾರು ಸಾವಿರಾರು ಜನರ ಸಾಮೂಹಿಕ ಪ್ರತಿಭಟನೆಗೆ ಕಾರಣವಾಯಿತು. ನೂರಾರು ಶಾಂತಿಯುತ ಪ್ರತಿಭಟನಾಕಾರರನ್ನು ಸೇನೆ ಆಡಳಿತವು ಕೊಲ್ಲುವ ಕ್ರೂರ ದಮನವನ್ನು ನಡೆಸಿತು. ಇನ್ನೂ ನೂರಾರು ಮಂದಿ ಜೈಲು ಪಾಲಾದರು. ಆಂಗ್ ಸಾನ್ ಸೂಕ್ಯೀ ಯವರನ್ನು, ಒಂದು ನೆಪವೊಡ್ಡಿ, ಭವಿಷ್ಯದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಅವರನ್ನು ಅನರ್ಹಗೊಳಿಸುವ ಸ್ಪಷ್ಟ ತಂತ್ರದಿಂದ ಎರಡು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಪಡಿಸಲಾಗಿದೆ.

 1.57 ಮಿಲಿಟರಿಯ ಉನ್ನತ ಶ್ರೇಣಿಯು ವ್ಯಾಪಾರ ಹಿತಾಸಕ್ತಿಗಳ ಪ್ರಬಲ ಪ್ರಾಯೋಜಕತ್ವದ ಜಾಲ ಮತ್ತು ಈ ಪಟ್ಟಭದ್ರ ಹಿತಾಸಕ್ತಿಗಳನ್ನು ರಕ್ಷಿಸಲು, ನಿರ್ಮಿಸಲಾಗಿದೆ. ಇದು ರಾಜ್ಯದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಚಲಾಯಿಸಲು ಬಯಸುತ್ತದೆ. ಧಾರ್ಮಿಕ ಮತ್ತು ಜನಾಂಗೀಯ ಗುಂಪುಗಳು ಬಹುಸಂಖ್ಯಾತ ಬೌದ್ಧ ಜನಸಂಖ್ಯೆಯ ಹಿತಾಸಕ್ತಿಗಳನ್ನು ಉತ್ತೇಜಿಸುತ್ತವೆ. ರೋಹಿಂಗ್ಯಾಗಳ ಹತ್ಯಾಕಾಂಡವು, ಭಾರತ ಸೇರಿದಂತೆ ನೆರೆಯ ದೇಶಗಳಿಗೆ ಭಾರೀ ಸಂಕಷ್ಟಕಾರಿ ವಲಸೆಗೆ ಕಾರಣವಾಯಿತು.

1.58 ತೀವ್ರ ದಮನವನ್ನು ಎದುರಿಸುತ್ತಿರುವ ಕೆಲವು ಯುವ ಪ್ರತಿಭಟನಾಕಾರರು ದೇಶದ ಉತ್ತರ ಭಾಗದಲ್ಲಿ ದಂಗೆಕೋರ ಬುಡಕಟ್ಟು ಗುಂಪುಗಳೊಂದಿಗೆ ಸೇರಿಕೊಂಡಿದ್ದಾರೆ ಮತ್ತು ಸಶಸ್ತ್ರ ತರಬೇತಿ ಪಡೆಯುತ್ತಿದ್ದಾರೆ ಕೂಡಾ. ASEAN ಮತ್ತು ವಿಶ್ವಸಂಸ್ಥೆಯ ಇಲ್ಲಿಯವರೆಗಿನ ಪ್ರಯತ್ನಕ್ಕೆ ಮಿಲಿಟರಿ ಆಡಳಿತದಿಂದಲೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಇಲ್ಲ. ಮುಖ್ಯವಾಗಿ, ಪ್ರಜಾಪ್ರಭುತ್ವದ ಮರುಸ್ಥಾಪನೆ ಮತ್ತು ಮಿಲಿಟರಿ ಆಡಳಿತದ ಅಂತ್ಯಕ್ಕಾಗಿ, ಹೋರಾಡುತ್ತಿರುವ ಮ್ಯಾನ್ಮಾರ್ ಜನರೊಂದಿಗೆ ಒಗ್ಗಟಿನ  ಸೌಹಾರ್ದತೆ ವ್ಯಕ್ತಪಡಿಸುವುದು ಇದೀಗ ಪ್ರಮುಖವಾಗಿದೆ.

ಹವಾಮಾನ ವೈಪರೀತ್ಯದ ಗಂಡಾಂತರಗಳು

1.59 22ನೇ ಮಹಾಧಿವೇಶನದ ನಂತರದ ಅವಧಿಯ ಗುಣಲಕ್ಷಣಗಳಲ್ಲಿ ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ವೈಪರೀತ್ಯಗಳೂ ಇವೆ. ಹವಾಮಾನ ವೈಪರೀತ್ಯ ಎಂಬುದು ಒಂದು ‘ವರ್ಗ ಪ್ರಶ್ನೆ’ ಯಾಗಿದೆ. ಏಕೆಂದರೆ, ಬಂಡವಾಳಶಾಹಿಯಿಂದ ನೈಸರ್ಗಿಕ ಸಂಪನ್ಮೂಲಗಳ ಅನಿಯಂತ್ರಿತ ಲೂಟಿಯು, ಪ್ರಸ್ತುತ ದುರ್ಭರ ಪರಿಸ್ಥಿತಿಗೆ ಕಾರಣವಾಗಿದೆ. ಹವಾಮಾನ ಬದಲಾವಣೆಗೆ ಅಂತರ ಸರಕಾರಗಳ ಪ್ಯಾನೆಲ್(ಐಪಿಸಿಸಿ)ನ, ಇತ್ತೀಚಿನ (6ನೇ) ಮೌಲ್ಯಮಾಪನ ವರದಿ 2021ರಲ್ಲಿ, ಹವಾಮಾನ ಬಿಕ್ಕಟ್ಟಿಗೆ ಕಾರಣವಾಗುವ ಹಸಿರುಮನೆ ಅನಿಲ(ಜಿ.ಎಚ್.ಜಿ) ಸಾಂದ್ರತೆಗಳು “ಮಾನವ ಚಟುವಟಿಕೆಗಳಿಂದ ನಿಸ್ಸಂದಿಗ್ಧವಾಗಿ ಉಂಟಾಗಿವೆ” ಎಂದು ತನ್ನ ವರದಿಯಲ್ಲಿ ಮೊದಲ ಬಾರಿಗೆ ವ್ಯಕ್ತಪಡಿಸಿದೆ. ಜಾಗತಿಕ ಸರಾಸರಿ ತಾಪಮಾನವು ಈಗಾಗಲೇ ಕೈಗಾರಿಕಾ ಯುಗಕ್ಕಿಂತ ಸುಮಾರು 1.1 ಡಿಗ್ರಿ ಸೆಲ್ಸಿಯಸ್(ಸಿ) ಹೆಚ್ಚಾಗಿದ್ದು, ಗ್ಲಾಸ್ಗೋದಲ್ಲಿ COP26 ನಲ್ಲಿ ನಿಗದಿಪಡಿಸಲಾದ 1.5ಸಿ ನ ಜಾಗತಿಕ ಗುರಿಯನ್ನು ಪೂರೈಸಲು ಬಹಳ ಕಡಿಮೆ ಅಂತರದ ಅಂಚಿನಲ್ಲಿ ಉಳಿದಿದೆ. ಹೀಗಾಗಿ, ಜಗತ್ತು ಭಯಾನಕ ಹೆಚ್ಚಿನ ತಾಪಮಾನ ಏರಿಕೆಯತ್ತ ಸಾಗುತ್ತಿದೆ ಎಂದು ವರದಿ ಹೇಳಿದೆ.

1.60 ಪ್ರಸ್ತುತ ಹಂತದ ಜಾಗತಿಕ ತಾಪಮಾನದ ಮಟ್ಟದಲ್ಲೂ. ಭಾರೀ ಹವಾಮಾನದ ಪರಿಣಾಮಗಳ ಪ್ರಮಾಣ ಮತ್ತು ಭೀಕರತೆಗಳು, ಪ್ರಪಂಚದಾದ್ಯಂತ ಈ ವರ್ಷದಲ್ಲಿ ಕಂಡುಬಂದಿದೆ. ವಿಶೇಷವಾಗಿ ಉತ್ತರ ಗೋಳಾರ್ಧದಲ್ಲಿ ಇದು ಕಂಡು ಬಂದಿದೆ. ಇವು 1.5ಸಿ ಅಥವಾ 2ಸಿ ತಾಪಮಾನದ ಏರಿಕೆಯ ಭವಿಷ್ಯದ ಭಯಾನಕತೆಯನ್ನು ತಿಳಿಸುತ್ತದೆ. ಸಾಮಾನ್ಯವಾಗಿ ಹವಾಮಾನದ ಪರಿಣಾಮಗಳು ಹೆಚ್ಚಾಗಿ ಅಭಿವೃದ್ಧಿಶೀಲ ರಾಷ್ಟ್ರಗಳ ಉಷ್ಣವಲಯದ ಪ್ರದೇಶಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ ಎಂದುಕೊಂಡಿದ್ದ ಯುರೋಪ್ ಮತ್ತು ಉತ್ತರ ಅಮೇರಿಕಾದ ನಾಗರಿಕರಿಗೆ, ಅವರ ದೇಶಗಳಲ್ಲಿ 2021ರ ಬೇಸಿಗೆಯಲ್ಲಿ ಕಂಡ ವಿಪರೀತ ಹವಾಮಾನದ ಘಟನೆಗಳು ಕಟುವಾದ ಆಘಾತವಾಗಿದ್ದವು. ಭಾರತವು ವಾರ್ಷಿಕ ವಿಪರೀತ ಮಳೆ, ಭೂಕುಸಿತಗಳು, ಮಣ್ಣು ಕುಸಿತಗಳು, ಪ್ರವಾಹಗಳು ಮತ್ತು ನಗರ ಪ್ರವಾಹಗಳಿಗೆ ಸಾಕ್ಷಿಯಾಯಿತು.

1.61 ಆದರೆ, ಹವಾಮಾನ ಬಿಕ್ಕಟ್ಟಿನ ಗಂಭೀರತೆಯ ಈ ತೀವ್ರ ಎಚ್ಚರಿಕೆಗಳು, ಗ್ಲಾಸ್ಗೊದಲ್ಲಿ ನಡೆದ COP26 ಸಮ್ಮೇಳನದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ತರಲಿಲ್ಲ. 2030ರ ಹೊತ್ತಿಗೆ ಶೇ. 50ರಷ್ಟು ಕಡಿತವಾಗಬೇಕಿದ್ದ ಜಾಗತಿಕ ಸೂಸುವಿಕೆ ಶೇ. 16ರಷ್ಟು ಹೆಚ್ಚಿದೆ ಎಂದು ಅಂದಾಜು ಮಾಡಲಾಗಿದೆ. ಇದರತ್ತ ಗಮನ ಹರಿಸುವ ಬದಲು, ಎಲ್ಲ ದೇಶಗಳು “ಒಟ್ಟು ಶೂನ್ಯ ಸೂಸುವಿಕೆ”ಯನ್ನು 2050ರೊಳಗೆ ಸಾಧಿಸುವುದಕ್ಕೆ ಬದ್ಧತೆ ತೋರಿಸಬೇಕೆಂಬ ಗುರಿಯ ಬದಲಾವಣೆಗಳನ್ನು ತರಲು ಯು.ಎಸ್. ತೀವ್ರ ಒತ್ತಡಗಳನ್ನು ಹಾಕಿತು. “ಒಟ್ಟು ಶೂನ್ಯ ಸೂಸುವಿಕೆ” ಎಂದರೆ ಒಂದು ದೇಶದ ಒಟ್ಟು ಸೂಸುವಿಕೆಗಳು ಅದನ್ನು ಹೀರಿಕೊಳ್ಳಬಲ್ಲ ಕಾಡು ಮತ್ತು ಸಾಗರ ಮುಂತಾದ “ಕಂತು”ಗಳಿಗೆ ಸಮನಾಗುವುದು. ನಿರ್ಣಾಯಕ 2030ರ ಗುರಿಗಳಿಂದ, ಈ ದೀರ್ಘಕಾಲೀನ ಅನಿಶ್ಚಿತ ಗುರಿಗಳತ್ತ ಯು.ಎಸ್. ಒತ್ತು, ಹವಾಮಾನ ಬಿಕ್ಕಟ್ಟಿಗೆ, ಸಮಾನ ಆದರೆ (ಕೈಗಾರಿಕಾ ಕ್ರಾಂತಿ ನಡದ ಪಾಶ್ಚಿಮಾತ್ಯ ಮತ್ತು ಅಭಿವೃದ್ಧಿಶಿಲ ದೇಶಗಳ ನಡುವೆ) ವಿಭಿನ್ನ ಜವಾಬ್ದಾರಿಯ (Common But Differentiated Responsibility – CBDR) ನೀತಿಯನ್ನು ಇನ್ನೊಂದು ಬಾರಿ ಬುಡಮೇಲು ಮಾಡಿದೆ.

1.62 COP26 ಸಮ್ಮೇಳನದ ನಿರಾಶಾದಾಯಕ ಫಲಿತಾಂಶಗಳನ್ನು ಯು.ಎಸ್. ಮತ್ತು ಅದರ ಮಿತ್ರದೇಶಗಳು ಇತರ ವಿಧಾನಗಳಿಂದಲೂ ಖಾತ್ರಿಪಡಿಸಿದವು. ಹವಾಮಾನ ಬದಲಾವಣೆಯ ಪರಿಣಾಮಗಳಿಂದ ಬಾಧಿತವಾಗಬಹುದಾದ ಅಭಿವೃದ್ಧಿಶೀಲ ದೇಶಗಳಿಗೆ ಅಭಿವೃದ್ಧ ದೇಶಗಳು 12 ವರ್ಷಗಳ ಹಿಂದೆ ಭರವಸೆ ನೀಡಿರುವ ಮತ್ತು ಭಾರಿ ಪ್ರಚಾರ ಪಡೆದಿರುವ ವಾರ್ಷಿಕ 100 ಶತಕೋಟಿ ಡಾಲರುಗಳ ಹಣಕಾಸು ನೆರವನ್ನು, ಬೇಕಾಬಿಟ್ಟಿಯಾಗಿ ಇನ್ನೂ ಮೂರು ವರ್ಷಗಳ ಮಟ್ಟಿಗೆ ಮುಂದಕ್ಕೆ ಹಾಕಲಾಯಿತು. ಯು.ಎಸ್. ಮತ್ತು ಇತರ ಅಭಿವೃದ್ಧ ದೇಶಗಳು ಹವಾಮಾನ ಹಣಕಾಸು ಹೂಡಿಕೆಯನ್ನು ಖಾಸಗಿ ಕ್ಷೇತ್ರಕ್ಕೆ ವರ್ಗಾಯಿಸಲು ಪ್ರಯತ್ನಿಸುತ್ತಿವೆ. ಕಲ್ಲಿದ್ದಲ ಬಳಕೆಯನ್ನು ಹಂತಹಂತವಾಗಿ ಕೊನೆಗಾಣಿಸುವ ಕುರಿತು ಸಮ್ಮೇಳನದಲ್ಲಿ ಭಾರೀ ಗದ್ದಲ ಎಬ್ಬಿಸಲಾಯಿತು. ಆದರೆ ಪ್ರೆಟ್ರೋಲಿಯಂ ಕುರಿತು “ಅದಕ್ಷ ಸಬ್ಸಿಡಿ”ಗಳನ್ನು ನಿಲ್ಲಿಸುವ ಮೆದು ಮಾತು ಬಿಟ್ಟರೆ ಹೇಳಿಕೆ ಮೌನವಾಗಿತ್ತು. ಸೂಸುವಿಕೆಯ ಕಡಿತದ ಜವಾಬ್ದಾರಿಯನ್ನು ಅಭಿವೃದ್ಧಿಶೀಲ ದೇಶಗಳಿಗೆ ದಾಟಿಸಿ, ಯು.ಎಸ್. ನಾಯಕತ್ವದಲ್ಲಿ ಅಭಿವೃದ್ಧ ಬಂಡವಾಳಶಾಹಿ ದೇಶಗಳು, ತಮ್ಮ ಆರ್ಥಿಕಗಳನ್ನು ಕಾರ್ಬನ್-ರಹಿತವಾಗಿ ಪರಿವರ್ತನೆಗೆ ಹೆಚ್ಚಿನ ಸಮಯ ಪಡೆದುಕೊಳ್ಳಲು ಹವಣಿಸುತ್ತಿರುವುದು ಸ್ಪಷ್ಟವಿದೆ.

1.63 ಜಾಗತಿಕ ತಾಪಮಾನ ಏರಿಕೆ ಪ್ರತಿನಿಧಿಸುವ ಉತ್ಪಾದಕ ಶಕ್ತಿಗಳ ಬಿಕ್ಕಟ್ಟು, “ಜಾಗತಿಕ ದಕ್ಷಿಣ”ದ (ಅಂದರೆ ಬಡದೇಶಗಳ) ಶತಕೋಟ್ಯಾಂತರ ಜನತೆಯ ಏಳಿಗೆಗೆ ಅಪಾಯಕಾರಿಯಾಗದಂತೆ ಪರಿಹರಿಸಬೇಕಾದರೆ, ಅದನ್ನು ಸಮಾನತೆಯ ಆಧಾರದ ಮೇಲೆ ಮಾತ್ರ ಮಾಡಲು ಸಾಧ್ಯ. COP26 ಸಮ್ಮೇಳನವು ಜಾಗತಿಕ ಸಮಾನತೆಗೆ ಈ ದೀರ್ಘ ಹೋರಾಟವು ತೀವ್ರಗೊಳ್ಳುತ್ತಿರುವ ಸೂಚನೆಯನ್ನು ನೀಡಿದೆ.

1.64 ಜಾಗತಿಕ ರಾಜಕಾರಣದ ಬಲಪಂಥದತ್ತ ವಾಲುವಿಕೆ ಹಾಗೂ ಬುಡಕಟ್ಟು-ಆಧಾರಿತ ರಾಷ್ಟ್ರೀಯತೆ ಮತ್ತು ಪ್ರತಿಗಾಮಿ ಸಿದ್ಧಾಂತಗಳ ಬೆಳವಣಿಗೆಯು, ಜಗತ್ತಿನ ಕಮ್ಯುನಿಸ್ಟ್, ಎಡ ಮತ್ತು ಪ್ರಗತಿಪರ ಶಕ್ತಿಗಳ ಹೆಚ್ಚುತ್ತಿರುವ ಸಹಕಾರವನ್ನು ಅವಶ್ಯವಾಗಿಸುತ್ತದೆ, ಕಮ್ಯುನಿಸ್ಟ್ ಮತ್ತು ಕಾರ್ಮಿಕರ ಪಕ್ಷಗಳ ನಿಯಮಿತ ಸಭೆಗಳು, ಪ್ರಮುಖ ಸಮಾಜೋ-ಆರ್ಥಿಕ ಸವಾಲುಗಳನ್ನು ಎದುರಿಸುವುದರ ಕುರಿತು ಅನುಭವಗಳ ವಿನಿಮಯ ಮತ್ತು ಸಮಾನ ತಿಳಿವಳಿಕೆ ಬೆಳೆಸಲು ಅವಕಾಶ ಮಾಡಿಕೊಟ್ಟಿವೆ. ಆಳಗೊಳ್ಳುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ಕೋವಿಡ್‌ ಮಹಾಸೋಂಕಿನ ಪರಿಸ್ಥಿತಿಯನ್ನು ಬಳಸಿ ದುಡಿಯುವ ಶಕ್ತಿಗಳ ಮೇಲೆ ದಾಳಿ ಮಾಡಲು ಬಳಸುತ್ತಿರುವ ರೀತಿಗಳ ಈ ಸನ್ನಿವೇಶದಲ್ಲಿ, ಈ ಜಂಟಿ ಕೆಲಸದ ಮತ್ತು ಸಹಕಾರದ ಪ್ರಯತ್ನಗಳನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವಿದೆ.

ಸಾಮ್ರಾಜ್ಯಶಾಹಿ-ವಿರೋಧಿ ಸೌಹಾರ್ದತೆ ಬಲಪಡಿಸಿ

1.65 ಯು.ಎಸ್. ಸಾಮ್ರಾಜ್ಯಶಾಹಿ ಮತ್ತು ಅದರ ಎಲ್ಲಾ ಅವತಾರಗಳಿಗೆ ಬಿಜೆಪಿ ಸರಕಾರದ ದೈನ್ಯ ಶರಣಾಗತಿಯ ವಿರುದ್ಧ ಅಣಿನೆರೆಸಲು, ಜನತೆಯ ನಡುವೆ ಶಕ್ತಿಶಾಲಿ ಪ್ರಚಾರಾಂದೋಲನವನ್ನು ಸಿಪಿಐ(ಎಂ) ನಡೆಸಲಿದೆ.

1.66 ಯು.ಎಸ್. ಸಾಮ್ರಾಜ್ಯಶಾಹಿಯು ಜಾಗತಿಕವಾಗಿ ಮತ್ತು ದಕ್ಷಿಣ ಏಶ್ಯಾದಲ್ಲಿ ತನ್ನ ವ್ಯೂಹಾತ್ಮಕ ಹಿತಾಸಕ್ತಿಗಳನ್ನು ಆಕ್ರಾಮಕವಾಗಿ ಬೆನ್ನಟ್ಟುವುದರ ವಿರುದ್ಧ ಹೋರಾಟಗಳನ್ನು ಬಲಪಡಿಸಲಿದೆ.

1.67 ಇಸ್ರೇಲಿನ ಆಕ್ರಾಮಕತೆ ಮತ್ತು ಪ್ಯಾಲೆಸ್ಟೇನಿ ಜಮೀನುಗಳನ್ನು ಕಾನೂನುಬಾಹಿರವಾಗಿ ವಶಪಡಿಸಿಕೊಳ್ಳುವುದರ ವಿರುದ್ಧ ಪ್ಯಾಲೆಸ್ಟೇನಿ ಜನತೆಯ ಹೋರಾಟಕ್ಕೆ ಪೂರ್ಣ ಸೌಹಾರ್ದ ಬೆಂಬಲವನ್ನು ಸಿಪಿಐ(ಎಂ) ಪುನರುಚ್ಚರಿಸುತ್ತದೆ. ಪೂರ್ವ ಜೆರುಸಲೆಂ ರಾಜಧಾನಿಯಾಗಿರುವ ಪ್ಯಾಲೆಸ್ಟೇನಿ ತಾಯಿನಾಡಿನ ಹಕ್ಕನ್ನು ಎತ್ತಿ ಹಿಡಿದಿರುವ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಹಲವು ನಿರ್ಣಯಗಳು ಜಾರಿಯಾಗಬೇಕು.

1.68 ಪ್ರಸ್ತುತ ಬಿಜೆಪಿ ಸರಕಾರ ಪ್ರೋತ್ಸಾಹಿಸುತ್ತಿರುವ ಬೆಳೆಯುತ್ತಿರುವ ಯು.ಎಸ್.-ಇಸ್ರೇಲ್-ಭಾರತ ಅಕ್ಷವನ್ನು ಸಿಪಿಐ(ಎಂ) ಬಲವಾಗಿ ವಿರೋಧಿಸುತ್ತದೆ.

1.69 ಎಲ್ಲ ಸಮಾಜವಾದಿ – ಚೀನಾ, ವಿಯೆಟ್ನಾಂ, ಉತ್ತರ ಕೊರಿಯಾ (ಡಿ.ಪಿ.ಆರ್.ಕೆ), ಕ್ಯೂಬಾ ಮತ್ತು ಲಾವೋಸ್ – ದೇಶಗಳೊಂದಿಗೆ ಸಿಪಿಐ(ಎಂ) ಸೌಹಾರ್ದತೆ ವ್ಯಕ್ತಪಡಿಸುತ್ತದೆ.

1.70 ಲ್ಯಾಟಿನ್ ಅಮೆರಿಕದ ಸಾಮ್ರಾಜ್ಯಶಾಹಿ-ವಿರೋಧಿ, ವಿಶೇಷವಾಗಿ ವೆನೆಜುವೇಲಾದ ಯು.ಎಸ್. ಸಾಮ್ರಾಜ್ಯಶಾಹಿಯ ವಿರುದ್ಧದ, ಹೋರಾಟಗಳಿಗೆ ಸಿಪಿಐ(ಎಂ) ಸೌಹಾರ್ದ ಬೆಂಬಲ ವ್ಯಕ್ತಪಡಿಸುತ್ತದೆ.

1.71 ಪ್ರಭುತ್ವ ಮತ್ತು ಗುಂಪುಗಳಿಂದ ಪ್ರಾಯೋಜಿತವಾದ ಎಲ್ಲ ರೂಪಗಳ ರೀತಿಯ ಭಯೋತ್ಪಾದನೆಗಳನ್ನು ಸಿಪಿಐ(ಎಂ) ವಿರೋಧಿಸುತ್ತದೆ.

1.72 ನವ-ಫ್ಯಾಸಿಸ್ಟ್ ಶಕ್ತಿಗಳು, ಮೂಲಭೂತವಾದ, ಮತಾಂಧತೆ, ಬುಡಕಟ್ಟು ಪಂಥವಾದ ಮತ್ತು ಪ್ರತಿಗಾಮಿ ಶಕ್ತಿಗಳ ವಿರುದ್ಧ ಹೋರಾಡುತ್ತಿರುವ ಎಲ್ಲ ಶಕ್ತಿಗಳ ಜತೆ ಸಿಪಿಐ(ಎಂ) ಸೌಹಾರ್ದತೆ ವ್ಯಕ್ತಪಡಿಸುತ್ತದೆ.

1.73 ಜಗತ್ತಿನಾದ್ಯಂತ ಎಡ ಕ್ರಾಂತಿಕಾರಿ ಚಳುವಳಿಗಳೊಂದಿಗೆ ಸಿಪಿಐ(ಎಂ) ತನ್ನ ಸಂಬಂಧಗಳನ್ನು ಕ್ರೊಢೀಕರಿಸಲಿದೆ.

1.74 ಎಲ್ಲ ಅವತಾರಗಳಲ್ಲಿರುವ ಸಾಮ್ರಾಜ್ಯಶಾಹಿ, ನವ-ಉದಾರವಾದ, ಜಾಗತಿಕ ಪರಿಸರದ ಅವನತಿಗಳ ವಿರುದ್ಧ ಮತ್ತು ಸಾರ್ವತ್ರಿಕ ಹವಾಮಾನ ನ್ಯಾಯದ ಪರವಾಗಿ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಹೋರಾಟಗಳಿಗೆ ಸಿಪಿಐ(ಎಂ) ಸೌಹಾರ್ದತೆ ವ್ಯಕ್ತಪಡಿಸುತ್ತದೆ.

1.75 ಜಗತ್ತಿನಾದ್ಯಂತ ಎಲ್ಲವನ್ನು-ಎಲ್ಲರನ್ನು ಒಳಗೊಳ್ಳುವ ಸಾಮ್ರಾಜ್ಯಶಾಹಿ-ವಿರೋಧಿ ಚಳುವಳಿಯನ್ನು ಕಟ್ಟಲು, ಜನತಾ ಹೋರಾಟದ ವಿವಿಧ ತೊರೆಗಳನ್ನು ಒಟ್ಟಿಗೆ ತರುವ ಪ್ರಯತ್ನಗಳಲ್ಲಿ ಸಿಪಿಐ(ಎಂ) ಕೈಜೋಡಿಸುತ್ತದೆ.

ರಾಷ್ಟ್ರೀಯ ಸನ್ನಿವೇಶ

2.1 ಪಕ್ಷದ 22ನೇ ಮಹಾಧಿವೇಶನದ ರಾಜಕೀಯ ನಿರ್ಣಯವು ಆಗ ಇದ್ದ ರಾಷ್ಟ್ರೀಯ ರಾಜಕೀಯ ಪರಿಸ್ಥಿತಿಯನ್ನು ಹೀಗೆ ಅಂದಾಜು ಮಾಡಿತ್ತು:

“ಮೋದಿ ಸರ್ಕಾರದ ಸರಿ ಸುಮಾರು ನಾಲ್ಕು ವರ್ಷಗಳು ಒಂದು ಬಲಪಂಥೀಯ ನಿರಂಕುಶಾಧಿಕಾರಿ-ಕೋಮುವಾದಿ ಆಡಳಿತಕ್ಕೆ ಎಡೆಮಾಡಿಕೊಟ್ಟಿದೆ. ಆ ಆಡಳಿತವು ನವ ಉದಾರವಾದಿ ನೀತಿಗಳನ್ನು ತೀವ್ರವಾಗಿ ಜಾರಿ ಮಾಡಿದ್ದರ ಫಲವಾಗಿ ದುಡಿಯುವ ಜನರ ಮೇಲೆ ಎಲ್ಲಾ ರೀತಿಯ ದಾಳಿಗಳಾಗುತ್ತಿವೆ; ಅಲ್ಪಸಂಖ್ಯಾತರು ಮತ್ತು ದಲಿತರ ಮೇಲಿನ ದಾಳಿಗಳೊಂದಿಗೆ ಪ್ರಭುತ್ವದ ಜಾತ್ಯತೀತ ಪ್ರಜಾಸತ್ತಾತ್ಮಕ ಚೌಕಟ್ಟನ್ನು ಅಪಾಯಕ್ಕೊಡ್ಡುವ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್.ಎಸ್.ಎಸ್.) ಹಿಂದುತ್ವ ಕಾರ್ಯಸೂಚಿಯನ್ನು ವ್ಯವಸ್ಥಿತವಾಗಿ ಅನುಷ್ಠಾನ ಮಾಡುತ್ತಿದೆ; ಅಮೆರಿಕದೊಂದಿಗೆ ವ್ಯೂಹಾತ್ಮಕ ಮೈತ್ರಿಕೂಟವನ್ನು ಬಲಪಡಿಸಿಕೊಂಡಿದೆ ಮತ್ತು ಅದರ ಅಧೀನ ಮಿತ್ರನ ಪಾತ್ರ ನಿರ್ವಹಿಸುತ್ತಿದೆ; ಮತ್ತು ಸಂಸದೀಯ ಪ್ರಜಾಪ್ರಭುತ್ವವನ್ನು ನಿಗ್ರಹಿಸುವ ಮೂಲಕ, ಸಾಂವಿಧಾನಿಕ ಸಂಸ್ಥೆಗಳನ್ನು ಹಾಗೂ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಬುಡಮೇಲು ಮಾಡುವುದರ ಮೂಲಕ ನಿರಂಕುಶಶಾಹೀ ರಚನೆಯನ್ನು ನಿರ್ಮಾಣ ಮಾಡಿದೆ.”(2.1)

2.2 ಆಗಿನಿಂದ, ಈ ಮೇಲಿನ ಬಲಪಂಥೀಯ ಆಕ್ರಮಣಗಳು ಹೆಚ್ಚಾಗುತ್ತಲೇ ಇವೆ. ಆದರೂ, ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಹಾಗೂ ಹೆಚ್ಚಿನ ಪ್ರಮಾಣದ ಮತಗಳನ್ನು ಪಡೆಯುವುದರೊಂದಿಗೆ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ನಂತರ ಫ್ಯಾಸಿಸ್ಟ್ ತೆರನ ಆರ್.ಎಸ್.ಎಸ್.ನ ಹಿಂದುತ್ವ ಕಾರ್ಯಸೂಚಿಯನ್ನು ಆಕ್ರಮಣಕಾರಿಯಾಗಿ ಮುಂದುವರಿಸಲಾಗುತ್ತಿದೆ. ಇದರಿಂದ ಅನಾವರಣಗೊಳ್ಳುತ್ತಿರುವುದು, ನಿರ್ದಿಷ್ಟವಾಗಿ 2019ರ ನಂತರದ ಅವಧಿಯಲ್ಲಿನ ವಿದ್ಯಮಾನಗಳು, ನಮ್ಮ ಪಕ್ಷದ ಕಾರ್ಯಕ್ರಮದಲ್ಲಿ ನಮೂದಿಸಿರುವ ರೀತಿಯಲ್ಲಿಯೆ ನಡೆದಿವೆ:

“ಭಾರತೀಯ ಜನತಾ ಪಕ್ಷವು ಇತರ ಧರ್ಮಗಳ ಬಗೆಗಿನ ದ್ವೇಷ, ಅಸಹನೆ ಮತ್ತು ಅತಿರಾಷ್ಟ್ರೀಯವಾದಿ ಅಂಧತ್ವದ ಮೇಲೆ ಆಧರಿಸಿದ, ಪ್ರತಿಗಾಮಿ ಹೂರಣದ ವಿಭಜಕ ಹಾಗೂ ಕೋಮುವಾದಿ ವೇದಿಕೆಯನ್ನು ಹೊಂದಿರುವ ಪ್ರತಿಗಾಮಿ ಪಕ್ಷವಾಗಿದೆ. ಫ್ಯಾಸಿಸ್ಟ್ ಸ್ವರೂಪದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಬಿಜೆಪಿಗೆ ಮಾರ್ಗದರ್ಶನ ಮಾಡುತ್ತಾ ಅದರ ಮೇಲೆ ಪ್ರಾಬಲ್ಯ ಹೊಂದಿರುವುದರಿಂದ ಅದು ಸಾಧಾರಣ ಬಂಡವಾಳಶಾಹಿ ಪಕ್ಷವಲ್ಲ. ಬಿಜೆಪಿ ಅಧಿಕಾರದಲ್ಲಿರುವಾಗ ಆರೆಸ್ಸೆಸ್‌ಗೆ ಪ್ರಭುತ್ವಾಧಿಕಾರದ ಸಾಧನಗಳೊಂದಿಗೆ ಮತ್ತು ಪ್ರಭುತ್ವದ ಯಂತ್ರದೊಂದಿಗೆ ಸಂಪರ್ಕಾವಕಾಶ ದೊರೆಯುತ್ತದೆ. ಹಿಂದುತ್ವ ಸಿದ್ಧಾಂತವು ಹುಸೀಗತ ಪುನರುತ್ಥಾನವಾದವನ್ನು ಪ್ರೋತ್ಸಾಹಿಸುತ್ತದೆ ಮತ್ತು ಒಂದು ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಉದ್ದೇಶದಿಂದ ಭಾರತದ ಸಮ್ಮಿಶ್ರ ಸಂಸ್ಕೃತಿಯನ್ನು ತಿರಸ್ಕರಿಸುತ್ತದೆ.”(7.14).

ಕೋಮುವಾದಿ ಮತ್ತು ಫ್ಯಾಸಿಸ್ಟ್ ತೆರನ ಆರ್.ಎಸ್.ಎಸ್. ನೇತೃತ್ವದ ಕೂಟದ ಬೆಳವಣಿಗೆಯೊಂದಿಗೆ ಮತ್ತು ಕೇಂದ್ರದಲ್ಲಿ ಅದು ಅಧಿಕಾರ ವಹಿಸುವುದರೊಂದಿಗೆ ಜಾತ್ಯತೀತತೆಯ ತಳಪಾಯಕ್ಕೆ ಆಪತ್ತು ಬಂದಿದೆ. ಪ್ರಭುತ್ವದ ಸಂಸ್ಥೆಗಳು, ಆಡಳಿತ, ಶಿಕ್ಷಣ ವ್ಯವಸ್ಥೆ ಮತ್ತು ಮಾಧ್ಯಮವನ್ನು ಕೋಮುಗ್ರಸ್ತಗೊಳಿಸಲು ವ್ಯವಸ್ಥಿತ ಪ್ರಯತ್ನಗಳು ಸಾಗಿವೆ. ಬಹುಸಂಖ್ಯಾತ ಕೋಮುವಾದದ ಬೆಳವಣಿಗೆಯು ಅಲ್ಪಸಂಖ್ಯಾತ ಕೋಮುವಾದದ ಶಕ್ತಿಗಳನ್ನು ಬಲಪಡಿಸುತ್ತದೆ ಮತ್ತು ರಾಷ್ಟ್ರೀಯ ಐಕ್ಯತೆಗೆ ಅಪಾಯವನ್ನೊಡ್ಡುತ್ತದೆ. ಬಿಜೆಪಿ ಮತ್ತು ಅದರ ಕೋಮುವಾದಿ ವೇದಿಕೆಗೆ ದೊಡ್ಡ ಬಂಡವಾಳಶಾಹಿಗಳ ಕೆಲವು ವಿಭಾಗಗಳ ಬೆಂಬಲವು ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯ ಮೇಲೆ ಗಂಭೀರ ಪರಿಣಾಮವನ್ನುಂಟುಮಾಡುವ ಅಪಾಯವಿದೆ”. (5.7).

ದೇಶದ ಆರ್ಥಿಕ, ರಾಜಕೀಯ ಮತ್ತು ಆಡಳಿತಾತ್ಮಕ ಜೀವನದಲ್ಲಿ ಧರ್ಮದ ಅತಿಕ್ರಮಣದ ಎಲ್ಲಾ ವಿಧಾನಗಳ ವಿರುದ್ಧ ಪಕ್ಷವು ಹೋರಾಡಬೇಕು ಮತ್ತು ಸಂಸ್ಕೃತಿ, ಶಿಕ್ಷಣ ಮತ್ತು ಸಮಾಜದಲ್ಲಿ ಜಾತ್ಯತೀತ ಹಾಗೂ ಪ್ರಜಾಪ್ರಭುತ್ವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಧಾರ್ಮಿಕ ಕೋಮುವಾದವನ್ನು ಆಧರಿಸಿ ಫ್ಯಾಸಿಸ್ಟ್ ಪ್ರವೃತ್ತಿಗಳು ಬಲಗೊಳ್ಳುವ ಅಪಾಯದ ವಿರುದ್ಧ ಎಲ್ಲಾ ಹಂತಗಳಲ್ಲಿ ದೃಢ ಹೋರಾಟ ನಡೆಸಬೇಕು (5.8)

2.3 ಕೋಮುವಾದಿ ರಾಷ್ಟ್ರೀಯವಾದಿ ಅಬ್ಬರದ ಸುತ್ತ ಒಂದು ಕಥನವನ್ನು ಬರೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಜನರ ಬದುಕಿನ ಸಮಸ್ಯೆಗಳಿಂದ ಹಾಗೂ ಅದಕ್ಕಾಗಿನ ಜನಸಾಮಾನ್ಯರ ಹೋರಾಟಗಳಿಂದ ಚುನಾವಣೆಯ ಕಥನವನ್ನು ಪುಲ್ವಾಮಾ ಭಯೋತ್ಪಾದಕರ ದಾಳಿ ಮತ್ತು ತದನಂತರದ ಬಾಲ್‌ಕೋಟ್ ವೈಮಾನಿಕ ದಾಳಿಯನ್ನು ಬಳಸಿಕೊಂಡು ಬೇರೆಡೆ ತಿರುಗಿಸುವಲ್ಲಿ ಅದು ಯಶಸ್ವಿಯಾಗಿದೆ.

2.4 ಸಾಮಾಜಿಕ-ಜನಾಂಗೀಯ ವಿಭಜನೆಯನ್ನು ಗಮನಾರ್ಹ ಮಟ್ಟದವರೆಗೆ ಮೀರಿ, ಜತೆಗೆ ಅತಿ ಕೆಳಗಣ ಮಟ್ಟದಲ್ಲಿ ಜಾತಿಯಾಧಾರದ ಅಣಿನೆರಿಕೆಗಳ ಮೂಲಕ ಒಂದು ವ್ಯಾಪಕವಾದ ‘ಹಿಂದೂ ಅಸ್ಮಿತೆ’ಯನ್ನು ಸೃಷ್ಟಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಆರ್.ಎಸ್.ಎಸ್. – ಬಿಜೆಪಿಯ ಬೃಹತ್ ಪ್ರಮಾಣದ ಹಣ ಬಲ ಹಾಗೂ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮದ ಮೇಲಿನ ನಿಯಂತ್ರಣವು ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಿದೆ. ಚುನಾವಣಾ ಬಾಂಡುಗಳನ್ನೂ ಒಳಗೊಂಡಂತೆ ಹಲವಾರು ರೀತಿಯಲ್ಲಿ ಬಿಜೆಪಿಯು ಕ್ರೋಢೀಕರಿಸಿದ ಹಣಬಲವು ಮುಕ್ತ ಹಾಗೂ ನಿಷ್ಪಕ್ಷಪಾತ ಚುನಾವಣೆಗೆ ಅತ್ಯಗತ್ಯವಾದ ಸಮಾನ ಅವಕಾಶದ ಕಣವನ್ನು ಕಸಿದುಕೊಂಡಿತು.

2.5 2019ರ ಚುನಾವಣಾ ಫಲಿತಾಂಶಗಳು ಭಾರತದಲ್ಲಿ ಬಲಪಂಥೀಯ ರಾಜಕೀಯ ಪಲ್ಲಟದ ಹಾಗೂ ಫ್ಯಾಸಿಸ್ಟ್ ತೆರನ ಪ್ರವೃತ್ತಿಗಳನ್ನು ಇನ್ನೂ ಹೆಚ್ಚು ಕ್ರೋಢೀಕರಿಸಿದವು.

2019ರ ನಂತರದ ಬಿಜೆಪಿ ಸರ್ಕಾರ

2.6 ಎರಡನೇ ಬಾರಿ ಅಧಿಕಾರವನ್ನು ವಹಿಸಿಕೊಂಡ ಕೂಡಲೇ, ಸರ್ಕಾರವು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಸರ್ಜಿಸಿತು, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ದೊರಕಿಸಿದ ಸಂವಿಧಾನದ 370 ಮತ್ತು 35ಎ ವಿಧಿಗಳನ್ನು ರದ್ದುಗೊಳಿಸಿತು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ನಿರ್ಮಿಸಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಲೋಕಸಭಾ ಚುನಾವಣೆಗಳನ್ನು ನಡೆಸಿರುವಾಗ, ರಾಷ್ಟ್ರಪತಿ ಆಳ್ವಿಕೆಯಲ್ಲಿದ್ದ ರಾಜ್ಯವು, ವಿಧಾನಸಭಾ ಚುನಾವಣೆಗಳನ್ನು ನಡೆಸಲಿಲ್ಲ. ಇದು ಸಂಸತ್ತಿನಲ್ಲಿ ಬಿಜೆಪಿಯ ಕಪಟೋಪಾಯಕ್ಕೆ ಅನುಕೂಲ ಒದಗಿಸಿತು. ಒಂದು ಚುನಾಯಿತ ವಿಧಾನಸಭೆಯ ಅನುಪಸ್ಥಿತಿಯಲ್ಲಿ ರಾಜ್ಯಪಾಲರ ಸಮ್ಮತಿಯನ್ನು ವಿಧಾನಸಭೆಯ ಸಮ್ಮತಿಯೆಂದು ಅದರ ಬದಲಿಗೆ ಪರಿಗಣಿಸಲಾಯಿತು.

2.7 ಇದನ್ನು ಅನುಸರಿಸಿ ಸರ್ಕಾರವು ಪೌರತ್ವ ತಿದ್ದುಪಡಿ ಕಾಯಿದೆ(ಸಿಎಎ)ಯನ್ನು ಅಂಗೀಕರಿಸಿತು ಮತ್ತು ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್(ಎನ್‌ಪಿಆರ್) ಹಾಗೂ ರಾಷ್ಟ್ರೀಯ ಪೌರರ ರಿಜಿಸ್ಟರ್(ಎನ್‌ಆರ್‌ಸಿ) ಗಳನ್ನು ಘೋಷಿಸಿತು, ಇದು ಸಂವಿಧಾನದ ನಿರ್ಲಜ್ಜ ಉಲ್ಲಂಘನೆಯಾಗಿದೆ, ಏಕೆಂದರೆ ಸಂವಿಧಾನವು ಧರ್ಮದೊಂದಿಗೆ ಪೌರತ್ವವನ್ನು ಜೋಡಿಸುವುದಿಲ್ಲ. ಉಳಿದ ಎಲ್ಲರಿಗೂ ಪೌರತ್ವವನ್ನು ತ್ವರಿತಗತಿಯಲ್ಲಿ ಮಂಜೂರು ಮಾಡುವಾಗಲೇ ಈ ಸಿಎಎ ಮುಸ್ಲಿಮರನ್ನು ಹೊರಗಿಡುತ್ತದೆ. ಈ ನಿರ್ಲಜ್ಜ ಸಂವಿಧಾನ-ವಿರೋಧಿ ಕ್ರಮವನ್ನು ಪ್ರಶ್ನಿಸಿದ ಪ್ರಕರಣವು ಈಗ ಸುಪ್ರೀಂಕೋರ್ಟಿನ ಮುಂದೆ ಮೂರು ವರ್ಷಗಳಿಂದ ಇದೆ.

2.8 ಭಾರತೀಯ ಗಣತಂತ್ರದ ಸ್ವರೂಪವನ್ನು ಬದಲಿಸಲು ವ್ಯವಸ್ಥಿತವಾದ ಪ್ರಯತ್ನ ಮಾಡಲಾಗುತ್ತಿದೆ. ಭಾರತೀಯ ಸಂವಿಧಾನದ ನಾಲ್ಕು ಮೂಲಭೂತ ಆಧಾರಸ್ತಂಭಗಳಾದ ಜಾತ್ಯತೀತ ಪ್ರಜಾಪ್ರಭುತ್ವ, ಒಕ್ಕೂಟವಾದ, ಸಾಮಾಜಿಕ ನ್ಯಾಯ ಹಾಗೂ ಆರ್ಥಿಕ ಸಾರ್ವಭೌಮತೆ ಇವು ದಾಳಿಗೊಳಗಾಗಿವೆ.

ಆರ್ಥಿಕ ಸಾರ್ವಭೌಮತೆಯನ್ನು ಶಿಥಿಲಗೊಳಿಸಲಾಗುತ್ತಿದೆ

2.9 2019ರಲ್ಲಿ ಸರ್ಕಾರ ರಚನೆಯಾದ ನಂತರ ನವ-ಉದಾರವಾದಿ ಆರ್ಥಿಕ ಸುಧಾರಣೆಗಳು ಉದ್ರೇಕದ ವೇಗ ಪಡೆದುಕೊಂಡಿವೆ. ಎಂದಿನ ರೀತಿಯ ಖಾಸಗೀಕರಣ ಹಾಗೂ ಕಾರ್ಪೊರೇಟ್‌ಗಳಿಗೆ ತೆರಿಗೆ ವಿನಾಯಿತಿ ನೀಡುವುದನ್ನೂ ಮೀರಿ ಬಹು ಆಯಾಮದಲ್ಲಿ ಭಾರತೀಯ ಆರ್ಥಿಕ ಸಾರ್ವಭೌಮತೆಯ ವಿನಾಶ ಸಂಭವಿಸುತ್ತಿದೆ. ಭಾರತದ ಸ್ವಾವಲಂಬನೆಯ ಬುನಾದಿಯು ಸಾರ್ವಜನಿಕ ರಂಗ ಹಾಗೂ ಬಹು ಮುಖ್ಯವಾಗಿ ರಕ್ಷಣಾ ಉತ್ಪಾದನಾ ರಂಗದ ನಿಟ್ಟಿನಲ್ಲಿ ನಾಶವಾಗುತ್ತಿದ್ದು, ಭಾರತದ ಆರ್ಥಿಕತೆಯು ಸಂಪೂರ್ಣವಾಗಿ ಪರಾವಲಂಬನೆಗೆ ಇಳಿಯುವ  ಅಪಾಯಕಾರೀ ದಿಕ್ಕಿನಲ್ಲಿ ಸಾಗುತ್ತಿದೆ.

2.10 ಈ ವಿನಾಶ ಮತ್ತು ನಮ್ಮ ರಾಷ್ಟ್ರೀಯ ಆಸ್ತಿಗಳ ಹಾಗೂ ಆರ್ಥಿಕತೆಯ ಲೂಟಿಯು ಕೋಟ್ಯಾಂತರ ಜನರ ದಿನನಿತ್ಯದ ಬದುಕಿನ ಮೇಲೆ ಭಾರೀ ದೊಡ್ಡ ವಿನಾಶಕಾರಿ ಪರಿಣಾಮವನ್ನು ಉಂಟುಮಾಡುತ್ತಿದೆ ಮತ್ತು ಅದೇ ಸಮಯದಲ್ಲಿ ಆರ್ಥಿಕತೆಯನ್ನು ನಿರಂತರ ನಿಧಾನಗತಿ ಹಾಗೂ ಬಿಕ್ಕಟ್ಟಿನತ್ತ ತಳ್ಳುತ್ತಿದೆ.

2.11 ಆರ್ಥಿಕ ಹಿಂಜರಿತ: ಕೋವಿಡ್ ಮಹಾಸೋಂಕಿಗೆ ಸಾಕಷ್ಟು ಮುಂಚೆಯೇ ನಿಧಾನಗತಿಗೆ ಒಳಗಾಗಿದ್ದ ಭಾರತದ ಆರ್ಥಿಕತೆಯು ಈಗ ಹಿಂಜರಿತದಲ್ಲಿ ಮುಳುಗಿದೆ. 2020-21ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ, ಆರ್ಥಿಕತೆಯು ಶೇಕಡಾ 16ರಷ್ಟು ಕುಗ್ಗಿಹೋಗಿದೆ. ಈ ವರ್ಷದ (2021-22) ಮೊದಲಾರ್ಧದಲ್ಲಿ, ಶೇಕಡಾ 14 ರಷ್ಟು ಧನಾತ್ಮಕ ಬೆಳವಣಿಗೆ ಸಾಧಿಸಿದೆ, ಎಂದರೆ ಆರ್ಥಿಕತೆಯು ಕೋವಿಡ್ ಮಹಾಸೋಂಕಿಗೆ ಮುಂಚೆ ಇದ್ದ ಸ್ಥಿತಿ ತಲುಪಿಲ್ಲ ಎಂದೇ ಅರ್ಥ. ನಿಜವಾದ ಅರ್ಥದಲ್ಲಿ, 2019-20ರ ಮಹಾಸೋಂಕಿನ ವರ್ಷದ ಮೊದಲಾರ್ಧದಲ್ಲಿ ಜಿಡಿಪಿ(ಒಟ್ಟು ಆಂತರಿಕ ಉತ್ಪಾದನೆ)ಯು ರೂ.71,28,238 ಕೋಟಿಯಷ್ಟಿತ್ತು, 2021-22 ಮೊದಲಾರ್ಧದಲ್ಲಿ ಅದು ರೂ. 68,11,471 ಕೋಟಿಗೆ ಇಳಿದಿದೆ. ಅಂದರೆ, ಎರಡು ವರ್ಷಗಳ ನಂತರ ಶೇಕಡಾ 4.4 ರಷ್ಟು ಕಡಿಮೆಯಾಗಿದೆ.

2.12 ಬೆಳವಣಿಗೆಯು ತೀರ ನಿಧಾನಗತಿಯಲ್ಲಿ ಸಾಗುತ್ತಿದ್ದು ಭಾರತವು ತನ್ನ ಆರ್ಥಿಕ ನೆಲೆಯನ್ನು ಕಳೆದುಕೊಳ್ಳುತ್ತಿದೆ; 2017-18ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 8.2ರಷ್ಟು ಇದ್ದ ಬೆಳವಣಿಗೆಯು ಒಂಭತ್ತು ತ್ರೈಮಾಸಿಕಗಳ ಅವಧಿಯಲ್ಲಿ ಅಂದರೆ 2019-20 ರ ನಾಲ್ಕನೇ ತ್ರೈಮಾಸಿಕದಲ್ಲಿ ಅದು ಶೇಕಡಾ 3.1 ಕ್ಕೆ ಇಳಿದಿದೆ.

2.13 ಕೋವಿಡ್ ಮಹಾಸೋಂಕಿನ ಪೂರ್ವದಲ್ಲಿ ಬೆಳವಣಿಗೆಯಲ್ಲಿನ ನಿಧಾನಗತಿಯು ಮಧ್ಯಮಾವಧಿ ಹಾಗೂ ಅಲ್ಪಾವಧಿ ಎಂಬ ಎರಡು ಅಂಶಗಳಿಂದ ಸಂಭವಿಸಿತ್ತು. ಮಧ್ಯಮಾವಧಿಯ ಅಂಶಗಳಲ್ಲಿ ಎರಡು ಎದ್ದು ಕಾಣುತ್ತಿವೆ. ಒಂದನೆಯದು ಬೆಳವಣಿಗೆಯ ಚಾಲನೆಗೆ ವಿತ್ತೀಯ ಸಾಧನವನ್ನು ಬಳಸಲು ಸರ್ಕಾರ ಮನಸ್ಸು ಮಾಡದಿರುವುದು. ಅದರ ನವ-ಉದಾರವಾದಿ ವಿತ್ತೀಯ ನೀತಿಯಲ್ಲಿರುವುದು ಖಾಸಗಿ ಹೂಡಿಕೆದಾರರರಿಗೆ ಪ್ರೋತ್ಸಾಹ ನೀಡುವ ತೆರಿಗೆ “ಸುಧಾರಣೆ”. ಅದರ ಫಲಿತಾಂಶವಾಗಿ, ತೆರಿಗೆ ಸಂಗ್ರಹದಲ್ಲಿ ಸ್ಥಗಿತತೆ ಅಥವಾ ತೆರಿಗೆ ಆದಾಯದ ಕುಸಿತವೂ ಉಂಟಾಗಿದೆ. ಆದಾಗ್ಯೂ, ಹಣಕಾಸು ಬಂಡವಾಳದ ತುಷ್ಟೀಕರಣಕ್ಕಾಗಿ ವಿತ್ತೀಯ ಕೊರತೆಗೆ ಲಗಾಮು ಹಾಕಲಾಯಿತು. ಇದರ ಪರಿಣಾವವೆಂದರೆ ಒಂದು ದುರ್ಬಲ ಉದ್ದೀಪನೆ ಅಥವಾ ಹೆಚ್ಚೂ ಕಡಿಮೆ ಉದ್ದೀಪನೆಯೇ ಇಲ್ಲದಂತಾಯಿತು.

2.14 ಇದರ ಪರಿಣಾಮವಾಗಿ ಉಂಟಾದ ವೆಚ್ಚದ ಕುಗ್ಗುವಿಕೆಯು ಜಿಡಿಪಿ ನಿಧಾನಗತಿಯನ್ನು ಉಲ್ಬಣಗೊಳಿಸಿತು. 2020-21ರ ಮೊದಲಾರ್ಧದಲ್ಲಿ ಶೇಕಡಾ 19 ರಷ್ಟು ಕುಸಿದ ಖಾಸಗಿ ಅಂತಿಮ ಬಳಕೆಯ ವೆಚ್ಚವು, 2021-22 ರಲ್ಲಿ ಕೇವಲ ಶೇಕಡಾ 14ರಷ್ಟು ಮಾತ್ರ ಏರಿತು. ಒಟ್ಟು ಬಂಡವಾಳ ನಿರ್ಮಾಣ 2020-21 ರಲ್ಲಿ ಶೇಕಡಾ 28ರಷ್ಟು ಕುಸಿದದ್ದು, ನಂತರ ಆ ನಷ್ಟವನ್ನು ತುಂಬಲು ಮಾತ್ರವೇ ಸಾಕಾಯಿತು. ಇವೆಲ್ಲವುಗಳ ಕಾರಣದಿಂದ ಸರ್ಕಾರಿ ವೆಚ್ಚವು 2020-21ರ ಮೊದಲಾರ್ಧದಲ್ಲಿ ಶೇಕಡಾ 6 ರಷ್ಟು ಕಡಿಮೆಯಾಯಿತು ಮತ್ತು 2021-22 ರ ಮೊದಲ ಆರು ತಿಂಗಳಲ್ಲಿ ಕೇವಲ ಶೇಕಡಾ 1ರಷ್ಟು ಮಾತ್ರವೇ ಏರಿತು.

2.15 2020-21ರಲ್ಲಿ ಕೋವಿಡ್ ಮಹಾಸೋಂಕು ಶಿಖರ ತಲುಪಿದ್ದಾಗ ಮತ್ತು ಆರೋಗ್ಯ ವೆಚ್ಚವು ಹೆಚ್ಚಾಗಬೇಕಾಗಿದ್ದ ಸಮಯದಲ್ಲಿ, ಮಹಾಜಾಡ್ಯ ಹಾಗೂ ಲಾಕ್‌ಡೌನ್‌ಗಳಿಂದಾಗಿ ಬದುಕು ಧ್ವಸ್ತಗೊಂಡವರಿಗೆ ನೇರ ನಗದು ಹಣ ವರ್ಗಾವಣೆ ಆಗಬೇಕಾಗಿದ್ದಾಗ ಮತ್ತು ಚೇತರಿಕೆಯನ್ನು ಚುರುಕುಗೊಳಿಸಲು ಮುಂದಡಿಯಿಡುವ ವಿತ್ತೀಯ ನೀತಿಯನ್ನು ಅನುಸರಿಸಬೇಕಾಗಿದ್ದಾಗ, 2021-22ರ ಬಜೆಟ್ ಸರಕಾರ ತನ್ನ ವಿತ್ತೀಯ ಸಂಪ್ರದಾಯಶರಣತೆಯನ್ನೇ ಮುಂದುವರೆಸಿರುವದನ್ನು ಬಿಂಬಿಸಿತು;  ನಾಮಿನಲ್ ಜಿಡಿಪಿ ಶೇಕಡಾ 14.4 ರಷ್ಟು ಹೆಚ್ಚಿಸಲು ಯೋಜಿಸಿದ್ದ ವರ್ಷದಲ್ಲಿ ಒಟ್ಟು ವೆಚ್ಚ ಕೇವಲ ಶೇಕಡಾ 9.5 ರಷ್ಟು ಮಾತ್ರವೇ ಹೆಚ್ಚಾಗುತ್ತದೆ ಎಂದು ಯೋಜಿಸಲಾಯಿತು.

2.16 ಈ ಹೊರೆಯು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಹಾಗೂ ಗ್ರಾಮೀಣ ವಲಯಗಳಿಗೆ ಮಾಡುವ ಹಂಚಿಕೆಗಳು ಮತ್ತು ಮೂಲ ಸಾಮಾಜಿಕ ಸೇವೆಗಳು ಹಾಗೂ ಸಾಮಾಜಿಕ ಸುರಕ್ಷೆಯ ಬಾಬತ್ತುಗಳ ಮೇಲೆಯೇ ಬಿದ್ದಿತು. ಉದ್ಯೋಗ ಯೋಜನೆಗಳು, ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು ಮತ್ತು ಆಹಾರ ಭದ್ರತೆಯ ಕ್ರಮಗಳು, ಶಿಕ್ಷಣ ಹಾಗೂ ಆರೋಗ್ಯ ಸೇವೆಗಳು ಎಲ್ಲವೂ. ಭಾರಿ ಪ್ರಮಾಣದ ಖಾಸಗೀಕರಣ ಹಾಗೂ ಶೇರು ಹಿಂಪಡಿಕೆಗಳ ಹೊರತಾಗಿಯೂ ಭರವಸೆ ನೀಡಿದ್ದಕ್ಕಿಂತ ಬಹಳ ಕಡಿಮೆ ಬಜೆಟ್ ಹಂಚಿಕೆಗಳಿಂದ ನರಳಿದವು. ಇದು ಬಡ ಜನರ ಕಷ್ಟ ಕಾರ್ಪಣ್ಯಗಳನ್ನು ಇನ್ನಷ್ಟೂ ಹೆಚ್ಚಿಸಿತಷ್ಟೆ.

2.17 ಕೃಷಿ ಸಂಕಟ: ಅತಿ ಹೆಚ್ಚು ಹಾನಿಗೊಳಗಾಗಿದ್ದು ಕೃಷಿ ಕ್ಷೇತ್ರ. ಇದು ಆಗಿದ್ದು ಕಡಿಮೆ ಇಳುವರಿ ಮಟ್ಟಗಳಿಂದಾಗಿಯಲ್ಲ, ಬದಲಿಗೆ ನಿರ್ಬಂಧಿತ ಬೇಡಿಕೆ, ಪ್ರತಿಫಲದಾಯಕವಲ್ಲದ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ), ಮತ್ತು ಘೋಷಿತ ಎಂಎಸ್‌ಪಿಯಲ್ಲಿಯೂ ಬೆಳೆಗಳನ್ನು ಸಂಗ್ರಹ ಮಾಡುವಲ್ಲಿನ ಅಸಮರ್ಪಕತೆಗಳು ಇವೆಲ್ಲ ಸೇರಿ ಬೆಳೆಗಾರರಿಗೆ ಕಡಿಮೆ ಬೆಲೆಗಳು ಇದಕ್ಕೆ ಕಾರಣ. ಸುಧಾರಣೆಯ ಭಾಗವಾಗಿ ಹೆಚ್ಚಿನ ಬಳಕೆ ಶುಲ್ಕಗಳು ಮತ್ತು ಹಲವಾರು ಲಾಗುವಾಡುಗಳು ಮೇಲಿನ ಸಹಾಯ ಧನಗಳಲ್ಲಿ ಇಳಿಕೆಯಿಂದಾಗಿ ವೆಚ್ಚಗಳಲ್ಲಿ ಏರಿಕೆಯಾಗಿರುವುದರಿಂದ ಕೃಷಿ ವಲಯವು ಕಾರ್ಯಸಾಧ್ಯವಲ್ಲದಂತಾಗಿದೆ, ಅದರಿಂದಾಗಿ ಗ್ರಾಮೀಣ ಋಣಭಾರ ಹೆಚ್ಚಾಗಿದೆ, ಅದು ರೈತರ ಆತ್ಮಹತ್ಯೆಗಳನ್ನು ಹೆಚ್ಚಿಸಿದೆ ಹಾಗೂ ರೈತರ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದೆ.

2.18 ಜನರ ಮೇಲೆ ಹೆಚ್ಚಿನ ಹೊರೆಗಳು: ಇದಕ್ಕೆ ಬಲಿಯಾದದ್ದು ಬಡವರಿಗೆ ಬೆಂಬಲದ ಉದ್ದೇಶವಿದ್ದ ವೆಚ್ಚಗಳು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಎಂಜಿಎನ್‌ಆರ್‌ಇಜಿಎಸ್) ಗಾಗಿನ ವೆಚ್ಚ ಬಜೆಟ್‌ನ ಮೂಲ ಆಂದಾಜಾದ ರೂ.61,500 ಕೋಟಿ ಮತ್ತು 2019-20 ರ ನಿಜವಾದ ವೆಚ್ಚ ರೂ.71,687 ಕೋಟಿಗೆ ಹೋಲಿಸಿದಾಗ 2021-21ರಲ್ಲಿನ ಪರಿಷೃತ ಅಂದಾಜು ರೂ.1,10,000 ಕೋಟಿ ಹೆಚ್ಚುವರಿಯಾಗಿತ್ತು. ತಮ್ಮ ಹಳ್ಳಿಗಳಿಗೆ ಹಿಂತಿರುಗಿದ ವಲಸೆಯವರನ್ನೂ ಒಳಗೊಂಡಂತೆ ತಮ್ಮ ಜೀವನೋಪಾಯದಿಂದ ವಂಚಿತರಾದ ಕಾರ್ಮಿಕರು ಎಂಜಿಎನ್‌ಆರ್‌ಇಜಿಎಸ್ ಕಡೆ ಮುಖ ಮಾಡಿದರು. ಇದರಿಂದ ಬೇಡಿಕೆ ಆಧಾರಿತವಾದ ಈ ಯೋಜನೆಗೆ ಬಜೆಟ್ ಹಂಚಿಕೆಯ ಮೊತ್ತದಲ್ಲಿ ಏರಿಕೆಯುಂಟಾಯಿತು. ಕೋವಿಡ್ ಮಹಾಸೋಂಕಿನ ವಿನಾಶಕಾರಿ ಪರಿಣಾಮಗಳು ಮುಂದುವರಿಯುತ್ತಿರುವಾಗಲೇ, 2021-22ರ ಬಜೆಟಿನಲ್ಲಿ ಎಂಜಿಎನ್‌ಆರ್‌ಇಜಿಎಸ್ ಯೋಜನೆಗೆ ನೀಡಿದ ಹಂಚಿಕೆ ಕೇವಲ ರೂ.73,000 ಕೋಟಿ ಮಾತ್ರವಾಗಿದೆ. ಅಂದಾಜಿಗಿಂತ ಹೆಚ್ಚು ಬೇಡಿಕೆ ಬಂದರೆ ಅನುದಾನವನ್ನು ಹೆಚ್ಚಿಸಲಾಗುವುದು ಎಂಬ ಭರವಸೆ ನೀಡಲಾಗಿತ್ತು. ಡಿಸೆಂಬರ್ ತಿಂಗಳ ಆರಂಭದಲ್ಲಿ ಮಂಜೂರಾದ ಮೊತ್ತ ಅದಾಗಲೇ ಬಳಕೆಯಾಗಿತ್ತು. ವಾಸ್ತವದಲ್ಲಿ, 27 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಅವುಗಳಿಗೆ ನಿಗದಿಯಾಗಿದ್ದ ಹಂಚಿಕೆಯ ಶೇಕಡಾ 100ರಷ್ಟು ಮೊತ್ತವನ್ನು ಬಳಸಿಕೊಂಡಿದ್ದವು. ಆದಾಗ್ಯೂ, ಡಿಸೆಂಬರ್ 2021ರ ಅನುದಾನಗಳ ಪೂರಕ ಬೇಡಿಕೆಗಳ ಮೊತ್ತವಾಗಿ ಹೆಚ್ಚುವರಿಯಾಗಿ ಕೇವಲ ರೂ.25,000 ಕೋಟಿ ಮಾತ್ರ ಒದಗಿಸಲಾಗಿತ್ತು, ಆದರೆ ನಿಜವಾಗಿಯೂ ಅಗತ್ಯವಿರುವ ಮೊತ್ತ ಅದರ ಎರಡು ಪಟ್ಟು ಇದೆ.

2.19 ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿರುವ ನಿರುದ್ಯೋಗ, ಹೆಚ್ಚುತ್ತಿರುವ ಬಡತನ, ತೀವ್ರವಾಗಿ ಹೆಚ್ಚುತ್ತಿರುವ ಅಸಮಾನತೆಗಳ ಹೊರತಾಗಿಯೂ ಬೆಳವಣಿಗೆಯ ನಿಧಾನಗತಿಗೆ ಸರ್ಕಾರದ ಸ್ಪಂದನೆಯು ಆದಾಯ ಹಾಗೂ ಸಂಪತ್ತಿನ ಅಸಮಾನತೆಗಳನ್ನು ಇನ್ನೂ ಹೆಚ್ಚಿಸುವಂತೆ ಮಾಡಿತಷ್ಟೇ. ಭಾರೀ ಸಂಖ್ಯೆಯ ಚಮಚಾ ಕಾರ್ಪೊರೇಟ್ ಗುಂಪುಗಳು ಪಡೆದಿದ್ದ  ದೊಡ್ಡ ಪ್ರಮಾಣದ ಹೋಕು ಬಾಕಿ (ಬ್ಯಾಡ್ ಲೋನ್ಸ್) ಯನ್ನು ಮನ್ನಾ ಮಾಡಲಾಗಿದೆ ಮತ್ತು ತೆರಿಗೆದಾರರ ಹಣ ಬಳಸಿ ಬ್ಯಾಂಕುಗಳಿಗೆ ಮರುಬಂಡವಾಳ ಒದಗಿಸಲಾಗಿದೆ. ಸುಸ್ತಿದಾರ ವಾಣಿಜ್ಯ ಗುಂಪುಗಳಿಗೆ ಈ ರೀತಿಯ ಬಕ್ಷೀಸುಗಳು ಮುಂದುವರಿಯುತ್ತಿವೆ. ಮೋದಿ ಸರ್ಕಾರದ ಕಳೆದ ಏಳು ವರ್ಷಗಳಲ್ಲಿ, ಕಾರ್ಪೊರೇಟ್ ಕಂಪನಿಗಳು ತೆಗೆದುಕೊಂಡ ರೂ.10.72 ಲಕ್ಷ ಕೋಟಿ ಸಾಲಗಳ ಮೊತ್ತವನ್ನು ಮನ್ನಾ ಮಾಡಲಾಗಿದೆ. ‘ದಿವಾಳಿತನ ಸಾಲತೀರಿಸಲಾಗದ ಸಂಹಿತೆ’ (ಇನ್‌ಸಾಲ್ವೆನ್ಸಿ ಬ್ಯಾಂಕ್‌ರೂಪ್ಸಿ ಕೋಡ್-ಐಬಿಸಿ)ಯ ವಿಧಾನಗಳನ್ನು ಬಳಸಿ ಉದ್ದೇಶಪೂರ್ವಕ ಸುಸ್ತಿದಾರಿಕೆಯನ್ನು ಕಾನೂನುಬದ್ಧಗೊಳಿಸಲಾಗುತ್ತಿದೆ.

2.20 ಹೆಚ್ಚುವರಿಯಾದ ರೂ.4.5 ಲಕ್ಷ ಕೋಟಿ ಮೊತ್ತದ ಸಾಲ ಹಿಂತಿರುಗಿಸದ 13 ಕಂಪನಿಗಳ ಹೋಕು ಬಾಕಿ (ಬ್ಯಾಡ್ ಲೋನ್)ಯನ್ನು ಭಾರೀ “ಕ್ಷೌರ” (ಹೇರ್ ಕಟ್) ಅಂದರೆ ಶೇಕಡಾ 64ರಷ್ಟು ಹಣವನ್ನು ಮನ್ನಾ ಮಾಡಿ “ಇತ್ಯರ್ಥ” ಮಾಡಲಾಗಿದೆ. ಅಂದರೆ, ರೂ.4.5 ಲಕ್ಷ ಕೋಟಿ ಸಾಲಕ್ಕೆ ಬದಲಾಗಿ ಕೇವಲ ರೂ.1.61 ಲಕ್ಷ ಕೋಟಿ ಮೊತ್ತವನ್ನು ಮಾತ್ರ ವಸೂಲು ಮಾಡಲಾಗಿದೆ, ರೂ.2.85 ಲಕ್ಷ ಕೋಟಿ ಮೊತ್ತವನ್ನು ಬ್ಯಾಂಕುಗಳು ನಷ್ಟ ಮಾಡಿಕೊಂಡವು. ಬ್ಯಾಂಕ್ ಠೇವಣಿಗಳ ರೂಪದಲ್ಲಿರುವ ಜನರ ಉಳಿತಾಯದ ಹಣವನ್ನು ಚಮಚಾಗಳಿಗೆ ಬಕ್ಷೀಸಾಗಿ ಒದಗಿಸಲು ಬಳಸಲಾಗುತ್ತಿದೆ.

2.21 ಮುಂದುವರಿದು, ಕಾರ್ಪೊರೇಟ್‌ಗಳಿಗೆ ತೆರಿಗೆ ರಿಯಾಯಿತಿಗಳೊಂದಿಗೆ ವಿಶೇಷ ಸೌಕರ್ಯ ಕಲ್ಪಿಸಿಕೊಡಲಾಗಿದೆ. 2018-19ರಲ್ಲಿದ್ದ ನಿವ್ವಳ ನೇರ ತೆರಿಗೆ ಸಂಗ್ರಹ ರೂ. 11.36 ಲಕ್ಷ ಕೋಟಿಯು 2019-20ರಲ್ಲಿ ರೂ.10.49 ಲಕ್ಷ ಕೋಟಿಗೆ ಇಳಿದಿದೆ, ಸರಿ ಸುಮಾರು ಶೇಕಡಾ 8ರಷ್ಟು ಕುಸಿದಿದೆ. ಈ ಇಳಿಕೆ ಉಂಟಾಗಿರುವುದು, ಬೇಡಿಕೆ ಹಿಂಜರಿತದ ಮಧ್ಯೆಯೂ, ಸೆಪ್ಟೆಂಬರ್ 2019 ರಲ್ಲಿ ಪ್ರಕಟಿಸಿದ ತೆರಿಗೆ ರಿಯಾಯಿತಿಗಳಿಂದ.

2.22 ಈ “ಉತ್ತೇಜಕ”ವು ತೆರಿಗೆ ಪ್ರೋತ್ಸಾಹಕಗಳನ್ನು ಅಥವಾ ವಿನಾಯಿತಿಗಳನ್ನು ಬಳಸದ ದೇಶೀಯ ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆಯನ್ನು ಶೇಕಡಾ 30 ರಿಂದ ಶೇಕಡಾ 22ಕ್ಕೆ ಭಾರೀ ಇಳಿಕೆಯ ಸ್ವರೂಪವನ್ನು ಪಡೆಯಿತು. 2019 ಅಕ್ಟೋಬರ್ 1 ಮತ್ತು ನಂತರ ನೋಂದಣಿಯಾದ ನೂತನ ದೇಶೀಯ ಉತ್ಪಾದನಾ ಕಂಪನಿಗಳು ಎಲ್ಲಿಯ ತನಕ ತೆರಿಗೆ ರಿಯಾಯತಿ ಅಥವಾ ಪ್ರೋತ್ಸಾಹಕಗಳನ್ನು ಬಳಸುವುದಿಲ್ಲವೋ ಅಲ್ಲಿಯ ವರೆಗೆ ಅವರು ಕಾರ್ಪೊರೇಟ್ ತೆರಿಗೆಯನ್ನು  ಶೇಕಡಾ 15ರ ದರದಲ್ಲಿ ಮಾತ್ರ ಪಾವತಿ ಮಾಡಬಹುದು ಮತ್ತು ರಿಯಾಯತಿ ಅಥವಾ ಪ್ರೋತ್ಸಾಹಕಗಳನ್ನು ಬಳಸುವ ಕಂಪನಿಗಳಿಗೆ ಅನ್ವಯವಾಗುವ ‘ಕನಿಷ್ಠ ಪರ್ಯಾಯ ತೆರಿಗೆ’ (ಎಂಎಟಿ) ಯನ್ನು ಶೇಕಡಾ 18.5 ರಿಂದ ಶೇಕಡಾ 15 ಕ್ಕೆ ಇಳಿಸಲಾಗಿದೆ. ಅದು ನೇರ ತೆರಿಗೆ ಆದಾಯಗಳ ಬೆಳವಣಿಗೆಯನ್ನು ತಡೆ ಹಿಡಿದ ಒಂದು ಭಾರೀ ಬಕ್ಷೀಸು.

2.23 ಕೋಮುವಾದಿ ಕಾರ್ಪೊರೇಟ್ ನಂಟು: ಮೋದಿ ಯುಗದ ಒಂದು ವಿಶಿಷ್ಟ ಲಕ್ಷಣವೆಂದರೆ ದೊಡ್ಡ ಉದ್ದಿಮೆದಾರರ ಆಯ್ದ ವಿಭಾಗಗಳು ಮತ್ತು ಪ್ರಭುತ್ವದ ನಡುವಿನ ಎದ್ದು ಕಾಣುವ ಶಾಮೀಲು.

2.24 ಇದರ ಫಲಿತಾಂಶವೆಂದರೆ, ಪಿರಮಿಡ್ಡಿನ ತುತ್ತ ತುದಿಯಲ್ಲಿರುವ ಕೆಲವೇ ಕೆಲವರಿಗೆ ಆದಾಯಗಳ ವರ್ಗಾವಣೆಯಾಗುವಂತೆ ಮಾಡುತ್ತಿರುವುದು. ದಿ ಎಕನಾಮಿಸ್ಟ್ ಪತ್ರಿಕೆಯ ಪ್ರಕಾರ ಮುಖೇಶ್ ಅಂಬಾನಿಯ ನಿವ್ವಳ ಮೌಲ್ಯವು 2016 ಮತ್ತು 2020 ರ ನಡುವೆ ಶೇಕಡಾ 350ರಷ್ಟು ಹೆಚ್ಚಾಗಿದೆ; ಗೌತಮ್ ಅದಾನಿಯ ನಿವ್ವಳ ಮೌಲ್ಯ ಅದೇ ಅವಧಿಯಲ್ಲಿ ಶೇಕಡಾ 750ರಷ್ಟು ಹೆಚ್ಚಾಗಿದೆ. 2020-21ರಲ್ಲಿ ಮುಖೇಶ್ ಅಂಬಾನಿಯ ನಿವ್ವಳ ಮೌಲ್ಯವು ರೂ.7.18 ಲಕ್ಷ ಕೋಟಿ; ಗೌತಮ್ ಅದಾನಿಯ ನಿವ್ವಳ ಮೌಲ್ಯವು 5.06 ಲಕ್ಷ ಕೋಟಿ ಆಗಿವೆ. ಇತರ ಸೂಪರ್ ಶ್ರೀಮಂತ ವ್ಯಕ್ತಿಗಳು ಮತ್ತು ಕುಟುಂಬಗಳ ಸಂಪತ್ತುಗಳು ಕೂಡ ತ್ವರಿತ ವೇಗದಲ್ಲಿ ಹೆಚ್ಚಾಗಿವೆ. ಆಕ್ಸ್‌ಫಾಮ್ ಇಂಡಿಯಾ ವರದಿಯ ಪ್ರಕಾರ, ದೇಶದ ಸಂಪತ್ತಿನ ಶೇಕಡಾ 57ರಷ್ಟನ್ನು ಭಾರತದಲ್ಲಿ ತುತ್ತ ತುದಿಯ 10 ಜನರು ಹೊಂದಿದ್ದಾರೆ; ಕಟ್ಟ ಕಡೆಯಲ್ಲಿರುವ ಆರ್ಧದಷ್ಟು ಜನಗಳ ಪಾಲು ಕೇವಲ ಶೇಕಡಾ 13 ಮಾತ್ರ.

2.25 ರಾಷ್ಟ್ರೀಯ ಆಸ್ತಿಗಳ ಲೂಟಿ: ಕೇಂದ್ರ ಸರ್ಕಾರವು ವೆಚ್ಚ ಮಾಡುತ್ತಿರುವ ಸೀಮಿತ ಹಣ ಕೂಡ ಪ್ರಭುತ್ವದ ಆಸ್ತಿಗಳನ್ನು ಮಾರಾಟ ಮಾಡುವ ಮೂಲಕ ಬರುತ್ತಿರುವ ಹಣದಿಂದಾಗುತ್ತಿವೆ. ಹೊಸ ಹೂಡಿಕೆ ಕೂಡ ಬಹುತೇಕ ಎರಡು ರೀತಿಯ ಹಣಕಾಸಿನಿಂದ ಆಗುತ್ತಿದೆ: ಸಾರ್ವಜನಿಕ ವಲಯದ ಶೇರುಗಳನ್ನು ಮಾರಾಟ ಮಾಡುವ ಮೂಲಕ ಮತ್ತು ಸಾರ್ವಜನಿಕ ಆಸ್ತಿಗಳ ನಗದೀಕರಣ ಅಥವಾ ಮಾರಾಟದಿಂದ. ಆದಾಯಗಳನ್ನು ಪಡೆಯುವ ಸಲುವಾಗಿ ಸಾರ್ವಜನಿಕ ಸಂಪತ್ತಿನ ಮಾರಾಟದ ಮೇಲೆ ಅವಲಂಬಿತವಾಗಿರುವುದು ಕೂಡ ಬಿಡಿಗಾಸಿಗೆ ಅಮೂಲ್ಯವಾದ ಆಸ್ತಿಗಳನ್ನು ತಮಗೆ ಬೇಕಾದ ಕಾರ್ಪೊರೇಟ್‌ಗಳಿಗೆ ವಹಿಸಿಕೊಡಲು ಹೂಡಿದಂಥ ನೆಪವಾಗುತ್ತಿದೆ. 2021-22ರಲ್ಲಿ ಶೇರು ಮಾರಾಟದಿಂದ ಬರಬಹುದಾದ ಮೊತ್ತ ರೂ.1,75,000 ಕೋಟಿ ಎಂದು ಬಜೆಟಿನಲ್ಲಿ ಅಂದಾಜು ಮಾಡುವುದರೊಂದಿಗೆ, ಕೆಲವು ಅತ್ಯುನ್ನತ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಮತ್ತು ಹಣಕಾಸಿನ ಸಂಸ್ಥೆಗಳನ್ನು ಮಾರಾಟಕ್ಕಿಡಲಾಗಿದೆ. ಇಲ್ಲಿ ಮೂರು ಅಂಶಗಳಿವೆ: ಶೇರು ಹಿಂಪಡಿಕೆ, ಆಯಕಟ್ಟಿನ ಮಾರಾಟ ಮತ್ತು ಸಾರ್ವಜನಿಕ ಹಣಕಾಸು ಕ್ಷೇತ್ರದ ಖಾಸಗೀಕರಣ. ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಸಾಮಾನ್ಯ ವಿಮಾ ನಿಗಮವನ್ನು ಖಾಸಗೀಕರಣ ಮಾಡುವುದರ ಜತೆಯಲ್ಲೇ ಎಲ್.ಐ.ಸಿ.ಯ ಶೇರುಗಳ ಹಿಂಪಡಿಕೆ. ಇಷ್ಟೂ ಸಾಲದೆಂಬಂತೆ, “ಆಸ್ತಿಗಳನ್ನು ನಗದೀಕರಿಸುವುದು” ಕೂಡ ಸೇರಿಕೊಂಡಿದೆ. ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ನಿಂದ ರೂ. 6 ಲಕ್ಷ ಕೋಟಿ ಮೌಲ್ಯದ ಜಮೀನು, ರೈಲ್ವೇ ಹಳಿಗಳು, ರೈಲ್ವೇ ನಿಲ್ದಾಣಗಳು, ವಿಮಾನ ನಿಲ್ದಾಣಗಳು, ಬಂದರುಗಳು, ಇಂಧನ ಕೊಳವೆ ಪೈಪುಗಳು ಮತ್ತು ಇತರ ಸಾರ್ವಜನಿಕ ವಲಯದ ಆಸ್ತಿಗಳನ್ನು ಮಾರಾಟ ಮಾಡುವ ಪ್ರಸ್ತಾಪಗಳಿವೆ. ಬಂಡವಾಳ ವೆಚ್ಚಕ್ಕೆ ಹಣಕಾಸು ಹೊಂದಿಸಲು ತೆರಿಗೆ ಹಾಕಿ ಸಂಪನ್ಮೂಲ ಸಂಗ್ರಹಿಸುವ ಬದಲು ಇದನ್ನು ಅವಲಂಬಿಸಲಾಗುತ್ತಿದೆ.

2.26 ಮೋದಿ ಸರ್ಕಾರದ ನವ-ಉದಾರವಾದಿ ನೀತಿಗಳ ಆಕ್ರಮಣಕಾರಿ ಅನುಸರಣೆಯಿಂದಾಗಿ ಈ ಆರ್ಥಿಕ ಹಿಂಜರಿತ ಉಂಟಾಗಿದೆ ಎಂಬುದು ಸುಸ್ಪಷ್ಟ. ಕೋವಿಡ್ ಮಹಾಸೋಂಕು ಮತ್ತು ಲಾಕ್‌ಡೌನ್‌ಗಳು ಈ ಪರಿಸ್ಥಿತಿಯನ್ನು ಇನ್ನೂ ಉಲ್ಬಣಗೊಳಿಸಿದೆಯಷ್ಟೆ.

ಕೋವಿಡ್‌ನ ಕ್ರಿಮಿನಲ್ ಅಪನಿರ್ವಹಣೆ

2.27 ಮೋದಿ ಸರ್ಕಾರ ಕೋವಿಡ್ ಮಹಾಸೋಂಕನ್ನು ತಪ್ಪಾಗಿ ನಿರ್ವಹಿಸಿದ ಅಪರಾಧಿಕ ರೀತಿ ಮತ್ತು ಅದರ ದೋಷಪೂರ್ಣ ಅವೈಜ್ಞಾನಿಕ ಧೋರಣೆಯು ಜನರಲ್ಲಿ ಅಪಾರ ಸಾವು ನೋವುಗಳಿಗೆ ಕಾರಣವಾದವು. ಮಾರ್ಚ್ 2020ರಲ್ಲಿ ಯಾವುದೇ ಯೋಜನೆಯಿಲ್ಲದ ತರಾತುರಿಯಲ್ಲಿ ಸಂಪೂರ್ಣ ಲಾಕ್‌ಡೌನ್ ಆರ್ಥಿಕ ಬದುಕನ್ನು ಛಿದ್ರಗೊಳಿಸಿತು ಮತ್ತು ವಲಸೆ ಕಾರ್ಮಿಕರು ಸಾವಿರಾರು ಮೈಲುಗಳ ದೂರ ನಡೆದು ತಮ್ಮ ಹಳ್ಳಿಗಳಿಗೆ ತೆರಳುವಂತೆ ಬಲವಂತ ಮಾಡಿತು. ಸರಕಾರ ದೊಡ್ಡ ಪ್ರಮಾಣದಲ್ಲಿ ಲಸಿಕೆಯ ಖರೀದಿ ಮತ್ತು ಉತ್ಪಾದನೆಗೆ ತಯಾರಿ ನಡೆಸುವಲ್ಲಿ ವಿಫಲವಾದದ್ದು  ಲಸಿಕೆಯ ಕೊರತೆಯನ್ನು ಸೃಷ್ಟಿಸಿತು; ಲಸಿಕೆಗಳನ್ನು ಉತ್ಪಾದಿಸಲು ಸಾರ್ವಜನಿಕ ವಲಯದ ಔಷಧ ಕಂಪನಿಗಳನ್ನು ಬಳಸಿಕೊಳ್ಳಲು ಅದು ನಿರಾಕರಿಸಿತು. ಕೋವಿಡ್ ವಿಷಾಣುವಿನ ಮೇಲೆ ಜಯ ಸಾಧಿಸಿದೆವು ಎಂದು ಜನವರಿ 2021ರಲ್ಲಿ ಸುಳ್ಳು ಸುಳ್ಳಾಗಿ ಘೋಷಣೆ ಮಾಡಿತು, ಮತ್ತು ಅದರ ಪರಿಣಾಮವಾಗಿ ಮಾರ್ಚ್ 2021ರಲ್ಲಿ ಎರಡನೆಯ ಅಲೆ ಬಂದಾಗ ದೇಶ ರಕ್ಷಣಾಹೀನವಾಗಿ ಬಿಟ್ಟಿತು. ಆಮ್ಲಜನಕವಿಲ್ಲದೆ, ಆಸ್ಪತ್ರೆಗಳಲ್ಲಿ ಹಾಸಿಗೆ ದೊರಕದೆ ಲಕ್ಷಾಂತರ ಜನರ ಸಾವಿಗೆ ಕಾರಣವಾಯಿತು, ಅವು ಬಹಳಷ್ಟು ದಾಖಲೆಯೇ ಆಗಲಿಲ್ಲ. ಗಂಗಾ ನದಿಯಲ್ಲಿ ಹೆಣಗಳು ತೇಲಿಹೋಗುತ್ತಿರುವ ಹೃದಯ ವಿದ್ರಾವಕ ದೃಶ್ಯಗಳು ಮೋದಿ ಸರ್ಕಾರದ ಪೂರಾ ಅಪನಿರ್ವಹಣೆಗೆ ಸಾಕ್ಷಿಯಾಗಿ ಉಳಿದವು.

2.28 ಸಂಕಷ್ಟದಲ್ಲಿರುವ ಜನರಿಗೆ ನೇರ ನಗದು ಹಣದ ಬೆಂಬಲ ನೀಡಲು ಮೋದಿ ಸರ್ಕಾರವು ಮೊಂಡುತನದಿಂದ ನಿರಾಕರಿಸಿತು ಮತ್ತು ಅದು ಪ್ರಕಟಿಸಿದ ಹಣಕಾಸಿನ ಉತ್ತೇಜನವು ಜಿ-20 ದೇಶಗಳಲ್ಲೇ ಅತ್ಯಲ್ಪ ಹೆಚ್ಚುವರಿ ಸರಕಾರೀ ವೆಚ್ಚವಾಗಿತ್ತು. ಒಟ್ಟಿನಲ್ಲಿ, ಈ ಸಾರ್ವಜನಿಕ ಆರೋಗ್ಯದ ತುರ್ತಿನ ಸಮಯದಲ್ಲಿ ಜನರ ಬಗ್ಗೆ ಬಿಜೆಪಿ ಸರ್ಕಾರವು ತನ್ನ ಅಮಾನವೀಯ ಹಾಗೂ ತೀರ ಅಸಡ್ಡೆಯ ಧೋರಣೆಯನ್ನು ಬಯಲುಮಾಡಿತು.

ಜನರ ಜೀವ ಮತ್ತು ಜೀವನೋಪಾಯಗಳ ಮೇಲಿನ ದಾಳಿಗಳು

2.29 ಜನರ ಜೀವನೋಪಾಯಗಳ ಮೇಲಿನ ದಾಳಿಗಳು ಕೋವಿಡ್ ಸೋಂಕಿಗಿಂತಲೂ ಬಹಳ ಮುನ್ನವೇ ಪ್ರಾರಂಭವಾಗಿವೆ. ಮಹಾಸೋಂಕಿನ ಪರಿಸ್ಥಿತಿಯನ್ನು ದಾಳಿಗಳನ್ನು ತೀವ್ರಗೊಳಿಸಲು ಬಳಸಲಲಾಯಿತು, ಅಂದಿನಿಂದ ಪರಿಸ್ಥಿತಿ ಇನ್ನೂ ಕೆಟ್ಟಿದೆ.

2.30 ಹೆಚ್ಚುತ್ತಿರುವ ಬಡತನ: ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತದ ಬಡವರ ಸಂಖ್ಯೆಯನ್ನು ಲೆಕ್ಕಮಾಡಿಲ್ಲ. ಪ್ಯೂ ಸಂಶೋಧನಾ ಕೇಂದ್ರವು ವಿಶ್ವ ಬ್ಯಾಂಕಿನ ದತ್ತಾಂಶಗಳನ್ನು ಬಳಸಿ, ಭಾರತದಲ್ಲಿರುವ ಬಡವರ (ದಿನಕ್ಕೆ ಎರಡು ಡಾಲರ್ ಅಥವ ಅದಕ್ಕಿಂತ ಕಡಿಮೆ ಆದಾಯದ ಕೊಳ್ಳುವ ಶಕ್ತಿ ಸಾಮ್ಯತೆ ಹೊಂದಿರುವವರು) ಸಂಖ್ಯೆಯನ್ನು ಅಂದಾಜು ಮಾಡಿದೆ; ಕೋವಿಡ್‌ನ ಕಾರಣದಿಂದಾಗಿ ಉಂಟಾದ ಹಿಂಜರಿತದಿಂದಾಗಿ ಕಳೆದ ವರ್ಷವಷ್ಟೆ ಇದ್ದ 6 ಕೋಟಿ ಬಡವರ ಸಂಖ್ಯೆ ಈಗ 13.4 ಕೋಟಿಗೇರಿ ಎರಡು ಪಟ್ಟಿಗಿಂತಲೂ ಹೆಚ್ಚಾಗಿದೆ. ಇದರ ಅರ್ಥ, 45 ವರ್ಷಗಳ ನಂತರ ಭಾರತವು ಮತ್ತೆ ಒಂದು “ಸಾಮೂಹಿಕ ಬಡತನದ ದೇಶ”ವೆಂದು ಕರೆಯಿಸಿಕೊಳ್ಳುವ ಸ್ಥಿತಿಗೆ ಬಂದಿದೆ.

2.31 ಇನ್ನೂ ಮುಂದುವರಿದು, 2021ರ ಕೊನೆಗೆ ಇನ್ನೂ 15 ರಿಂದ 19.9 ಕೋಟಿ ಜನರು ಬಡತನಕ್ಕೆ ಜಾರಲಿದ್ದಾರೆ ಎಂದು ಅದು ಅಂದಾಜು ಮಾಡಿದೆ. ಮಹಾಸೋಂಕಿನ ಅವಧಿಯಲ್ಲಿ, ಜಾಗತಿಕ ಬಡತನ ಏರಿಕೆಯ ಶೇಕಡಾ 60ರಷ್ಟು ಭಾರತದಲ್ಲಿಯೇ ಆಗಿದೆ. ನೀತಿ ಆಯೋಗದ ಬಹುಆಯಾಮಗಳ ಬಡತನ ಸೂಚ್ಯಾಂಕದ ವರದಿಯು ಬಿಹಾರದ ಜನಸಂಖ್ಯೆಯಲ್ಲಿ ಶೇಕಡಾ 51.91, ನಂತರದಲ್ಲಿ ಜಾರ್ಖಂಡ್ ನಲ್ಲಿ ಶೇಕಡಾ 42.16, ಉತ್ತರಪ್ರದೇಶದಲ್ಲಿ ಶೇಕಡಾ 37.79, ಮಧ್ಯಪ್ರದೇಶದಲ್ಲಿ ಶೇಕಡಾ 36.65 ಮತ್ತು ಮೇಘಾಲಯ ಹಾಗೂ ಅಸ್ಸಾಮಿನಲ್ಲಿ ಶೇಕಡಾ 32.67 ಬಡವರು ಎಂದು ವರ್ಗೀಕರಿಸಿದೆ.

2.32 ಶೀಘ್ರವಾಗಿ ಬೆಳೆಯುತ್ತಿರುವ ನಿರುದ್ಯೋಗ: ನವಂಬರ್ 2021ರ ಒಂದೇ ತಿಂಗಳಿನಲ್ಲಿ 68 ಲಕ್ಷ ಸಂಬಳ ಪಡೆಯುತ್ತಿದ್ದ ಜನರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಭಾರತದ ನಗರ ಪ್ರದೇಶಗಳಲ್ಲಿ ಸರಿಸುಮಾರು 9 ಕೋಟಿ ನಿರುದ್ಯೋಗಿಗಳಿದ್ದಾರೆ. ಭಾರತದ ನಗರ ಪ್ರದೇಶಗಳ ಶೇಕಡಾ 23ರಷ್ಟು ಯುವಜನರು ನಿರುದ್ಯೋಗಿಗಳಾಗಿದ್ದಾರೆ.

2.33 ಉದ್ಯೋಗದಲ್ಲಿರುವ ಭಾರತೀಯರ ಒಟ್ಟು ಸಂಖ್ಯೆಯು 2013ರಲ್ಲಿನ 44 ಕೋಟಿಯಿಂದ 2016ರಲ್ಲಿ 41 ಕೋಟಿಗೆ ಕುಗ್ಗಿದೆ. ಅದು ಮತ್ತೂ ಕುಗ್ಗಿ 2017ರಲ್ಲಿ 40 ಕೋಟಿ ಮತ್ತು 2021ರಲ್ಲಿ 38 ಕೋಟಿಗೆ ತಲುಪಿದೆ. ಆದರೆ, ಅದೇ ಅವಧಿಯಲ್ಲಿ ಕೆಲಸ ಮಾಡಬಹುದಾದ ವಯಸ್ಸಿನ ಜನಸಂಖ್ಯೆಯು 79 ಕೋಟಿಯಿಂದ 106 ಕೋಟಿಗೆ ಏರಿದೆ. ಉದ್ಯೋಗ ಪಡೆಯಲು ಅಸಮರ್ಥರಾದ ಕೋಟ್ಯಾಂತರ ಜನರು ಕೆಲಸ ಹುಡುಕುವುದನ್ನು ಬಿಟ್ಟು ಬದುಕುವ ಸಲುವಾಗಿ ಗ್ರಾಮೀಣ ಭಾರತದತ್ತ ಮುಖ ಮಾಡಿದ್ದಾರೆ. ಲಾಕ್‌ಡೌನ್ ಹಾಗೂ ಮುಚ್ಚುವಿಕೆಗಳಿಂದಾಗಿ ಬಲವಂತವಾಗಿ ಹಿಂದಿರುಗಬೇಕಾದ ವಲಸೆ ಕಾರ್ಮಿಕರು ಹೆಚ್ಚು ಕಷ್ಟಕ್ಕೆ ಒಳಗಾದರು. ಕೋವಿಡ್ ಮಹಾಸೋಂಕಿಗೆ ಮುಂಚೆ ಶ್ರಮಶಕ್ತಿ ಭಾಗವಹಿಸುವಿಕೆಯ ದರವು ಶೇಕಡಾ 43 ರಿಂದ ಶೇಕಡಾ 40ಕ್ಕೆ ಇಳಿದಿದೆ. ಮಹಿಳಾ ದುಡಿಮೆಗಾರರ ಅನುಪಾತವು 2013ರಲ್ಲಿದ್ದ ಶೇಕಡಾ 36 ರಿಂದ 2018ರಲ್ಲಿ ಶೇಕಡಾ 23ಕ್ಕೆ ಇಳಿದಿದೆ ಎಂದು ಯುಎನ್‌ಡಿಪಿ ವರದಿ ಹೇಳುತ್ತದೆ. ಇದು ಇನ್ನೂ ಕುಸಿದು 2019ರಲ್ಲಿ ಮಹಾಸೋಂಕಿನ ಲಾಕ್‌ಡೌನಿಗೆ ಮುಂಚೆ ಶೇಕಡಾ 18ಕ್ಕೆ ಕುಸಿದಿದೆ. ಫೆಬ್ರವರಿ 2021ರಲ್ಲಿ ಅದು ಕೇವಲ ಶೇಕಡಾ 9.24ಕ್ಕೆ ಬಂದು ನಿಂತಿದೆ.

2.34 ಹೆಚ್ಚುತ್ತಿರುವ ಹಸಿವು: 2021ರ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 116 ದೇಶಗಳ ಪೈಕಿ 101ನೇ ಸ್ಥಾನದಲ್ಲಿದೆ. ಕಳೆದ ವರ್ಷ 94ನೇ ಸ್ಥಾನದಲ್ಲಿತ್ತು. ಈಗ ಭಾರತವು ‘ಹಸಿವಿನ ಗಂಭೀರ ಪರಿಸ್ಥಿತಿ’ಯನ್ನು ಎದುರಿಸುತ್ತಿರುವ ದೇಶಗಳ ಭಾಗವಾಗಿ ಪರಿಗಣಿಸಲ್ಪಟ್ಟಿದೆ. ಈ ಮಾನದಂಡದ ಅಡಿಯಲ್ಲಿ ಬರುವ ಎಲ್ಲಾ ದೇಶಗಳಿಗೆ ಹೋಲಿಸಿದರೆ ಬೆಳವಣಿಗೆ ಕುಂಠಿತ (ಎತ್ತರಕ್ಕೆ ಸಮನಾದ ತೂಕವಿಲ್ಲದಿರುವುದು) ಮಕ್ಕಳ ಸಂಖ್ಯೆ ಭಾರತದಲ್ಲಿ ಅತಿ ಹೆಚ್ಚಿದೆ. ಶಿಶು ಮರಣ ಮತ್ತು ಮಕ್ಕಳ ಅಪೌಷ್ಟಿಕತೆಯಲ್ಲಿ ತೀವ್ರ ಹೆಚ್ಚಳವಾಗುತ್ತಿರುವುದನ್ನು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ಗುರುತಿಸಿದೆ. ಹಾಗಿದ್ದಾಗ್ಯೂ ಮಧ್ಯಾಹ್ನದ ಬಿಸಿಯೂಟದ ಯೋಜನೆಗೆ ಮುಡಿಪಿಟ್ಟ ಹಣದಲ್ಲಿ 2014 ರಿಂದ 2021ರ ಅವಧಿಯಲ್ಲಿ 32.3% ರಷ್ಟು ಭಾರೀ ಇಳಿಕೆ ಮಾಡಲಾಗಿದೆ. 2018-19ರಲ್ಲಿ ಸಮಗ್ರ ಬಾಲ ವಿಕಾಸ ಯೋಜನೆಗೆ (ಐ.ಸಿ.ಡಿ.ಎಸ್.) ಇಟ್ಟ ಹಣದಲ್ಲಿ ಕೇವಲ 44% ಮಾತ್ರ ಬಳಸಲಾಗಿದೆ. ಸಾರ್ವಜನಿಕ ಪಡಿತರ ಯೋಜನೆಯ ಅರ್ಹ ಫಲಾನುಭವಿಗಳಾಗಿದ್ದ 40 ಕೋಟಿ ಜನರನ್ನು ಅದರಿಂದ ಕೈ ಬಿಡಲಾಗಿದೆ. ಪಡಿತರ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿಯೇ ನಾಶಮಾಡಲಾಗುತ್ತಿದೆ.

2.35 ಬೆನ್ನು ಮುರಿಯುತ್ತಿರುವ ಬೆಲೆ ಏರಿಕೆ: ಕೋವಿಡ್ ಪ್ರಕೋಪದ ಅವಧಿಯಾದ್ಯಂತ ಜನರ ಸಂಕಷ್ಟಗಳು ಮಿತಿಮೀರಿ ಏರುತ್ತಿದ್ದಾಗ, ಸರಿಸುಮಾರು ಪ್ರತಿನಿತ್ಯ ಪೆಟ್ರೊಲ್, ಡಿಸೇಲ್ ಬೆಲೆಗಳನ್ನು ಏರಿಸಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಗಳ ಬೆಲೆ ಲೀಟರ್ ಒಂದಕ್ಕೆ ನೂರು ರೂಪಾಯಿಗೆ ಮುಟ್ಟುವವರೆಗೂ, ಸರಕಾರ ಅಬಕಾರಿ ಸುಂಕ, ಸರ್ಚಾರ್ಜಗಳು ಮತ್ತು ಸೆಸ್‌ಗಳನ್ನು ಪೆಟ್ರೋಲಿಯಂ ವಸ್ತುಗಳ ಮೇಲೆ ಹೆಚ್ಚಿಸುತ್ತಲೇ ಇತ್ತು. 2018-2021ರ ಈ ಮೂರು ವರ್ಷಗಳ ಅವಧಿಯಲ್ಲಿ ಸರಕಾರವು 8.02 ಲಕ್ಷ ಕೋಟಿ ರೂಪಾಯಿಗಳನ್ನು ಈ ಬಾಬತ್ತಿನಿಂದ ಸಂಗ್ರಹಿಸಿದೆ ಎಂದು ವಿತ್ತಮಂತ್ರಿಗಳು ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. ಸಾರ್ವಜನಿಕರ ಒತ್ತಡದ ಕಾರಣದಿಂದ ನವೆಂಬರ್ 2021ರಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಗಳ ಮೇಲಿನ ಸುಂಕವನ್ನು ಅಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಲಾಯಿತು. ಆದರೆ ಈ ಕ್ರಮದಿಂದ ಬೆಲೆ ಏರಿಕೆಯನ್ನು ತಡೆಗಟ್ಟಲು ಸಾಧ್ಯವಿಲ್ಲ. ಕೇಂದ್ರವು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸುಂಕ, ಸೆಸ್, ಸರ್ಚಾರ್ಜ್‌ಗಳನ್ನು ರದ್ದು ಮಾಡಬೇಕು.

2.36 ಇದೇ ವೇಳೆಗೆ ಅಡುಗೆ ಅನಿಲದ ಬೆಲೆಯಲ್ಲಿಯೂ ವಿಪರೀತ ಹೆಚ್ಚಳವಾಗಿದ್ದು ಸಿಲಿಂಡರ್ ಒಂದಕ್ಕೆ 900 ರಿಂದ 1000ರೂ. ವರೆಗೆ ದರ ಹೆಚ್ಚಿಸಲಾಗಿದೆ. ಜನವರಿ 1, 2021ರಿಂದ ಸಬ್ಸಿಡಿ ಸಿಲಿಂಡರ್‌ಗಳ ಬೆಲೆಯನ್ನು 205 ರೂಪಾಯಿಗಳಷ್ಟು ಏರಿಸಲಾಗಿದೆ. ಅಡುಗೆ ಅನಿಲದ ಸಿಲಿಂಡರ್‌ಗಳಿಗೆ ಸಬ್ಸಿಡಿ ಕೊಡುವುದನ್ನು ಸರಕಾರ ನಿಲ್ಲಿಸಿದೆ, ಹಾಗೇಯೆ ಕೊಳವೆ ಅನಿಲ ಮತ್ತು ಸಿ.ಎನ್‌.ಜಿ.ಗಳ ಬೆಲೆಗಳನ್ನೂ ಏರಿಸಲಾಗಿದೆ.

2.37 ಇದರಿಂದಾಗಿ ಸರಕು ಸಾಗಣೆ ವೆಚ್ಚ ಮತ್ತು ಇತರ ವೆಚ್ಚಗಳಲ್ಲಿ ಏರಿಕೆಯಾಗಿದ್ದು ಹಣದುಬ್ಬರಕ್ಕೆ ದಾರಿ ಮಾಡಿಕೊಟ್ಟಿದೆ. ಸಗಟು ಮಾರಾಟ ಸೂಚ್ಯಂಕದ ಹಣದುಬ್ಬರವು 2021ರ ನವೆಂಬರ್ ಹೊತ್ತಿಗೆ ಕಳೆದ 30 ವರ್ಷಗಳ ದಾಖಲೆ ಮುರಿದು ಮೇಲೇರಿತ್ತು. ಆಹಾರ ಪದಾರ್ಥಗಳು ಮತ್ತು ತರಕಾರಿ ಮತ್ತಿತರ ಜೀವನಾವಶ್ಯಕ ವಸ್ತುಗಳ ಬೆಲೆ 14.2% ಹೆಚ್ಚಾಗಿ 12 ವರ್ಷದ ದಾಖಲೆಗಳನ್ನು ಮುರಿಯಿತು.

ಜಾತ್ಯಾತೀತತೆಯ ಮೇಲೆ ಧಾಳಿ

2.38 ನಮ್ಮ ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ಜಾತ್ಯಾತೀತ ನೀತಿಗಳು ತೀವ್ರ ಧಾಳಿಗೆ ಒಳಗಾಗಿವೆ. ಜಾಗತಿಕವಾಗಿ ಹರಡಿಹೋಗಿರುವ ಭಾರತೀಯರೂ ವೀಕ್ಷಿಸಲು ಬಿತ್ತರವಾಗುವ ದೂರದರ್ಶನ ವಾಹಿನಿಗಳ ಮೂಲಕ ಅಯೋಧ್ಯೆಯ ದೇವಾಲಯ ನಿರ್ಮಾಣ, ಕಾಶೀ ವಿಶ್ವನಾಥ ಗಂಗಾ ಕಾರಿಡಾರ್ ನಿರ್ಮಾಣಗಳನ್ನು ಸರಕಾರದ ಕಾರ್ಯಕ್ರಮಗಳಂತೆ ತೋರ್ಪಡಿಸಲಾಗಿದೆ. ಯಾವುದೇ ಧಾರ್ಮಿಕ ಆಚರಣೆಗಳಿಂದ ಸರಕಾರವು ದೂರ ಉಳಿಯಬೇಕು ಎಂಬ ತತ್ವಕ್ಕೆ ತಿಲಾಂಜಲಿ ಇಡಲಾಗಿದೆ. ಮೋದಿ ಸರಕಾರವು ಭಾರತ ದೇಶವನ್ನು ಹಿಂದುತ್ವ ಪ್ರಭುತ್ವದೆಡೆಗೆ ಚಲಿಸುವಂತೆ ಮಾಡುತ್ತಿದೆ ಎಂಬ ಹೆಚ್ಚುತ್ತಿರುವ  ವಾಸ್ತವತೆಯನ್ನು  ಇದು ಸೂಚಿಸುತ್ತದೆ.

2.39 ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ದ್ವೇಷ ಮತ್ತು ಹಿಂಸಾಚಾರದ ಕೆಟ್ಟ ಪ್ರಚಾರಗಳು ಬಿಜೆಪಿ ಆಳ್ವಿಕೆಯ ರಾಜ್ಯ ಸರಕಾರಗಳಲ್ಲಿ ಹೆಚ್ಚುತ್ತಿವೆ. ಶಸ್ತ್ರ ಸಜ್ಜಿತ ಜನಜಂಗುಳಿಗಳನ್ನು ಕೋಮು ದಂಗೆಗೆ ಪ್ರಚೋದಿಸಲಾಗುತ್ತಿದೆ. ಫೆಬ್ರುವರಿ 2020ರಲ್ಲಿ ದೆಹಲಿಯಲ್ಲಿ ನಡೆದ ಕೋಮುಹಿಂಸಾಚಾರವೊಂದು ಪೂರ್ವ ನಿಯೋಜಿತ ಧಾಳಿಯಾಗಿತ್ತು. ಬೆಂಕಿ ಉಗುಳುವ ಭಾಷಣವನ್ನು ಮಾಡಿ ಜನರನ್ನು ಪ್ರಚೋದಿಸಿದ ಕೇಂದ್ರದ ಸಚಿವರುಗಳು ಮತ್ತು ಕೋಮುಹಿಂಸೆಯನ್ನು ಮಾಡಿದವರ ಮೇಲೆ ಯಾವುದೇ ರೀತಿಯ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲೇ ಇಲ್ಲ. ನ್ಯಾಯ ನೀಡಿಕೆಯಂತೂ ದೂರ, ಬದಲಿಗೆ ಕಿರುಕುಳಗಳಿಗೆ ಒಳಗಾದ ಸಂತ್ರಸ್ಥರ ಮೇಲೇ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ ಮುಸ್ಲಿಮರ ನರಮೇಧ ಮಾಡಿರೆಂಬ ಆಘಾತಕಾರೀ ಕರೆಯನ್ನು ನೀಡಿದೆ.

2.40 ಬಿಜೆಪಿ ಆಳ್ವಿಕೆಯ ರಾಜ್ಯ ಸರಕಾರಗಳು ಕೋಮುಧೃವೀಕರಣಗಳನ್ನು ಇನ್ನಷ್ಟು ತೀಕ್ಷ್ಣಗೊಳಿಸುವ ಕಾನೂನುಗಳನ್ನು ಜಾರಿಗೆ ತರುತ್ತಿದೆ. ಬಿಜೆಪಿಯ ಅಧಿಕಾರವಿರುವ ರಾಜ್ಯಗಳಲ್ಲಿ ಜಾನುವಾರು ಮತ್ತು ಮಾಂಸ ವ್ಯಾಪಾರದಿಂದ ಮುಸ್ಲಿಮರನ್ನು ಹೊರಗಿಡುವ ಉದ್ದೇಶವನ್ನಿಟ್ಟುಕೊಂಡು ಗೋವು ಮತ್ತು ಇತರ ಜಾನುವಾರು ಹತ್ಯಾ ನಿಷೇಧ ಕಾಯ್ದೆಗಳನ್ನು ಜಾರಿಗೊಳಿಸಲಾಗುತ್ತಿದೆ. ಇದರ ಜೊತೆಗೇ ಉತ್ತರ ಪ್ರದೇಶ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ಇತ್ತೀಚೆಗೆ ಕರ್ನಾಟಕ ರಾಜ್ಯಗಳಲ್ಲಿ ಮತಾಂತರ ನಿಷೇಧ ಮತ್ತು ಲವ್ ಜಿಹಾದ್ ಕಾನೂನುಗಳನ್ನು ತರಲಾಗುತ್ತಿದೆ.

2.41 ಈ ಕಾನೂನುಗಳನ್ನು ಅಲ್ಪಸಂಖ್ಯಾತ ಸಮುದಾಯಗಳ ಮುಗ್ದ ಜನರ ಮೇಲೆ ಗುರಿಯಿಡಲು, ದೈಹಿಕ ಧಾಳಿಯನ್ನು ನಡೆಸಲು ಅಥವಾ ಕಾನೂನಾತ್ಮಕವಾಗಿ ಪ್ರಕರಣ ದಾಖಲಿಸುವ ಉದ್ದೇಶದಿಂದ ವ್ಯಾಪಕವಾಗಿ ಉಪಯೋಗಿಸಲಾಗುತ್ತಿದೆ. ಅತಿ ಕ್ಷುಲ್ಲಕ ಆರೋಪಗಳನ್ನೂ ದೇಶದ್ರೋಹದ ಅಡಿಯಲ್ಲಿ ದಾಖಲಿಸಲಾಗುತ್ತಿದೆ. ದ್ವೇಷ ಪ್ರಚಾರಗಳು ಮತ್ತು ಹಿಂಸಾಕೃತ್ಯಗಳು ಸಹಜ ಎನ್ನುವಂತೆ ಮಾಡಿ ಅದಕ್ಕೆ ಕಾನೂನಾತ್ಮಕ ಅಂಗೀಕಾರವನ್ನೂ ನೀಡಲಾಗುತ್ತಿದೆ.

ಬೆಳೆಯುತ್ತಿರುವ ನಿರಂಕುಶಾಧಿಕಾರ

2.42 ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳು: ಯುಎಪಿಎ/ರಾಜದ್ರೋಹ/ಎನ್‌ಎಸ್‌ಎಗಳನ್ನು ನೂರಾರು ಜನಗಳನ್ನು ಸರಿಯಾದ ಆರೀಪಗಳನ್ನು ಹಾಕದೆ ಮನಬಂದಂತೆ ಸ್ಥಾನಬದ್ಧತೆಯಲ್ಲಿಡಲು ಉಪಯೋಗಿಸಲಾಗುತ್ತಿದೆ. ಈ ಕರಾಳ ಅಂಶಗಳನ್ನು ನಿರ್ದಿಷ್ಟವಾಗಿ ಗುರಿಯಾಗಿಸುವ ಅಲ್ಪಸಂಖ್ಯಾತರ ಮೇಲಷ್ಟೇ ಅಲ್ಲ, ಭಿನ್ನಮತವಿರುವ ಅಥವಾ ಸರಕಾರದ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಪತ್ರಕರ್ತರು ಮತ್ತು ಇತರರ ಮೇಲೂ ಪ್ರಯೋಗಿಸಲಾಗುತ್ತಿದೆ. ಭಿನ್ನಾಭಿಪ್ರಾಯಗಳನ್ನು ದೇಶವಿರೋಧಿ ಎಂದು ಪರಿಗಣಿಸಲಾಗುತ್ತಿದೆ. ಸಿ.ಎ.ಎ. ವಿರುದ್ಧ ಹೋರಾಟ ಮಾಡಿದವರ ಮೇಲೆ ಅದರಲ್ಲಿಯೂ ಯುವಜನರ ಮೇಲೆ, ದೆಹಲಿ ಕೋಮುಹಿಂಸೆಯ ಸಂತ್ರಸ್ಥರ ಮೇಲೆ, ಅವರಿಗೆ ಬೆಂಬಲ ಸೂಚಿಸಿದವರ ಮೇಲೆ ಕರಾಳ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ. ದುರುದ್ದೇಶಪೂರ್ವಕವಾಗಿಯೇ ತಯಾರಿಸಿದ ಭೀಮಾ ಕೊರೆಗಾಂವ್ ಪ್ರಕರಣದಲ್ಲಿ 16 ಜನ ಬೌದ್ಧಿಕ ವಲಯದ ವ್ಯಕ್ತಿಗಳು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಯು.ಎ.ಪಿ.ಎ. ಅಡಿಯಲ್ಲಿ ಬಂಧನದಲ್ಲಿ ಇಡಲಾಗಿದೆ. ಫಾದರ್ ಸ್ಟ್ಯಾನ್ ಸ್ವಾಮಿ ಬಂಧನದಲ್ಲಿಯೇ ನಿಧನರಾದರೆ, ಇಬ್ಬರನ್ನು ಹೊರತುಪಡಿಸಿ ಉಳಿದವರು ಜೈಲಿನಲ್ಲಿಯೇ ಸೊರಗುತ್ತಿದ್ದಾರೆ. 2015 ರಿಂದ 2019 ರ ಅವಧಿಯಲ್ಲಿ ಯು.ಎ.ಪಿ.ಎ. ಪ್ರಕರಣಗಳಲ್ಲಿ 72% ಏರಿಕೆಯಾಗಿದೆ. ಆದರೆ ಶಿಕ್ಷೆಯ ಪ್ರಮಾಣ ಕೇವಲ 2%.

2.43 ಒಟ್ಟಾರೆಯಾಗಿ ನಿರಂಕುಶಾಧಿಕಾರಶಾಹಿಯ ಕ್ರೋಡೀಕರಣವಾಗಿದೆ. ಫಲಿತಾಂಶವಾಗಿ, ಸಂವಿಧಾನ ನೀಡಿದ ಖಾತ್ರಿಗಳನ್ನು ದುರ್ಬಲಗೊಳ್ಳುತ್ತಿದೆ ಮತ್ತು ಜನರ ಪ್ರಜಾಪ್ರಭುತ್ವ ಹಕ್ಕುಗಳು ಹಾಗೂ ನಾಗರಿಕ ಸ್ವಾತಂತ್ರ್ಯಗಳ ಮೇಲೆ ದಾಳಿಗೆ ಕಾರಣವಾಗುತ್ತಿದೆ.

ಕಣ್ಗಾವಲು ಪ್ರಭುತ್ವದ ಶಿಲ್ಪರಚನೆ

2.44 ಮೋದಿ ಸರಕಾರ ದೇಶದ ನಾಗರಿಕರ ಖಾಸಗಿತ್ವದೊಳಗೆ ನಿರಂತರವಾಗಿ ಅತಿಕ್ರಮಣ ಮಾಡುವ ಒಂದು ಕಣ್ಗಾವಲಿನ ಪ್ರಭುತ್ವದ ಚೌಕಟ್ಟನ್ನು ಸಜ್ಜುಗೊಳಿಸಿದೆ.

2.45 ಭಾರತದಲ್ಲಿ ಈಗಿರುವ ಡಿಜಿಟಲ್ ಕಣ್ಗಾವಲು ಮೂಲರಚನೆಯ ಮೂಲಕ, ಹಲವಾರು ಕಾನೂನು ಜಾರಿ ಸಂಸ್ಥೆಗಳು ನಮ್ಮ ಡಿಜಿಟಲ್ ದತ್ತಾಂಶಗಳನ್ನು ಪಡೆಯಬಹುದಾಗಿದೆ. ಈ ಮೂಲ ಸೌಕರ್ಯಗಳೆಂದರೆ- ‘ಸೆಂಟ್ರಲ್ ಮಾನಿಟರಿಂಗ್ ಸಿಸ್ಟಮ್’ ಟೆಲಿಕಾಂ ನಿಗಾವಣೆಗಾಗಿ, ನೆಟ್‌ವರ್ಕ್ ಟ್ರಾಫಿಕ್ ಅನಲಿಸಿಸ್(ನೇತ್ರ-ಎನ್.ಇ.ಟಿ.ಆರ್.ಎ.) ಅಂತರ್ಜಾಲ ವಿಶ್ಲೇಷಣೆಗಾಗಿ, ಎನ್‌ಎಟಿಗ್ರಿಡ್- ಕಣ್ಗಾವಲು ದತ್ತಾಂಶ ನೆಲೆಗಳ ಒಂದು ರಾಷ್ಟ್ರೀಯ ಗ್ರಿಡ್, ಮತ್ತು ಇಂಟಿಗ್ರೇಟೆಡ್ ಕ್ರಿಮಿನಲ್ ಜಸ್ಟೀಸ್ ಸಿಸ್ಟಮ್(ಐ.ಸಿ.ಜೆ.ಎಸ್.) ಇವು ಡಿ.ಎನ್.ಎ, ಫೇಶಿಯಲ್ ರೆಕಗ್ನಿಷನ್(ಚಹರೆಯಿಂದ ಗುರುತಿಸುವುದು), ಬಯೋಮೆಟ್ರಿಕ್ಸ್ ಮತ್ತು ಐಡೆಂಟಿಟಿ ದತ್ತಾಂಶಗಳನ್ನು ಹೊಂದಿವೆ.

2.46 ಸರಕಾರವು ಜನರ ದತ್ತಾಂಶಗಳನ್ನು, ತೆರಿಗೆ ತುಂಬುವುದು, ಆಧಾರ್ ಮುಂತಾದ ಡಿಜಿಟಲ್ ಗುರುತುಗಳಿಗೆ ಜೋಡಿಸುವ ರೇಷನ್ ಕಾರ್ಡುಗಳ ಮೂಲಕ ರೇಷನ್ ಒದಗಿಸುವುದು ಇತ್ಯಾದಿ ತನ್ನ ಸೇವೆಗಳನ್ನು ಒದಗಿಸುವಾಗ ವಿವಿಧ ಅಪ್ಲಿಕೇಷನ್‌ಗಳ ಮೂಲಕ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಕೂಡ ಜನಗಳ ದತ್ತಾಂಶಗಳನ್ನು ಸಂಗ್ರಹಿಸುತ್ತದೆ. ಹೀಗೆ ಸಂಗ್ರಹಿಸಿದ ದತ್ತಾಂಶಗಳು ಕಾನೂನು ಬದ್ಧವಾಗಿವೆ, ಸಂಗ್ರಹವಾದ ಉದ್ದೇಶಕ್ಕೆ ಮಾತ್ರ ಬಳಕೆಯಾಗುತ್ತವೆ ಮತ್ತು ಯಾವುದೇ ಕಾರಣಕ್ಕೂ ಅದರ ದುರ್ಬಳಕೆಯಾಗುವುದಿಲ್ಲ ಮುಂತಾದವುಗಳನ್ನು ನೋಡಿಕೊಳ್ಳುವ ಯಾವುದೇ ಸುರಕ್ಷಾ ಕ್ರಮಗಳೇ ಇಲ್ಲದೆ ಇದನ್ನು ಮಾಡಲಾಗುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಖಾಸಗೀಯವರಿಗೆ ಈ ದತ್ತಾಂಶಗಳನ್ನು ಲಭ್ಯವಾಗುವಂತೆ ಮಾಡಿ ಅವರ ಉದ್ದಿಮೆಯ ವೃದ್ದಿಗೆ ಅದನ್ನು ಬಳಸಿಕೊಳ್ಳಲು ಸರಕಾರ ಯೋಜಿಸುತ್ತಿದೆ. ಈ ರೀತಿಯ ಡಿಜಿಟಲ್ ವೇದಿಕೆಗಳು ಮತ್ತು ಅಪ್ಲಿಕೇಷನ್‌ಗಳ ಮೂಲಕ ಸಂಗ್ರಹಿಸಿದ ದತ್ತಾಂಶಗಳನ್ನು ಈಗಾಗಲೇ ಇರುವ ಡಿಜಿಟಲ್ ಕಣ್ಗಾವಲು ಮೂಲರಚನೆಗಳ ಜೊತೆ ಜೋಡಿಸುವುದು ಎಂದರೆ, ಅದು ನಾಗರಿಕರ ವೈಯಕ್ತಿಕ ಖಾಸಗಿತ್ವ ಮತ್ತು ನಾಗರಿಕ ಸ್ವಾತಂತ್ರ್ಯಗಳಿಗೆ ಬೆದರಿಕೆ ಒಡ್ಡಿದಂತೆ ಆಗುತ್ತದೆ. ಖಾಸಗಿತ್ವ ವ್ಯಕ್ತಿಯೊಬ್ಬರ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟು ಹೇಳಿದೆಯಾದರೂ, ಜಂಟಿ ಸಂಸದೀಯ ಸಮಿತಿಯು ಸಿದ್ಧಗೊಳಿಸಿರುವ ಕರಡು ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ 2019, ಅಕ್ರಮ ಕಣ್ಗಾವಲು ಮತ್ತು ದತ್ತಾಂಶದ ದುರ್ಬಳಕೆಯಿಂದ ನಾಗರಿಕರನ್ನು ರಕ್ಷಣೆ ಮಾಡುವಂತೆ ಇಲ್ಲ. ನಾಗರಿಕರ ಮೇಲೆ ಸರಕಾರ ಹೊಂದಿರಬಹುದಾದ ಹಿಡಿತಗಳು ಒಂದು ಕಾನೂನಾತ್ಮಕ ಚೌಕಟ್ಟಿನೊಳಗೆ ಇರಬೇಕೆಂಬ ಶ್ರೀಕೃಷ್ಣ ಆಯೋಗದ ವರದಿಯನ್ನು ನಿರ್ಲಕ್ಷಿಸಿರುವ ಪ್ರಸ್ತಾವಿತ ಕಾಯಿದೆಯು, ಎಲ್ಲ ನಿಬಂಧನೆಗಳಿಂದ ಸಂಪೂರ್ಣ ವಿನಾಯಿತಿ ಪಡೆದಿರುವ ಸರಕಾರೀ ಏಜೆನ್ಸಿಗಳಿಗೆ ಈ ಮಸೂದೆಯು ವಿಪರೀತ ಅಧಿಕಾರವನ್ನು ಒದಗಿಸುತ್ತದೆ.

2.47 ನಾಗರಿಕರ ಮೂಲಭೂತ ಹಕ್ಕುಗಳು ಮತ್ತು ಖಾಸಗಿತ್ವಕ್ಕೆ ಒದಗುವ ಅಪಾಯಗಳು ಪೆಗಾಸೆಸ್ ಸ್ಪೈವೇರ್(ಬೇಹುಗಾರಿಕೆ ತಂತ್ರಾಂಶ) ಬಳಕೆ ವಿಷಯ ಬಹಿರಂಗವಾಗುವ ಮೂಲಕ ಹೊರಬಿದ್ದಿವೆ. ವಿರೋಧ ಪಕ್ಷದ ನಾಯಕರು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರ ದೂರವಾಣಿಗಳನ್ನು ಕದ್ದಾಲಿಸಲು ಬೇಹುಗಾರಿಕೆ ತಂತ್ರಾಂಶವನ್ನು ಬಳಸಲಾಗಿದೆ. ಪೆಗಾಸೆಸ್ ಸ್ಪೈವೇರ್ ನ್ನು ಪೂರೈಕೆ ಮಾಡಿದ ಇಸ್ರೇಲಿನ ಕಂಪೆನಿಯಾಗಿರುವ ಎನ್‌.ಎಸ್.ಓ. ತಾನು ಪೆಗಾಸಸ್ ಸ್ಪೈವೇರನ್ನು ಸರಕಾರಿ ಏಜೆನ್ಸಿಗಳಿಗೆ ಮಾತ್ರವೇ ಪೂರೈಕೆ ಮಾಡಿರುವುದಾಗಿ ಮತ್ತೆ ಮತ್ತೆ ಹೇಳುತ್ತಲೇ ಇದ್ದಾಗ್ಯೂ ಸರಕಾರವು ಸುಪ್ರಿಂಕೋರ್ಟಿನ ಮುಂದೆ ಕೂಡಾ ಅದನ್ನು ಒಪ್ಪಿಕೊಳ್ಳಲು ಸಿದ್ಧವಾಗಿಲ್ಲ. ಭಾರತದಲ್ಲಿ ಪೆಗಾಸೆಸ್ ಸ್ಪೈವೇರ್ ಬಳಕೆಯಾಗಿದೆಯೋ ಎಂಬುದನ್ನು ತನಿಖೆ ಮಾಡಲು ಸುಪ್ರಿಂ ಕೋರ್ಟು ಒಂದು ಸಮಿತಿಯನ್ನು ನೇಮಕ ಮಾಡಿದೆ.

2.48 ವೈಯಕ್ತಿಕ ದತ್ತಾಂಶ ರಕ್ಷಣಾ ಕಾನೂನಿನಲ್ಲಿ ಸರಕಾರೀ ಏಜೆನ್ಸಿಗಳಿಗೆ ಕೊಟ್ಟಿರುವ ಪ್ರಸ್ತಾವಿತ ವಿನಾಯತಿಗಳು ಸರಕಾರಕ್ಕೆ ಕಣ್ಗಾವಲು ಆಡಳಿತವನ್ನು ಸ್ಥಾಪಿಸಲು ಇನ್ನಷ್ಟು ಬಲ ನೀಡುತ್ತದೆ ಮತ್ತು ಇದು ದೇಶದ ಜನರ ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುತ್ತದೆ. ಮುಂದಿನ ದಿನಗಳಲ್ಲಿ ಒಂದು ಪೂರ್ಣಪ್ರಮಾನದ ವೈಯಕ್ತಿಕ ದತ್ತಾಂಶ ರಕ್ಷಣಾ ಖಾಸಗಿತ್ವ ಕಾನೂನಿಗಾಗಿ ಮತ್ತು ಸರಕಾರದ ಅಕ್ರಮ ಕಣ್ಗಾವಲು ತಡೆಯಲು ಹೋರಾಟವನ್ನು ಮುಂದಕ್ಕೊಯ್ಯಬೇಕು.

ಒಕ್ಕೂಟ ತತ್ವವನ್ನು ದುರ್ಬಲಗೊಳಿಸಲಾಗುತ್ತಿದೆ

2.49  ಇತ್ತೀಚಿನ ವರ್ಷಗಳಲ್ಲಿ ಶೈಕ್ಷಣಿಕ, ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಒಕ್ಕೂಟ ತತ್ವದ ಮೇಲೆ ಅವ್ಯಾಹತವಾಗಿ ಸರ್ವತೋಮುಖ ದಾಳಿಗಳು ನಡೆಯುತ್ತಿವೆ.

2.50 ರಾಜ್ಯಪಾಲರು ಮತ್ತು ಉಪರಾಜ್ಯಪಾಲರುಗಳ ಪಾತ್ರಗಳು ಎಲ್ಲ ಸಾಂವಿಧಾನಿಕ ಯುಕ್ತತೆಗಳನ್ನು ಮೀರಿ ಹೋಗುತ್ತಿವೆ. ಅವರುಗಳು ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಬಿಜೆಪಿಯ ಕಾರ್ಯಸೂಚಿಗಳ ವಿಸ್ತಾರಕರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.

2.51 ಕೇಂದ್ರ ಸರಕಾರವು, ಸಂವಿಧಾನವು ರಾಜ್ಯಗಳ ಮತ್ತು ಸಮವರ್ತಿ ಪಟ್ಟಿಗಳ ಅಡಿಯಲ್ಲಿ ಇಟ್ಟಿರುವ ಎಲ್ಲ ವಿಷಯಗಳಿಗೂ ಸಂಬಂಧಿಸಿದಂತೆ ಶಾಸನಗಳನ್ನು ಸತತವಾಗಿ ರಾಜ್ಯಗಳ ಹಕ್ಕುಗಳಲ್ಲಿ ಅತಿಕ್ರಮಣ ನಡೆಸುತ್ತಿದೆ. ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದೆ. ಆದರೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಾವುದೇ ರಾಜ್ಯ ಸರಕಾರಗಳ ಜೊತೆ ಸಮಾಲೋಚಿಸದೇ ಏಕಪಕ್ಷೀಯವಾಗಿ ಪ್ರಕಟಿಸಲಾಗಿದೆ. ಮೂರು ಪ್ರತಿಗಾಮಿ ಕೃಷಿ ಕಾನೂನುಗಳನ್ನೂ ರಾಜ್ಯಗಳ ಜೊತೆ ಸಮಾಲೋಚಿಸದೇ ಜಾರಿಮಾಡಲಾಯಿತು. ಗ್ರಾಮೀಣಾಭಿವೃದ್ದಿಯ ಅಡಿಯಲ್ಲಿ ಬರುವ ಕೇಂದ್ರದಿಂದ ಪ್ರಾಯೋಜಿಸಲ್ಪಡುವ ವಿವಿಧ ಯೋಜನೆಗಳನ್ನೂ ಹೀಗೆಯೇ ಜಾರಿಗೆ ತರಲಾಗಿದೆ. ಸಹಕಾರಿ ವಲಯವೂ ರಾಜ್ಯಗಳ ವಿಷಯವಾಗಿದ್ದರೂ, ಕೇಂದ್ರ ಸರಕಾರದಲ್ಲಿ ಸಹಕಾರೀ ಸಚಿವಾಲಯವನ್ನು ರಚಿಸಿರುವುದು ರಾಜ್ಯದ ಹಕ್ಕುಗಳ ಮೇಲೆ ಒಂದು ಲಜ್ಜೆಗೆಟ್ಟ ಅತಿಕ್ರಮಣವಾಗಿದೆ.

2.52 ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜ್ಯ ಸರ್ಕಾರಗಳ ಸ್ವಾಯತ್ತ ಅಧಿಕಾರವನ್ನು ನಿರಂತರವಾಗಿ ಹಿಂಡಿಹಾಕಲಾಗುತ್ತಿದೆ. ಕೇಂದ್ರದ ಒಕ್ಕೂಟ ಸರಕಾರವು, ಸಂವಿಧಾನದ 8ನೇ ಷೆಡ್ಯೂಲ್‌ನಲ್ಲಿ ಪಟ್ಟಿ ಮಾಡಲಾದ ಎಲ್ಲ ರಾಷ್ಟ್ರೀಯ ಭಾಷೆಗಳಿಗೆ ಸಮಾನ ಸ್ಥಾನಮಾನವನ್ನು ನಿರಾಕರಿಸಿ ಹಿಂದಿ ಭಾಷೆಯನ್ನು ಪ್ರಜ್ಞಾಪೂರ್ವಕವಾಗಿ ಪ್ರೋತ್ಸಾಹಿಸುತ್ತಿದೆ.

2.53 ವಿತ್ತೀಯ ಒಕ್ಕೂಟತತ್ವ: ಜಿ.ಎಸ್.ಟಿ. ಜಾರಿಯೊಂದಿಗೆ ಬಿಜೆಪಿ ಆಳ್ವಿಕೆಯಲ್ಲಿ ರಾಜ್ಯಗಳ ಆರ್ಥಿಕ ಅವಕಾಶವನ್ನು ಅತೀವವಾಗಿ ಹಿಂಡಿಹಾಕಲಾಗಿದೆ. ರಾಜ್ಯಗಳು ತೆರಿಗೆ ವಿಧಿಸುವ ಅಧಿಕಾರಗಳನ್ನು ಕಳಕೊಂಡಿವೆಯಲ್ಲದೇ, ಜಿ.ಎಸ್.ಟಿ.ಯಲ್ಲಿ ಭಾರದ ಕೊರತೆಯಿಂದಾಗಿ ಅಪಾರ ರೆವಿನ್ಯೂ ನಷ್ಟವನ್ನೂ ಅನುಭವಿಸುತ್ತಿವೆ. ಇತ್ತೀಚಿನ ರಾಜ್ಯ ಚುನಾವಣೆಗಳ ಕೊನೆಯ ಸುತ್ತಿನ ಸ್ವಲ್ಪ ಮೊದಲು ಜಿ.ಎಸ್.ಟಿ. ದರಗಳನ್ನು ರೆವಿನ್ಯೂ-ತಟಸ್ಥ ಮಟ್ಟಗಳಿಗಿಂತ ಕೆಳಕ್ಕೆ ಇಳಿಸಲಾಯಿತು. ರಾಜ್ಯಗಳಿಗೆ ಜಿ.ಎಸ್.ಟಿ. ಪರಿಹಾರವನ್ನು ಕೊಡುವಲ್ಲಿ ವಿಳಂಬ ಮಾಡಲಾಗುತ್ತಿದೆ. ಬಹುತೇಕ ಬಾಕಿ ಉಳಿದಿದೆ. ಪರಿಹಾರ ನೀಡಿಕೆಗೆ ಇರುವ 5 ವರ್ಷಗಳ ಅವಧಿಯು 2022ಕ್ಕೆ ಕೊನೆಯಾಗಲಿದ್ದು ಅದನ್ನು ಮುಂದುವರೆಸಲು ಕೇಂದ್ರವು ನಿರಾಕರಿಸುತ್ತಿದೆ. ಇದರಿಂದ ಹಲವು ರಾಜ್ಯಗಳಿಗೆ ಸಂಪನ್ಮೂಲ ಕುಸಿತವನ್ನು ಎದುರಿಸಬೇಕಾದ ಸ್ಥಿತಿ ಸನ್ನಿಹಿತವಾಗುತ್ತಿದೆ.

2.54 ಇದಲ್ಲದೆಯೇ, ಕೇಂದ್ರವು ಸಂಗ್ರಹಿಸುವ ಪರೋಕ್ಷ ತೆರಿಗೆಗಳ ನ್ಯಾಯಯುತ ಪಾಲನ್ನು ಕೂಡ ರಾಜ್ಯಗಳಿಗೆ ವಂಚಿಸುತ್ತಿದೆ. ಏಕೆಂದರೆ, ಕೇಂದ್ರವು ಸೆಸ್ ಮತ್ತು ಹೆಚ್ಚುವರಿ ಶುಲ್ಕಗಳ ಮೇಲೆ ಅವಲಂಬಿಸಿರುತ್ತದೆ. ಹೀಗೆ ಬರುವ ಆದಾಯಗಳನ್ನು, ರಾಜ್ಯಗಳ ಪಾಲು 42% ಇರುವ ವಿಂಗಡಿಸಬಹುದಾದ ತೆರಿಗೆ ಸಂಗ್ರಹದಿಂದ ಹೊರಗಿಡುತ್ತದೆ.. ರಾಜ್ಯಗಳ ತೆರಿಗೆ ಆದಾಯಗಳ ಪಾಲನ್ನು ವಂಚಿಸುವ ಈ ಪ್ರಕ್ರಿಯೆಯನ್ನು ಒಪ್ಪಿಕೊಳ್ಳತಕ್ಕಂತದ್ದಲ್ಲ.

2.55  ಯೋಜನಾ ಆಯೋಗವನ್ನು ಕಿತ್ತು ಹಾಕಿ, ಯಾವುದೇ ಹೊಸ ಯೋಜನೆಗಳ ವೆಚ್ಚದ ಅಗಾಧ ಮೊತ್ತವನ್ನು ಸಂಪೂರ್ಣವಾಗಿ ಕೇಂದ್ರ ಹಣಕಾಸು ಇಲಾಖೆಯ ವಿವೇಚನೆಗೆ ಒಳಪಡಿಸಿರುವುದು ಯೋಜನಾಹೀನತೆ ಮತ್ತು ಸಮತ್ವದ ಕೊರತೆಗೆ ಸಂಬಂಧಪಟ್ಟ ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿದೆ. ಕೇಂದ್ರ ಸರಕಾರ ರಾಜ್ಯಗಳ ಅಧಿಕಾರ ವ್ಯಾಪ್ತಿಯಲ್ಲಿ ಬರುವ ವಿಷಯಗಳ ಮೇಲೆ ಯಾವುದೇ ಒಕ್ಕೂಟ ಸಮಾಲೋಚನೆ ನಡೆಸದೆ ಮುಕ್ತ ವ್ಯಾಪಾರ ಪ್ರದೇಶಗಳಂತಹ ಅಂತರ‍್ರಾಷ್ಟ್ರೀಯ ಸಂಧಿಗಳಿಗೆ ಸಹಿಗಳನ್ನೂ ಹಾಕುತ್ತಿದೆ.

2.56 ಬಿಜೆಪಿಯೇತರ ಸರಕಾರಗಳು ಮತ್ತು ಇತರ ಎಲ್ಲ ಪ್ರಜಾಸತ್ತಾತ್ಮಕ ಶಕ್ತಿಗಳು ಒಕ್ಕೂಟ ತತ್ವದ ಮೇಲೆ ಇಂತಹ ಪ್ರಹಾರಗಳನ್ನು ಪ್ರತಿರೋಧಿಸಲು ಮತ್ತು ರಾಜ್ಯಗಳ ಹಕ್ಕುಗಳ ರಕ್ಷಣೆಗೆ ಒಟ್ಟುಗೂಡಬೇಕು. ನಮ್ಮ ಸಂವಿಧಾನದ ಮೂಲತತ್ವವಾದ ಒಕ್ಕೂಟ ವ್ಯವಸ್ಥೆಯನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳುವುದು ನಿರಂಕುಶಶಾಹೀ ಕೇಂದ್ರೀಕರಣದ ವಿರುದ್ಧದ ಹೋರಾಟದ ಭಾಗವಾಗಿದೆ.

ಕುಸಿಯುತ್ತಿರುವ ಮಹಿಳೆಯರ ಸ್ಥಾನಮಾನ

2.57 ಆರ್ಥಿಕ ಸಂಕಷ್ಟದ ಬಿಸಿಯನ್ನು ಮಹಿಳೆಯರು ತೀವ್ರವಾಗಿ ಅನುಭವಿಸುತ್ತಿದ್ದಾರೆ. ಬಹುತೇಕ ಮಹಿಳೆಯರೇ ಕೆಲಸ ಮಾಡುವ ಅಸಂಘಟಿತ ವಲಯದಲ್ಲಿ ಆದಾಯದ ದಾರಿಗಳನ್ನು ಕಳಕೊಂಡಿರುವವರಲ್ಲಿ ಮಹಿಳೆಯರ ಶೇಕಡಾವಾರು ಹೆಚ್ಚಿದೆ. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವೆಚ್ಚದಲ್ಲಿ ಮಾಡುವ ಕಡಿತ, ವಿಶೇಷವಾಗಿ ಗ್ರಾಮೀಣ ಮಹಿಳೆಯರನ್ನು ತೀವ್ರವಾಗಿ ಬಾಧಿಸಿದೆ. ಅವರಿಗೆ ಅದೊಂದು ಬದುಕಿನ ಆಸರೆ. ಅತ್ಯಂತ ಕೆಟ್ಟ ಲಿಂಗ ಅಂತರ ಸೂಚ್ಯಂಕಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಯಾವ ಕಾಲಘಟ್ಟದಲ್ಲಿ ಉದ್ಯೋಗ ಮತ್ತು ಕೂಲಿ ತೀರಾ ಅಗತ್ಯವಿದೆಯೋ ಅಂಥಹ ಸಂದರ್ಭದಲ್ಲಿ ಉದ್ಯೋಗದ ಅವಕಾಶದ ಕೊರತೆ ಮಹಿಳೆಯರನ್ನು ದುಡಿಮೆಗಾರರ ಪಡೆಯಿಂದ ಹೊರತಳ್ಳುತ್ತಿದೆ. ತದ್ವಿರುದ್ಧವಾಗಿ, ಕೂಲಿಯಿಲ್ಲದ ಕೆಲಸದ ಹೊರೆ-ಗೃಹಕೃತ್ಯದಲ್ಲೂ ಮತ್ತು ಕುಟುಂಬದ ಒಡೆತನದ ಉದ್ದಿಮೆಗಳಲ್ಲಿಯೂ ತೀವ್ರ ಹೆಚ್ಚಿದೆ. ಪಿತೃಪ್ರಧಾನ ವಿಧಿನಿಯಮಗಳಿಂದಾಗಿ ಕುಟುಂಬದ ನಿರ್ವಹಣೆಯ ಮುಖ್ಯ ಹೊರೆ ಹೆಣ್ಣಿನ ಮೇಲೇ ಇರುವುದರಿಂದ, ಬೆಲೆ ಏರಿಕೆಗಳು, ನೀರು, ವಿದ್ಯುತ್ ಬಳಕೆಯ ದರಗಳಲ್ಲಿ ಆಗಿರುವ ಹೆಚ್ಚಳಗಳು ಕುಟುಂಬ ನಿರ್ವಹಣೆಯನ್ನು ವಿಪರೀತವಾಗಿ ತಟ್ಟಿವೆ. ಇದರಿಂದಾಗಿ ಅವರು ಕುಟುಂಬದ ಉಳಿವಿಗಾಗಿ ತಮ್ಮ ಅಗತ್ಯಗಳಲ್ಲಿ ಕಡಿತ ಮಾಡಿಕೊಳ್ಳುತ್ತಾರೆ. ನಿರ್ದಿಷ್ಟವಾಗಿ ಒಂಟಿ ಮಹಿಳೆಯರು ಮತ್ತು ಮಹಿಳಾ ಮುಖ್ಯಸ್ಥಿಕೆಯ ಕುಟುಂಬಗಳ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಈ ವಿಭಾಗಗಳಿಗೆ ಸರಕಾರದ ಯೋಜನೆಗಳ ಯಾವ ನೆರವೂ ಸಿಗುವುದಿಲ್ಲ. ಸಂಸಾರವನ್ನು ನಡೆಸಿಕೊಂಡು ಹೋಗಲು ತಮ್ಮಲಿರುವ ಅಲ್ಪಸ್ವಲ್ಪವನ್ನೂ ಸುಲಿಗೆಕೋರ ಲೇವಾದೇವಿಗಾರರಿಗೆ ಮತ್ತು ಎಂ.ಎಫ್.ಐ.ಗಳಿಗೆ ಅಡ ಇಡುವ ಸ್ಥಿತಿಗೆ ಇವರು ತಳ್ಳಲ್ಪಟ್ಟಿದ್ದಾರೆ.

2.58 ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳಲ್ಲಿ ಈ ಅವಧಿಯಲ್ಲಿ ಭಾರೀ ಹೆಚ್ಚಳವಾಗಿದೆ. ಅತ್ಯಂತ ಬರ್ಬರ ಕ್ರೌರ್ಯವನ್ನು ಮೆರೆದ ಹಲವು ಪ್ರಕರಣಗಳು ವರದಿಯಾಗಿವೆ. ಸಾಂಕ್ರಾಮಿಕದ ಹೊತ್ತಿನಲ್ಲಿ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯಗಳು ಹೆಚ್ಚಿವೆ. ಹಲವು ಪ್ರಕರಣಗಳಲ್ಲಿ ಸಂತ್ರಸ್ತೆಯರನ್ನೇ ದೂಷಿಸುವ, ದೂರುವ ಪೃವೃತ್ತಿಗಳು, ಅಪರಾಧವನ್ನೇ ಸಮರ್ಥಿಸುತ್ತ, ಬಿ.ಜೆ.ಪಿ.ಯ ನಾಯಕರೇ ಸಂತ್ರಸ್ಥೆಯರನ್ನು ಕಂಗೆಡಿಸುವ ರೀತಿಯ ಅತ್ಯಂತ ಆಕ್ಷೇಪಾರ್ಹ ಹೇಳಿಕೆಗಳನ್ನು ಕೊಟ್ಟಿದ್ದಿದೆ. ಬಿಜೆಪಿಯ ಆಳ್ವಿಕೆಯ ರಾಜ್ಯಗಳು ದುರ್ಬಲವಾದ ತನಿಖಾ ವ್ಯವಸ್ಥೆ ಮತ್ತು ತೀರಾ ಕಡಿಮೆ ಶಿಕ್ಷೆಯ ಪ್ರಮಾಣಕ್ಕೆ ಕುಖ್ಯಾತವಾಗಿವೆ. ಆಘಾತಕಾರಿ ಸಂಗತಿ ಎಂದರೆ, ಸಂತ್ರಸ್ಥರ ಪುನರ್ವಸತಿಗಾಗಿ ಇಟ್ಟ ಹಣದ ದುರ್ಬಳಕೆಯಾಗುತ್ತದೆ ಇಲ್ಲವೇ ವೆಚ್ಚವೇ ಆಗದೆ ಲುಪ್ತಗೊಳ್ಳುತ್ತದೆ.

2.59 ಪಿತೃಪ್ರಧಾನ, ಕೋಮುವಾದೀ, ಜಾತೀವಾದೀ ಆಚರಣೆಗಳನ್ನು ಪ್ರೋತ್ಸಾಹಿಸುವ, ಮಹಿಳೆಯರನ್ನು ಮನೆಯೊಳಗಿನ ಪಾತ್ರಗಳಲ್ಲಿ ಬಂಧಿಯಾಗಿಸುವ ಪ್ರತಿಗಾಮೀ ಮನುವಾದೀ ಸಿದ್ದಾಂತಗಳನ್ನು ಆರ್.ಎಸ್.ಎಸ್ ಮತ್ತು ಅದರ ಅಂಗಸಂಸ್ಥೆಗಳು ಸಕ್ರಿಯವಾಗಿ ಪ್ರೋತ್ಸಾಹಿಸುತ್ತವೆ. ಈ ನಿಲುವುಗಳು ಮಹಿಳೆಯರಿಗೆ ತಮ್ಮ ದೇಹದ ಮೇಲಿನ ಅಧಿಕಾರವನ್ನೂ ಕಿತ್ತುಕೊಳ್ಳುವ ಬಲವಂತದ ಜನಸಂಖ್ಯಾ ನೀತಿಗಳು, ಮಹಿಳೆಯರಿಗೆ ರಕ್ಷಣೆ ನೀಡುವ  498ಎ  ಮುಂತಾದ ಜಾತ್ಯತೀತ ಕಾನೂನುಗಳನ್ನು ದುರ್ಬಲಗೊಳಿಸುವುದು, ಸ್ವಂತ ಆಯ್ಕೆಯ ಮದುವೆಗಳ ವಿರುದ್ಧ ಅತ್ಯಂತ ಹಿಂಸಾತ್ಮಕ ಪ್ರಚಾರಗಳನ್ನು ನಡೆಸಿ ಹೆಣ್ಣಿನ ಆಯ್ಕೆ ಸ್ವಾತಂತ್ರವನ್ನು ಹತ್ತಿಕ್ಕುವುದು ಮತ್ತು ಮರ್ಯಾದೆ ಹೆಸರಿನ ಹತ್ಯೆಗಳನ್ನು ಸಮರ್ಥಿಸಿಕೊಳ್ಳುವ ಸಂಸ್ಕೃತಿಗಳಿಗೆ ಕೃಪಾಪೋಷಣೆಯಲ್ಲಿ ಕಾಣಿಸುತ್ತವೆ. ಅಲ್ಪಸಂಖ್ಯಾತ ಮತ್ತು ದಲಿತ ಮಹಿಳೆಯರು ನಿರ್ದಿಷ್ಟವಾಗಿ ಈ ಅವಧಿಯಲ್ಲಿ ತೀವ್ರ ಪೀಡನೆಗೆ ಒಳಗಾಗಿದ್ದಾರೆ. ಹೀಗೆ, ಮಹಿಳಾ ಸಮಾನತೆಗಾಗಿ ಹೋರಾಟ ಇಂದು ಲಿಂಗ ಸಮಾನತೆಗೆ ಸಂಬಂಧಪಟ್ಟಂತೆ ಬಿ.ಜೆ.ಪಿ. ಮತ್ತು ಆರ್.ಎಸ್.ಎಸ್. ನವರ ಸಿದ್ಧಾಂತ ಮತ್ತು ಆಚರಣೆಯ ವಿರುದ್ಧ ಹೋರಾಟದೊಂದಿಗೆ ನೇರವಾಗಿ ತಳಕು ಹಾಕಿಕೊಂಡಿದೆ.

ಸಾಮಾಜಿಕ ನ್ಯಾಯದ ಮೇಲೆ ದುರ್ದಾಳಿಗಳು

2.60 ಸಂವಿಧಾನದತ್ತ ಸಮಾನತೆಯ ಕಡೆ ಕ್ರಮಿಸುವ ಮತ್ತು ಸಾಮಾಜಿಕವಾಗಿ ತುಳಿತಕ್ಕೆ ಒಳಪಟ್ಟ ಜನಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ದೊರಕಿಸುವತ್ತ ಕೊಂಡೊಯ್ಯುವ ಬದಲು ದಮನಿತರು ಇನ್ನಷ್ಟು ಅನ್ಯಾಯ, ತಾರತಮ್ಯಗಳನ್ನು ಎದುರಿಸುವಂತಾಗಿದೆ.

2.61 ದಲಿತರು: ಕಳೆದ ಮಹಾಧಿವೇಶನದ ನಂತರದ ಅವಧಿಯಲ್ಲಿ ಮನುವಾದೀ ಮತ್ತು ಸಂವಿಧಾನ ಬಾಹಿರ ನೀತಿಗಳನ್ನು ಬಲವಾಗಿ ಪ್ರತಿಪಾದಿಸುವ ಬಿಜೆಪಿ ಸರಕಾರಗಳ ಅಜೆಂಡಾಗಳ ಕಾರಣದಿಂದ ದಲಿತರ ಸ್ಥಿತಿ ತೀರಾ ಹದಗೆಡುತ್ತಿದೆ. ದಲಿತರು ಶೈಕ್ಷಣಿಕ, ಉದ್ಯೋಗದ ಮತ್ತು ಜೀವನೋಪಾಯಗಳ ಅವಕಾಶಗಳಿಂದ ವಂಚಿತರಾಗುತ್ತಲೇ ಇದ್ದಾರೆ. ಕೇಂದ್ರ ಸರಕಾರ ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳಿಗಾಗಿ ಹಣಕಾಸನ್ನು ಹಂಚಿಕೊಳ್ಳುವ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಿದೆ. ಸಾರ್ವಜನಿಕ ವಲಯದ ಖಾಸಗೀಕರಣ, ಸರಕಾರಿ ಇಲಾಖೆಗಳಲ್ಲಿ ನೇಮಕಾತಿಗಳ ಮೇಲೆ ನಿಷೇಧ ಉದ್ಯೋಗಾವಕಾಶಗಳನ್ನು ಮೊಟಕುಗೊಳಿಸಿವೆ. ಖಾಸಗೀ ವಲಯದಲ್ಲಿ ಮೀಸಲಾತಿಯ ಬಗ್ಗೆ ಶಾಸನ ರೂಪಿಸುವ ಪ್ರಯತ್ನಗಳಿಲ್ಲ.

2.62 ನಿರ್ದಿಷ್ಟವಾಗಿ ದಲಿತರ ಮೇಲಿನ ದೌರ್ಜನ್ಯಗಳು, ನಿರ್ದಿಷ್ಟವಾಗಿ ಬಿಜೆಪಿಯ ಆಡಳಿತವಿರುವ ರಾಜ್ಯಗಳಲ್ಲಿ ತೀರಾ ಹೆಚ್ಚಿವೆ. ಹಾಥ್ರಸ್‌ನ ನ ಭಯಂಕರ ಘಟನೆಯಿಂದ ದಲಿತ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲಿನ ಭಯಾನಕ ದೌರ್ಜನ್ಯಗಳ ಅನಾವರಣವಾಗಿದೆ. ಅಲ್ಲಿನ ಬಿ.ಜೆ.ಪಿ. ಸರಕಾರ ತನ್ನೆಲ್ಲ ಅಧಿಕಾರವನ್ನೂ ಬಳಸಿ ಆ ಘಟನೆಯನ್ನು ಮತ್ತು ಆ ಕುಟುಂಬವನ್ನು ಹತ್ತಿಕ್ಕಲು ಮಾಡಿದ ಪ್ರಯತ್ನಗಳು ವಾಸ್ತವ ಸ್ಥಿತಿಯನ್ನು ತೆರೆದಿಡುತ್ತದೆ. ವರ್ಷದಿಂದ ವರ್ಷಕ್ಕೆ ದಲಿತರ ಮೇಲಿನ ದುರ್ದಾಳಿಗಳ ಸಂಖ್ಯೆ ಹೆಚ್ಚುತ್ತಿದೆಯಾದರೂ ಶಿಕ್ಷೆಯ ಪ್ರಮಾಣ ಹೆಚ್ಚುತ್ತಿಲ್ಲ. ವಿವಿಧ ದಲಿತ ಸಂಘಟನೆಗಳ ಹೋರಾಟದ ಫಲವಾಗಿ, ಎಸ್.ಸಿ/ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸುವ ಸುಪ್ರಿಂ ಕೋರ್ಟಿನ ತೀರ್ಪನ್ನು ನಿಷ್ಫಲಗೊಳಿಸಿ ಶಾಸನವನ್ನು ರಚಿಸಲೇಬೇಕಾಗಿ ಬಂತು.

2.63 ಆದಿವಾಸಿಗಳು: ಆರ್.ಎಸ್.ಎಸ್. ಒಂದು ಏಕರೂಪದ ಹಿಂದೂ ಅಸ್ಮಿತೆಯ ಅಡಿಯಲ್ಲಿ ಆದಿವಾಸಿಗಳನ್ನು ಸಮೀಕರಿಸುವ ತನ್ನ ಪ್ರಯತ್ನಗಳನ್ನು ಮಾಡುತ್ತಿದೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಆದಿವಾಸಿ ಪ್ರದೇಶಗಳಲ್ಲಿರುವ ಕ್ರಿಶ್ಚಿಯನ್ನರ ಮೇಲೆ ದಾಳಿಗಳು ನಡೆಯುತ್ತಿವೆ. ಬಿಜೆಪಿ ಸರ್ಕಾರವು ಅರಣ್ಯ ಹಕ್ಕು ಕಾಯಿದೆಯ ನಿಯಮಗಳನ್ನು ದುರ್ಬಲಗೊಳಿಸಿ ಆದಿವಾಸಿಗಳ ನ್ಯಾಯವಾದ ಪಾಲನ್ನು ನಿರಾಕರಿಸುತ್ತಿದೆ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಆದಿವಾಸಿಗಳ ಹಕ್ಕನ್ನು ಅನ್ಯಾಯವಾಗಿ ತಿರಸ್ಕರಿಸಲಾಗುತ್ತಿದೆ. ಗ್ರಾಮ ಸಭಾಗಳಲ್ಲಿ ಆದಿವಾಸಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡದೆ, ಕಾರ್ಪೊರೇಟ್ ಶೋಷಣೆಗೆ ಅವಕಾಶ ಮಾಡಿಕೊಡುತ್ತಿದೆ. ಅರಣ್ಯಗಳನ್ನು ವಾಣಿಜ್ಯೀಕರಿಸಲಾಗುತ್ತಿದೆ, ಖಾಸಗೀಕರಿಸಲಾಗುತ್ತಿದೆ ಮತ್ತು ರಣರಂಗವಾಗಿಸಲಾಗುತ್ತಿದೆ. ಪ್ರಾಜೆಕ್ಟುಗಳ ಹೆಸರಿನಲ್ಲಿ ಸಾವಿರಾರು ಹೆಕ್ಟೇರುಗಳ ಅರಣ್ಯ ಭೂಮಿಯನ್ನು ಬೇರೆಡೆಗೆ ತಿರುಗಿಸಲಾಗುತ್ತಿದೆ. ಅರಣ್ಯಗಳಲ್ಲಿ ದೊರೆಯುವ ವಿಫುಲವಾದ ಅಮೂಲ್ಯ ಖನಿಜ ಸಂಪತ್ತನ್ನು ಲೂಟಿ ಮಾಡಲು ಖಾಸಗಿ ಕಾರ್ಪೊರೇಟ್‌ಗಳಿಗೆ ಬಿಟ್ಟುಕೊಡಲಾಗುತ್ತಿದೆ. ಈ ನೀತಿಗಳ ಪರಿಣಾಮವಾಗಿ, ಆದಿವಾಸಿಗಳನ್ನು ಅಪಾರ ಸಂಖ್ಯೆಯಲ್ಲಿ ಅರಣ್ಯದಿಂದ ಒಕ್ಕಲೆಬ್ಬಿಸಲಾಗುತ್ತಿದೆ. ರೈತರಿಗಿರುವ ಯಾವುದೇ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಸಾಗುವಳಿ ಮಾಡುತ್ತಿರುವ ಆದಿವಾಸಿಗಳಿಗೆ ಸಿಗದಂತೆ ಮಾಡಲಾಗುತ್ತಿದೆ. ಸಣ್ಣ ಅರಣ್ಯ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಪಾವತಿ ಮಾಡಲು ನಿಧಿಗಳು ನಾಚಿಕೆಯಿಲ್ಲದಷ್ಟು ಅಸಮರ್ಪಕವಾಗಿವೆ.

2.64 ಮಹಾಸೋಂಕಿನ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಬಿ.ಜೆ.ಪಿ. ಸರಕಾರದ ವೈಫಲ್ಯದಿಂದ ದೊಡ್ಡ ಸಂಖ್ಯೆಯ ಆದಿವಾಸಿಗಳು ತೀವ್ರ ತೊಂದರೆಗೆ ಒಳಗಾದರು. ಯಾಕೆಂದರೆ ವಲಸೆ ಕಾರ್ಮಿಕರಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆದಿವಾಸಿ ಸಮುದಾಯದ ಜನರಿದ್ದಾರೆ. 95%ಗೂ ಹೆಚ್ಚು ಆದಿವಾಸಿ ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣದ ಅವಕಾಶವೇ ಇಲ್ಲದೇ ವಂಚಿತರಾದರು. ಕೇರಳದ ಎಡರಂಗ ಸರಕಾರವನ್ನು ಹೊರತುಪಡಿಸಿ ಬೇರೆ ಯಾವುದೇ ಸರಕಾರಗಳು ಆದಿವಾಸಿ ಮಕ್ಕಳ ಕಾನೂನಾತ್ಮಕ ಶಿಕ್ಷಣದ ಹಕ್ಕುಗಳನ್ನು ರಕ್ಷಿಸಲು ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಆದಿವಾಸಿ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಕೂಡಾ ನಿಗದಿತವಾಗಿ ಕೇಂದ್ರದ ಸರಕಾರ ನೀಡಲಿಲ್ಲ. ನವ ಉದಾರೀಕರಣ ನೀತಿಯಿಂದಾಗಿ ಶಿಕ್ಷಿತ ಆದಿವಾಸಿ ಯುವಜನರಿಗೆ ಉದ್ಯೋಗಾವಕಾಶವೂ ದೊರೆಯುತ್ತಿಲ್ಲ. ಭರ್ತಿ ಮಾಡದೆ ಬಿಟ್ಟ (ಬ್ಯಾಕ್ ಲಾಗ್) ಹುದ್ದೆಗಳ ಭರ್ತಿಯೂ ಆಗುತ್ತಿಲ್ಲ ಮತ್ತು ಸರಕಾರಿ ಹುದ್ದೆಗಳಲ್ಲಿ ತಾರತಮ್ಯ ಧೋರಣೆಯಿಂದಾಗಿ ಮುಂಬಡ್ತಿಗಳನ್ನೂ ನಿರಾಕರಿಸಲಾಗುತ್ತಿದೆ.

2.65 ಇತರ ಹಿಂದುಳಿದ ಜಾತಿಗಳು: ಬಿ.ಜೆ.ಪಿ. ಸರಕಾರ ತನ್ನ ಪಕ್ಷಪಾತೀ ಹಿತಾಸಕ್ತಿಗಳಿಂದ 2021 ರ ಜನಗಣತಿಯ ಜೊತೆ ಜಾತಿ ಗಣತಿಯನ್ನು ಮಾಡಬೇಕೆಂಬ ಆಗ್ರಹವನ್ನು ಸ್ವೀಕರಿಸಲು ನಿರಾಕರಿಸುತ್ತಿದೆ. ಇತರ ಹಿಂದುಳಿದ ಜಾತಿಗಳ ಕುರಿತು ದತ್ತಾಂಶಗಳು ಲಭ್ಯವಿಲ್ಲದ ಕಾರಣದಿಂದ ಇತರ ಹಿಂದುಳಿದ ಜಾತಿಗಳ ವಿವಿಧ ಪ್ರವರ್ಗಗಳ ನಿಖರವಾದ ಸಂಖ್ಯೆಗಳನ್ನು ಹೊಂದುವುದು ಅಗತ್ಯವಿದೆ. ಕೇಂದ್ರ ಸರಕಾರ ಭಾರತದ ರಾಷ್ಟ್ರಪತಿಗಳಿಗೆ ಯಾವ ಸಮುದಾಯಗಳನ್ನು ಇತರ ಹಿಂದುಳಿದ ಜಾತಿಗಳ ಪಟ್ಟಿಗೆ ಸೇರ್ಪಡೆ ಮಾಡಬಹುದು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಕೊಡುವ ಒಂದು ಕಾಯ್ದೆಯನ್ನು ತಂದಿದೆ. ಇದು ನಮ್ಮ ದೇಶದ ಒಕ್ಕೂಟ ರಚನೆಯ ಮೇಲೊಂದು ದಾಳಿ, ಇತರ ಹಿಂದುಳಿದ ಜಾತಿಗಳಿಗೆ ಮೀಸಲಾತಿಗಳ ಉದ್ದೇಶಕ್ಕಾಗಿ ಒಬಿಸಿಗಳನ್ನು ಗುರುತಿಸುವ ರಾಜ್ಯಗಳ ಹಕ್ಕುಗಳನ್ನು ಕಿತ್ತುಕೊಳ್ಳುತ್ತದೆ. ಜನಪರ ಒತ್ತಡ ಮತ್ತು ಸುಪ್ರೀಂಕೋರ್ಟಿನ ಮಧ್ಯಪ್ರವೇಶದಿಂದಾಗಿ ಕೂಡ ಅದು ತನ್ನ ನಿರ್ಧಾರವನ್ನು ರದ್ದು ಮಾಡಬೇಕಾಗಿ ಬಂತು.

2.66 ಅಂಗವೈಕಲ್ಯತೆಯನ್ನು ಹೊಂದಿರುವ ವ್ಯಕ್ತಿಗಳು: ಕೋವಿಡ್-19 ಅಂಗವೈಕಲ್ಯತೆಯನ್ನು ಹೊಂದಿರುವ ವ್ಯಕ್ತಿಗಳ ಮೇಲೆ ವಿಪರೀತ ಪರಿಣಾಮಗಳನ್ನು ಬೀರಿದೆ. ಆಹಾರದ ಲಭ್ಯತೆ, ನಿಯಮಿತ ಜೀವಪೋಷಕ ಆರೋಗ್ಯ ವ್ಯವಸ್ಥೆ, ಉದ್ಯೋಗ ಕಳೆದುಕೊಂಡಿರುವುದು ಹೀಗೆ ಹಲವು ದೊಡ್ಡ ಸವಾಲುಗಳನ್ನು ಎದುರಿಸಬೇಕಾಗಿ ಬಂತು. ಸಾಕಷ್ಟು ಸಂಖ್ಯೆಯ ಅಂಗವಿಕಲತೆ ಇರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ವ್ಯವಸ್ಥೆ ಪಡೆಯಲು ಸಾಧ್ಯವಾಗುತ್ತಿಲ್ಲ. ಅಂಗವೈಕಲ್ಯತೆ ಹೊಂದಿರುವ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಮತ್ತು ದುರ್ನಡತೆಗಳು ಹೆಚ್ಚಿವೆ. ಕೇಂದ್ರ ಸರಕಾರ ಪ್ರಕಟಿಸಿರುವ ಅತ್ಯಂತ ಕನಿಷ್ಟ ಮೊತ್ತವಾದ ಒಂದು ಬಾರಿ ನೀಡುವ ಎಕ್ಸ್‌ಗ್ರೇಷಿಯಾ 1,000/- ರೂಪಾಯಿಗಳನ್ನು ಕೂಡಾ ಅಂಗವೈಕಲ್ಯ ಹೊಂದಿದ ಜನರ ಕೇವಲ 3.8% ಕ್ಕೆ ಕೊಡುವ ಗುರಿ ಹೊಂದಲಾಗಿತ್ತು.

2.67 ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016ರ ಅಡಿಯಲ್ಲಿ ಇರುವ ದಂಡವಿಧಿಸುವ ಅವಕಾಶಗಳನ್ನು ಜಾಳುಮಾಡುವ ಪ್ರಸ್ತಾವಕ್ಕೆ ಕಡು ಪ್ರತಿರೋಧ ಎದುರಾಗಿ ತರಾತುರಿಯಲ್ಲಿ ಸರಕಾರ ಅದನ್ನು ಹಿಂತೆಗೆದುಕೊಳ್ಳಬೇಕಾಯಿತು. ಆದರೂ ಅಂಗವೈಕಲ್ಯ ಇರುವವರ ಸಹಾಯಕ್ಕೆ ಇರುವ ವಿವಿಧ ಸಂಸ್ಥೆಗಳನ್ನು ವಿಲೀನಗೊಳಿಸುವ/ಗುಂಪುಗೊಳಿಸುವ ನಡೆ ಪುನರ್ವಸತಿ ಸೇವೆಗಳನ್ನು ಪ್ರತಿಕೂಲವಾಗಿ ತಟ್ಟುತ್ತದೆ. ಹಣ ಹಂಚಿಕೆಯಲ್ಲಿ ನಿರಂತರವಾಗಿ ಮಾಡುತ್ತಿರುವ ಕಡಿತಗಳು ಆರ್.ಪಿ.ಡಿ. ಕಾನೂನಿನಲ್ಲಿ ಅಂತರ್ಗತವಾಗಿರುವ ಹಕ್ಕುಗಳನ್ನು ವಾಸ್ತವಗೊಳಿಸುವ ಪ್ರಕ್ರಿಯೆಗೆ ಮತ್ತಷ್ಟು ಅಡ್ಡಿಯುಂಟುಮಾಡುತ್ತವೆ. ಬಜೆಟ್ ಬೆಂಬಲದ ಕೊರತೆ ಮಾನಸಿಕ ಆರೋಗ್ಯ ಕಾನೂನು(ಮೆಂಟಲ್ ಹೆಲ್ತ್ ಕೇರ್ ಆಕ್ಟ್) 2017 ಕ್ಕೂ ಒಂದು ಅಡ್ಡಿಯಾಗಿದೆ.

2.68 ಲೈಂಗಿಕ ಅಲ್ಪಸಂಖ್ಯಾತರು: ಮಂಗಳಮುಖಿ(ಟ್ರಾನ್ಸ್‌ಜೆಂಡರ್) ಸಮುದಾಯದ ಜನರ ಆಶೋತ್ತರಗಳನ್ನು ಈಡೇರಿಸಲು ಮಂಗಳಮುಖಿ ವ್ಯಕ್ತಿಗಳು(ಹಕ್ಕುಗಳ ರಕ್ಷಣೆ) ಕಾಯ್ದೆ 2020ಕ್ಕೆ ಸೂಕ್ತ ತಿದ್ದುಪಡಿ ಮಾಡಬೇಕಾಗಿದೆ. ಓ.ಬಿ.ಸಿ. ಕೋಟಾದಡಿ ಅವರಿಗೆ ಮೀಸಲಾತಿ ನೀಡಬೇಕು ಎನ್ನುವ ಪ್ರಸ್ತಾವ ಅನುಚಿತವಾಗಿದೆ. ಅವರಿಗೆ ಸಮಾಂತರ (ಹಾರಿಜಾಂಟಲ್) ಮೀಸಲಾತಿಗಳನ್ನು ಒದಗಿಸಬೇಕು. ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ 2020 ಮತ್ತು ಸಹಾಯಕಾರಿ ಸಂತಾನೋತ್ಪತ್ತಿ ತಂತ್ರಜ್ಞಾನ (ನಿಯಂತ್ರಣ) ಮಸೂದೆ 2021 (ಎ.ಆರ್.ಟಿ. ಮಸೂದೆ) ಎಲ್.ಜಿ.ಬಿ.ಟಿ.ಕ್ಯು.ಐ. ಸಮುದಾಯಗಳಿಗೆ ಪೋಷಕರಾಗುವ ಹಕ್ಕುಗಳನ್ನು ನಿರಾಕರಿಸುವ ಮೂಲಕ ಅವರ ವಿರುದ್ಧ ತಾರತಮ್ಯ ಎಸಗುತ್ತದೆ. ಸಲಿಂಗ ಸಂಬಂಧಗಳು ಅಪರಾಧವಲ್ಲ ಎಂದು ಸುಪ್ರಿಂಕೋರ್ಟಿನ ಆದೇಶವಿದ್ದಾಗ್ಯೂ ಲೈಂಗಿಕ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಮುಂದುವರೆಯುತ್ತಿವೆ.

ಸಂವಿಧಾನಿಕ ಪ್ರಾಧಿಕಾರಗಳನ್ನು ದುರ್ಬಲಗೊಳಿಸುವುದು

2.69 ಸಂಸತ್ತನ್ನು ಹೆಚ್ಚೆಚ್ಚಾಗಿ ಬಿಜೆಪಿಗೆ ತನ್ನ `ಬಹುಮತದ ದಬ್ಬಾಳಿಕೆ’ಯನ್ನು ನಡೆಸುವ ಒಂದು ವೇದಿಕೆಯ ಮಟ್ಟಕ್ಕೆ ಇಳಿಸಲಾಗುತ್ತಿದೆ. ಶಾಸನಗಳನ್ನು ಎಂದರೆ ಸಂಸದೀಯ ಸಮಿತಿಗಳ ಪರೀಕ್ಷಣೆಯಂತಹ ಸಂಸದೀಯ ವಿಧಿ ವಿಧಾನಗಳನ್ನೆಲ್ಲಾ ಬದಿಗೊತ್ತಿ ಮಾಡಲಾಗುತ್ತಿದೆ.. ಬಹುತೇಕ ಕಾನೂನುಗಳನ್ನು ಯಾವುದೇ ಮಾತುಕತೆ, ಚರ್ಚೆ ಇಲ್ಲದೆಯೇ ಅಡ್ಡಿಗಳಾದಾಗ ಅಂಗೀಕರಿಸಲಾಗುತ್ತಿವೆ. ಕ್ಷುಲ್ಲಕ ಕಾರಣಗಳಿಗಾಗಿ 2021ರ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ 12 ಜನ ಪ್ರತಿಪಕ್ಷಗಳ ಸಂಸದರನ್ನು ಅಮಾನತುಗೊಳಿಸಲಾಯಿತು. ಬಿಜೆಪಿಗೆ ಇದು ಮೇಲ್ಮನೆಯಲ್ಲಿ ಒಂದು ಆರಾಮದಾಯಕ ಬಹುಮತವನ್ನು ಖಾತ್ರಿಗೊಳಿಸಿತು. ದಂಡನಾತ್ಮಕ ಕ್ರಮಗಳ ಮೂಲಕ ವಿರೋಧ ಪಕ್ಷಗಳ ಸಂಸದರ ಬಾಯಿ ಮುಚ್ಚಿಸುವ ಪ್ರಯತ್ನಗಳಾಗುತ್ತಿವೆ. ಸಂಸತ್ತಿನಲ್ಲಿ ಸಾರ್ವಜನಿಕ ಪ್ರಾಮುಖ್ಯತೆಯ, ಜನರ ಕಷ್ಟಗಳ ವಿಷಯಗಳನ್ನು ಚರ್ಚಿಸಲು ಅವಕಾಶ ನೀಡುತ್ತಿಲ್ಲ.

2.70 ಮೋದಿ ಸರ್ಕಾರವು ಸಂಸತ್ತಿಗೆ ತನ್ನ ಉತ್ತರದಾಯಿತ್ವದಿಂದ ಪಲಾಯನಗೈಯುತ್ತಿದೆ. ಸಂಸತ್ತು ಜನತೆಯ ಸಾರ್ವಭೌಮತೆಯನ್ನು ಜಾರಿಗೊಳಿಸುವ ನಮ್ಮ ಸಂವಿಧಾನಿಕ ಯೋಜನೆಯ ಒಂದು ನಿರ್ಣಾಯಕ ಕೊಂಡಿಯಾಗಿವೆ. ಕಾರ್ಯಾಂಗ (ಸರ್ಕಾರ)ವು ಸಂಸತ್ತಿಗೆ ಉತ್ತರದಾಯಿತ್ವವನ್ನು ಹೊಂದಿದೆ. ಮತು ಶಾಸಕಾಂಗ(ಸಂಸದರು) ಜನತೆಗೆ ಉತ್ತರದಾಯಿತ್ವವನ್ನು ಹೊಂದಿರುತ್ತದೆ. ಯಾವಾಗ ಸಂಸತ್ತು ತನ್ನ ಕರ್ತವ್ಯಗಳನ್ನು ನಿರ್ವಹಿಸುವುದಿಲ್ಲವೋ ಆಗ ಈ ಕೊಂಡಿಯು ಛಿದ್ರಗೊಂಡು ಜನತೆಯ ಸಾರ್ವಭೌಮತೆಯ ಪ್ರಾಮುಖ್ಯತೆಯ ಕಡೆಗಣನೆಯಾಗುತ್ತವೆ.

2.71 ನ್ಯಾಯಾಂಗ:  ಹಲವಾರು ಸಂದರ್ಭಗಳಲ್ಲಿ ನ್ಯಾಯಾಂಗದ ತೀರ್ಪು ನೀಡಿಕೆಗಳು ನ್ಯಾಯ ನೀಡಿಕೆಗಿಂತ ಹೆಚ್ಚಾಗಿ ಸರ್ಕಾರದ ಪರವಾಗಿಯೇ ಬಂದಿವೆ. ಸರ್ವೋಚ್ಚ ನ್ಯಾಯಾಲಯವು ಅಯೋಧ್ಯೆ ವಿವಾದದಲ್ಲಿ ಒಂದು ತೀರ್ಪನ್ನು ನೀಡಿತು. ಆದರೆ ನ್ಯಾಯ ನೀಡಲಿಲ್ಲ. ಅನುಚ್ಛೇದ 370, 35ಎ ರದ್ದುಗೊಳಿಸಿರುವ ಶಾಸನಗಳು ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿಸರ್ಜನೆ, ಸಿಎಎ ಶಾಸನ, ಚುನಾವಣಾ ಬಾಂಡುಗಳು ಮುಂತಾದವುಗಳ ಸಾಂವಿಧಾನಿಕ ಸಿಂಧುತ್ವಕ್ಕೆ ಸವಾಲು ಹಾಕುವ ಅರ್ಜಿಗಳು ಸೇರಿದಂತೆ  ಇನ್ನಿತರ ಹಲವು ನಿರ್ಣಾಯಕ ವಿಷಯಗಳು ಸುಮಾರು 3 ವರ್ಷಗಳಿಂದ ಬಾಕಿ ಉಳಿದಿವೆ.

2.72 ಚುನಾವಣಾ ಆಯೋಗ:  ಚುನಾವಣಾ ಆಯೋಗವು ಎಲ್ಲ ಸ್ಪರ್ಧಿಗಳಿಗೆ ಸಮಾನ ಸ್ಪರ್ಧಾ ಕಣವನ್ನು ಖಾತ್ರಿಗೊಳಿಸುವ ಮೂಲಕ ‘ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ’ಗಳನ್ನು ನಡೆಸಲು ಸಂವಿಧಾನಿಕ  ಆದೇಶ ಪಡೆದಿರುತ್ತದೆ. ಆದಾಗ್ಯೂ ಚುನಾವಣಾ ಆಯೋಗದ ಕಾರ್ಯ ನಿರ್ವಹಣೆಯು ಹೆಚ್ಚೆಚ್ಚಾಗಿ ಆಳುವ ಪಕ್ಷಕ್ಕೆ ನ್ಯಾಯಯುತವಲ್ಲದ ಪ್ರಯೋಜನವನ್ನು ನೀಡುತ್ತಿದೆ ಎಂಬ ಭಾವನೆಯನ್ನು ಕೊಡುತ್ತಿದೆ. ಆರಂಭದಲ್ಲಿ ಚುನಾವಣಾ ಬಾಂಡ್‌ಗಳು ಚುನಾವಣಾ ನಿದಿಸಂಗ್ರಹಣೆಯ ಪಾರದರ್ಶಕತೆಯನ್ನು ದುರ್ಬಲಗೊಳಿಸುತ್ತವೆ ಎಂಬ ಗಂಭೀರ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ ಚುನಾವಣಾ ಆಯೋಗ, ತರುವಾಯ ತನ್ನ ನಿಲುವನ್ನು ದುರ್ಬಲಗೊಳಿಸಿತು. ಇವುಗಳಲ್ಲಿ ಸುಮಾರು 80 ಪ್ರತಿಶತವನ್ನು ನಗದೀಕರಿಸಿದ ಬಿಜೆಪಿಯ ಅಪಾರ ಹಣಬಲದ ಪ್ರದರ್ಶನದಿಂದ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗಳಿಗೆ ಮತ್ತು ನಮ್ಮ ಪ್ರಜಾಪ್ರಭುತ್ವಕ್ಕೆ ಬಹು ಮುಖ್ಯವಾದ ಸಮಾನ ಸ್ಪರ್ಧಾ ಕಣವೆಂಬುದು ವಿರೂಪಗೊಂಡಿದೆ. `ಆಧಾರ್’ನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಜೋಡಿಸುವ ಇತ್ತೀಚಿನ ಕ್ರಮವು ಮತದಾರನ ರಹಸ್ಯ ಮತದಾನದ ಹಕ್ಕನ್ನು ಉಲ್ಲಂಘಿಸುವ ಪರಿಣಾಮಗಳನ್ನು ಹೊಂದಿದೆ.

2.73 ಸ್ವತಂತ್ರ ತನಿಖಾ ಸಂಸ್ಥೆಗಳು: ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ(ಇಡಿ) ಇವೆರಡೂ ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸುವ ಆಳುವ ಪಕ್ಷದ ರಾಜಕೀಯ ಬಾಹುಗಳಾಗಿ ಕಾರ್ಯ ನಿರ್ವಹಿಸುತ್ತಿವೆ.

2.74 ಉದಾಹರಣೆಗೆ ಜಾರಿ ನಿರ್ದೇಶನಾಲಯದ (ಅಧಿಕೃತವಾಗಿ ಶೋಧನೆ ಮತ್ತು ಮುಟ್ಟುಗೋಲು ಎಂದು ಹೇಳಲಾಗುವ) ದಾಳಿಗಳು 2013 ರಲ್ಲಿ 62 ರಷ್ಟಿದ್ದು 2019ರ ವೇಳೆಗೆ ಹತ್ತು ಪಟ್ಟಿಗಿಂತ ಹೆಚ್ಚಾಗಿ 670 ಆಯಿತು. ಮಾರ್ಚ್ 2011 ಮತ್ತು ಜನವರಿ 2020ರ ಮಧ್ಯೆ 1569 ತನಿಖೆಗಳಿಗೆ ಸಂಬಂಧಿಸಿದಂತೆ 17,000 ದಾಳಿಗಳನ್ನು ಜಾರಿ ನಿರ್ದೇಶನಾಲಯವು ನಡೆಸಿತು. ಅದಾಗ್ಯೂ ಕೇವಲ 9 ಶಿಕ್ಷೆಗಳನ್ನು, ಅದರಲ್ಲೂ ಸಣ್ಣಪುಟ್ಟ ಪ್ರಕರಣಗಳಲ್ಲಿ ಮಾತ್ರವೇ. ಕೊಡಿಸುವುದಷ್ಟೇ ಅದಕ್ಕೆ ಸಾಧ್ಯವಾಯಿತು. ಇದು ಸ್ಪಷ್ಟವಾಗಿ ಸರ್ಕಾರವನ್ನು ವಿರೋಧಿಸುವ ಅಥವಾ ಭಿನ್ನ ಅಭಿಪ್ರಾಯ ವ್ಯಕ್ತಪಡಿಸುವವರನ್ನು ಹಣಿಯುವ, ಕಿರುಕುಳ ಕೊಡುವ ಒಂದು ಉಪಕರಣವಾಗಿದೆ.

2.75 ವಿರೋಧ ಪಕ್ಷಗಳ ನಾಯಕರನ್ನು ಮತ್ತು ಕಾರ್ಯಕರ್ತರ ವಿರುದ್ಧ ಸಿಬಿಐನ ಪಾತ್ರವು ಯಾವ ಮಟ್ಟವನ್ನು ತಲುಪಿದೆ ಎಂದರೆ, 9 ರಾಜ್ಯಗಳು – ಆಂಧ್ರಪ್ರದೇಶ, ಪಂಜಾಬ್, ಪಶ್ಚಿಮ ಬಂಗಾಳ, ರಾಜಸ್ಥಾನ್, ಜಾರ್ಖಂಡ್, ಮಹಾರಾಷ್ಟ್ರ, ಕೇರಳ, ಛತ್ತಿಸ್‌ಘಡ ಮತ್ತು ವಿಜೋರಾಂ – ರಾಜ್ಯ ಸರ್ಕಾರಗಳ ಅನುಮತಿ ಪಡೆಯದೆ ಸಿಬಿಐ ತನಿಖೆ ಮಾಡುವ ಸಾರ್ವತ್ರಿಕ ಒಪ್ಪಿಗೆಯನ್ನು ಹಿಂಪಡೆದಿವೆ.

2.76 ಮಾಧ್ಯಮಗಳು: ಈ ವರ್ಷಗಳಲ್ಲಿ ಬಿಜೆಪಿ ಮತ್ತು ಅದರ ಸರಕಾರ ಬಹುಪಾಲು ಕಾರ್ಪೊರೇಟ್ ಸಮೂಹಗಳ ಮಾಲೀಕತ್ವದಲ್ಲಿರುವ ಮಾಧ್ಯಮಗಳ ಮೇಲೆ ಜನರಿಗೆ ಸುದ್ದಿಗಳ ಮತ್ತು ಮಾಹಿತಿಯ ಹರಿವನ್ನು ನಿಯಂತ್ರಿಸಲು ಮತ್ತು ತಿರುಚಲು ತಮ್ಮ ಹಿಡಿತವನ್ನು ಬಿಗಿಗೊಳಿಸಿವೆ. ಪರಿಸ್ಥಿತಿ ಹೇಗಿದೆಯೆಂದರೆ, ಕೆಲವು ಗೌರವಾನ್ವಿತ ಅಪವಾದಗಳನ್ನು ಬಿಟ್ಟು, ಉಳಿದ ಮಾಧ್ಯಮಗಳನ್ನು ಸಾರ್ವತ್ರಿಕವಾಗಿ `ಗೋಧೀ ಮೀಡಿಯಾ’(ಮಡಿಲ ಮಾಧ್ಯಮ) ಎಂದು ಗ್ರಹಿಸುವುದು ಸಾಮಾನ್ಯವಾಗಿ ಬಿಟ್ಟಿದೆ.

2.77 ಬಿಜೆಪಿ ಮತ್ತು ಸರ್ಕಾರದ ಕಾರ್ಯಸೂಚಿಯ ಪ್ರಚಾರವನ್ನು ಖಚಿತಪಡಿಸಲು, ಜನತೆಯ ಸಂಕಷ್ಟಗಳ ವಾಸ್ತವವನ್ನು ಮರೆ ಮಾಚಲು ಮತ್ತು ಪ್ರಧಾನಿ ಮೋದಿಯವರ ಉತ್ಪ್ರೇಕ್ಷಿತ ರೂಪವನ್ನು ಪ್ರದರ್ಶಿಸಲು ಬೆದರಿಕೆ ಸೇರಿದಂತೆ ವಿವಿಧ ವಿಧಾನಗಳನ್ನು ಬಳಸಲಾಗುತ್ತಿದೆ.

2.78 ಜನತೆಗೆ ಸಂಬಂಧಿಸಿದ ಸಮಸ್ಯೆಗಳು, ಅವರ ಜೀವನೋಪಾಯಗಳು ಮತ್ತು ಸಂಕಷ್ಟಗಳನ್ನು ಬಿಂಬಿಸುವ ಎಲ್ಲ ಭಿನ್ನ ಮತ್ತು ವಿರೋಧಾಭಿಪ್ರಾಯಗಳನ್ನು ದೇಶವಿರೋಧಿ ಎಂದು ಪರಿಗಣಿಸಲಾಗುತ್ತಿದೆ. ಪತ್ರಕರ್ತರನ್ನು ಯುಎಪಿಎ/ರಾಜದ್ರೋಹದಂತಹ ಕರಾಳ ಕಾಯ್ದೆಗಳ ಅಡಿಯಲ್ಲಿ ಮನಬಂದಂತೆ ಬಂಧಿಸಲಾಗುತ್ತಿದೆ.

2.79 ರಾಜಕೀಯ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸುವದು: ಚುನಾವಣಾ ಬಾಂಡ್‌ಗಳ ಯೋಜನೆಯು ರಾಜಕೀಯ ಪಕ್ಷಗಳ ಚುನಾವಣಾ ನಿಧಿಸಂಗ್ರಹದ ವ್ಯಾಪಕ ಅಪಾರದರ್ಶಕತೆಗೆ ಕಾರಣವಾಗಿದೆ. ಹತ್ತಿರ ಹತ್ತಿರ ಪ್ರತಿಶತ 80ರಷ್ಟು ಈ ಬಾಂಡುಗಳನ್ನು ಬಿಜೆಪಿಯು ನಗದೀಕರಿಸಿವೆ. ಬಿಜೆಪಿಯು 2018-19ರಲ್ಲಿ 1,450 ಕೋಟಿ ರೂ.ಗಳನ್ನು ಪಡೆಯಿತು. 2019-20ರಲ್ಲಿ ಚುನಾವಣಾ ಬಾಂಡ್‌ಗಳ ಮಾರಾಟದ ಶೇ. 76 ರಷ್ಟು, 2,555 ಕೋಟಿ ರೂ.ಗಳನ್ನು ಸ್ವೀಕರಿಸಿತು. ಇಲ್ಲಿಯವರೆಗೆ ಮಾರಾಟವಾದ ಚುನಾವಣಾ ಬಾಂಡ್‌ಗಳ ಒಟ್ಟು ಮೌಲ್ಯ 7,380.64 ಕೋಟಿ ರೂ. ಗಳಾಗಿದೆ.

2.80 ಸಾಂಕ್ರಾಮಿಕದ ಪಿಡುಗು ಬಂದ ತಕ್ಷಣವೇ ಪಿಎಂ ಕೇರ್ ಎನ್ನುವ ಹೊಸ ನಿಧಿಯನ್ನು ಸ್ಥಾಪಿಸಲಾಯಿತು. ಪ್ರಧಾನಮಂತ್ರಿ ಮತ್ತು ಇನ್ನಿತರ ಹಿರಿಯ ಮಂತ್ರಿಗಳು ಇವರ ಟ್ರಸ್ಟಿಗಳಾಗಿದ್ದರೂ ಸರ್ಕಾರದ ಇಡೀ ಯಂತ್ರಾಂಗವನ್ನು ಬಳಸಿಕೊಂಡಿದ್ದರೂ ಇದನ್ನು ಖಾಸಗಿ ಟ್ರಸ್ಟ್ ಎಂದು ಘೋಷಿಸಲಾಯಿತು. ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನವನ್ನು ನೀಡುವಂತೆ ಸರ್ಕಾರೀ ಆದೇಶಗಳನ್ನು ಹೊರಡಿಸಲಾಯಿತು. ದೇಣಿಗೆಗಳಿಗೆ ಯಾವುದೇ ತೆರಿಗೆಗಳಿಂದ ವಿನಾಯಿತಿ ನೀಡಲು ಸರ್ಕಾರವು ತೀರ್ಮಾನಿಸಿತು. ಕಾರ್ಪೊರೇಟ್‌ಗಳು ತಮ್ಮ ಕಾನೂನು ಬದ್ಧ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿಗಳಿಂದ ಇದಕ್ಕೆ ದೇಣಿಗೆ ನೀಡಲು ಅವಕಾಶ ನೀಡಲಾಯಿತು. ಸಾರ್ವಜನಿಕ ರಂಗದ ಉದ್ದಿಮೆಗಳು ಆಕರ್ಷಕ ದೇಣಿಗೆ ನೀಡುವಂತೆ ನಿರ್ದೇಶಿಸಲಾಯಿತು. ಸರ್ಕಾರದ ಈ ರೀತಿಯ ನಿರ್ದೇಶನಗಳ ಹೊರತಾಗಿಯೂ ಇದೊಂದು ಖಾಸಗಿ ಟ್ರಸ್ಟ್ ಆಗಿ ಉಳಿದುಕೊಂಡಿದೆ. ಇದು ಲೆಕ್ಕ ಪರಿಶೋಧನೆಗೆ ಒಳಪಡುವುದಿಲ್ಲ. ಉತ್ತರದಾಯಿತ್ವವನ್ನು ಹೊಂದಿಲ್ಲ ಮತ್ತು ಪಾರದರ್ಶಕವೂ ಆಗಿಲ್ಲ. ಎಷ್ಟು ಹಣ ಸಂಗ್ರಹವಾಗುತ್ತಿದೆ ಮತ್ತು ಎಲ್ಲಿಗೆ ಹೋಗುತ್ತಿದೆ ಎನ್ನುವುದು ರಹಸ್ಯವಾಗಿಯೇ ಉಳಿದಿದೆ.

2.81 ರಾಜಕೀಯ ನಿಧಿ ನೀಡಿಕೆಗೆ ಪ್ರತಿಯಾಗಿ ಕಾರ್ಪೋರೇಟ್‌ಗಳಿಗೆ ರಿಯಾಯಿತಿಗಳು ಮೋದಿ ಸರ್ಕಾರದ ಅಡಿಯಲ್ಲಿ ಬಂಟ ಬಂಡವಾಳಶಾಹಿಯ(ಕ್ರೋನಿ ಕ್ಯಾಪಿಟಲಿಸಂ) ಪ್ರಮುಖ ಅಂಶವಾಗಿದೆ. ಈ ಸರ್ಕಾರ ಕಳೆದ ಏಳು ವರ್ಷಗಳ ಅವಧಿಯಲ್ಲಿ ಅದರ ಬಂಟ ಕಾರ್ಪೋರೇಟ್‌ಗಳು ಪಡೆದುಕೊಂಡ 10.72 ಲಕ್ಷ ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡಲಾಗಿದೆ. ಇದರ ಪರಿಣಾಮವಾಗಿ ಬಿಜೆಪಿಯ ಕೈಯಲ್ಲಿರುವ ಹಣಬಲವು ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗಳನ್ನು ಖಚಿತಪಡಿಸುವ ಎಲ್ಲ ಸ್ಪರ್ಧಿಗಳಿಗೆ ಸಮತಳದ ಸ್ಪರ್ಧಾ ಕಣ ಎಂಬುದನ್ನು ಸಂಪೂರ್ಣವಾಗಿ ವಿರೂಪಗೊಳಿಸುತ್ತದೆ.

ಜಮ್ಮು ಮತ್ತು ಕಾಶ್ಮೀರ

2.82 2019ರ ಚುನಾವಣೆಯ ನಂತರ ಮೋದಿ ಸರ್ಕಾರವು ತೆಗೆದುಕೊಂಡ ಮೊದಲ ಹೆಜ್ಜೆಯೆಂದರೆ, ಭಾರತದ ಸಂವಿಧಾನದ 370 ಮತ್ತು 35ಎ ಅನುಚ್ಛೇಧಗಳನ್ನು ರದ್ದುಗೊಳಿಸುವುದು. ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಸರ್ಜಿಸಿ ಅದರ ಜಾಗದಲ್ಲಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ತರುವುದು. ಹೀಗೆ, ಅದು ಏಕೈಕ ಮುಸ್ಲಿಂ ಬಹುಸಂಖ್ಯಾತ ರಾಜ್ಯದ ಮೇಲೆ ಗುರಿಯಿಡುವ ಆರೆಸ್ಸೆಸ್ ಹಿಂದುತ್ವ ಅಜೆಂಡಾವನ್ನು ಮತ್ತು ಭಾರತದ ಸಂವಿಧಾನವು ಈ ರಾಜ್ಯಕ್ಕೆ ಸೇರ್ಪಡೆಯ ದಸ್ತಾವೇಜಿನ ಭಾಗವಾಗಿ ಕೊಡಮಾಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಬೇಕೆಂಬ ಆರ್‌ಎಸ್‌ಎಸ್ ನ ದೀರ್ಘಕಾಲದ ಬೇಡಿಕೆಯನ್ನು ಕಾರ್ಯಗತಗೊಳಿಸಿತು. 2019ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಲೋಕಸಭೆಗೆ ಚುನಾವಣೆಗಳು ನಡೆದವು. ಆದರೆ, ವಿಸರ್ಜಿಸಲಾದ ರಾಜ್ಯ ವಿಧಾನಸಭೆಗೆ ಚುನಾವಣೆಗಳು ನಡೆಯಲಿಲ್ಲ. ಇದು ರಾಜ್ಯದ ಗಡಿಗಳ ಯಾವುದೇ ಬದಲಾವಣೆಗಳನ್ನು ಮಾಡಲು ರಾಜ್ಯ ವಿಧಾನಸಭೆಯ ಸಮ್ಮತಿಯನ್ನು ಪಡೆಯಬೇಕು ಎನ್ನುವ ಸಂವಿಧಾನಿಕ ಅವಶ್ಯಕತೆಯನ್ನು ಬದಿಗೊತ್ತಲು, ಅದರ ಸ್ಥಾನದಲ್ಲಿ ವಿಧಾನಸಭೆಯ ಗೈರು ಹಾಜರಿಯಲ್ಲಿ ರಾಜ್ಯಪಾಲರ ಸಮ್ಮತಿ ಪಡೆಯಬಹುದು ಎಂದು ಬದಲಾಯಿಸಲು ಅನುಕೂಲ ಕಲ್ಪಿಸಿತು. ಇದನ್ನು, ಮಾಜಿ ಮುಖ್ಯಮಂತ್ರಿಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರೂ ಒಳಗೊಂಡಂತೆ ಸಾವಿರಾರು ಜನರನ್ನು ಯುಎಪಿಎ/ಎಸ್‌ಎಸ್‌ಎ/ಪಿಎಸ್‌ಎ ಯಂತಹ ಕರಾಳ ಕಾನೂನುಗಳ ಅಡಿಯಲ್ಲಿ ಬಂಧಿಸಿ ರಾಜ್ಯವನ್ನು ಬೃಹತ್ ಪ್ರಮಾಣದ ಭದ್ರತಾ ಲಾಕ್‌ಡೌನಿನಲ್ಲಿ ಇರಿಸಿ ಮಾಡಲಾಗಿದೆ. ಸಂವಹನ ಮತ್ತು ಅಂತರ್ಜಾಲವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಯಿತು.

2.83 ಕಟ್ಟುನಿಟ್ಟಾದ ಭದ್ರತಾ ಲಾಕ್‌ಡೌನ್ ಸಾರ್ವಜನಿಕ ಸಾರಿಗೆಯೂ ಒಳಗೊಂಡಂತೆ ಎಲ್ಲ ದೈನಂದಿನ ಚಟುವಟಿಕೆಗಳು ಸ್ಥಗಿತಗೊಳ್ಳುವುದನ್ನು ಖಚಿತಗೊಳಿಸಿತು. ರಾಜ್ಯದ ಆರ್ಥಿಕತೆಯು ಧ್ವಂಸ ಮಾಡಲಾಯಿತು. ದೀರ್ಘಕಾಲ ಕರ್ಫ್ಯೂವನ್ನು ವಿಧಿಸಲಾಯಿತು. ಈ ಕ್ರಮಗಳು ರಾಜ್ಯದ ಜನರಲ್ಲಿ ಇನ್ನಷ್ಟು ಪರಕೀಯ ಭಾವವನ್ನು ಉಂಟುಮಾಡಿದವು. ಉಗ್ರಗಾಮಿತ್ವದಿಂದಾಗಿ ಇತ್ತೀಚೆಗೆ ನಡೆದ ಅಮಾಯಕರ ಹತ್ಯೆಗಳು ಮತ್ತು ಅತಿಯಾದ ಅಮಾನುಷ ಬಲಪ್ರಯೋಗ ಹಾಗೂ ಮನಬಂದಂತೆ ನಡೆಸುವ ಬಂಧನಗಳು ಮತ್ತಷ್ಟು ಪರಕೀಯ ಭಾವವನ್ನು ಸೃಷ್ಟಿಸಿವೆ.

2.84 ಅತ್ಯಂತ ದುರದೃಷ್ಟಕರವೆಂದರೆ, ಅನುಚ್ಛೇದ 370 ಮತ್ತು 35ಎ ಅನ್ನು ರದ್ದು ಮಾಡಿರುವುದರ, ರಾಜ್ಯವನ್ನು ‘ಜಮ್ಮು ಮತ್ತು ಕಾಶ್ಮೀರ ಪುನರ್ ಸಂಘಟನೆ ಕಾಯ್ದೆ’ಯ ಮೂಲಕ ವಿಸರ್ಜಿಸಿರುವುದರ ಸಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ನ್ಯಾಯಾಂಗೀಯ ಸವಾಲುಗಳು ಸವೋಚ್ಚ ನ್ಯಾಯಾಲಯದಲ್ಲಿ ಆಗಸ್ಟ್ 2019ರಿಂದ ವಿಚಾರಣೆಗೆ ಬರದೇ ಉಳಿದಿವೆ. ಈ ನಡುವೆ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿ ಕಾಯ್ದೆಗೆ ತಿದ್ದುಪಡಿ ತಂದು ಖಾಯಂ ನಿವಾಸಿಗಳಲ್ಲದವರೂ ಭೂಮಿಯನ್ನು ಖರೀದಿಸಲು ಅವಕಾಶ ನೀಡುವುದು, ನಿವಾಸದ ಕಾನೂನುಗಳನ್ನು ತಿದ್ದುಪಡಿ ಮಾಡುವುದು ಮತ್ತು ರಾಜ್ಯ ಮಟ್ಟದ ಶಾಸನಬದ್ಧ ಆಯೋಗಗಳನ್ನು ಮುಚ್ಚುವುದು ಮುಂತಾದ ಮುಂದೆ  ಸರಿಪಡಿಸಲಾಗದ ತೀರ್ಮಾನಗಳನ್ನು ನಿರಂತರವಾಗಿ ತೆಗೆದುಕೊಳ್ಳುತ್ತಿದೆ.

2.85 ಕೇಂದ್ರ ಸರ್ಕಾರವು ಒಂದು ಜಮ್ಮು ಮತ್ತು ಕಾಶ್ಮೀರ ಕ್ಷೇತ್ರ ಪುನರ್ವಿಂಗಡಣಾ ಆಯೋಗವನ್ನು ರಚಿಸಿತು. ಅದರ ಶಿಫಾರಸ್ಸುಗಳು ಸಂಪೂರ್ಣವಾಗಿ ನ್ಯಾಯಸಮ್ಮತವಲ್ಲದವು ಮತ್ತು ಅತಾರ್ಕಿಕವಾಗಿವೆ. ಅವರು ಜಮ್ಮು ಪ್ರದೇಶದಲ್ಲಿ 6 ಸ್ಥಾನಗಳನ್ನು ಮತ್ತು ಕಾಶ್ಮೀರ ಕಣಿವೆಯಲ್ಲಿ ಕೇವಲ 1 ಸ್ಥಾನವನ್ನು ಹೆಚ್ಚಿಸುವ ಪ್ರಸ್ತಾಪವನ್ನು ನೀಡಿದ್ದಾರೆ. 2011ರ ಜನಗಣತಿಯ ಪ್ರಕಾರ ಕಾಶ್ಮೀರದ ಜನಸಂಖ್ಯೆಯು 68.8 ಲಕ್ಷವಿದ್ದು, ಜಮ್ಮುವಿನಲ್ಲಿ 53.3 ಲಕ್ಷ ಇದೆ. ನ್ಯಾಯ ಸಮ್ಮತವಾದ ಪುನರ್ವಿಂಗಡಣೆಯು 90 ಜನರ ವಿಧಾನಸಭೆಯಲ್ಲಿ 57 ಸ್ಥಾನಗಳನ್ನು ಕಾಶ್ಮೀರಕ್ಕೆ ಮತ್ತು ಜಮ್ಮುವಿಗೆ 39 ಸ್ಥಾನಗಳನ್ನು ನೀಡಬೇಕಿತ್ತು. ಬದಲಾಗಿ ಪ್ರಸ್ತಾವ ಅನುಕ್ರಮವಾಗಿ 47 ಮತ್ತು 43 ಎಂದಿದೆ. ಈ ಪ್ರಸ್ತಾವವು ಸ್ವಷ್ಟವಾಗಿ ರಾಜಕೀಯ ಪ್ರೇರಿತವಾಗಿದ್ದು ಜಮ್ಮು ಮತ್ತು ಕಾಶ್ಮೀರದ ಜನಸಂಖ್ಯಾ ಸ್ವರೂಪವನ್ನು ಮತ್ತು ಸಂಯೋಜನೆಯನ್ನು ಬದಲಿಸುವ ಗುರಿ  ಹೊಂದಿದೆ.

2.86 ಈ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯ ಮತ್ತು ಅದರ ವಿಶೇಷ ಸ್ಥಾನಮಾನವನ್ನು ಪುನರ್ ಸ್ಥಾಪಿಸಬೇಕು; ಎಲ್ಲ ರಾಜಕೀಯ ಬಂಧಿಗಳನ್ನು ಬಿಡುಗಡೆ ಮಾಡಬೇಕು; ಮಾಧ್ಯಮ ಮತ್ತು ಸಂವಹನದ ಇನ್ನಿತರ ಪ್ರಕಾರಗಳ ಮೇಲಿನ ನಿರ್ಬಂಧ ತೆರವುಗೊಳಿಸಬೇಕು ಮತ್ತು ಅಂತರ್ಜಾಲದ ಸ್ಥಗಿತತೆ ಕೊನೆಗೊಳ್ಳಬೇಕು; ವಿವೇಚನೆ ಇಲ್ಲದ ಬಂಧನಗಳು ವಿಶೇಷವಾಗಿ ಯುವಕರ ಬಂಧನಗಳು ನಿಲ್ಲಬೇಕು.

ಈಶಾನ್ಯ

2.87 ಕಳೆದ ಕೆಲ ವರ್ಷಗಳಲ್ಲಿ ಈಶಾನ್ಯ ಪ್ರದೇಶದಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸಲು ಬಿಜೆಪಿ-ಆರ್‌ಎಸ್‌ಎಸ್ ಅಸ್ಸಾಂ ಸರ್ಕಾರದ ಮೇಲಿನ ತಮ್ಮ ಹಿಡಿತವನ್ನು ಬಳಸಿಕೊಂಡಿವೆ. ಮಿಜೋರಾಂ ಹೊರತುಪಡಿಸಿ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಅಥವಾ ಅದು ಇರುವ ಸಮ್ಮಿಶ್ರ ಸರ್ಕಾರಗಳು ಆಡಳಿತ ನಡೆಸುತ್ತಿವೆ. ಆಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಅಡಿಯಲ್ಲಿ ದೊಡ್ಡ ಸಂಖ್ಯೆಯ ಮುಸ್ಲಿಂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಸನ್ನಿವೇಶವನ್ನು ಕೋಮುವಾದಿಕರಣಗೊಳಿಸುವ ವ್ಯವಸ್ಥಿತ ಪ್ರಯತ್ನಗಳಾಗಿವೆ. ಸಿಎಎ-ಎನ್‌ಆರ್‌ಸಿಯನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಯಿತು. ಬಂಗಾಳಿ ಭಾಷಿಕ ಮುಸ್ಲಿಂ ರೈತರನ್ನು ಅವರು ಉಳುಮೆ ಮಾಡುತ್ತಿದ್ದ ಭೂಮಿಯಿಂದ ಹೊರದಬ್ಬಲಾಯಿತು. ಬಿಜೆಪಿಯು ರಾಜ್ಯಗಳ ನಡುವಿನ ವಿವಾದಗಳನ್ನು ತನ್ನ ಹಿಡಿತವನ್ನು ಬಿಗಿಗೊಳಿಸಲು ಬಳಸಿಕೊಳ್ಳುತ್ತಿದೆ.

2.88 ಹಲವಾರು ರಾಜ್ಯಗಳಲ್ಲಿ ದಶಕಗಳಿಂದ ‘ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯ್ದೆ’ (AFSPA) ಜಾರಿಯಲ್ಲಿದೆ. 2016ರಲ್ಲಿ ಪ್ರಕಟಿಸಲಾದ ಚೌಕಟ್ಟು ಒಪ್ಪಂದವನ್ನು ಜಾರಿ ಮಾಡಿರದ ನಾಗಾಲ್ಯಾಂಡ್‌ನಲ್ಲಿ ಸೇನೆಯ 14 ಜನ ಮುಗ್ಧ ನಾಗರೀಕರನ್ನು ಹತ್ಯೆಗೈದಿರುವುದು ಕರಾಳ ಕಾಯ್ದೆ ಕೊಟ್ಟಿರುವ ಭಂಡತನಕ್ಕೆ ಉದಾಹರಣೆಯಾಗಿದೆ. ಈ ಕಾಯ್ದೆಯನ್ನು ರದ್ದು ಮಾಡಬೇಕು.

ಹೊಸ ಶಿಕ್ಷಣ ನೀತಿ

2.89 ರಾಷ್ಟ್ರೀಯ ಶಿಕ್ಷಣ ನೀತಿ-2020 (ಎನ್‌ಇಪಿ)ನ್ನು ಸಮಾಲೋಚನೆ ಮತ್ತು ಚರ್ಚೆಯ ಅಗತ್ಯ ಪ್ರಕ್ರಿಯೆಗಳಲ್ಲದೇ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಸಂವಿಧಾನ ಆದೇಶಿಸಿರುವ ಚರ್ಚೆಗಳಿಲ್ಲದೆ, ಅಂಗೀಕರಿಸಲಾಗಿವೆ. ಬಹುಸಂಖ್ಯೆಯ ಆರ್‌ಎಸ್‌ಎಸ್ ಪದಾಧಿಕಾರಿಗಳನ್ನು ಮತ್ತು ಸಂಘಟನೆಗಳನ್ನು ಒಳಗೊಂಡಿದ್ದ ಒಂದು ಸರಕಾರ ನೇಮಿಸಿದ ಸಮಿತಿ ಕರಡು ದಾಖಲೆಯನ್ನು ಅಂತಿಮಗೊಳಿಸಿತು. ಈ ಕರಡನ್ನು ವ್ಯಾಪಕ ಸಮಾಲೋಚನೆ ಮತ್ತು ಚರ್ಚೆಗೆ ಒಳಪಡಿಸುವ ಬದಲು ಏಕಪಕ್ಷೀಯವಾಗಿ ಅಂಗೀಕರಿಸಿ ಪ್ರಕಟಿಸಲಾಯಿತು.

2.90 ಹೊಸ ನೀತಿಯಲ್ಲಿ ಹಾಸುಹೊಕ್ಕಾಗಿರುವ ಎಳೆಯೆಂದರೆ, ಶಿಕ್ಷಣದಲ್ಲಿ ಹಿಂದುತ್ವದ ಅಜೆಂಡಾವನ್ನು ಮುನ್ನಡೆಸುವುದು. ದೇಶದ ಯುವಜನರಲ್ಲಿ ಅದಕ್ಕೆ ಅನುಕೂಲಕರವಾದ ಒಂದು ಪ್ರಜ್ಞೆಯನ್ನು ರೂಪಿಸುವದು. ಈ ಉದ್ದೇಶವನ್ನು ಸಾಧಿಸಲು ಪಠ್ಯಕ್ರಮ, ಬೋಧನೆಯ ವಿಷಯಗಳು ಮತ್ತು ವಿಧಾನಗಳನ್ನು ಹೊಂದಿಸಲಾಗಿವೆ. ಈ ಪ್ರಕ್ರಿಯೆಯಲ್ಲಿ ಪ್ರತಿಷ್ಟಿತ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ನಿರ್ಭಿಡೆಯಿಂದ ದಾಳಿ ಮಾಡಲಾಗುತ್ತಿದೆ.

2.91 ಶಿಕ್ಷಣದ ವಾಣಿಜ್ಯೀಕರಣ, ಕೇಂದ್ರೀಕರಣ ಮತ್ತು ಕೋಮುವಾದೀಕರಣಕ್ಕೆ ಒತ್ತು ನೀಡಲಾಗಿದೆ. ಈ ಉದ್ದೇಶಗಳನ್ನು ಅನುಸರಿಸುವುದು ಶಿಕ್ಷಣದ ಸಾರ್ವತ್ರೀಕರಣ ಮತ್ತು ಪ್ರಜಾಸತ್ತಾತ್ಮಕ ಮತ್ತು ವೈಜ್ಞಾನಿಕ ಶಿಕ್ಷಣದ ತತ್ವಗಳ ಬುಡಕ್ಕೇ ಏಟು ಕೊಡುವುದಾಗಿದೆ. ಬಹುತೇಕ ಖಾಸಗಿ ಕಾರ್ಪೊರೇಟ್‌ಗಳು ಒದಗಿಸುವ ಆನ್-ಲೈನ್ ಶಿಕ್ಷಣದತ್ತ ಸಾಗುವುದರಿಂದ ವಿದ್ಯಾರ್ಥಿಗಳ ಒಂದು ದೊಡ್ಡ ವಿಭಾಗ ಶಿಕ್ಷಣ ವ್ಯವಸ್ಥೆಯಿಂದ ಸಂಪೂರ್ಣವಾಗಿ ಹೊರಹೋಗಲು ಕಾರಣವಾಗಿವೆ. ಭಾರತದಲ್ಲಿ ವ್ಯಾಪಕವಾದ ಡಿಜಿಟಲ್ ವಿಭಜನೆಯು ಈ ಪರಿಸ್ಥಿತಿಯನ್ನು ಸಂಕೀರ್ಣಗೊಳಿಸುತ್ತಿದೆ. 6 ವರ್ಷದೊಳಗಿನ ಮಕ್ಕಳಿಗೆ ಬಾಲ್ಯದ ಆರೈಕೆ ಮತ್ತು ಶಾಲಾ ಶಿಕ್ಷಣದ ವೈಜ್ಞಾನಿಕ ಪರಿಕಲ್ಪನೆಯನ್ನು ಎನ್‌ಇಪಿ ಕೈ ಬಿಡುತ್ತದೆ. ಖಾಸಗಿ ವಿಶ್ವವಿದ್ಯಾಲಯಗಳು, ಸಂಸ್ಥೆಗಳು, ಟುಟೋರಿಯಲ್ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಶಿಕ್ಷಣವನ್ನು ಬಹುಪಾಲು ಜನರಿಗೆ ತಲುಪಲು ಸಾಧ್ಯವಾಗದ ಸರಕಾಗಿ ಪರಿವರ್ತಿಸುತ್ತಿವೆ. ನೀಟ್‌(ಎನ್‌ಇಇಟಿ) ಸದ್ಯದ ಸ್ವರೂಪದಲ್ಲಿ ಅನ್ಯಾಯದ್ದಾಗಿದೆ ಮತ್ತು ರಾಜ್ಯಗಳ, ಪ್ರಾದೇಶಿಕ ಭಾಷಾ ಗುಂಪುಗಳ ಮತ್ತು ವಂಚಿತ ಜನ ವಿಭಾಗಗಳ ಹಿತಾಸಕ್ತಿಗಳ ವಿರುದ್ಧ ಕೆಲಸ ಮಾಡುತ್ತದೆ.

2.92 ವಿಶ್ವವಿದ್ಯಾಲಯಗಳೂ ಒಳಗೊಂಡಂತೆ ರಾಜ್ಯ ಸರ್ಕಾರಗಳ ಮತ್ತು ಸ್ವಾಯತ್ತ ಸಂಸ್ಥೆಗಳ ಪಾತ್ರವನ್ನು ದುರ್ಬಲಗೊಳಿಸಿ ಕೇಂದ್ರ ಸರ್ಕಾರವು ನೇರವಾಗಿ ಸಂಸ್ಥೆಗಳನ್ನು ಹಿಡಿತದಲ್ಲಿಟ್ಟುಕೊಂಡು ನಿಯಂತ್ರಿಸುತ್ತದೆ. ಶಾಲೆಗಳು ಮತ್ತು ರಾಜ್ಯಮಟ್ಟದ ಸಂಸ್ಥೆಗಳ ನಡವಳಿಕೆ, ನಿಯಂತ್ರಣ ಮತ್ತು ಆಡಳಿತವನ್ನು ನಿರ್ವಹಿಸುವ ರಾಜ್ಯ ಸರ್ಕಾರದ ಸಂವಿಧಾನಾತ್ಮಕ ಹಕ್ಕುಗಳನ್ನು ಅತಿಕ್ರಮಿಸಲಾಗುತ್ತಿದೆ.

2.93 ಈ ನೀತಿಯ ಅಡಿಯಲ್ಲಿ ಶಿಕ್ಷಣದ ವಿಷಯವು ವಿಚಾರ ವೈಚಾರಿಕತೆ ಮತ್ತು ತಾರ್ಕಿಕತೆ ಆಧಾರಿತವಾದ ಜ್ಞಾನದ ತುಡಿತವನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತದೆ. ವೈಜ್ಞಾನಿಕ ಮನೋಭಾವವನ್ನು ಹೊರದಬ್ಬಿ ಪ್ರಗತಿ ವಿರೋಧಿ, ಅಂಧಶ್ರದ್ಧೆ, ತರ್ಕಹೀನತೆ ಮತ್ತು ಅವಿವೇಕತನಕ್ಕೆ ಪ್ರಾಶಸ್ತ್ಯ ನೀಡಿ, ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ತತ್ವಗಳು ಮತ್ತು ಮೌಲ್ಯಗಳ ಕುರಿತು ಯುವಜನತೆಯ ಪ್ರಜ್ಞೆಯನ್ನು ಬಲಪಡಿಸುವ ಬದಲು ಕೋಮುವಾದಿ ಹಿಂದುತ್ವದ ಕಾರ್ಯಸೂಚಿಯನ್ನು ಮುನ್ನಡೆಸುವಂತದ್ದು. ಭಾರತದ ಶ್ರೀಮಂತ ಇತಿಹಾಸದ ಕಲಿಕೆಗಳ ಬದಲಿಗೆ ಹಿಂದು ಪುರಾಣಗಳ ಮೇಲೆ ಮತ್ತು ಭಾರತದ ತತ್ವಶಾಸ್ತ್ರಗಳ ಹಲವಾರು ಸಮನ್ವಯದ ಧಾರೆಗಳ ಬದಲಿಗೆ ಹಿಂದು ಧರ್ಮಶಾಸ್ತ್ರದ ಗಮನ ಕೇಂದ್ರೀಕರಿಸುವುದಾಗಿದೆ.

2.94 ಪರಿಣಾಮವಾಗಿ ಭಾರತೀಯ ಶಿಕ್ಷಣದಲ್ಲಿ ಸದಾ ದುರ್ಬಲವಾಗಿದ್ದ ಪ್ರಮಾಣ, ಗುಣಮಟ್ಟ ಮತ್ತು ಸಮತ್ವದ ನಡುವಿನ ಸಮತೋಲನವು ಈಗ ನಾಶವಾಗಿಯೇ ಬಿಡುತ್ತದೆ.

2.95 ನಮ್ಮ ಶಿಕ್ಷಣ ನೀತಿಯಲ್ಲಿನ ಇಂತಹ ದೂರಗಾಮಿ ಬದಲಾವಣೆಗಳನ್ನು ಪ್ರತಿರೋಧಿಸಲು ಶಿಕ್ಷಣದಲ್ಲಿ ತೊಡಗಿರುವ  ಎಲ್ಲ ವಿಭಾಗಗಳನ್ನು ಮತ್ತು ಬುದ್ಧಿಜೀವಿಗಳನ್ನು ಒಂದುಗೂಡಿಸುವ ವಿಶಾಲವಾದ ಹೋರಾಟವನ್ನು ಬಲಪಡಿಸಬೇಕು.

2.96 ವಿವೇಚನೆ ಮತ್ತು ವಿಚಾರವಂತಿಕೆಯ ಮೇಲೆ ದಾಳಿ: ಹಿಂದುತ್ವ ಸಿದ್ಧಾಂತವು ಅವೈಜ್ಞಾನಿಕ ಮತ್ತು ಅನೈತಿಹಾಸಿಕವಾಗಿದ್ದು ವಿಚಾರಶೀಲತೆ ಮತ್ತು ವಿವೇಚನೆ ಎರಡರ ಮೇಲೆಯೂ ಪ್ರಹಾರ ಮಾಡುತ್ತದೆ. ಕಂದಾಚಾರ, ಅಂಧಶ್ರದ್ಧೆ ಮತ್ತು ಹಿಂದುಳಿಕೆ ಹರಡುವುದು-ಹರಡುವಿಕೆಯು ಹಿಂದೂ ಪುರಾಣ ಶಾಸ್ತ್ರಗಳನ್ನು ಮನೋಗತ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಇದನ್ನೇ ನೈಜ ಇತಿಹಾಸ ಎಂದು ಹೆಚ್ಚೆಚ್ಚಾಗಿ ದಾಟಿಸಬಹುದು. ಜನರ ಮಧ್ಯೆ ಅಂಧಶ್ರದ್ಧೆಯ ಪ್ರಚಾರವು ಅವರನ್ನು ಅವೈಜ್ಞಾನಿಕ ಮತ್ತು ಅತಾರ್ಕಿಕ ಪ್ರವಚನಗಳಿಗೆ ಹೆಚ್ಚು ತೆರೆದುಕೊಳ್ಳುವಂತೆ ಮಾಡುತ್ತದೆ. ಇದು ವೈಜ್ಞಾನಿಕ ಮನೋಭಾವ ಮತ್ತು ವಿಚಾರಶೀಲತೆಯ ಮೇಲೆ ಪ್ರಹಾರ ಮಾಡುತ್ತದೆ.

2.97 ಹೊಸ ಶಿಕ್ಷಣ ನೀತಿಯಲ್ಲಿ ಅಂತಹ ಚಿಂತನೆಯ ಮಾರ್ಗವನ್ನು ಉತ್ತೇಜಿಸುವವರ ಜೊತೆಗೆ ಭಾರತದ ಎಲ್ಲ ಸಾಂಸ್ಕೃತಿಕ ಮತ್ತು ಸಂಶೋಧನಾ ಸಂಸ್ಥೆಗಳನ್ನು ಆರ್‌ಎಸ್‌ಎಸ್ ಮಂದಿಗಳಿಂದ ನಿಯಂತ್ರಿಸಲಾಗುತ್ತಿದೆ. ಮತ್ತು ಹಿಂದುತ್ವದ ಅಜೆಂಡಾವನ್ನು ಮುನ್ನಡೆಸಲು ಭಾರತೀಯ ಇತಿಹಾಸವನ್ನು ಪುನರ‍್ರಚಿಸಲು ಹೆಚ್ಚೆಚ್ಚಾಗಿ ಬಳಸಲಾಗುತ್ತದೆ. ಹಿಂದುತ್ವ ಸಿದ್ಧಾಂತದ ಮತ್ತು ಚಿಂತನೆಯ ಹರಡುವಿಕೆಗೆ ಸಾಂಸ್ಕೃತಿಯ ಏಕರೂಪೀಕರಣ ಅತ್ಯಗತ್ಯ. ವಿವೇಚನೆಯ ಬದಲಿಗೆ ವಿವೇಚನಾರಹಿತತೆಯನ್ನು ಮತ್ತು ವಿಚಾರವಂತಿಕೆಯ ಬದಲು ವಿಚಾರಹೀನತೆಯನ್ನು ಬೆಳೆಸುವ ಪ್ರಯತ್ನಗಳು ಜನರಿಂದ ವೈಜ್ಞಾನಿಕ ದೃಷ್ಠಿಕೋನವನ್ನು ಮತ್ತು ಸಂವಾದವನ್ನು ಕಸಿದುಕೊಳ್ಳುವ ಹಾನಿಕಾರಕ ಕಸರತ್ತುಗಳಾಗಿವೆ.

2.98 ಪರಿಸರ ಮತ್ತು ಹವಾಮಾನ ಬದಲಾವಣೆ: ಜಾಗತಿಕ ಹವಾಮಾನ ಬದಲಾವಣೆಯಿಂದಾಗಿ ದೇಶವು ತೀವ್ರವಾದ ಹವಾಮಾನ ವೈಪರೀತ್ಯಗಳನ್ನು ಕಾಣುತ್ತಿದೆ. ವಿಪರೀತ ಮಳೆಯ ಬಹಳಷ್ಟು ಪ್ರದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾಗಿದ್ದು ಬೆಳೆಗಳು ಮತ್ತು ಮೂಲಸೌಕರ್ಯಗಳಿಗೆ ಹಾನಿಯನ್ನುಂಟು ಮಾಡಿವೆ. ನಗರ ಪ್ರದೇಶಗಳಲ್ಲಿ ಪ್ರವಾಹವು ಸಾಮಾನ್ಯ ವಿಷಯವಾಗುತ್ತಿದೆ. ಸಮುದ್ರ ಕೊರೆತ ಮತ್ತು ಸಮುದ್ರ ಮಟ್ಟ ಏರಿಕೆಯು ಕರಾವಳಿ ಪ್ರದೇಶಗಳು ಮತ್ತು ಮೀನುಗಾರರು ಮತ್ತು ರೈತರ ಜೀವನ ಮತ್ತು ಜೀವನೋಪಾಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತಿವೆ. ಇದು ಕಳಪೆಯಾಗಿ ಯೋಜಿಸಲಾದ ಮತ್ತು ಜಾರಿಗೊಳಿಸಿದ ಮೂಲಸೌಕರ್ಯ ಯೋಜನೆಗಳಿಂದಾಗಿ ದುರ್ಬಲವಾದ ಹಿಮಾಲಯ ಪ್ರದೇಶಕ್ಕೆ ಉಂಟಾದ ಹಾನಿಯಿಂದ ಮತ್ತಷ್ಟು ಜಟಿಲವಾಗಿದೆ.

2.99 ಹವಾಮಾನ ಬದಲಾವಣೆಯ ವಿವಿಧ ಪ್ರತಿಕೂಲ ಪರಿಣಾಮಗಳನ್ನು ಎದುರಿಸಲು ಸರ್ಕಾರವು ಏನನ್ನೂ ಮಾಡುತ್ತಿಲ್ಲ. ಇದಕ್ಕೆ ವಿರುದ್ಧವಾಗಿ ಸರ್ಕಾರವು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಕಾನೂನುಗಳನ್ನು ದುರ್ಬಲಗೊಳಿಸಿದೆ ಮತ್ತು ಬುಡಮೇಲು ಮಾಡಿದೆ. ‘ಪರಿಸರ ಪ್ರಭಾವದ ಮೌಲ್ಯಮಾಪನ’ವನ್ನು ದುರ್ಬಲಗೊಳಿಸುವದು, ಭಾರತೀಯ ಅರಣ್ಯ ಕಾಯ್ದೆಗೆ ಪ್ರಾಸ್ತಾವಿತ ತಿದ್ದುಪಡಿ ಮತ್ತು ‘ಗಣಿಗಳು ಮತ್ತು ಖನಿಜ ಕಾಯ್ದೆ’ಗೆ ತಂದಿರುವ ಹಿಂದಿನ ತಿದ್ದುಪಡಿ ಇವೆಲ್ಲವೂ ಭಾರತದ ಅರಣ್ಯಗಳ ವಾಣಿಜ್ಯೀಕರಣ ಮತ್ತು ಖಾಸಗೀಕರಣ ಮತ್ತು ಗಣಿಗಾರಿಕೆ ಮತ್ತು ಮೂಲಸೌಕರ್ಯ ಯೋಜನೆಗಳನ್ನು ವಿವೇಚನಾ ರಹಿತವಾಗಿ ಅನುಮತಿಸುವ ಉದ್ದೇಶವನ್ನು ಹೊಂದಿವೆ. ಇದು ಪರಿಸರಕ್ಕೆ ಮತ್ತು ಆದಿವಾಸಿಗಳು ಮತ್ತು ಇನ್ನಿತರ ಅರಣ್ಯವಾಸಿಗಳ ಜೀವ ಮತ್ತು ಜೀವನೋಪಾಯಗಳಿಗೆ ಹಾನಿಕಾರಕವೆಂದು ಸಾಬೀತಾಗಲಿದೆ. ಅರಣ್ಯಗಳ ಕುರಿತ ಈ ಪ್ರತಿಗಾಮಿ ನಿಲುವಿನಿಂದಾಗಿಯೇ COP26ರಲ್ಲಿ 2030ರ ವೇಳೆಗೆ ಅರಣ್ಯ ನಾಶವನ್ನು ಕೊನೆಗೊಳಿಸುವ ಯೋಜನೆಯಲ್ಲಿ ಭಾರತವು ನೂರಕ್ಕೂ ಹೆಚ್ಚು ದೇಶಗಳೊಂದಿಗೆ ಸೇರಿಕೊಳ್ಳದಿರಲು ಕಾರಣವಾಯಿತು. ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿದರೆ ಹವಾಮಾನದ ಪರಿಣಾಮಗಳನ್ನು ತುರ್ತಾಗಿ ನಿಭಾಯಿಸಲು ರಾಜ್ಯ ಸರ್ಕಾರಗಳು, ರಾಜಕೀಯ ಪಕ್ಷಗಳು, ತಜ್ಞರು ಮತ್ತು ಇತರೆ ಭಾಗೀದಾರರನ್ನು ಒಳಗೊಂಡಿರುವ ಒಂದು ರಾಷ್ಟ್ರೀಯ ಪ್ರಾತಿನಿಧಿಕ ಸಂಸ್ಥೆಯನ್ನು ರಚಿಸುವುದು ಅಗತ್ಯವಾಗಿದೆ.

ವಿದೇಶಾಂಗ ನೀತಿ

2.100 ಅಮೇರಿಕ ಸಾಮ್ರಾಜ್ಯಶಾಹಿಯ ಅಡಿಯಾಳು ಮಿತ್ರ: ಮೋದಿ ಸರ್ಕಾರವು ಅಮಯದ ಒರಗಲ್ಲಲ್ಲಿ ಸಾಬೀತಾದ ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಕೈಬಿಟ್ಟಿದೆ. ಭಾರತವು ಎಲ್ಲಾ ಜಾಗತಿಕ ವಿಷಯಗಳಲ್ಲಿ ಅಮೇರಿಕ ಸಾಮ್ರಾಜ್ಯಶಾಹಿಯ ಅಡಿಯಾಳು ಮಿತ್ರ ಮತ್ತು ಸಾಕು ಪ್ರತಿನಿಧಿಯ ಮಟ್ಟಕ್ಕೆ ಕುಸಿದಿದೆ.

2.101 ಮೋದಿ ಪ್ರಧಾನ ಮಂತ್ರಿಯಾದ ನಂತರ ಅವರು ಸತತವಾಗಿ ಅಲಿಪ್ತ ಚಳುವಳಿಯ ಶೃಂಗಸಭೆಗಳಲ್ಲಿ ಭಾಗವಹಿಸಲಿಲ್ಲ. ಭಾರತವು ಇಸ್ರೇಲ್‌ನೊಂದಿಗೆ ವ್ಯೂಹಾತ್ಮಕ ಸಂಬಂಧಗಳನ್ನು ಗಟ್ಟಿಗೊಳಿಸಿಕೊಂಡಿದ್ದು ಪ್ಯಾಲೆಸ್ತೇನಿಯನ್ ಗುರಿ ಮತ್ತು ಹೋರಾಟಗಳಿಗೆ ನಮ್ಮ ಸಾಂಪ್ರದಾಯಿಕ ಬೆಂಬಲ ಮತ್ತು ಸೌಹಾರ್ದತೆಯನ್ನು ದುರ್ಬಲಗೊಳಿಸಿದೆ.

2.102 ಪಕ್ಷದ 22ನೇ ಮಹಾಧಿವೇಶನದಿಂದ ಭಾರತವು ಅಮೇರಿಕದೊಂದಿಗೆ ವ್ಯೂಹಾತ್ಮಕ ಮತ್ತು ಮಿಲಿಟರಿ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಅಮೇರಿಕ, ಜಪಾನ್, ಆಸ್ಟ್ರೇಲಿಯ ಮತ್ತು ಭಾರತದ ಚತುರ್ಭುಜೀಯ ಮೈತ್ರಿಕೂಟ(ಕ್ವಾಡ್) 2018ರಲ್ಲಿ ಕಾರ್ಯದರ್ಶಿಗಳ ಮಟ್ಟದ ಸಭೆಯಿಂದ ಪ್ರಾರಂಭವಾಯಿತು. 2019ರಲ್ಲಿ ಇದನ್ನು ವಿದೇಶಾಂಗ ಸಚಿವರುಗಳ ಮಟ್ಟಕ್ಕೆ ಎತ್ತರಿಸಲಾಯಿತು. ನಂತರದಲ್ಲಿ ಭಾರತ-ಶಾಂತಸಾಗರ ಪ್ರದೇಶದಲ್ಲಿ ಚೀನಾವನ್ನು ಒಂಟಿಯಾಗಿಸುವ ಗುರಿಯೊಂದಿಗೆ ಅಮೇರಿಕ ಸಾಮ್ರಾಜ್ಯಶಾಹಿಯ ಕ್ವಾಡ್ ನ್ನು ಒಂದು ಸಕ್ರಿಯ ವ್ಯೂಹಾತ್ಮಕ ಮತ್ತು ಮಿಲಿಟರಿ ಮೈತ್ರಿಕೂಟವಾಗಿ ಪರಿವರ್ತಿಸುವ ಪ್ರಯತ್ನಗಳಲ್ಲಿ ಭಾರತವೂ ಸೇರಿಕೊಂಡಿತು.

2.103 2018ರಲ್ಲಿ ಭಾರತ ಮತ್ತು ಅಮೇರಿಕೆಯ ವಿದೇಶಾಂಗ ಮತ್ತು ರಕ್ಷಣಾ ಸಚಿವರ ನಡುವೆ 2+2 ಸ್ವರೂಪದ ನಿಯಮಿತ ಸಭೆಗಳು ಪ್ರಾರಂಭವಾದವು. 2019ರಲ್ಲಿ ಈ 2+2 ಸಭೆಯು ಅಮೇರಿಕದ ಅತ್ಯಾಧುನಿಕ ಮಿಲಿಟರಿ ತಂತ್ರಜ್ಞಾನವನ್ನು ಭಾರತಕ್ಕೆ ವರ್ಗಾಯಿಸುವ ‘ಕೈಗಾರಿಕಾ ಭದ್ರತೆ ಜೋಡಣೆ’ (Industrial Security Annexe) ಒಪ್ಪಂದವನ್ನು ಮಾಡಿಕೊಂಡಿತು. ವ್ಯೂಹಾತ್ಮಕ ಮಿಲಿಟರಿ ಸಹಕಾರದ ಮೂರು ಬುನಾದಿ ಒಪ್ಪಂದಗಳಲ್ಲಿ ಎರಡಕ್ಕೆ ಮೋದಿಯವರ ಮೊದಲ ಸರ್ಕಾರದ ಅವಧಿಯಲ್ಲಿ ಸಹಿ ಹಾಕಲಾಯಿತು – 2016ರಲ್ಲಿ LEMOA ಮತ್ತು 2018ರಲ್ಲಿ COMCASA. ಮೂರನೇ ಹಾಗೂ ಕೊನೆಯ ಒಪ್ಪಂದ ‘ಮೂಲ ವಿನಿಮಯ ಸಹಕಾರ ಒಪ್ಪಂದ’ (BECA)ಕ್ಕೆ ಅಕ್ಟೋಬರ್ 27, 2020ರಂದು ಸಹಿ ಹಾಕಿ ದೀರ್ಘಾವಧಿ ಮಿಲಿಟರಿ ಮತ್ತು ವ್ಯೂಹಾತ್ಮಕ ಸಹಕಾರದ ಚೌಕಟ್ಟನ್ನು ಭದ್ರಗೊಳಿಸಲಾಯಿತು.

2.104 BECA ನಮ್ಮ ದೇಶದ ಭದ್ರತೆಗೆ ಹಾನಿಕಾರಕವಾದ ಆತಂಕಕಾರಿ ಅಂಶಗಳನ್ನು ಹೊಂದಿದೆ. ಇದು ಎರಡೂ ಸೇನೆಗಳ ನಡುವೆ ಭೌಗೋಳಿಕ-ರಾಜಕೀಯ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತದೆ. ಇದು ಹವಾಯಿಯಲ್ಲಿರುವ ಅಮೆರಿಕಾದ ಏಶಿಯಾ ಫೆಸಿಫಿಕ್ ಕಮಾಂಡ್‌ನ ಪ್ರಧಾನ ಕಛೇರಿಯೊಂದಿಗೆ ದೆಹಲಿಯಲ್ಲಿರುವ ಭಾರತದ ನೌಕಾಪಡೆಯ ಪ್ರಧಾನ ಕಛೇರಿಯ ಶಾಶ್ವತ ಸಂಪರ್ಕವನ್ನು ಸ್ಥಾಪಿಸುತ್ತದೆ.

2.105 ಭಾರತವು ಅಮೇರಿಕೆಯಿಂದ ವಿಮಾನಗಳು ಮತ್ತು ಹೆಲಿಕಾಪ್ಟರುಗಳು ಒಳಗೊಂಡಂತೆ ಮಿಲಿಟರಿ ಉಪಕರಣಗಳ ಹೆಚ್ಚಿನ ಖರೀದಿಗೆ ಕೂಡ ಒಪ್ಪಿಕೊಂಡಿದೆ. ಮಿಲಿಟರಿ ಸರಂಜಾಮುಗಳಿಗೆ ಭಾರತವು ಸಂಪೂರ್ಣವಾಗಿ ಅಮೇರಿಕ ಮತ್ತು ಇಸ್ರೇಲ್ ಮೇಲೆ ಅವಲಂಬಿತವಾಗುತ್ತಿದೆ.

2.106 ಭಾರತ-ಚೀನಾ ಸಂಬಂಧಗಳು: ಭಾರತ-ಚೀನಾ ಮಿಲಿಟರಿ ಬಿಕ್ಕಟ್ಟು ಒಂದು ದೈಹಿಕ ಸಂಘರ್ಷಕ್ಕೂ ಎಡೆ ಮಾಡಿ, ಎರಡೂ ಕಡೆ ಸಾವುಗಳಾಗಿದ್ದು, ಜೂನ್ 15, 2020ರಂದು ಭಾರತದ 20 ಸೈನಿಕರು ತಮ್ಮ ಜೀವ ಕಳೆದುಕೊಂಡರು. 45 ವರ್ಷಗಳ ನಂತರ ಭಾರತ-ಚೀನಾ ‘ನಿಜ ಹತೋಟಿ ರೇಖೆ(ಎಲ್.ಎ.ಸಿ.)ಯಲ್ಲಿ ಈ ರೀತಿಯ ಹಿಂಸಾತ್ಮಕ ಘರ್ಷಣೆ ನಡೆದಿದೆ. ಲಡಾಖ್‌ನ ಗಾಲ್ವಾ ಕಣಿವೆಯಲ್ಲಿನ ಈ ಘಟನೆ ಶಾಂತಿ ಮತ್ತು ನೆಮ್ಮದಿಯ ಗಂಭೀರ ಉಲ್ಲಂಘನೆಯಾಗಿದೆ.

2.107 ಭಾರತ ಸರ್ಕಾರವು ತೆಗೆದುಕೊಂಡ ನಿಲುವು ಮತ್ತು ಧೋರಣೆಗೆ ಪಕ್ಷ ಬೆಂಬಲ ನೀಡಿತು. ಒಟ್ಟಾರೆ ಸನ್ನಿವೇಶವನ್ನು ಒಂದು ಜವಾಬ್ದಾರಿಯುತ ರೀತಿಯಲ್ಲಿ ನಿಭಾಯಿಸಲಾಗುವುದು ಮತ್ತು ಎರಡೂ ಕಡೆಗಳು ಹಿಂದಕ್ಕೆ ಸರಿಯುವ ತಿಳುವಳಿಕೆಯನ್ನು ಪ್ರಾಮಾಣಿಕತೆಯಿಂದ ಜಾರಿಗೊಳಿಸುತ್ತವೆ ಎಂದು ಒಪ್ಪಿಕೊಳ್ಳಲಾಗಿದೆ ಎಂದು ಭಾರತ ಪ್ರಕಟಿಸಿದ ಹೇಳಿಕೆ ತಿಳಿಸಿತು. ಯಾವುದೇ ಕಡೆಯವರು ವಿಷಯವನ್ನು ಉಲ್ಬಣಗೊಳಿಸುವ ಯಾವುದೇ ಕಾರ್ಯಾಚರಣೆ ನಡೆಸುವುದಿಲ್ಲ, ಬದಲಿಗೆ ದ್ವಿಪಕ್ಷೀಯ ಒಪ್ಪಂದಗಳು ಮತ್ತು ಶಿಷ್ಟಾಚಾರ ನಿಯಮಾವಳಿಗಳಿಗೆ ಅನುಗುಣವಾಗಿ ಶಾಂತಿ ಮತ್ತು ನೆಮ್ಮದಿಯನ್ನು ಕಾಯ್ದುಕೊಳ್ಳಲಾಗುತ್ತದೆ.

2.108 ಎಲ್.ಎ.ಸಿ. ಗಡಿ ಗುರುತಿಸುವಿಕೆಯಲ್ಲಿ ಸ್ಪಷ್ಟತೆಯ ಕೊರತೆಯಿಂದಾಗಿ ಈ ತರಹದ ವಿವಾದಗಳು ಮತ್ತು ಬಿಕ್ಕಟ್ಟುಗಳ ಸನ್ನಿವೇಶಗಳು ಉಂಟಾಗುತ್ತವೆ. ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಲು ಭಾರತ ಮತ್ತು ಚೀನಾ ದೇಶಗಳೆರಡೂ ಸಹ ಎಲ್.ಎ.ಸಿ.ಯ ಒಂದು ಸ್ಪಷ್ಟ ಗಡಿ ಗುರುತಿಸುವಿಕೆಯನ್ನು ಒಪ್ಪಿಕೊಳ್ಳಬೇಕು.

2.109 ನಮ್ಮ ಪಕ್ಷ ಮತ್ತು ಕಮ್ಯೂನಿಷ್ಟರ ವಿರುದ್ಧ “ಚೀನಾ ಪರ” ಎನ್ನುವ ಹುಚ್ಚು ಪ್ರತಿಗಾಮಿ ಬಲಪಂಥೀಯ ಶಕ್ತಿಗಳ ಅಪಪ್ರಚಾರದ ಬಗ್ಗೆ ಮತ್ತು ಅದನ್ನು ಎದುರಿಸಲು ಪ್ರಜ್ಞಾಪೂರ್ವಕವಾಗಿ, ವಿಚಕ್ಷಣೆಯಿಂದ ಇರಬೇಕು. ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ಇಂತಹ ಪ್ರಚಾರಗಳೆಲ್ಲ ತಿರುಚಿದ ಚಿತ್ರಗಳು ಮತ್ತು ಸಂಪೂರ್ಣ ಸುಳ್ಳುಗಳನ್ನು ಬಳಸಿದ ಹುಸಿ ಸುದ್ದಿಗಳು ಎಂದು ಸಾಬೀತಾಗಿವೆ.

ಬೆಳೆಯುತ್ತಿರುವ ಹೋರಾಟಗಳು

2.110 ನಮ್ಮ 22ನೇ ಮಹಾಧಿವೇಶನದ ನಂತರದ ಅವಧಿಯ ಮುಖ್ಯಾಂಶವೆಂದರೆ ಬೃಹತ್ ಪ್ರಮಾಣದ ಸಂಘಟಿತ ಮತ್ತು ಸ್ವಯಂಸ್ಫೂರ್ತ ಜನತೆಯ ಹೋರಾಟಗಳು. ಸಿಎಎ ವಿರುದ್ಧ, ರೈತರ ಹೋರಾಟ, ಕಾರ್ಮಿಕ ಸಂಘಟನೆಗಳ ಮುಷ್ಕರಗಳು ಮತ್ತು ಕಾರ್ಯಾಚರಣೆಗಳು ಇವನ್ನೆಲ್ಲ ಪಕ್ಷ ಸಕ್ರಿಯವಾಗಿ ಬೆಂಬಲಿಸಿತು ಮತ್ತು ಸೌಹಾರ್ದವನ್ನು ವ್ಯಕ್ತಪಡಿಸಿತು. ಇವುಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು, ವಿಶೇಷವಾಗಿ ಶಾಹೀನ್ ಬಾಗ್‌ನಲ್ಲಿ ನಡೆದ ಸಿಎಎ ವಿರುದ್ಧದ ಹೋರಾಟದಲ್ಲಿ.

2.111 ಸಿಎಎ ವಿರುದ್ಧದ ಹೋರಾಟ: ಸಿಎಎಯನ್ನು ಒಂದು ಕಾನೂನಾಗಿ ಮಾಡಿದ ಕೂಡಲೇ, ಪೌರತ್ವಕ್ಕೆ ಸಂವಿಧಾನ ನೀಡಿದ ನಿರ್ವಚನೆಯ ಈ ನಾಚಿಕೆಗೆಟ್ಟ ಉಲ್ಲಂಘನೆಯ ವಿರುದ್ಧ ಸ್ವಯಂಸ್ಫೂರ್ತಿಯಿಂದ ಹೋರಾಟಗಳು ಎದ್ದು ಬಂದವು. ಸಿಎಎ ಮುಸ್ಲಿಂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿದೆ ಮತ್ತು ಜಾತ್ಯತೀತತೆ ಮತ್ತು ಕೋಮು ಸೌಹಾರ್ದತೆಯ ತತ್ವಗಳ ಬುನಾದಿಯನ್ನು ನಾಶ ಮಾಡುತ್ತದೆ ಎಂದು ಸರಿಯಾಗಿಯೇ ಕಾಣಲಾಯಿತು. ಹಿಂದುತ್ವ ಪಡೆಗಳ ಆಕ್ರಮಣಕಾರೀ ದಾಳಿಗಳನ್ನು ಪ್ರತಿರೋಧಿಸುವ ಈ ಹೋರಾಟಗಳಲ್ಲಿ ಯುವಜನ ಮುಂಚೂಣಿಯಲ್ಲಿ ಇದ್ದರು. ಹಲವು ಕ್ಯಾಂಪಸ್‌ಗಳಲ್ಲಿ ಹಿಂದುತ್ವ ಕೋಮುವಾದಿ ಗ್ಯಾಂಗ್‌ಗಳು ಹಿಂಸಾತ್ಮಕ ದೈಹಿಕ ಹಲ್ಲೆಗಳನ್ನು ಹರಿಯ ಬಿಟ್ಟಾಗ ಪೊಲೀಸರು ನಾಚಿಕೆಯಿಲ್ಲದೆ ಅವರ ಪರವನ್ನೇ ವಹಿಸಿದರು. ಜನರ ಆಂದೋಲನಗಳು, ಮಹಿಳೆಯರ ದೊಡ್ಡ ವಿಭಾಗಗಳು, ಬುದ್ಧಿಜೀವಿಗಳು, ಅಧ್ಯಯನಕಾರರು ಮತ್ತು ಎನ್‌ಜಿಓಗಳು ಇದರಲ್ಲಿ ತೊಡಗಿಕೊಳ್ಳುವುದರೊಂದಿಗೆ ತ್ವರಿತವಾಗಿ ಈ ಪ್ರತಿಭಟನೆಗಳು ದೇಶದೆಲ್ಲೆಡೆ ಹರಡಿದವು. ಈ ಎಡೆಬಿಡದ ಹೋರಾಟದಲ್ಲಿ, ದೆಹಲಿಯ ಶಾಹೀನ್ ಬಾಗ್ ನಲ್ಲಿ ಹಗಲು-ರಾತ್ರಿ ನಡೆದ ದೀರ್ಘ ಹೋರಾಟ ಗಮನಾರ್ಹವಾಗಿತ್ತು.  ದೇಶದೆಲ್ಲೆಡೆ ಈ ರೀತಿಯ ಶಾಂತಿಯುತ ಧರಣಿಗಳು ನೂರಾರು ಸ್ಥಳಗಳಲ್ಲಿ ನಡೆದವು.

2.112 ಮಹಾಸೋಂಕು ಮತ್ತು ಮಾರ್ಚ್ 2020ರಲ್ಲಿ ಘೋಷಿಸಿದ ರಾಷ್ಟ್ರೀಯ ಲಾಕ್‌ಡೌನ್‌ನಿಂದಾಗಿ ಈ ಸಿಎಎ-ವಿರೋಧಿ ಹೋರಾಟ ಸ್ಥಗಿತಗೊಂಡಿತು. ಆದರೆ ಇದು ಮೋದಿ ಸರ್ಕಾರದ ಹಿಂದುತ್ವ ಅಜೆಂಡಾದ ವಿರುದ್ಧ ನಡೆದ ಮೊದಲ ಗಂಭೀರ ಸಾಮೂಹಿಕ ಚಳುವಳಿಯಾಗಿತ್ತು.

2.113 ರೈತರ ಐತಿಹಾಸಿಕ ಹೋರಾಟ: ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಡಿ ವರ್ಷವಿಡೀ ನಡೆದ ರೈತರ ಐತಿಹಾಸಿಕ ಹೋರಾಟ, ಗರಿಷ್ಟ ಲಾಭಕ್ಕಾಗಿ ಕೃಷಿಯ ಮೇಲೆ ಕಾರ್ಪೊರೇಟ್ ನಿಯಂತ್ರಣ ಪಡೆಯಲು ಆಳುವ ವರ್ಗಗಳು ರೂಪಿಸಿದ್ದ ಮೂರು ಪ್ರತಿಗಾಮಿ ಕೃಷಿ ಕಾನೂನುಗಳನ್ನು ಮೋದಿ ಸರ್ಕಾರವು ರದ್ದು ಮಾಡುವಂತೆ ಬಲವಂತ ಮಾಡಿ ವಿಜಯಶಾಲಿಯಾಯಿತು.

2.114 ನವೆಂಬರ್ 26, 2020 ರಿಂದ ಹತ್ತಾರು ಸಾವಿರ ರೈತರು, ಪುರುಷರು ಮತ್ತು ಮಹಿಳೆಯರು ದೆಹಲಿಯ ಗಡಿಗಳಲ್ಲಿನ ಹೆದ್ದಾರಿಗಳ ಐದು ಕಡೆಗಳಲ್ಲಿ ಧರಣಿ ಕೂತರು. ದೆಹಲಿ ಗಡಿ ತಲುಪುವಲ್ಲಿ ಪೊಲೀಸ್ ದಬ್ಬಾಳಿಕೆಯನ್ನು ಎದುರಿಸಿದರು. ಈ ವಿಶಿಷ್ಟ ಸ್ವರೂಪದ ಹೋರಾಟ ಲಕ್ಷಾಂತರ ರೈತರನ್ನು, ಪ್ರಮುಖವಾಗಿ ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶದಿಂದ ಲಕ್ಷಾಂತರ ರೈತರನ್ನು ಹಾಗೂ ಉತ್ತರಾಖಂಡ, ರಾಜಸ್ಥಾನ ಮತ್ತು ಮಧ್ಯ ಪ್ರದೇಶಗಳಿಂದ ಬಹಳಷ್ಟು ಅಣಿನೆರಿಕೆಗಳನ್ನು ಸೆಳೆಯಿತು. ಉಳಿದ ರಾಜ್ಯಗಳಲ್ಲಿ ಸಾಮೂಹಿಕ ಪ್ರತಿಭಟನೆಗಳು ಮತ್ತು ಸೌಹಾರ್ದ ಕಾರ್ಯಾಚರಣೆಗಳು ನಡೆದವು. ಈ ಹೋರಾಟ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆಯಿತು. ತೀವ್ರವಾದ ಚಳಿ, ಕಾಯಿಲೆ ಮತ್ತು ಅಪಘಾತಗಳಿಂದಾಗಿ 715 ರೈತರು ಮಡಿದರು. ಈ ಅವಧಿಯಲ್ಲಿ ಡಿಸೆಂಬರ್ 8, 2020, ಮಾರ್ಚ್ 26, 2021 ಮತ್ತು ಸೆಪ್ಟೆಂಬರ್ 27, 2021 ರಂದು ಒಟ್ಟು ಮೂರು ದೇಶವ್ಯಾಪಿ ಬಂದ್‌ಗಳು ನಡೆದವು. ಈ ಹೋರಾಟವು ಕಾರ್ಮಿಕರು-ರೈತರ ಜಂಟಿ ಕಾರ್ಯಾಚರಣೆಗಳು ಬೆಳೆದು ಬರುವುದಕ್ಕೆ ಸಾಕ್ಷಿಯಾಯಿತು. ಕೇಂದ್ರ ಕಾರ್ಮಿಕ ಸಂಘಟನೆಗಳು ನವೆಂಬರ್ 26, 2020ರಂದು ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ ದಿನದಂದು ರೈತ ಸಂಘಟನೆಗಳು ಮೊದಲ ದೆಹಲಿ ಚಲೋಗೆ ಕರೆ ನೀಡಿದ್ದವು.

2.115 ಈ ದೀರ್ಘಕಾಲದ ಹೋರಾಟಕ್ಕೆ ಮಣಿದು ವಿಧಾನಸಭಾ ಚುನಾವಣೆಗಳ ಸುತ್ತಿನ ಸ್ವಲ್ಪವೇ ಮೊದಲು ಕೃಷಿ ಕಾನೂನುಗಳನ್ನು ರದ್ದು ಮಾಡಿದರೂ, ಎಲ್ಲ ಬೆಳೆಗಳು ಮತ್ತು ಎಲ್ಲ ರೈತರಿಗೆ ಅನ್ವಯವಾಗುವಂತೆ ಕನಿಷ್ಟ ಬೆಂಬಲ ಬೆಲೆಯನ್ನು ಒಂದು ಕಾನೂನಾತ್ಮಕ ಹಕ್ಕಾಗಿ ಮಾಡಬೇಕೆನ್ನುವ ಪ್ರಮುಖ ಬೇಡಿಕೆ ಇನ್ನೂ ಸಾಕಾರಗೊಂಡಿಲ್ಲ. ವಿವರಗಳನ್ನು ಪರಿಶೀಲಿಸಲು ಒಂದು ಸಮಿತಿಯ ರಚನೆಯಾಗುತ್ತದೆ ಎಂದು ಭರವಸೆ ನೀಡಿದ್ದರೂ, ಈ ವರೆಗೂ ಈ ಸಮಿತಿ ರಚನೆಯಾಗಿಲ್ಲ.

2.116 ಈ ಯಶಸ್ವಿ ಐತಿಹಾಸಿಕ ಹೋರಾಟ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಮತ್ತು ಒಂದು ಉತ್ತಮ ಜೀವನಕ್ಕಾಗಿ ಹೋರಾಟ ನಡೆಸುತ್ತಿರುವ ಇತರೆ ಎಲ್ಲ ಜನ ವಿಭಾಗಗಳಿಗೆ ಸ್ಫೂರ್ತಿ ನೀಡುತ್ತದೆ.

2.117 ಕಾರ್ಮಿಕರ ಹೋರಾಟಗಳು: ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಸಂಸತ್ತಿನಲ್ಲಿ, ಈಗಿದ್ದ ಎಲ್ಲಾ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು, ಸಾಮಾನ್ಯ ವಿಮೆಯನ್ನು ಖಾಸಗೀಕರಣಗೊಳಿಸಲು ನೆರವಾಗುವ ಕಾನೂನು, ರಕ್ಷಣಾ ಕ್ಷೇತ್ರ ಮತ್ತು ರಕ್ಷಣಾ ಉತ್ಪಾದನೆಗೆ ಸಂಬಂಧಿಸಿದ ಎಲ್ಲಾ ರಂಗಗಳಲ್ಲಿ ಮುಷ್ಕರಗಳನ್ನು ನಿಷೇಧಿಸುವ ಕಾನೂನುಗಳನ್ನು ಪಾಸು ಮಾಡಿಸಿಕೊಂಡಿತು ಮತ್ತು ಸರ್ಕಾರ/ಸಾರ್ವಜನಿಕ ವಲಯದ ಉದ್ದಿಮೆಗಳ ಅಡಿಯಲ್ಲಿರುವ ದೇಶದ ಮೂಲರಚನೆಗಳ ಆಸ್ತಿಗಳು ಮತ್ತು ಖನಿಜ ಸಂಪನ್ಮೂಲಗಳನ್ನು ಉಚಿತವಾಗಿಯೇ ಎನ್ನುವ ರೀತಿಯಲ್ಲಿ ಖಾಸಗಿ ಕೈಗಳಿಗೆ ಒಪ್ಪಿಸಲು ಮುತುವರ್ಜಿ ವಹಿಸಿ ರೂಪಿಸಿದ ರಾಷ್ಟ್ರೀಯ ಆಸ್ತಿ ನಗದೀಕರಣ ಪೈಪ್‌ಲೈನ್ (ಎನ್‌ಎಂಪಿ) ನ್ನು ಪರಿಚಯಿಸಿತು.

2.118 ಕಾರ್ಮಿಕ ವರ್ಗ ಉದ್ದಿಮೆ ಮಟ್ಟದಲ್ಲಿಯೂ ಮತ್ತು ರಾಷ್ಟ್ರೀಯ ಮಟ್ಟದಲ್ಲಿಯೂ ಐಕ್ಯ ಹೋರಾಟಗಳ ಮೂಲಕ ನಿರಂತರವಾಗಿ ಈ ನೀತಿಗಳನ್ನು ವಿರೋಧಿಸುತ್ತಿದೆ. 22ನೇ ಪಕ್ಷದ ಮಹಾಧಿವೇಶನದ ನಂತರದ ಅವಧಿಯಲ್ಲಿ, ಮಹಾಸೋಂಕು ಮತ್ತು ಅದರಿಂದಾಗಿ ಮಾರ್ಚ್ 2020 ರಿಂದ ಜಾರಿಯಲ್ಲಿದ್ದ ಲಾಕ್‌ಡೌನ್ ಮತ್ತು ನಿರ್ಬಂಧಗಳ ನಡುವೆಯೂ ಕಾರ್ಮಿಕ ವರ್ಗ ನಿರಂತರವಾಗಿ ಹೋರಾಟದಲ್ಲಿತ್ತು.

2.119 10 ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ಬಹುತೇಕ ಎಲ್ಲಾ ಸ್ವತಂತ್ರ ವಲಯವಾರು ಒಕ್ಕೂಟಗಳನ್ನು ಒಳಗೊಂಡ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯ ನೇತೃತ್ವದಲ್ಲಿ ಜನವರಿ 8-9, 2019, ಜನವರಿ 8, 2020 ಮತ್ತು ನವೆಂಬರ್ 26, 2020 ರಂದು ಮೂರು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಗಳು ನಡೆದವು. ನಾಲ್ಕನೇ ಮುಷ್ಕರವು ಮಾರ್ಚ್ 28-29, 2022 ರಂದು ನಡೆಯಲಿದೆ.

2.120 ಈ ಸಾರ್ವತ್ರಿಕ ಮುಷ್ಕರಗಳಲ್ಲದೆ, ಕಲ್ಲಿದ್ದಲು, ಉಕ್ಕು, ಬ್ಯಾಂಕ್ ಮತ್ತು ವಿಮಾ ನೌಕರರು, ವೈದ್ಯಕೀಯ ಪ್ರತಿನಿಧಿಗಳು, ಟೆಲಿಕಾಂ, ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರು, ಸ್ಕೀಂ ನೌಕರರು, ಕಟ್ಟಡ ಕಾರ್ಮಿಕರು, ಖಾಸಗಿ ಸಂಘಟಿತ ವಲಯದ ನೌಕರರು ಈ ಅವಧಿಯಲ್ಲಿ, ಮಹಾಸೋಂಕಿನ ಸಮಯದಲ್ಲೂ ಮುಷ್ಕರ- ಹೋರಾಟಗಳನ್ನು ನಡೆಸಿದ್ದಾರೆ. ವಿಶಾಖಪಟ್ಟಣ ಉಕ್ಕು ಸ್ಥಾವರದ ಕಾರ್ಮಿಕರು ಖಾಸಗೀಕರಣದ ವಿರುದ್ಧ ಒಂದು ದೀರ್ಘ ಹೋರಾಟದಲ್ಲಿದ್ದಾರೆ. ವ್ಯಾಪಕ ಸಾರ್ವಜನಿಕ ಜನಾಭಿಪ್ರಾಯವನ್ನು ರೂಪಿಸುವುದು ಅವರಿಗೆ ಸಾಧ್ಯವಾಗಿದೆ. ಈ ಮೂಲಕ ಮೊದಲಿನಿಂದಲೂ ಖಾಸಗೀಕರಣದ ಪರವಾಗಿಯೇ ಇದ್ದ ಎಡಪಂಥೀಯವಲ್ಲದ, ಆಳುವ ವರ್ಗಗಳ ಪಕ್ಷಗಳು ಹೆಚ್ಚಿನವು ಅವರ ಹೋರಾಟಕ್ಕೆ ಬೆಂಬಲ ನೀಡುವಂತೆ ಮತ್ತು ಖಾಸಗೀಕರಣವನ್ನು ವಿರೋಧಿಸುವಂತೆ ಮಾಡಿದ್ದಾರೆ.

2.121 ರೈತ-ಕಾರ್ಮಿಕರ ಜಂಟಿ ಹೋರಾಟಗಳು: ಈ ಅವಧಿ ಕಾರ್ಮಿಕ ಮತ್ತು ರೈತ ಚಳುವಳಿಗಳು ಜತೆಗೂಡಿದ್ದನ್ನು ಮತ್ತು ಜಂಟಿ ಕಾರ್ಯಾಚರಣೆಗಳು ಒಂದುಗೂಡಿದ್ದನ್ನು ಕಂಡಿದೆ. ದೆಹಲಿಯಲ್ಲಿ ಸೆಪ್ಟಂಬರ್ 5, 2018ರಂದು ಸುಮಾರು 2 ಲಕ್ಷ ಕಾರ್ಮಿಕರು ರೈತರು ಮತ್ತು ಕೃಷಿ ಕಾರ್ಮಿಕರು ಪಾಲ್ಗೊಂಡಿದ್ದ ಒಂದು ಬೃಹತ್ ಮಜ್ದೂರ್-ಕಿಸಾನ್ ಸಂಘರ್ಷ ರ‍್ಯಾಲಿ ನಡೆಯಿತು. ಇದಕ್ಕೆ ಮೊದಲು ಆಗಸ್ಟ್ 9, 2018 ರಂದು ದೇಶವ್ಯಾಪಿ 10 ಲಕ್ಷ ಹೋರಾಟಗಾರರಿಂದ ಜೈಲು ಭರೋ ಹೋರಾಟ ನಡೆದಿತ್ತು.

2.122 ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ಕೃಷಿ ಕಾನೂನುಗಳ ರದ್ಧತಿ, ಕನಿಷ್ಠ ಬೆಂಬಲ ಬೆಲೆ ಮತ್ತು ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಯ ಹಿಂಪಡುವಿಕೆಯ ಬೇಡಿಕೆಗಳನ್ನು ಎತ್ತಿತು. ಸಂಯುಕ್ತ ಕಿಸಾನ್ ಮೋರ್ಚಾ, ಕಾರ್ಮಿಕ ಸಂಹಿತೆಗಳ ರದ್ಧತಿ ಮತ್ತು ಖಾಸಗೀಕರಣವನ್ನು ನಿಲ್ಲಿಸುವ ಬೇಡಿಕೆ ಸೇರಿದಂತೆ ಕಾರ್ಮಿಕ ವರ್ಗದ ಬೇಡಿಕೆಗಳನ್ನು ಎತ್ತಿತು. ಇದು ರೈತರು ಮತ್ತು ಕಾರ್ಮಿಕರ ಐಕ್ಯತೆಯನ್ನು ಗಟ್ಟಿಗೊಳಿಸುವ ಒಂದು ವಾತಾವರಣವನ್ನು ನಿರ್ಮಿಸಿತು.

2.123 ವರ್ಗ ಪರಿಣಾಮಗಳು: ಈ ಹೋರಾಟದ ದಾರಿಯಲ್ಲಿ ಅಂತರರಾಷ್ಟ್ರೀಯ ಹಣಕಾಸು ಬಂಡವಾಳದೊಡನೆ ಶಾಮೀಲಾಗಿರುವ ದೊಡ್ಡ ಬಂಡವಳಿಗ ವರ್ಗ ಮತ್ತು ಶ್ರೀಮಂತ ರೈತರ ವಿಭಾಗಗಳೂ ಒಳಗೊಂಡಂತೆ ಸಮಸ್ತ ರೈತಾಪಿಯ ನಡುವೆ ಹೊಸ ವರ್ಗ ಸಂಘರ್ಷಗಳು ಹೊರ ಹೊಮ್ಮಿವೆ.

2.124 ಎರಡನೆಯದಾಗಿ, ಆಳುವ ವರ್ಗ ಪಾಲುದಾರರ ನಡುವೆಯೂ, ದೊಡ್ಡ ಬಂಡವಳಿಗ ವರ್ಗ ಮತ್ತು ಮಧ್ಯಮ ಹಾಗೂ ಸಣ್ಣ ಹಾಗೂ ಅತಿ ಸಣ್ಣ ಉದ್ದಿಮೆದಾರರನ್ನು ಒಳಗೊಂಡ ದೊಡ್ಡದಲ್ಲದ ಬಂಡವಳಿಗ ವರ್ಗ ಇವರ ನಡುವೆಯೂ  ಸಂಘರ್ಷಗಳು ಮೂಡಿ ಬರುತ್ತಿವೆ.

2.125 ಮೂರನೆಯದಾಗಿ, ನಮ್ಮ ಸಂವಿಧಾನದ ಒಕ್ಕೂಟ ಸಂರಚನೆಯನ್ನು ನಾಶ ಮಾಡಿ, ಅದರ ಜಾಗದಲ್ಲಿ ಒಂದು ಏಕಘಟಕ ಪ್ರಭುತ್ವ ಸಂರಚನೆಯನ್ನು ನಿರ್ಮಿಸಿ ತನ್ನ ಸಂಪೂರ್ಣ ರಾಜಕೀಯ ಆಧಿಪತ್ಯವನ್ನು ಸ್ಥಾಪಿಸುವ ಬಿಜೆಪಿಯ ಧಾವಂತದಿಂದಾಗಿ ಕೇಂದ್ರ ಸರ್ಕಾರ ಮತ್ತು ಚುನಾಯಿತ ರಾಜ್ಯ ಸರ್ಕಾರಗಳ ನಡುವೆ ಸಂಘರ್ಷಗಳು ಸೃಷ್ಟಿಯಾಗುತ್ತಿವೆ. ರಾಜ್ಯ ಸರ್ಕಾರಗಳ ನೇತೃತ್ವ ವಹಿಸಿರುವ ಕೆಲವು ಪ್ರಾದೇಶಿಕ ಪಕ್ಷಗಳು ಬಿಜೆಪಿಯನ್ನು ಸಂಸತ್ತಿನಲ್ಲಿ ಬೆಂಬಲಿಸುತ್ತಿದ್ದವರು ಹಾಗೂ ಸಂಸತ್ತಿನಲ್ಲಿ ಬಿಜೆಪಿಗೆ ಬೆಂಬಲ ನೀಡುವಲ್ಲಿ ಹೆಚ್ಚಾಗಿ ತಟಸ್ಥರಾಗಿರುತ್ತಿದ್ದ ಪಕ್ಷಗಳು, ಬಿಜೆಪಿಯ ಈ ಆಧಿಪತ್ಯದ ಧಾವಂತದಿಂದಾಗಿ, ಅದರಲ್ಲೂ ರೈತ ಹೋರಾಟದ ಸಂದರ್ಭದಲ್ಲಿ, ವಿರೋಧದ ನಿಲುವು ತೆಗೆದುಕೊಳ್ಳಲೇ ಬೇಕಾಯಿತು.

2.126 ಆಳುವ ವರ್ಗ ಪಾಲುದಾರರ ನಡುವೆ ಮೂಡುತ್ತಿರುವ ಈ ಸಂಘರ್ಷಗಳು ಸೃಷ್ಟಿಸುವ ಸಾಧ್ಯತೆಗಳನ್ನು ಶೋಷಿತ ವರ್ಗಗಳು, ನಿರ್ದಿಷ್ಟವಾಗಿ ಕಾರ್ಮಿಕ ವರ್ಗ, ಬಡ ರೈತಾಪಿಗಳು ಮತ್ತು ಕೃಷಿ ಕೂಲಿಕಾರರು ಬೂರ್ಜ್ವಾ-ಭೂಮಾಲಿಕ ವ್ಯವಸ್ಥೆಯ ವಿರುದ್ಧದ ವರ್ಗ ಸಮರವನ್ನು ತೀವ್ರಗೊಳಿಸಲು ಬಳಸಬೇಕು.

2.127 ವರ್ಗ ಹೋರಾಟವನ್ನು ಮುಂದೊತ್ತುವ ಇಂತಹ ಸಾಧ್ಯತೆಗಳು ಕಾರ್ಮಿಕ ಆಂದೋಲನ, ರೈತಾಪಿಗಳು ಮತ್ತು ಕೃಷಿ ಕೂಲಿಕಾರರ ನಡುವೆ ಹೆಚ್ಚುತ್ತಿರುವ ಸಂಯೋಜನೆಯೊಂದಿಗೆ ಮೂಡಿ ಬಂದಿವೆ. ಈ ಬೆಳವಣಿಗೆಗಳು ಬಹಳ ಮೊದಲೇ ಆರಂಭವಾಗಿದ್ದವು ಮತ್ತು 2018ರ ನಂತರ ಈ ವಿಭಾಗಗಳ ಜಂಟಿ ಚಳುವಳಿಗಳ ಮೂಲಕ ಗಮನಾರ್ಹ ಮುನ್ನಡೆ ಸಾಧಿಸಿದವು. ಮುಂದಿನ ಅವಧಿಯಲ್ಲಿ ಹೋರಾಟಗಳಲ್ಲಿ ಬೆಳೆಯುತ್ತಿರುವ ಈ ಐಕ್ಯತೆಯನ್ನು ಇನ್ನಷ್ಟು ಬಲಪಡಿಸಬೇಕು.

ಸಾರಾಂಶ

2.128 ಸಾರಾಂಶವಾಗಿ ಹೇಳುವುದಾದರೆ, ಕಳೆದ ಪಕ್ಷದ ಸಮ್ಮೇಳನದ ನಂತರದ ಅವಧಿಯಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಕ್ರೋಡೀಕರಿಸಿಕೊಂಡಿದೆ. ಫ್ಯಾಸಿಸ್ಟ್ ತೆರನ ಆರ್‌ಎಸ್‌ಎಸ್ ನ ರಾಜಕೀಯ ಅಂಗವಾಗಿ ಕಾರ್ಯನಿರ್ವಹಿಸುವ ಮೂಲಕ ಬಿಜೆಪಿಯು ತನ್ನ ಹಿಂದುತ್ವ ಅಜೆಂಡಾದ ಜಾರಿಗೆ ಆಕ್ರಮಣಕಾರಿಯಾಗಿ ಮುಂದಾಗುತ್ತಿದೆ. ಇದು ನವ-ಉದಾರವಾದಿ ಸುಧಾರಣಾ ನೀತಿಗಳನ್ನು ಉದ್ರಿಕ್ತವಾಗಿ ಜಾರಿ ಮಾಡುತ್ತಿದೆ ಮತ್ತು ನಿರಂಕುಶಾಧಿಕಾರವನ್ನು ಗಟ್ಟಿಗೊಳಿಸುತ್ತಿದೆ. ಸಂವಿಧಾನ ಮತ್ತು ಸಂವಿಧಾನ ನಿರ್ಮಿಸಿರುವ ಸಂಸ್ಥೆ/ಪ್ರಾಧಿಕಾರಗಳ ಸ್ವಾತಂತ್ರ್ಯವನ್ನು ಬುಡಮೇಲು ಮಾಡುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ.

2.129 ಇದೇ ಸಮಯದಲ್ಲಿ ಮಹಾಸೋಂಕನ್ನು ನಿಭಾಯಿಸುವಲ್ಲಿ ವಿಫಲವಾಗಿರುವುದರಿಂದ ಮತ್ತು ಆರ್ಥಿಕ ನೀತಿಗಳು ಹೇರಿರುವ ಸಂಕಷ್ಟಗಳಿಂದಾಗಿ ದೊಡ್ಡ ಪ್ರಮಾಣದಲ್ಲಿ ಅಸಮಾಧಾನವು ಬೆಳೆಯುತ್ತಿದೆ. ಕೃಷಿ ಕಾನೂನುಗಳ ವಿರುದ್ಧ ನಡೆದ ಐತಿಹಾಸಿಕ ಮತ್ತು ಯಶಸ್ವಿ ರೈತ ಹೋರಾಟ, ಖಾಸಗೀಕರಣ ಮತ್ತು ಕಾರ್ಮಿಕ ಕಾನೂನುಗಳ ರದ್ಧತಿಯ ವಿರುದ್ಧ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ನಡೆಸಿದ ಹೋರಾಟ ಮತ್ತು ಬೆಳೆದು ಬರುತ್ತಿರುವ ಕಾರ್ಮಿಕ, ರೈತ ಮತ್ತು ಕೃಷಿ ಕೂಲಿಕಾರ ಸಂಘಟನೆಗಳ ಜಂಟಿ ಹೋರಾಟಗಳನ್ನು ಒಟ್ಟಾರೆ ದಾಳಿಯ ವಿರುದ್ಧ ಪರಿಣಾಮಕಾರಿಯಾಗುವಂತೆ ಗಟ್ಟಿಗೊಳಿಸಬೇಕು. ಇದು ವರ್ಗ ಸಂಘರ್ಷಗಳನ್ನು ಹರಿತಗೊಳಿಸುವತ್ತ ಸಾಗಬೇಕು.

2.130 ಈ ಅವಧಿಯಲ್ಲಿ ಬಿಜೆಪಿ ಕೇಂದ್ರ ಸರ್ಕಾರವು ಭಾರತದ ಸ್ಥಾನಮಾನವನ್ನು ಅಮೇರಿಕಾದ ಅಡಿಯಾಳು ಮಿತ್ರನಾಗಿ ಇನ್ನಷ್ಟು ಕ್ರೋಡೀಕರಿಸಿದೆ. ಹಲವು ಮಿಲಿಟರಿ ಮತ್ತು ವ್ಯೂಹಾತ್ಮಕ ಒಪ್ಪಂದಗಳಿಗೆ ಹಾಗೂ ಗುಂಪುಗಳಿಗೆ ಸೇರಿದೆ. ಪಕ್ಷವು ಭಾರತದ ಜನತೆಯ ನಡುವೆ ಸಾಮ್ರಾಜ್ಯಶಾಹಿ-ವಿರೋಧಿ ಪ್ರಜ್ಞೆಯನ್ನು ಉದ್ದೀಪನಗೊಳಿಸಬೇಕು.

ರಾಜಕೀಯ ಪಕ್ಷಗಳ ಸ್ಥಿತಿ

ಬಿಜೆಪಿ

2.131 ಬಿಜೆಪಿಯು ಭಾರತದ ಆಳುವ ವರ್ಗಗಳ ಪ್ರಮುಖ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ವೇಗವಾಗಿ ವಿಸ್ತಾರವಾಗುತ್ತಿರುವ ಆರ್‌ಎಸ್‌ಎಸ್ ನ ಜಾಲದ ನೆರವಿನೊಂದಿಗೆ ಅದು ದೇಶದಾದ್ಯಂತ ತನ್ನ ಪ್ರಭಾವ ಹರಡಿದೆ. ಇದು ಭಾರತದ ಅಗ್ರ ಪಕ್ಷವಾಗಿ ಹೊರ ಹೊಮ್ಮಿದೆ.

2.132 2019ರಲ್ಲಿ ಸರ್ಕಾರವನ್ನು ರಚಿಸಿದ ನಂತರ, ಬಿಜೆಪಿಯು ಕಾರ್ಪೊರೇಟ್-ಕೋಮುವಾದ ಕೂಟವನ್ನು ಕ್ರೋಡೀಕರಿಸುವ ಮೂಲಕ ನವ-ಉದಾರವಾದಿ ಸುಧಾರಣಾ ನೀತಿಗಳನ್ನು ಆಕ್ರಮಣಕಾರಿಯಾಗಿ ಬೆಂಬತ್ತಿದೆ. ಅಮೇರಿಕನ್ ಸಾಮ್ರಾಜ್ಯಶಾಹಿ ಜೊತೆ ವ್ಯೂಹಾತ್ಮಕ ಮತ್ತು ಮಿಲಿಟರಿ ಸಂಬಂಧಗಳನ್ನು ಬಲಗೊಳಿಸುವ ಮೂಲಕ ಭಾರತದ ಅಡಿಯಾಳು ಸ್ಥಾನಮಾನವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಕೋಮು ಧ್ರುವೀಕರಣವನ್ನು ಮೊನಚುಗೊಳಿಸುತ್ತದೆ ಮತ್ತು ಹೆಚ್ಚುತ್ತಿರುವ ನಿರಂಕುಶಾಧಿಕಾರದ ಮೂಲಕ ಪ್ರಜಾಸತ್ತೆಯ ಮೇಲೆ ದಾಳಿ ಮಾಡುತ್ತಿದೆ.

2.133 ವಿವಿಧ ರಾಜ್ಯಗಳಲ್ಲಿ ಸರ್ಕಾರ ರಚಿಸಲು ಬಿಜೆಪಿಯು ಮೂರು ವಿಧಾನಗಳ ಮೂಲಕ ಸಂಪೂರ್ಣವಾಗಿ ಪ್ರಜಾಪ್ರಭುತ್ವ-ವಿರೋಧಿ ನಿರ್ಲಜ್ಜವಾದ ಮಾರ್ಗ ಹಿಡಿಯುತ್ತಿದೆ. ಒಂದು, ವಿರೋಧ ಪಕ್ಷಗಳ ಶಾಸಕರಿಗೆ ಹಣ, ಅಧಿಕಾರದ ಸ್ಥಾನಗಳ ಆಮಿಷ ಒಡ್ಡುವುದು; ಎರಡು, ಸಿಬಿಐ/ಇಡಿ ಮತ್ತಿತರ ಕೇಂದ್ರ ಏಜೆನ್ಸಿಗಳ ಮೂಲಕ ಬೆದರಿಕೆ ಮತ್ತು ಒತ್ತಡ ಹೇರುವುದು; ಮೂರು, ಅಂತಿಮವಾಗಿ ವಿರೋಧಿ ನಾಯಕರುಗಳ ಮೇಲೆ ಕೇಸು ಹಾಕುವ ಮೂಲಕ ಮತ್ತು ಅವರನ್ನು ಬಂಧಿಸುವುದು.

2.134 ಹಲವು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಯು ತನ್ನ ಗುರಿ ಮುಟ್ಟಲು ವಿಫಲವಾಗಿದೆ. ಝಾರ್ಖಂಡ್ ಮತ್ತು ಮಹಾರಾಷ್ಟ್ರಗಳಲ್ಲಿ ಅದು ಸರ್ಕಾರ ರಚಿಸಲಾಗಲಿಲ್ಲ. ಕೇರಳದಲ್ಲಿ ಇದ್ದ ಏಕೈಕ ಶಾಸಕ ಸ್ಥಾನ ಉಳಿಸಿಕೊಳ್ಳಲಾಗಲಿಲ್ಲ. ಬಿಜೆಪಿಯ ಶಾಸಕರ ಸಂಖ್ಯೆ ಮತ್ತು ಮತ ಪ್ರಮಾಣ ಹೆಚ್ಚಿದರೂ ಪ. ಬಂಗಾಳದಲ್ಲಿ, ಅದರ ಸರ್ಕಾರ ರಚನೆಯ ಪ್ರಯತ್ನವನ್ನು ಜನ ತಿರಸ್ಕರಿಸಿದರು. ತಮಿಳುನಾಡಿನಲ್ಲಿ ಅದರ ಮಿತ್ರ ಪಕ್ಷ ಎಐಎಡಿಎಂಕೆ ಯ ಸರ್ಕಾರ ಉಳಿಸಿಕೊಳ್ಳಲು ನಡೆಸಿದ ಜಂಟಿ ಪ್ರಯತ್ನ ವಿಫಲವಾಯಿತು. ಅಸ್ಸಾಂನಲ್ಲಿ ಶೇ.0.86ರಷ್ಟು ಅತ್ಯಂತ ಸಣ್ಣ ಮತ ಪ್ರಮಾಣ ವ್ಯತ್ಯಾಸದೊಂದಿಗೆ ತನ್ನ ಸರ್ಕಾರವನ್ನು ಉಳಿಸಿಕೊಂಡಿತು.

2.135 ಪ್ರಸ್ತುತ ಬಿಜೆಪಿಯು 12 ರಾಜ್ಯಗಳಲ್ಲಿ ಸರ್ಕಾರವನ್ನು ಮುನ್ನಡೆಸುತ್ತಿದೆ. ಮತ್ತು 6 ರಾಜ್ಯಗಳಲ್ಲಿ ಸಮ್ಮಿಶ್ರ ಸರ್ಕಾರದಲ್ಲಿದೆ. ಸಂಸತ್ತಿನ ಎರಡೂ ಸದನಗಳನ್ನು ನಿಯಂತ್ರಿಸುತ್ತಿದೆ.

ಕಾಂಗ್ರೆಸ್

2.136 ಕಾಂಗ್ರೆಸ್ ಪಕ್ಷವು ಭಾರತೀಯ ಆಳುವ ವರ್ಗಗಳ, ಅಂದರೆ ದೊಡ್ಡ ಬಂಡವಾಳಶಾಹಿ ನೇತೃತ್ವದ ಬಂಡವಾಳಶಾಹಿ ಮತ್ತು ಭೂಮಾಲಿಕರ, ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತದೆ. ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇದು ನವ-ಉದಾರವಾದಿ ನೀತಿಗಳನ್ನು ಜಾರಿ ಮಾಡುವುದನ್ನು ಮುಂದುವರಿಸಿದೆ.

2.137 ಇದರ ರಾಜಕೀಯ ಪ್ರಭಾವ ಮತ್ತು ಸಂಘಟನಾ ಬಲವು ಕುಸಿಯುತ್ತಲೇ ಇದೆ. ಪ್ರಸ್ತುತ, ವಿವಿಧ ರಾಜ್ಯಗಳಲ್ಲಿ ತನ್ನ ಹಲವು ನಾಯಕರುಗಳು ಬಿಜೆಪಿಗೆ ಪಕ್ಷಾಂತರ ಮಾಡಿರುವುದರಿಂದ ಸರಣಿ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಜಾತ್ಯತೀತತೆಯನ್ನು ಘೋಷಿಸಿದರೂ, ಅದಕ್ಕೆ ಹಿಂದುತ್ವ ಶಕ್ತಿಗಳಿಗೆ ಒಂದು ಸೈದ್ಧಾಂತಿಕ ಸವಾಲು ಒಡ್ಡಲು ಸಾಧ್ಯವಾಗಿಲ್ಲ ಮತ್ತು ಆಗಾಗ್ಗೆ ಒಂದು ರಾಜೀ ಧೋರಣೆ ತಳೆಯುತ್ತದೆ. ಒಂದು ದುರ್ಬಲ ಕಾಂಗ್ರೆಸ್ ಎಲ್ಲಾ ಜಾತ್ಯತೀತ ವಿರೋಧ ಪಕ್ಷಗಳಿಗೆ ನೇತೃತ್ವ ನೀಡಲು ಸಾಧ್ಯವಾಗುವುದಿಲ್ಲ.

2.138 ಪಕ್ಷದ 22ನೇ ಸಮ್ಮೇಳನದ ರಾಜಕೀಯ ನಿರ್ಣಯವು (ಪ್ಯಾರಾ 2.89ರಲ್ಲಿ) ಹೀಗೆ ಹೇಳಿತ್ತು: ಬಿಜೆಪಿಯು ಅಧಿಕಾರದಲ್ಲಿರುವ ಹಿನ್ನೆಲೆಯಲ್ಲಿ ಮತ್ತು ಇದು ಆರ್‌ಎಸ್‌ಎಸ್ ನೊಡನೆ ಹೊಂದಿರುವ ಮೂಲ ಕೊಂಡಿಯಿಂದಾಗಿ, ಬಿಜೆಪಿಯು ಪ್ರಮುಖ ಅಪಾಯ ಎಂದು ಹೇಳಿದೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ಗಳನ್ನು ಎರಡು ಸಮನಾದ ಅಪಾಯಗಳನ್ನಾಗಿ ನೋಡಲಾಗುವುದಿಲ್ಲ. ಆದರೆ, ಕಾಂಗ್ರೆಸ್‌ನೊಡನೆ ಒಂದು ರಾಜಕೀಯ ಮೈತ್ರಿ ಸಾಧ್ಯವಿಲ್ಲ.

ಪ್ರಾದೇಶಿಕ ಪಕ್ಷಗಳು

2.139 ಪ್ರಾದೇಶಿಕ ಬಂಡವಾಳಶಾಹಿ-ಭೂಮಾಲಿಕ ವರ್ಗಗಳ ಹಿತ್ತಾಸಕ್ತಿಗಳನ್ನು ತಾವೇ ಕಾಪಾಡುವುದು ಎಂದು ಸ್ವಯಂ ಘೋಷಿಸಿಕೊಂಡು ರಚನೆಗೊಂಡ ಬಹುತೇಕ ಪ್ರಾದೇಶಿಕ ಪಕ್ಷಗಳು, ನವ-ಉದಾರವಾದಿ ಪಥವನ್ನು ಅಪ್ಪಿವೆ. ತಮ್ಮ ಪ್ರದೇಶದಲ್ಲಿ ತಮ್ಮ ಹಿತಾಸಕ್ತಿಯನ್ನೇ ಪರಮ ಗುರಿಯಾಗಿಟ್ಟುಕೊಂಡಿರುವ ಇವು, ರಾಜಕೀಯ ಅವಕಾಶವಾದಿತನ ತೋರಿ ಆಗಿಂದಾಗ್ಗೆ ತಮ್ಮ ರಾಜಕೀಯ ನಿಲುವನ್ನು ಬದಲಿಸುತ್ತಿವೆ. ಆದರೆ, ಒಕ್ಕೂಟದ ಮೇಲೆ ಹೆಚ್ಚುತ್ತಿರುವ ದಾಳಿಯಿಂದಾಗಿ ರಾಜ್ಯ ಸರ್ಕಾರಗಳನ್ನು ಮುನ್ನಡೆಸುತ್ತಿರುವ ಹಲವು ಪ್ರಾದೇಶಿಕ ಪಕ್ಷಗಳು ಬಿಜೆಪಿಯೊಡನೆ ಇರುವ ಸಂಘರ್ಷಗಳು ಹರಿತವಾಗುತ್ತಿರುವುದನ್ನು ಕಾಣುತ್ತಿವೆ.

2.140 ಡಿಎಂಕೆ ನೇತೃತ್ವದ ಜಾತ್ಯತೀತ ಒಕ್ಕೂಟವು ಬಿಜೆಪಿ-ಎಐಎಡಿಎಂಕೆ ಮಿತ್ರಕೂಟವನ್ನು ಸೋಲಿಸಿ ತಮಿಳುನಾಡಿನಲ್ಲಿ ಸರ್ಕಾರ ರಚಿಸಿದೆ. ಬಿಹಾರದಲ್ಲಿ ಆರ್‌ಜೆಡಿ ಮತ್ತು ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷಗಳು ತಮ್ಮ ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಮುಂದಾಳತ್ವ ವಹಿಸಿವೆ. ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎನ್‌ಸಿಪಿ ಪಕ್ಷವು ಕಾಂಗ್ರೆಸ್ ಮತ್ತು ಶಿವಸೇನೆಯೊಡನೆ ಸೇರಿ ಸರ್ಕಾರ ರಚಿಸಲು ಗಮನಾರ್ಹ ಪಾತ್ರ ವಹಿಸಿತು. ಕೇರಳದಲ್ಲಿ ಎನ್‌ಸಿಪಿಯು ಎಲ್.ಡಿ.ಎಫ್ ನ ಮಿತ್ರ ಕೂಟದಲ್ಲಿದೆ. ಕೆಲವು ರಾಜ್ಯಗಳಲ್ಲಿ, ತಮಿಳುನಾಡಿನ ವಿಸಿಕೆ ಯಂತಹ ಸಾಮಾಜಿಕ ದಬ್ಬಾಳಿಕೆ ವಿರುದ್ಧ ದನಿ ಎತ್ತುತ್ತಿರುವ ಕೆಲವು ಸಣ್ಣ ಸಣ್ಣ ಪ್ರಾದೇಶಿಕ ಪಕ್ಷಗಳು, ಬಿಜೆಪಿಯ ವಿರುದ್ಧ ಜಾತ್ಯತೀತ ಪ್ರಜಾಸತ್ತಾತ್ಮಕ ನಿಲುವುಗಳನ್ನು ತೆಗೆದುಕೊಳ್ಳುತ್ತಿವೆ.

2.141 ಇದೇ ಸಮಯದಲ್ಲಿ ಬಿಜೆಪಿಯು ಕೇಂದ್ರ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಳ್ಳುವ ಭಯ, ಹೆದರಿಕೆ, ಒತ್ತಡಗಳಲ್ಲಿ ಕೆಲವು ಪ್ರಾದೇಶಿಕ ಪಕ್ಷಗಳು ಸಿಲುಕಿವೆ. ವೈ.ಎಸ್.ಆರ್. ಕಾಂಗ್ರೆಸ್ ಮತ್ತು ಬಿಜೆಡಿ ಪಕ್ಷಗಳು ಸಂಸತ್ತಿನಲ್ಲಿ ಆಳುವ ಸರ್ಕಾರವನ್ನು ಬೆಂಬಲಿಸುತ್ತಾ, ತಟಸ್ಥ ಧೋರಣೆಯನ್ನು ಕಾಪಾಡಿಕೊಳ್ಳುತ್ತಿವೆ. ಟಿ.ಆರ್.ಎಸ್. ಪಕ್ಷವು ಪ್ರಸ್ತುತ ಬಿಜೆಪಿ ವಿರುದ್ಧ ಕೆಲವೊಂದು ನಿಲುವು ತೆಗೆದುಕೊಳ್ಳುತ್ತಿದೆ. ಬಿಜೆಪಿಯ ಸಾಂಪ್ರದಾಯಿಕ ಮಿತ್ರರಾಗಿದ್ದ ಶಿವಸೇನಾ ಮತ್ತು ಅಕಾಲಿ ದಳ ಪಕ್ಷಗಳು ತಮ್ಮ ತಮ್ಮ ರಾಜ್ಯಗಳಲ್ಲಿರುವ ಸಂಘರ್ಷಗಳಿಂದಾಗಿ ಬಿಜೆಪಿಯಿಂದ ದೂರ ಸರಿದಿವೆ. ಜೆಡಿ(ಯು) ಮತ್ತು ಎಐಎಡಿಎಂಕೆ ಪಕ್ಷಗಳು ಬಿಜೆಪಿ ಜತೆಗೆ ಮೈತ್ರಿಕೂಟದಲ್ಲಿವೆ. ಎನ್‌ಡಿಎ ಬಾಗವಾಗಿದ್ದ ತೃಣಮೂಲ ಕಾಂಗ್ರೆಸ್ ಇಂದು ಬಿಜೆಪಿಯ ವಿರುದ್ಧ ಪ್ರಚಾರಾಂದೋಲನ ನಡೆಸುತ್ತಿದೆ. ಸಿಪಿಐ(ಎಂ) ಮತ್ತು ಎಡಶಕ್ತಿ ವಿರೋಧಿ ನಿಲುವನ್ನು ಮುಂದುವರೆಸಿರುವ ತೃಣಮೂಲ ಕಾಂಗ್ರೆಸ್, ಇಂದು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ವಿರುದ್ಧದ ರಂಗದ ನಾಯಕನಾಗಿ ಹೊರ ಹೊಮ್ಮುವ ಆಕಾಂಕ್ಷೆ ಹೊಂದಿದೆ. ಆಂಧ್ರದಲ್ಲಿ ಹಿಂದೆ ಆಳುವ ಪಕ್ಷವಾಗಿದ್ದ ಟಿಡಿಪಿ ಯು ಬಹುತೇಕ ಬಿಜೆಪಿ ಪರವಾಗಿದೆ.

2.142 ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಮತ್ತು ಕೋಮುವಾದಿ ಶಕ್ತಿಗಳ ವಿರುದ್ಧ ಜಾತ್ಯತೀತತೆಯ ರಕ್ಷಣೆಗಾಗಿ ನಡೆಯುವ ಸಮಾನ ಹೋರಾಟಗಳಲ್ಲಿ ಭಾಗವಹಿಸಲು, ಪ್ರಾದೇಶಿಕ ಪಕ್ಷಗಳು ಮುಂದೆ ಬಂದರೆ ನಾವು ಸಹಕರಿಸಲು ಮುಂದಾಗುತ್ತೇವೆ. ಆದರೆ, ಅವುಗಳ ಕುರಿತು ನಮ್ಮ ಕಾರ್ಯತಂತ್ರಾತ್ಮಕ ಧೋರಣೆಯನ್ನು ರೂಪಿಸುವಾಗ ಅವುಗಳ ರಾಜಕೀಯ ನಿಲುವುಗಳನ್ನು ನಾವು ಗಣನೆಗೆ ತೆಗೆದುಕೊಳ್ಳಬೇಕು.

2.143 ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ, ನಾವು ವಿರೋಧಿಸುವ ನೀತಿಗಳಿಗೆ ಸಂಬಂಧಿಸಿದಂತೆ, ಜನರನ್ನು ಈ ನೀತಿಗಳ ವಿರುದ್ಧ ಸ್ವತಂತ್ರವಾಗಿ ಮತ್ತು ಎಡ ಪಕ್ಷಗಳೊಡನೆ ಜಂಟಿಯಾಗಿ ಆಣಿ ನೆರೆಸಬೇಕು. ಆದರೆ, ಈ ಸರ್ಕಾರಗಳನ್ನು ನಾವು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದೊಡನೆ ಸಮೀಕರಿಸುವುದಿಲ್ಲ.

2.144 ಹಿಂದುತ್ವ ಶಕ್ತಿಗಳು ತಮ್ಮ ವಿರುದ್ಧ ನಡೆಸುತ್ತಿರುವ ಹಿಂಸಾತ್ಮಕ ದಾಳಿಯ ಹಿನ್ನೆಲೆಯಲ್ಲಿ, ಅಲ್ಪಸಂಖ್ಯಾತರಲ್ಲಿ ಮೂಡಿರುವ ಪರಕೀಯತೆ ಮತ್ತು ಅಸುರಕ್ಷತೆಯನ್ನು ಬಳಸಿಕೊಳ್ಳಲು, ಮುಸ್ಲಿಂ ತೀವ್ರವಾದಿ ಮತ್ತು ಮೂಲಭೂತವಾದಿ ಜಮಾತೆ-ಇ-ಇಸ್ಲಾಮಿ, ಪಾಪ್ಯುಲ್ ಫ್ರಂಟ್ ಆಫ್ ಇಂಡಿಯಾ, ಮತ್ತವರ ರಾಜಕೀಯ ರಂಗಗಳು ಮುಂದಾಗಿವೆ. ಆದರೆ, ಇವರ ಚಟುವಟಿಕೆಗಳು ಹಿಂದುತ್ವ ಕೋಮು ಶಕ್ತಿಗಳಿಗೆನೇ ಪೂರಕವಾಗುತ್ತವೆ. ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಶಕ್ತಿಗಳು ಅಲ್ಪಸಂಖ್ಯಾತರ ಹಕ್ಕುಗಳನ್ನು ದೃಢವಾಗಿ ರಕ್ಷಿಸುವುದು ಮತ್ತು ಅವರನ್ನು ಜಾತ್ಯತೀತ ವೇದಿಕೆಗೆ ಅಣಿನೆರೆಸುವುದು ಬಹಳ ಮುಖ್ಯವಾಗಿದೆ.

ಎಡ ಪಕ್ಷಗಳು

2.145 ರಾಷ್ಟ್ರ ಮಟ್ಟದಲ್ಲಿ ಹಲವು ವಿಷಯಗಳ ಆಧಾರದಲ್ಲಿ ಐದು ಎಡ ಪಕ್ಷಗಳು ಐಕ್ಯ ಹೋರಾಟ, ಪ್ರಚಾರಗಳಿಗೆ ಕರೆ ನೀಡಿವೆ. ಮಹಾಸೋಂಕಿನಿಂದಾಗಿ ಪರಿಣಾಮಕಾರಿ ಜಂಟಿ ಕಾರ್ಯಕ್ರಮಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಅಣಿನೆರೆಸುವಿಕೆ ಸಾಧ್ಯವಾಗಲಿಲ್ಲ. ಎಡ ಪರ್ಯಾಯದ ಬಗ್ಗೆ ಜನರಲ್ಲಿ ಭರವಸೆ ಮೂಡಿಸಲು ಎಡಶಕ್ತಿಗಳ ಜಂಟಿ ಚಟುವಟಿಕೆಗಳು ಅತ್ಯಗತ್ಯ. ಎಡ ಐಕ್ಯತೆಯನ್ನು ಬಲಪಡಿಸಲು ಈ ಪ್ರಯತ್ನಗಳನ್ನು ಮುಂದುವರೆಸಬೇಕು. ಪಕ್ಷವು ಇದಕ್ಕೆ ಅಗತ್ಯವಿರುವ ಮುತುವರ್ಜಿ ವಹಿಸಬೇಕು.

2.146 ಬಿಹಾರದಲ್ಲಿ ಎಡಪಕ್ಷಗಳು ಚುನಾವಣಾ ದೃಷ್ಟಿಯಲ್ಲಿ ಮುನ್ನಡೆ ಸಾಧಿಸಿವೆ. ಆದರೆ ವಿಭಿನ್ನ ರಾಜಕೀಯ ನಿಲುವುಗಳನ್ನು ಹೊಂದಿವೆ. ಆರ್‌ಎಸ್‌ಪಿ ಮತ್ತು ಎಐಎಫ್‌ಬಿ ಪಕ್ಷಗಳು ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಲ್ಲಿವೆ ಮತ್ತು ಪಶ್ಚಿಮ ಬಂಗಾಳದಲ್ಲಿ ಎಡರಂಗದ ಜೊತೆಯಲ್ಲಿವೆ. ಸಿಪಿಐ(ಎಂಎಲ್) ಪಕ್ಷವು ಪ. ಬಂಗಾಳದಲ್ಲಿ ಭಿನ್ನವಾದ ಚುನಾವಣಾ ತಂತ್ರ ರೂಪಿಸಿಕೊಂಡಿತ್ತು. ಆದರೂ ಎಡ ಐಕ್ಯತೆ ಬಲಪಡಿಸಲು ಒಂದು ಸಮಾನ ಹೊಂದಾಣಿಕೆ ಮೂಡಿಸಲು ಶ್ರಮ ವಹಿಸಬೇಕು.

ಸಿಪಿಐ(ಎಂ)

2.147 ಬಿಜೆಪಿಯು ದೇಶದಲ್ಲಿ ಅಗ್ರ ರಾಜಕೀಯ ಪಕ್ಷವಾಗಿ ಹೊರ ಹೊಮ್ಮಿರುವ ಮತ್ತು ಆರ್‌ಎಸ್‌ಎಸ್ನ ಜಾಲವು ವ್ಯಾಪಕವಾಗಿ ವಿಸ್ತಾರವಾಗಿರುವ ಈ ಅವಧಿಯಲ್ಲಿ, ನಮ್ಮ ಪಕ್ಷದ ಸ್ವತಂತ್ರ ಶಕ್ತಿ ಮತ್ತು ನಮ್ಮ ರಾಜಕೀಯ ಮಧ್ಯಪ್ರವೇಶ ಸಾಮರ್ಥ್ಯ ಇನ್ನಷ್ಟು ಕುಸಿದಿದೆ.

2.148 ಈ ಅವಧಿಯಲ್ಲಿ ಪಕ್ಷವು ಜಂಟಿ ಹೋರಾಟಗಳಲ್ಲಿ, ಮೊದಲನೆಯದಾಗಿ ಸಿಎಎ/ಎನ್‌ಆರ್‌ಸಿ/ಎನ್‌ಪಿಆರ್ ವಿರುದ್ಧದ ಮತ್ತು ನಂತರದಲ್ಲಿ ಐತಿಹಾಸಿಕ ಯಶಸ್ವಿ ರೈತರ ಹೋರಾಟದಲ್ಲಿ, ಸಕ್ರಿಯ ಪಾತ್ರ ವಹಿಸಿದೆ. ನವ-ಉದಾರವಾದಿ ನೀತಿಗಳ ವಿರುದ್ಧ, ದ್ವೇಷ ಮತ್ತು ಹಿಂಸೆಯ ಮೂಲಕ ತೀಕ್ಷ್ಣವಾಗುತ್ತಿರುವ ಕೋಮುಧ್ರುವೀಕರಣದ ವಿರುದ್ಧ, ಜನರ ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯ ರಕ್ಷಣೆಗಾಗಿ ಮತ್ತು ಕಾರ್ಮಿಕ ಸಂಘಟನೆಗಳು, ಸಾಮೂಹಿಕ ಸಂಘಟನೆಗಳು ನೀಡಿದ್ದ ಹಲವಾರು ಮುಷ್ಕರಗಳು/ಪ್ರತಿಭಟನೆಗಳನ್ನು ಬೆಂಬಲಿಸಿ, ಪಕ್ಷವು ಹಲವು ಚಳುವಳಿಗಳು ಮತ್ತು ಹೋರಾಟಗಳನ್ನು ಹಮ್ಮಿಕೊಂಡಿದೆ. ಮಹಾಸೋಂಕು ಮುಂದುವರೆದ ಅವಧಿಯಲ್ಲಿ, ಪಕ್ಷವು ದೇಶದ ಹಲವೆಡೆ ಪರಿಹಾರ ಒದಗಿಸಲು ಸಕ್ರಿಯ ಪಾತ್ರ ನಿರ್ವಹಿಸಿತ್ತು.

2.149 ಕಮ್ಯೂನಿಸ್ಟ್ ವಿರೋಧಿ ಸೈದ್ಧಾಂತಿಕ ನಿಲುವು ಹೊಂದಿರುವ ಆರ್‌ಎಸ್‌ಎಸ್-ಬಿಜೆಪಿಯು, ಎಡಪಕ್ಷಗಳನ್ನು ಪ್ರಮುಖವಾಗಿ ಸಿಪಿಐ(ಎಂ) ಅನ್ನು ಕೇಂದ್ರಿಕರಿಸಿ, ದಾಳಿ ನಡೆಸುತ್ತಿವೆ. ಇವು ನಮ್ಮ ಪ್ರಬಲ ಪ್ರದೇಶಗಳಾದ ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಕೇರಳವನ್ನು ಕೇಂದ್ರೀಕರಿಸಿವೆ ಮತ್ತು ನಮ್ಮ ಕಾರ್ಯಕರ್ತರು ಹಾಗೂ ಪಕ್ಷದ ಕಛೇರಿಗಳ ಮೇಲೆ ದೈಹಿಕ ದಾಳಿಗಳನ್ನು ನಡೆಸುತ್ತಿವೆ.

ಕೇರಳ:

2.150 ಕೇರಳದಲ್ಲಿ ಆರೆಸ್ಸೆಸ್-ಬಿಜೆಪಿಯ ದಾಳಿಗಳು ಮತ್ತು ನಮ್ಮ ಕಾರ್ಯಕರ್ತರು ಕೊಲೆಗೀಡಾಗುವುದು ಮುಂದುವರೆದಿದೆ. ಎಲ್.ಡಿ.ಎಫ್. ಸರ್ಕಾರವನ್ನು ಅಸ್ಥಿರಗೊಳಿಸುವ ತನ್ನ ಪ್ರಯತ್ನದಲ್ಲಿ ಬಿಜೆಪಿಯು ಕೇಂದ್ರ ಸರ್ಕಾರದ ಸಂಸ್ಥೆಗಳನ್ನು ನಗ್ನವಾಗಿ ದುರುಪಯೋಗ ಪಡಿಸಿಕೊಳ್ಳುವುದರಲ್ಲಿ ನಿರತವಾಗಿದೆ. ಬಿಜೆಪಿಯ ಈ ಎಲ್ಲಾ ಪ್ರಯತ್ನಗಳನ್ನು ಕಾಂಗ್ರೆಸ್ ಪಕ್ಷದ ನೇತೃತ್ವದ ಯು.ಡಿ.ಎಫ್ ಬೆಂಬಲಿಸುತ್ತಿದೆ ಮತ್ತು ನಮ್ಮ ಕಾರ್ಯಕರ್ತರ ಮೇಲೆ ದೈಹಿಕ ದಾಳಿ ನಡೆಸುವ ಮತ್ತು ಕೊಲೆ ಮಾಡುವ ಕಾಯಕವನ್ನು ಮುಂದುವರೆಸಿದೆ.

2.151 ಸಿಪಿಐ(ಎಂ) ನೇತೃತ್ವದ ಎಲ್.ಡಿ.ಎಫ್. 2021ರಲ್ಲಿ ಮತ್ತೊಮ್ಮೆ ಕೇರಳದ ವಿಧಾನಸಭಾ ಚುನಾವಣೆಯನ್ನು ಗೆದ್ದಿತು. ಕಳೆದ ನಾಲ್ಕು ದಶಕಗಳಿಂದ ಕೇರಳದ ಮತದಾರರು ಪ್ರತಿ ಚುನಾವಣೆಯಲ್ಲೂ ಸರ್ಕಾರವನ್ನು ಬದಲಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಇದು ಅಭೂತಪೂರ್ವವಾದುದು. ಹಿಂದಿನ ಎಲ್.ಡಿ.ಎಫ್. ಸರ್ಕಾರದ ಸಾಧನೆಗಳು ಮತ್ತು ಈಗಿನ ಗೆಲುವು ನಮ್ಮ ಪಕ್ಷಕ್ಕೆ ಬಲ ಮತ್ತು ಗೌರವವನ್ನು ಒದಗಿಸಿದವು.

2.152 ಎಲ್.ಡಿ.ಎಫ್. ಸರ್ಕಾರದ ಅನುಕರಣೀಯ ಕೆಲಸವು ಜನತೆಯ ಬದುಕಿಗೆ ಸಂಬಂಧಿಸಿದ ವಿಷಯಗಳಲ್ಲಿ ಗುಣಾತ್ಮಕ ಬದಲಾವಣೆಗಳನ್ನು ಮಾಡಿತು. ಹಿಂದಿನ ಎಲ್.ಡಿ.ಎಫ್. ಸರ್ಕಾರವು ಸಾಮಾಜಿಕ ಸುರಕ್ಷತಾ ಯೋಜನೆಗಳನ್ನು ಸಮರ್ಪಕವಾಗಿ ಜಾರಿಮಾಡಿತು ಮತ್ತು ಆಚರಣೆಗೆ ತಂದಿತು. ಒಕ್ಕೂಟ ವ್ಯವಸ್ಥೆಯ ಮಿತಿಯೊಳಗೆ ರಾಜ್ಯ ಸರ್ಕಾರವೊಂದು ಏನು ಮಾಡಬಹುದು ಎಂಬುದನ್ನು ಈ ಜನತಾ-ಕೇಂದ್ರಿತ ಪರ್ಯಾಯ ನೀತಿಗಳು ತೋರಿಸಿಕೊಟ್ಟವು. ಕೋಮು ಸೌಹಾರ್ದತೆಯ ತಳಹದಿಯನ್ನು ಆಧರಿಸಿ, ಎಲ್ಲಾ ಜನ ಸಮುದಾಯಗಳಿಗೆ ರಕ್ಷಣೆಯನ್ನು ಒದಗಿಸಲಾಯಿತು. ಮುಖ್ಯವಾಗಿ, ಆರೆಸ್ಸೆಸ್/ಬಿಜೆಪಿಯ ಅಪಾಯಗಳ ವಿರುದ್ಧದ ಹೋರಾಟವನ್ನು ಪ್ರಧಾನವಾಗಿಸಿದ ಮತ್ತು ಬಿಜೆಪಿ ಜೊತೆ ಕೈಜೋಡಿಸುವ ಕಾಂಗ್ರೆಸ್ ನೇತೃತ್ವದ ಯು.ಡಿ.ಎಫ್.ನ ಅವಕಾಶವಾದಿತನ ಬಯಲು ಮಾಡುವ ಸ್ಪಷ್ಟ ರಾಜಕೀಯ ನಿಲುವು, 2021ರ ವಿಧಾನಸಭಾ ಚುನಾವಣೆಯ ಅಭೂತಪೂರ್ವ ಗೆಲುವಿಗೆ ಕಾಣಿಕೆ ನೀಡಿದವು.

2.153 ಕೇರಳವನ್ನು ತಟ್ಟಿದ ಸರಣಿ ರಾಷ್ಟ್ರೀಯ ವಿಪತ್ತಿನ ಸಂದರ್ಭಗಳಲ್ಲಿ ಜನತೆಗೆ ನೆರವು ನೀಡಲು ಪಕ್ಷ ಮತ್ತು ಎಲ್.ಡಿ.ಎಫ್. ವಹಿಸಿದ ಪಾತ್ರ ಅಪಾರ ಪ್ರಶಂಸೆಗೆ ಪಾತ್ರವಾಯಿತು. ತನ್ನ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಳಸಿಕೊಂಡು, ಕೋವಿಡ್ ಮಹಾಸೋಂಕನು ಅತ್ಯಂತ ದಕ್ಷವಾಗಿ ನಿರ್ವಹಿಸಿದ ರೀತಿ, ಕೇರಳಕ್ಕೆ ಜಾಗತಿಕ ಪ್ರಶಂಸೆಯನ್ನು ತಂದುಕೊಟ್ಟಿತು. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಳಸಿಕೊಂಡು ಮತ್ತು ಸ್ಥಳೀಯ ಸಂಸ್ಥೆಗಳನ್ನು ಒಳಗೊಳಿಸಿ ನಡೆಸಿದ ಪರೀಕ್ಷೆ, ರೋಗಿಗಳ ಜಾಡು ಹಿಡಿಯುವುದು ಮತ್ತು ಚಿಕಿತ್ಸೆ ನೀಡುವ ಮೂಲಕ, ತದನಂತರದ ಕೋವಿಡ್ ಅಲೆಗಳನ್ನು ಸಹ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲಾಯಿತು.

ಪಶ್ಚಿಮ ಬಂಗಾಳ:

2.154 ಪಶ್ಚಿಮ ಬಂಗಾಳದಲ್ಲಿ, ನಮ್ಮ ಪಕ್ಷವು ಫ್ಯಾಸಿಸ್ಟ್ ತೆರನ ದಾಳಿಗಳ ಮೂಲಕ ತೀವ್ರ ದಮನವನ್ನು ಎದುರಿಸಬೇಕಾಯಿತು. ಈ ದಾಳಿಗಳ ವಿರುದ್ಧ ಪ್ರತಿರೋಧವೂ ವ್ಯಕ್ತವಾಯಿತು. 2011 ಮತ್ತು 2021ರ ನಡುವೆ ನಾವು 229 ಸಂಗಾತಿಗಳನ್ನು ಕಳೆದುಕೊಂಡೆವು. ಈ ಅವಧಿಯಲ್ಲಿ, 1.02 ಲಕ್ಷಕ್ಕೂ ಹೆಚ್ಚಿನ ನಮ್ಮ ಪಕ್ಷದ ಸದಸ್ಯರು ಮತ್ತು ಹಿತೈಷಿಗಳನ್ನು ಅವರ ಮನೆಗಳಿಂದ ಹೊರದಬ್ಬಲಾಯಿತು ಮತ್ತು ಇವರ ಯೋಗಕ್ಷೇಮ ನೋಡಿಕೊಳ್ಳಲು ಪಕ್ಷವು ಅವರಿಗೆ ನಗರ ಪ್ರದೇಶಗಳಲ್ಲಿ ವ್ಯವಸ್ಥೆಗಳನ್ನು ಕಲ್ಪಿಸಬೇಕಾಯಿತು. 1.30 ಲಕ್ಷಕ್ಕೂ ಹೆಚ್ಚಿನ ನಮ್ಮ ಪಕ್ಷದ ಸದಸ್ಯರು ಮತ್ತು ಹಿತೈಷಿಗಳ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಯಿತು ಹಾಗೂ ತದನಂತರದ ಕಿರುಕುಳ ಮತ್ತು ಬೆದರಿಕೆಗೆ ಒಳಗಾಗಬೇಕಾಯಿತು. ಈ ದಾಳಿಗಳನ್ನು ಧೈರ್ಯದಿಂದ ಎದುರಿಸಿ, ಪಕ್ಷ ಮತ್ತು ಸಾಮೂಹಿಕ ಸಂಘಟನೆಗಳು ಅನೇಕ ಹೋರಾಟಗಳನ್ನು ಸಂಘಟಿಸಿದವು. ದೊಡ್ಡ ಸಂಖ್ಯೆಯ ಜನರನ್ನು ಸೇರಿಸಿ ಕೇಂದ್ರ ಮತ್ತು ರಾಜ್ಯ ಮಟ್ಟದ ಕರೆಗಳು ಹಾಗೂ ಹೋರಾಟಗಳನ್ನು ನಡೆಸಲಾಯಿತು.

2.155 ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿನ ಪಕ್ಷದ ಸೋಲು ವಿನಾಶಕಾರಿಯಾದುದು. ಪಕ್ಷವು ಗಂಭೀರವಾದ ಸ್ವ-ವಿಮರ್ಶಾ ಆತ್ಮಾವಲೋಕನ ಮಾಡಿಕೊಂಡಿತು ಮತ್ತು ಅದರಿಂದ ಪಾಠ ಕಲಿಯಿತು. ಇವುಗಳನ್ನು ಪಕ್ಷ ಅಂತರ್ಗತ ಮಾಡಿಕೊಳ್ಳಬೇಕು ಮತ್ತು ಪ್ರಾಮಾಣಿಕವಾಗಿ ಜಾರಿ ಮಾಡಬೇಕು.

ತ್ರಿಪುರ:

2.156 ರಾಜ್ಯ ಸರ್ಕಾರದ ರಕ್ಷಣೆಯ ಅಡಿಯಲ್ಲಿ ಬಿಜೆಪಿ ನಡೆಸುತ್ತಿರುವ ಫ್ಯಾಸಿಸ್ಟ್ ತೆರನ ದಾಳಿಗಳನ್ನು ನಮ್ಮ ಪಕ್ಷ ಎದುರಿಸುತ್ತಿದೆ. ಪಕ್ಷದ 22 ಸದಸ್ಯರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಮೊದಲು, ನಮ್ಮ ಪಕ್ಷದ ಹೋರಾಟಗಳು ಮತ್ತು ಪ್ರತಿಭಟನೆಗಳಿಗೆ ಹಾಗೂ ಜನತೆಯ ವಿಷಯಗಳ ಮೇಲಿನ ನಮ್ಮ ಸಾಮೂಹಿಕ ಸಂಘಟನೆಗಳ ಹೋರಾಟಗಳಿಗೆ ಪ್ರತಿರೋಧವಾಗಿ ಬಿಜೆಪಿಯು ವ್ಯಾಪಕ ದಾಳಿಗಳನ್ನು ಹರಿಯ ಬಿಟ್ಟಿತು ಮತ್ತು ರಾಜ್ಯಾದ್ಯಂತ ಪಕ್ಷದ 47 ಕಛೇರಿಗಳಿಗೆ ಬೆಂಕಿ ಹಚ್ಚಿತು. ಇದರಿಂದಾಗಿ ಅವುಗಳು ವಿಪರೀತ ಹಾನಿಗೊಳಗಾದವು ಮತ್ತು ನಾಶವಾದವು. ಪಕ್ಷದ ಸದಸ್ಯರು ಮತ್ತು ಹಿತೈಷಿಗಳ ವಾಹನಗಳು, ಪುಸ್ತಕಗಳು ಮತ್ತು ಪೀಠೋಪಕರಣಗಳು ಸೇರಿದಂತೆ ನೂರಾರು ಮನೆಗಳನ್ನು ಧ್ವಂಸ ಮಾಡಲಾಯಿತು. ಈ ದಾಳಿಗಳಲ್ಲಿ ಅನೇಕ ಸಂಗಾತಿಗಳು ಗಾಯಗೊಂಡರು, ಕೆಲವರು ಆಸ್ಪತ್ರೆಗೂ ಸೇರಬೇಕಾಯಿತು.

2.157 ಬಿಜೆಪಿ ರಾಜ್ಯ ಸರ್ಕಾರದ ಅಡಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು, ವಿರೋಧ ಪಕ್ಷಗಳ ಅಭ್ಯರ್ಥಿಗಳನ್ನು ನಾಮಪತ್ರ ಸಲ್ಲಿಸದಂತೆ ಅಥವಾ ಮತದಾನ ಮಾಡದಂತೆ ತಡೆದು, ತಮಾಷೆಯ ಮಟ್ಟಕ್ಕೆ ಇಳಿಸಲಾಯಿತು. ವ್ಯಾಪಕ ಹಿಂಸಾಚಾರಕ್ಕೆ, ಭಯ ಮತ್ತು ಸಂಪೂರ್ಣ ನಕಲಿ ಮತದಾನಕ್ಕೆ ಚುನಾವಣೆಗಳು ಸಾಕ್ಷಿಯಾದವು.

2.158 ಈ ಮೊದಲ, ಸ್ವಾಯತ್ತ ಬುಡಕಟ್ಟು ಮಂಡಳಿ ಚುನಾವಣೆಗಳಲ್ಲಿ ಮತ್ತು ನಂತರದ 334 ಸ್ಥಳೀಯ ಸಂಸ್ಥೆಗಳ ವಾರ್ಡ್ ಚುನಾವಣೆಗಳಲ್ಲಿ ನಮ್ಮ ಅನೇಕ ಸಂಗಾತಿಗಳನ್ನು ನಾಮಪತ್ರ ಸಲ್ಲಿಸದಂತೆ ತಡೆಯಲಾಯಿತು, ಯಾರು ನಾಮಪತ್ರ ಸಲ್ಲಿಸಲು ಯಶಸ್ವಿಯಾದರೋ ಅವರನ್ನು ವ್ಯಾಪಕ ಹಿಂಸಾಚಾರದೊಡನೆ ಬೆದರಿಸಿ ನಾಮಪತ್ರ ಹಿಂದೆಗೆಯುವಂತೆ ಒತ್ತಾಯಿಸಲಾಯಿತು. ಬಿಜೆಪಿ 112 ಕ್ಷೇತ್ರಗಳನ್ನು ಅವಿರೋಧವಾಗಿ ಗೆದ್ದಿತು ಮತ್ತು ಉಳಿದ 222 ರಲ್ಲಿ 5ನ್ನು ಹೊರತು ಪಡಿಸಿ ಉಳಿದೆಲ್ಲಾ ಸ್ಥಾನಗಳಲ್ಲಿ ವ್ಯಾಪಕವಾಗಿ ರಿಗ್ಗಿಂಗ್ ನಡೆಸಿ ಜಯಶಾಲಿಯಾಯಿತು. ಇಂತಹ ಪರಿಸ್ಥಿತಿಯಲ್ಲೂ ಎಡರಂಗ ಸುಮಾರು ಶೇಕಡಾ 20 ರಷ್ಟು ಮತ ಪಡೆಯಿತು.

ಎಡ ಮತ್ತು ಪ್ರಜಾಸತ್ತಾತ್ಮಕ ರಂಗ

2.159 ಎಡ ಮತ್ತು ಪ್ರಜಾಸತ್ತಾತ್ಮಕ ರಂಗವನ್ನು ರಚಿಸಲು ಪಕ್ಷವು ಆದ್ಯತೆಯ ಪ್ರಯತ್ನ ನಡೆಸಬೇಕು. ಪಕ್ಷದ 21ನೇ ಮಹಾಧಿವೇಶನದ ರಾಜಕೀಯ ನಿರ್ಣಯ ಕೆಳಗಿನಂತೆ ಅದರ ರೂಪುರೇಷೆಗಳನ್ನು ಹೇಳಿದೆ.

“ಒಂದು ಸಾಮಾನ್ಯ ಹಕ್ಕೊತ್ತಾಯಗಳ ಪಟ್ಟಿಯ ಆಧಾರದಲ್ಲಿ ವಿವಿಧ ವರ್ಗ ಮತ್ತು ಸಾಮೂಹಿಕ ಸಂಘಟನೆಗಳ ಸಾಮಾನ್ಯ ವೇದಿಕೆಯೊಂದನ್ನು ಕಟ್ಟುವುದು ಈ ದಿಕ್ಕಿನಲ್ಲಿನ ಒಂದು ಹೆಜ್ಜೆ. ಕಾರ್ಮಿಕರು ಮತ್ತು ರೈತರ ಜಂಟಿ ಹೋರಾಟಗಳಿಗೆ ವಿಶೇಷ ಒತ್ತನ್ನು ನೀಡಬೇಕು” (21ನೇ ಮಹಾಧಿವೇಶನದ ರಾಜಕೀಯ ನಿರ್ಣಯದ ಪ್ಯಾರಾ 2.87).

            “ಪ್ರಸ್ತುತದಲ್ಲಿ, ಎಡ ಮತ್ತು ಪ್ರಜಾಸತ್ತಾತ್ಮಕ ರಂಗಕ್ಕೆ ತರಬೇಕಾದ ಶಕ್ತಿಗಳ ಕೇಂದ್ರ ಬಿಂದುವೆಂದರೆ ಎಡ ಪಕ್ಷಗಳು ಮತ್ತು ಅವರ ವರ್ಗ ಮತ್ತು ಸಾಮೂಹಿಕ ಸಂಘಟನೆಗಳು; ಎಡಪಂಥೀಯ ಗುಂಪುಗಳು ಮತ್ತು ಬುದ್ಧಿಜೀವಿಗಳು; ವಿವಿಧ ಪಕ್ಷಗಳಲ್ಲಿ ಹಂಚಿಹೋಗಿರುವ ಸಮಾಜವಾದಿಗಳು ಮತ್ತು ಜಾತ್ಯತೀತ ಬಂಡವಾಳಶಾಹಿ ಪಕ್ಷಗಳಲ್ಲಿರುವ ಪ್ರಜಾಸತ್ತಾತ್ಮಕ ವಿಭಾಗಗಳು; ಆದಿವಾಸಿಗಳ, ದಲಿತರ, ಮಹಿಳೆ ಮತ್ತು ಅಲ್ಪಸಂಖ್ಯಾತರ ಹಾಗೂ ದುರ್ಬಲ ಜನ ವಿಭಾಗಗಳ ವಿಷಯಗಳನ್ನು ಕೈಗೆತ್ತಿಕೊಳ್ಳುತ್ತಿರುವ ಸಾಮಾಜಿಕ ಚಳವಳಿಗಳು. ಈ ಎಲ್ಲಾ ಶಕ್ತಿಗಳನ್ನು ಬಂಡವಾಳಶಾಹಿ-ಭೂಮಾಲೀಕ ಪಕ್ಷಗಳ ನೀತಿಗಳಿಗೆ ವಿರುದ್ಧವಾದ ಮತ್ತು ಅದರಿಂದ ಭಿನ್ನವಾದ ಕಾರ್ಯಕ್ರಮ ಆಧಾರಿತ ಜಂಟಿ ವೇದಿಕೆಗೆ ಸೆಳೆಯುವುದು ಮಾತ್ರವೇ, ಎಡ ಮತ್ತು ಪ್ರಜಾಸತ್ತಾತ್ಮಕ ರಂಗಕ್ಕೆ ಒಂದು ನಿರ್ದಿಷ್ಟ ಸ್ವರೂಪ ನೀಡಬಲ್ಲದು” (22ನೇ ಮಹಾಧಿವೇಶನದ ರಾಜಕೀಯ ನಿರ್ಣಯ, ಪ್ಯಾರಾ 2.110).

2.160 ಈ ತಿಳಿವಳಿಕೆಯನ್ನು ಮುಂದೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ, ಎಡ ಸಾಮೂಹಿಕ ಸಂಘಟನೆಗಳ ‘ಜನ ಏಕತಾ ಜನ ಅಧಿಕಾರ ಆಂದೋಲನ’ (JEJAA) ಎಂಬ ಜಂಟಿ ವೇದಿಕೆ ರಚಿಸಲು ಪ್ರಯತ್ನಗಳನ್ನು ಮಾಡಲಾಯಿತು. ಆನೇಕ ಕಾರಣಗಳಿಂದ ಈ ವೇದಿಕೆಯು ನಾವು ಎಣಿಸಿದಂತೆ ಚಾಲನೆಗೆ ಬರಲಿಲ್ಲ. ಜಂಟಿ ವೇದಿಕೆಗಳನ್ನು ರಚಿಸುವ ನಮ್ಮ ಪ್ರಯತ್ನಗಳು ಮುಂದುವರಿಯಬೇಕು.

2.161 ವರ್ಗ ಮತ್ತು ಸಾಮೂಹಿಕ ಸಂಘಟನೆಗಳ ಜಂಟಿ ಹೋರಾಟಗಳನ್ನು ಸಂಘಟಿಸಲಾಯಿತು. ಇವುಗಳಲ್ಲಿ ಮುಖ್ಯವಾದುದು ಕಾರ್ಮಿಕ ಸಂಘಟನೆಗಳು, ರೈತರು ಮತ್ತು ಕೃಷಿ ಕೂಲಿಕಾರರ ಸಂಘಟನೆಗಳ ಹೋರಾಟಗಳಲ್ಲಿನ ಬಲವಾದ ಐಕ್ಯತೆ. ಆಳಗೊಳ್ಳುತ್ತಿರುವ ಕಾರ್ಷಿಕ ಬಿಕ್ಕಟ್ಟಿನಿಂದ ಉದ್ಭವಿಸಿರುವ ಸಾಮಾನ್ಯ ಬೇಡಿಕೆಗಳ ಆಧಾರದಲ್ಲಿ ರೈತ ಸಂಘಟನೆಗಳ ವಿಶಾಲ ಐಕ್ಯತೆ ಬೆಸೆಯಲಾಯಿತು. ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ) ಯು ರಾಷ್ಟ್ರವ್ಯಾಪಿ ಪ್ರಚಾರಾಂದೋಲನ ಆರಂಭಿಸಿತು ಮತ್ತು 500ಕ್ಕೂ ಹೆಚ್ಚು ರೈತ ಸಂಘಟನೆಗಳ ರಾಷ್ಟ್ರೀಯ ಸಮಾವೇಶ ಸಂಘಟಿಸಿತು. ಐತಿಹಾಸಿಕ ರೈತ ಹೋರಾಟವನ್ನು ಸಂಘಟಿಸಿದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಈ ಸಮಾವೇಶದಲ್ಲಿ ಜನ್ಮ ತಳೆಯಿತು.

2.162 ರೈತ ಹೋರಾಟಕ್ಕೆ ಸೌಹಾರ್ದತೆ ವ್ಯಕ್ತಪಡಿಸಿದ ಅನೇಕ ಇತರೆ ಸಾಮೂಹಿಕ ಸಂಘಟನೆಗಳು, ಸಾಮಾಜಿಕ ಚಳವಳಿಗಳು ಮತ್ತು ಬುದ್ದಿಜೀವಿಗಳ ಸಂಪರ್ಕಗಳನ್ನು ಕ್ರೋಡೀಕರಿಸಿಕೊಳ್ಳಬೇಕು. ಪ್ರತಿ ರಾಜ್ಯದಲ್ಲಿ ಎಡ ಮತ್ತು ಪ್ರಜಾಸತ್ತಾತ್ಮಕ ರಂಗದ ಭಾಗವಾಗಬಹುದಾದ ಶಕ್ತಿಗಳನ್ನು ಗುರುತಿಸುವ ಕೆಲಸದಲ್ಲಿ ಗಮನಾರ್ಹ ಪ್ರಗತಿ ಆಗಲಿಲ್ಲ. ಇದನ್ನು ತುರ್ತಾಗಿ ಮಾಡಬೇಕು. ಈ ಆಧಾರದಲ್ಲಿ, ಬಂಡವಾಳಶಾಹಿ ಭೂಮಾಲೀಕ ನೀತಿಗಳಿಗೆ ಎಡ ಮತ್ತು ಪ್ರಜಾಸತ್ತಾತ್ಮಕ ಕಾರ್ಯಕ್ರಮವೇ ನಿಜವಾದ ಪರ್ಯಾಯ ಎಂದು ಬಿಂಬಿಸಲು ಚಳವಳಿಗಳಲ್ಲಿನ ಐಕ್ಯತೆಯನ್ನು ಬಲಪಡಿಸಬೇಕು.

ಎಡ ಮತ್ತು ಪ್ರಜಾಸತ್ತಾತ್ಮಕ ಕಾರ್ಯಕ್ರಮ

2.163 ಬಂಡವಾಳಶಾಹಿ ಭೂಮಾಲೀಕ ನೀತಿಗಳಿಗೆ ಎಡ ಪ್ರಜಾಸತ್ತಾತ್ಮಕ ಕಾರ್ಯಕ್ರಮಗಳ ಪರ್ಯಾಯದ ರೂಪುರೇಷೆಯು ಕೆಳಕಂಡ ಅಂಶಗಳನ್ನು ಆಧರಿಸಿರಬೇಕು:

ಅ) ಆರ್ಥಿಕ ಸಾರ್ವಭೌಮತ್ವದ ಸಂರಕ್ಷಣೆ: ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣವನ್ನು ಹಿಮ್ಮೆಟ್ಟಿಸಬೇಕು; ನೀರು, ವಿದ್ಯುತ್, ಸಾರ್ವಜನಿಕ ಸಾರಿಗೆ, ಆರೋಗ್ಯ ಮತ್ತು ಶಿಕ್ಷಣದಂತಹ ಮೂಲಭೂತ ಸೇವೆಗಳನ್ನು ಖಾತ್ರಿಗೊಳಿಸಬೇಕು; ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ಮತ್ತು ಫ್ಯಾಕ್ಟರಿಗಳ ಕಾರ್ಪೋರೇಟೀಕರಣ ಸುಗ್ರೀವಾಜ್ಞೆಗಳನ್ನು ಕೈಬಿಡಬೇಕು; ಚಮಚಾ ಬಂಡವಾಳಶಾಹಿ ಕೊನೆಗಾಣಬೇಕು; ಕಿರು, ಸಣ್ಣ, ಮಧ್ಯಮ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕು; ಅಸಂಘಟಿತ ವಲಯವನ್ನು ರಕ್ಷಿಸಬೇಕು; ಅತಿಶ್ರೀಮಂತರಿಗೆ ತೆರಿಗೆ ವಿಧಿಸಬೇಕು; ಸಮತೋಲಿತ ಬೆಳವಣಿಗೆಯನ್ನು ಮರುಸ್ಥಾಪಿಸಬೇಕು; ಅತ್ಯಗತ್ಯವಾದ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು, ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಆಂತರಿಕ ಬೇಡಿಕೆಯನ್ನು ಉದ್ದೀಪಿಸಲು ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಬೇಕು; ಭೂ ಸುಧಾರಣೆಯನ್ನು ಜಾರಿಗೊಳಿಸಬೇಕು; ಸಹಕಾರಿ ಕೃಷಿ, ಉತ್ಪಾದನೆ ಮತ್ತು ಮಾರಾಟದ ಮೂಲಕ ಕೃಷಿಯನ್ನು ಅಭಿವೃದ್ಧಿಪಡಿಸಬೇಕು. ಭಾರತದ ಆಹಾರ ಭದ್ರತೆಯನ್ನು ಬಲಗೊಳಿಸಬೇಕು.

ಆ) ಭಾರತೀಯ ಸಂವಿಧಾನ ಮತ್ತು ಗಣತಂತ್ರದ ಜಾತ್ಯತೀತ ಪ್ರಜಾಸತ್ತಾತ್ಮಕ ಗುಣಗಳ ರಕ್ಷಣೆ: ಸಂವಿಧಾನದ ಮೂಲ ಸ್ಥಂಬಗಳನ್ನು ಬಲಗೊಳಿಸಲು ಪರ್ಯಾಯ ನೀತಿಗಳು. ಜಾತ್ಯತೀತತೆಯ ಮೂಲ ತತ್ವ ಅಂದರೆ ಪ್ರಭುತ್ವ ಮತ್ತು ರಾಜಕೀಯದಿಂದ ಧರ್ಮವನ್ನು ಬೇರ್ಪಡಿಸುವುದನ್ನು ಸಂವಿಧಾನದ ತತ್ವವಾಗಿ ಘೋಷಿಸಬೇಕು. ಕೋಮುವಾದಿ ಧ್ರುವೀಕರಣದ ಉದ್ದೇಶವಿರುವ ದ್ವೇಷ ಮತ್ತು ಹಿಂಸೆಯಾಧಾರಿತ ಪ್ರಚಾರಾಂದೋಲನಗಳನ್ನು ನಿಷೇಧಿಸಬೇಕು; ಧಾರ್ಮಿಕ ಅಲ್ಪಸಂಖ್ಯಾತರ ಜೀವನ, ಸ್ವಾತಂತ್ರ‍್ಯ ಮತ್ತು ಹಕ್ಕುಗಳ ರಕ್ಷಣೆ; ವ್ಯವಸ್ಥೆ ಮತ್ತು ಸರ್ಕಾರಿ ಸಂಸ್ಥೆಗಳನ್ನು ತೀವ್ರ ಕೋಮುವಾದಿ ವ್ಯಕ್ತಿಗಳಿಂದ ಮುಕ್ತಗೊಳಿಸಬೇಕು; ಎಲ್ಲಾ ಕಾನೂನು ಬಾಹಿರ ಖಾಸಗಿ ಸೇನೆ ಮತ್ತು ಗುಂಪುಗಳನ್ನು ನಿಷೇಧಿಸಬೇಕು; ಗುಂಪು ಹತ್ಯೆ ವಿರುದ್ಧ ಕಾನೂನು ರೂಪಿಸಬೇಕು. ಸಿಎಎ/ಎನ್‌ಪಿಆರ್‌/ಎನ್‌ಆರ್‌ಸಿ ಗಳು ರದ್ದಾಗಬೇಕು.

ಇ) ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ‍್ಯದ ಸಂರಕ್ಷಣೆ ಸಂವಿಧಾನದಲ್ಲಿ ಖಾತ್ರಿಗೊಳಿಸಿರುವ ಈ ಹಕ್ಕುಗಳನ್ನು ಸಂರಕ್ಷಣೆ ಮಾಡಬೇಕು. ಅತಿಯಾಗಿ ದುರುಪಯೋಗವಾಗಿರುವ ಈಗಿನ ಸ್ವರೂಪದ ಯುಎಪಿಎ ಅನ್ನು ರದ್ದುಪಡಿಸಬೇಕು. ದೇಶದ್ರೋಹದ ಕಾನೂನು, AFSPA ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಗಳು ರದ್ದಾಗಬೇಕು; ಮರಣ ದಂಡನೆ ಕಾನೂನು ರದ್ದತಿ: ಚುನಾವಣಾ ಬಾಂಡ್‌ಗಳ ಯೋಜನೆಗೆ ನಿಷೇಧ; ಭಾಗಶಃ ಪಟ್ಟಿ ಪದ್ದತಿಯೊಡನೆ ಅನುಪಾತಿಕ ಪ್ರಾತಿನಿಧ್ಯ ಪದ್ದತಿಯನ್ನು ಒಳಗೊಳ್ಳುವುದೂ ಸೇರಿದಂತೆ ಚುನಾವಣಾ ಸುಧಾರಣೆಗಳನ್ನು ಜಾರಿಗೊಳಿಸಬೇಕು; ಕಡ್ಡಾಯ ಸಾಮಾಜಿಕ ಪರಿಶೋಧನೆ ಮತ್ತು ಹೊಣೆಗಾರಿಕೆಯನ್ನು ಖಾತ್ರಿಗೊಳಿಸಬೇಕು; ಮಾಹಿತಿ ಹಕ್ಕು ಕಾಯ್ದೆಯ ಕಟ್ಟುನಿಟ್ಟಾದ ಜಾರಿ.

ಈ) ಒಕ್ಕೂಟ ತತ್ವ: ರಾಜ್ಯಗಳಿಗೆ ಹೆಚ್ಚಿನ ಅಧಿಕಾರವಿರುವಂತೆ ಕೇಂದ್ರ ರಾಜ್ಯ ಸಂಬಂಧಗಳನ್ನು ಪುನರ‍್ರಚಿಸಬೇಕು; ಕೇಂದ್ರದ ಹೆಚ್ಚುವರಿ ತೆರಿಗೆಗಳು ಮತ್ತು ಸೆಸ್‌ಗಳನ್ನು ಹಂಚಿಕೊಳ್ಳುವಂತೆ ಹಣಕಾಸು ಒಕ್ಕೂಟ ತತ್ವವನ್ನು ಬಲಪಡಿಸಬೇಕು ಮತ್ತು ಕೇಂದ್ರ ಸರ್ಕಾರದ ತೆರಿಗೆಯೇತರ ಆದಾಯಗಳನ್ನು ಹಂಚಿಕೆ ನಿಧಿಯ ಭಾಗವಾಗಿಸಬೇಕು; ಅಂತರ ರಾಜ್ಯ ಮಂಡಳಿ, ಯೋಜನಾ ಆಯೋಗ ಮತ್ತು ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು ಪುನಶ್ಚೇತನಗೊಳಿಸಬೇಕು; ಗವರ್ನರುಗಳ ಅಗತ್ಯತೆಯನ್ನು ಮರುಪರಿಶೀಲನೆಗೆ ಒಳಪಡಿಸಬೇಕು; 356ನೇ ವಿಧಿಯನ್ನು ಅಗತ್ಯ ಸುರಕ್ಷಾ ಕಾನೂನುಗಳ ಮೂಲಕ ಬದಲಾಯಿಸಬೇಕು. ಅದರ ಸ್ವಾಯತ್ತತೆಯೊಡನೆ ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ರಾಜ್ಯದ ಸ್ಥಾನಮಾನವನ್ನು ಪುನರ್‌ಸ್ಥಾಪಿಸಬೇಕು. 370/35ಎ ವಿಧಿಯ ರದ್ದತಿಯನ್ನು ಹಿಂತೆಗೆದುಕೊಳ್ಳಬೇಕು.

ಉ) ಕಾರ್ಮಿಕ ವರ್ಗ ಮತ್ತು ರೈತಾಪಿ: ಗ್ರಾಹಕ ಬೆಲೆ ಸೂಚ್ಯಂಕಕ್ಕೆ ಹೊಂದಾಣಿಕೆಯಾಗುವಂತೆ ಅಕುಶಲ ಕಾರ್ಮಿಕರಿಗೆ ತಿಂಗಳಿಗೆ ರೂ. 21,000ಕ್ಕೆ ಕಡಿಮೆ ಇಲ್ಲದಂತೆ ಶಾಸನಬದ್ಧ ಕನಿಷ್ಟ ಕೂಲಿಯನ್ನು ಖಾತ್ರಿಗೊಳಿಸಬೇಕು; ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು; ಗುಪ್ತ ಮತದಾನದ ಮೂಲಕ ಕಾರ್ಮಿಕ ಸಂಘಗಳ ಮಾನ್ಯತೆಯನ್ನು ಖಾತ್ರಿಗೊಳಿಸಬೇಕು; ಸಾಮಾಜಿಕ ಸುರಕ್ಷತೆ ಮತ್ತು ಆಡಳಿತದಲ್ಲಿ ಕಾರ್ಮಿಕರ ಭಾಗವಹಿಸುವಿಕೆಯನ್ನು ಖಾತ್ರಿಗೊಳಿಸಬೇಕು. ಸಿ2+50% ಸೂತ್ರದ ಆಧಾರದಲ್ಲಿ ಎಲ್ಲಾ ರೈತರಿಗೆ ಮತ್ತು ಎಲ್ಲಾ ಬೆಳೆಗಳಿಗೆ ಶಾಸನಬದ್ಧ ಕನಿಷ್ಟ ಬೆಂಬಲ ಬೆಲೆ ಪಾವತಿಸುವುದನ್ನು ಕಾನೂನುಬದ್ಧಗೊಳಿಸಬೇಕು; ಕೇಂದ್ರ ಸರ್ಕಾರವು ರೈತರ ಸಾಲ ಮನ್ನಾ ಮಾಡಬೇಕು; ಕೃಷಿ ಕೂಲಿಕಾರರಿಗೆ ಸಾಮಾಜಿಕ ಸುರಕ್ಷತೆ ಮತ್ತು ಕೂಲಿಗಾಗಿ ಕೇಂದ್ರೀಯ ಶಾಸನ ರಚನೆಯಾಗಬೇಕು.

ಊ) ಸಾಮಾಜಿಕ ನ್ಯಾಯ: ಜಾತಿ ವ್ಯವಸ್ಥೆ ಮತ್ತು ಎಲ್ಲಾ ರೀತಿಯ ಜಾತಿ ದಬ್ಬಾಳಿಕೆಯ ರದ್ದತಿ; ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗಳಿಗೆ ಮೂಲಭೂತ ಮಾನವ ಹಕ್ಕುಗಳನ್ನು ಖಾತ್ರಿಗೊಳಿಸಲು ವಿಶೇಷ ಕ್ರಮಗಳು; ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ವಿಶೇಷ ಘಟಕ ಯೋಜನೆ ಇರುವಂತೆ ಕೇಂದ್ರೀಯ ಶಾಸನವೊಂದನ್ನು ರಚಿಸಬೇಕು ಹಾಗೂ ಅದರ ಜಾರಿಯನ್ನು ನೋಡಿಕೊಳ್ಳುವ ಸಬಲೀಕೃತ ಸಮಿತಿಯೊಂದರ ರಚನೆಯಾಗಬೇಕು; ಸಂವಿಧಾನ ಮತ್ತು ಕಾನೂನಿನಲ್ಲಿ ಆದಿವಾಸಿಗಳಿಗೆ ನೀಡಲಾಗಿರುವ ಅರಣ್ಯ ಭೂಮಿ, ಬದುಕು ಮತ್ತು ಸಂಸ್ಕೃತಿಯ ಮೇಲಿನ ಹಕ್ಕುಗಳನ್ನು ರಕ್ಷಿಸಬೇಕು; ಖಾಸಗೀ ವಲಯದಲ್ಲಿ ಮೀಸಲಾತಿ ಒದಗಿಸಲು ಕಾನೂನು ರೂಪಿಸಬೇಕು; ಜಾತಿ ಗಣತಿ ನಡೆಸಬೇಕು; ಮೀಸಲು ವರ್ಗದಲ್ಲಿರುವ ಎಲ್ಲಾ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು; ಮಲಹೋರುವ ರದ್ದತಿಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು; ಅಸ್ಪೃಶ್ಯತೆ ಆಚರಣೆ ವಿರುದ್ಧ ಕಟ್ಟುನಿಟ್ಟಿನ ಶಿಕ್ಷೆ; ಅರಣ್ಯ ಹಕ್ಕು ಕಾಯ್ದೆಯ ಕಟ್ಟುನಿಟ್ಟಿನ ಜಾರಿ; ಇತರೆ ಹಿಂದುಳಿದ ವರ್ಗಗಳನ್ನು ಎಣಿಸಲು ಜಾತಿ ಗಣತಿ.

ಮಹಿಳೆ: ಮಹಿಳಾ ಮೀಸಲು ಕಾಯ್ದೆಯ ಜಾರಿ; ಮಹಿಳೆಯರಿಗೆ ಸಮಾನ ಹಕ್ಕು ಮತ್ತು ಸಂಭಾವನೆಯ ಖಾತ್ರಿ; ಮಹಿಳೆ ಮತ್ತು ಮಕ್ಕಳ ವಿರುದ್ಧ ಗಾಬರಿ ಹುಟ್ಟಿಸುವಷ್ಟು ಹೆಚ್ಚಾಗಿರುವ ಹಿಂಸೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳು; ಆರೋಪಿಗಳನ್ನು ತಡೆಯಲು, ನಿಯಂತ್ರಿಸಲು ಮತ್ತು ಶಿಕ್ಷಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು; ‘ಮರ್ಯಾದಾ ಅಪರಾಧ’ಗಳನ್ನು ನಿಷೇಧಿಸಲು ಕಾನೂನು.

ಮಕ್ಕಳು: ಎಲ್ಲಾ ಮಕ್ಕಳನ್ನು ಒಳಗೊಳ್ಳುವಂತೆ ಐಸಿಡಿಎಸ್‌ ಯೋಜನೆಯನ್ನು ಸಾರ್ವತ್ರೀಕರಿಸಬೇಕು. ಶಿಕ್ಷಣ ಹಕ್ಕು ಕಾಯ್ದೆಯ ಕಟ್ಟುನಿಟ್ಟಿನ ಜಾರಿ; ಎಲ್ಲಾ ರೀತಿಯ ಬಾಲ ಕಾರ್ಮಿಕರ ದುಡಿಮೆಯ ನಿಷೇಧ; ಮಕ್ಕಳ ಕಳ್ಳ ಸಾಗಾಣಿಕೆ ವಿರುದ್ಧ ಶಿಕ್ಷಾ ಕ್ರಮ.

ಎಲ್‌ಜಿಬಿಟಿ: ಮಂಗಳಮುಖಿ ನಾಗರೀಕರ ಹಕ್ಕುಗಳನ್ನು ರಕ್ಕಿಸಬೇಕು ಮತ್ತು ಎತ್ತಿ ಹಿಡಿಯಬೇಕು; ಎಲ್‌ಜಿಬಿಟಿ ನಾಗರೀಕರ ವಿರುದ್ಧದ ಅಪರಾಧ ಮತ್ತು ಕಿರುಕುಳವನ್ನು ನಿಗ್ರಹಿಸಲು ಕಾನೂನು ಕ್ರಮಗಳನ್ನೂ ಒಳಗೊಂಡಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು;

ಅಂಗವಿಕಲರು: ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಹಕ್ಕುಗಳ ಕಾಯ್ದೆ ಮತ್ತು ಮಾನಸಿಕ ಆರೋಗ್ಯ ಶುಶ್ರೂಷಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅಗತ್ಯ ಬಜೆಟ್ ಅನುದಾನ; ರಾಷ್ಟ್ರೀಯ ಅಂಗವೈಕಲ್ಯ ನೀತಿಯ ಪರಿಷ್ಕರಣೆ ಮತ್ತು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಹಕ್ಕುಗಳ ಮೇಲಿನ ವಿಶ್ವಸಂಸ್ಥೆಯ (ಯುಎನ್‌)ದ ನಿರ್ಣಯಗಳಿಗೆ ಅನುಗುಣವಾಗಿ ಇತರೆ ಕಾನೂನುಗಳಿಗೆ ತಿದ್ದುಪಡಿ; ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ; ಮೂಲ ಸೌಕರ್ಯಗಳು, ಸಾರಿಗೆ ಮತ್ತು ಐಟಿ ಸೇವೆಗಳು ಎಟಕುವಂತೆ ವ್ಯವಸ್ಥೆ ನಿರ್ಮಾಣ.

ಔ) ಜನತೆಯ ಕಲ್ಯಾಣ

1) ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯ ಸಾರ್ವತ್ರೀಕರಣ: ಎಲ್ಲಾ ಅಗತ್ಯ ವಸ್ತುಗಳ ಪೂರೈಕೆ; ಸಾರ್ವತ್ರಿಕ ಪಿಂಚಣಿ ಸೌಲಭ್ಯ; ಗ್ರಾಮೀಣ ಮತ್ತು ನಗರದ ಬಡವರಿಗೆ ಸುರಕ್ಷಿತ ಕುಡಿಯುವ ನೀರು, ಶೌಚ ಮತ್ತು ಮನೆ.

2) ಉದ್ಯೋಗ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಎಂಜಿಎನ್‌ಆರ್‌ಇಜಿಎ) ಅಡಿಯಲ್ಲಿ ಉದ್ಯೋಗದ ವಿಸ್ತರಣೆ ಮತ್ತು ಕೂಲಿಯ ಹೆಚ್ಚಳ; ನಗರ ಉದ್ಯೋಗ ಖಾತರಿ ಯೋಜನೆಯ ಜಾರಿ; ನಿರುದ್ಯೋಗ ಭತ್ಯೆಯನ್ನು ಒದಗಿಸುವುದು.

3) ನೂತನ ಶಿಕ್ಷಣ ನೀತಿಯನ್ನು ಹಿಂಪಡೆಯಿರಿ: ಸಾಂವಿಧಾನಿಕ ಮೌಲ್ಯಗಳನ್ನು ಬಲಗೊಳಿಸುವಂತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಬಿತ್ತುವಂತೆ ಪಠ್ಯಕ್ರಮ ಮತ್ತು ಭೋದನಾ ವಿಷಯಗಳ ಪರಿಷ್ಕರಣೆ; ಖಾಸಗೀ ಶಿಕ್ಷಣ ಸಂಸ್ಥೆಗಳ ನಿಯಂತ್ರಣ; ಶಿಕ್ಷಣಕ್ಕೆ ಕೇಂದ್ರೀಯ ಅನುದಾನವನ್ನು ಜಿಡಿಪಿಯ ಶೇ. 6ಕ್ಕೆ ಹೆಚ್ಚಿಸುವುದು. ಶಿಕ್ಷಣದಲ್ಲಿ ಡಿಜಿಟಲ್ ಅಂತರವನ್ನು ಇಲ್ಲವಾಗಿಸುವುದು.

4) ಸರ್ಕಾರಿ ಅನುದಾನದ ಸಾರ್ವತ್ರಿಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆ: ಆರೋಗ್ಯದ ಮೇಲಿನ ಕೇಂದ್ರ ಸರ್ಕಾರದ ವೆಚ್ಚವನ್ನು ಕನಿಷ್ಠ ಜಿಡಿಪಿಯ ಶೇ. 5ಕ್ಕೆ ಹೆಚ್ಚಿಸಬೇಕು. ಅಗತ್ಯ ಔಷಧಗಳ ಬೆಲೆ ಇಳಿಸಬೇಕು; ಖಾಸಗಿ ಆರೋಗ್ಯ ಸೌಲಭ್ಯಗಳನ್ನು ನಿಯಂತ್ರಿಸಬೇಕು.

5) ಪರಿಸರ: ನಿಬಂಧನೆಗಳ ಮೂಲಕ ವಿಷಾನಿಲ ಉಗುಳುವಿಕೆಯನ್ನು ಕುಗ್ಗಿಸಿ ಪರಿಸರವನ್ನು ಸಂರಕ್ಷಿಸಬೇಕು; ನವೀಕೃತ ಇಂಧನಗಳನ್ನು ಉತ್ತೇಜಿಸಬೇಕು; ಎಲ್ಲರಿಗೂ ಇಂಧನ ಸಮಾನತೆಯನ್ನು ಖಾತ್ರಿಗೊಳಿಸಬೇಕು; ಅರಣ್ಯಗಳು ಮತ್ತು ಆರ್ದ್ರ ಭೂಮಿಯನ್ನು ಉಳಿಸಬೇಕು; ಮಾಲಿನ್ಯವನ್ನು ತಡೆಯಬೇಕು ಮತ್ತು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು.

6) ಸಂಸ್ಕೃತಿ ಮತ್ತು ಮಾಧ್ಯಮ: ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಸಂಸ್ಕೃತಿಯನ್ನು ಬೆಳೆಸಬೇಕು, ಕೋಮುವಾದಿ ಮತ್ತು ಸಂಕುಚಿತ ಪ್ರಭಾವವನ್ನು ಕುಂಠಿತಗೊಳಿಸಲು ಜನತೆಯ ವಿಷಯಗಳ ಮೇಲೆ ಗಮನ ಹರಿಸಬೇಕು; ಜಾನಪದ ಕಲೆಗಳೂ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಪ್ರಕಾರಗಳನ್ನು ಪೋಷಿಸಬೇಕು; ಸಂವಿಧಾನದ 8ನೇ ಪರಿಚ್ಛೇದದಲ್ಲಿ ನಮೂದಿಸಿರುವ ಎಲ್ಲಾ ಭಾಷೆಗಳನ್ನು ಸಮಾನವಾಗಿ ಪ್ರೋತ್ಸಾಹಿಸಬೇಕು ಮತ್ತು ಅಭಿವೃದ್ಧಿ ಪಡಿಸಬೇಕು. ಸಾಂಸ್ಕೃತಿಕ ವ್ಯಕ್ತಿಗಳು ಮತ್ತು ಅಭಿವ್ಯಕ್ತಿಗಳ ಮೇಲೆ ಕೋಮುವಾದಿ ಶಕ್ತಿಗಳು ನಡೆಸುವ ದಾಳಿಗಳನ್ನು ದೃಢವಾಗಿ ನಿರ್ವಹಿಸಬೇಕು. ಮುಕ್ತ ತಂತ್ರಾಂಶವನ್ನು ಪ್ರೋತ್ಸಾಹಿಸಬೇಕು.

ಪತ್ರಿಕಾ ಸ್ವಾತಂತ್ರ‍್ಯವನ್ನು ರಕ್ಷಿಸಬೇಕು; ಸಾರ್ವಜನಿಕ ಪ್ರಸಾರ ಸೇವೆಗಳನ್ನು ಬಲಗೊಳಿಸಬೇಕು; ಮಾಧ್ಯಮದ ಏಕಸ್ವಾಮ್ಯಕ್ಕೆ ಕಡಿವಾಣ ಹಾಕಬೇಕು ಮತ್ತು ಅಡ್ಡ ಮಾಲೀಕತ್ವವನ್ನು ನಿಷೇದಿಸಬೇಕು; ಮಾಧ್ಯಮದ ಸ್ವತಂತ್ರ ನಿಬಂಧನಾ ಪ್ರಾಧಿಕಾರದ (ರೆಗ್ಯುಲೆಟರಿ ಅಥಾರಿಟಿ) ಸ್ಥಾಪನೆ; ಮಾಧ್ಯಮ ಸಿಬ್ಬಂದಿಯ ರಕ್ಷಣೆ ಮತ್ತು ಸುರಕ್ಷತೆಯನ್ನು ಖಾತ್ರಿಗೊಳಿಸಬೇಕು.

7) ವಿದೇಶಾಂಗ ನೀತಿ: ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಕಟ್ಟುನಿಟ್ಟಾಗಿ ಖಾತ್ರಿಗೊಳಿಸಬೇಕು; ಭಾರತವನ್ನು ಅಮೆರಿಕ ಸಾಮ್ರಾಜ್ಯಶಾಹಿಯ ಅಡಿಯಾಳಾಗಿಸುವ ಈಗಿನ ಸ್ಥಿತಿಯನ್ನು ಹಿಮ್ಮುಖಗೊಳಿಸಬೇಕು; ಎಲ್ಲಾ ವ್ಯೂಹಾತ್ಮಕ ಮತ್ತು ರಕ್ಷಣಾ ಒಪ್ಪಂದಗಳನ್ನು ಪುನರ್ ಪರಿಶೀಲನೆ ಮಾಡಬೇಕು; ಅಮೆರಿಕದ ವ್ಯೂಹಾತ್ಮಕ ಹಿತಾಸಕ್ತಿಗಳು ಮತ್ತು ಕಾಳಜಿಗಳನ್ನು ಪ್ರೋತ್ಸಾಹಿಸುವ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಕೂಟಗಳಿಂದ ಹೊರ ಬರಬೇಕು.

ಪಕ್ಷದ ಬಲವರ್ಧನೆ

2.164 ಪಶ್ಚಿಮ ಬಂಗಾಳದಲ್ಲಿ ನಮ್ಮ ಸಾಮೂಹಿಕ ನೆಲೆಗೆ ಗಂಭೀರ ಹಾನಿಯಾಗಿದೆ. ತ್ರಿಪುರಾದಲ್ಲಿ ಕೂಡ ಸವೆತ ಮುಂದುವರೆದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಎಂದೂ ಇಲ್ಲದಷ್ಟು ಕಡಿಮೆ ಮತ ಪಡೆದಿದ್ದೇವೆ. 16ನೇ ಮಹಾಧಿವೇಶನದಿಂದಲೂ ಪಕ್ಷದ ಸ್ವತಂತ್ರ ಶಕ್ತಿ ಮತ್ತು ಪ್ರಭಾವವನ್ನು ಬಲಗೊಳಿಸಲು ಅಗತ್ಯವನ್ನು ಗುರುತಿಸುತ್ತಲೇ ಇದ್ದೇವೆ.

2.165 17ನೇ ಮಹಾಧಿವೇಶನದ ರಾಜಕೀಯ ನಿರ್ಣಯದ ಹೇಳಿಕೆ:

“ನಮ್ಮ ಭವಿಷ್ಯದ ದಿಕ್ಕನ್ನು ಯೋಜಿಸುವಾಗಲೇ, ಪಕ್ಷದ ಸ್ವತಂತ್ರ ಪಾತ್ರ ಮತ್ತು ಪ್ರಭಾವವನ್ನು ಬಲಗೊಳಿಸುವುದು ಹೇಗೆ ಎಂಬುದು ಮುಖ್ಯ ಕಾಳಜಿಯಾಗಬೇಕು. ಗಣನೀಯ ಸಮಯದಲ್ಲಿ ಈ ವಿಚಾರದಲ್ಲಿ ನಾವು ಹೆಚ್ಚಿನ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು”(2.80).

2.166 ಪಕ್ಷದ 22ನೇ ಮಹಾಧಿವೇಶನದಿಂದೀಚಿನ ಅವಧಿಯ ಚುನಾವಣಾ ಫಲಿತಾಂಶ ವಿಶ್ಲೇಷಣೆಗಳು ಇತರೆ ವಿಷಯಗಳ ಜೊತೆಗೆ ಎತ್ತಿ ತೋರಿಸಿದ ಮೂಲಭೂತ ವಿಷಯವೇನೆಂದರೆ, ನಮ್ಮ ಸ್ವತಂತ್ರ ಶಕ್ತಿ ಮತ್ತು ರಾಜಕೀಯ ಮಧ್ಯಪ್ರವೇಶದ ಸಾಮರ್ಥ್ಯವನ್ನು ಬಲಗೊಳಿಸುವ ಅಗತ್ಯದ್ದು, ಇದು ಆಗಲೇಬೇಕಾದ್ದು. ಕಳೆದ ಅನೇಕ ಸಂದರ್ಭಗಳಲ್ಲಿ ಪಕ್ಷವು ಈ ವಿಷಯದಲ್ಲಿ ಅನೇಕ ರಾಜಕೀಯ ಮತ್ತು ಸಂಘಟನಾ ತೀರ್ಮಾನಗಳನ್ನು ಮಾಡಿದೆ. ಇವುಗಳನ್ನು ಪಕ್ಷ ಅಂತರ್ಗತ ಮಾಡಿಕೊಳ್ಳಬೇಕು ಮತ್ತು ಸರಿಯಾದ ಶ್ರದ್ಧೆಯಿಂದ ತುರ್ತಾಗಿ ಜಾರಿ ಮಾಡಬೇಕು.

2.167 ತಕ್ಷಣವೇ ಈ ಅವನತಿಯ ಪ್ರವೃತ್ತಿಗೆ ಕಡಿವಾಣ ಹಾಕಿ ಕೊನೆಗಾಣಿಸಬೇಕಾಗಿರುವುದು ಅನಿವಾರ್ಯವಾದ ಅಗತ್ಯವಾಗಿದೆ. ಇದಾಗದೇ ನಮ್ಮ ಕ್ರಾಂತಿಕಾರಿ ಗುರಿಗಳನ್ನು ಈಡೇರಿಸಿಕೊಳ್ಳಲು ಅಗತ್ಯವಾದ ಮುನ್ನಡೆಯನ್ನು ಸಾಧಿಸಲಾರೆವು. ಹಾಗಾಗಿ ಈ ಕೆಳಗಿನವುಗಳನ್ನು ಅದ್ಯತೆಗಳನ್ನಾಗಿಸಿಕೊಳ್ಳಬೇಕು.

ಅ) ರಾಜಕೀಯ, ಸೈದ್ಧಾಂತಿಕ ಹಾಗೂ ಸಂಘಟನಾತ್ಮಕ ಕೆಲಸಗಳನ್ನು ತುರ್ತಾಗಿ ಬಲಗೊಳಿಸಿಕೊಳ್ಳಬೇಕು. ಜನರೊಂದಿಗೆ ಜೀವಂತ ಸಂಬಂಧವನ್ನು ಸಾಧಿಸಿಕೊಳ್ಳಲು ಎಲ್ಲಾ ಆಯಾಮದ ಹಾಗೂ ಕೇಂದ್ರೀಕರಿಸಿದ ಪ್ರಯತ್ನಗಳನ್ನು ಮಾಡುವ ಮೂಲಕ ಎಡೆಬಿಡದ ವರ್ಗ ಮತ್ತು ಸಾಮೂಹಿಕ ಹೋರಾಟಗಳನ್ನು ಬೆಳೆಸುವುದರ ಜೊತೆಗೆ ಈ ಹೋರಾಟಗಳನ್ನು ಕ್ರೋಡೀಕರಿಸಿ ನಮ್ಮ ರಾಜಕೀಯ ಪ್ರಭಾವವನ್ನು ಗಟ್ಟಿಗೊಳಿಸಬೇಕು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಾಕ್ಷರತೆ ಆಂದೋಲನ, ಗ್ರಂಥಾಲಯಗಳನ್ನು ಸ್ಥಾಪಿಸುವಂತಹ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಬೇಕು.

ಆ) ಸ್ಥಳೀಯವಾಗಿ, ಜನತೆ ಹಾಗೂ ಅವರ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯಗಳ ಮೇಲಿನ ಹೋರಾಟಗಳನ್ನು ಬಲಿಷ್ಠಗೊಳಿಸಲು ಗಮನ ಕೇಂದ್ರೀಕರಿಸಬೇಕು. ಇಂತಹ ಹೋರಾಟಗಳು ಸಾಂಕೇತಿಕವಾಗಿ ಇರದೇ ನಿರ್ದಿಷ್ಟ ಫಲಗಳು ಸಿಗುವ ತನಕ ಸುಸ್ಥಿರವಾಗಿ ಇರುವಂತೆ ನೋಡಿಕೊಳ್ಳಬೇಕು.

ಇ) ಕೋವಿಡ್ ಮಹಾಸೋಂಕು ಹಾಗೂ ಈ ಸಂಬಂದಿತ ಲಾಕ್‌ಡೌನ್‌ಗಳು ಮತ್ತು ನಿಯಾಮಾವಳಿಗಳು ಸಹಜವಾಗಿ ಸಮರಶೀಲ ಸಾಮೂಹಿಕ ಚಳವಳಿ ಬೆಳೆಸಲು ಅಡ್ಡಿಯಾಗಿವೆ. ಜನತೆಯನ್ನು ಬಾಧಿಸುತ್ತಿರುವ ಹಲವಾರು ವಿಧ ವಿಧವಾದ ಜೀವನೋಪಾಯದ ಸಮಸ್ಯೆಗಳ ಕುರಿತ ಜನಹೋರಾಟಗಳ ಸಮರ್ಪಕ ರೀತಿಯ ಯೋಜನೆ ಹಾಗೂ ಅನುಷ್ಠಾನಗಳ ಮೂಲಕ ಈ ಕೊರತೆಯನ್ನು ನೀಗಿಸಿಕೊಳ್ಳಬೇಕು.

ಈ) ಪಕ್ಷವು ಹಿಂದುತ್ವ ಶಕ್ತಿಗಳ ಸವಾಲುಗಳನ್ನು ಸೈದ್ಧಾಂತಿಕವಾಗಿ, ರಾಜಕೀಯವಾಗಿ ಹಾಗೂ ಸಂಘಟನಾತ್ಮಕವಾಗಿ ಕ್ಷಿಪ್ರಗತಿಯಲ್ಲಿ ಎದುರಿಸಬೇಕು. ವಿಭಜನಾಕಾರಿ ಕೋಮುವಾದಿ ಅಜೆಂಡಾ ಮತ್ತು ಜಾತ್ಯತೀತ ಮೌಲ್ಯಗಳ ವಿನಾಶಗಳನ್ನು ಪ್ರತಿರೋಧಿಸಬೇಕು. ಅಲ್ಪಸಂಖ್ಯಾತ ಸಮುದಾಯಗಳ ರಕ್ಷಣೆಯಲ್ಲಿ ನಮ್ಮ ಪಾತ್ರ ಅಗ್ರಗಣ್ಯವಾಗಿರಬೇಕು. ಒಳಗೊಳ್ಳುವಿಕೆಯ ಭಾರತದ ಪ್ರಜ್ಞೆಯನ್ನು ಗಟ್ಟಿಗೊಳಿಸುವ ಭಾರತೀಯ ರಾಷ್ಟ್ರೀಯತೆಯ ಮೂಲಕ, ಹಿಂದುತ್ವ ರಾಷ್ಟ್ರಿಯತೆಗೆ ಸವಾಲು ಎಸೆಯಬೇಕು.

ಉ) ಸಾಮಾಜಿಕ ತಾರತಮ್ಯ, ಜಾತಿ ದಮನ ಹಾಗೂ ಲಿಂಗ ತಾರತಮ್ಯದ ವಿಷಯಗಳ ಮೇಲೆ ಪಕ್ಷವು ಹೋರಾಟಗಳನ್ನು ನಡೆಸಬೇಕು. ಸಾಮಾಜಿಕ ದಮನದ ವಿರುದ್ಧದ ಹೋರಾಟಗಳನ್ನು ಆರ್ಥಿಕ ಶೋಷಣೆಯ ಹೋರಾಟಗಳೊಂದಿಗೆ ಬೆಸೆಯಬೇಕು. ವರ್ಗ ಐಕ್ಯತೆಗೆ ಭಂಗವನ್ನುಂಟು ಮಾಡುವ ಗುರುತಿನ (ಐಡೆಂಟಿಟಿ) ರಾಜಕೀಯ ದ ವಿರುದ್ಧ ಹೋರಾಟಗಳನ್ನು ನಡೆಸಬೇಕು.

ಊ) ʻಸಂಘಟನೆ ಕುರಿತ ಕೋಲ್ಕತ್ತಾ ಪ್ಲೀನಂʼ ತೀರ್ಮಾನಗಳನ್ನು ತುರ್ತಾಗಿ ಆದಷ್ಟೂ ಬೇಗ ಜಾರಿ ಮಾಡಬೇಕು. ಪ್ಲೀನಂ ಮಾರ್ಗಸೂಚಿಗಳ ಆಧಾರದ ಮೇಲೆ ಪಕ್ಷ ಸಂಘಟನೆಗಳನ್ನು ಸುಸಜ್ಜಿತಗೊಳಿಸಬೇಕು.

ಹಿಂದುತ್ವವನ್ನು ಮಣಿಸುವ ಹಾದಿ

2.168 ಹಿಂದುತ್ವ ಶಕ್ತಿಗಳನ್ನು ಮೂಲೆಗುಂಪಾಗಿಸಲು ಪಕ್ಷವನ್ನು ಬಲಿಷ್ಠಗೊಳಿಸುವುದು ಒಂದು ಮೂಲಭೂತ ಪೂರ್ವಾಗತ್ಯ. ಹಿಂದುತ್ವ ಹಾಗೂ ಅದರ ಬಹು ವಿಧದ ಕೋಮುವಾದಿ ಅಂಗ ಸಂಘಟನೆಗಳ ವಿರುದ್ಧ ಹೋರಾಟಗಳನ್ನು ರಾಜಕೀಯ, ಸೈದ್ಧಾಂತಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ವಲಯಗಳಲ್ಲಿ ಎಡೆಬಿಡದ ರೀತಿಯಲ್ಲಿ ನಡೆಸಬೇಕು. ಹಿಂದುತ್ವ ಅಜೆಂಡ ವಿರುದ್ಧ ಈ ಹೋರಾಟವನ್ನು ಬಲಗೊಳಿಸಲು ನಿರ್ದಿಷ್ಟ ಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು.

2.169 ಪಕ್ಷ ಹಾಗೂ ಸಾಮೂಹಿಕ ಸಂಘಟನೆಗಳು ಈ ಸುಸ್ಥಿರವಾದ ಹೋರಾಟಗಳನ್ನು ನಡೆಸಲು ಈ ಕೆಳಗಿನಂತೆ ಕ್ರಮಗಳನ್ನು ತೆಗೆದುಕೊಳ್ಳಬಹುದು.

1) ಪಕ್ಷದಿಂದ ಸ್ಥಾಪಿಸಲ್ಪಟ್ಟ ಸಮರ್ಪಿತ ಗುಂಪುಗಳ ಮೂಲಕ ನಿರಂತರವಾಗಿ ಸೈದ್ಧಾಂತಿಕ ಹಾಗೂ ರಾಜಕೀಯ ಸಾಮಗ್ರಿಗಳನ್ನು ತಯಾರಿಸುವುದು. ಇದು ವಿಶಾಲ ಜನಸಮುದಾಯವನ್ನು ತಲುಪುವಂತಹ ಜನಪ್ರಿಯ ಶೈಲಿಯಲ್ಲಿದ್ದು ಹಿಂದುತ್ವ ಹಾಗೂ ಕೋಮುವಾದಿ ಶಕ್ತಿಗಳ ಪ್ರತಿಗಾಮಿ ಹೂರಣವನ್ನು ಬಯಲುಗೊಳಿಸುವಂತಿರಬೇಕು.

2) ಹಿಂದುತ್ವ ಗುಂಪುಗಳು ನಿರ್ದಿಷ್ಟವಾಗಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದ್ವೇಷ ಹಾಗೂ ಭಯೋತ್ಪಾದಕ ವಿಷಪೂರಿತ ಪ್ರಚಾರಗಳ ಮೂಲಕ ನಡೆಸುವ ಫ್ಯಾಸಿಸ್ಟ್ ಸ್ವರೂಪದ ದಾಳಿಗಳನ್ನು ಕ್ರಿಯಾಶೀಲವಾಗಿ ಹಿಮ್ಮೆಟ್ಟಿಸಬೇಕು. ತಳಮಟ್ಟದಲ್ಲಾಗಲಿ, ಮೆಲ್ಮಟ್ಟದಲ್ಲಾಗಲಿ ಸಾರ್ವಜನಿಕ ವಲಯಗಳನ್ನು ಕೋಮುವಾದೀಕರಿಸುವ ಪ್ರಯತ್ನಗಳನ್ನು ಪ್ರತಿರೋಧಿಸಲು ಗರಿಷ್ಠ ಪ್ರಮಾಣದ ಜಾಗರೂಕತೆಯನ್ನು ಕಾಯ್ದುಕೊಳ್ಳಬೇಕು.

3) ವಿಚಾರಪರತೆ ಆಧಾರಿತ ಜಾತ್ಯತೀತ, ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುವ ಮೂಲಕ ಕಂದಾಚಾರ, ಮೂಢನಂಬಿಕೆ, ಅವೈಚಾರಿಕತೆ ಬೆಳೆಯುವುದನ್ನು ಹಿಮ್ಮೆಟ್ಟಿಸುವ ಸಾಮಾಜಿಕ ಸಂಘಟನೆ, ಸಾಂಸ್ಕೃತಿಕ ಚಟುವಟಿಕೆಗಳು, ಜನಪ್ರಿಯ ವಿಜ್ಞಾನ ಚಳವಳಿಗಳನ್ನು ಪ್ರೊತ್ಸಾಹಿಸಬೇಕು. ಹಿಂದುತ್ವ ಗುಂಪುಗಳು ಹರಡುವ ಅವೈಚಾರಿಕತೆ ಹಾಗೂ ಕುತರ್ಕಗಳನ್ನು ಪ್ರತಿರೋಧಿಸಲು ಇದು ಅಗತ್ಯ.

4) ಸಾಮಾಜಿಕ ದಮನದ ವಿರೋಧಿಸುವ ವಿಷಯಗಳಲ್ಲಿ ನಾವು ಅಗ್ರಗಣ್ಯರಾಗಬೇಕು. ಹಿಂದುತ್ವವು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನಿರಾಕರಿಸಿ ಲಿಂಗ ಅಧೀನತೆಯನ್ನು ಸಮರ್ಥಿಸುವ ಪೈಶಾಚಿಕ ದಾಳಿಗಳನ್ನು ನಡೆಸುವ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ.

5) ದಲಿತರು ಮತ್ತು ಅದಿವಾಸಿಗಳ ನಡುವೆ ವಿನಾಶಕಾರಿ ಹಿಂದುತ್ವ ಜಾತಿವಾದಿ ಹಾಗೂ ಕಂದಾಚಾರ ಮೌಲ್ಯಗಳ ಹರಡುವಿಕೆಯನ್ನು ಹಿಮ್ಮೆಟ್ಟಿಸಬೇಕು. ಭಾರತೀಯ ಸಮಾಜದ ಸಮ್ಮಿಶ್ರ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಲು ವಿಶೇಷ ಗಮನ ನೀಡಬೇಕು.

6) ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಉತ್ತೇಜಿಸಬೇಕು. ಕೋವಿಡ್ ಮಹಾಸೋಂಕಿನ ಅವಧಿಯಲ್ಲಿ ನಡೆಸಿದ ಕೆಲಸಗಳನ್ನು ಆರೋಗ್ಯ ಕೇಂದ್ರಗಳ ಮೂಲಕ ಮುಂದುವರೆಸಬೇಕು. ಗ್ರಂಥಾಲಯ ಹಾಗೂ ವಾಚನಾಲಯಗಳ ಸ್ಥಾಪನೆ, ಶೈಕ್ಷಣಿಕ ತರಬೇತಿ ಕೇಂದ್ರಗಳ ಸ್ಥಾಪನೆ, ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ ಮುಂತಾದ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಬೇಕು.

7) ಶಿಕ್ಷಣ ಕ್ಷೇತ್ರದಲ್ಲಿ ಆರ್.ಎಸ್.ಎಸ್ ಹಾಗೂ ಹಿಂದುತ್ವ ಶಕ್ತಿಗಳು ತುಂಬಾ ಕ್ರಿಯಾಶೀಲವಾಗಿವೆ. ಶಿಕ್ಷಣದಲ್ಲಿ ಜಾತ್ಯತೀತ, ಪ್ರಜಾಸತ್ತಾತ್ಮಕ, ಬಹುತ್ವ ಅಂಶಗಳನ್ನು ಒಳಗೊಳ್ಳಲು ಹಾಗೂ ಈ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಲು ಶೈಕ್ಷಣಿಕ ವಲಯದಲ್ಲಿ ಮಧ್ಯಪ್ರವೇಶಿಸುವ ಮುತುವರ್ಜಿ ವಹಿಸಬೇಕಿದೆ.

2.170 ಇಂತಹ ಚಟುವಟಿಕೆಗಳು ಇಲ್ಲದೇ ಇರುವುದು, ಸಾಮಾಜಿಕ ಹಾಗೂ ಜನಾಂಗೀಯ ಭಿನ್ನತೆಗಳನ್ನು ಮೀರಿ ಎಲ್ಲವನ್ನು ನುಂಗಿ ಹಾಕುವ ‘ಹಿಂದೂ ಆಸ್ಮಿತೆ’ಯನ್ನು ಮತ್ತಷ್ಟು ಬಲಗೊಳಿಸಲು, ಆರ್.ಎಸ್.ಎಸ್-ಬಿಜೆಪಿ ಮತ್ತದರ ಕೋಮುವಾದಿ ಅಂಗ ಸಂಘಟನೆಗಳಿಗೆ ನೆರವಾಗುತ್ತದೆ. ಅವೈಚಾರಿಕತೆಯನ್ನು ವಿಚಾರವಾದದ ಮೂಲಕ, ಕುತರ್ಕವನ್ನು ತರ್ಕದ ಮೂಲಕ ಹಿಮ್ಮೆಟ್ಟಿಸುವುದು ಎಲ್ಲದಕ್ಕಿಂತ ಮುಖ್ಯವಾದ ಕೆಲಸವಾಗಿದೆ.

ರಾಜಕೀಯ ಧೋರಣೆ

2.171. 1) ಸರಿ ಸುಮಾರು ಎಂಟು ವರ್ಷಗಳ ಬಿಜೆಪಿ ಸರ್ಕಾರದ ಆಡಳಿತದಲ್ಲಿ ನಿರಂಕುಶಾಧಿಕಾರದ ದಾಳಿಗಳನ್ನು ನಡೆಸುವ ಕೋಮುವಾದಿ ಕಾರ್ಪೊರೇಟ್ ಕೂಟದ ಕ್ರೋಡೀಕರಣವನ್ನು ಕಾಣಬಹುದಾಗಿದೆ. 2019ರಲ್ಲಿ ಪುನಾರಾಯ್ಕೆ ಆದ ನಂತರ ಫ್ಯಾಸಿಸ್ಟ್ ತೆರನ ಆರ್.ಎಸ್.ಎಸ್.ನ ಹಿಂದೂ ರಾಷ್ಟ್ರ ಅಜೆಂಡಾವನ್ನು ಮತ್ತಷ್ಟು ಆಕ್ರಮಣಕಾರಿಯಾಗಿ ಮುಂದೊಯ್ಯಲಾಗಿದೆ. ಅಷ್ಟೇ ಸಮಾನವಾಗಿ ಆಕ್ರಮಣಕಾರಿಯಾಗಿ ನವ-ಉದಾರವಾದಿ ಧೋರಣೆಗಳನ್ನು ಮತ್ತು ಹೆಚ್ಚುತ್ತಿರುವ ನಿರಂಕುಶಾಧಿಕಾರದ ಆಡಳಿತವನ್ನು ಮುಂದೊಯ್ಯುಲಾಗುತ್ತಿದೆ. ಆರ್.ಎಸ್.ಎಸ್. ಪ್ರಣೀತ ಹಿಂದೂ ರಾಷ್ಟ್ರ ಅಜೆಂಡಾವು, ಸಂವಿಧಾನಾತ್ಮಕ ಚೌಕಟ್ಟನ್ನು ವಿನಾಶಕಾರಿಯಾಗಿ ಕೊರೆದುಹಾಕುತ್ತಿದ್ದು, ಭಾರತೀಯ ಗಣರಾಜ್ಯದ ಜಾತ್ಯತೀತ, ಪ್ರಜಾಸತ್ತಾತ್ಮಕ ಗುಣಲಕ್ಷಣಗಳನ್ನು ನಾಶಮಾಡುತ್ತಿದೆ.

2) ಹಾಗಾಗಿ ಬಿಜೆಪಿಯನ್ನು ಮೂಲೆಗುಂಪಾಗಿಸಿ ಸೋಲಿಸುವುದು ಪ್ರಧಾನ ಗುರಿಯಾಗಿದೆ. ಇದನ್ನು ಸಾಧಿಸಲು ಬಲಶಾಲಿಯಾದ ಸಮರಶೀಲ ರೀತಿಯಲ್ಲಿ ವರ್ಗ ಹಾಗೂ ಸಾಮೂಹಿಕ ಹೋರಾಟಗಳಲ್ಲಿ ಅಣಿನೆರಸಲು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಹಾಗೂ ಎಡ ಶಕ್ತಿಗಳ ಸ್ವತಂತ್ರ ಶಕ್ತಿಯ ಬೆಳವಣಿಗೆ ಬೇಕಾಗಿದೆ.

3) ಹಿಂದುತ್ವ ಅಜೆಂಡಾ ಹಾಗೂ ಕೋಮು ಶಕ್ತಿಗಳ ಚಟುವಟಿಕೆಗಳ ವಿರುದ್ಧದ ಹೋರಾಟವನ್ನು ಮುನ್ನಡೆಸಲು ಪಕ್ಷ ಹಾಗೂ ಎಡಶಕ್ತಿಗಳನ್ನು ಬಲಗೊಳಿಸುವುದು ಕೂಡ ಬಹಳ ಮುಖ್ಯ. ಹಿಂದುತ್ವ ಕೋಮುವಾದದ ವಿರುದ್ಧ ವಿಶಾಲ ನೆಲೆಯಲ್ಲಿ ಎಲ್ಲಾ ಜಾತ್ಯಾತೀತ ಶಕ್ತಿಗಳನ್ನು ಅಣಿನೆರೆಸಲು ಪಕ್ಷವು ಕೆಲಸ ಮಾಡಬೇಕಿದೆ.

4) ರಾಷ್ಟ್ರೀಯ ಆಸ್ತಿಗಳ ನಗ್ನ ಲೂಟಿ ವಿರುದ್ಧ, ಸಾರ್ವಜನಿಕ ವಲಯಗಳ, ಸಾರ್ವಜನಿಕ ಸೌಕರ್ಯಗಳ ಹಾಗೂ ಖನಿಜ ಸಂಪನ್ಮೂಲಗಳ ದೊಡ್ಡ ಪ್ರಮಾಣದ ಖಾಸಗೀಕರಣದ ವಿರುದ್ಧ ಸೇರಿದಂತೆ ನವ ಉದಾರವಾದಿ ಧೋರಣೆಗಳ ಆಕ್ರಮಣಕಾರಿ ಜಾರಿಯ ವಿರುದ್ಧ, ಜನತೆಯ ವಿಶಾಲ ವಿಭಾಗಗಳನ್ನು ಅಣಿನೆರೆಸಲು ಪಕ್ಷವು ಮುಂಚೂಣಿಯಲ್ಲಿರಬೇಕು. ಇತ್ತೀಚಿನ ರೈತ ಹೋರಾಟದಲ್ಲಿ ಆದಂತೆ ಜನತೆಯನ್ನು ವ್ಯಾಪಕವಾಗಿ ಅಣಿನೆರೆಸಿ ವರ್ಗ ಮತ್ತು ಸಾಮೂಹಿಕ ಹೋರಾಟಗಳನ್ನು ತೀವ್ರಗೊಳಿಸುವ ಜೊತೆಗೆ ಜಾತ್ಯಾತೀತ ವಿರೋಧ ಶಕ್ತಿಗಳನ್ನು ಇದರ ಜೊತೆಯಲ್ಲಿ ಅಣಿನೆರೆಸುವ ಮೂಲಕ ಕಾರ್ಪೊರೇಟ್-ಕೋಮುವಾದಿ ಆಳ್ವಿಕೆ ವಿರುದ್ಧ ವಿಶಾಲ ಐಕ್ಯತೆಯನ್ನು ಸಾಧಿಸಬಹುದಾಗಿದೆ.

5) ಹಿಂದುತ್ವ-ಕಾರ್ಪೊರೇಟ್ ಆಳ್ವಿಕೆ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸಬೇಕಾದರೆ ಹಿಂದುತ್ವ ಕೋಮುವಾದಿ ಶಕ್ತಿಗಳ ವಿರುದ್ಧ ಹಾಗೂ ನವ ಉದಾರವಾದಿ ಧೋರಣೆಗಳ ವಿರುದ್ಧ ಏಕಕಾಲದಲ್ಲಿ ಹೋರಾಟ ನಡೆಸಬೇಕಾಗಿರುವುದು ಬಹಳ ಮುಖ್ಯ.

6) ಪಕ್ಷವು ಒಪ್ಪಿತ ವಿಷಯಗಳ ಮೇಲೆ ಸಂಸತ್ತಿನ ಒಳಗೆ ಜಾತ್ಯಾತೀತ ವಿರೋಧ ಪಕ್ಷಗಳ ಜೊತೆ ಸಹಕರಿಸಲಿದೆ. ಸಂಸತ್ತಿನ ಹೊರಗೆ ಪಕ್ಷವು, ಕೋಮುವಾದಿ ಅಜೆಂಡಾದ ವಿರುದ್ಧ ಎಲ್ಲಾ ಜಾತ್ಯಾತೀತ ಶಕ್ತಿಗಳನ್ನು ಅಣಿನೆರೆಸಲು ಕೆಲಸ ಮಾಡಲಿದೆ. ಪಕ್ಷ ಹಾಗೂ ಎಡಶಕ್ತಿಗಳು ಇತರೆ ಪ್ರಜಾಸತ್ತಾತ್ಮಕ ಶಕ್ತಿಗಳ ಜೊತೆ ಸೇರಿ ಆಯಾಯ ವಿಷಯಗಳ ಅನುಸಾರ, ನವ-ಉದಾರವಾದಿ ಆಕ್ರಮಣದ ವಿರುದ್ಧ, ಪ್ರಜಾಪ್ರಭುತ್ವ, ಪ್ರಜಾಪ್ರಭುತ್ವ ಹಕ್ಕುಗಳ ಮೇಲಿನ ನಿರಂಕುಶಾಧಿಕಾರದ ಆಕ್ರಮಣಗಳ ವಿರುದ್ದ, ಕರಾಳ ಕಾನೂನುಗಳನ್ನು ಬಳಸಿ ಭಿನ್ನಮತದ ದಮನದ ವಿರುದ್ದ ಸ್ವತಂತ್ರ ಹಾಗೂ ಐಕ್ಯ ಹೋರಾಟಗಳನ್ನು ನಡೆಸಲಿದೆ.

7) ಪಕ್ಷವು ಐಕ್ಯ ಕಾರ್ಯಚಟುವಟಿಕೆಗಳಿಗಾಗಿ ರಚಿಸಿಕೊಂಡಿರುವ ವರ್ಗ ಹಾಗೂ ಸಾಮೂಹಿಕ ಸಂಘಟನೆಗಳ ಜಂಟಿ ವೇದಿಕೆಗಳನ್ನು ಬೆಂಬಲಿಸಲಿದೆ. ಕಾರ್ಮಿಕ-ರೈತ-ಕೃಷಿ ಕೂಲಿಕಾರರ ಐಕ್ಯ ಕಾರ್ಯಾಚರಣೆಯನ್ನು ಗಟ್ಟಿಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಪಕ್ಷ ಬೆಂಬಲಿಸಲಿದೆ.

8) ಎಡ ಐಕ್ಯತೆಯನ್ನು ಗಟ್ಡಿಗೊಳಿಸುವ ಪ್ರಯತ್ನಗಳ ಜೊತೆ ಜೊತೆಗೆ ಪಕ್ಷದ ಸ್ವತಂತ್ರ ಶಕ್ತಿಯನ್ನು ಬೆಳೆಸುವುದನ್ನು ಅದ್ಯತೆಯಾಗಿಸಿಕೊಳ್ಳಬೇಕು. ಐಕ್ಯ ಎಡ ಪ್ರಚಾರಾಂದೋಲನಗಳು ಹಾಗೂ ಹೋರಾಟಗಳು ಬಂಡವಾಳಶಾಹಿ-ಭೂಮಾಲೀಕ ಆಳುವ ವರ್ಗಗಳ ಧೋರಣೆಗಳಿಗೆ ಪರ್ಯಾಯವಾಗಿ ಇರುವ ಧೋರಣೆಗಳನ್ನು ಪ್ರಮುಖವಾಗಿ ಬಿಂಬಿಸಬೇಕು.

9) ಪಕ್ಷವು, ಸಾಮೂಹಿಕ ಸಂಘಟನೆಗಳು ಹಾಗೂ ಸಾಮಾಜಿಕ ಚಳವಳಿಗಳು ಸೇರಿದಂತೆ ಎಲ್ಲಾ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಸುಸ್ಥಿರವಾದ ರೀತಿಯಲ್ಲಿ ಅಣಿನೆರೆಸಲು ಕೆಲಸ ಮಾಡಬೇಕಿದೆ. ಎಡ ಹಾಗೂ ಪ್ರಜಾಸತ್ತಾತ್ಮಕ ವೇದಿಕೆಗಳು ಜಂಟಿ ಹೋರಾಟಗಳನ್ನು ಮತ್ತು ಚಳವಳಿಗಳನ್ನು ಸಂಘಟಿಸಿ ಪರ್ಯಾಯ ಧೋರಣೆಗಳಾಗಿ ಎಡ ಮತ್ತು ಪ್ರಜಾಸತ್ತಾತ್ಮಕ ಕಾರ್ಯಕ್ರಮಗಳನ್ನು ಬಿಂಬಿಸಬೇಕು.

10) ಚುನಾವಣೆಗಳು ನಡೆಯುವಂತಹ ಸಂದರ್ಭದಲ್ಲಿ ಮೇಲಿನ ರಾಜಕೀಯ ನಿಲುಮೆ ಆಧಾರದಲ್ಲಿ ಬಿಜೆಪಿ ವಿರೋಧಿ ಮತಗಳನ್ನು ಗರಿಷ್ಠ ಪ್ರಮಾಣದಲ್ಲಿ ಕ್ರೋಡೀಕರಿಸಿಕೊಳ್ಳಲು ಸಾಧ್ಯವಾಗುವ ಸೂಕ್ತ ಚುನಾವಣಾ ಕಾರ್ಯತಂತ್ರವನ್ನು ಅಂಗೀಕರಿಸಲಿದೆ.

ಪ್ರಸ್ತುತ ಸನ್ನಿವೇಶದ ಕಾರ್ಯಭಾರಗಳು

2.172 1) ಎಡೆಬಿಡದ ವರ್ಗ ಹಾಗೂ ಸಾಮೂಹಿಕ ಹೋರಾಟಗಳ ಮೂಲಕ ತನ್ನ ಸ್ವತಂತ್ರ ಪಾತ್ರವನ್ನು ಗಟ್ಟಿಗೊಳಿಸಿಕೊಳ್ಳುವುದನ್ನು, ತನ್ನ ಪ್ರಭಾವ ಹಾಗೂ ರಾಜಕೀಯ ಮಧ್ಯಪ್ರವೇಶದ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುವುದನ್ನು ಪಕ್ಷವು ತನ್ನ ಅದ್ಯತೆಯಾಗಿಸಿಕೊಳ್ಳಬೇಕಿದೆ. ಜನರ ಸಮಸ್ಯೆಗಳ ಮೇಲೆ ಸಮರ್ಪಕ ಗಮನ ಹರಿಸುವುದರೊಂದಿಗೆ ಸ್ಥಳೀಯ ಹೋರಾಟಗಳನ್ನು ಬಲಗೊಳಿಸಲು ಪಕ್ಷವು ವಿಶೇಷ ಗಮನ ನೀಡಬೇಕು.

2) ನವ ಉದಾರವಾದಿ ಧೋರಣೆಗಳ ಕಾರಣದಿಂದ ತೀವ್ರ ಆರ್ಥಿಕ ಶೋಷಣೆಗೀಡಾದ ಎಲ್ಲಾ ವಿಭಾಗದ ಜನರನ್ನು ಬದುಕಿನ ವಿಷಯಗಳಿಗೆ ಸಂಬಂಧಿಸಿ ನಡೆಯುವ ಹೋರಾಟಗಳಿಗೆ ಅಣಿನೆರೆಸಬೇಕು. ಬೆಳೆದು ಬರುವ ಸ್ವಯಂಪ್ರೇರಿತ ಹೋರಾಟಗಳನ್ನು ಬಲಪಡಿಸಲು ಪಕ್ಷವು ಮಧ್ಯಪ್ರವೇಶ ಮಾಡಬೇಕು ಹಾಗೂ ಜೊತೆಯಲ್ಲಿ ಸೇರಿಕೊಳ್ಳಬೇಕು.

3) ಹಿಂದುತ್ವ ಕೋಮುವಾದ ವಿರುದ್ಧದ ಹೋರಾಟದಲ್ಲಿ ಪಕ್ಷವು ಮುಂಚೂಣಿಯಲ್ಲಿರಬೇಕು. ಈ ಹೋರಾಟವನ್ನು ಬಹು ಹಂತಗಳಲ್ಲಿ ಎಡೆಬಿಡದೆ ನಡೆಸಬೇಕಿರುತ್ತದೆ. ಕಾಳಜಿಯುಳ್ಳ ನಾಗರಿಕರು ಮತ್ತವರ ಸಂಘಟನೆಗಳು ಹಾಗೂ ಸಾಮಾಜಿಕ ಚಳವಳಿಗಳು ಸೇರಿದಂತೆ ಸಾಧ್ಯವಾದಷ್ಟೂ ವಿಶಾಲವಾದ ಜಾತ್ಯಾತೀತ ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಒಗ್ಗೂಡಿಸಿ ಹಿಂದುತ್ವ ಶಕ್ತಿಗಳ ಚಟುವಟಿಕೆಗಳನ್ನು ಹಿಮ್ಮೆಟ್ಟಿಸಬೇಕು.

4) ನಿರಂಕುಶಾಧಿಕಾರದ ಕ್ರಮಗಳನ್ನು ವಿರೋಧಿಸುವ ಹೋರಾಟದಲ್ಲಿ ಪಕ್ಷವು ಮುಂಚೂಣಿಯಲ್ಲಿದ್ದು, ಮಾನವ ಹಕ್ಕುಗಳ, ಪ್ರಜಾಸತ್ತಾತ್ಮಕ ಹಕ್ಕುಗಳ, ನಾಗರಿಕ ಸ್ವಾತಂತ್ರ‍್ಯ, ಹಿಂದುತ್ವ ಕೋಮುವಾದದ ಚಟುವಟಿಕೆಗಳ ವಿರುದ್ಧ ಕಲಾಭಿವ್ಯಕ್ತಿ ಸ್ವಾತಂತ್ರ‍್ಯದ ಹಾಗೂ ಶೈಕ್ಷಣಿಕ ಸ್ವಾಯತ್ತತೆ – ಇವುಗಳ ರಕ್ಷಣೆಗಾಗಿ ಮತ್ತು ಸಂವಿಧಾನಿಕ ವ್ಯವಸ್ಥೆಯ ಪ್ರಜಾಸತ್ತಾತ್ಮಕ, ಜಾತ್ಯತೀತ ಸಾರಸತ್ವದ ವಿನಾಶದ ವಿರುದ್ಧದ ಜಂಟಿ ಹೋರಾಟಗಳನ್ನು ಸಂಘಟಿಸಲು ಎಲ್ಲಾ ಪ್ರಜಾಪ್ರಭುತ್ವ ಶಕ್ತಿಗಳ ಸಹಕಾರವನ್ನು ಪಡೆಯಬೇಕು.

5) ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸುವ ಹೋರಾಟಗಳನ್ನು ಬೆಳೆಸಲು ಅಗತ್ಯವಾದ ತನ್ನ ಪ್ರಯತ್ನಗಳನ್ನು ಪಕ್ಷವು ಉತ್ತಮಪಡಿಸಬೇಕು ಹಾಗೂ ಮಹಿಳೆಯರ, ದಲಿತರ ಹಾಗೂ ಆದಿವಾಸಿಗಳ ಸಾಮಾಜಿಕ ದಮನದ ವಿರುದ್ಧದ ಹೋರಾಟಗಳಲ್ಲಿ ಪಕ್ಷವು ಅಗ್ರಪಂಕ್ತಿಯಲ್ಲಿ ಇರಬೇಕು.

6) ಹಿಂದುತ್ವ ಕೋಮುವಾದದ ಆಕ್ರಮಣಕಾರಿ ದಾಳಿಗಳ ವಿರುದ್ಧ ಅಲ್ಪಸಂಖ್ಯಾತರ ಹಕ್ಕುಗಳನ್ನು ಮತ್ತು ಅವರ ಭದ್ರತೆಯನ್ನು ರಕ್ಷಿಸುವ ಕೆಲಸವನ್ನು ಬಲಗೊಳಿಸಬೇಕು.

7) ಪಕ್ಷವು ಕಂದಾಚಾರ, ಮೂಢನಂಬಿಕೆ, ಅವೈಚಾರಿಕತೆ ಹಾಗೂ ಕುರುಡು ನಂಬಿಕೆಗಳ ಬೆಳವಣಿಗೆ ವಿರುದ್ಧದ ಸೈದ್ಧಾಂತಿಕ/ಸಾಮಾಜಿಕ ಹೋರಾಟಗಳನ್ನು ಬಲಗೊಳಿಸಬೇಕು. ವೈಜ್ಞಾನಿಕ ಮನೋಭಾವ ಬೆಳೆಸುವ ಆಂದೋಲನದಲ್ಲಿ ಪಕ್ಷವು ಮುಂಚೂಣಿಯಲ್ಲಿರಬೇಕು. ಅವೈಚಾರಿಕತೆ ಮತ್ತು ಕುತರ್ಕಗಳಿಗೆ ವಿರುದ್ದವಾಗಿ ವಿಚಾರವಾದ ಮತ್ತು ತಾರ್ಕಿಕ ಚಿಂತನೆಗಳ ಸಾರ್ವಜನಿಕ ಸಂಕಥನವನ್ನು ಬಲಪಡಿಸಿ ಅದನ್ನು ಜನರ ಅಭಿಪ್ರಾಯವಾಗಿ ರೂಪುಗೊಳಿಸುವ ಆಂದೋಲನಗಳಲ್ಲಿ ಪಕ್ಷವು ಮುಂಚೂಣಿಯಲ್ಲಿರಬೇಕು. ವೈಜ್ಞಾನಿಕ ಮನೋಭಾವದ ರಕ್ಷಣೆಗೆ ಮತ್ತು ಹುಸಿಗತದ ಪುನರುಜ್ಜೀವನದ ವಿರುದ್ಧ ವಿಶಾಲವಾದ ಜನಸಮೂಹಗಳನ್ನು ಅಣಿನೆರೆಸಬೇಕು.

8) ಪಕ್ಷವು ನಮ್ಮ ರಾಷ್ಟ್ರೀಯ ಮತ್ತು ಆರ್ಥಿಕ ಸಾರ್ವಭೌಮತ್ವದ ರಕ್ಷಣೆಗಾಗಿ ಭಾರತೀಯರ ಸಾಮ್ರಾಜ್ಯಶಾಹಿ ಪ್ರಜ್ಞೆಯನ್ನು ಉದ್ದೀಪನಗೊಳಿಸಬೇಕು. ಬಂಡವಾಳಶಾಹಿ ವ್ಯವಸ್ಥೆಗೆ ಇರುವ ನೈಜ ಪರ್ಯಾಯ ಸಮಾಜವಾದಿ ವ್ಯವಸ್ಥೆ ಮಾತ್ರ ಎಂಬ ಪ್ರಚಾರಾಂದೋಲನವನ್ನು ಬಲಗೊಳಿಸಬೇಕು.

9) ಆಮೇರಿಕನ್ ಸಾಮ್ರಾಜ್ಯಶಾಹಿಗೆ ಶರಣಾಗಿರುವ ಮೋದಿ ಸರ್ಕಾರದ ವಿರುದ್ಧ ಜನಪ್ರಿಯ ಜನಾಭಿಪ್ರಾಯವನ್ನು ಅಣಿನೆರೆಸಬೇಕು. ಭಾರತದ ಸ್ವತಂತ್ರ ವಿದೇಶಿ ಧೋರಣೆಗಳನ್ನು ಪುನರ್-ಸ್ಥಾಪಿಸುವ ಹೋರಾಟಗಳನ್ನು ಕೈಗೆತ್ತಿಕೊಳ್ಳಬೇಕು.

10) ಕೇರಳದ ಎಲ್.ಡಿ.ಎಫ್. ಸರ್ಕಾರದ ರಕ್ಷಣೆಗಾಗಿ ಹಾಗೂ ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ತ್ರಿಪುರದಲ್ಲಿ ಪಕ್ಷದ ಮೇಲೆ ಹರಿಯಬಿಟ್ಟಿರುವ ಫ್ಯಾಸಿಸ್ಟ್ ತೆರನ ಆಕ್ರಮಣದ ವಿರುದ್ಧ ಪಕ್ಷವು ಕ್ರಮವಹಿಸಬೇಕು.

ಉಪಸಂಹಾರ

2.173 ಈ ಗುರಿಗಳನ್ನು ಸಾಧಿಸಬೇಕಾದರೆ, ದೇಶದಾದ್ಯಂತ ಬಲಿಷ್ಠ ಕಮ್ಯುನಿಸ್ಟ್ ಪಕ್ಷ ಕಟ್ಟುವುದು ಅಗತ್ಯ. ಮಾರ್ಕ್ಸ್‌ವಾದ ಹಾಗೂ ಲೆನಿನ್‌ವಾದ ದ ಆಧಾರದ ಮೇಲೆ ದೇಶದಾದ್ಯಂತ ಸಾಮೂಹಿಕ ನೆಲೆ ಉಳ್ಳ ಒಂದು ಬಲಿಷ್ಠ ಪಕ್ಷವನ್ನು ಸಂಘಟನೆ ಕುರಿತ ಕೋಲ್ಕತ್ತಾ ಪ್ಲೀನಂ ತೆಗೆದುಕೊಂಡ ನಿರ್ಣಯಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರುವ ಮೂಲಕ ಮಾತ್ರ ಕಟ್ಟಲು ಸಾಧ್ಯ. ಹಾಗಾಗಿ ನಿರ್ದಿಷ್ಟವಾಗಿ ಈ ಕೆಳಗಿನ ಅಂಶಗಳಿಗೆ ನಮ್ಮ ಗಮನವನ್ನು ಕೇಂದ್ರೀಕರಿಸಬೇಕು.

  1. ಜನತೆಯೊಂದಿಗೆ ಬಲಿಷ್ಠ ಬಾಂಧವ್ಯ ಸ್ಥಾಪಿಸಲು ಸಮೂಹ ಧೋರಣೆಯ ಕ್ರಾಂತಿಕಾರಿ ಪಕ್ಷವನ್ನು ಬಲಪಡಿಸಬೇಕು.
  2. ಜನರ ನಡುವಿನ ಪಕ್ಷದ ತಲುಪುವಿಕೆ ಮತ್ತು ಪ್ರಭಾವವನ್ನು ವಿಶಾಲಗೊಳಿಸಬೇಕು ಹಾಗೂ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಅಣಿನೆರೆಸಬೇಕು.
  3. ಕೋಲ್ಕತ್ತಾ ಪ್ಲೀನಂ ನಿರ್ದೇಶನದಂತೆ ಗುಣಮಟ್ಟದ ಸದಸ್ಯತ್ವದ ಮೂಲಕ ಪಕ್ಷ ಸಂಘಟನೆಯನ್ನು ಬಲಿಷ್ಠಗೊಳಿಸಬೇಕು.
  4. ಯುವಜನರನ್ನು, ಮಹಿಳೆಯರನ್ನು ಪಕ್ಷಕ್ಕೆ ಆಕರ್ಷಿಸಲು ಪ್ರಯತ್ನಗಳಿಗೆ ವಿಶೇಷ ಒತ್ತು ಕೊಡಬೇಕು.
  5. ಎಲ್ಲಾ ಪರಕೀಯ ಸಿದ್ದಾಂತಗಳ ವಿರುದ್ಧದ ಹೋರಾಟಗಳನ್ನು ಬಲಗೊಳಿಸಬೇಕು.

ಒಂದು ಬಲಿಷ್ಠ ಕಮ್ಯುನಿಸ್ಟ್ ಪಕ್ಷ ಕಟ್ಟುವ ನಮ್ಮ ಸಂಕಲ್ಪವನ್ನು ಇಮ್ಮಡಿಗೊಳಿಸೋಣ!
ಸಮೂಹ ಧೋರಣೆಯ ಕ್ರಾಂತಿಕಾರಿ ಪಕ್ಷದ ಕಡೆ ಮುನ್ನಡೆಯೋಣ!
ಭಾರತದಾದ್ಯಂತ ಸಮೂಹ ನೆಲೆ ಉಳ್ಳ ಬಲಿಷ್ಠ ಸಿಪಿಐಎಂ ನಿರ್ಮಾಣದ ಕಡೆ ಮುನ್ನಡೆಯೋಣ!

———————————————–

ಕರಡು ರಾಜಕೀಯ ನಿರ್ಣಯಕ್ಕೆ ತಿದ್ದುಪಡಿಗಳನ್ನು ಕಳುಹಿಸುವ ವಿಧಾನ

ಕರಡು ರಾಜಕೀಯ ನಿರ್ಣಯಕ್ಕೆ ತಿದ್ದುಪಡಿಗಳನ್ನು ಕಳುಹಿಸಲು ಕೆಳಗೆ ಕಾಣಿಸಿದ ಕ್ರಮಗಳನ್ನು ಅನುಸರಿಸಬೇಕು.

  1. ಎಲ್ಲಾ ತಿದ್ದುಪಡಿಗಳು ಪ್ಯಾರಾ ಸಂಖ್ಯೆ/ಲೈನ್ ಸಂಖ್ಯೆಯನ್ನು ಉಲ್ಲೇಖಿಸಬೇಕು.
  2. ಸಂಬಂಧಪಟ್ಟ ಸಂಗಾತಿಯ ಹೆಸರು ಮತ್ತು ಘಟಕ/ತಿದ್ದುಪಡಿ ಕಳುಹಿಸುವ ಘಟಕದ ಹೆಸರು ಸಹ ನಮೂದಾಗಬೇಕು.
  3. ಎಲ್ಲಾ ತಿದ್ದುಪಡಿಗಳು ಮಾರ್ಚ್ 10, 2022ರೊಳಗೆ ತಲುಪಬೇಕು.
  4. ಇಂಗ್ಲೀಷ್ ನಲ್ಲಿ ತಿದ್ದುಪಡಿಗಳನ್ನು ಅಂಚೆ/ಕೊರಿಯರ್ ಮೂಲಕ ಕಳುಹಿಸುವುದಾದಲ್ಲಿ, ಕೆಳಕಾಣಿಸಿದ ವಿಳಾಸಕ್ಕೆ ಕಳುಹಿಸಬೇಕು.

Communist Party of India (Marxist)
Central Committee, A.K. Gopalan Bhavan
27
29 Bhai Vir Singh Marg, New Delhi 110 001

  1. ಕವರ್ ಮೇಲೆ ʻAmendments to the Draft Political Resolutionʼ ಎಂದು ನಮೂದಿಸಬೇಕು.
  2. ಇ-ಮೇಲ್ ಮೂಲಕ ಇಂಗ್ಲೀಷ್ ನಲ್ಲಿ ತಿದ್ದುಪಡಿ ಕಳುಹಿಸುವವರು ಟೆಕ್ಸ್ಟ್‌ ಅಥವಾ ವರ್ಡ್‌ಫೈಲ್ ಆಗಿಯೇ ಕಳುಹಿಸಬೇಕು. ಬೇರೆ ಭಾಷೆಗಳಲ್ಲಿ ಕಳುಹಿಸುವವರು ಪಿ.ಡಿ.ಎಫ್. ಫೈಲ್ ಕಳುಹಿಸಬೇಕು.
  3. “Amendments to the Draft Political Resolution” ಎಂದು ಇ-ಮೇಲ್ ಕಳುಹಿಸುವಾಗ subject ನಲ್ಲಿ ನಮೂದಿಸಬೇಕು. ಇ-ಮೇಲ್ ಕಳುಹಿಸುವ ವಿಳಾಸ pol-23@cpim.org.
  4. ಕನ್ನಡದಲ್ಲಿ ಕಳುಹಿಸುವವರು ಕವರಿನ ಮೇಲೆ “ಕರಡು ರಾಜಕೀಯ ವರದಿಗೆ ತಿದ್ದುಪಡಿಗಳು’ʼ ಎಂದು ನಮೂದಿಸಿ, ಈ ಕೆಳಗಿನ ವಿಳಾಸಕ್ಕೆ ಕಳಿಸಬಹುದು:

ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ
ಇಎಂಎಸ್ ಭವನ, ನಂ. 37/ಎ, 8ನೇ ಅಡ್ಡ ರಸ್ತೆ,
ಮಹಾಲಕ್ಷ್ಮೀ ಬಡಾವಣೆ, ಬೆಂಗಳೂರು-560086.

  1. ಕನ್ನಡದಲ್ಲಿ ಇ-ಮೇಲ್ ನಲ್ಲಿ ಕಳಿಸುವವರು ನುಡಿ ಅಥವಾ ಯೂನಿಕೋಡ್ ನಲ್ಲಿ ವರ್ಡ್ ಅಥವಾ ಪಿ.ಡಿ.ಎಫ್. ಫೈಲ್ ಆಗಿಯೇ ಈ ವಿಳಾಸಕ್ಕೆ ಕಳುಹಿಸಬೇಕು. ಇ-ಮೇಲ್: cpimkar@gmail.com subject ನಲ್ಲಿ “Amendments to the Draft Political Resolution” ಅಥವಾ “ಕರಡು ರಾಜಕೀಯ ವರದಿಗೆ ತಿದ್ದುಪಡಿಗಳು’ʼ ಎಂದು ನಮೂದಿಸಬೇಕು.
  2. ಕೆಳಗೆ ಕಾಣಿಸಿದ ಸ್ವರೂಪದಲ್ಲಿ ತಿದ್ದುಪಡಿಗಳನ್ನು ಕಳುಹಿಸಿದರೆ ಅನುಕೂಲವಾಗುತ್ತದೆ.

ಕ್ರಮ ಸಂಖ್ಯೆ

ಪ್ಯಾರಾ  ಸಂಖ್ಯೆ

ಲೈನ್ ಸಂಖ್ಯೆ

ತಿದ್ದುಪಡಿ

ಸೂಚಿಸಿದವರ ಮತ್ತು

ಘಟಕದ ಹೆಸರು

 

Leave a Reply

Your email address will not be published. Required fields are marked *