ತಮಿಳುನಾಡು ರಾಜ್ಯಪಾಲರ ವರ್ತನೆ ಸಂವಿಧಾನಬಾಹಿರ ಮತ್ತು ಅನುಚಿತ ಕ್ರಮ: ಸಿಪಿಐ(ಎಂ) ಪೊಲಿಟ್‌ ಬ್ಯುರೊ

ತಮಿಳುನಾಡು ರಾಜ್ಯ ಸರ್ಕಾರವು ಅಸೆಂಬ್ಲಿಯಲ್ಲಿ ಮಾಡಲು ಸಿದ್ಧಪಡಿಸಿದ ಭಾಷಣದ ಭಾಗಗಳನ್ನು ಬಿಟ್ಟುಬಿಡುವ ರಾಜ್ಯಪಾಲ  ಆರ್‌ ಎನ್ ರವಿಯವರ  ಕ್ರಮ ಅನುಚಿತವಾದದ್ದು, ಅದು ಖಂಡಿತವಾಗಿಯೂ ಒಪ್ಪತಕ್ಕಂತಹ ವರ್ತನೆ ಅಲ್ಲ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‌ ಬ್ಯುರೊ ಹೇಳಿದೆ.

ಚುನಾಯಿತ ರಾಜ್ಯ ಸರ್ಕಾರದ ಧ್ವನಿಯಾಗಿ ರಾಜ್ಯಪಾಲರು ಕಾರ್ಯನಿರ್ವಹಿಸಬೇಕು ಎಂಬ ಸಾಂವಿಧಾನಿಕ ತತ್ವವನ್ನು ಮತ್ತು ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದ ಸಂಪೂರ್ಣ ಪಠ್ಯವನ್ನು ಓದುವ ಬಹಳ ಕಾಲದಿಂದ ಅಂಗೀಕರಿಸಿರುವ ಪದ್ಧತಿಯನ್ನು ರಾಜ್ಯಪಾಲ ಆರ್‌ ಎನ್‌ ರವಿ ನಿರ್ಲಜ್ಜವಾಗಿ ಉಲ್ಲಂಘಿಸಿದ್ದಾರೆ. ಅವರು ಬಿಟ್ಟುಬಿಡಲು ಮುಂದಾದ ಭಾಷಣದ ಪಠ್ಯದ ಭಾಗಗಳನ್ನು ಅವರು ಅದನ್ನು ಓದುವ ಮೊದಲು ಅನುಮೋದಿಸಿದ್ದರು ಎಂಬುದು ಈಗ ಸ್ಪಷ್ಟವಾಗಿದೆ ಎಂದೂ ಸಿಪಿಐ(ಎಂ) ಹೇಳಿದೆ.

ಅವರು ಬಿಟ್ಟುಬಿಡ ಬಯಸಿದ ಭಾಷಣದ ಭಾಗಗಳು ಚುನಾಯಿತ ರಾಜ್ಯ ಸರ್ಕಾರಕ್ಕಷ್ಟೇ ಸೇರಿದ ವಿಶೇಷ ಅಧಿಕಾರವಿರುವ ಕಾನೂನು ಮತ್ತು ಸುವ್ಯವಸ್ಥೆಯ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ದಾಖಲೆಯ ಬಗ್ಗೆ ಅವರ ವೈರತ್ವವನ್ನು  ಪ್ರಕಟಪಡಿಸುತ್ತದೆ. ಇದಲ್ಲದೆ, ಅವರು ತಮಿಳುನಾಡಿನ ಸಾಮಾಜಿಕ ಸುಧಾರಣಾ ಪರಂಪರೆಗಳ ಹಿರಿಯ ಚೇತನಗಳ ಕೊಡುಗೆಗಳನ್ನು ಕುರಿತ ಉಲ್ಲೇಖಗಳನ್ನು ಸಹ ಬಿಟ್ಟುಬಿಟ್ಟರು.

ರಾಜ್ಯಪಾಲ ಆರ್‌ ಎನ್‌ ರವಿ ಅವರ ಕ್ರಮಗಳು ಪ್ರಸ್ತುತ ಬಿಜೆಪಿ ನೇತೃತ್ವದ ಸರ್ಕಾರದ ಅಡಿಯಲ್ಲಿ ಬೆಳೆಯುತ್ತಿರುವ ಒಂದು  ವಿಧಾನವನ್ನು ಎತ್ತಿ ತೋರಿದೆ – ಅದೆಂದರೆ, ರಾಜ್ಯ ಸರ್ಕಾರಗಳ ಸಾಂವಿಧಾನಿಕ ಪಾತ್ರವನ್ನು ದುರ್ಬಲಗೊಳಿಸಲು ರಾಜ್ಯಪಾಲರ ಹುದ್ದೆಯನ್ನು ಒಂದು ಸಾಧನವಾಗಿ ಬಳಸುವುದು. ಇದು ಒಕ್ಕೂಟ ತತ್ವ-ವಿರೋಧಿ ಪ್ರವೃತ್ತಿಯನ್ನು ಮತ್ತು ಅಧಿಕಾರಗಳ ಕೇಂದ್ರೀಕರಣದ ಗೀಳಿನ ವಾಸನೆಯನ್ನು ಸೂಸುತ್ತದೆ ಎಂದು ಸಿಪಿಐ(ಎಂ) ಪೊಲಿಟ್‌ ಬ್ಯುರೊ ಬಲವಾಗಿ ಖಂಡಿಸಿದೆ.

Leave a Reply

Your email address will not be published. Required fields are marked *