ಒಕ್ಕೂಟ ತತ್ವದ ರಕ್ಷಣೆಗೆ ಒಗ್ಗಟ್ಟಾಗಲು ಸಕಾಲ

ಪ್ರಕಾಶ ಕಾರಟ್

Prakash Karat
ಪ್ರಕಾಶ ಕಾರಟ್

ಎಲ್ಲ ರಾಜ್ಯಗಳ ಹಣಕಾಸು, ಆರ್ಥಿಕ ಮತ್ತು ಶಾಸಕಾಂಗ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಒಕ್ಕೂಟ ತತ್ವದ ಮೇಲೆ ಸಾರ್ವತ್ರಿಕವಾಗಿ ದಾಳಿ ನಡೆಯುತ್ತಿದೆ. ಬೇರೆ ಪಕ್ಷಗಳು ಆಡಳಿತ ನಡೆಸುವ ಅಥವಾ ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯದ ರಾಜ್ಯಗಳನ್ನು ನಿರ್ದಿಷ್ಟವಾಗಿ ಗುರಿ ಮಾಡಲಾಗುತ್ತಿದೆ. ಇವನ್ನು ಹಿಮ್ಮೆಟ್ಟಿಸಲು ಬಿಜೆಪಿಯೇತರ ರಾಜ್ಯ ಸರ್ಕಾರಗಳು ಒಟ್ಟಿಗೆ ಬರುವುದು ಅತ್ಯಗತ್ಯವಾಗಿದೆ. ಇಂಥ ವೇದಿಕೆಯನ್ನು ಯಾವುದೇ ರಾಜಕೀಯ ಮಿತ್ರಕೂಟಗಳ ರಚನೆಗಾಗಿ ಬಳಸಿಕೊಂಡರೆ ಒಕ್ಕೂಟತತ್ವ ಮತ್ತು ರಾಜ್ಯಗಳ ಹಕ್ಕುಗಳ ವಿಚಾರ ನಗಣ್ಯವಾಗಿ ತದ್ವಿರುದ್ಧ ಪರಿಣಾಮ ಬೀರುವ ಅಪಾಯವಿದೆ. ಒಕ್ಕೂಟತತ್ವದ ಮೇಲಿನ ಕೇಂದ್ರದ ಆಕ್ರಮಣದ ವಿರುದ್ಧ ವಿಶಾಲ ಐಕ್ಯತೆಯನ್ನು ರೂಪಿಸಲು ಕಾಲ ಈಗ ಪಕ್ವವಾಗಿದೆ. ಈ ಏಕೈಕ ಅಜೆಂಡಾದೊಂದಿಗೆ ಬಿಜೆಪಿಯೇತರ ಮುಖ್ಯಮಂತ್ರಿಗಳ ಸಭೆ ನಡೆಸುವುದು ತೀರಾ ಅಗತ್ಯವಾಗಿದೆ.

ಒಕ್ಕೂಟ ತತ್ವದ ಉಳಿವು ಮತ್ತು ಕೇಂದ್ರ-ರಾಜ್ಯ ಸಂಬಂಧಗಳ ಮೇಲೆ ಮೋದಿ ಸರ್ಕಾರ ನಡೆಸುತ್ತಿರುವ ದಾಳಿಯನ್ನು ಎದುರಿಸಲು ಒಗ್ಗಟ್ಟಾಗಿ ನಿಲ್ಲುವ ಅಗತ್ಯವನ್ನು ಪ್ರತಿಪಕ್ಷಗಳ ಆಡಳಿತವಿರುವ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಚರ್ಚಿಸುತ್ತಿದ್ದಾರೆ.

ರಾಜ್ಯಗಳ ಹಕ್ಕುಗಳನ್ನು ರಕ್ಷಿಸುವ ವಿಚಾರದಲ್ಲಿ ರಾಜ್ಯ ಸರ್ಕಾರಗಳ ಸಂಯುಕ್ತ ನಿಲುವನ್ನು ಉಪೇಕ್ಷಿಸುವಂತಿಲ್ಲ. ಮೋದಿ ಸರ್ಕಾರ ತನ್ನ ಎರಡನೇ ಅವಧಿಯಲ್ಲಿ ಕೇಂದ್ರೀಕರಣ ಪ್ರಕ್ರಿಯೆಯನ್ನು ಹಾಗೂ ಎಲ್ಲ ಅಧಿಕಾರಗಳನ್ನು ತನ್ನ ಕೈಗೆ ತೆಗೆದುಕೊಳ್ಳುವುದನ್ನು ತೀವ್ರಗೊಳಿಸಿದೆ. ಆಕ್ರಮಣಕ್ಕೆ ಕೇಂದ್ರ-ರಾಜ್ಯ ಸಂಬಂಧಗಳ ಯಾವ ಕ್ಷೇತ್ರವನ್ನೂ ಮೋದಿ ಸರ್ಕಾರ ಬಿಟ್ಟಿಲ್ಲ. ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಿ ಎರಡು ಕೇಂದ್ರಾಡಳಿತ ಪ್ರದೇಶ ರಚಿಸಿದ್ದು ಈ ವಿಚಾರದಲ್ಲಿ ಅದರ ಅತಿಯಾದ ಕ್ರಮವಾಗಿದೆ.

 ಸಂಪನ್ಮೂಲಗಳಲ್ಲಿ ರಾಜ್ಯಗಳಿಗೆ ಸಂವಿಧಾನ ವಿಧಿಸಿರುವ ಪಾಲನ್ನು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಸರ್ಚಾರ್ಜ್ ಮತ್ತು ಸೆಸ್ ಹಾಕುವುದು ಮುಂತಾದವುಗಳ ಮೂಲಕ ವಂಚಿಸಲಾಗುತ್ತಿದೆ. ಹಣಕಾಸು ಆಯೋಗದ ಕಾರ್ಯವ್ಯಾಪ್ತಿಯನ್ನು ಕೂಡ ಕೇಂದ್ರ ಸರ್ಕಾರಕ್ಕೆ ಅನುಕೂಲಕರವಾಗುವಂತೆ ನಿರೂಪಿಸಲಾಗುತ್ತಿದೆ. ಈಗ ವಾಪಸ್ಸು ಪಡೆಯಲಾಗಿರುವ, ಮೂರು ಕೃಷಿ ಕಾನೂನುಗಳು ಕೂಡ ರಾಜ್ಯಗಳ ಹಕ್ಕುಗಳ ಮೇಲಿನ ಅತಿಕ್ರಮಣವಾಗಿತ್ತು. ಯಾಕೆಂದರೆ ಕೃಷಿ ಮಾರುಕಟ್ಟೆಯನ್ನು ಸಂವಿಧಾನವು ರಾಜ್ಯ ಪಟ್ಟಿಯಲ್ಲಿ ಸೇರಿಸಿದೆ. ಹೊಸ ಶಿಕ್ಷಣ ನೀತಿಯು ಶಿಕ್ಷಣದ ವಿವಿಧ ಹಂತಗಳಲ್ಲಿ ಅದನ್ನು ಕೇಂದ್ರೀಕರಿಸುವ ಕೇಂದ್ರ ಸರ್ಕಾರದ ಉದ್ದೇಶವನ್ನು ಪ್ರತಿಫಲಿಸುತ್ತದೆ. ಬಿಜೆಪಿಯೇತರ ಆಡಳಿತದ ರಾಜ್ಯಗಳ ರಾಜ್ಯಪಾಲರು ಹೆಚ್ಚೆಚ್ಚು ಪಕ್ಷಪಾತಿಯಾಗಿ ಕೇಂದ್ರದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಅಖಿಲ ಭಾರತ ಸೇವಾ ನಿಯಮಗಳಿಗೆ ತಿದ್ದುಪಡಿ ತರುವ ಕೇಂದ್ರದ ಇತ್ತೀಚಿನ ಪ್ರಸ್ತಾಪನೆಯು ರಾಜ್ಯ ಸರಕಾರಗಳನ್ನು ಬದಿಗೊತ್ತಿ ರಾಜ್ಯಗಳಿಂದ ಅಧಿಕಾರಿಗಳನ್ನು ವಾಪಸ್ಸು ಪಡೆಯಲು ಕೇಂದ್ರಕ್ಕೆ ಸ್ವೇಚ್ಛಾಧಿಕಾರವನ್ನು ನೀಡಲಿದೆ. ಈ ರೀತಿ, ಕೇಂದ್ರ ಸರ್ಕಾರದ ದಾಳಿಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಎಲ್ಲ ರಾಜ್ಯಗಳ ಹಣಕಾಸು, ಆರ್ಥಿಕ ಮತ್ತು ಶಾಸಕಾಂಗ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಒಕ್ಕೂಟ ತತ್ವದ ಮೇಲೆ ಸಾರ್ವತ್ರಿಕವಾಗಿ ದಾಳಿ ನಡೆಯುತ್ತಿದೆ. ನಿರ್ದಿಷ್ಟವಾಗಿ ಗುರಿಯಿಟ್ಟುಕೊಂಡು ದಾಳಿ ನಡೆಸುವ ಪ್ರಕರಣಗಳೂ ಇವೆ. ಬೇರೆ ಪಕ್ಷಗಳು ಆಡಳಿತ ನಡೆಸುವ ಅಥವಾ ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯದ ರಾಜ್ಯಗಳನ್ನು ನಿರ್ದಿಷ್ಟವಾಗಿ ಗುರಿ ಮಾಡಲಾಗುತ್ತಿದೆ. ಈ ಎರಡೂ ಬಗೆಯ ದಾಳಿಗಳನ್ನು ಹಿಮ್ಮೆಟ್ಟಿಸಲು ಬಿಜೆಪಿಯೇತರ ರಾಜ್ಯ ಸರ್ಕಾರಗಳು ಒಟ್ಟಿಗೆ ಬರುವುದು ಅತ್ಯಗತ್ಯವಾಗಿದೆ.

recordtaxcollection-record states loan030222
ವ್ಯಂಗ್ಯಚಿತ್ರ: ಪಿ. ಮಹಮ್ಮದ್

ಕೇಂದ್ರ ಸರ್ಕಾರ 2021 ಏಪ್ರಿಲ್‌ನಲ್ಲಿ ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ ಕಾನೂನಿಗೆ ತಿದ್ದುಪಡಿ ತಂದು ದೆಹಲಿ ಸರಕಾರವೆಂದರೆ ಉಪರಾಜ್ಯಪಾಲರು ಎಂದು ಘೋಷಿಸಿ ಚುನಾಯಿತ ಸರಕಾರ ಮತ್ತು ಶಾಸನ ಸಭೆಗೆ ಅಧಿಕಾರವಿಲ್ಲದಂತೆ ಮಾಡಲಾಯಿತು. ಇದು ಎಎಪಿ ಸರ್ಕಾರದ ಮೇಲಿನ ದಾಳಿ ಮಾತ್ರವೇ ಆಗಿರಲಿಲ್ಲ. ಸಂವಿಧಾನದಡಿಯಲ್ಲಿ ಚುನಾಯಿತವಾದ ರಾಜ್ಯ ಸರ್ಕಾರದ ಪಾತ್ರದ ಬುಡಕ್ಕೆ ಕೊಟ್ಟ ಕೊಡಲಿಯೇಟು ಆಗಿತ್ತು. ಒಕ್ಕೂಟ ತತ್ವ ಹಾಗೂ ರಾಜ್ಯಗಳ ಹಕ್ಕುಗಳ ರಕ್ಷಣೆಗಾಗಿ ಎಲ್ಲ ಪ್ರಜಾತಾಂತ್ರಿಕ ಹಾಗೂ ಜಾತ್ಯತೀತ ಶಕ್ತಿಗಳು ಐಕ್ಯ ನಿಲುವು ತಳೆಯುವುದು ಅನಿವಾರ್ಯವಾಗಿದೆ. ಎಲ್ಲ ಬಿಜೆಪಿಯೇತರ ಮುಖ್ಯಮಂತ್ರಿಗಳ ಸಭೆ ಈ ದಿಕ್ಕಿನಲ್ಲಿ ಸಕಾಲಿಕ ಹಾಗೂ ಅಗತ್ಯ ಹೆಜ್ಜೆಯಾಗಲಿದೆ.

ಆದರೆ, ಮುಖ್ಯಮಂತ್ರಿಗಳ ಇಂಥ ಸಮ್ಮೇಳನವು ಕೇವಲ ಒಕ್ಕೂಟ ತತ್ವ ಮತ್ತು ರಾಜ್ಯಗಳ ಹಕ್ಕುಗಳ ಮೇಲೆ ಮಾತ್ರವೇ ಗಮನವನ್ನು ಕೇಂದ್ರೀಕರಿಸಬೇಕು. ಇಂಥ ವೇದಿಕೆಯನ್ನು ಯಾವುದೇ ರಾಜಕೀಯ ಮಿತ್ರಕೂಟಗಳ ರಚನೆಗಾಗಿ ಬಳಸಿಕೊಂಡರೆ ಒಕ್ಕೂಟತತ್ವ ಮತ್ತು ರಾಜ್ಯಗಳ ಹಕ್ಕುಗಳ ವಿಚಾರ ನಗಣ್ಯವಾಗಿ ತದ್ವಿರುದ್ಧ ಪರಿಣಾಮ ಬೀರುವ ಅಪಾಯವಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಡುತ್ತಿರುವಂತೆ ಮುಖ್ಯಮಂತ್ರಿಗಳ ಇಂಥ ಒಂದು ಸಭೆಯನ್ನು ಪ್ರಾದೇಶಿಕ ರಾಜಕೀಯ ಪಕ್ಷಗಳ ಪರ್ಯಾಯ ಮೈತ್ರಿಕೂಟ ರಚನೆಗಾಗಿ ಬಳಸಲು ಪ್ರಯತ್ನಿಸುವುದು ಒಕ್ಕೂಟ ತತ್ವ ರಕ್ಷಣೆಯ ಗಂಭೀರ ವಿಚಾರದಿಂದ ಗಮನವನ್ನು ಬೇರೆಡೆ ತಿರುಗಿಸುತ್ತದೆ ಅಷ್ಟೇ. ಒಕ್ಕೂಟ ರಂಗದ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಮಾತನಾಡುತ್ತಿರುವುದು ಅಥವಾ ಪರ್ಯಾಯ ಮೈತ್ರಿಕೂಟಕ್ಕೆ ತಾನೇ ನಾಯಕಿಯೆಂಬಂತೆ ಬಿಂಬಿಸಿಕೊಳ್ಳಲು ಮಮತಾ ಬ್ಯಾನರ್ಜಿ ಮಾಡುವ ಪ್ರಯತ್ನ – ಇವೆಲ್ಲವೂ ರಾಜಕೀಯ ವಿಚಾರಗಳಾಗಿದ್ದು ಬಿಜೆಪಿಯೇತರ ಸರ್ಕಾರಗಳ ಮುಖ್ಯಮಂತ್ರಿಗಳನ್ನು ಒಂದೇ ವೇದಿಕೆಗೆ ತರುವ ಕಾರ್ಯಭಾರದೊಂದಿಗೆ ಅದನ್ನು ಬೆರೆಸಬಾರದು.

ದೊಡ್ಡ ಬಂಡವಾಳಶಾಹಿಗಳ ನೇತೃತ್ವದ ಆಳುವ ವರ್ಗಗಳು ಅಧಿಕಾರ ಕೇಂದ್ರೀಕರಣದ ಅಜೆಂಡಾವನ್ನು ಹಲವು ದಶಕಗಳಿಂದ ಮುಂದೊತ್ತುತ್ತಲೇ ಬಂದಿವೆ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಪಕ್ಷ ಕೂಡ ಹಲವು ಸಂದರ್ಭಗಳಲ್ಲಿ ಅಧಿಕಾರ ಕೇಂದ್ರೀಕರಣಕ್ಕೆ ಮುಂದಾಗಿದ್ದುದು ವಾಸ್ತವ ಸಂಗತಿ. ಆದರೆ, ಈಗ ಪ್ರತಿಪಕ್ಷದಲ್ಲಿರುವ ಕಾಂಗ್ರೆಸ್ ಆಡಳಿತದ ರಾಜ್ಯಗಳು ಕೂಡ ರಾಜ್ಯಗಳ ಹಕ್ಕುಗಳ ಮೇಲಿನ ಕೇಂದ್ರದ ದಬ್ಬಾಳಿಕೆಯ ಬಿಸಿಯನ್ನು ಅನುಭವಿಸುತ್ತಿವೆ. ಆದ್ದರಿಂದ, ಎಲ್ಲ ಬಿಜೆಪಿಯೇತರ ರಾಜ್ಯ ಸರ್ಕಾರಗಳನ್ನು ಜಂಟಿ ವೇದಿಕೆಗೆ ತರುವುದು ಅಗತ್ಯವಾಗಿದೆ.

ಸಿಪಿಐ (ಎಂ) ಪ್ರತಿಪಾದಿಸುತ್ತಾ ಬಂದಿರುವಂತೆ, ಒಕ್ಕೂಟತತ್ವದ ಮೇಲಿನ ಕೇಂದ್ರದ ಆಕ್ರಮಣದ ವಿರುದ್ಧ ವಿಶಾಲ ಐಕ್ಯತೆಯನ್ನು ರೂಪಿಸಲು ಕಾಲ ಈಗ ಪಕ್ವವಾಗಿದೆ. ಈ ಏಕೈಕ ಅಜೆಂಡಾದೊಂದಿಗೆ ಬಿಜೆಪಿಯೇತರ ಮುಖ್ಯಮಂತ್ರಿಗಳ ಸಭೆ ನಡೆಸುವುದು ತೀರಾ ಅಗತ್ಯವಾಗಿದೆ.

ಅನು: ವಿಶ್ವ

Leave a Reply

Your email address will not be published. Required fields are marked *