ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಾಗೂ ಗ್ರಾಮೀಣ ಪ್ರತಿಭಟನೆಗೆ ಎಡ ಮತ್ತು ಜಾತ್ಯಾತೀತ ಏಳು ಪಕ್ಷಗಳ ಬೆಂಬಲ

ಭಾರತ ಉಳಿಸಿ-ಜನತೆಯನ್ನು ರಕ್ಷಿಸಿ! ಕಾರ್ಪೊರೇಟ್ ಕೃಷಿ ಕಾಯ್ದೆಗಳನ್ನು ವಾಪಾಸು ಪಡೆಯಿರಿ. ರೈತರು ಹಾಗೂ ಕೂಲಿಕಾರರನ್ನು ರಕ್ಷಿಸಿರಿ! ಎಂಬ ಘೋಷಣೆಗಳಡಿಯಲ್ಲಿ ಮಾರ್ಚ್‍ 28,29-2022 ರಂದು ಎರಡು ದಿನಗಳ ಕಾಲ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಾಗೂ ಗ್ರಾಮೀಣ ಪ್ರತಿಭಟನೆಗೆ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿವೆ.

ಇದೊಂದು ರೈತ-ಕಾರ್ಮಿಕರು, ವಿದ್ಯಾರ್ಥಿ, ಯುವಜನರು ಮಹಿಳೆಯರು ಮತ್ತು ದಲಿತರು ಒಟ್ಟಾಗಿ ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಿ ಒಕ್ಕೂಟ ಹಾಗೂ ರಾಜ್ಯ ಸರಕಾರಗಳ ವಿರುದ್ದ ನಡೆಸುತ್ತಿರುವ ಒಂದು ಐತಿಹಾಸಿಕ ಹೋರಾಟವಾಗಿದೆ. ಇದರಲ್ಲಿ ದೇಶದ ಅತಿ ದೊಡ್ಡ ಜನ ಸಮುದಾಯ ಭಾಗಿಯಾಗಲಿದೆ. ಕರ್ನಾಟಕದಲ್ಲಿ ಈ ಚಳುವಳಿಯನ್ನು ಯಶಸ್ವಿಗೊಳಿಸಲು ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ- ಕರ್ನಾಟಕ ಹಾಗೂ ಸಂಯುಕ್ತ ಹೋರಾಟ-ಕರ್ನಾಟಕ ಮುಂದಾಗಿವೆ.

ಸದರಿ ಐತಿಹಾಸಿಕ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಾಗೂ ಗ್ರಾಮೀಣ ಪ್ರತಿಭಟನೆಗೆ ಕರ್ನಾಟಕ ರಾಜ್ಯದ ಎಡ ಮತ್ತು ಜಾತ್ಯಾತೀತ ಪ್ರಜಾಸತ್ತಾತ್ಮಕ ಏಳು ಪಕ್ಷಗಳು ತಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿವೆ ಮತ್ತು ಸದರಿ ಮುಷ್ಕರ ಹಾಗೂ ಗ್ರಾಮೀಣ ಪ್ರತಿಭಟನೆಗಳಲ್ಲಿ ತಮ್ಮ ಪಕ್ಷಗಳ ಕಾರ್ಯಕರ್ತರು ಹಾಗೂ ಸದಸ್ಯರು ಬೆಂಬಲಿಗರು ಪಾಲ್ಗೊಂಡು ಯಶಸ್ವಿಗೊಳಿಸಲು ಕರೆ ನೀಡಿವೆ.

ದೇಶವನ್ನು ಕಾರ್ಪೋರೇಟ್ ಲೂಟಿಗೆ ವ್ಯಾಪಕವಾಗಿ ತೆರಯುತ್ತಿರುವ ಮತ್ತು ಜನತೆಯನ್ನು ಒಡೆದಾಳಲು ಕೋಮುವಾದಿ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಹಾಗೂ ಕೋವಿಡ್ ಮತ್ತು ಆರ್ಥಿಕ ಬಿಕ್ಕಟ್ಟಿನ ಸಂಕಷ್ಠದಲ್ಲಿರುವ ಜನತೆಯ ಮೇಲೆ ವ್ಯಾಪಕ ಬೆಲೆ ಏರಿಕೆಯ ಹೊರೆಯನ್ನು ಹೇರುತ್ತಿರುವ, ಬಿಜೆಪಿ ನೇತೃತ್ವದ ಒಕ್ಕೂಟ ಸರಕಾರ ಹಾಗೂ ಕರ್ನಾಟಕ ರಾಜ್ಯ ಸರಕಾರಗಳ ಜನ ವಿರೋಧಿ ನಡೆಗಳನ್ನು ವಿರೋಧಿಸಿ ಈ ಮುಷ್ಕರ ಮತ್ತು ಗ್ರಾಮೀಣ ಪ್ರತಿಭಟನೆ ನಡೆಯುತ್ತಿದೆ. ಇದೊಂದು ನ್ಯಾಯಯುತ ಮುಷ್ಕರ ಹಾಗೂ ಗ್ರಾಮೀಣ ಪ್ರತಿಭಟನೆಯಾಗಿದ್ದು ಸದರಿ ಎರಡು ದಿನಗಳ ಕಾಲ ನಡೆಯುವ ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ ಎಡ ಮತ್ತು ಪ್ರಜಾಸತ್ತಾತ್ಮಕ ಏಳು ಪಕ್ಷಗಳು ರಾಜ್ಯದ ಜನತೆಗೆ ಕರೆ ನೀಡುತ್ತವೆ.

ಹಕ್ಕೊತ್ತಾಯಗಳು

  1. ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳ ಜೊತೆಗೆ ವಿದ್ಯುತ್ (ತಿದ್ದುಪಡಿ) ಮಸೂದೆಯನ್ನು ವಾಪಸ್ಸು ಪಡೆಯಬೇಕು. ಶಾಸನಬದ್ಧ ಬೆಂಬಲ ಬೆಲೆ ಕಾಯ್ದೆರೂಪಿಸಬೇಕು ಹಾಗೂ ರೈತರು ಹಾಗೂ ಕೂಲಿಕಾರರ ಮತ್ತು ಸ್ತ್ರೀ ಶಕ್ತಿ ಮತ್ತು ಸ್ವ ಸಹಾಯ ಸಂಘಗಳ ಎಲ್ಲ ಸಾಲಗಳನ್ನು ಮನ್ನ ಮಾಡಬೇಕು. ಅದೇ ರೀತಿ, ಪ್ರಕೃತಿ ವಿಕೋಪಗಳಿಂದಾಗುವ ನಷ್ಠದಿಂದಾಗಿ ಉಂಟಾಗುವ ಸಾಲವನ್ನು ಸಾಗಿಂದಾಗ್ಗೆ ಮನ್ನ ಮಾಡಲು ಋಣ ಮುಕ್ತ ಕಾಯ್ದೆಯನ್ನು ಜಸರಿಗೆ ತರಬೇಕು.
  2. ರಾಜ್ಯ ಸರ್ಕಾರ ರೈತ ವಿರೋಧಿ ಕಾಯ್ದೆಗಳಾದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ-2020, ಎಪಿಎಂಸಿ ತಿದ್ದುಪಡಿ ಕಾಯ್ದೆ-2020 ಹಾಗೂ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ-2020 ಗಳನ್ನು ಮತ್ತು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯನ್ನು ವಾಪಾಸು ಪಡೆಯಬೇಕು. ಬೀಳು ಭೂಮಿ ಅಭಿವೃದ್ದಿ ಹೆಸರಿನಲ್ಲಿ ಕಾರ್ಪೊರೇಟ್ ಗುತ್ತಿಗೆ ಕೃಷಿಗೆ ಕ್ರಮವಹಿಸುವುದನ್ನು ನಿಲ್ಲಿಸಬೇಕು. ಬಡವರ ಬಗರ್ ಹುಕುಂ ಸಾಗುವಳಿ ಹಾಗೂ ಅರಣ್ಯ ಭೂಮಿ ಹಕ್ಕುಪತ್ರಗಳನ್ನು ವಿತರಿಸಬೇಕು.
  3. ಕಾರ್ಪೊರೇಟ್ ಬಂಡವಾಳಪರ ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು. ಕಾರ್ಮಿಕರ ಹಕ್ಕುಗಳನ್ನು ಉಳಿಸಬೇಕು.
  4. ದೇಶ ಹಾಗೂ ರಾಜ್ಯದಲ್ಲಿ ಸೌಹಾರ್ಧತೆ ಸಂರಕ್ಷಣೆಗಾಗಿ ಅಗತ್ಯ ಕ್ರಮವಹಿಸಬೇಕು. ಸರಕಾರಗಳೇ ಕಾಯ್ದೆಗಳ ಮೂಲಕ ಹಾಗೂ ನೆರವುಗಳ ಮೂಲಕ ಕೋಮು ಆಧಾರದಲ್ಲಿ ತಾರತಮ್ಯ ಎಸಗುವುದನ್ನು ನಿಲ್ಲಿಸಬೇಕು. ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದಲ್ಲಿ ವಿದ್ಯಾರ್ಥಿನಿಯರ ಶಿಕ್ಷಣ ಮೊಟಕುಗೊಳ್ಳದಂತೆ ಕ್ರಮವಹಿಸಬೇಕು. ಹಬ್ಬಗಳು ಹಾಗೂ ಜಾತ್ರೆಗಳ ಸಂದರ್ಭದಲ್ಲಿ ವ್ಯಾಪರದಲ್ಲಿ ತೊಡಗಲು ಅಲ್ಪ ಸಂಖ್ಯಾತರಿಗೆ ಅವಕಾಶ ನೀಡದೇ ತಾರತಮ್ಯ ಎಸಗುವುದನ್ನು ತಡೆಯಬೇಕು.
  5. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಬೀಜ, ಕ್ರಿಮಿನಾಶಕ, ರಸಾಯನಿಕ ಗೊಬ್ಬರ ಹಾಗೂ ಅಗತ್ಯ ವಸ್ತುಗಳ ಮತ್ತು ಔಷಧಿ ಬೆಲೆಗಳನ್ನು ನಿಯಂತ್ರಿಸಬೇಕು. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಕೇಂದ್ರೀಯ ಅಬಕಾರಿ ತೆರಿಗೆಯನ್ನು ಕಡಿಮೆ ಮಾಡಬೇಕು.
  6. ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಪ್ರತಿ ಕುಟುಂಬಕ್ಕೂ ಮಾಸಿಕ ರೂ.7,500 ನೇರ ನಗದು ವರ್ಗಾವಣೆ ಮಾಡಬೇಕು ಹಾಗೂ ಪ್ರತಿ ವ್ಯಕ್ತಿಗೂತಲಾ 10 ಕೆಜಿ ಆಹಾರ ಧಾನ್ಯಗಳನ್ನು ನೀಡಬೇಕು
  7. ದೇಶದ ಸಂಪತ್ತಾದ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು.
  8. ಅಸಂಘಟಿತ ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತೆ ಒದಗಿಸಬೇಕು. ಕೋವಿಡ್ ಲಾಕ್ಡೌನ್ ಸಂಕಷ್ಟಕ್ಕೆ ಒಳಗಾದ ಎಲ್ಲರಿಗೆ ಪರಿಹಾರ ಒದಗಿಸಬೇಕು.
  9. ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು. ಕೆಲಸದ ದಿನಗಳನ್ನು 200 ದಿನಗಳಿಗೆ ಮತ್ತು ಕೂಲಿಯನ್ನು 750 ರೂಗಳಿಗೆ ಹೆಚ್ಚಿಸಬೇಕು. ಹೆಚ್ಚಿನ ಅನುದಾನ ಬಜೆಟ್‌ನಲ್ಲಿ ನೀಡಬೇಕು.
  10. ಪರಿಶಿಷ್ಠ ಜಾತಿ ಹಾಗೂ ಪಂಗಡಗಳ ಜನ ಸಂಖ್ಯೆಗನುಗುಣವಾಗಿ ಅನುದಾನ ಒದಗಿಸುವ ಉಪಯೋಜನೆಗಳ ಕಾಯ್ದೆಯನ್ನು ಕೇಂದ್ರ ಸರಕಾರ ಅಂಗೀಕರಿಸಿ ಜಾರಿಗೊಳಿಸಬೇಕು. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ದೌರ್ಜನ್ಯ ತಡೆ ತಿದ್ದುಪಡಿ ಕಾಯ್ಯೆಯನ್ನು ಅಂಗೀಕರಿಸಬೇಕು. ಖಾಸಗೀರಂಗಕ್ಕೂ ಮೀಸಲಾತಿಯನ್ನು ವಿಸ್ಥರಿಸಬೇಕು.
  11. ಬ್ಯಾಕ್ ಲಾಗ್ ಹುದ್ದೆಗಳು ಸೇರಿದಂತೆ ಖಾಲಿ ಇರುವ ಎಲ್ಲ ಉದ್ಯೋಗಗಳನ್ನು ಭರ್ತಿ ಮಾಡಬೇಕು. ಅಲ್ಲಿಯವರೆಗೆ ವಿದ್ಯಾವಂತ ಎಲ್ಲ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ಮಾಸಿಕ 10,000 ರೂಗಳನ್ನು ನೀಡಬೇಕು.
  12. ಕೋವಿಡ್‌ ಎದುರಿಸಲು ಕೆಲಸ ಮಾಡುತ್ತಿರುವ ಮುಂಚೂಣಿ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಮತ್ತು ವಿಮಾ ಸೌಲಭ್ಯಒದಗಿಸಬೇಕು.
  13. ಅಂಗನವಾಡಿ, ಆಶಾ, ಬಿಸಿಯೂಟ ಮತ್ತು ಇತರೆ ಸ್ಕೀಂ ನೌಕರರಿಗೆ ಶಾಸನಬದ್ಧ ಕನಿಷ್ಟ ವೇತನ ಮತ್ತು ಸಾಮಾಜಿಕ ಭದ್ರತೆ ಜಾರಿ ಮಾಡಬೇಕು.
  14. ರಾಷ್ಟ್ರೀಯ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಶ್ರೀಮಂತರಿಗೆ ಆಸ್ತಿ ತೆರಿಗೆ ಇತ್ಯಾದಿಗಳನ್ನು ವಿಧಿಸುವ ಮೂಲಕ ಕೃಷಿ, ಶಿಕ್ಷಣ, ಆರೋಗ್ಯ ಮತ್ತುಇತರೆ ನಿರ್ಣಾಯಕ ಸಾರ್ವಜನಿಕ ಸೇವೆಗಳಿಗೆ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಬೇಕು.
  15. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್.ಪಿ.ಎಸ್.) ರದ್ದುಗೊಳಿಸಿ, ಹಳೆ ಪಿಂಚಣಿ ವ್ಯವಸ್ಥೆಯನ್ನು ಪುನರ್ ಸ್ಥಾಪಿಸಬೇಕು.
  16. ರೂ.26 ಸಾವಿರ ಸಮಾನ ಕನಿಷ್ಟ ವೇತನಕ್ಕಾಗಿ, ಸಂಘ ಮಾನ್ಯತೆ, ಗುತ್ತಿಗೆ ಮುಂತಾದ ಖಾಯಂಯೇತರರ ಖಾಯಂಗೆ, ಅಸಂಘಟಿತರಿಗೆ ಭವಿಷ್ಯನಿಧಿಗೆ ಶಾಸನ ರೂಪಿಸಬೇಕು.

ಶುಭಾಶಯಗಳೊಂದಿಗೆ,

ಯು. ಬಸವರಾಜ, ರಾಜ್ಯ ಕಾರ್ಯದರ್ಶಿ, ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)

ಸಾತಿ ಸುಂದರೇಶ್, ರಾಜ್ಯ ಕಾರ್ಯದರ್ಶಿ, ಭಾರತ ಕಮ್ಯುನಿಸ್ಟ್ ಪಕ್ಷ-ಸಿಪಿಐ

ಕೆ‌. ಉಮಾ, ರಾಜ್ಯ ಕಾರ್ಯದರ್ಶಿ, ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯ(ಕಮ್ಯುನಿಸ್ಟ್‌)-ಎಸ್‌ಯುಸಿಐ(ಸಿ)

ಕ್ಲಿಫ್ಟನ್ ರೋಜಾರಿಯೋ, ರಾಜ್ಯ ಕಾರ್ಯದರ್ಶಿ, ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ, ಲೆನಿನ್ ವಾದಿ-ಲಿಬರೇಷನ್)-ಸಿಪಿಐ(ಎಂಎಲ್‌)

ಜಿ.ಆರ್. ಶಿವಶಂಕರ್, ರಾಜ್ಯ ಕಾರ್ಯದರ್ಶಿ, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್-ಎಐಎಫ್‌ಬಿ

ಚಾಮರಸ ಮಾಲೀ ಪಾಟೀಲ, ಅಧ್ಯಕ್ಷರು, ಸ್ವರಾಜ್‌ ಇಂಡಿಯಾ

ಮೋಹನ್ ರಾಜ್, ಅಧ್ಯಕ್ಷರು, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ-ಆರ್‌ಪಿಐ

Leave a Reply

Your email address will not be published. Required fields are marked *