ಮುಖ್ಯಮಂತ್ರಿಗಳು ತಂದಿದ್ದು ಬಂಡವಾಳವೋ, ಭರವಸೆಗಳ ಭ್ರಮೆಯೋ?

ದಾವೂಸ್ ನ ವಿಶ್ವ ಬಂಡವಾಳ ಹೂಡಿಕೆ ಶೃಂಗಸಭೆ ಮುಗಿಸಿ ಬಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಮುರುಗೇಶ್ ನಿರಾಣಿಯವರು ಕರ್ನಾಟಕಕ್ಕೆ ಹರಿದು ಬರಲಿರುವ ಭವಿಷ್ಯದ ಬಂಡವಾಳದ ಗಂಟನ್ನು ಬಿಚ್ಚಿಟ್ಟಿದ್ದಾರೆ. ನವ ಕರ್ನಾಟಕದ ನಿರ್ಮಾಣದ ಘೋಷಣೆಗೆ ಈ ಹೂಡಿಕೆ ಭರವಸೆ ಪೂರಕವೆಂದೂ ನಂಬಿಸುತ್ತಿದ್ದಾರೆ.

ರಾಜ್ಯಕ್ಕೆ ಎಷ್ಟು ವಿದೇಶಿ ಬಂಡವಾಳವನ್ನು ಹಿಡಿದು ತರಲಾಗುವುದು ಎನ್ನುವುದೇ ಅಭಿವೃದ್ಧಿ ಸಾಮರ್ಥ್ಯದ ಮಾನದಂಡಕ್ಕೆ ಆಧಾರ ಎಂದು ವಾದಿಸಲಾಗುತ್ತಿದೆ. ಆಂತರಿಕ ಉತ್ಪತ್ತಿ, ಜನರ ಕೊಳ್ಳುವ ಶಕ್ತಿಯ ಬೆಳವಣಿಗೆ, ಮಾರುಕಟ್ಟೆಯ ವಿಸ್ತರಣೆ, ವಿತರಣೆ, ಮಾನವ ಅಭಿವೃದ್ದಿಯಂತಹ ಅಂಶಗಳು ಅಭಿವೃದ್ದಿಯ ಮಾನದಂಡದ  ಪ್ರಮುಖ ಅಂಶಗಳು ಎಂಬುದು ಮರೆಸಲಾಗುತ್ತಿದೆ. ಹೀಗಾಗಿ ಪ್ರತಿ ಮುಖ್ಯಮಂತ್ರಿಯೂ ತನ್ನ ಅವಧಿಯಲ್ಲಿ ಎಷ್ಟು ಬಂಡವಾಳ ಹರಿದು ಬಂತು ಮತ್ತು ಅದನ್ನು ಹಿಡಿದು ತರುವಲ್ಲಿ ಹೇಗೆ ಬೇರೆಯವರಿಗಿಂತ ತಾವು ಸಮರ್ಥರು ಎನ್ನುವುದನ್ನು ಹೆಗ್ಗಳಿಕೆಯಾಗಿ ಹೇಳಿಕೊಳ್ಳುವುದು ಪರಿಪಾಠವಾಗಿದೆ.

ಆದರೆ ಸರಕಾರವೇ ನೀಡಿರುವ ಮಾನವ ಅಭಿವೃದ್ದಿ ಸೂಚ್ಯಂಕದ ವರದಿ ತೆರೆದಿಟ್ಟಿರುವ ಸತ್ಯಗಳನ್ನು ಮರೆಸಿಯೇ ಇವರೆಲ್ಲಾ ಮಾತನಾಡುತ್ತಾರೆ.  ವಾಸ್ತವದಲ್ಲಿ ಭಾರತದ ಮತ್ತು ಕರ್ನಾಟಕದ ಆರ್ಥಿಕತೆಯನ್ನು ಅದಃಪತನದ ಕೂಪದಿಂದ ಮೇಲೆತ್ತಲು ಮಾಡಬೇಕಾದುದೇನು ಎನ್ನುವುದರತ್ತ ನಿಜ  ಕಾಳಜಿಯ ಚಿಂತನೆಗಳಿರಬೇಕು. ಆದರೆ ಅದೇ ಇಲ್ಲವಾಗಿದೆ.

ಈಗ ಸುಮಾರು ಒಂದು ಲಕ್ಷ ಕೋಟಿ ರೂಗಳ ಬಂಡವಾಳ ಬರಲಿದ್ದು ಅದು ಮುಂದಿನ ನವೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ನಡೆಯುವ ಶೃಂಗ ಸಭೆಯಲ್ಲಿ ಖಚಿತ ಸ್ವರೂಪವನ್ನು ಪಡೆಯಲಿದೆ ಎಂದು ಬೃಹತ್ ಕೈಗಾರಿಕಾ ಸಚಿವರು ಹೇಳಿದ್ದಾರೆ. ಇಂತಹ ಬಂಡವಾಳ ಅಭಿವೃದ್ದಿಯ ಅನಿವಾರ್ಯ ಅಂಶವಾಗಿರುವುದು ಒಂದು ವಾಸ್ತವ. ಈ ಬಂಡವಾಳದ ಆಗಮನವೂ ಸಹ ಉದ್ಯಮಿಗಳಿಗೆ ಯಾವ ಸೌಲಭ್ಯ, ರಿಯಾಯಿತಿ, ಮೂಲ ಸೌಕರ್ಯಗಳನ್ನು ನೀಡಲಿದೆ, ಅವರ ಸೂಪರ್ ಲಾಭಕ್ಕೆ ಮುಕ್ತಾವಕಾಶ ಕಲ್ಪಿಸಲಿದೆ ಎನ್ನುವುದನ್ನೂ ಆಧರಿಸಿರುತ್ತದೆ. ಬಂಡವಾಳ ಹೂಡಿಕೆದಾರರನ್ನು ಮೆಚ್ಚಿಸಲು ದುಡಿಯುವ ನೌಕರರು, ಕಾರ್ಮಿಕರ ರಕ್ತ ಹೀರಲು ಸರಕಾರ ಎಷ್ಟು ಅವಕಾಶ ಒದಗಿಸಿ ಕೊಡಲಿದೆ ಎಂಬುದನ್ನೂ ಇದು ಆವಲಂಬಿಸಿರುತ್ತದೆ. ಈ ಸ್ಪರ್ದೆಯಲ್ಲಿ ವಿವಿಧ ರಾಜ್ಯಗಳು ಪೈಪೋಟಿಯನ್ನೂ ನಡೆಸುತ್ತವೆ. ಇಂತಹ ಹೂಡಿಕೆ ಮತ್ತು ಸವಲತ್ತುಗಳ ಒಪ್ಪಂದಗಳು ಅಧಿಕಾರದಲ್ಲಿರುವವರಿಗೆ ಲಾಭ ತರುವ ವ್ಯವಹಾರವೂ ಆಗಿರುತ್ತದೆ. ಮೂಲ ಸೌಕರ್ಯಗಳನ್ನು ನಿರ್ಮಿಸುವ ಗುತ್ತಿಗೆ ಅಥವಾ ಅದನ್ನು ವ್ಯವಸ್ಥೆಗೊಳಿಸುವುದರತ್ತ ಅವಕಾಶ ನೀಡಿಕೆ ರಿಯಲ್ ಎಸ್ಟೇಟ್, ನಿರ್ಮಾಣದಂತಹ ಸಾವಿರಾರು ಕೋಟಿಗಳ ನೆಚ್ಚಿಕೆಯ ವ್ಯವಹಾರವೂ ಆಗಿರುತ್ತದೆ.

ದಾವೂಸ್ ನಿಂದ ಹಿಂತಿರುಗಿದ ಬಳಿಕ ವಿಧಾನ ಸೌದಧದಲ್ಲಿನ ಮಾದ್ಯಮಗೋಷ್ಠಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರು 60 ಸಾವಿರ ಕೋಟಿ ಹೂಡಿಕೆಯ ಭರವಸೆ ಸಿಕ್ಕಿದೆ ಎಂದರೆ ವಿಮಾನ ನಿಲ್ದಾಣದಲ್ಲಿ ಕೈಗಾರಿಕ ಸಚಿವ ಮುರುಗೇಶ ನಿರಾಣಿಯವರು ಒಂದು ಲಕ್ಷ ಕೋಟಿ ಇನ್ನೊಂದೆಡೆ ಐದು ಲಕ್ಷ ಕೋಟಿ ರೂ.ಗಳ ವಿದೇಶಿ ಬಂಡವಾಳ ಹೂಡಿಕೆ ಆಗಲಿದೆ ಎಂದು ಹೇಳಿರುವುದು ನಿಜವಾಗಿ ಸಿಕ್ಕ ಭರವಸೆ ಎಷ್ಟು ಎನ್ನುವುದರ ಬಗ್ಗೆ ಅನುಮಾನ ಹುಟ್ಟಿಸಿದೆ. ಕರ್ನಾಟಕ ಉದ್ಯಮ ಸ್ನೇಹಿ, ಬೆಳವಣಿಗೆಗೆ ಉತ್ತಮ ವಾತಾವರಣ ಹೊಂದಿರುವುದು ಗಮನ ಸೆಳೆದಿದೆ ಎನ್ನುವ ಅವರ ಮಾತನ್ನೂ ರಾಜ್ಯದಲ್ಲಿನ ಅಶಾಂತಿ, ಅರಾಜಕತೆಯ ವಿದ್ಯಾಮಾನಗಳ ಹಿನ್ನೆಲೆಯಲ್ಲಿಯೇ ಪರಿಶೀಲಿಸಬೇಕು. ರಾಜ್ಯದ ಹಿರಿಯ ಉದ್ಯಮಿಗಳು ಇಂದಿರುವ ದ್ವೇಷದ ವಾತಾವರಣ ಹೂಡಿಕೆದಾರರಿಗೆ ವಿಶ್ವಾಸ ಹುಟ್ಟಿಸಲಾರದು ಎಂದು ಹೇಳಿದ್ದನ್ನು ಸುಲಭವಾಗಿ ತಳ್ಳಿ ಹಾಕುವಂತಿಲ್ಲ. ಆ ಸನ್ನಿವೇಶವನ್ನು ನಿರಾಕರಿಸಲು ಮುಖ್ಯಮಂತ್ರಿಗಳು, ಸಚಿವರು ಯತ್ನಿಸುತ್ತಿದ್ದಾರೆಯೇ ಎನ್ನುವುದೂ ಗಂಭೀರವಾಗಿ ಕಾಡುತ್ತದೆ. ಖಂಡಿತಕ್ಕೂ ಹೂಡಿಕೆ, ಉದ್ಯಮದ ಬೆಳವಣಿಗೆ ಬೇಕು. ಅದರ ಪ್ರಯೋಜನ ನಾಡಿನ ನಿರುದ್ಯೋಗಿ ಯುವಜನರಿಗೆ,  ಶ್ರಮಿಕರಿಗೆ  ಸಿಗಬೇಕು. ಉದ್ಯಮ ಸ್ನೇಹಿ ವಾತಾವರಣದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರುವ ಸರಕಾರ ದುಡಿಯುವವರ ಸ್ನೇಹಿಯಾಗಿಯೂ ಇರಬೇಕಾದುದು ಪ್ರಾಥಮಿಕ ಅವಶ್ಯಕ. ಹೂಡಿಕೆಯಿಂದ ಸ್ಥಳೀಯರಿಗೆ ಉದ್ಯೋಗ ಸಿಗಲಿದೆ ಎಂಬ ಸಚಿವರ ಮಾತುಗಳೂ ಗಾಳಿ ಮೇಲೆ ತೇಲಿಸಿದ ಹುಸಿ ಭರವಸೆ  ಆಗುವ ಲಕ್ಷಣಗಳು ಸ್ಪಷ್ಟವಾಗಿವೆ. ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡುವ ಸ್ಪಷ್ಟ ನೀತಿ ಮತ್ತು ಅದರ ಜಾರಿಯ ಬದ್ಧತೆ ಮಾರ್ಗಗಳೂ ಖಚಿತ ಇದ್ದಾಗಲೇ ಕಾರ್ಯ ಸಾಧ್ಯ. ಅಂತಹ ಯಾವ ಒಂದು ಸಣ್ಣ ಅಂಶದ ನೀತಿ ನಿರ್ದೇಶನವನ್ನು ಸರಕಾರ ತೋರಿಲ್ಲ. ಕೈಗಾರಿಕೋದ್ಯಮಿಗಳಿಗೆ ಲಂಗು ಲಗಾಮು ಇಲ್ಲದಂತೆ ವರ್ತಿಸಲು ಬಿಟ್ಟು, ಸ್ಥಳಿಯರನ್ನು ದೂರ ಇಟ್ಟು ಉಳಿದವರನ್ನೂ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೊಡಗಿಸಿ ಹೊಣೆಯೇ ಇಲ್ಲದಂತೆ ವರ್ತಿಸುತ್ತಿರುವ ದಬ್ಬಾಳಿಕೆಯ ಹಲವು ಹತ್ತು ನಿದರ್ಶನಗಳಿವೆ. ಜಿಂದಾಲ್ ಕಂಪನಿಯ ದುಷ್ಟ ಆಡಳಿತದಿಂದಾಗಿ ಸ್ಥಳೀಯ ರೈತರು, ಕೂಲಿಕಾರ ಬಡವರು ತ್ಯಾಜ್ಯ ಕಿಟ್ಟದಲ್ಲಿ ಕಬ್ಬಿಣ ಚೂರು ಆರಿಸಲು ಹೋಗಿ ದುರಂತ ಸಾವನ್ನಪ್ಪಿರುವುದು ಕಣ್ಣೆದುರಿಗಿರುವುದು ಇತ್ತೀಚಿನ ಉದಾಹರಣೆ. ಆದ್ದರಿಂದ ಸ್ಥಳೀಯರಿಗೆ ಉದ್ಯೋಗ ಕೊಡುವ ಬದ್ಧಯೆಯಿಲ್ಲದ ಮಾತುಗಳು ಸಾರ್ವಜನಿಕರ ಕಣ್ಣಿಗೆ ಮಣ್ಣೆರೆಚುವ ವರಸೆಗಳಾಗಿ, ಜನದ್ರೋಹಿಯಾಗಿವೆ. ಈ ವಾಸ್ತವದ ಹಿನ್ನೆಲೆಯಲ್ಲಿ ಬೊಮ್ಮಾಯಿಯವರು ನುಡಿದಂತೆ ನಡೆದು ಬದ್ಧತೆ, ಪ್ರಾಮಾಣಿಕತೆ ತೋರಬೇಕು.

ಮೇಲಾಗಿ, ಸಾವಿರಾರು ಅಥವಾ ಲಕ್ಷ ಕೋಟಿಗಳ ಹೂಡಿಕೆ ನಿಜವಾಗುವುದು ಹೂಡಿಕೆ ಮಾಡಿದ ಮೇಲಷ್ಟೇ ಎನ್ನುವುದು ದಶಕಗಳ ಅನುಭವ. ವಿಶ್ವ ಆರ್ಥಿಕ ವೇದಿಕೆಯಲ್ಲಿ ದೊರೆತ ಭರವಸೆಯ ಒಂದು ಸಣ್ಣ ಪಾಲು ಮಾತ್ರ ರಾಜ್ಯಕ್ಕೆ ಬಂದಿರುವುದೇ ವಾಸ್ತವ. ದೇವೇಗೌಡ, ಎಸ್.ಎಂ. ಕೃಷ್ಣ, ಯಡಿಯೂರಪ್ಪ, ಶೆಟ್ಟರ್, ಸಿದ್ದರಾಮಯ್ಯ, ಕುಮಾರಸ್ವಾಮಿಯವರ ಆಡಳಿತದಲ್ಲಿಯೂ ಆಗಿರುವುದು ಇದೇ. ಆದ್ದರಿಂದ ವಿದೇಶಿ ಹೂಡಿಕೆಯ ವರ್ಣ ರಂಜಿತ ಚಿತ್ರ 2023 ರ ಚುನಾವಣೆಯನ್ನು ಕಣ್ಣಲ್ಲಿರಿಸಿ ನೀಡುವ ಹೇಳಿಕೆ ಆಗಬಾರದು.

ಇಂತಹ ಹೊರಗಿನಿಂದ ಬರುವ ಹೂಡಿಕೆಯಿಂದಲೇ ರಾಜ್ಯ ಅಭಿವೃದ್ಧಿ ಆಗುವುದು ಎನ್ನುವ ಭ್ರಮೆ ಸೃಷ್ಟಿಸುವುದೂ ಸಹ ಅಕ್ಷಮ್ಯ ಅಪರಾಧ. ಸ್ಥಳೀಯ, ಆಂತರಿಕ ಉತ್ಪಾದನೆ, ಆರ್ಥಿಕ ಬೆಳವಣಿಗೆಯ ಜನಪರ ಪರ್ಯಾಯ ಹಾದಿಯೇ ಮುಖ್ಯ. ಇಲ್ಲವಾದರೆ ಸೃಷ್ಟಿಯಾಗುವುದು ಉದ್ಯೋಗ, ಉಜ್ವಲ ಭವಿಷ್ಯ ಅಲ್ಲ, ಭ್ರಮೆಗಳ ಗೊಂಚಲು ಅಷ್ಟೇ̤

Leave a Reply

Your email address will not be published. Required fields are marked *