ಹಿಂದುಳಿದ ವರ್ಗಗಳ ಮೀಸಲಾತಿ ಉಳಿದೀತೆ?

ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿಯನ್ನು ಮುಂದುವರಿಸುವ ಸಂಬಂಧ 2022 ಜನವರಿ 19ರಂದು ಭಾರತದ ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ಇದರ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಉಳಿಸಲು ಬೇಕಾದ ಯಾವುದೇ ನಿರ್ಣಾಯಕ ಕ್ರಮಗಳನ್ನು ಕರ್ನಾಟಕ ಸರ್ಕಾರ ಕೈಗೊಳ್ಳದೇ ಇರುವುದರಿಂದ ಮೀಸಲಾತಿಯ ಅವಕಾಶವೇ ತಪ್ಪಿಹೋಗುವ ಆತಂಕ ಎದುರಾಗಿದೆ.

ಆಡಳಿತದ ಪ್ರಜಾಸತ್ತಾತ್ಮಕ ವಿಕೇಂದ್ರೀಕರಣದ ಮೂಲ ಆಶಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಅತ್ಯಂತ ಮಹತ್ವದ್ದಾಗಿದೆ. ಸಂವಿಧಾನದ ಆಶಯದಂತೆ ಸಮುದಾಯಗಳಿಗೆ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಮತ್ತು ರಾಜಕೀಯ ಮೀಸಲಾತಿಯನ್ನು ಒದಗಿಸಲಾಗಿದೆ. ಕಳೆದ 73 ವರ್ಷಗಳಿಂದ ಪರಿಶಿಷ್ಟ ಜಾತಿ-ಎಸ್ಸಿ, ಪರಿಶಿಷ್ಟ ಪಂಗಡ-ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಇದೆ. ಸಂವಿಧಾನದ 73-74ನೆಯ ತಿದ್ದುಪಡಿಯ ಬಳಿಕ ಹಿಂದುಳಿದ ವರ್ಗಗಳಿಗೂ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ರಾಜಕೀಯ ಮೀಸಲಾತಿ ನೀಡಲಾಯಿತು. 1990ರಲ್ಲಿ ಮಂಡಲ್ ಆಯೋಗದ ವರದಿಯ ಜಾರಿ ಬಳಿಕ ಶೇ. 27 ಮೀಸಲಾತಿ ಇತರೆ ಹಿಂದುಳಿದ ವರ್ಗಗಳಿಗೆ ಲಭ್ಯವಾಯಿತು. ಪ್ರಸಕ್ತವಾಗಿ ಎಸ್.ಸಿ.-18, ಎಸ್.ಟಿ.-5, ಓ.ಬಿ.ಸಿ. ಶೇ. 27 ಸ್ಥಾನಗಳು ಮೀಸಲಿವೆ. ನಗರ ಸಭೆ, ಪಾಲಿಕೆ, ಮಹಾನಗರಪಾಲಿಕೆಗಳಂತಹ ಸ್ಥಳೀಯ ಸಂಸ್ಥೆಗಳಿಗೂ ಇದು ಅನ್ವಯವಾಗಿದೆ. ಆರ್ಥಿಕ, ಸಾಮಾಜಿಕ ಅಸಮಾನತೆಯಿಂದ ಕೂಡಿರುವ ಭಾರತದ ಸಮಾಜ ವ್ಯವಸ್ಥೆಯಲ್ಲಿ ಇಂತಹ ಮೀಸಲಾತಿ ಅವಕಾಶ ನೀಡದೇ ಹೋದಲ್ಲಿ ದುರ್ಬಲ ಸಮುದಾಯಗಳು ಸಂಸದೀಯ ಪ್ರಜಾಪ್ರಭುತ್ವದಲ್ಲಿ ಆಡಳಿತದ ಸ್ಥಾನಗಳಿಗೆ ಪ್ರವೇಶಿಸುವುದು ಅತ್ಯಂತ ಕಠಿಣ ಮತ್ತು ಇಲ್ಲವೆಂದೇ ಹೇಳಬೇಕು. ಈ ದೆಸೆಯಲ್ಲಿ ರಾಜಕೀಯ ಮೀಸಲಾತಿ ಮಹತ್ವದ ಪಾತ್ರವನ್ನು ವಹಿಸಿದೆ. ಕನಿಷ್ಠ ಈ ಸಮುದಾಯಗಳು ತಮ್ಮ ಇರುವಿಕೆಯನ್ನು ಧ್ವನಿಸುವ ಅಲ್ಪಮಟ್ಟಿಗಾದರೂ ಆರ್ಥಿಕ- ರಾಜಕೀಯವಾಗಿ ಬೆಳೆಯುವ ಅವಕಾಶಗಳು ಉಂಟಾಗಿರುವುದು ಅತ್ಯಂತ ಗಮನಾರ್ಹ.

ಮೀಸಲಾತಿ ಎನ್ನುವುದು ಪ್ರಾತಿನಿಧ್ಯ ವಂಚಿತರಿಗೆ ಪ್ರಾತಿನಿಧ್ಯ ಖಾತ್ರಿ ಮಾಡುವ ಸಂವಿಧಾನಬದ್ಧ ಹಕ್ಕಾಗಿದೆ. ಈ ತಾತ್ವಿಕತೆಯ ಬಗೆಗೆ ಬಹುತೇಕರಿಗೆ ಭಿನ್ನಾಭಿಪ್ರಾಯ ಇರುವುದು ತೀರಾ ಕಡಿಮೆ. ಆದರೆ ಪ್ರಶ್ನೆ ಅದನ್ನು ಜಾರಿಗೊಳಿಸುವಾಗ ಆಗುತ್ತಿರುವ ಪರಿಣಾಮ, ಫಲಿತಾಂಶಗಳು ಏನು ಎಂಬುದಾಗಿದೆ. ಈಗ ಚಾಲ್ತಿಯಲ್ಲಿರುವ ಹಿಂದುಳಿದ ವರ್ಗಗಳ ಮೀಸಲಾತಿ ನಿಜಕ್ಕೂ ಎಲ್ಲ ಸಮುದಾಯಗಳಿಗೆ ದಕ್ಕಿದೆಯೇ ಮತ್ತು ಎಲ್ಲಾ ವಂಚಿತ ಸಮುದಾಯಗಳಿಗೆ ಅವಕಾಶ ಕಲ್ಪಿಸಲಾಗಿದೆಯೇ? ಮೀಸಲಾತಿಯ ಫಲದಿಂದ ಆಗಿರುವ ಸಾಮಾಜಿಕ ಆರ್ಥಿಕ ಬದಲಾವಣೆಗಳೇನು ಮತ್ತು ಅದು ಮುಂದುವರಿಯಬೇಕೇ ಎಂಬ ಪ್ರಶ್ನೆಗಳು ಸರ್ವೋಚ್ಚ ನ್ಯಾಯಾಲಯದ ಮುಂದೆ ಬಂದಾಗ ರಾಹುಲ್ ರಮೇಶ್  ವಾಘೆ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವಿನ ಪ್ರಕರಣ, 2021ರಲ್ಲಿ ವಿಕಾಸ ಕೃಷ್ಣ ಗಾವಳಿ ಮತ್ತು ಮಹಾರಾಷ್ಟ್ರ ಸರ್ಕಾರದ ಪ್ರಕರಣಗಳಲ್ಲಿ ನೀಡಿದ ಮಧ್ಯಂತರ ಆದೇಶದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಮುನ್ನ ಮೂರು ಸ್ಥರದ ಪರಿಶೀಲನೆ ನಡೆಸಿಯೇ ನಿರ್ಣಯಕ್ಕೆ ಬರಬೇಕು ಎಂದು ಆದೇಶಿಸಿದೆ. ಅದರಂತೆ 2022 ಜೂನ್ ರೊಳಗೆ ಈ ಕಾರ್ಯ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಎಸ್.ಸಿ, ಎಸ್.ಟಿ. ಹೊರತುಪಡಿಸಿ ಹಿಂದುಳಿದ ವರ್ಗಗಳ ಮೀಸಲಾತಿ ರದ್ದಾಗಿ ಅವು ಸಾಮಾನ್ಯ ಸ್ಥಾನಗಳಾಗಿ ಮಾರ್ಪಾಡಾಗುತ್ತವೆ ಎಂದು  ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ.

supreme court pti-1592048708ನ್ಯಾಯಾಲಯದ ಆದೇಶದಂತೆ ರಾಜ್ಯದೊಳಗಿನ ವಿವಿಧ ಸಮುದಾಯಗಳ ಸಾಮಾಜಿಕ-ಆರ್ಥಿಕ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಲು ಪ್ರತ್ಯೇಕ ಆಯೋಗವೊಂದನ್ನು ರಚಿಸಿ ವಿಚಾರಣೆ ನಡೆಸಿ ನಿಖರ ಅಂಕಿಸಂಖ್ಯೆ ಸಂಗ್ರಹಿಸುವುದು, ಆಯೋಗದ ಶಿಫಾರಸು ಆಧರಿಸಿ ಪ್ರತ್ಯೇಕವಾಗಿ ವಿವಿಧ ಸಮುದಾಯಗಳಿಗೆ ಮೀಸಲಾತಿ ನಿಗದಿ ಮಾಡುವುದು ಮತ್ತು ಇಂತಹ ಒಟ್ಟು ಮೀಸಲಾತಿ ಶೇ 50 ದಾಟದಂತೆ ಕ್ರಮವಹಿಸಬೇಕು ಎಂಬುದೇ ಮೂರು ಸ್ಥರದ ಪರಿಶೀಲನೆಯಾಗಿದೆ.

ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತಿ ಈ ಮೂರು ಹಂತದ ವ್ಯವಸ್ಥೆ ಜಾರಿಯಲ್ಲಿದೆ. ಸದಸ್ಯ ಸ್ಥಾನಗಳಿಗೆ ಮಾತ್ರವಲ್ಲ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನೀತಿ ಜಾರಿಯಲ್ಲಿದೆ. ಸದ್ಯ ರಾಜ್ಯದಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ಜಾರಿಗೊಳಿಸುವಲ್ಲಿ ಅನುಕೂಲಕರ ಸಂಗತಿಗಳೂ ಇವೆ. ಈಗಾಗಲೇ ಕಾಂತರಾಜು ರವರ ನೇತೃತ್ವದಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗವು ಆರ್ಥಿಕ, ಸಾಮಾಜಿಕ, ರಾಜಕೀಯ ಸ್ಥಿತಿಗತಿಗಳನ್ನು ಒಳಗೊಂಡ ಜಾತಿಗಣತಿ ಸಮೀಕ್ಷೆಯನ್ನು ನಡೆಸಿದ ವಿಸ್ತೃತವಾದ ಮಾಹಿತಿಗಳನ್ನು ಒಳಗೊಂಡ ವರದಿ ಇದ್ದು ಅದನ್ನು ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಬಳಿಯಿರುವ ಮಾಹಿತಿಗಳನ್ನು ಆಧರಿಸಿ ಅಗತ್ಯ ಕ್ರಮವಹಿಸಬಹುದು. ಆದರೆ ಆಯೋಗದ ಸಮೀಕ್ಷಾ ವರದಿಯನ್ನು ಇಲ್ಲಿಯವರೆಗೂ ಸರ್ಕಾರಗಳು ಅಂಗೀಕರಿಸಿಲ್ಲ. ಅಂದರೆ, ವಾಸ್ತವಿಕ ಸ್ಥಿತಿಯನ್ನು ಜನರೆದುರು ತೆರೆದಿಡುವ ನೈತಿಕ, ರಾಜಕೀಯ ಧೈರ್ಯ, ಇಚ್ಛಾಶಕ್ತಿ ತೋರಲೇ ಇಲ್ಲ. ಈಗಿನ ಬಿಜೆಪಿ ಸರ್ಕಾರವು ಬಾಯಿ ಬಡಾಯಿ ಮಾತನಾಡಿದರೂ ಪ್ರಾಮಾಣಿಕವಾಗಿ ಉತ್ಸುಕವಾಗಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬಾಕಿಯಾಗಿ ಒಂದು ವರ್ಷ ಕಳೆದಿದೆ. ಜನತೆಯ ಕೈಗೆ ಆಡಳಿತ ನೀಡಬೇಕಿರುವ ಸಂವಿಧಾನಿಕ ಹೊಣೆಗಾರಿಕೆಯಿಂದ ಈ ಸರ್ಕಾರ ನುಣುಚಿ ಕೊಳ್ಳುತ್ತಿದೆ ಮತ್ತು ವಂಚಿಸುತ್ತಿದೆ. ಅಂದರೆ ಪರೋಕ್ಷವಾಗಿ ಅಧಿಕಾರಶಾಹಿಯ ಮೂಲಕ ಆಡಳಿತ ಪಕ್ಷದ ಕೈಯಲ್ಲೇ ಎಲ್ಲಾ ಅಧಿಕಾರ ಕೇಂದ್ರೀಕರಿಸಿಕೊಂಡಿದೆ.

ಸುಪ್ರೀಂಕೋರ್ಟ್ ಆದೇಶ ಪಾಲಿಸುವಲ್ಲಿ ಸಕಾಲದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲು ರಾಜ್ಯದ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ವಹಿಸುವಲ್ಲಿ ಅದರ ಸೈದ್ಧಾಂತಿಕ ವಿರೋಧ ಮತ್ತು ಸಂಕುಚಿತ ರಾಜಕೀಯ ಲೆಕ್ಕಾಚಾರಗಳು ಇಲ್ಲದಿಲ್ಲ. ಸಂಘಪರಿವಾರದ ಅಂಗವಾಗಿರುವ ಬಿಜೆಪಿ ಪಕ್ಷವು ವಂಚಿತ ಸಮುದಾಯಗಳ ಮೀಸಲಾತಿ ನೀತಿಯ ವಿರೋಧಿ ಎನ್ನುವುದು ಜಗಜ್ಜಾಹೀರಾಗಿದೆ. ಹಿಂದೆ ವಿ.ಪಿ ಸಿಂಗ್ ರವರು ಪ್ರಧಾನಿಯಾಗಿದ್ದಾಗ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದ ಮಂಡಲ್ ಆಯೋಗದ ವರದಿಯನ್ನು ಅಂಗೀಕರಿಸಿದಾಗ ಅದನ್ನು ಹಿಂಸಾತ್ಮಕವಾಗಿ ವಿರೋಧಿಸಿತು. ಈಗಲೂ ಕೇಂದ್ರ ಸರ್ಕಾರ ಸಾಮಾಜಿಕ-ಆರ್ಥಿಕ ವಂಚಿತ ಸಮುದಾಯಗಳಿಗೆ ಇರುವ ಮೀಸಲಾತಿಯನ್ನು ದುರ್ಬಲಗೊಳಿಸುವ ಮತ್ತು ಅದನ್ನು ಅರ್ಥಹೀನಗೊಳಿಸುವ ಹತ್ತಾರು ಕ್ರಮಗಳನ್ನು ವಹಿಸುತ್ತಿದೆ. ಈಗಲೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದರೆ ಸರ್ಕಾರದ ವೈಫಲ್ಯಗಳಿಂದ ಬೇಸತ್ತಿರುವ ಜನ ಆಳುವ ಪಕ್ಷಕ್ಕೆ ವಿರೋಧವಾಗಿ ಜನಾದೇಶ ನೀಡಬಹುದು. ಹಾಗಾದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸುವ ಆತಂಕವೂ ಅದಕ್ಕಿದೆ. ಹೀಗಾಗಿ ತನ್ನ ರಾಜಕೀಯ ಅಧಿಕಾರದ ಆಸೆಗಾಗಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಬಲಿಕೊಡುವ ಅಪಾಯಕಾರಿ ನಿರ್ಧಾರ ಈಗಿನ ಬಿಜೆಪಿ ಸರ್ಕಾರಕ್ಕೆ ಇದ್ದಂತಿದೆ.

ಹಾಗಾಗಿ ಯಾವುದೇ ಕಾರಣಕ್ಕೆ ಚುನಾವಣೆಗಳನ್ನು ಮುಂದೂಡಬಾರದು. ಹಿಂದುಳಿದ ವರ್ಗಗಳಿಗೆ ಈಗಿರುವಂತೆ ಉಳಿಸಿ ಚುನಾವಣೆ ನಡೆಯಬೇಕು. ನ್ಯಾಯಾಲಯವೂ ಕ್ರಮವಹಿಸಬೇಕು.

ಹಾಗಾಗಿ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಸಮಾನತೆ, ಸಾಮಾಜಿಕ ನ್ಯಾಯ, ಸಂವಿಧಾನಾತ್ಮಕ ಪ್ರಜಾಪ್ರಭುತ್ವೀಯ ಮೌಲ್ಯಗಳನ್ನು ಸಂರಕ್ಷಿಸುವ ದಿಕ್ಕಿನಲ್ಲಿ ಜನತೆ ಹಾಗೂ ಜನಪರ ರಾಜಕೀಯ ಶಕ್ತಿಗಳು ತೀವ್ರ ಮಧ್ಯಪ್ರವೇಶ ಮಾಡುವ ಅಗತ್ಯವಿದೆ.

Leave a Reply

Your email address will not be published. Required fields are marked *