ಜಾತ್ಯತೀತ ವ್ಯವಸ್ಥೆ ನಾಶಕ್ಕೆ ಸಕಲ ಹುನ್ನಾರ ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ ಮಾರ್ಗ

ಪ್ರಕಾಶ್ ಕಾರಟ್

Prakash Karat
ಪ್ರಕಾಶ್ ಕಾರಟ್

ಭಗವದ್ಗೀತೆ ಒಂದು ಧಾರ್ಮಿಕ ಗ್ರಂಥವಾಗಿದೆ. ಅದು ಹಿಂದು ಧರ್ಮಾಧಾರಿತ ಪರಂಪರೆಗಳು ಹಾಗೂ ತತ್ವಶಾಸ್ತ್ರದ ಆಧಾರದಲ್ಲಿ ಜೀವನ ವಿಧಾನ ಹಾಗೂ ನಡವಳಿಕೆಯನ್ನು ಅನುಸರಿಸಲು ಬೋಧಿಸುತ್ತದೆ. ಆರ್‌ಎಸ್‌ಎಸ್-ಬಿಜೆಪಿ ಕೂಟ ಹೇಳುವಂತೆ ಅದು ಧಾರ್ಮಿಕ ಸಂದರ್ಭದಿಂದ ಹೊರತಾದ ನೀತಿಪಾಠಗಳ ಪಠ್ಯವೆಂದೇನೂ ಹೇಳಲು ಆಗುವುದಿಲ್ಲ. ಹಿಂದೂ ಧರ್ಮದೊಳಗಿನವರೇ ಕೆಲವರು ಗೀತೆಯ ಕೆಲವು ವಿಚಾರಗಳನ್ನು ವಿರೋಧಿಸುತ್ತಾರೆ.

2022-23ನೇ ಶೈಕ್ಷಣಿಕ ವರ್ಷದಿಂದ 6 ರಿಂದ 12ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಭಾಗವಾಗಿ ಭಗವದ್ಗೀತೆಯನ್ನು ಬೋಧಿಸಲಾಗುತ್ತದೆ ಎಂದು ಗುಜರಾತ್ ಶಿಕ್ಷಣ ಸಚಿವರು ಪ್ರಕಟಿಸಿರುವುದು ಪ್ರಭುತ್ವದ ಜಾತ್ಯತೀತ ತತ್ವದ ಖುಲ್ಲಂಖುಲ್ಲಾ ಉಲ್ಲಂಘನೆಯಾಗಿದೆ. ಸರ್ಕಾರ ನಡೆಸುವ ಶಾಲೆಗಳು ಯಾವುದೇ ರೀತಿಯ ಧಾರ್ಮಿಕ ಬೋಧನೆ ಮಾಡುವಂತಿಲ್ಲ ಎನ್ನುವುದು ಎಲ್ಲ ಜಾತ್ಯತೀತ ಪ್ರಭುತ್ವಗಳ ಒಂದು ಮೂಲಭೂತ ಸಿದ್ಧಾಂತವಾಗಿದೆ. ಅಮೆರಿಕ, ಫ್ರಾನ್ಸ್, ಜಪಾನ್ ಮತ್ತಿತರ ಹಲವು ದೇಶಗಳಲ್ಲಿ ಈ ಸಿದ್ಧಾಂತವನ್ನು ಅನುಸರಿಸಲಾಗುತ್ತಿದೆ. ಯಾವುದೇ ಬಗೆಯ ಧಾರ್ಮಿಕ ಶಿಕ್ಷಣ ನೀಡಲು ಖಾಸಗಿ ಶಿಕ್ಷಣ ಸಂಸ್ಥೆಗಳು ಸ್ವತಂತ್ರರು; ಆದರೆ ಸರ್ಕಾರಿ ಸಂಸ್ಥೆಗಳಲ್ಲಿ ಹಾಗೆ ಮಾಡುವಂತಿಲ್ಲ.

ಭಗವದ್ಗೀತೆ ಒಂದು ಧಾರ್ಮಿಕ ಗ್ರಂಥವಾಗಿದೆ. ಅದು ಹಿಂದು ಧರ್ಮಾಧಾರಿತ ಪರಂಪರೆಗಳು ಹಾಗೂ ತತ್ವಶಾಸ್ತ್ರದ ಆಧಾರದಲ್ಲಿ ಜೀವನ ವಿಧಾನ ಹಾಗೂ ನಡವಳಿಕೆಯನ್ನು ಅನುಸರಿಸಲು ಬೋಧಿಸುತ್ತದೆ. ಆರ್‌ಎಸ್‌ಎಸ್-ಬಿಜೆಪಿ ಕೂಟ ಹೇಳುವಂತೆ ಅದು ಧಾರ್ಮಿಕ ಸಂದರ್ಭದಿಂದ ಹೊರತಾದ ನೀತಿಪಾಠಗಳ ಪಠ್ಯವೆಂದೇನೂ ಹೇಳಲು ಆಗುವುದಿಲ್ಲ. ಹಿಂದೂ ಧರ್ಮದೊಳಗಿನವರೇ ಕೆಲವರು ಗೀತೆಯ ಕೆಲವು ವಿಚಾರಗಳನ್ನು ವಿರೋಧಿಸುತ್ತಾರೆ. ಚಾತುರ್ವರ್ಣ ಆಧಾರಿತ ಜಾತಿ ಪದ್ಧತಿ ಪವಿತ್ರವಾದುದು ಎಂದು ಹೇಳುವ ಕರ್ಮ ಸಿದ್ಧಾಂತದ ಬೋಧನೆಗೆ ಹಲವರ ವಿರೋಧವಿದೆ. ಆದರೆ ಗೀತೆಯು ಗೊಡ್ಡುತನದಿಂದ ಕೂಡಿದ್ದೇ ಮತ್ತು ಅನೇಕ ಪ್ರತಿಗಾಮಿ ಚಿಂತನೆಗಳನ್ನು ಹೊಂದಿದೆಯೇ ಎನ್ನುವುದು ಇಲ್ಲಿ ಮುಖ್ಯವಲ್ಲ. ಆದರೆ ಒಂದು ನಿರ್ದಿಷ್ಟ ಬಗೆಯ ಧಾರ್ಮಿಕ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ಕಲಿಸುವುದು ಎಷ್ಟು ಸರಿ ಎನ್ನುವುದು ಪ್ರಮುಖ ಪ್ರಶ್ನೆಯಾಗಿದೆ.

ಸಂವಿಧಾನ ಹೇಳುವುದೇನು?

ಭಾರತದ ಸಂವಿಧಾನದ ಮೂಲಭೂತ ಹಕ್ಕುಗಳು ಅಧ್ಯಾಯದ ಆರ್ಟಿಕಲ್ 28 (1) ಹೀಗೆ ಹೇಳುತ್ತದೆ: `ಸರ್ಕಾರಿ ಹಣದಲ್ಲಿ ನಡೆಯುವ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಶಿಕ್ಷಣ ನೀಡಬಾರದು’. ಸರ್ಕಾರ ನಡೆಸದ, ಆದರೆ ಸರ್ಕಾರ ಮಾನ್ಯ ಮಾಡಿರುವ ಅಥವಾ ಸರ್ಕಾರದ ಆರ್ಥಿಕ ನೆರವು ಪಡೆಯುವ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಧಾರ್ಮಿಕ ಬೋಧನೆ ಮಾಡಿದರೆ, ಮೈನರ್ ಆಗಿದ್ದಲ್ಲಿ ಆ ವಿದ್ಯಾರ್ಥಿಯ ಹೆತ್ತವರು ಅಥವಾ ಪೋಷಕರು ಅನುಮತಿ ನೀಡದಿದ್ದರೆ ಅಂಥ ವಿದ್ಯಾರ್ಥಿ ಅಂಥ ಯಾವುದೇ ಧಾರ್ಮಿಕ ಬೋಧನೆ ಅಥವಾ ಧಾರ್ಮಿಕ ಪೂಜೆಗಳಲ್ಲಿ ಭಾಗವಹಿಸುವಂತೆ ಮಾಡುವಂತಿಲ್ಲ ಎಂದೂ ಈ ಸೆಕ್ಷನ್ ಹೇಳುತ್ತದೆ.

ಆದ್ದರಿಂದ ಭಗವದ್ಗೀತೆ ಕಲಿಸುವ ಕುರಿತು ಗುಜರಾತ್ ಸರ್ಕಾರ ಕೈಗೊಂಡಿರುವ ನಿರ್ಧಾರ ಸಂವಿಧಾನದಲ್ಲಿ ಅಡಕವಾಗಿರುವ ಮೂಲಭೂತ ಸಿದ್ಧಾಂತಕ್ಕೇ ವಿರುದ್ಧವಾಗಿದೆ. ಸರ್ಕಾರದ ಹಣಕಾಸು ನೆರವು ಪಡೆಯುವ ಸಂಸ್ಥೆಗಳು ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಶಿಕ್ಷಣ ಕೊಡುವಂತಿಲ್ಲ ಎನ್ನುವುದೇ ಆ ತತ್ವವಾಗಿದೆ.

ಕರ್ನಾಟಕದ ಅಪಾಯ

ಗುಜರಾತ್‌ನ ಈ ಮಾರ್ಗವನ್ನು ಬಿಜೆಪಿ ಆಡಳಿತದ ಇತರ ರಾಜ್ಯಗಳೂ ಅನುಸರಿಸಲಿವೆ. ಶಿಕ್ಷಣ ತಜ್ಞರೊಂದಿಗೆ ಸಮಾಲೋಚಿಸಿದ ನಂತರ, ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದೆಂದು ಕರ್ನಾಟಕದ ಪ್ರಾಥಮಿಕ ಶಿಕ್ಷಣ ಮಂತ್ರಿ ಈಗಾಗಲೇ ಪ್ರಕಟಿಸಿದ್ದಾರೆ. `ಭಗವದ್ಗೀತೆ ಹಿಂದೂಗಳಿಗೆ ಮಾತ್ರವಲ್ಲದೆ ಎಲ್ಲರಿಗಾಗಿ ಇದೆ’ ಎಂದವರು ಫರ್ಮಾನು ಹೊರಡಿಸಿದ್ದಾರೆ! ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಿದ್ದು ಕರ್ನಾಟಕದ ಈ ಸರ್ಕಾರವೇ ಆಗಿದೆ.

`ಭಗವದ್ಗೀತೆ ನಮಗೆ ನೈತಿಕತೆಯನ್ನು ಬೋಧಿಸುತ್ತದೆ. ಪ್ರತಿ ರಾಜ್ಯ ಸರ್ಕಾರ ಅದನ್ನು ಕಲಿಸುವುದನ್ನು ಪರಿಶೀಲಿಸ ಬಹುದು’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಹೇಳಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಹಿಂದೂ ಧಾರ್ಮಿಕ ಗ್ರಂಥಗಳನ್ನು ಬೋಧಿಸುವುದು ಭಾರತೀಯ ಪ್ರಭುತ್ವವನ್ನು ಅಜಾತ್ಯತೀತಗೊಳಿಸುವ ಆರ್‌ಎಸ್‌ಎಸ್-ಬಿಜೆಪಿಯ ಒಟ್ಟಾರೆ ಯೋಜನೆಯ ಭಾಗವಾಗಿದೆ. ಶಿಕ್ಷಣ ಪದ್ಧತಿಯಲ್ಲಿ `ಭಾರತೀಯ ಸಂಸ್ಕೃತಿ ಮತ್ತು ಜ್ಞಾನ ವ್ಯವಸ್ಥೆಗಳನ್ನು’ ಸೇರಿಸುವಂತೆ ಹೊಸ ಶಿಕ್ಷಣ ನೀತಿ ಶಿಫಾರಸು ಮಾಡಿರುವುದನ್ನು ಉಲ್ಲೇಖಿಸಿ ಗುಜರಾತ್ ಶಿಕ್ಷಣ ಮಂತ್ರಿ ಶಾಲಾ ಪಠ್ಯಗಳಲ್ಲಿ ಗೀತೆ ಸೇರಿಸುವ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರಭುತ್ವದ ಇತರ ಎಲ್ಲ ರಂಗಗಳಲ್ಲಿ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಿಂದೂ ಧಾರ್ಮಿಕ ಸಂಕೇತಗಳ ಬಳಕೆ ಮತ್ತು ಹಿಂದೂ ಪೂಜಾ ಸ್ಥಳಗಳ ವಿಸ್ತರಣೆಗೆ ಸರ್ಕಾರಿ ಹಣವನ್ನು ನೀಡುವುದು ಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ. ಪ್ರಧಾನ ಮಂತ್ರಿ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟಿಸಿದ್ದು ಇದಕ್ಕೆ ದೊಡ್ಡ ಉದಾಹರಣೆಯಾಗಿದೆ.

ಪ್ರಭುತ್ವವು ಬಹುಸಂಖ್ಯಾತರ ಧರ್ಮವನ್ನು ಪೋಷಿಸುವುದು ಹಾಗೂ ಸರ್ಕಾರಿ ಸಂಸ್ಥೆಗಳು ಮತ್ತು ವ್ಯವಸ್ಥೆಗಳಲ್ಲಿ ಅದಕ್ಕೆ ಅನುಕೂಲ ಕಲ್ಪಿಸುವುದರಿಂದ ಜಾತ್ಯತೀತತೆಯ ಈಗ ಅಳಿದುಳಿದಿರುವ ಅಲ್ಪಸ್ವಲ್ಪ ಅಂಶವೂ ನಾಶವಾಗಲಿದೆ.

ಬಿಜೆಪಿ ರಾಜ್ಯ ಸರ್ಕಾರಗಳು `ಲವ್ ಜಿಹಾದ್’, ಮತಾಂತರ ವಿರುದ್ಧ ರೂಪಿಸಿರುವ ಕಾನೂನುಗಳು ಹಾಗೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ತರಾತುರಿಯಲ್ಲಿ ಗೋಹತ್ಯೆ ನಿಷೇಧ ಮಾಡಿದ್ದು ಇವೆಲ್ಲವೂ ಈ ಹುನ್ನಾರದ ಹೊರಗೆ ಎದ್ದು ಕಾಣುವಂಥ ಭಾಗವಾಗಿದೆ. ಪೌರತ್ವ ತಿದ್ದುಪಡಿ ಕಾನೂನು(ಸಿಎಎ) ಎಂಬ ಕೇಂದ್ರೀಯ ಕಾನೂನು ಪೌರತ್ವಕ್ಕೆ ಧಾರ್ಮಿಕ ಮಾನದಂಡವನ್ನು ಅನ್ವಯಿಸುವ ಉದ್ದೇಶ ಹೊಂದಿದೆ.

ಕಾಂಗ್ರೆಸ್, ಎಎಪಿ ಎಡಬಿಡಂಗಿತನ

ಗುಜರಾತಿನಲ್ಲಿ ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸುವುದನ್ನು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಸ್ವಾಗತಿಸಿದೆ. `ಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಸುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಮೊದಲು ರಾಜ್ಯ ಸರ್ಕಾರ ಗೀತೆಯಿಂದ ಪಾಠ ಕಲಿಯುವುದು ಅಗತ್ಯ’ ಎಂದು ಕಾಂಗ್ರೆಸ್ ವಕ್ತಾರರು ಹೇಳಿದ್ದಾರೆ. ಕಾಂಗ್ರೆಸ್ ಜೊತೆಗೆ ಸ್ಪರ್ಧೆಯೋ ಎನ್ನುವಂತೆ ಆಮ್ ಆದ್ಮಿ ಪಕ್ಷದ(ಆಪ್) ವಕ್ತಾರ ಕೂಡ ಗುಜರಾತ್ ನಿರ್ಧಾರವನ್ನು ಸ್ವಾಗತಿಸಿ, `ಇದರಿಂದ ವಿದ್ಯಾರ್ಥಿಗಳಿಗೆ ಲಾಭವಾಗುತ್ತದೆ’ ಎಂದಿದ್ದಾರೆ.

ಗುಜರಾತಿನಲ್ಲಿ ಪ್ರತಿಪಕ್ಷಗಳ ಪ್ರತಿಕ್ರಿಯೆಯು ಹೊಸ ವಾಸ್ತವತೆಯನ್ನು ಎತ್ತಿ ತೋರಿಸುತ್ತದೆ. ಹಿಂದೂತ್ವವು ನಿಧಾನವಾಗಿ ಪ್ರಾಬಲ್ಯ ಗಳಿಸುತ್ತಿದೆ ಎನ್ನುವುದೇ ಆ ವಾಸ್ತವತೆ. ಎಡ ಮತ್ತು ಜಾತ್ಯತೀತ ಶಕ್ತಿಗಳು; ಹಾಗೂ ಭಾರತ ಒಂದು ಜಾತ್ಯತೀತ ರಾಷ್ಟ್ರವಾಗಿ ಇರುವುದನ್ನು ನೋಡಬಯಸುವ ಎಲ್ಲರೂ ಹಿಂದೂತ್ವದ ದೃಷ್ಟಿಕೋನಕ್ಕೆ ಪರ್ಯಾಯ ರೂಪಿಸುವ ಹೋರಾಟದ ವೇಳೆ ಈ ವಾಸ್ತವ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಅನು: ವಿಶ್ವ

Leave a Reply

Your email address will not be published. Required fields are marked *