ಕೋಮುವಾದಿಗಳಿಂದ ಶಾಂತಿ ಸೌಹಾರ್ದತೆಯ ಬಹುಸಾಂಸ್ಕೃತಿಕ ಪರಂಪರೆಗೆ ಧಕ್ಕೆ

ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ ಶಿವರಾತ್ರಿ (ಮಾರ್ಚ್‌ 01, 2022) ದಿನದಂದು ನಿಷೇಧಾಜ್ಞೆ ನಡುವೆಯೂ ಪಟ್ಟಣದಲ್ಲಿ ರಾಘವಚೈತನ್ಯ ಲಿಂಗದ ಶುದ್ಧೀಕರಣ, ಪೂಜೆ ನೆಪದಲ್ಲಿ ಗಲಭೆಗೆ ಕಾರಣರಾದ ಬಿಜೆಪಿ ಶಾಸಕರು, ಸಚಿವರು ಮತ್ತು ಬೆಂಬಲಿಗರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸಿಪಿಐ(ಎಂ) ಆಳಂದ ತಾಲ್ಲೂಕು ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ತಹಶೀಲ್ದಾರ್‌ ಅವರಿಗೆ ಸಲ್ಲಿಸಿದ ಮನವಿ ಪತ್ರದ ಪೂರ್ಣ ಸಾರಾಂಶ ಕೆಳಗಿನಂತಿವೆ;

ಕಲಬುರಗಿ ಜಿಲ್ಲೆಯಲ್ಲಿ ಆಳಂದ ತಾಲ್ಲೂಕು ಅತ್ಯಂತ ಶಾಂತಿ ಮತ್ತು ಸೌಹಾರ್ದತೆಗೆ ಹೆಸರಾದ ನಾಡಾಗಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಇಲ್ಲಿ ಕೋಮುವಾದಿಗಳು ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿದ್ದಾರೆ. ಮಾತ್ರವಲ್ಲ ಇಲ್ಲಿನ ಶಾಂತಿ ಸೌಹಾರ್ದತೆಗೆ ಧಕ್ಕೆ ತರುತಿದ್ದಾರೆ ಮತ್ತು ಇಲ್ಲಿನ ಬಹುಸಾಂಸ್ಕೃತಿಕ ಪರಂಪರೆಗೆ ಧಕ್ಕೆ ತರುತಿದ್ದಾರೆ. ಜನರ ಕೈಗೆ ಕೆಲಸವಿಲ್ಲವಾಗಿದೆ. ನಿರುದ್ಯೋಗ ಹೆಚ್ಚುತ್ತಿದೆ. ಬೆಳೆದ ಬೆಲೆಗೆ ವೈಜ್ಞಾನಿಕ ಬೆಂಬಲ ಬೆಲೆ ಸಿಕ್ಕುತ್ತಿಲ್ಲವಾದ್ದರಿಂದ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ. ಜನತೆಯು ಹೀಗೆ ತಮ್ಮದೇ ಆರ್ಥಿಕ ಸಂಕಟದಲ್ಲಿ ಇದ್ದಾಗ ಕೋಮುವಾದಿಗಳು ಸರಕಾರದ ಆಶ್ರಯದಲ್ಲಿ ಕೋಮುಚಟುವಟಿಕೆ ನಡೆಸಿ ಜನರನ್ನು ಧಾರ್ಮಿಕ ನೆಲೆಯಲ್ಲಿ ಭಾವೋದ್ರೇಕಗೊಳಿಸಿ ಒಡೆಯುವ ಷಡ್ಯಂತ್ರ ಮಾಡುತ್ತಿದ್ದಾರೆ. ಇಂತಹ ಕುತಂತ್ರಕ್ಕೆ ಬಲಿಯಾಗಿದ್ದು ಆಳಂದ ನಗರದ ಲಾಡ್ಲೆ ಮಷಾಕ್ ದರ್ಗಾದಲ್ಲಿ ಇದೆಯೆನ್ನಲಾದ ಶಿವಲಿಂಗ ಪ್ರಕರಣ.

ಮಾರ್ಚ್ 01, 2022ರಂದು ಆಳಂದನಲ್ಲಿ ನಿಷೇಧಾಜ್ಞೆ ಇತ್ತು. ಇದನ್ನು ಉಲ್ಲಂಘನೆ ಮಾಡಿದ್ದು ಮೊದಲಿಗೆ ಆಳಂದ ಕ್ಷೇತ್ರದ ಶಾಸಕರು, ಸಂಸದ ಮತ್ತು ಬಿಜೆಪಿಯ ಇತರೆ ಶಾಸಕರು ಹಾಗೂ ಅವರ ಹಿಂಬಾಲಕರು. ಶಾಸಕರ ಮನೆಯಿಂದಲೇ ಮೆರವಣಿಗೆ ಆರಂಭವಾಗಿದೆ. ಪೊಲೀಸರು ಮನಸು ಮಾಡಿದ್ದರೆ ಇದನ್ನು ತಡಯಬಹುದಾಗಿತ್ತು, ತಡೆಯಲಿಲ್ಲ. ಅವರು ಪ್ರಚೋದನಾತ್ಮಕ ಮತೀಯ ಘೋಷಣೆ ಕೂಗುತ್ತ ಆಳಂದ ಬೀದಿಗಿಳಿದರು, ಟೆಂಟ್ ಹಾಕಿದರು. ನಿಷೇಧಿತ ಹಾಡು ‘ಹಮ್ ಬನಾಯೆಂಗೆ ಮಂದಿರ’ ಹಾಕಿ ಕುಣಿದಾಡಿದರು. ಇದರಿಂದ ಅಲ್ಪಸಂಖ್ಯಾತ ಸಮುದಾಯದಲ್ಲಿ ಭಯ ತಲ್ಲಣ ಸಹಜವಾಗಿಯೇ ಶುರುವಾಗಿದೆ. ಯಾರೋ ಕಿಡಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಯಾರು ನಡೆಸಿದ್ದಾರೆ ಎನ್ನುವುದರ ತನಿಖೆಯಾಗಿ ಸಾರ್ವಜನಿಕರೆದುರು ಸತ್ಯ ಇಡಬೇಕಾದದ್ದು ಪೊಲೀಸ್‌  ಇಲಾಖೆ. ಯಾಕೆಂದರೆ, 167 ಜನ ಬಂಧಿತರಲ್ಲಿ ಅಮಾಯಕರೂ ಇದ್ದಾರೆ. ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಗಳಿದ್ದಾರೆ. ಸಾರಾಸಗಟಾಗಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಬಂಧನ ನಡೆದಿರುವುದನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷವು ತೀವ್ರವಾಗಿ ಖಂಡಿಸುತ್ತದೆ.

ಇದೇ ಸಂದರ್ಭದಲ್ಲಿ ಬಿಜೆಪಿಯ ಶಾಸಕರು, ಸಂಸದರು ಮತ್ತು ಅವರ ಬೆಂಬಲಿಗರು ಮಾಡಿದ ವಿಧ್ವಂಸಕಾರಿ ಚಟುವಟಿಕೆ, ಮೆರವಣಿಗೆ, ಭಾಷಣ, ಘೋಷಣೆ, ಕುಣಿತ ಮತ್ತು ನಿಷೇಧಾಜ್ಞೆ ಉಲ್ಲಂಘನೆ ಮಾಡಿದ್ದಕ್ಕೆ ಒಂದೇ ಒಂದು ಕ್ರಮ ಕೈಗೊಳ್ಳಲಿಲ್ಲ ಎನ್ನುವುದು ಅತ್ಯಂತ ಆತಂಕ ಮತ್ತು ತಲ್ಲಣದ ಸಂಗತಿಯಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ತಮ್ಮದೇ ಸರಕಾರವಿದ್ದಾಗಲೂ ಬಿಜೆಪಿಯ ಶಾಸಕರು ಮತ್ತು ಸಂಸದರಿಗೆ ರಸ್ತೆಗೆ ಬರುವ ನಿಷೇಧಾಜ್ಞೆ ಉಲ್ಲಂಘನೆ ಮಾಡುವ ಜರೂರತ್ತಾದರೂ ಏನಿತ್ತು? ತಮ್ಮದೇ ಜಿಲ್ಲಾಡಳಿತದ ಮೇಲೆ ನಂಬಿಕೆ ಇರಲಿಲ್ಲವೆ? ಅಥವ ಜಿಲ್ಲಾಡಳಿತವನ್ನು ತಪ್ಪು ದಾರಿಗೆ ಎಳೆಯುವ ಕುತಂತ್ರವಾಗಿತ್ತೆ? ಇದಕ್ಕೆ ಶಾಸಕರು, ಸಂಸದರು ಸ್ಪಷ್ಟನೆ ಕೊಡಬೇಕು. ಚುನಾಯಿತರಾದವರಿಗೇ ಕಾನೂನು ಪರಿಪಾಲಿಸುವ ಬದ್ಧತೆ ಇಲ್ಲವೆಂದಾದಲ್ಲಿ ಇವರು ಆ ಸ್ಥಾನಗಳಲ್ಲಿ ಉಳಿಯುವ ನೈತಿಕತೆ ಹೊಂದಿಲ್ಲ ಎಂಬುದು ಸಾಬೂತಾದಂತೆ.

ಆದ್ದರಿಂದ ಸಿಪಿಐ(ಎಂ) ಪಕ್ಷ ಆಳಂದ ತಾಲ್ಲೂಕು ಕಮಿಟಿಯು ಆಗ್ರಹಿಸುವುದೇನೆಂದರೆ;

  1. ನಿಷೇಧಾಜ್ಞೆ ಉಲ್ಲಂಘಿಸಿ ಕೋಮುಪ್ರಚೋದಾನಾತ್ಮಕ ದುಷ್ಕ್ರೀಯೆಗೆ ಇಳಿದ ಹಾಗೂ ಕಲ್ಲು ತೂರಾಟಕ್ಕೆ ಕಾರಣರಾದ ಶಾಸಕರು, ಸಂಸದರು ಮತ್ತು ಇವರ ಬೆಂಬಲಿಗರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು.
  1. ನಿರಪರಾಧಿಗಳ ಬಿಡುಗಡೆಯಾಗಬೇಕು.
  1. ಮಹಿಳೆಯರನ್ನು, ಮಕ್ಕಳನ್ನು ಅಮಾನವೀಯ ರೀತಿಯಲ್ಲಿ ಬಂಧಿಸಿದ ಪೊಲೀಸ್ ಅಧಿಕಾರಿಗಳ ಮೇಲೆ ಕಾನೂನು ಕ್ರಮವಾಗಬೇಕು ಮತ್ತು ಅವರ ವೈಯಕ್ತಿಕ ಆಸ್ತಿ ಹಾನಿ ಮಾಡಿದ್ದಕ್ಕೆ ಪರಿಹಾರ ಒದಗಿಸಬೇಕು.
  1. ಆಳಂದನಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವ ದಿಕ್ಕಿನಲ್ಲಿ ತಾಲ್ಲೂಕು ಆಡಳಿತವು ಸೂಕ್ತ ಕ್ರಮವಹಿಸಬೇಕು ಎಂದು ಆಗ್ರಹಿಸುತ್ತೇವೆ.

ವಂದನೆಗಳೊಂದಿಗೆ,

ಪಾಂಡುರ ಮಾವಿನಕರ್, ಸಿಪಿಐ(ಎಂ) ತಾಲ್ಲೂಕು ಕಾರ್ಯದರ್ಶಿ

Leave a Reply

Your email address will not be published. Required fields are marked *