ಹಣದುಬ್ಬರ: ದುಡಿಯುವ ಜನರ ಮೇಲಿನ ಕ್ರೂರ ಪ್ರಹಾರ

ಪ್ರಕಾಶ್ ಕಾರಟ್

Prakash Karat
ಪ್ರಕಾಶ್ ಕಾರಟ್

ಹಣದುಬ್ಬರದಿಂದ ಸಾಮಾನ್ಯವಾಗಿ ಬಡವರ ಆದಾಯವು ಶ್ರೀಮಂತರಿಗೆ ವರ್ಗಾವಣೆಯಾಗುವಂತೆ ಮಾಡುತ್ತದೆ. ಶ್ರೀಮಂತರಿಗೆ ಇರುವಂತೆ, ತಮ್ಮ ನಷ್ಟವನ್ನು ಸರಿದೂಗಿಸಲು/ಭರ್ತಿ ಮಾಡಿಕೊಳ್ಳಲು ಬಡವರಿಗೆ ಬೇರೆ ಯಾವುದೇ ಮಾರ್ಗ ಇರುವುದಿಲ್ಲ. ಮಾರುಕಟ್ಟೆ ಮೇಲೆ ನಿಯಂತ್ರಣ ಹೊಂದಿರುವವರು ಉತ್ಪಾದನೆಯ ಹೆಚ್ಚುವರಿ ವೆಚ್ಚವನ್ನು ಗ್ರಾಹಕರ ಮೇಲೆ ವರ್ಗಾಯಿಸುತ್ತಾರೆ. ತಮ್ಮ ಲಾಭವನ್ನು ಉಳಿಸಿಕೋಂಡೇ ಅವರು ಹಾಗೆ ಮಾಡುತ್ತಾರೆ.

ಜನರು ಬಳಸುವ ಎಲ್ಲ ಅಗತ್ಯ ಸಾಮಗ್ರಿಗಳ ಬೆಲೆಗಳು ಗಗನಕ್ಕೇರುವುದರೊಂದಿಗೆ ಭಾರತ ದೇಶ ಹಣದುಬ್ಬರದ ಸುಳಿಗೆ ಸಿಲುಕಿದೆ. ಬೆಲೆಗಳ ತೀವ್ರ ಏರಿಕೆಯಿಂದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಬಡವರ ಗೋಳು ಹೇಳತೀರದಾಗಿದೆ.

ಮೇ ತಿಂಗಳ ಹಣದುಬ್ಬರ ಶೇಕಡ 7.8 ಆಗಿದೆ. ಇದು ಕಳೆದ ಎಂಟು ವರ್ಷಗಳಲ್ಲೇ ಅತಿ ಹೆಚ್ಚಿನ ಹಣದುಬ್ಬರ ಪ್ರಮಾಣ. ಆಹಾರ ದರಗಳ ಉಬ್ಬರ ಶೇಕಡ 8.38ಕ್ಕೆ ಜಿಗಿದಿದೆ. ಇದು ಕಳೆದ 17 ತಿಂಗಳಲ್ಲೇ ಅತಿ ಹೆಚ್ಚಿನ ಆಹಾರ ಹಣದುಬ್ಬರವಾಗಿದೆ. ಸಗಟು ಬೆಲೆ ಸೂಚ್ಯಂಕ ಏಪ್ರಿಲ್‌ನಲ್ಲಿ 15.08%ಕ್ಕೆ ಏರಿದ್ದು ಪ್ರಸಕ್ತ ಚಾಲ್ತಿಯ 2011-12ರ ಸರಣಿಯಲ್ಲೇ ಅತ್ಯಧಿಕವಾಗಿದೆ.

ಈ ಒಣ ಅಂಕಿಸಂಖ್ಯೆಗಳಿಂದ ಜನಸಾಮಾನ್ಯರು, ಅದರಲ್ಲೂ ಬಡವರಿಗೇನು ಪ್ರಯೋಜನ?. ವಾಸ್ತವದಲ್ಲಿ ಈ ಎಲ್ಲವು ಹಿಟ್ಟು, ತರಕಾರಿ, ಖಾದ್ಯ ತೈಲ ಮತ್ತು ಅಡುಗೆ ಅನಿಲಗಳ ಬೆಲೆಗಳ ಏರಿಕೆಯನ್ನು ಪ್ರತಿಬಿಂಬಿಸುತ್ತದೆ. ಬಡವರು ಮತ್ತು ಮಧ್ಯಮ ವರ್ಗದ ಜನರ ಊಟ-ತಿಂಡಿ ಖೋತಾ ಆಗುತ್ತದೆ. ಮಕ್ಕಳಿಗೆ ಪೌಷ್ಟಿಕತೆಯಲ್ಲಿ ಕಡಿತವಾಗುತ್ತದೆ ಎಂದರ್ಥ. ಕನಿಷ್ಠ ಜೀವನ ಮಟ್ಟ ನಡೆಸಲು ಬೇಕಾದ ಖರೀದಿ ಮಾಡುವ ಸಾಮರ್ಥ್ಯವನ್ನೂ ಜನರು ಕಳೆದುಕೊಳ್ಳುತ್ತಾರೆ ಎಂಬುದು ಇದರ ಅರ್ಥವಾಗಿದೆ. ಉತ್ತರ ಭಾರತದಲ್ಲಿ ಅತ್ಯಗತ್ಯ ಆಹಾರವಾದ ಹಿಟ್ಟಿನ ಬೆಲೆ 2021ರ ಮೇ ತಿಂಗಳಿಂದ 2022 ಮೇ ನಡುವೆ, ಅಂದರೆ ಒಂದು ವರ್ಷದಲ್ಲಿ ಶೇಕಡ 13ರಷ್ಟು ಏರಿಕೆಯಾಗಿದೆ. ಒಂದು ಲೀಟರ್ ಹಾಲಿನ ಬೆಲೆ 50 ರೂಪಾಯಿ ಆಗಿದೆ. ಅಡುಗೆ ಎಣ್ಣೆ ಬೆಲೆಗಳು ಲೀಟರ್ ಒಂದರ 200 ರೂಪಾಯಿ ದಾಟಿದೆ. ತರಕಾರಿಗಳ ಬೆಲೆಗಳೂ ಗಗನ ಮುಟ್ಟಿವೆ.

ಹಣದುಬ್ಬರವೆಂದರೆ ಲಕ್ಷಾಂತರ ಜನರ ಜೀವನೋಪಾಯ ನಷ್ಟವೆಂದರ್ಥ. ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರ ವಹಿವಾಟು ಮಾಡುವವರು ಸಂಕಷ್ಟಕ್ಕೆ ಸಿಲುಕುತ್ತಾರೆ. ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳಿಗೂ ಏಟು ಬೀಳುತ್ತದೆ.

ಪೆಟ್ರೋಲ್ ಮತ್ತು ಡೀಸೆಲ್ ಸಹಿತವಾದ ಇಂಧನಗಳ ಬೆಲೆಗಳ ಏರಿಕೆಯೇ ಈ ಹಣದುಬ್ಬರ ಸುಳಿಯ ಪ್ರಮುಖ ಭಾಗವಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ದ್ರವೀಕೃತ ಅನಿಲದ (ಎಲ್‌ಪಿಜಿ) ಮೇಲಿನ ಕೇಂದ್ರೀಯ ತೆರಿಗೆಗಳ ಹೆಚ್ಚಳದ ಕೇಂದ್ರ ಸರ್ಕಾರದ ನೀತಿಯಿಂದಾಗಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆಗಳಲ್ಲಿ ಅಭೂತಪೂರ್ವ ಏರಿಕೆಯಾಗಿದೆ. ರಷ್ಯಾ ಮತ್ತು ಯೂಕ್ರೇನ್ ಯುದ್ಧ ಆರಂಭವಾಗುವ ಮೊದಲೇ ಈ ಪ್ರವೃತ್ತಿ ಆರಂಭವಾಗಿತ್ತು. ಸಮರವು ಪರಿಸ್ಥಿತಿಯನ್ನು ಬಿಗಡಾಯಿಸಿದೆ ಅಷ್ಟೇ. ಇಂಧನವು ಜಾಗತಿಕ ಮಧ್ಯವರ್ತಿಯಾಗಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್‌ಗಳ ಬೆಲೆಯೇರಿಕೆಯು ಎಲ್ಲ ವಸ್ತುಗಳ ಬೆಲೆಗಳ ಮೇಲೆ ಅಗಾಧ ಪರಿಣಾಮ ಬೀರುತ್ತದೆ.

pg 2 - Copyಪೆಟ್ರೋಲ್‌ನ ಕೇಂದ್ರೀಯ ಅಬಕಾರಿ ಸುಂಕಗಳಲ್ಲಿ ಶೇಕಡ 96ರಷ್ಟು ಸೆಸ್‌ಗಳು ಹಾಗೂ ಸರ್ಚಾಜ್ ಮತ್ತು ಡೀಸೆಲ್‌ನ ಸುಂಕದಲ್ಲಿ ಶೇಕಡ 94 ಇರುತ್ತದೆ ಎನ್ನುವುದನ್ನು ಗಮನಿಸಬೇಕು. ಅಡುಗೆ ಅನಿಲದ ಬೆಲೆಗಳ ಏರಿಕೆಯು ಅತ್ಯಂತ ಕ್ರೂರ ಏರಿಕೆಯಾಗಿದೆ. ಒಂದು ವರ್ಷದಲ್ಲಿ 14.2 ಕೆ.ಜಿ. ಸಿಲಿಂಡರ್ ಬೆಲೆಯಲ್ಲಿ 431.50 ರೂಪಾಯಿ, ಅಂದರೆ ಶೇಕಡ 76 ಏರಿಕೆಯಾಗಿದೆ. 19 ಕೆಜಿಯ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಈಗ 2,367 ರೂಪಾಯಿ ಆಗಿದ್ದು ಶೇಕಡ 126 ಏರಿಕೆಯಾಗಿದೆ.

ಹಣದುಬ್ಬರದ ಈ ಘೋರ ಅಪಾಯಕಾರಿ ಸನ್ನಿವೇಶದ ಬಗೆಗಿನ ಮೋದಿ ಸರ್ಕಾರದ ಧೋರಣೆ ಆಘಾತಕಾರಿಯಾಗಿದೆ. ಪ್ರತಿದಿನವೂ ಏಪ್ರಿಲ್ ತಿಂಗಳ ಚಿಲ್ಲರೆ ಹಣದುಬ್ಬರದ ಅಂಕಿಸಂಖ್ಯೆಯನ್ನು ಬಿಡುಗಡೆ ಮಾಡಲಾಗುತ್ತಿದೆ. ಆದರೂ ಶ್ರೀಮಂತರಿಗೆ ಹೋಲಿಸಿದರೆ ಬೆಲೆಯೇರಿಕೆಯಿಂದ ಬಡವರಿಗೆ ಆಗುವ ನಷ್ಟ ಕಡಿಮೆಯೇ ಎಂದು ಹಣಕಾಸು ಸಚಿವಾಲಯ ಚಿತ್ರಿಸುತ್ತಿದೆ.

`ಬಳಕೆಯ ಪ್ರವೃತ್ತಿಯ ಪುರಾವೆಗಳನ್ನು ಗಮನಿಸಿದರೆ ಭಾರತದಲ್ಲಿ ಹಣದುಬ್ಬರದ ಪರಿಣಾಮವು ಹೆಚ್ಚು ಆದಾಯ ಇರುವ ಜನರ ಮೇಲಿನ ಪರಿಣಾಮಕ್ಕಿಂತ ಬಡಜನರ ಮೇಲಿನ ಪರಿಣಾಮ ಕಡಿಮೆಯಾಗಿದೆ’ ಎಂದು ಏಪ್ರಿಲ್ ತಿಂಗಳ ಮಾಸಿಕ ಆರ್ಥಿಕ ಸಮೀಕ್ಷೆ ಹೇಳಿದೆ. ಅಗ್ರ ಶೇಕಡ 20, ಶೇಕಡ 60 ಮಧ್ಯಮ ವರ್ಗ ಹಾಗೂ ತಳ ಮಟ್ಟದ 20% ಜನರು ಬಳಕೆ ವೆಚ್ಚಕ್ಕೆ ಅನುಗುಣವಾಗಿ ಚಿಲ್ಲರೆ ಬೆಲೆ ಸೂಚ್ಯಂಕದ ಪರಿಣಾಮ ಎದುರಿಸುತ್ತಾರೆ ಎನ್ನುವುದು ಈ ವರದಿಯ ನಿರ್ಣಯವಾಗಿದೆ.

ಈ ನಿರ್ಣಯದ ಅಪಾಯಕಾರಿತನವನ್ನು ವಿಶ್ಲೇಷಣೆಯ ಒಂದು ಅಂಶದಿಂದಲೇ ಸಾಬೀತು ಮಾಡಬಹುದು. ಮಾಸಿಕ ಆರ್ಥಿಕ ವರದಿಯು ಗ್ರಾಮೀಣ ಮತ್ತು ನಗರ ಪ್ರದೇಶಗಳ ವಿವಿಧ ಜನವಿಭಾಗಗಳ ಬಳಕೆಯ ಹಣದುಬ್ಬರ ದರವನ್ನು ಅತಿ ಬುದ್ಧಿವಂತಿಕೆಯಿಂದ ಎತ್ತಿತೋರಿಸುತ್ತದೆ. ಹಣದುಬ್ಬರವು ಬೆಲೆಗಳಲ್ಲಿನ ಬದಲಾವಣೆಯನ್ನು ಸೂಚಿಸುತ್ತದೆ. ಒಂದು ವರ್ಷ ಗ್ರಾಮೀಣ ಬಡವರಿಗೆ ಹಣದುಬ್ಬರ ದರ ಹೆಚ್ಚಾದರೆ ಮರು ವರ್ಷ ಅದು ತುಲನಾತ್ಮಕವಾಗಿ ಕಡಿಮೆಯಿರುತ್ತದೆ. ಆಗ, ವಾಸ್ತವ ಹಣದುಬ್ಬರ ದರ ಕಡಿಮೆಯಾದರೂ ಬೆಲೆಗಳ ಲೆಕ್ಕಾಚಾರದಲ್ಲಿ ಸಂಯೋಜಿತ ಪರಿಣಾಮವು ಹೆಚ್ಚಾಗಿರುತ್ತದೆ. ಉದಾಹರಣೆಗೆ, ನಗರ ಬಡವರ ಆರಂಭಿಕ ದರವು ಶೇಕಡ 6.8 ಏರಿಕೆಯೊಂದಿಗೆ 100 ಆಗಿದ್ದರೆ ಮುಂದಿನ ವರ್ಷ ಅದು 106.8 ಆಗುತ್ತದೆ. ಆಗ, ವಾಸ್ತವ ಹಣದುಬ್ಬರ ದರವು ಸರ್ಕಾರದ ವರದಿ ಹೇಳುವಂತೆ ಶೇಕಡ 5.7ಕ್ಕೆ ಇಳಿದರೆ ಮೂರನೇ ವರ್ಷದ ಅಂತ್ಯದಲ್ಲಿ ವಾಸ್ತವ ದರ 112.89 (106.8ರ ಮೇಲೆ ಶೇಕಡ 5.7) ಆಗುತ್ತದೆ.

ಹೀಗಾಗಿ, ಮೊದಲ ವರ್ಷದಲ್ಲಿ ದರವು 100 ಆಗಿದ್ದು ಮೂರು ವರ್ಷಗಳಲ್ಲಿ ಅದು 112.89 ಆಗುತ್ತದೆ. ಇದು ಎಲ್ಲ ಬಳಕೆದಾರ ವಿಭಾಗಗಳಲ್ಲಿ ಹೆಚ್ಚಿನ ಏರಿಕೆಯಾಗುತ್ತದೆ. ಅದನ್ನು ವರದಿಯಲ್ಲಿ ವಂಚನೆಯಿಂದ ಅಡಗಿಸಲಾಗಿದೆ. ಇತರ ವಿಭಾಗಗಳಿಗೆ ಸಂಯೋಜಿತ ಪರಿಣಾಮವು; ಎಲ್ಲ ಗುಂಪುಗಳು ಮತ್ತು ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ದರವನ್ನು ಏರಿಸಿದರೂ, ತುಲನಾತ್ಮಕವಾಗಿ ಕಡಿಮೆಯಿರುತ್ತದೆ. ಆದ್ದರಿಂದ, ವಾಸ್ತವ ಹಣದುಬ್ಬರ ದರ ಶೇ. 6.8ರಿಂದ ಶೇ. 5.7ಕ್ಕೆ ಇಳಿದರೂ ಹೆಚ್ಚು ಹೊಡೆತ ಬೀಳುವುದು ನಗರ ಪ್ರದೇಶಗಳ ಬಡವರಿಗೇ ಆಗಿದೆ.

ಹಣದುಬ್ಬರದಿಂದ ಶ್ರೀಮಂತರಿಗೇ ಹೆಚ್ಚು ತೊಂದರೆಯಾಗುತ್ತದೆ ಎಂಬ ಪರಿಕಲ್ಪನೆಯ ಬಣ್ಣವನ್ನು ಬಯಲು ಮಾಡಬೇಕು. ಕೂಲಿಯಿಂದ ಆದಾಯ ಸಂಪಾದಿಸುವವರು ಹಾಗೂ ಕಡಿಮೆ ಉಳಿತಾಯ ಹೊಂದಿರುವವರು ನಿಜವಾಗಿ ಕಷ್ಟ ಅನುಭವಿಸಬೇಕಾಗುತ್ತದೆ. ಅದರಲ್ಲೂ ಆಹಾರದ ಒಟ್ಟಾರೆ ಖರೀದಿದಾರರಾಗಿರುವವರನ್ನು ಆಹಾರ ಹಣದುಬ್ಬರ ನೇರವಾಗಿ ಕಾಡುತ್ತದೆ. ಸಿರಿವಂತರು ಹಾಗೂ ಮೇಲ್‌ಮಧ್ಯಮ ವರ್ಗದ ಜನರು ಆರ್ಥಿಕ ಸಾಧನ ಹಾಗೂ ಷೇರು ಮಾರುಕಟ್ಟೆ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಯಾಕೆಂದರೆ ಅಲ್ಲಿ ಬೆಲೆಗಳು ಹಣದುಬ್ಬರ ದರಕ್ಕೆ ಅನುಗುಣವಾಗಿ ಚಲಿಸುತ್ತದೆ. ಹೀಗಾಗಿ ಅವರ ಆದಾಯವನ್ನು ಬಹುವಾಗಿ ರಕ್ಷಿಸುತ್ತದೆ.

ಹಣದುಬ್ಬರದಿಂದ ಸಾಮಾನ್ಯವಾಗಿ ಬಡವರ ಆದಾಯವು ಶ್ರೀಮಂತರಿಗೆ ವರ್ಗಾವಣೆಯಾಗುವಂತೆ ಮಾಡುತ್ತದೆ. ಶ್ರೀಮಂತರಿಗೆ ಇರುವಂತೆ, ತಮ್ಮ ನಷ್ಟವನ್ನು ಸರಿದೂಗಿಸಲು/ಭರ್ತಿ ಮಾಡಿಕೊಳ್ಳಲು ಬಡವರಿಗೆ ಬೇರೆ ಯಾವುದೇ ಮಾರ್ಗ ಇರುವುದಿಲ್ಲ. ಮಾರುಕಟ್ಟೆ ಮೇಲೆ ನಿಯಂತ್ರಣ ಹೊಂದಿರುವವರು ಉತ್ಪಾದನೆಯ ಹೆಚ್ಚುವರಿ ವೆಚ್ಚವನ್ನು ಗ್ರಾಹಕರ ಮೇಲೆ ವರ್ಗಾಯಿಸುತ್ತಾರೆ. ತಮ್ಮ ಲಾಭವನ್ನು ಉಳಿಸಿಕೋಂಡೇ ಅವರು ಹಾಗೆ ಮಾಡುತ್ತಾರೆ.

ಹಣದುಬ್ಬರದಿಂದಾಗಿ ಉಳಿತಾಯಗಾರರ ನಿಜವಾದ ಬಡ್ಡಿ ಆದಾಯವು ಕಡಿಮೆಯಾಗುತ್ತದೆ. ಆದರೆ ಸಾಲಗಾರರು ಕಡಿಮೆ ವಾಸ್ತವ ಬಡ್ಡಿಯನ್ನು ಪಾವತಿಸಿದರೆ ಸಾಕಾಗುತ್ತದೆ. ದುಡಿಯುವ ಜನರೇ ದೊಡ್ಡ ಪ್ರಮಾಣದಲ್ಲಿ ಉಳಿತಾಯ ಮಾಡುವವರಾಗಿದ್ದಾರೆ ಹಾಗಿದ್ದು ಬಂಡವಾಳಗಾರರೇ ದೊಡ್ಡ ಪ್ರಮಾಣದಲ್ಲಿ ಸಾಲ ಪಡೆಯುವವರಾಗಿದ್ದಾರೆ. ಆದ್ದರಿಂದ ಇಲ್ಲಿಯೂ ಹೆಚ್ಚು ಸಂಕಷ್ಟ ಅನುಭವಿಸುವವರು ದುಡಿಯುವ ವರ್ಗದವರೇ ಆಗಿದ್ದಾರೆ.

ಬೆಲೆಯೇರಿಕೆ ವಿರುದ್ಧ ಹೋರಾಡುವ ಭಾಗವಾಗಿ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಎಲ್ಲ ಸರ್ಚಾರ್ಜ್‌ಗಳನ್ನು ತೆಗೆದು ಹಾಕಬೇಕೆಂದು ಎಡ ಪಕ್ಷಗಳು ಆಗ್ರಹಿಸಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಇರುವ ಮಾರ್ಗ ಅದೊಂದೇ ಆಗಿದೆ. ಎಲ್ಲ ಅವಶ್ಯ ಸಾಮಾಗ್ರಿಗಳನ್ನು, ಅದರಲ್ಲೂ ವಿಶೇಷವಾಗಿ ಅಡುಗೆ ಎಣ್ಣೆ ಮತ್ತು ದವಸಧಾನ್ಯಗಳನ್ನು ಪೂರೈಸುವ ಮೂಲಕ ಸಾರ್ವಜನಿಕ ವಿತರಣೆ (ಪಡಿತರ) ವ್ಯವಸ್ಥೆಯನ್ನು ಬಲಪಡಿಸುವಂತೆಯೂ ಅವು ಒತ್ತಾಯಿಸಿವೆ. ಕೋವಿಡ್‌ನ ಎರಡು ವರ್ಷದ ಅವಧಿಯಲ್ಲಿ ಆದಾಯ ಮತ್ತು ಜೀವನೋಪಾಯ ವ್ಯಾಪಕ ರೀತಿಯಲ್ಲಿ ನಷ್ಟವಾಗಿರುವುದರಿಂದ ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲ ಕುಟುಂಬಗಳಿಗೆ ಪ್ರತಿ ತಿಂಗಳು 7,500 ರೂಪಾಯಿಗಳನ್ನು ವರ್ಗಾಯಿಸಬೇಕೆಂದೂ ಎಡಪಕ್ಷಗಳು ಒತ್ತಾಯಿಸಿವೆ.

ಬೆಲೆಯೇರಿಕೆಗೆ ಕಡಿವಾಣ ಹಾಕಲು ಈ ಬೇಡಿಕೆಗಳನ್ನು ಮಂಡಿಸಲಾಗಿದೆ. ಅದರ ಜೊತೆಜೊತೆಯಲ್ಲೇ ನಿರುದ್ಯೋಗ ಸಮಸ್ಯೆ ಪರಿಹರಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ. ಎಲ್ಲ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳಿಗೆ ಇದು ಆದ್ಯತೆಯ ಅಜೆಂಡಾ ಆಗಬೇಕು.

ಈ ಬೇಡಿಕೆಗಳ ಆಧಾರದಲ್ಲಿ ಮೇ 25-31ರ ನಡುವೆ ರಾಷ್ಟçವ್ಯಾಪಿ ಚಳವಳಿಗೆ ಎಡ ಪಕ್ಷಗಳು ಕರೆ ನೀಡಿವೆ. ಬೆಲೆಯೇರಿಕೆ ಮತ್ತು ನಿರುದ್ಯೋಗದ ವಿರುದ್ಧ ಇಂಥ ಹೋರಾಟ ಮತ್ತು ಆಂದೋಲನಗಳನ್ನು ದೇಶದಾದ್ಯಂತ ವಿಸ್ತರಿಸಬೇಕು ಹಾಗೂ ತೀವ್ರಗೊಳಿಸಬೇಕು.

ಅನು: ವಿಶ್ವ

Leave a Reply

Your email address will not be published. Required fields are marked *