ಗುಜರಾತ್ ಚುನಾವಣಾ ಆಯುಕ್ತರು ಸಹಿ ಮಾಡಿದ ಎಂಒಯುಗಳನ್ನು ರದ್ದು ಮಾಡಬೇಕು

ಮುಖ್ಯ ಚುನಾವಣಾ ಅಯುಕ್ತರಿಗೆ ಸೀತಾರಾಂ ಯೆಚುರಿ ಪತ್ರ

ಗುಜರಾತ್ ಚುನಾವಣಾ ಆಯುಕ್ತರು ಕೈಗಾರಿಕಾ ಘಟಕಗಳೊಂದಿಗೆ ಅವು ತಮ್ಮ ಉದ್ಯೋಗಿಗಳ ಚುನಾವಣಾ ಭಾಗವಹಿಸುವಿಕೆಯ ಮೇಲ್ವಿಚಾರಣೆ ನಡೆಸುವುದಾಗಿ ಒಪ್ಪುವ ಎಂಒಯುಗಳನ್ನು ಮಾಡಿಕೊಂಡಿದ್ದಾರೆಂಬ ಸುದ್ದಿ ಅತ್ಯಂತ ಆಘಾತಕಾರಿ ಮತ್ತು ಆಕ್ರೋಶಕಾರಿ, ಆ ಎಂಒಯುಗಳನ್ನು  ಕೂಡಲೇ ರದ್ದುಗೊಳಿಸಬೇಕು ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ) – ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಆಗ್ರಹಿಸಿದ್ದಾರೆ. ಈ ಕುರಿತು ಅವರು  ಭಾರತದ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಿಗೆ ಅಕ್ಟೋಬರ್ 19ರಂದು  ಬರೆದ ಪತ್ರದಲ್ಲಿ 326 ನೇ ವಿಧಿಯ ಅಡಿಯಲ್ಲಿ ಭಾರತದ ಸಂವಿಧಾನವು ಮತದಾನದ ಹಕ್ಕನ್ನು ಖಾತರಿಪಡಿಸುತ್ತದೆ ಎಂಬುದನ್ನು ಆಯೋಗಕ್ಕೆ  ನೆನಪಿಸಬೇಕಾಗಿರುವುದು ದುರದೃಷ್ಟಕರ ಎಂದಿದ್ದಾರೆ; ಮತದಾನದ ಹಕ್ಕು ಮತದಾನ ಮಾಡದಿರುವ ಹಕ್ಕನ್ನು ಕೂಡ ಒಳಗೊಂಡಿದೆ ಎಂದೂ ಕೇಂದ್ರ ಸರ್ಕಾರ ವಾದಿಸಿತ್ತು ಮತ್ತು ಮತದಾನದ ಹಕ್ಕನ್ನು ಮೂಲಭೂತ ಕರ್ತವ್ಯವಾಗಿ ಹೇರಲು ಸಾಧ್ಯವಿಲ್ಲ ಎಂದು ಚುನಾವಣಾ ಸುಧಾರಣೆಗಳ ಕುರಿತ ಕಾನೂನು ಆಯೋಗ ಗಮನಿಸಿತ್ತು ಎಂಬ ಸಂಗತಿಯತ್ತವೂ ಚುನಾವಣಾ ಅಯೋಗದ ಗಮನ ಸೆಳೆಯುತ್ತ ಅವರು ಮತದಾನದ ಹಕ್ಕನ್ನು ಮೂಲಭೂತ ಕರ್ತವ್ಯವಾಗಿ ಜಾರಿಗೊಳಿಸುವಲ್ಲಿ ಕಾರ್ಪೊರೇಟ್‌ಗಳನ್ನು ತೊಡಗಿಸಿಕೊಳ್ಳುವ ಚುನಾವಣಾ ಆಯೋಗದ  ಪ್ರಸ್ತುತ ಕ್ರಮವು ಸಂಪೂರ್ಣವಾಗಿ ಅಸಾಂವಿಧಾನಿಕವಾಗಿದೆ ಮತ್ತು ರಹಸ್ಯ ಮತದಾನದ ಅಪಹಾಸ್ಯಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ಈ ಪತ್ರದ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ:

ಮಾನ್ಯರೇ,

ತಮ್ಮ ಗಮನವನ್ನು “ಮೊದಲ ಬಾರಿಗೆ, ಗುಜರಾತ್‌ನಲ್ಲಿ 1,000 ಕ್ಕೂ ಹೆಚ್ಚು ಕಾರ್ಪೊರೇಟ್ ಸಂಸ್ಥೆಗಳು ಚುನಾವಣಾ ಆಯೋಗದೊಂದಿಗೆ ‘ತಮ್ಮ ಉದ್ಯೋಗಿಗಳ ಚುನಾವಣಾ ಭಾಗವಹಿಸುವಿಕೆ’ಯ ಮೇಲ್ವಿಚಾರಣೆ ಮತ್ತು ಮತ ಚಲಾಯಿಸದವರ ಹೆಸರುಗಳನ್ನು ತಮ್ಮ ವೆಬ್‌ಸೈಟ್‌ಗಳು ಅಥವಾ ಕಚೇರಿ ಸೂಚನಾ ಫಲಕಗಳಲ್ಲಿ ಪ್ರಕಟಿಸಲು ಕ್ರಮ ಕೈಗೊಳ್ಳುವುದಾಗಿ ಹೇಳುವ  ಒಪ್ಪಂದಗಳಿಗೆ  ಸಹಿ ಮಾಡಿವೆ…… ಎಂಒಯುಗಳಿಗೆ ಪ್ರತ್ಯೇಕ ಘಟಕಗಳು ಹಾಗೂ ಉದ್ಯಮ ಸಂಸ್ಥೆಗಳೊಂದಿಗೆ ಸಹಿ ಹಾಕಲಾಗಿದ್ದು, ಮತದಾನದ ದಿನದವರೆಗೂ ಇನ್ನಷ್ಟು ಘಟಕಗಳಿಂದ ಇದನ್ನು ಪಡೆಯುವ ಪ್ರಯತ್ನ ಮುಂದುವರಿಯಲಿದೆ. ಈ ವರ್ಷದ ಕೊನೆಯಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ”(ಇಂಡಿಯನ್‍ ಎಕ್ಸ್‌ಪ್ರೆಸ್) ಎಂಬ ಅತ್ಯಂತ ಆಘಾತಕಾರಿ ಸುದ್ದಿ ವರದಿಯತ್ತ ಸೆಳೆಯುವುದಕ್ಕಾಗಿ ಈ ಪತ್ರ.

ಇದು ಅತಿರೇಕದ ಸಂಗತಿಯಲ್ಲದೆ ಬೇರೇನೂ ಅಲ್ಲ ಎಂದು ನಾವು ಬಲವಾಗಿ ಭಾವಿಸುತ್ತೇವೆ. ಇದು ಮತದಾರರ ನಿರಾಸಕ್ತಿ ನಿವಾರಿಸುವ ಒಂದು ಪ್ರಯತ್ನ ಎಂದು ಚುನಾವಣಾ ಆಯೋಗ  ಹೇಳಿಕೊಂಡಿದೆ, ಆದರೆ ಮತದಾನ ಮಾಡದವರನ್ನು ಹೆಸರಿಸಲು ಮತ್ತು ನಾಚಿಕೆಗೇಡು ಮಾಡುವ ಕ್ರಮವು ಕಡ್ಡಾಯ ಮತದಾನದ ಕಡೆಗೆ ಬಲವಂತ ಮಾಡುವ ಹೆಜ್ಜೆಯಾಗಿದೆ. ವರದಿಯು ವಾಸ್ತವವಾಗಿ -“ನಾವು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಸಹಾಯ ಮಾಡುವ 233 ಎಂಒಯುಗಳಿಗೆ (ಮೆಮೊರಾಂಡಮ್ ಆಫ್ ಅಂಡರ್‌ಸ್ಟ್ಯಾಂಡಿಂಗ್-ತಿಳುವಳಿಕೆ ಪತ್ರ) ಸಹಿ ಹಾಕಿದ್ದೇವೆ. ಗುಜರಾತ್‌ನಲ್ಲಿ ನಾವು ಮೊದಲ ಬಾರಿಗೆ, 1,017 ಕೈಗಾರಿಕಾ ಘಟಕಗಳಿಗೆ ಸೇರಿದ ಕಾರ್ಮಿಕರ ಚುನಾವಣಾ ಭಾಗವಹಿಸುವಿಕೆಯ ಮೇಲ್ವಿಚಾರಣೆಯನ್ನು ಮಾಡುತ್ತೇವೆ” ಎಂದು ಗುಜರಾತ್ ಮುಖ್ಯ ಚುನಾವಣಾ ಅಧಿಕಾರಿಯನ್ನು ಉಲ್ಲೇಖಿಸುತ್ತದೆ.

326 ನೇ ವಿಧಿಯ ಅಡಿಯಲ್ಲಿ ಭಾರತದ ಸಂವಿಧಾನವು ಮತದಾನದ ಹಕ್ಕನ್ನು ಖಾತರಿಪಡಿಸುತ್ತದೆ ಎಂಬುದನ್ನು ನಾವು ನಿಮಗೆ ನೆನಪಿಸಬೇಕಾಗಿರುವುದು ದುರದೃಷ್ಟಕರ.

ಕಡ್ಡಾಯ ಮತದಾನದ ಹಕ್ಕಿನ ಬಗ್ಗೆ ಪರಿಶೀಲಿಸುವಾಗ, ಸುಪ್ರೀಂ ಕೋರ್ಟ್ ಪ್ರತಿಕ್ರಿಯೆಯನ್ನು ಸಲ್ಲಿಸಲು ಕೇಂದ್ರವನ್ನು ಕೇಳಿತ್ತು ಎಂಬುದನ್ನು ನಾವು ನಿಮಗೆ ನೆನಪಿಸುತ್ತೇವೆ. 2015 ರಲ್ಲಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವರು ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ ಕಡ್ಡಾಯ ಮತದಾನದ ವ್ಯವಸ್ಥೆಯನ್ನು ತಂದರೆ , ಅದು ದೇಶದಲ್ಲಿ ಪ್ರಜಾಪ್ರಭುತ್ವ ವಿರೋಧಿ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ಹೇಳಿತ್ತು. ಮತದಾನದ ಹಕ್ಕು ಮತದಾನ ಮಾಡದಿರುವ ಹಕ್ಕನ್ನು ಕೂಡ ಒಳಗೊಂಡಿದೆ ಎಂದೂ ಕೇಂದ್ರ ಸರ್ಕಾರ ವಾದಿಸಿತ್ತು. ತನ್ನ ಸಲ್ಲಿಕೆಯಲ್ಲಿ, ಕೇಂದ್ರ ಸರ್ಕಾರವು ಚುನಾವಣಾ ಸುಧಾರಣೆಗಳ ಕುರಿತು ಕಾನೂನು ಆಯೋಗದ ವರದಿಯನ್ನು ಕೂಡ ಉಲ್ಲೇಖಿಸಿ, ಮತದಾನದ ಹಕ್ಕನ್ನು ಮೂಲಭೂತ ಕರ್ತವ್ಯವಾಗಿ ಹೇರಲು ಸಾಧ್ಯವಿಲ್ಲ ಎಂದು ಆಯೋಗವು ಗಮನಿಸಿದೆ ಎಂದು ಹೇಳಿದೆ.

ಮತದಾನದ ಹಕ್ಕನ್ನು ಮೂಲಭೂತ ಕರ್ತವ್ಯವಾಗಿ ಜಾರಿಗೊಳಿಸುವಲ್ಲಿ ಕಾರ್ಪೊರೇಟ್‌ಗಳನ್ನು ತೊಡಗಿಸಿಕೊಳ್ಳುವ ಚುನಾವಣಾ ಆಯೋಗದ  ಪ್ರಸ್ತುತ ಕ್ರಮವು ಸಂಪೂರ್ಣವಾಗಿ ಅಸಾಂವಿಧಾನಿಕವಾಗಿದೆ. ಇದಲ್ಲದೇ ಚುನಾವಣಾ ಬಾಂಡ್‌ಗಳ ಮೂಲಕ ಅನಾಮಧೇಯ ಕಾರ್ಪೊರೇಟ್ ನಿಧಿ ನೀಡಿಕೆಯ ಈಗಾಗಲೇ ವಿವಾದಾಸ್ಪದವಾಗಿರುವ  ಹಿನ್ನೆಲೆಯಲ್ಲಿ ಇದು ಕಾರ್ಪೊರೇಟ್‌ಗಳನ್ನು ಚುನಾವಣೆಯ ನಿರ್ವಹಣೆಯಲ್ಲಿ ಮತ್ತಷ್ಟು  ತೊಡಗಿಸಿಕೊಳ್ಳುತ್ತದೆ. ಇದಲ್ಲದೆ, ಪ್ರಸ್ತುತ ಇವಿಎಂ ಯಂತ್ರ ಎಣಿಕೆ ಪ್ರಕ್ರಿಯೆಯಲ್ಲಿ ಮತಪತ್ರಗಳನ್ನು ಮಿಶ್ರಣ ಮಾಡುವ ಹಿಂದಿನ ಅಭ್ಯಾಸವು ಪ್ರಾಯೋಗಿಕವಾಗಿ ಅಸ್ತಿತ್ವದಲ್ಲಿಲ್ಲ. ಇವಿಎಂ ಎಣಿಕೆಯು ಪ್ರತಿ ಮತಗಟ್ಟೆಯ ಮತದಾನದ ರೀತಿಯನ್ನು ಪಾರದರ್ಶಕವಾಗಿ ಕೊಡುತ್ತದೆ. ಇದು ಕಾರ್ಪೊರೇಟ್ ಮೇಲ್ವಿಚಾರಣೆಯ ಈ ಪ್ರಕ್ರಿಯೆಯಲ್ಲಿ ಪರಿಶೀಲಿಸಲ್ಪಡುವ ಕೆಲಸಗಾರರನ್ನು ಬೆದರಿಕೆ ಮತ್ತು ಸೇಡಿನ ಕ್ರಮಕ್ಕೆ ಬಹಳ ಗುರಿಯಾಗುವಂತೆ ಮಾಡುತ್ತದೆ. ಇದು ರಹಸ್ಯ ಮತದಾನದ ಅಪಹಾಸ್ಯಕ್ಕೆ ಕಾರಣವಾಗಿದೆ.

ಆದ್ದರಿಂದ, ಈ ವರದಿಯಾಗಿರುವ ನಡೆಯನ್ನು ರದ್ದುಪಡಿಸುವ ಮೂಲಕ ಎಲ್ಲಾ ವಿವಾದಗಳನ್ನು ನಿವಾರಿಸಬೇಕೆಂದು ನಾವು ಚುನಾವಣಾ ಆಯೋಗವನ್ನು ಆಗ್ರಹಿಸುತ್ತೇವೆ.

ತಮ್ಮ ವಿಶ್ವಾಸಿ

(ಸೀತಾರಾಂ ಯೆಚುರಿ)
ಪ್ರಧಾನ ಕಾರ್ಯದರ್ಶಿ

Leave a Reply

Your email address will not be published. Required fields are marked *