ಬಾಬಾಬುಡನ್ ಗಿರಿ: ಸರಕಾರದ ಅನಾಹುತಕಾರಿ ನಿರ್ಧಾರ

ಚಿಕ್ಕಮಗಳೂರು ಜಿಲ್ಲೆಯ ಸಹ್ಯಾದ್ರಿ ಶೃಂಗ ಶ್ರೇಣಿಯಲ್ಲಿರುವ ಐತಿಹಾಸಿಕ ಬಾಬಾಬುಡನ್ ಗಿರಿಯ ದರ್ಗಾ ಪೀಠದ ಗುಹೆಯಲ್ಲಿ ನಡೆಸಬೇಕಾದ ಧಾರ್ಮಿಕ ಆಚರಣೆ, ಪೂಜಾವಿಧಿ ವಿಧಾನ, ಆಡಳಿತ ನಿರ್ವಹಣೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರಕಾರ ಇತ್ತೀಚೆಗೆ ಹೊರಡಿಸಿರುವ ಆದೇಶ ಅತ್ಯಂತ ಅಪಾಯಕಾರಿಯಾಗಿದೆ. ಭಾರತ ದೇಶದಲ್ಲಿಯೇ ಕೋಮು ಸೌಹಾರ್ದತೆ, ಬಹುಮುಖಿ ಸಂಸ್ಕೃತಿಯ ಪ್ರಬಲ ಸಂಕೇತ, ಅನುಕರಣೀಯ ಎಂದು ಸುಪ್ರಿಂ ಕೋರ್ಟ್ ನಿಂದ ಪ್ರಶಂಸಿಲ್ಪಟ್ಟ ಸರ್ವ ಧರ್ಮೀಯರ ಶ್ರದ್ಧಾ ಕೆಂದ್ರದ ಪರಂಪರೆಗೆ ಮಸಿ ಬಳಿಯಲಾಗಿದೆ. ಸಂಘ ಪರಿವಾರ ಸರಕಾರದ ಅಧಿಕಾರ ದುರ್ಬಳಕೆ ಮಾಡಿ ವೈಧಿಕಶಾಹೀಕರಣಕ್ಕೆ ಹಾದಿ ಮಾಡುವ ಬುಡಮೇಲು ಮಾಡುವ ಕೃತ್ಯವೂ ಇದಾಗಿದೆ.

ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಪೀಠ ಇರುವ ಗುಹೆಯಲ್ಲಿ ಹಿಂದಿನಿಂದಲೂ ಮುಜಾವರವರು ಧಾರ್ಮಿಕ ವಿಧಿ ವಿಧಾನಗಳನ್ನು ನಿತ್ಯವೂ ಪೂರೈಸುತ್ತಿದ್ದಾರೆ. ಇದು ಹಲವಾರು ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಈಗ ಇವರೊಂದಿಗೆ ಆಗಮ ಗೊತ್ತಿರುವ ಹಿಂದೂ ಅರ್ಚಕರನ್ನು ನೇಮಿಸಲು ಸರ್ಕಾರ ನಿರ್ಧರಿಸಿದೆ. ಇಂದಿನ ಒಟ್ಟು ಆಡಳಿತಾತ್ಮಕ ಮತ್ತು ಧಾರ್ಮಿಕ ಆಚರಣೆಗಳ ಎಲ್ಲಾ ಕಾರ್ಯಭಾರಗಳನ್ಮು ನಿರ್ವಹಣೆ ಮಾಡುತ್ತಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದುದು ಸಜ್ಜಾದ್ ಎನಶೀನ್- ಶಾಖಾದ್ರಿ. ಇವರು ಸೂಫಿ ಸಂತರ ವಂಶಸ್ಥರು ಮತ್ತು ಪರಂಪರಾನುಗತ ಹಕ್ಕು ಹೊಂದಿದವರು. ಆದರೀಗ ಸರಕಾರ ಆ ಶ್ರದ್ದಾ ಕೆಂದ್ರದ ನಿರ್ವಹಣೆ ಪೂರ್ಣ ಉಸ್ತುವಾರಿಗೆ ಹಿಂದೂ- ಮುಸ್ಲಿಂ ಧರ್ಮದವರನ್ನು ಒಳಗೊಂಡ ವ್ಯವಸ್ಥಾಪನಾ ಸಮಿತಿಯನ್ನು ನೇಮಿಸಲಿದೆ. ಪೀಠ ಮತ್ತು ದರ್ಗಾದ ಅರ್ಚನೆ, ಪೂಜಾ ವಿಧಿಗಳನ್ನು ಮುಜಾವರ್ ನಡೆಸುತ್ತಿದ್ದರು. ಅದರ ಬದಲಿಗೆ ದತ್ತಪೀಠದ್ದನ್ನು ಆಗಮ ಬಲ್ಲ ಅರ್ಚಕರಿಗೆ ವಹಿಸಿ ಕೊಡಲಿದೆ. ಪ್ರತಿ ಸೋಮವಾರ ಮತ್ತು ಗುರುವಾರ ನಮಾಜ್ ನಂತರ ಲೋಭಾನ ಹಾಕುವ ಪ್ರತಿ ಸಂಜೆ ಲೋಬಾನ, ಪತೇಹ ಅರ್ಪಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ದತ್ತ ಮಾಲಾ, ದತ್ತ ಜಯಂತಿ ಮತ್ತು ಇತರೆ ಧಾರ್ಮಿಕ ಆಚರಣೆಗಳು ಸುಗಮವಾಗಿ ಸಾಗಲು ವ್ಯವಸ್ಥಾಪನಾ ಸಮಿತಿಯು ಕ್ರಮ ಕೈಗೊಳ್ಳಬೇಕು. ಹೋಳಿ ಹುಣ್ಣಿಮೆಯ ಮರುದಿನದಿಂದ ಮೂರು ದಿನಗಳ ಉರುಸ್ ಆಚರಿಸಲು ಅವಕಾಶವಿದೆಯೆಂದು ಸರ್ಕಾರ ಆದೇಶಿಸಿದೆ.

articleಮೊದಲನೆಯದಾಗಿ ಬಾಬಾಬುಡನ್ ದರ್ಗಾ ಪೀಠವನ್ನು ಯಾವುದೇ ಒಂದು ಧರ್ಮದ ಆಚರಣೆಯ ಜೊತೆಯಲ್ಲಿ ಸಮೀಕರಿಸುವುದೇ ತಪ್ಪು. ಈ ದತ್ತಮಾಲಾ, ದತ್ತ ಜಯಂತಿ ಇತ್ಯಾದಿ ಯಾವುದೇ ಧಾರ್ಮಿಕ ಆಚರಣೆಗಳು ಹಿಂದೆಂದೂ ಇಲ್ಲದ ಆಚರಣೆಗಳಾಗಿವೆ. ಮತ್ತು ದರ್ಗಾ ಪೀಠದ ಗುಹೆಯನ್ನು ವಿವಾದಗ್ರಸ್ತಗೊಳಿಸಲು 90 ರ ದಶಕದಲ್ಲಿ ಸಂಘ ಪರಿವಾರ ಯೋಜಿತ ಕಾರ್ಯಾಚರಣೆ ಆರಂಭಿಸಿದ ನಂತರ ಬಜರಂಗದಳ ವಿಶ್ವ ಎಂದು ಪರಿಷತ್ ನಂತಹ ಸಂಘಟನೆಗಳು ಪ್ರತಿ ವರ್ಷ ಇಲ್ಲಿನ ಪರಂಪರೆ, ಕಾನೂನು ಮತ್ತು ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸಿ ಆಚರಣೆಯನ್ನು ನಡೆಸುತ್ತಿದ್ದುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಗಿನ ಆದೇಶ  ಬಜರಂಗದಳ, ವಿಶ್ವ ಹಿಂದೂ ಪರಿಷತ್ತಿನ ಕೆಲಸಗಳನ್ನು ಅಧಿಕೃತಗೊಳಿಸಲು ಸರಕಾರವೇ ಮುಂದಾಗಿದೆ.

ಬಾಬ್ರಿ ಮಸೀದಿ ರಾಮಜನ್ಮಭೂಮಿ ವಿವಾದ ಉಲ್ಬಣಗೊಳಿಸುತ್ತಿದ್ದ ಕಾಲದಿಂದ, 1990 ದಶಕದ ಆರಂಭದಿಂದಲೂ ಸಂಘಪರಿವಾರ ಸೃಷ್ಟಿಸುತ್ತಾ ಬಂದಿರುವ ಹತ್ತಾರು ಹಸಿ ಸುಳ್ಳುಗಳು ಈ ವಿವಾದೊಳಗೆ ಹೆಣೆಯಲಾಗಿದೆ. ದುರಂತವೆಂದರೆ ಸಾರ್ವಜನಿಕ ಹೊಣೆಗಾರಿಕೆ ಇರುವ ಸರಕಾರದ ನಿರ್ಧಾರಕ್ಕೆ ಇವೇ ಆಧಾರವಾಗಿವೆ.

1975ರಲ್ಲಿ ಕರ್ನಾಟಕ ಸರಕಾರ ಬಾಬಾ ಬುಡನ್ ದರ್ಗಾ ಪೀಠದ ಒಟ್ಟು ಆಸ್ತಿ, ಪ್ರದೇಶದ ಆಡಳಿತದ ನಿರ್ವಹಣೆಯನ್ನು ಮುಜರಾಯಿ ಇಲಾಖೆಯಿಂದ ವಕ್ಫ್ ಮಂಡಳಿಗೆ ವಹಿಸಿತು. ಇದನ್ನು ವಿರೋಧಿಸಿ ಈ ಆಡಳಿತವನ್ನು ನೋಡಿಕೊಳ್ಳುತ್ತಿದ್ದ ಸಜ್ಜಾದ್ ಎ ನಿಶಾನ್- ಶಾಖಾದ್ರಿಯವರು ನ್ಯಾಯಾಲಯದ ಮೊರೆ ಹೋದರು. ಇದೇ ಸಂದರ್ಭದಲ್ಲಿ ಇನ್ನಿಬ್ಬರು ಹಿಂದೂಗಳು ಸಹ ವಿರೋಧಿಸಿ ನ್ಯಾಯಾಲಯಕ್ಕೆ ಮನವಿ ಮಾಡಿದರು. 1988 ರಲ್ಲಿ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ಆದೇಶಿಸಿದರು. 2008ರಲ್ಲಿ ಸುಪ್ರಿಂ ಕೋರ್ಟ್ ಹಿಂದಿನ ತನ್ನ ಆದೇಶವನ್ನು ಪುನರುಚ್ಚರಿಸಿದಲ್ಲದೆ ಇದು ಹಿಂದೂ ಹಾಗೂ ಮುಸ್ಲಿಂ ಎಲ್ಲರಿಗೂ ಸಮಾನವಾಗಿ ಪೂಜಿಸುವ ಕೇಂದ್ರವಾಗಿದೆ ಯಥಾ ಸ್ಥಿತಿಯನ್ನು ಕಾಪಾಡಬೇಕು ಎಂದಿತ್ತು. ನ್ಯಾಯಾಲಯದ ಸೂಚನೆಯಂತೆ 2017ರಲ್ಲಿ ಕರ್ನಾಟಕ ಸರ್ಕಾರ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಸಮಿತಿಯನ್ನು ರಚಿಸಿ ಒಟ್ಟು ಆ ವಿಷಯಗಳ ಕುರಿತಾದಂತೆ ತಜ್ಞರ ವರದಿಯನ್ನು ಪಡೆಯಿತು. ಸುಪ್ರೀಂಕೋರ್ಟಿನ ಆದೇಶವನ್ನು ಮಾರ್ಚ್ 2018 ರಲ್ಲಿ ಅನುಸರಿಸಿ ಈ ಆಸ್ತಿ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ್ದು, ವಕ್ಫ್ ಗೆ ಅಲ್ಲ ಎಂದು ಆದೇಶಿಸಿತು.

ಇದು ಆಸ್ತಿ ವಿವಾದದ ಸ್ವರೂಪದ ಪ್ರಕರಣ ಎನ್ನುವುದು ಸ್ಪಷ್ಟವಾಗುತ್ತದೆ. ಹಿಂದಿನ ಸರ್ಕಾರಗಳು ಕೆಲವು ವಿಷಯಗಳಲ್ಲಿ ನಡೆದುಕೊಂಡ ರೀತಿಯಲ್ಲೂ ಕೆಲವು ಗೊಂದಲಗಳಿವೆ ಎನ್ನುವುದು ನಿಜ. ಆದರೆ ಬಿಜೆಪಿ ಮತ್ತು ಸಂಘ ಪರಿವಾರ ಇದನ್ನು ಒಂದು ಧಾರ್ಮಿಕ ಪ್ರಶ್ನೆಯಾಗಿ ಕೋಮು ವಿಭಜನೆಗೆ ಮತ್ತು ರಾಜಕೀಯ ಧೃವಿಕರಣದತ್ತ ವಿವಾದವನ್ನಾಗಿ ಪರಿವರ್ತಿಸಿತು. ಮತ್ತು ಅದನ್ನು ಬಹುದೊಡ್ಡ ಆಂದೋಲನದ ಸ್ವರೂಪಕ್ಕೆ ಕೊಂಡೊಯ್ದು ರಾಜಕೀಯ ಲಾಭವನ್ನು ಪಡೆಯಲು ಮುಂದಾಯಿತು. ಈ ವಿವಾದ ವನ್ನು ಚಳುವಳಿಯ ಸ್ವರೂಪಕ್ಕೆ ಕೊಂಡೊಯ್ಯುವ ದೆಶೆಯಲ್ಲಿಯೇ ಚಿಕ್ಕಮಗಳೂರು ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಕೋಮು ಗಲಭೆಗಳು ನಡೆದು ಅದರ ರಾಜಕೀಯ ಕ್ರೋಢೀಕರಣವು ಆರಂಭಗೊಂಡಿತು. 2002 ರಲ್ಲಿ ಬಾಬಾಬುಡನ್ ಗಿರಿಯನ್ನು ದಕ್ಷಿಣ ಭಾರತದ ಅಯೋಧ್ಯೆ ಮಾಡುವ, ಕರ್ನಾಟಕವನ್ನು ಗುಜರಾತನ್ನಾಗಿಸುವ ಬಹಿರಂಗ ಬೆದರಿಕೆಯ ಮಾತುಗಳನ್ನು ಆಡಿದ್ದು ಸಂಘಪರಿವಾರ. ಜೊತೆಗೆ ಹಿಂದೆಂದೂ ಇಲ್ಲದ ದತ್ತ ಜಯಂತಿ, ದತ್ತ ಮಾಲೆ, ದತ್ತ ಯಜ್ಞಅಭಿಯಾನಗಳನ್ನು ಸಂಘಟಿಸಿ ಜನತೆಯನ್ನು ಎತ್ತಿ ಕಟ್ಟಲು ಪೂರ್ಣ ಪ್ರಮಾಣದಲ್ಲಿ ತೊಡಗುತ್ತಾ ಬಂದಿದೆ. ಈಗಲೂ 2025 ರ ಹೊತ್ತಿಗೆ ಭಾರತವನ್ನು ಹಿಂದುತ್ವದ ರಾಷ್ಟ್ರವನ್ನಾಗಿಸುವ ದಾವಂತದಲ್ಲಿರುವ ಆರ್.ಎಸ್.ಎಸ್, ಬಿಜೆಪಿಗಳು ಅನಾಹುತಕಾರಿ ಸನ್ನಿವೇಶ ಸೃಷ್ಟಿಸಲು ಹಿಂಜರಿಯುತ್ತಿಲ್ಲ.

ಸುಪ್ರಿಂ ಕೋರ್ಟ್ ನ ಆದೇಶ, 1991ರ ಧಾರ್ಮಿಕ ಶ್ರದ್ದಾ ಕೇಂದ್ರಗಳ ಕಾಯ್ದೆ, ಸರಕಾರಗಳ ನಿರ್ಧಾರಗಳನ್ನು ಧಿಕ್ಕರಿಸುತ್ತಲೇ ಸಂಘಪರಿವಾರ ಬಂದಿತು. 1947 ರ ಆಗಸ್ಟ್ 15 ರಂದು ಇದ್ದಂತೆಯೇ ಎಲ್ಲವನ್ನು, ಅವುಗಳ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎನ್ನುವ 1991ರ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸಂರಕ್ಷಣೆಯ ಕಾಯ್ದೆಯಂತೆ ದರ್ಗಾ ಪೀಠದಲ್ಲಿ ಆಚರಣೆಗಳಿಗೆ ಸಂಬಂಧಿಸಿಯಾವುದೇ ಸಣ್ಣ ಬದಲಾವಣೆಗೂ ಅವಕಾಶವಿಲ್ಲ. 1975ರಲ್ಲಿ ಮತ್ತು 1989 ಫೆಬ್ರವರಿ 25ರಂದು ಕರ್ನಾಟಕದ ಮುಜರಾಯಿ ಇಲಾಖೆ ಬಾಬಾಬುಡನ್ ಗಿರಿಯಲ್ಲಿ ನಡೆಯುತ್ತಿದ್ದ ಧಾರ್ಮಿಕ ಆಚರಣೆ, ವಿಧಿ ವಿಧಾನಗಳ ಎಲ್ಲವನ್ನೂ ವಿವರವಾಗಿ ಪಟ್ಟಿ ಮಾಡಿದೆ. ಅಲ್ಲದೇ 2017ರಲ್ಲಿ ನ್ಯಾಯಾಲಯದ ಆದೇಶದಂತೆ ಸರಕಾರ ನೇಮಿಸಿದ್ದ ಉನ್ನತ ತಜ್ಞರ ಸಮಿತಿಯು ಆಗಮ ಪದ್ಧತಿಯಂತೆ ಅರ್ಚಕರ ನೇಮಕ ಮಾಡುವಂತಿಲ್ಲ ಎಂದೂ, 1947ರ ಕಾಯ್ದೆಯ ಉಲ್ಲಂಘನೆ ಶಿಕ್ಷಾರ್ಹ ಅಪರಾಧವೆಂದು ಹೇಳಿದೆ. ಎಲ್ಲಾ ದಾಖಲೆಗಳಲ್ಲಿಯೂ ಇಲ್ಲಿಯ ಪೂಜಾ ಪದ್ಧತಿ ಮುಜಾವರ್ ಮೂಲಕವಾಗಿ ನಡೆಯುವುದನ್ನು ಹೇಳಿದೆ. ಮತ್ತು ಹಿಂದೂ ಒಳಗೊಂಡು ಯಾವುದೇ ಧಾರ್ಮಿಕ ಮಹನೀಯರು ಗುಹೆಯ ಒಳಗಡೆಯಲ್ಲಿ ಪ್ರವೇಶ ಮಾಡಿ ಅರ್ಚನೆ ಪೂಜೆ ಮಾಡುವುದಕ್ಕೆ ಅವಕಾಶ ಇರುವುದನ್ನೂ ನಮೂದಿಸಿದೆ. ಈ ಗುಹೆ ಒಳಗಡೆ ದರ್ಗಾ-ಪೀಠದ ದರ್ಶನಕ್ಕೆ ಮತ್ತು ಪ್ರಾರ್ಥನೆಗೆ ಪ್ರವೇಶಿಸುವುದಕ್ಕೆ ಯಾವುದೇ ಧರ್ಮದ, ಜಾತಿಯ, ಲಿಂಗ ಭೇದ ಭಾವ ಇಲ್ಲದಿರುವುದನ್ನು ನ್ಯಾಯಾಲಯಗಳು ಮತ್ತು ಕಾಲದಿಂದ ಕಾಲಕ್ಕೆ ರಚಿಸಲಾದ ಎಲ್ಲ ಸಮಿತಿಗಳು ದಾಖಲಿಸಿವೆ. ಅಂದರೆ ಪಾರಂಪರಿಕವಾಗಿ ಮತ್ತು ಕಾನೂನು ಬದ್ಧವಾಗಿ ಇಲ್ಲಿಯ ವಿಶಿಷ್ಟ ಪೂಜಾ ಪದ್ದತಿಯಲ್ಲಿ ಆಗಲಿ, ಆಡಳಿತದ ನೇತೃತ್ವ ಮತ್ತು ವಿಧಿ ವಿಧಾನಗಳಲ್ಲಾಗಲಿ ಯಾವುದೇ ಹೊಸ ಬದಲಾವಣೆಗಳನ್ನು ಮಾಡಲು ಅವಕಾಶ ಇಲ್ಲದಿರುವುದು ಸುಸ್ಪಷ್ಟ.

Baba-Budan-Giriಆದರೆ ಸರಕಾರದ ಈಗಿನ ಆದೇಶ ಇವೆಲ್ಲವನ್ನೂ ಧಿಕ್ಕರಿಸುತ್ತದೆ. ಧಾರ್ಮಿಕ ಸೌಹಾರ್ದತೆ, ಉದಾತ್ತತೆಯನ್ನು ಬೆಸೆದ ನಾಡಿನ ವಿಶಿಷ್ಟ ಸಂಸ್ಕೃತಿಯನ್ನು ತಿರಸ್ಕರಿಸುತ್ತದೆ. ದತ್ತ ಮತ್ತು ಬಾಬಾ ಬೇರೆಯಲ್ಲ ಎನ್ನುವ ಜನಪದರ ನಂಬಿಕೆಯನ್ನೂ ನಿರ್ಲಕ್ಷಿಸುತ್ತದೆ. ಸರಕಾರದ ನಿರ್ಧಾರ ಸೌಹಾರ್ದತೆ, ಸಮನ್ವಯದ ಸಂಸ್ಕೃತಿಗೆ ಬದಲಾಗಿ ತಾರತಮ್ಯದ ವೈಧಿಕ ಸಂಸ್ಕೃತಿಯನ್ನು ಹೇರುವ, ಹಂತ ಹಂತವಾಗಿ ಅಲ್ಲಿಯ ಪರಂಪರೆಯನ್ನು ನಾಶಗೊಳಿಸಿ ಅತಿಕ್ರಮಿಸುವ ಬಹು ದೊಡ್ಡ ಹುನ್ನಾರ. ಸರಕಾರ ತನ್ನ ಅಧಿಕಾರವನ್ನು ದುರುಪಯೋಗ ಮಾಡಿ ನಾಡಿನ ಸೌಹಾರ್ದತೆಯ ಪರಂಪರೆಯನ್ನು ಬುಡಮೇಲು ಮಾಡುವ ಕೃತ್ಯಕ್ಕೆ ಮುಂದಾಗಿರುವುದು ಅತ್ಯಂತ ಖಂಡನೀಯ.

ಇಂತಹ ತೀರ್ಮಾನಕ್ಕೆ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪು ಭೂಮಿಕೆ ಒದಗಿಸಿ ಕೊಟ್ಟಿದೆ ಎನ್ನುವುದು ಅತ್ಯಂತ ವಿಷಾದನೀಯ. ಅಯೋಧ್ಯೆಯ ವಿವಾದ ಪ್ರಕಾರದ ತೀರ್ಪನ್ನೇ ಆಧಾರವಾಗಿರಿಸಿಕೊಂಡಿರುವ ಹೈಕೋರ್ಟ್ ಹಿಂದಿನ ನ್ಯಾಯಾಲಯಗಳ ತೀರ್ಪು ಮತ್ತು ಸ್ವಾತಂತ್ರ್ಯದ ಹೊಸ್ತಿನಲ್ಲಿ ಇದ್ದ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಬೇಕು ಎನ್ನುವ 1991ರ ಕಾಯ್ದೆಯನ್ನು ತಟಸ್ಥ ಗೊಳಿಸಿದೆ. ಈ ತೀರ್ಪು ರಾಜ್ಯದ ವಿವಿಧ ಕಡೆಗಳಲ್ಲಿ ವ್ಯಾಪಕವಾಗಿ ಪರಿಣಾಮ ಬೀರುವ ಸಾಧ್ಯತೆಗಳು ಇವೆ.

ಜನತೆಯ ಪ್ರತಿನಿಧಿಯಾಗಿರುವ ಸರ್ಕಾರ ಸಂವಿಧಾನಬದ್ಧವಾಗಿ ಯೋಚಿಸಬೇಕು ಮತ್ತು ನಾಡಿನ ಜನತೆಯ ಒಗ್ಗಟ್ಟು, ಸೌಹಾರ್ದ ಪರಂಪರೆಯ ಪರವಾಗಿರಬೇಕು ಎನ್ನುವ ಪ್ರಾಥಮಿಕ ಅಂಶವನ್ನು ಸರ್ಕಾರ ನಿರ್ಲಕ್ಷಿಸಿದೆ. ಬೊಮ್ಮಾಯಿ ಅವರ ಸರ್ಕಾರ ಸಂವಿಧಾನಕ್ಕೆ ಬದ್ಧವಾಗಿರದೇ, ಭಾರತದ ಪ್ರಜಾತ್ತಾತ್ಮಕ ಸಂವಿಧಾನವನ್ನೇ ಒಪ್ಪದ ಸಂವಿಧಾನೇತರ ಶಕ್ತಿಯ ನಿಯಂತ್ರಣದಲ್ಲಿದೆ. ನಾಡಿನ ಹಿತದ ದೃಷ್ಟಿಯಲ್ಲಿ ಎಲ್ಲರೂ ಈ ಸರಕಾರದ ನಿರ್ಧಾರವನ್ನು ಒಕ್ಕೊಲಿನಿಂದ ವಿರೋಧಿಸಬೇಕು. ಸರಕಾರ ಮತ್ತಷ್ಟು ಗಂಭೀರವಾಗಿ ಎಲ್ಲ ಆಯಾಮಗಳಲ್ಲಿ ಚಿಂತಿಸಿ ತನ್ನ ನಿರ್ಧಾರವನ್ನು ಕೈ ಬಿಡಬೇಕು. ಶಾಂತಿ, ಕೋಮು ಸೌಹಾರ್ದತೆ, ಜನತೆಯಲ್ಲಿ ಒಗ್ಗಟ್ಟನ್ನು ಕಾಪಾಡುವ ಮತ್ತು ಕಾನೂನು, ಸಂವಿಧಾನಬದ್ಧ ಕರ್ತವ್ಯವನ್ನು ಸರಕಾರ ಪಾಲಿಸಬೇಕು. ನ್ಯಾಯಾಲಯಕ್ಕೂ ಮನವರಿಕೆ ಮಾಡಿಕೊಡಬೇಕು.

Leave a Reply

Your email address will not be published. Required fields are marked *