ಪ್ರತಿಮೆಗಳ ಅನಾವರಣದ ರಾಜಕಾರಣ

ಎಲ್ಲಾ ರಂಗಗಳಲ್ಲಿಯೂ ವಿಫಲವಾಗಿ ಜನರ ಅತೃಪ್ತಿಯನ್ನು ಎದುರಿಸುತ್ತಿರುವ ಬಿಜೆಪಿ ಪಕ್ಷ ದೇಶದಾದ್ಯಂತ `ಪ್ರತಿಮಾ ರಾಜಕಾರಣ’ ಕ್ಕೆ ಇಳಿದಿದೆ. ಗುಜರಾತ್ ನಲ್ಲಿ ಲಿಬರ್ಟಿ ಮೀರಿಸುವ ಜಗತ್ತಿನಲ್ಲೇ ಎತ್ತರದ ಸರ್ದಾರ್ ವಲ್ಲಭಾಯ್ ಪಟೇಲ್ ರವರ ಪ್ರತಿಮೆಯನ್ನು ಅನಾವರಣ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಪಟೇಲರನ್ನು ತಮ್ಮವರನ್ನಾಗಿಸಿಕೊಳ್ಳುವ ಪ್ರಯತ್ನ ನಡೆಸಲಾಯಿತು. ಬಂಡವಾಳಶಾಹಿ ಬೆಳವಣಿಗೆಗೆ ಅತಿ ಅಗತ್ಯವಾದ ಒಂದು ರಾಜ್ಯಾಡಳಿತದ ಸಂರಚನೆಯನ್ನು ಮಾಡಿದ ಪಟೇಲರನ್ನು ಐಕ್ಯತೆಯ ಸಂಕೇತವೆಂದು ಬಿಂಬಿಸಿ ಅಬ್ಬರದ ಪ್ರಚಾರವನ್ನೂ ಮಾಡಲಾಯಿತು. ವಿಚಿತ್ರವೆಂದರೆ ಅದನ್ನು ಮಾಡಿದ ಕಾಂಗ್ರೆಸ್ ಪಕ್ಷದ ವಿರುದ್ಧವೇ ಪಟೇಲರನ್ನು ಬಳಸಿಕೊಂಡು ತನ್ನ ಸೈದ್ಧಾಂತಿಕ ವಾದಕ್ಕೆ, ಇಂದಿನ ಮತೀಯವಾದಿ ರಾಜಕೀಯ ಅಜೆಂಡಾಕ್ಕೆ ಜನರನ್ನು ಪ್ರಭಾವಿಸಿದ್ದು. ಅದಾದ ಬಳಿಕ ಎಲ್ಲೆಡೆಗಳಲ್ಲಿ ಬೃಹತ್ ಪ್ರತಿಮೆಗಳ ಸ್ಥಾಪನೆಯ ಒಂದು ಟ್ರೆಂಡನ್ನೇ ಸೃಷ್ಟಿಸಲಾಯಿತು.ಇಂತಹವುಗಳ ಜೊತೆ ಧಾರ್ಮಿಕ ಕೇಂದ್ರಗಳ ಹೈಟೆಕ್ ‘ ಜೀರ್ಣೋದ್ಧಾರ, ಹೊಸ ದೇವಸ್ಥಾನಗಳ ಸಂಕೀರ್ಣ ಗಳ ನಿರ್ಮಾಣ ಮತ್ತು ಅನಾವರಣಗಳ ಸರಣಿಯನ್ನೇ ಆರಂಭಿಸಲಾಯಿತು. ಇದಕ್ಕೆ ಅಭಿವೃದ್ಧಿಗೆಂದು ಮೀಸಲಿಟ್ಟ ಸಾರ್ವಜನಿಕರ ಹಣವನ್ನು ಖರ್ಚು ಮಾಡುತ್ತಿರುವುದು. ತನ್ನ ಲಾಭಕ್ಕಾಗಿ ಅದು ಖಾಸಗಿ ರಂಗದಲ್ಲಿಯೂ ವ್ಯಯಿಸುತ್ತಿದೆ.

ಈಗಲೂ ಕರ್ನಾಟಕದ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರು ಅನಾವರಣಗೊಳಿಸಿದ ಕೆಂಪೇಗೌಡರ ಪ್ರತಿಮೆಯ ನಿರ್ಮಾಣಕ್ಕೆ ಬಳಸಿದ್ದು ಸರಕಾರದ ಹಣವನ್ನು. ಅದಕ್ಕೆಸರಕಾರದ ಬದಲು ವಿಮಾನ ನಿಲ್ದಾಣದ ಮಾಲೀಕರು ವ್ಯಯಿಸಬಹುದಿತ್ತು ಎನ್ನುವ ಟೀಕೆಗಳೂ ವ್ಯಕ್ತವಾಗಿವೆ. ಇದನ್ನು ಬಿಜೆಪಿ ತನ್ನ ಹೆಗ್ಗಳಿಕೆ ಎಂಬಂತೆ, ಪ್ರಗತಿಯ ಸಂಕೇತವೆಂದು ಕರೆದು ತಾನೇ ಆ ಪರಂಪರೆಗೆ ಸರ್ವ ವಾರಸುದಾರನೆಂಬಂತೆ ಬಿಂಬಿಸಿಕೊಳ್ಳುತ್ತಿರುವುದು ಒಂದು ಕೀಳು ರಾಜಕೀಯ ತಂತ್ರವೆಂದೂ ಟೀಕೆಗಳು ವ್ಯಕ್ತಗೊಂಡಿವೆ. ಈ ಮೂಲಕ ಅದು ಮುಂಬರುವ ಚುನಾವಣೆಯಲ್ಲಿ ಮತ ಸೆಳೆಯುವ ಜಾತಿ ಓಲೈಕೆಯ ತಂತ್ರವನ್ನು ಅನುಸರಿಸುತ್ತಿದೆ. ಈ ಧಾವಂತದಿಂದ ಕೆಂಪೇಗೌಡರು ಎಲ್ಲರಿಗೂ ಸೇರಿದವರು ಎನ್ನುವ ಭಾವನೆಯನ್ನೆ ಒಡೆಯುತ್ತದೆ ಎನ್ನುವುದೇ ಮುಖ್ಯ ಅಂಶ.

ಈಗಾಗಲೇ ಚುನಾವಣೆಯ ಸಿದ್ಧತೆಯಲ್ಲಿ ಮುಳುಗಿರುವ ಬಿಜೆಪಿ ಪಕ್ಷ ‘ಸಾಮಾಜಿಕ ಇಂಜನೀಯರಿಂಗ್’ ಎಂದು ಕರೆದು ಕೊಳ್ಳುವ ಜಾತಿಗಳ ಓಲೈಕೆಯ ಕೀಳು ತಂತ್ರಕ್ಕೆ ಇಳಿದಾಗಿದೆ. ಬಹುತೇಕ ಬಲಪಂಥೀಯ ಪಕ್ಷಗಳು ಈ ಸ್ಪರ್ದೆಗೆ ಇಳಿಯುತ್ತಿವೆ. ಇತ್ತೀಚೆಗೆ ಬಿಜೆಪಿ ಕಲಬುರ್ಗಿಯಲ್ಲಿ ಹಿಂದುಳಿದ ಜಾತಿಗಳ ಸಮಾವೇಶವನ್ನು ನಡೆಸಿತು. ಇದೇ ನವೆಂಬರ್ 21ರಂದು ಬಳ್ಳಾರಿಯಲ್ಲಿ ಮೀಸಲಾತಿ ಪ್ರಮಾಣದ ಹೆಚ್ಚಳವನ್ನೇ ನೆಪವಾಗಿರಿಸಿ ಎಸ್.ಸಿ ಮತ್ತು ಎಸ್.ಟಿ.ಗಳ ಸಮಾವೇಶವನ್ನು ಸಂಘಟಿಸಿ ದೂರವಾಗುತ್ತಿರುವ ಬೆಂಬಲವನ್ನು ಕ್ರೋಢೀಕರಿಸಲು ಯತ್ನಿಸುತ್ತಿದೆ. ಮೋದಿಯವರಿಂದ ಈಗ ನಡೆದ ಕೆಂಪೇಗೌಡರ ಗುಣಗಾನ ಮತ್ತು ಅಭಿವೃದ್ದಿಯ ಭಾಷಣವೂ ಅದೇ ಸರಣಿಯಲ್ಲಿರುವುದು ಸ್ಪಷ್ಟ.

ಕರ್ನಾಟಕದಲ್ಲಿ ಮತ್ತೇ ಅಧಿಕಾರಕ್ಕೆ ಮರಳ ಬೇಕೆಂದರೆ 150 ಸ್ಥಾನಗಳನ್ನು ಗೆಲ್ಲುವ ಮಿಷನ್ 150ನ್ನು ಮೋ-ಶಾ ನಿಗದಿ ಮಾಡಿದ್ದಾರೆ. ಅದರ ಜಾರಿಯಲ್ಲಿ ದಕ್ಷಿಣ ಕರ್ನಾಟಕ ಬಹಳ ಮುಖ್ಯ ಇದೆ. ಮತ್ತು ಅದಕ್ಕಾಗಿ ಅದೆಷ್ಟೇ ಸಂಪನ್ಮೂಲ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆಡಳಿತದ ಅಧಿಕಾರ ಬಳಸಲು ಸಿದ್ದವಾಗಿದೆ. ತನ್ನ ಗುರಿಯನ್ನು ಸಾಧಿಸಬೇಕಾದರೆ ಅದರಲ್ಲೂ ಜೆಡಿ(ಎಸ್) ಮತ್ತು ಕಾಂಗ್ರೆಸ್ ಪಕ್ಷಗಳ ಜೊತೆಗಿರುವ ಒಕ್ಕಲಿಗರನ್ನು ಹೇಗಾದರೂ ಮಾಡಿ ಸೆಳೆದುಕೊಳ್ಳದೇ ಇದು ಅಸಾಧ್ಯ. ಇದಕ್ಕಾಗಿ ಕೆಂಪೇಗೌಡರ ಮೇಲಿನ ಅಭಿಮಾನವನ್ನು ಹೀಗೆ ಮತ್ತು ಮಠಾಧೀಶರ ಮೂಲಕ ಬಳಸಲು ಯತ್ನಿಸುತ್ತಿದೆ. ವೈಧಿಕ ಪರಂಪರೆಗೆ ಭಿನ್ನವಾಗಿರುವ, ಪ್ರತಿರೋಧದ ಸಂಸ್ಕೃತಿ ಹೊಂದಿರುವ ಆದಿಚುಂಚಲಗಿರಿಯ ಪೀಠಗಳನ್ನೂ ವೈಧಿಕತೆಯ ತನ್ನ ಸೈದ್ದಾಂತಿಕತೆಗೆ ಸೆಳೆಯುವ, ಪ್ರಭಾವಿಸುವ ಮಟ್ಟಕ್ಕೆ ಹೋಗಿರುವುದೂ ಗಮನಾರ್ಹ.

ವಿಜಯನಗರ ಸಾಮ್ರಾಟರ ಅಧೀನದಲ್ಲಿನ ಪಾಳೇಗಾರನಾಗಿದ್ದ ಕೆಂಪೇಗೌಡರವರು ಅಂದಿನ ವಾಣಿಜ್ಯ ವ್ಯವಹಾರದ ಬೆಳವಣಿಗೆಗೆ ಇದ್ದ ಅವಕಾಶಗಳನ್ಮು ಗ್ರಹಿಸಿ ಬೆಂಗಳೂರು ನಗರಕ್ಕೆ ಅಸ್ಥಿಭಾರ ಹಾಕಿ, ವಿಸ್ತರಿಸುವ ಕ್ಷಿತಿಜಗಳನ್ನೂ ನೀಡಿದ ದೂರಾಲೋಚನೆಯ ಮುತ್ಸದ್ಧಿ. ಇಂದು ಬೆಂಗಳೂರು ಗೌಡರ `ಕನಸಿನ’ ಗಡಿಗಳನ್ನೂ ದಾಟಿ ಅಂದು ಊಹಿಸಲಾರದಷ್ಟು ಮುಂದಕ್ಕೆ ಬೆಳೆದಿರುವಲ್ಲಿ ಆಧುನಿಕತೆಯನ್ನು ಕಾಲದಿಂದ ಕಾಲಕ್ಕೆ ಮೈಗೂಡಿಸಿಕೊಂಡಿರುವುದು ಮತ್ತು ಆಯಾ ಕಾಲದಲ್ಲಿ ಆಳಿದ ಅರಸರು, ಪ್ರಜಾಪ್ರತಿನಿಧಿಗಳ ಕೊಡುಗೆ ಅಪಾರವಿದೆ. ಈ ಪ್ರಕ್ರಿಯೆಯಲ್ಲಿ ಕೆಂಪೇಗೌಡರನ್ನೂ ಒಳಗೊಂಡು ಯಾವುದೇ ಆಡಳಿತಗಾರರನ್ನು ಜಾತಿಯ ಜೊತೆ ನಂಟು ಹಾಕುವುದು ಸರಿಯಲ್ಲ. ಅದು ಅವರಿಗೆ ಮಾಡುವ ಅವಮಾನ. ಕೆಂಪೇಗೌಡರ ಬಳಿಕ ಬೆಂಗಳೂರು ಒಳಗೊಂಡು ಇಡೀ ಈ ದಕ್ಷಿಣ ಕರ್ನಾಟಕ ಬೆಳೆಯುವಲ್ಲಿ ಹೈದರಾಲಿ, ಟಿಪ್ಪು ಸುಲ್ತಾನ್, ಮೈಸೂರಿನ ಅರಸರ ಕೊಡುಗೆಗಳು ಅತ್ಯಧಿಕವಿದೆ. ಹಾಗೆಯೇ ವಸಾಹತುಶಾಹಿ ಆಡಳಿತದಲ್ಲಿ ಬ್ರಿಟೀಷರ ಪಾಲು ನಗಣ್ಯವಲ್ಲ.

ಭಾರತ ಸ್ವತಂತ್ರ ಪಡೆದ ನಂತರ ನಮ್ಮ ಪ್ರಜಾಸತ್ತಾತ್ಮಕ ಗಣರಾಜ್ಯದ ಆಧುನಿಕ ಸರಕಾರ ಪ್ರಧಾನಿ ಪಂ.ಜವಹರಲಾಲ್ ನೆಹರೂ, ಮುಂತಾದವರ ಅನುಪಮ ಕೊಡುಗೆಗಳೂ ಇವೆ. ಇವನ್ನೆಲ್ಲಾ ಮರೆಸುವ ಪ್ರಯತ್ನ ಮೇಲಾಗಿ ಬೆಂಗಳೂರು ನಿಜಕ್ಕೂ ಕಟ್ಟಿದವರು ಶ್ರಮಿಕರು. ಆದರೆ ಇವರನ್ನೆಲ್ಲೂ ನೆನೆಯುವುದಿಲ್ಲ. ಆದರೆ ಬಿಜೆಪಿ ಇವನ್ನೆಲ್ಲವನ್ನೂ ಗೌಣ ಮಾಡಿ ಉಳಿದವರನ್ನೆಲ್ಲಾ ಮರೆಗೆ ಸರಿಸುವ ಉದ್ದೇಶ ಸಂಕುಚಿತವಾದೀ ಚುನಾವಣಾ ರಾಜಕಾರಣವೇ ಆಗಿದೆ. ತನ್ಮ ಈ ಉದ್ದೇಶಕ್ಕೆ ಸರಕಾರದ ಹಣವನ್ನು ಅದಕ್ಕಾಗಿ ವಿನಿಯೋಗಿಸಿದ್ದು ಖಂಡನೀಯ.

ಇಂತಹ ಪ್ರತಿಮೆಗಳನ್ನೇನೋ ಸ್ಥಾಪನೆ ಮಾಡುತ್ತಾರೆ. ಆದರೆ ಅವರ ವಿಚಾರಧಾರೆಗಳನ್ನು ಮರೆಯುತ್ತಾರೆ ಅಥವಾ ಅದಕ್ಕೆ ತದ್ವಿರುದ್ಧ ನಡೆಯುವುದು ಹೊಸದೇನಲ್ಲ. ಬಿಜೆಪಿ ಸಂಘ ಪರಿವಾರ ಇಂತಹ ಪ್ರತಿಮೆಗಳು, ಸ್ಥಾವರಗಳ ನಿರ್ಮಾಣದಲ್ಲಿ ಮುಂದೆ ಇರುತ್ತದೆ. ಒಂದು ಪ್ರತಿಮೆಗೆ ಒಂದು ಅಸ್ಮಿತತೆ, ಒಂದು ಅಸ್ಮಿತತೆಗೆ ಪ್ರತಿಮೆಯ ಸೃಷ್ಟಿ ಅದರ ಸೈದ್ಧಾಂತಿಕ, ರಾಜಕೀಯ ತಂತ್ರಕ್ಕೆ ಸರಿ ಹೊಂದುತ್ತದೆ. ವ್ಯಕ್ತಿಗಳೊಂದಿಗೆ ಸೃಷ್ಟಿಗೊಳ್ಳುವ ಜಾತಿ, ಮತಧರ್ಮದಂತಹ ಒಂದು ಅಸ್ಮಿತತೆ ದುರ್ಬಳಕೆ ಮಾಡಿಕೊಳ್ಳಲು ಸುಲಭ ಹಾದಿ ಮಾಡಿ ಕೊಡುತ್ತದೆ.

ಇಂತಹ ಅಸ್ಮಿತತೆಗಳು ಇತರರಲ್ಲೂ ಇಲ್ಲವೆಂದೇನಲ್ಲ. ಮೈಸೂರಿನಲ್ಲಿ ಟಿಪ್ಪು ಜಯಂತಿಯಂದು ಮಾಜಿ ಸಚಿವ, ಶಾಸಕ ತನ್ವೀರ್ ಸೇಠ್ ರವರು ಟಿಪ್ಪು ಸುಲ್ತಾನರ ಪ್ರತಿಮೆ ಸ್ಥಾಪನೆ ಮಾಡುವ ಪ್ರಕಟನೆ ಸಂಘಪರಿವಾರಕ್ಕೆ ಬಹು ದೊಡ್ಡ ಅಪರಾಧವಾಗಿ ಕಾಣುತ್ತಿದೆ. ಉಗ್ರಹಿಂದುತ್ವವಾದಿ ಪ್ರಮೋದ ಮುತಾಲಿಕ ಆಕ್ಷೇಪಿಸಿ ಅದನ್ನು ಧ್ವಂಸಗೊಳಿಸುವ ಬೆದರಿಕೆ ಹಾಕಿರುವುದು ಗಂಭೀರ ವಿಚಾರ. ಬ್ರಿಟೀಶರ ವಿರುದ್ಧ ಪ್ರಾಣ ಪಣಕ್ಕಿಟ್ಟು ಹೋರಾಡಿದ ಟಿಪ್ಪುವಿನ ಬಗ್ಗೆ ಹೋರಾಡದ ಮತ್ತು ಕೈಜೋಡಿಸಿದ್ದ ಸಂಘಪರಿವಾರಕ್ಕೆ ಸಿಟ್ಟು ಬರುವುದು ಸಹಜವೇ ಆಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಮುತಾಲಿಕರಂಥವರು ಟಿಪ್ಪು ಜಯಂತಿ ಆಚರಿಸಿದ ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ಗೋಮೂತ್ರದಿಂದ ಶುದ್ಧಗೊಳಿಸಲು ಹೋಗಿದ್ದಕ್ಕೆ ಏನರ್ಥವಿದೆ? ಜಾತಿಯ ಮೇಲಿರಿಮೆ ಮತ್ತು ಅನ್ಯಮತದ್ವೇಷದ ಪ್ರಕಟನೆಯಲ್ಲವೇ? ಶುದ್ಧಗೊಳ್ಳಬೇಕಾದ್ದು ಮೈದಾನವಲ್ಲ ಮುತಾಲಿಕರಂಥವರ ಮತೋನ್ಮಾದದ ಕಲುಷಿತ ಮನಸ್ಸು, ಮೆದುಳು.

ಇಂತಹ ಚಿಂತನೆ ಮತ್ತು ಕೃತ್ಯಗಳಿಂದ ಮಹನೀಯರನ್ನು ಜನರೆದುರು ಕುಬ್ಜರನ್ನಾಗಿಸುತ್ತಾರೆ. ಆದರೆ ತಾತ್ಕಾಲಿಕವಾಗಿ ಕೆಲವರು ಪ್ರಭಾವಕ್ಕೊಳಗಾದರೂ ಇವೆಲ್ಲವನ್ನೂ ಮೀರುವ ಪ್ರಬುಧ್ಧತೆ ನಮ್ಮ ನಾಡಿನ ಜನತೆಗಿದೆ.

ಪ್ರತಿಮೆಗಳನ್ನೇ ಬಳಸಿ ದ್ವೇಷ, ಅಸಹನೆ, ರಾಜಕೀಯ ದುರುದ್ದೇಶಗಳನ್ನು ಬೆಳೆಸುವುದಕ್ಕೆ ತಡೆ ಹಾಕುವುದು ಸಂಪನ್ಮೂಲಗಳ ಉಳಿತಾಯದ ಹಾಗೂ ಸಮಾಜದ ಸ್ವಾಸ್ತ್ಯ ಕಾಯುವ ದೆಸೆಯಿಂದಲೂ ಅಗತ್ಯ. ಈಗಲೂ ಮಳೆಹಾನಿಗೀಡಾದ ಜನರಿಗೆ ಪರಿಹಾರವಿಲ್ಲ. ವಸತಿ ಹೀನತೆ, ಬೆಲೆ ಏರಿಕೆ, ನಿರುದ್ಯೋಗ, ಕೈಗಾರಿಕಾ ಉತ್ಪಾದನೆ ಕುಸಿತ ದಂತಹ ಪ್ರಶ್ನೆಗಳ ಪರಿಹಾರ ಸರಕಾರದ ಆದ್ಯತೆ ಆಗಬೇಕೇ ಹೊರತು ಸಂಕುಚಿತ ರಾಜಕಾರಣ ಅಲ್ಲ.

Leave a Reply

Your email address will not be published. Required fields are marked *