ಸಂಘ ಪರಿವಾರದಿಂದ ದೇಶದ ಏಕತೆ, ವೈವಿಧ್ಯತೆ, ಐಕ್ಯತೆಗೆ ಧಕ್ಕೆ : ಬೃಂದಾ ಕಾರಟ್‌

ಆರ್‌ಎಸ್‌ಎಸ್ ಮತ್ತು ಬಿಜೆಪಿಯಿಂದ ಭಾರತದ ಸೌಹಾರ್ದತೆ, ಏಕತೆ, ವೈವಿಧ್ಯತೆ ಮತ್ತು ಸಂವಿಧಾನಕ್ಕೆ ಬಾಹ್ಯ ಶತ್ರುಗಳಿಗಿಂತಲೂ ಹೆಚ್ಚಿನ ಅಪಾಯ ಇದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಾಲಿಟ್‌ ಬ್ಯುರೊ ಸದಸ್ಯೆ, ಮಾಜಿ ರಾಜ್ಯಸಭಾ ಸದಸ್ಯೆ ಬೃಂದಾ ಕಾರಟ್ ಹೇಳಿದರು.

ಸಿಪಿಐ(ಎಂ) ದಕ್ಷಿಣ ಕನ್ನಡ ಘಟಕ ವತಿಯಿಂದ ಮಂಗಳೂರಿನ ಕುದ್ಮಲ್‌ ರಂಗರಾವ್‌ ಪುರಭವನದಲ್ಲಿ ಆಯೋಜಿಸಿದ್ದ ಸೌಹಾರ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಬೃಂದಾ ಕಾರಟ್, ಆರ್‌ಎಸ್‌ಎಸ್ ಮತ್ತು ಬಿಜೆಪಿ ದೇಶಕ್ಕೆ ಹೆಚ್ಚು ಅಪಾಯಕಾರಿ ಎಂದು ಜನತೆಗೆ ಎಚ್ಚರಿಕೆ ನೀಡಿದರು.

ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗಳು ದೇಶದ ದೊಡ್ಡ ಶತ್ರುಗಳು.  ಸಂವಿಧಾನದ ಮೇಲೆ ನಿರಂತರ ದಾಳಿ ಮಾಡುವ ಸಂಘ ಪರಿವಾರವು ಮಹಿಳೆಯರು, ದಲಿತರು, ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಿ ದೇಶವನ್ನು ಒಡೆಯುತ್ತಿದೆ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಪೂರ್ವಜರು ಯಾವುದೇ ಕೊಡುಗೆ ನೀಡಿಲ್ಲ. ಬ್ರಿಟಿಷರ ಪರವಾಗಿದ್ದ ಹಾಗೂ ಬ್ರಿಟಿಷರಿಗೆ ತಪ್ಪೊಪ್ಪಿಗೆ ಪತ್ರ ಬರೆದಿದ್ದ ಹಿಂದುತ್ವ ಸಿದ್ಧಾಂತದ ವಿ.ಡಿ.ಸಾರ್ವರ್ಕರ್‌ರನ್ನು ಹೀರೋ ಮಾಡುತ್ತಿದ್ದಾರೆ. ಅವರೆಂದೂ ದೇಶಪ್ರೇಮಿಗಳಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಅವರ ಕೋಮುವಾದಿ ಸಿದ್ಧಾಂತ ಕೇವಲ ಅಲ್ಪಸಂಖ್ಯಾತರು ಮಾತ್ರವಲ್ಲ, ಪ್ರತಿಯೊಬ್ಬರ ಮೇಲೂ ಪರಿಣಾಮ ಬೀರುತ್ತದೆ. ಇದು ದೇಶವನ್ನು ಕೋಮುವಾದಿ ಮತ್ತು ಸರ್ವಾಧಿಕಾರಿ ಆಡಳಿತಕ್ಕೆ ಕೊಂಡೊಯ್ಯುವ ಮೂಲಕ ಭಾರತೀಯ ಗಣರಾಜ್ಯದ ಪ್ರತಿಯೊಂದು ಸ್ವರೂಪವನ್ನು ಬದಲಾಯಿಸುತ್ತದೆ.

ಆರ್‌ಎಸ್‌ಎಸ್‌ನ ದ್ವಿರಾಷ್ಟ್ರ ಸಿದ್ಧಾಂತವನ್ನೇ ಪ್ರತಿಪಾದಿಸಿದ ಮುಹಮ್ಮದ್ ಆಲಿ ಜಿನ್ನಾ ಪಾಕಿಸ್ತಾನವನ್ನು ಸ್ಥಾಪಿಸಿದರು. ಅವರು ಮತೀಯವಾದಿ ರಾಷ್ಟ್ರ ನಿರ್ಮಾಣದ ಮೂಲಕ ಜನರ ನಂಬಿಕೆಗೆ ದ್ರೋಹ ಬಗೆದರು. ಇಲ್ಲಿ ಸಂವಿಧಾನ ಕರಡು ರಚನೆ ಸಮಿತಿ ನೇತೃತ್ವ ವಹಿಸಿದ್ದ ಡಾ.ಅಂಬೇಡ್ಕರ್ ಮೇಲೆ ಒತ್ತಡ ಹಾಕಿದರೂ ಆರೆಸ್ಸೆಸ್ ಯಶಸ್ವಿಯಾಗಿಲ್ಲ. 1950ರಲ್ಲಿ ಸಂವಿಧಾನ ರಚನೆಯಾದಾಗ, ಇದು ಮನುಸ್ಮೃತಿಯನ್ನು ಪ್ರತಿನಿಧಿಸುತ್ತಿಲ್ಲ ಎಂದು ತಮ್ಮ ಮುಖವಾಣಿ ʻಆರ್ಗನೈಸರ್‌ʼ ಪತ್ರಿಕೆಯಲ್ಲಿ ತಗಾದೆ ಎಬ್ಬಿಸಿದ್ದರು.

ನಾವು ಆರೆಸ್ಸೆಸ್‍ನ ಚರಿತ್ರೆಯನ್ನು ಮರೆಯಬಾರದು. ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಆಜಾದಿ ಕಾ ಅಮೃತ್ ಮಹೋತ್ಸವ್ ಆಚರಿಸುತ್ತಿದೆ. ಭಾರತ್ ಜೋಡೊ ಬದಲು ಭಾರತ್ ತೋಡೊ ಸಿದ್ಧಾಂತ ಅನುಸರಿಸುತ್ತಿದೆ. ದೇಶದ ಬಹು ಸಂಸ್ಕೃತಿಯ, ವೈವಿಧ್ಯತೆಯಲ್ಲಿ ಏಕತೆಯ ಸೌಂದರ್ಯವನ್ನು ಬಿಜೆಪಿ ನಾಶ ಮಾಡುತ್ತಿದೆ. ದಕ್ಷಿಣ ಭಾರತದ ಕ್ರಾಂತಿ ಪುರುಷ, ಸಮಾಜ ಸುಧಾರಕ ನಾರಾಯಣ ಗುರುಗಳ ಟ್ಯಾಬ್ಲೋವನ್ನು ಗಣರಾಜ್ಯೋತ್ಸವ ಪರೇಡ್‍ನಲ್ಲಿ ನಿರಾಕರಿಸಿ, ದೊಡ್ಡ ಅನ್ಯಾಯ ಮಾಡಿದೆ. ಹಿಂದುತ್ವದಿಂದ ಅಲ್ಪಸಂಖ್ಯಾತರಿಗೆ ಮಾತ್ರವಲ್ಲ, ಇಡೀ ಮಾನವ ಸಮುದಾಯಕ್ಕೆ ಅಪಾಯವಿದೆ ಎಂದು ಬೃಂದಾ ಕಾರಟ್ ಪ್ರತಿಪಾದಿಸಿದರು.

ಹಿಜಾಬ್ ನಿಷೇಧದ ಬಗ್ಗೆ ಮಾತನಾಡಿದ ಬೃಂದಾ ಕಾರಟ್‌, ಆಡಳಿತಾರೂಢ ಬಿಜೆಪಿ ಪಕ್ಷವು ತನ್ನ ‘ವೈಫಲ್ಯ’ಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಹಿಜಾಬ್‌ ವಿವಾದ ಸೃಷ್ಟಿಸಿತು. ಬಾಲಕಿಯರು ಹಲವು ಅಡೆತಡೆಗಳನ್ನು ಮುರಿದು ಶಿಕ್ಷಣ ಪಡೆಯಲು ಯತ್ನಿಸುತ್ತಿದ್ದಾರೆ. ಅವರಿಗೆ ಹಿಜಾಬ್ ತೆಗೆಯುವಂತೆ ಸೂಚಿಸುವುದು ನಾಚಿಕೆಗೇಡಿತನ. ಹಿಜಾಬ್ ಅನ್ನು ನಿಷೇಧಿಸುವ ಹೈಕೋರ್ಟ್ ತೀರ್ಪು ‘ದುರದೃಷ್ಟಕರ’ ಎಂದ ಅವರು, ಸುಪ್ರೀಂ ಕೋರ್ಟ್ ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕು ಎಂದು ಹೇಳಿದರು.

ಪುರುಷರ ಕಪಿಮುಷ್ಠಿಯಲ್ಲಿ ಮಹಿಳೆಯರನ್ನು ಹಿಡಿದಿಟ್ಟಿಕೊಳ್ಳುವ ಮೂಲಭೂತವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಎಸ್‌ಡಿಪಿಐ, ಪಿಎಫ್‌ಐನಂತಹ ಸಂಘಟನೆಗಳು ಹಿಜಾಬ್ ಧರಿಸುವಂತೆ ಹೆಣ್ಣು ಮಕ್ಕಳ ಮೇಲೆ ಒತ್ತಡ ಹಾಕುವುದನ್ನು ಒಪ್ಪಿಕೊಳ್ಳಲಾಗದು. ಯಾವುದೇ ವಸ್ತ್ರ ತೊಡುವ ಅಧಿಕಾರ ಮಹಿಳೆಯರ ವಿವೇಚನೆ ಆಗಿರಬೇಕೇ ವಿನಾ ಅದರಲ್ಲಿ ಪುರುಷರ ಹಸ್ತಕ್ಷೇಪ ಸಲ್ಲದು. ಈಗ ರಾಜ್ಯದ ಬಿಜೆಪಿ ಸರ್ಕಾರ ಹಿಜಾಬ್ ಗೊಂದಲ ಸೃಷ್ಟಿಸಿ, ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕನ್ನು ಮೊಟಕುಗೊಳಿಸಲು ಮುಂದಾಗಿದೆ’ ಎಂದು ಬೃಂದಾ ಕಾರಟ್ ಆರೋಪಿಸಿದರು.

ಕೇಂದ್ರ ಸರ್ಕಾರದ ಅಡಿಯಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಹಿಜಾಬ್ ಧರಿಸಲು ನಿರ್ಬಂಧ ಇಲ್ಲ. ಪಕ್ಕದ ಕೇರಳ ರಾಜ್ಯದಲ್ಲೂ ಹಿಜಾಬ್ ಹೆಣ್ಣು ಮಕ್ಕಳ ಆಯ್ಕೆಯಾಗಿದೆ. ಶಾಲೆಗಳಲ್ಲಿ ಸಮವಸ್ತ್ರ ಬಣ್ಣದ ಹಿಜಾಬ್ ಧರಿಸಲು ಅವಕಾಶ ಇದೆ. ಆದರೆ, ಈ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರ ಪಾತ್ರ ಮಾತ್ರ ಇರುತ್ತದೆ. ಆದರೆ, ಇಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಹೆಸರಿನಲ್ಲಿ ಶಾಸಕರು ಶಿಕ್ಷಣ ಸಂಸ್ಥೆ ಆಡಳಿತದಲ್ಲಿ ಮೂಗುತೂರಿಸಿ, ಕೋಮು ವಿಷ ಬೀಜ ಹಂಚುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

‘ಕರ್ನಾಟಕದಲ್ಲಿ ಅಂಗೀಕರಿಸಿರುವ ಮತಾಂತರ ನಿಷೇಧ ಕಾಯ್ದೆ ಕೂಡ ಸಂವಿಧಾನದ ಮೇಲೆ ಮಾಡಿರುವ ತೀವ್ರ ದಾಳಿಯಾಗಿದೆ. ಇದು ಕ್ರೈಸ್ತರ ಮೇಲಿನ ಗದಾ ಪ್ರಹಾರ ಮಾತ್ರವಲ್ಲ, ಇದು ಸಂವಿಧಾನದ ಜಾತ್ಯತೀತ ತತ್ವದ ಮೇಲಿನ ದಾಳಿಯಾಗಿದೆ’ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನೂ ʻದಿ ಕಾಶ್ಮೀರ್ ಫೈಲ್ʼ ಚಿತ್ರದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದ ಬೃಂದಾ ಕಾರಟ್‌, ಈ ಚಿತ್ರ ಹಿಂಸೆಯ ಪ್ರದರ್ಶನವಾಗಿದ್ದು, ಒಂದು ಸಮುದಾಯದ ಮೇಲೆ ದ್ವೇಷ ಸಾಧನೆಗಾಗಿ ಮಾಡಿದ ಕ್ರೌರ್ಯದ ವಿಜೃಂಭಣೆಯಂತಿದೆ. ಕಾಶ್ಮೀರಿ ಜನರ ಒಗ್ಗಟ್ಟು ಪ್ರದರ್ಶನ ಮತ್ತು ಪಂಡಿತರನ್ನು ಸುರಕ್ಷಿತವಾಗಿ ಹುಟ್ಟೂರಿಗೆ ಕರೆತಂದು ಅವರಿಗೆ ನ್ಯಾಯ ಒದಗಿಸುವ ಕೆಲಸಕ್ಕೆ ಆದ್ಯತೆ ಕೊಡಬೇಕು. ಸಿನಿಮಾ ಮೂಲಕ ಹಿಂಸೆಯ ವಿಜೃಂಭಣೆಯಿಂದ ಯಾರಿಗೂ ಲಾಭವಾಗದು ಎಂದರು.

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಕೆ.ನೀಲಾ ಮಾತನಾಡಿ, ಜನರ ವಿಭಜನೆಯೇ ಆರೆಸ್ಸೆಸ್ ಮೂಲಮಂತ್ರ. ಬಹುಸಂಖ್ಯಾತ ಕೋಮುವಾದಕ್ಕೆ ಅಲ್ಪಸಂಖ್ಯಾತ ಕೋಮುವಾದ ಉತ್ತರವಲ್ಲ. ನಾರಾಯಣ ಗುರುಗಳ ಟ್ಯಾಬ್ಲೊ ವಿವಾದದಿಂದ ಪೆಟ್ಟು ತಿಂದ ಬಿಜೆಪಿ, ಹಿಜಾಬ್ ವಿವಾದವನ್ನು ಮುನ್ನೆಲೆಗೆ ತಂದು ಧಾರ್ಮಿಕ ವಿಭಜನೆಗೆ ಪ್ರಚೋದನೆ ನೀಡುತ್ತಿದೆ. ಜನರು ಕಿತ್ತಾಡಿ, ದಂಗೆ ಏಳಬೇಕು ಎಂಬುದು ಬಿಜೆಪಿ ಉದ್ದೇಶ. ಅದನ್ನು ಸೌಹಾರ್ದ ಪ್ರೇಮಿಗಳು ವಿಫಲಗೊಳಿಸಬೇಕು ಎಂದರು ಹೇಳಿದರು.

ರಾಜ್ಯ ಘಟಕದ ಕಾರ್ಯದರ್ಶಿ ಮಂಡಳಿಯ ಸದಸ್ಯ ಯಾದವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಿಪಿಎಂ ಪ್ರಮುಖರಾದ ಡಾ.ಕೆ.ಪ್ರಕಾಶ್, ಯಮುನಾ ಗಾಂವ್ಕರ್, ವಸಂತ ಆಚಾರಿ, ಬಾಲಕೃಷ್ಣ ಶೆಟ್ಟಿ, ಗುರುಶಾಂತ್, ಮಹಾಂತೇಶ, ಡಾ.ಕೃಷ್ಣ ಪ್ಪ ಕೊಂಚಾಡಿ, ಸುಕುಮಾರ್, ಪದ್ಮಾವತಿ, ಜಯಂತಿ ಶೆಟ್ಟಿ, ರಮಣಿ, ವಸಂತಿ ಇದ್ದರು. ‌ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿದರು. ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು.

Leave a Reply

Your email address will not be published. Required fields are marked *