ನೋಟು ರದ್ಧತಿ ಕುರಿತ ಸುಪ್ರೀಂ ಕೋರ್ಟ್ ತೀರ್ಪು – ಸಿಪಿಐ(ಎಂ) ಪೊಲಿಟ್‌ ಬ್ಯುರೊ ಹೇಳಿಕೆ

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‌ ಬ್ಯುರೊ ಜನವರಿ 2, 2023ರಂದು ಸುಪ್ರಿಂ ಕೋರ್ಟ್‍ ಸಂವಿಧಾನ ಪೀಠ ನೋಟುರದ್ಧತಿ ಕುರಿತು ನೀಡಿರುವ ತೀರ್ಪಿನ ಬಗ್ಗೆ ಈ ಕೆಳಗಿನ ಹೇಳಿಕೆಯನ್ನು ನೀಡಿದೆ:

2016ರ ನೋಟು ರದ್ಧತಿ ಕುರಿತು ಐದು ಸದಸ್ಯರ ಸಂವಿಧಾನ ಪೀಠದ ತೀರ್ಪು ಈ ಕ್ರಮವನ್ನು ಎತ್ತಿಹಿಡಿಯುತ್ತದೆ ಎಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ.

ಬಹುಮತದ ತೀರ್ಪು ಸುಪ್ರೀಂ ಕೋರ್ಟ್ ಪ್ರತ್ಯೇಕವಾಗಿ, ಅಂತಹ ನಿರ್ಧಾರವನ್ನು ತೆಗೆದುಕೊಳ್ಳುವ ಕೇಂದ್ರ ಸರ್ಕಾರದ ಕಾನೂನಾತ್ಮಕ ಹಕ್ಕನ್ನು ಮತ್ತು ಇದು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‍ ಬಿ ಐ) ಕಾಯಿದೆ 1934 ರ ಸೆಕ್ಷನ್ 26(2) ಅನ್ನು ಉಲ್ಲಂಘಿಸುವುದಿಲ್ಲ ಎಂಬುದನ್ನು ಪರಿಶೀಲಿಸಿದೆ. ಆರ್‌ ಬಿ ಐ ಕಾಯ್ದೆಯ ಈ ವಿಭಾಗವು ನೋಟು ರದ್ಧತಿಯನ್ನು ಪ್ರಾರಂಭಿಸಲು ಆರ್‌ ಬಿ ಐ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಹೇಳುತ್ತದೆ. ಈ ಪ್ರಕರಣದಲ್ಲಿ ಆರ್‌ಬಿಐ ಅಭಿಪ್ರಾಯ ಕೇಳಿದ್ದ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಆದ್ದರಿಂದ, ಈ ನಿರ್ಧಾರವನ್ನು ಕಾರ್ಯಗತಗೊಳಿಸುವ ಮೊದಲು ಸಂಸತ್ತಿನ ಅನುಮೋದನೆಯನ್ನು ತೆಗೆದುಕೊಳ್ಳಬೇಕಾಗಿತ್ತು.

ನೋಟು ಅಮಾನ್ಯೀಕರಣವು ಅದು ಸಾಧಿಸಲು ಬಯಸಿದ ಉದ್ದೇಶಗಳೊಂದಿಗೆ “ಸಮಂಜಸವಾದ ಸಂಬಂಧವನ್ನು” ಹೊಂದಿದೆ ಮತ್ತು “ಉದ್ದೇಶವನ್ನು ಸಾಧಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದು ಪ್ರಸ್ತುತವಲ್ಲ” ಎಂದು ಬಹುಮತದ ತೀರ್ಪು ಗಮನಿಸಿದೆ.

ಅಂತಹ ನಿರ್ಧಾರವನ್ನು ತೆಗೆದುಕೊಳ್ಳುವ ಸರ್ಕಾರದ ಕಾನೂನು ಹಕ್ಕನ್ನು ಎತ್ತಿಹಿಡಿಯುತ್ತ ಈ ಬಹುಮತದ ತೀರ್ಪು ಅಂತಹ ನಿರ್ಧಾರದ ಪರಿಣಾಮದ ಬಗ್ಗೆ ಏನನ್ನೂ ಹೇಳುವುದಿಲ್ಲ. ನೋಟು ರದ್ಧತಿಯ ಫಲಿತಾಂಶವಾಗಿ ಕೋಟ್ಯಂತರ ಜನರಿಗೆ ಉದ್ಯೋಗ ನೀಡುವ ಭಾರತದ ಅನೌಪಚಾರಿಕ ಅರ್ಥವ್ಯವಸ್ಥೆಯ ನಾಶವಾಯಿತು. ಇದು ಸಣ್ಣ-ಪ್ರಮಾಣದ ಕೈಗಾರಿಕಾ ವಲಯ, ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆ(ಎಂಎಸ್‌ಎಂಇ)ಗಳನ್ನು ಅಸ್ತವ್ಯಸ್ತಗೊಳಿಸಿ ಕೋಟಿಗಟ್ಟಲೆ ಜೀವನೋಪಾಯವನ್ನು ನಾಶಮಾಡಿತು. 2016 ರ ನಿರ್ಧಾರದಿಂದ ಒಂದು ತಿಂಗಳಲ್ಲಿ 82 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಗಳು ಗಮನಿಸಿವೆ.

ಇದಲ್ಲದೆ, ಈ ವಿನಾಶಕಾರಿ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಹೇಳಿದ ಯಾವ ಗುರಿಯೂ ಸಾಧನೆಯಾಗಿಲ್ಲ-ಕಪ್ಪುಹಣವನ್ನು ಹೊರತೆಗೆಯುವುದು ಮತ್ತು ವಿದೇಶಿ ಬ್ಯಾಂಕುಗಳಿಂದ ಅದನ್ನು ಮರಳಿ ತರುವುದು;; ಖೋಟಾ ನೋಟುಗಳನ್ನು ಕೊನೆಗೊಳಿಸುವುದು; ಭಯೋತ್ಪಾದಕ ಕೃತ್ಯಗಳಿಗೆ ನಿಧಿ, ಭ್ರಷ್ಟಾಚಾರ ಮತ್ತು ಅರ್ಥವ್ಯವಸ್ಥೆಯಲ್ಲಿ ನಗದು ಹಣದ ಹರಿವನ್ನು ಕಡಿಮೆಗೊಳಿಸುವುದು , ಇವು ಯಾವವೂ ಸಾಧನೆಯಾಗಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಆರ್‌ಬಿಐ ಪ್ರಕಾರ, ಸಾರ್ವಜನಿಕರೊಂದಿಗಿನ ಕರೆನ್ಸಿ, ನೋಟು ರದ್ಧತಿಯ  ಮುನ್ನಾದಿನ ಇದ್ದ ರೂ. 17.7 ಲಕ್ಷ ಕೋಟಿ ರೂ. ಗಳಿಂದ ಈಗ 30.88 ಲಕ್ಷ ಕೋಟಿ, ಅಂದರೆ ಶೇ.71.84ರಷ್ಟು ಹೆಚ್ಚಳವಾಗಿದೆ.

ಸುಪ್ರೀಂ ಕೋರ್ಟ್‌ ನ ಬಹುಮತದ ತೀರ್ಪು ಅಂತಹ ನಿರ್ಧಾರವನ್ನು ತೆಗೆದುಕೊಳ್ಳುವ ಸರ್ಕಾರದ ಹಕ್ಕನ್ನು ಎತ್ತಿಹಿಡಿಯುತ್ತದಷ್ಟೇ, ಮತ್ತು ಅಂತಹ ನಿರ್ಧಾರದ ಪರಿಣಾಮಗಳನ್ನು ಯಾವುದೇ ರೀತಿಯಲ್ಲಿ ಅನುಮೋದಿಸುವುದಿಲ್ಲ.

Leave a Reply

Your email address will not be published. Required fields are marked *