ಸರಕಾರಿ ಶಾಲೆಗಳ ನಿರ್ವಹಣೆಗಾಗಿ ದೇಣಿಗೆ ಸಂಗ್ರಹ-ಬಡವರನ್ನು ಶಿಕ್ಷಣದಿಂದ ವಂಚಿಸುವ ಹುನ್ನಾರ: ಸಿಪಿಐ(ಎಂ)

ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ನಿರ್ವಹಣೆಗಳಿಗಾಗಿ ವಿದ್ಯಾರ್ಥಿಗಳ ಪೋಷಕರಿಂದ ಮಾಸಿಕ ಕೊಡುಗೆಯನ್ನು ಪಡೆಯುವ ಮತ್ತು ಆ ಮೂಲಕ ಬಡವರ ಹಾಗೂ ಮಹಿಳಾ ಶಿಕ್ಷಣಕ್ಕೆ ಕುತ್ತು ತರಲಿರುವ, ಸರಕಾರಿ ಸುತ್ತೋಲೆಯನ್ನು ಈ ಕೂಡಲೇ ಹಿಂಪಡೆಯಲು ಸಿಪಿಐ(ಎಂ) ಒತ್ತಾಯ.

ಕರ್ನಾಟಕ ಸರಕಾರ ದಿನಾಂಕ: 19.10.2022ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಛೇರಿ ಮೂಲಕ ಹೊರಡಿಸಲಾದ ಸುತ್ತೋಲೆಯು (ಸಂಖ್ಯೆ: ಸಿ(7) ಸ.ಶಾಲಾ.ದೇಣಿಗೆ.01/2022-23). ಇದು ಸಾರ್ವಜನಿಕ ಶಿಕ್ಷಣವನ್ನು ದುರ್ಬಲಗೊಳಿಸುವ ಹಾಗೂ ಆ ಮೂಲಕ ಬಡವರು, ದಲಿತರು ಹಾಗೂ ಮಹಿಳಾ ಶಿಕ್ಷಣವನ್ನು ನಿರಾಕರಿಸುವ ಮತ್ತು ಸಾರ್ವಜನಿಕ ಶಿಕ್ಷಣವನ್ನು ಕಳಚಿಹಾಕಿ ಖಾಸಗೀ ಶಿಕ್ಷಣವನ್ನು ಬಲಗೊಳಿಸುವ, ದುರುದ್ದೇಶದಿಂದ ಹೊರಡಿಸಿದ ಸುತ್ತೋಲೆಯಾಗಿದೆ. ತಕ್ಷಣವೇ ಸದರಿ ಸುತ್ತೋಲೆಯನ್ನು ವಾಪಾಸು ಪಡೆಯುವಂತೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ), ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಒತ್ತಾಯಿಸುತ್ತದೆ.

ಈ ಸುತ್ತೋಲೆಯು, ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶೈಕ್ಷಣಿಕ ಸ್ಥಿತಿಗತಿಯನ್ನು ಉತ್ತಮಪಡಿಸಲು ಹಾಗೂ ಸೌಲಭ್ಯಗಳಿಂದ ಬಲಪಡಿಸಲು, ವಿದ್ಯಾರ್ಥಿಗಳ ಪೋಷಕರುಗಳಿಂದ ಮಾಸಿಕ ತಲಾ 100 ರೂ.ಗಳ ಕೊಡುಗೆ ಅಥವಾ ದಾನಗಳನ್ನು ಸಂಗ್ರಹಿಸುವಂತೆ ಶಾಲಾ ಮೇಲುಸ್ತುವಾರಿಗಳಿಗೆ ಮತ್ತು ಆ ಮೂಲಕ ಅಪ್ರತ್ಯಕ್ಷವಾಗಿ ಶಾಲಾ ಶಿಕ್ಷಕ ಸಿಬ್ಬಂದಿ ವರ್ಗದವರಿಗೆ ಆದೇಶಿಸುತ್ತದೆ.

ಈ ಕೊಡುಗೆಯನ್ನು ಮನವೊಲಿಸಿ ಪಡೆಯಬೇಕೇ ಹೊರತು ಬಲವಂತವಾಗಿಯಲ್ಲವೆಂದು ಸುತ್ತೋಲೆಯು ದಪ್ಪಕ್ಷರಗಳಲ್ಲಿ ಹೇಳಿದರೂ, ಪರಿಣಾಮ ಒಂದೇ ಆಗಿದೆ. ವಿದ್ಯಾರ್ಥಿಗಳ ಪೋಷಕರು ವಾರ್ಷಿಕ ಪ್ರತಿ ವರ್ಷ 1000 ರೂ. ಗಳ ಕೊಡುಗೆ ನೀಡುವಂತೆ ಇದು ಒತ್ತಾಯಿಸುತ್ತದೆ.

ಈ ಕೊಡುಗೆಗಳ ಮೂಲಕ ಶಾಲೆ ಹಾಗೂ ಶೌಚಾಲಯಗಳ ಸ್ವಚ್ಛತೆ, ಕುಡಿಯುವ ನೀರು ಹಾಗೂ ವಿದ್ಯುತ್ ಬಿಲ್ ಪಾವತಿಸಲು ಮತ್ತು ಆಟದ ಮೈದಾನದ ಸುಧಾರಣೆ, ಗಣಕ ಯಂತ್ರಗಳ ರಿಪೇರಿ, ಬೋಧನೋಪಕರಣಗಳು, ಅಗತ್ಯವಾದ ಅತಿಥಿ ಶಿಕ್ಷಕರ ವೇತನಗಳು ಸೇರಿದಂತೆ, ಮೊದಲ ಹಾಗೂ ಎರಡನೇ ಆಧ್ಯತೆಯಲ್ಲಿ ಪಟ್ಟಿ ಮಾಡಿದ ಸುಮಾರು 17 ಅಗತ್ಯಗಳಿಗಾಗಿ ಖರ್ಚು ಮಾಡಲು ಮೇಲುಸ್ತುವಾರಿ ಸಮಿತಿಗಳಿಗೆ ಸೂಚಿಸುತ್ತದೆ ಮತ್ತು ಸರಕಾರ ತನ್ನ ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತದೆ.

ಒಂದೆಡೆ, ಈ ಸುತ್ತೋಲೆಯು ಸರಕಾರಿ ಪ್ರಾಥಮಿಕ ಹಾಗು ಪ್ರೌಢ ಶಾಲೆಗಳಲ್ಲಿ ಶೈಕ್ಷಣಿಕ ಕೆಲಸಗಳಿಗೆ ಪೂರಕವಾದ ಸೌಲಭ್ಯಗಳಿಲ್ಲವೆಂದು ಮತ್ತು ಅವುಗಳಿಗಾಗಿ ಸರಕಾರ ನೆರವು ನೀಡದೆಂಬ ಸಂದೇಶವನ್ನು ಸಾರ್ವಜನಿಕರಿಗೆ ರವಾನಿಸಿ ಮತ್ತು ಸೌಲಭ್ಯಗಳಿಲ್ಲದ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಯಾಕೆ ಸೇರಿಸುತ್ತೀರೆಂಬ ಪ್ರಶ್ನೆಯನ್ನು ಎಸೆಯುವ ಮೂಲಕ ಸಾರ್ವಜನಿಕ ಶಿಕ್ಷಣವನ್ನು ದುರ್ಬಲಗೊಳಿಸುವ ಹಾಗೂ ಶಿಕ್ಷಣ ಪಡೆಯಲೇ ಬೇಕೆಂಬುವವರನ್ನು ಖಾಸಗೀ ಶಿಕ್ಷಣ ಸಂಸ್ಥೆಗಳ ಕಡೆ ದೂಡುವ, ಜನ ಹಾಗೂ ಬಡವರ ವಿರೋಧಿ ಕೆಲಸವನ್ನು ಮಾಡುತ್ತದೆ.

ಇನ್ನೊಂದೆಡೆ, ಈ ಸುತ್ತೋಲೆಯು ಖಾಸಗೀ ಶಿಕ್ಷಣ ಸಂಸ್ಥೆಗಳು ಯಾವ ಯಾವ ವಿಷಯಗಳ ಮೇಲೆ ಹೊಸದಾಗಿ ಕೊಡುಗೆಗಳನ್ನು ಪಡೆಯಬಹುದೆಂಬುದನ್ನು ಅಪ್ರತ್ಯಕ್ಷವಾಗಿ ಹೇಳುತ್ತಾ ಖಾಸಗೀ ಶಿಕ್ಷಣಾರ್ಥಿಗಳ ಲೂಟಿಗೆ ನೆರವಾಗುತ್ತದೆ.

ಮತ್ತೊಂದು ಕಡೆ, ಈ ಸುತ್ತೋಲೆಯು ಬಡವರು, ದಲಿತರು, ಮಹಿಳಾ ಶಿಕ್ಷಣಕ್ಕೆ ಪೂರಕವಾಗಿದ್ದ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಸೌಲಭ್ಯಗಳಿರುವುದಿಲ್ಲ ಮತ್ತು ಕನಿಷ್ಟ ಸೌಲಭ್ಯಗಳು ಬೇಕೆಂದರೂ ನೀವು ಕೊಡುಗೆ ನೀಡಬೇಕಾದದ್ದೆ ಎಂದು ಒತ್ತಾಯಿಸುತ್ತದೆ. ಇದು ಸಂವಿಧಾನ ಕೂಡ ಮಾಡಿದ 14 ವರ್ಷದ ವರೆಗಿನ ಉಚಿತ ಶಿಕ್ಷಣದ ಹಕ್ಕನ್ನು ನಗ್ನವಾಗಿ ಉಲ್ಲಂಘಿಸುತ್ತದೆ.

ಇದು, ಇನ್ನು ಮುಂದೆಯೂ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಸಿಬ್ಬಂದಿಗಳನ್ಬು, ಶಿಕ್ಷಕರನ್ನು ತುಂಬುವುದಿಲ್ಲ. ಮಾತ್ರವಲ್ಲಾ, ಹೊಸದಾಗಿ ಖಾಲಿಯಾಗುವ ಸಿಬ್ಬಂದಿಗಳ ಹುದ್ದೆಗಳನ್ನು ಸರಕಾರ ತುಂಬುವುದಿಲ್ಲ ಎಂಬ ಜನ ವಿರೋಧಿ ಸಂದೇಶವನ್ನು ಬಯಲುಗೊಳಿಸುತ್ತದೆಯಲ್ಲದೇ, ಮುಂದೆ ಸಿಬ್ಬಂದಿಗಳ ಕೊರತೆ ಎದುರಿಸುವಾಗ, ಮಾತ್ರವಲ್ಲಾ ಇತರೆ ಸೌಲಭ್ಯಗಳು ಬೇಕೆನ್ನುವಾಗ ನೀವುಗಳೇ ಕೊಡುಗೆ ನೀಡುವ ಮೂಲಕ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಿರೆಂದು ಹಾಗೂ ಇತರೆ ಸೌಲಭ್ಯಗಳನ್ನು ಪಡೆದುಕೊಳ್ಳಿರೆಂದು ಹೇಳುತ್ತದೆ. ಇದರಿಂದಾಗಿ, ಕೊಡುಗೆ ನೀಡಲಾಗದ ಸುಮಾರು 1.5 ಕೋಟಿಗೂ ಅಧಿಕ ಸಂಖ್ಯೆಯ ಬಿಪಿಎಲ್ ಹಾಗೂ ಅಂತ್ಯೋದಯ ಮತ್ತು ಎಪಿಎಲ್ ಕುಟುಂಬಗಳ ಮಕ್ಕಳಿಗೆ ಇನ್ನು ಮುಂದೆ ಶಿಕ್ಷಣವೆಂಬುದು ಮರೀಚಿಕೆಯಾಗಲಿದೆ.

ಕೇರಳದ ಎಡ ಮತ್ತು ಪ್ರಜಾಸತ್ತಾತ್ಮಕ ರಂಗದ ಸರಕಾರ ಶಿಕ್ಷಣ ರಂಗದಲ್ಲಿ ಸಾರ್ವಜನಿಕ ಬಂಡವಾಳ ತೊಡಗಿಸುವಿಕೆಯನ್ನು ಹೆಚ್ಚಿಸುವ ಮೂಲಕ ಗುಣಮಟ್ಟದ ಶಿಕ್ಷಣ ಹಾಗೂ ಸೌಲಭ್ಯಗಳನ್ನು ಒದಗಿಸಿ ಖಾಸಗೀ ಶಿಕ್ಷಣ ಸಂಸ್ಥೆಗಳ ದಶಲಕ್ಷಾಂತರ ವಿದ್ಯಾರ್ಥಿಗಳು ಸರಕಾರಿ ಶಾಲೆಗಳಲ್ಲಿ ಪ್ರವೇಶ ಪಡೆಯುವಂತಹ ಪರಿಸ್ಥಿತಿಯನ್ನು ನಿರ್ಮಿಸಿದೆ. ಅದರೇ ರಾಜ್ಯದ ಬಿಜೆಪಿ ಸರಕಾರ ತದ್ವಿರುದ್ದವಾಗಿ ನಡೆದುಕೊಳ್ಳುತ್ತಿರುವುದು ತೀವ್ರ ಖಂಡನೀಯವಾಗಿದೆ.

ಈ ಕೂಡಲೇ, ಈ ಸಂವಿಧಾನ ವಿರೋಧಿ ಹಾಗೂ ಬಡವರ, ದಲಿತರ ಮತ್ತು ಮಹಿಳಾ ವಿರೋಧಿಯಾದ ಸುತ್ತೋಲೆಯನ್ನು ವಾಪಾಸು ಪಡೆಯಬೇಕು. ಅದೇ ರೀತಿ, ಸರಕಾರದ ಯಾವೊಂದು ಶಾಲೆಯು ಮುಚ್ಚದಂತೆ ಮತ್ತು ಪ್ರತಿಯೊಂದು ಶಾಲೆಯು ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಸೌಲಭ್ಯಗಳನ್ನು ಒದಗಿಸಲು, ಅಗತ್ಯ ಸಾರ್ವಜನಿಕ ಬಂಡವಾಳವನ್ನು ತೊಡಗಿಸುವಂತೆ ಸಿಪಿಐ(ಎಂ) ಮತ್ತೊಮ್ಮೆ ಬಲವಾಗಿ ಒತ್ತಾಯಿಸುತ್ತದೆ.

ಯು.ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *