ಅಬಕಾರಿ ಸುಂಕಗಳನ್ನು ಕಡಿತ ಮಾಡಿ-ಹಣದುಬ್ಬರದಿಂದ ಪಾರು ಮಾಡಿ

ಪ್ರಕಾಶ್ ಕಾರಟ್

prakash karat
ಪ್ರಕಾಶ್ ಕಾರಟ್

ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಉತ್ಪಾದನಾ ವೆಚ್ಚ ಏರಿಕೆ ಹಾಗೂ ಕುಸಿಯುತ್ತಿರುವ ಬೇಡಿಕೆ ನಡುವೆ ಸಿಲುಕಿ ಹಾಕಿಕೊಂಡು ತತ್ತರಿಸುತ್ತಿವೆ. ತೈಲ ಕಂಪೆನಿಗಳು ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಮಾರಾಟ ಬೆಲೆಯನ್ನು ಕಳೆದ ಎರಡು ತಿಂಗಳಿಂದ ಏರಿಸಿಲ್ಲ. ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳು ಮುಗಿಯುವವರೆಗೆ ಇಂಧನಗಳ ಬೆಲೆಯೇರಿಕೆ ಮಾಡುವುದು ಬೇಡವೆಂಬುದು ಕೇಂದ್ರ ಸರ್ಕಾರದ ಬಯಕೆಯಾಗಿತ್ತು. ಮಾರ್ಚ್ 10ರಂದು ಈ ಚುನಾವಣೆಗಳ ಫಲಿತಾಂಶ ಪ್ರಕಟವಾಗುತ್ತಲೇ ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಬೆಲೆಯಲ್ಲಿ ತೀವ್ರ ಏರಿಕೆ ಆಗಲಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಬಹಳ ಹೆಚ್ಚಳವಾಗುವುದು ಹಣದುಬ್ಬರದ ತೀಕ್ಷ್ಣ ಏರಿಕೆಗೆ ಕಾರಣವಾಗುತ್ತದೆ.

ರಷ್ಯಾ ಮತ್ತು ಅಮೆರಿಕ-ನ್ಯಾಟೋ ಕೂಟದ ನಡುವೆ ಕಳೆದ ಕೆಲವು ವಾರಗಳಿಂದ ಉಂಟಾಗಿರುವ ಉದ್ವಿಗ್ನತೆಯಿಂದ ಹಾಗೂ ಉಕ್ರೇನ್ ಮೇಲೆ ರಷ್ಯಾ ಆಕ್ರಮಣದಿಂದಾಗಿ ಅಂತರರಾಷ್ಟ್ರೀಯ ತೈಲ ಬೆಲೆಗಳಲ್ಲಿ ಭಾರಿ ಏರಿಕೆ ಆಗಿದೆ. ತೈಲ ಬೆಲೆಗಳು ಗಗನಮುಖಿಯಾಗಿದ್ದು ಬ್ಯಾರಲ್ ಒಂದರ ಬೆಲೆ 100 ಡಾಲರ್‌ಗೂ ಹೆಚ್ಚಾಗಿದೆ ಹಾಗೂ ಅನಿಲ ಬೆಲೆಗಳು ಶೇಕಡ 62ರಷ್ಟು ಏರಿಕೆಯಾಗಿದೆ. ಇದು ಭಾರತದಲ್ಲಿ ತೈಲ ಬೆಲೆಗಳು ಮತ್ತು ಹಣದುಬ್ಬರದ ಮೇಲೆ ನೇರ ಪರಿಣಾಮ ಬೀರಲಿದೆ.

ಇತ್ತೀಚಿನ ದಿನಗಳಲ್ಲಿ ಭಾರೀ ಪ್ರಮಾಣದ ಹಣದುಬ್ಬರದಿಂದಾಗಿ ಜನಸಾಮಾನ್ಯರ ಖರೀದಿ ಶಕ್ತಿ ಕುಂದಿದೆ. ಚಿಲ್ಲರೆ ಗ್ರಾಹಕ ಬೆಲೆ ಸೂಚ್ಯಂಕ(ಸಿಪಿಐ) ಅಥವಾ ಸಂಯುಕ್ತ ಗ್ರಾಹಕ ಬೆಲೆ ಸೂಚ್ಯಂಕ(ಸಿಪಿಐ-ಸಿ) 2019ರ ಡಿಸೆಂಬರ್ ಹಾಗೂ 2020 ನವೆಂಬರ್ ಅವಧಿಯಲ್ಲಿ ಸರಾಸರಿ ಶೇಕಡ 7ರಷ್ಟಕ್ಕೆ ತಲುಪಿತ್ತು. ನಂತರ ಅದು ಸ್ವಲ್ಪ ಸುಧಾರಿಸಿತ್ತು. ಅದಾದ ನಂತರ, 2020 ಮೇನಿಂದ ಜುಲೈವರೆಗೆ ಹಣದುಬ್ಬರ ಶೇಕಡ 6ಕ್ಕಿಂತ ಹೆಚ್ಚಾಗಿತ್ತು; 2022 ಜನವರಿಯಲ್ಲಿ ಮತ್ತೊಮ್ಮೆ ಏರಿಕೆಯಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಕಾರ, 2021-22ರ ಕೊನೆಯ ತ್ರೈಮಾಸಿಕದಲ್ಲಿ ಸರಾಸರಿ ಹಣದುಬ್ಬರ ಶೇಕಡ 5-7 ಆಗಲಿದೆ. ಹಾಗೂ 2022-23ರ ಇಡೀ ವರ್ಷಕ್ಕೆ ಶೇಕಡ 4.5 ಆಗಲಿದೆ.

ಪ್ರಮುಖ ಕಾರಣ

ಆಹಾರ ಪದಾರ್ಥಗಳ ಬೆಲೆಗಳಲ್ಲಿನ ಭಾರಿ ಏರಿಕೆ ಹಣದುಬ್ಬರಕ್ಕೆ ಮುಖ್ಯ ಕಾರಣವಾಗಿದೆ. ಕೋವಿಡ್-19 ಸಾಂಕ್ರಾಮಿಕತೆಯ ವೇಳೆ ಸರಬರಾಜು ಅಸ್ತವ್ಯಸ್ತತೆಯಿಂದಾಗಿ ಆಹಾರ ಬೆಲೆಗಳಲ್ಲಿ ತೀವ್ರ ಏರಿಕೆಯಾಗಿತ್ತು. ವಿಶೇಷವಾಗಿ ಖಾದ್ಯ ತೈಲ, ಬೇಳೆ ಕಾಳುಗಳು, ತರಕಾರಿಗಳು ಮತ್ತು ಪ್ರೊಟೀನ್-ಸಮೃದ್ಧ ಆಹಾರ ಪದಾರ್ಥಗಳ ಬೆಲೆಯಲ್ಲಿ ತೀವ್ರ ಏರಿಕೆ ಆಗಿತ್ತು.

1000_F_373302615_nOSTQpG3YhYvgyvWs29UaQLerC4i3Mghಇತರೆ ರಂಗಗಳ ವಿಭಾಗದಲ್ಲಿ ಇಂಧನ, ಸಾರಿಗೆ ಮತ್ತು ಸಂಪರ್ಕಗಳ ಬೆಲೆಯೇರಿಕೆ ಹಣದುಬ್ಬರಕ್ಕೆ ಕೊಡುಗೆ ನೀಡಿದೆ. ಸರಬರಾಜು ಸಮಸ್ಯೆ ನಿವಾರಣೆಯಾಗುತ್ತಿರುವುದರಿಂದ ಆಹಾರ ಹಣದುಬ್ಬರ ಕ್ರಮೇಣವಾಗಿ ಕಡಿಮೆಯಾಗುತ್ತಿತ್ತು. ಆದರೆ 2022ರ ಜನವರಿಯಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಶೇಕಡ ೬ನ್ನು ದಾಟಿತ್ತು.

ಹೆಚ್ಚು ವೇಯ್ಟೇಜ್

ಗ್ರಾಹಕ ಬೆಲೆ ಸೂಚ್ಯಂಕದಲ್ಲಿ ಆಹಾರದ ವಿಭಾಗದ ವೇಯ್ಟೇಜ್ ಸ್ವಲ್ಪ ಜಾಸ್ತಿಯಾಗಿರುತ್ತದೆ.

ಉತ್ಪಾದನಾ ವಲಯದ ಹಣದುಬ್ಬರವನ್ನು ಪ್ರತಿಬಿಂಬಿಸುವ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಕೂಡ 2021 ಏಪ್ರಿಲ್‌ನಿಂದ 2022 ಜನವರಿ ವರೆಗೆ ಸರಾಸರಿ ಶೇಕಡ 12.6 ಏರಿಕೆ ದಾಖಲಿಸಿತ್ತು. ಕಚ್ಚಾ ವಸ್ತುಗಳು, ಅದರಲ್ಲೂ ವಿಶೇಷವಾಗಿ ಖನಿಜಗಳು, ಕಚ್ಚಾ ಎಣ್ಣೆ ಮತ್ತು ಉತ್ಪಾದಿತ ಉತ್ಪನ್ನಗಳ ಕಚ್ಚಾ ವಸ್ತುಗಳ ಬೆಲೆಗಳು ಏರಿಕೆ ಹಾಗೂ ಲೋ ಬೇಸ್‌ನಿಂದಾಗಿ ಡಬ್ಲ್ಯುಪಿಐ ಏರಿಕೆ ಕಂಡಿದೆ. ರೂಪಾಯಿ ದುರ್ಬಲಗೊಂಡಿರುವುದು ಕೂಡ ಹಣದುಬ್ಬರಕ್ಕೆ ಕಾರಣವಾಗಿದೆ. ಉತ್ಪಾದನಾ ವೆಚ್ಚದ ಮೇಲೆ ಅದು ದುಷ್ಪರಿಣಾಮ ಬೀರಿದೆ. ಸಾಕಷ್ಟು ಸಂಪನ್ಮೂಲ ಹಾಗೂ ಉಳಿತಾಯ ಹೊಂದಿರುವ ದೊಡ್ಡ ಕಾರ್ಪೊರೇಟ್ ಕಂಪೆನಿಗಳು ಇನ್‌ಪುಟ್ ವೆಚ್ಚಗಳಲ್ಲಿನ ಏರಿಕೆಯನ್ನು ತತ್ಕಾಲಕ್ಕೆ ನಿಯಂತ್ರಿಸಬಹುದು. ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಉತ್ಪಾದನಾ ವೆಚ್ಚ ಏರಿಕೆ ಹಾಗೂ ಕುಸಿಯುತ್ತಿರುವ ಬೇಡಿಕೆ ನಡುವೆ ಸಿಲುಕಿ ಹಾಕಿಕೊಂಡು ತತ್ತರಿಸುತ್ತಿವೆ. ಅನೇಕ ಉತ್ಪಾದಕರು ಸದ್ಯೋಭವಿಷ್ಯದಲ್ಲಿ ತಮ್ಮ ಉತ್ಪನ್ನಗಳ ಬೆಲೆಗಳನ್ನು ಏರಿಸುವ ಬಗ್ಗೆ ಈಗಾಗಲೇ ಸುಳಿವು ನೀಡಿವೆ. ಕಚ್ಚಾ ತೈಲ ಬೆಲೆಗಳಲ್ಲಿ ಆಗುವ ಏರಿಕೆ ಗ್ರಾಹಕರ ವೆಚ್ಚದ ಮೇಲೆ ನೇರ ಪರಿಣಾಮ ಬೀರುತ್ತದೆ. ಸಾರಿಗೆ ವೆಚ್ಚದಲ್ಲಿ ಹೆಚ್ಚಳವಾಗುವುದು ಹಾಗೂ ಇಂಧನ ಬೆಲೆಯೇರಿಕೆಯಿಂದಾಗಿ ಉತ್ಪಾದನಾ ವೆಚ್ಚಗಳಲ್ಲಿ ಕೂಡ ಏರಿಕೆಯಾಗುವುದು ಗ್ರಾಹಕರ ಜೇಬಿಗೆ ಕತ್ತರಿ ಬೀಳಲು ಕಾರಣವಾಗುತ್ತದೆ. 2022-23ರ ಆದ್ಯಂತ ಇಡೀ ವರ್ಷ ಒಂದು ಬ್ಯಾರಲ್ ತೈಲದ ಬೆಲೆ 70 ರಿಂದ 75 ಅಮೆರಿಕನ್ ಡಾಲರ್ ಆಗಿರುತ್ತದೆ ಎಂದು ಆರ್ಥಿಕ ಸಮೀಕ್ಷೆ ಅಂದಾಜು ಮಾಡಿದೆ. ಆದರೆ ಅದು ಕೇವಲ ತಿರುಕನ ಕನಸು ಎಂಬುದು ಸ್ಪಷ್ಟವಾಗಿದೆ.

ತೈಲ ಕಂಪೆನಿಗಳು ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಮಾರಾಟ ಬೆಲೆಯನ್ನು ಕಳೆದ ಎರಡು ತಿಂಗಳಿಂದ ಏರಿಸಿಲ್ಲ. ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳು ಮುಗಿಯುವವರೆಗೆ ಇಂಧನಗಳ ಬೆಲೆಯೇರಿಕೆ ಮಾಡುವುದು ಬೇಡವೆಂಬುದು ಕೇಂದ್ರ ಸರ್ಕಾರದ ಬಯಕೆಯಾಗಿತ್ತು. ಮಾರ್ಚ್ 10ರಂದು ಈ ಚುನಾವಣೆಗಳ ಫಲಿತಾಂಶ ಪ್ರಕಟವಾಗುತ್ತಲೇ ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಬೆಲೆಯಲ್ಲಿ ತೀವ್ರ ಏರಿಕೆ ಆಗಲಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಬಹಳ ಹೆಚ್ಚಳವಾಗುವುದು ಹಣದುಬ್ಬರದ ತೀಕ್ಷ್ಣ ಏರಿಕೆಗೆ ಕಾರಣವಾಗುತ್ತದೆ.

ಇಂಥ ಸನ್ನಿವೇಶದಲ್ಲಿ, ಈ ಅವಕಾಶವನ್ನು ಬಳಸಿಕೊಂಡು ತೈಲ ಬೆಲೆಗಳ ಮೇಲೆ ಅಬಕಾರಿ ಸುಂಕ ಹೇರಿಕೆ ಮೂಲಕ ಪರೋಕ್ಷ ತೆರಿಗೆ ಹೆಚ್ಚಿಸಿಕೊಳ್ಳಲು ಮುಂದಾಗುವ ಬದಲು ಕೇಂದ್ರ ಸರ್ಕಾರ ಕೇಂದ್ರೀಯ ಅಬಕಾರಿ ಸುಂಕವನ್ನು ತಕ್ಷಣವೇ ಕಡಿತ ಮಾಡಬೇಕು. ಅಬಕಾರಿ ಸುಂಕದೊಂದಿಗೆ ತೈಲ ಬೆಲೆಯೇರಿಕೆಯಿಂದ ಜನರಿಗೆ ಆಘಾತವಾಗುವುದನ್ನು ತಪ್ಪಿಸಲು ಸರ್ಕಾರ ಹೀಗೆ ಮಾಡಲೇಬೇಕು. ಆರ್ಥಿಕತೆಯಲ್ಲಿ ನಿಧಾನಕ್ಕೆ ಆಗುತ್ತಿರುವ ಚೇತರಿಕೆ ಹಾಗೂ ಬೇಡಿಕೆಯಲ್ಲಿ ಹೆಚ್ಚಳವಾಗುತ್ತಿರುವುದು ಮಂಕಾಗದಿರಲು ಸರ್ಕಾರ ಈ ಕ್ರಮಕೈಗೊಳ್ಳುವುದು ಒಳಿತು.

2021ರ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ ಪ್ರತಿ ಲೀಟರ್ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 10 ರೂಪಾಯಿ ಹಾಗೂ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಐದು ರೂಪಾಯಿ ಕಡಿಮೆ ಮಾಡಿತ್ತು. ಈ ಕಡಿತದ ನಂತರ, ಒಟ್ಟು ಅಬಕಾರಿ ಸುಂಕ ಲೀಟರ್ ಪೆಟ್ರೋಲ್ ಮೇಲೆ 27.8 ರೂಪಾಯಿ ಹಾಗೂ ಡೀಸೆಲ್ ಮೇಲೆ 21.8 ರೂಪಾಯಿ ಆಗಿದೆ.

ಕೇಂದ್ರೀಯ ತೆರಿಗೆಗಳನ್ನು ಕಡಿತ ಮಾಡುವಾಗ, ಸೆಸ್‌ಗಳು ಮತ್ತು ಸರ್ಚಾರ್ಜ್‌ಗಳನ್ನು ತೆಗೆದುಹಾಕಲು ಆದ್ಯತೆ ನೀಡಬೇಕು. ಈ ಬಾಬ್ತಿನಲ್ಲಿ ಬರುವ ಆದಾಯಗಳನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕಿಲ್ಲದಿರುವುದರಿಂದ ಅವುಗಳನ್ನು ವಿಕೃತವಾಗಿ ಬೇಕಾಬಿಟ್ಟಿಯಾಗಿ ವಿಧಿಸಲಾಗುತ್ತಿದೆ. ಮೂಲಭೂತ ಅಬಕಾರಿ ಸುಂಕದ ಬಗ್ಗೆ ಹೇಳುವುದಾದರೆ, ಅವುಗಳ ಆದಾಯವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು. ಕೇಂದ್ರ ಸರ್ಕಾರ ಶೇಕಡ 51 ಇಟ್ಟುಕೊಂಡು ಉಳಿದ ಪ್ರತಿಶತ 49ನ್ನು ರಾಜ್ಯಗಳಿಗೆ ನೀಡುತ್ತದೆ. ಸದ್ಯಕ್ಕೆ ಪೆಟ್ರೋಲ್ ಮೇಲೆ ವಿಧಿಸಲಾಗುವ 96% ಅಬಕಾರಿ ಸುಂಕ ಮತ್ತು ಡೀಸೆಲ್ ಮೇಲೆ ವಿಧಿಸುವ 94% ಅಬಕಾರಿ ಸುಂಕದಲ್ಲಿ ಸೆಸ್ ಮತ್ತು ಸರ್ಚಾರ್ಜ್‌ಗಳೇ ಹೆಚ್ಚಿರುತ್ತವೆ.

ಇಂಧನಗಳ ಬೆಲೆಗಳಲ್ಲಿ ತೀವ್ರ ಏರಿಕೆ ಮಾಡಿದರೆ, ಅದರಿಂದ ಉಂಟಾಗುವ ಹಣದುಬ್ಬರವು ಈಗಾಗಲೇ ಕೊರೊನಾದಿಂದಾಗಿ ಉಂಟಾದ ಉದ್ಯೋಗ ನಷ್ಟ ಹಾಗೂ ಆದಾಯ ಕುಸಿತದಿಂದಾಗಿ ಪರಿತಪಿಸುತ್ತಿರುವ ಜನಸಮಾನ್ಯರ ಬದುಕು ಇನ್ನಷ್ಟು ದುಸ್ತರವಾಗಲಿದೆ. ಮೋದಿ ಸರ್ಕಾರ ಇನ್ನಷ್ಟು ಕಾಯಬಾರದು. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಹಾಗೂ ಸರ್ಚಾರ್ಜ್‌ಗಳನ್ನು ಅದು ತಕ್ಷಣವೇ ಕಡಿತ ಮಾಡಬೇಕು. ಅಂತರರಾಷ್ಟ್ರೀಯ ತೈಲ ಬೆಲೆಗಳ ಏರಿಕೆಯ ಪರಿಣಾಮವನ್ನು ತಡೆಯಲು ಹೀಗೆ ಮಾಡುವುದು ಅತ್ಯಗತ್ಯ.

Leave a Reply

Your email address will not be published. Required fields are marked *