ಪಠ್ಯ ಪರಿಷ್ಕರಣೆ: ವಿಷವಿಕ್ಕುವ ಹುನ್ನಾರ ಹಿಮ್ಮೆಟ್ಟಿಸಬೇಕು

ಸಂಘಪರಿವಾರದ ಪುಂಡಾಟಿಕೆಗಳಿಗೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದ್ದ ಸರಕಾರ ಈಗ ಪಠ್ಯ ಬದಲಾವಣೆಗೆ ನೇರವಾಗಿ ಕೈ ಹಾಕಿದೆ. ಶೈಕ್ಷಣಿಕ ಪಠ್ಯಗಳ ಸಿದ್ಧತೆಗೆ ಇರುವ ಮೂಲ ನಿರ್ದೇಶನಗಳ ತತ್ವವನ್ನು ನಗ್ನವಾಗಿ ಉಲ್ಲಂಘಿಸಿ ಆರ್.ಎಸ್.ಎಸ್.ನ ರಾಜಕೀಯ ಅಜೆಂಡಾಗಳ ಜಾರಿಗೆ ಮಣೆ ಹಾಕಿರುವುದು ಸಮಾಜದ ಸ್ವಾಸ್ಥ್ಯ ಬಯಸುವ ಶಿಕ್ಷಣ ಪ್ರೇಮಿಗಳ ಆಕ್ರೋಶಕ್ಕೂ ಕಾರಣವಾಗಿದೆ. ರಾಜಕೀಯ ಪಕ್ಷವೊಂದು ಆಡಳಿತದಲ್ಲಿ ಬದಲಾದ ಕೂಡಲೇ ಪಠ್ಯಕ್ರಮ ಅದರ ವಸ್ತು ಮತ್ತು ತಾತ್ವಿಕತೆಯ ಸೂತ್ರಗಳನ್ನು ಬದಲಾಯಿಸಬಹುದೇ ಎನ್ನುವ ಗಂಭೀರ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ.

ಹತ್ತನೆಯ ತರಗತಿಗಳ ಕನ್ನಡ ವಿಷಯದಲ್ಲಿನ ಕೆಲವು ಮಹತ್ವದ ಪಾಠಗಳನ್ನು ಕಿತ್ತು ಹಾಕಿ ಆ ಜಾಗಕ್ಕೆ ತರಲಿಚ್ಚಿಸಿರುವ ಸೂಚಿತ ಪಠ್ಯಗಳು ಸರಕಾರ ವಾದಿಸುತ್ತಿರುವ ನಿಲುವಿಗೆ ಸ್ವಯಂ ವ್ಯತಿರಿಕ್ತವಾಗಿವೆ ಹಾಗೂ ಅಂತರ್ ವೈರುಧ್ಯಗಳಿಂದ ಕೂಡಿದೆ. ಈ ಪರಿಷ್ಕರಣೆಯಲ್ಲಿ ಶಿಕ್ಷಣವನ್ನು ಸುಧಾರಿಸುವ ಯಾವ ಉದ್ದೇಶವೂ ಇಲ್ಲ. ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಅದ್ಯಕ್ಷತೆಯ ಪಠ್ಯ ಪರಿಷ್ಕರಣಾ ಸಮಿತಿಯು ಅಳವಡಿಸಿದ್ದ `ಲಿಂಗತ್ವ ಸಮಾನತೆ, ಪ್ರಾದೇಶಿಕ ಪ್ರಾತಿನಿಧ್ಯ, ರಾಷ್ಟ್ರೀಯ ಸಮಗ್ರತೆ, ಸಾಮಾಜಿಕ ಸಾಮರಸ್ಯ’ ಈ ತತ್ವಗಳ ಹಿನ್ನೆಲೆಯಲ್ಲಿ  ಸಮಿತಿಯು ಪಠ್ಯಪುಸ್ತಕವನ್ನು ಪರಿಷ್ಕರಿಸಿತ್ತು. ಆದರೆ ‘ಭಾಷಾ ಪಠ್ಯವಿರುವುದು ಅತ್ಯುತ್ತಮವಾದ ಪ್ರಾತಿನಿಧಿಕ ಪಠ್ಯವನ್ನು ಕೊಡುವುದಕ್ಕಾಗಿಯೇ ಹೊರತು ಸಾಮಾಜಿಕ ನ್ಯಾಯ, ಲಿಂಗ ಸಮಾನತೆ, ಇತ್ಯಾದಿ ಅಂಶಗಳನ್ನು ತುರುಕುವುದಕ್ಕಲ್ಲ. ಭಾಷೆಯ ಪಠ್ಯದ ಹೆಸರಿನಲ್ಲಿ ಸಿದ್ಧಾಂತ ಪ್ರಚಾರಕ್ಕೆ ಅವಕಾಶವಾಗಬಾರದು’ ಎಂದು ಈಗಿನ ಸಮಿತಿಯು ಹೇಳುತ್ತಿದೆ. ಆದರೆ ರೋಹಿತ್ ಚಕ್ರತೀರ್ಥ ಎನ್ನುವವರ ಅದ್ಯಕ್ಷತೆಯ ಸಮಿತಿಯ ಮೂಲಕ ಅಳವಡಿಸುತ್ತಿರುವ ಪಠ್ಯಗಳು ಆ ಎಲ್ಲಾ ಮಾನದಂಡಗಳನ್ನು ಸ್ವಯಂ ಉಲ್ಲಂಘಿಸುತ್ತವೆ. ಪ್ರಜಾಸತ್ತಾತ್ಮಕ, ಮತನಿರಪೇಕ್ಷತೆ ಮತ್ತು ಬಹುತ್ವದ ಮೌಲ್ಯಗಳಿಗೆ ಬದಲಿಯಾಗಿ ಸಮಾಜಕ್ಕೆ ಕಂಟಕವಾಗಿರುವ ಏಕ ರೂಪಿ ಫ್ಯಾಶಿಸ್ಟ್ ಮೌಲ್ಯಗಳನ್ನು ಅವು ಭೋಧಿಸುತ್ತವೆ. ಆರ್.ಎಸ್.ಎಸ್. ವ್ಯಾಖ್ಯಾನಿಸುವ ಅದರ ಕಣ್ಣಳತೆಯ ಬುಡಮೇಲು ಕಲ್ಪನೆಗಳನ್ನು ಸಾದರ ಪಡಿಸುತ್ತವೆ. ಮತಸಹಿಷ್ಣುತೆ, ಬಹು ಸಾಂಸ್ಕೃತಿಕತೆ, ವೈವಿದ್ಯತೆಯಂತಹ ಮೌಲ್ಯಗಳ ಉದಾತ್ತ ಭಾರತದ ಬದಲಿಗೆ ಅನ್ಯ ಮತದ್ವೇಷ, ಅಸಹನೆ, ಕಂದಾಚಾರ, ಅವೈಚಾರಿಕತೆ, ಅಮಾನವೀಯ ಭಾರತವನ್ನಾಗಿ ಬದಲಿಸುವ ಸಂಘಪರಿವಾರದ ಅಜೆಂಡಾದ ಜಾರಿಗೆ ತೋರುತ್ತಿರುವ ಧಾವಂತ ಈ ಪ್ರಯತ್ನದಲ್ಲಿ ಎದ್ದು ಕಾಣುತ್ತದೆ. ಇಡೀ ದೇಶವೊಂದರ ಹಾಗೂ ಮಾನವ ಸಮಾಜದಲ್ಲಿ ಸಕಾರಾತ್ಮಕ ಪಾತ್ರ ವಹಿಸುವ, ವ್ಯಕ್ತಿತ್ವದ ನಿರ್ಮಾಣದಂತಹ ಮಹೋನ್ನತ ಧ್ಯೇಯ ಶಿಕ್ಷಣಕ್ಕಿದೆ. ಇಂತಹ ಶಿಕ್ಷಣ ವ್ಯವಸ್ಥೆಯನ್ನು, ಮಕ್ಕಳ ಭವಿಷ್ಯವನ್ನು ರೂಪಿಸುಂತಹ ಪಠ್ಯ ರಚನೆ ಮತ್ತು ಶಿಕ್ಷಣ ನೀತಿ ನಿರೂಪಣೆ ಹೊಣೆ ಹೊರುವವರ ಅರ್ಹತೆ ಏನಾಗಿರಬೇಕು? ರೋಹಿತ್ ಚಕ್ರತೀರ್ಥ ರವರ ಅರ್ಹತೆ ವಿದ್ವತ್ ಗೆ ಬದಲಾಗಿ ಸಂಘದ ಸೇವಕ ಎನ್ನುವುದಷ್ಟೇ. ಹಾಗೇ ಅವರನ್ನೂ ಒಳಗೊಂಡು ಪರಿಷ್ಕರಣಾ ಸಮಿತಿಯ ಸದಸ್ಯರ ‘ಅನುಭವ’ ಪರಿಣಿತಿ, ತಜ್ಞರು ಎತ್ತುವ ಪ್ರಶ್ನೆಗಳಿಗೆ ಬೀದಿ ಬದಿಯಲ್ಲಿ ಚೀರಾಡುವ ಬಜರಂಗದಳದಂತೆ ಉತ್ತರಿಸುವ ಚಕ್ರತೀರ್ಥರ ರೀತಿ ಬೆಚ್ಚಿ ಬೀಳಿಸುವಂತಿದೆ. ಅಂತಹುದೇ ಧಾಟಿಯಲ್ಲಿ ಶಿಕ್ಷಣ ಸಚಿವ ನಾಗೇಶ್ ರವರು ಚಕ್ರತೀರ್ಥರ ರಕ್ಷಣೆಗೆ ಧುಮುಕಿದ್ದಾರೆ. ಪರಿಣಿತರ ಸಲಹೆಯಂತೆ ಬದಲಾವಣೆ ಬಯಸುವ ಬದಲು ಸರಕಾರದ ಅಣತಿಯನ್ನು ಸಮಿತಿಯ ಹೆಸರಲ್ಲಿ ಸಿದ್ಧಗೊಳಿಸಿದಂತೆ ಭಾಸವಾಗುತ್ತದೆ. ವಿದ್ವಾಂಸರು, ವಿಷಯ ಪರಿಣಿತರು ಎತ್ತುವ ಯಾವುದೇ ಪ್ರಶ್ನೆಗಳಿಗೆ ಸಮಜಾಯಿಷಿ ನೀಡುವ ಉತ್ತರದಾಯಿತ್ವವನ್ನೇ ಬೊಮ್ಮಾಯಿ ಸರಕಾರ ಕೈ ಬಿಟ್ಟಿದೆ.

ಈಗ ಪರಿಷ್ಕರಣೆಯ ಹೆಸರಿನಲ್ಲಿ ತೆಗೆದು ಹಾಕಿರುವ ಬರಗೂರು ಸಮಿತಿ ಸಿದ್ಧಪಡಿಸಿದ್ದ ಪಠ್ಯಕ್ರಮದಲ್ಲಿ ಐದು ಪಠ್ಯಗಳನ್ನು ಕೈಬಿಡಲಾಗಿದೆ. ಎ.ಎನ್.ಮೂರ್ತಿರಾಯರ `ವ್ಯಾಘ್ರಗೀತೆ’, ಸಾರಾ ಅಬೂಬಕರ್ ಅವರ `ಯುದ್ಧ’, ಡಾ.ಜಿ. ರಾಮಕೃಷ್ಣ ಅವರ `ಭಗತ್ ಸಿಂಗ್’, ಪಿ.ಲಂಕೇಶ್ ಅವರ `ಮೃಗ ಮತ್ತು ಸುಂದರಿ’ ಹಾಗೂ `ಜನಪದ ಒಗಟುಗಳು’. ಬದಲಾಗಿ ಕೇಶವ ಬಲಿರಾಮ ಹೆಡ್ಗೇವಾರ್ ಅವರ `ನಿಜವಾದ ಆದರ್ಶ ಪುರುಷ ಯಾರಾಗಬೇಕು?’ ಬನ್ನಂಜೆ ಗೋವಿಂದಾಚಾರ್ಯ ಅವರ `ಶುಕನಾಸನ ಉಪದೇಶ’, ಶಿವಾನಂದ ಕಳವೆ ಅವರ `ಸ್ವದೇಶೀ ಸೂತ್ರದ ಸರಳ ಹಬ್ಬ’ ಮತ್ತು ಗೋವಿಂದ ಪೈ ಅವರ `ನಾನು ಪ್ರಾಸ ಬಿಟ್ಟ ಕತೆ’, `ಸ್ವಾಮಿ ವಿವೇಕಾನಂದರ ಚಿಂತನೆ’ ಎಂಬ ಪಠ್ಯ ಬದಲಾಯಿಸಿ, `ಉದಾತ್ತ ಚಿಂತನೆಗಳು’ ಹೆಸರಿನ ಪಠ್ಯ ಸೇರಿಸಲಾಗಿದೆ. ಈ ಬದಲಾವಣೆಗಳು ಮತ್ತು ಪ್ರಶ್ನಿಸಿದವರ ಮೇಲೆ ಹರಿಹಾಯುತ್ತಿರುವ ವಾದ ವೈಖರಿಯನ್ನು ಗಮನಿಸಿದರೆ ಸಾಕು ನಿಜಕ್ಕೂ ಸಂಘಪರಿವಾರ ಹಾಗೂ ಸರಕಾರದ ನಿಜ ಉದ್ದೇಶ ಏನೆಂಬುದು ತಿಳಿಯುತ್ತದೆ. ಇವೆಲ್ಲಾ ಆರೆಸ್ಸೆಸ್ ನ ಸ್ಪಷ್ಟ ನಿರ್ದೇಶನ ಮತ್ತು ಅದೇ ಕೇಶವ ಶಿಲ್ಪದಲ್ಲೇ ತಯಾರಾದ ಪಾಕ ಎಂಬುದೂ ವೇದ್ಯವಾಗುತ್ತದೆ. ಹಿಂದುತ್ವದ ಫ್ಯಾಶಿಸ್ಟ್ ಮನೋಭಾವವನ್ನು ಶಿಕ್ಷಣ ರಂಗದಲ್ಲಿ ಅದರಲ್ಲೂ ಎಳೆಯ ಮಕ್ಕಳ ಮನಗಳಿಗೆ ಉಣಿಸುವುದು ವಿಷ ಇಕ್ಕಿದಂತೆ ಎನ್ನುವುದನ್ನು ಮರೆಯಬಾರದು. ಇಂತಹ ಸಂಗತಿಗಳ ಬಗ್ಗೆ ನಾಗರೀಕರು, ವಿಶೇಷವಾಗಿ ಪಾಲಕರು ಮೌನ ಪ್ರೇಕ್ಷಕರಾಗಿರಬಾರದು.

ಸಂಘಪರಿವಾರದ ಗುಪ್ತ ಅಜೆಂಡಾ ಸರಕಾರದ ಮೂಲಕ ಜಾರಿಗೊಳಿಸುವ ಪ್ರಯತ್ನಗಳ ವಿರುದ್ಧ ನಾಡಿನ ಚಿಂತಕರು ಎತ್ತಿರುವ ದನಿಗೆ ಎಲ್ಲರೂ ದನಿಗೂಡಿಸಬೇಕು. ಮಕ್ಕಳ ಮನಸ್ಸಿಗೆ ವಿಷವಿಕ್ಕುವ ಹುನ್ನಾರಗಳನ್ನು ಹಿಮ್ಮೆಟ್ಟಿಸಿ ಕಾಪಾಡಬೇಕು. ಇಂತಹ ಸಕಾರಣವಾದ ತೀವ್ರ ವಿರೋಧ ಇರುವಾಗಲೂ ಸರಕಾರ ಜಾರಿಯ ಪ್ರಯತ್ನದ ಭಂಡತನ ತೋರಬಾರದು.

Leave a Reply

Your email address will not be published. Required fields are marked *