ಮುರುಘಾ ಮಠದ ಡಾ.ಶಿವಮೂರ್ತಿಯವರಿಂದ ಬಾಲಕಿಯರ ಮೇಲೆ ಅತ್ಯಾಚಾರ-ನಿಷ್ಪಕ್ಷಪಾತ ತನಿಖೆಗೆ ಸಿಪಿಐಎಂ ಒತ್ತಾಯ

ರಾಜ್ಯದಲ್ಲಿ ಎರಡು ಆಘಾತಕಾರಿ ಘಟನೆಗಳು ಬೆಳಕಿಗೆ ಬಂದಿದ್ದು, ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಆ ಎರಡು ಘಟನೆಗಳನ್ನು ಬಲವಾಗಿ ಖಂಡಿಸುತ್ತದೆ. ಇವು ಮಠಗಳ ಸ್ವಾಮೀಜಿಗಳ ನಡವಳಿಕೆಗಳ ಕಾರಣದಿಂದ ಘಟಿಸಿವೆ.

ನೆನ್ನೆ(ಆಗಸ್ಟ್‌ 26) ದಿನ ಚಿತ್ರದುರ್ಗ ಜಿಲ್ಲೆಯ ಮುರುಘಾ ಮಠದ ಡಾ.ಶಿವಮೂರ್ತಿ ಸ್ವಾಮೀಜಿಯವರು ತನ್ನ ಜೊತೆಗಾರರ ಬೆಂಬಲದಿಂದ ಅವರದೇ ಸಂಸ್ಥೆ ನಡೆಸುವ ಹಾಸ್ಟೆಲ್ ಗಳಲ್ಲಿನ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಕಳೆದ ಎರಡು ಮೂರು ವರ್ಷಗಳಿಂದ, ಆಮಿಷ ಮತ್ತು ಬೆದರಿಕೆಗಳ ಮೂಲಕ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂಬ ಗಂಭೀರ ದೂರು ಅವರ ಮೇಲೆ ದಾಖಲಾಗಿದೆ. ಇದೊಂದು ತೀವ್ರ ಆಘಾತಕಾರಿ ಪ್ರಕರಣವಾಗಿದೆ.

ಉಚಿತ ಹಾಸ್ಟೆಲ್ ನಲ್ಲಿ ವಾಸವಿದ್ದು, ವಿದ್ಯಾಭ್ಯಾಸ ಮಾಡಬಹುದು ಮತ್ತು ಶಿಕ್ಷಣ ಪಡೆಯಬಹುದೆಂದು ಹಾಗೂ ಆ ಮೂಲಕ ಭವಿಷ್ಯತ್ತಿನಲ್ಲಿ ಒಳ್ಳೆಯ ಜೀವನ ರೂಪಿಸಿಕೊಳ್ಳಬಹುದೆಂದು ಕನಸು ಹೊತ್ತು ಬಂದ ಬಡ ಬಾಲಕಿಯರ, ಬಡತನ ಹಾಗೂ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಂಡು ಲೈಂಗಿಕ ದೌರ್ಜನ್ಯ ಎಸಗುವ ಇಂತಹ ಹೇಯ ದುಷ್ಕೃತ್ಯಗಳನ್ನು ಸಿಪಿಐ(ಎಂ) ಬಲವಾಗಿ ಖಂಡಿಸುತ್ತದೆ.

ರಾಜ್ಯದಲ್ಲಿ ಪ್ರಖ್ಯಾತಿಯನ್ನು ಹೊಂದಿದ ಈ ಮಠದೊಳಗೆ ಇಂತಹ ಘಟನೆ ಘಟಿಸಿರುವ ಮತ್ತು ಅದರಲ್ಲಿ ಡಾ.ಶಿವಮೂರ್ತಿ ಸ್ವಾಮಿಗಳೇ ನೇರ ಆರೋಪಿಗಳಾಗಿರುವ ವಿಚಾರ ರಾಜ್ಯದ ಜನತೆಯ ನಡುವೆ ತೀವ್ರ ಅಘಾತವನ್ನುಂಟು ಮಾಡಿದೆ.

ಸದರಿ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ, ಆರೋಪಿಗಳೆಲ್ಲರನ್ನು ಬಂಧಿಸಿ ನಿಷ್ಪಕ್ಷಪಾತ ತನಿಖೆ ಕೈಗೊಳ್ಳಬೇಕು ಮತ್ತು ಆ ಮೂಲಕ ರಾಜ್ಯದ ಜನತೆಗೆ ನಿಜವೇನೆಂದು ಬಹಿರಂಗಪಡಿಸಿ ಜನರ ಆತಂಕ ನಿವಾರಿಸಬೇಕು ಹಾಗೂ ತಪ್ಪಿತಸ್ಥರ ಮೇಲೆ ಕಠಿಣ ಕಾನೂನಿನ ಕ್ರಮ ಕೈಗೊಳ್ಳುವಂತೆ ಸಿಪಿಐ(ಎಂ) ಬಲವಾಗಿ ಒತ್ತಾಯಿಸುತ್ತದೆ.

ಬೆಂಗಳೂರಿನ ಶಂಕರಾಚಾರ್ಯ ಸ್ವಾಮೀಜಿ ಬಂಧಿಸಿ: ಸಿಪಿಐ(ಎಂ) ಒತ್ತಾಯ

ಡಾ.ರಾಮಶಂಕರ್ ಕಟೆರಿಯಾ ಉತ್ತರ ಪ್ರದೇಶ ರಾಜ್ಯದ, ಇಟವಾ ಕ್ಷೇತ್ರದ ಸಂಸದರು, ನೆನ್ನೆ ಬೆಂಗಳೂರಿನ ಶಂಕರಾಚಾರ್ಯ ಸ್ವಾಮೀಜಿಯೊಬ್ಬರಿಂದ ಅಪಮಾನಿತರಾದ ಮತ್ತು ಜಾತಿದೌರ್ಜನ್ಯಕ್ಕೊಳಗಾದ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಂಸದರು ಸ್ವಾಮೀಜಿಗಳ ಪಾದಗಳಿಗೆ ನಮಸ್ಕರಿಸಲು ಹೋದಾಗ, ನಮಸ್ಕರಿಸಲು ಬಿಡದೇ “ನೀನು ಅಸ್ಪೃಶ್ಯ? ನಿನಗೆ ನಮಸ್ಕರಿಸಲು ಬಿಡಲಾರೆ? ನೀನು ಹೇಗೆ ಒಳಬಂದೆ?” ಯೆಂದು ಅವಾಚ್ಯವಾಗಿ ನಿಂದಿಸಿ ಅಪಮಾನಿಸಿದ ದುರ್ವರ್ತನೆಯ ಪ್ರಕರಣ ನಡೆದಿದೆ. ಇದೂ ಕೂಡಾ ರಾಜ್ಯದ ಜನತೆಗೆ ಆತಂಕ ಹಾಗೂ ಆಘಾತಗಳನ್ನುಂಟು ಮಾಡಿದೆ.

ಶಂಕರಾಚಾರ್ಯ ರವರ ಜಾತಿ ತಾರತಮ್ಯ ಅಸ್ಪೃಶ್ಯಾಚರಣೆಯ ಈ ದುರಹಂಕಾರವನ್ನು ಸಿಪಿಐ(ಎಂ) ಬಲವಾಗಿ ಖಂಡಿಸುತ್ತದೆ. ಸದರಿ ಸ್ವಾಮಿಗಳು, ಸಾರ್ವಜನಿಕವಾಗಿ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕೆಂದು ಬಲವಾಗಿ ಒತ್ತಾಯಿಸುತ್ತದೆ.

ರಾಜ್ಯ ಸರಕಾರವು, ರಾಜ್ಯದಲ್ಲಿ ಈ ಅತಿಥಿ ಸಂಸದರಿಗೆ ಶಂಕರಾಚಾರ್ಯ ಸ್ವಾಮೀಜಿ ಮಾಡಿದ ಜಾತಿತಾರತಮ್ಯ ಮತ್ತು ಅಸ್ಪೃಶ್ಯಾಚರಣೆಯ ಅಪಮಾನದ ಹಾಗೂ ನಿಂದನೆಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಅವರ ಮೇಲೆ ಜಾತಿ ನಿಂದನೆ ಹಾಗೂ ಅಸ್ಪೃಶ್ಯಾಚರಣೆಯ ಪ್ರಕರಣವನ್ನು ಸ್ವಯಂ ಪ್ರೇರಣೆಯಿಂದ ದಾಖಲಿಸಿ ಕಾನೂನಿನ ಕ್ರಮವಹಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ.

ಯು.ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *