ಬೆಲೆಯೇರಿಕೆ ವಿರುದ್ಧ ಮತ್ತು ಉದ್ಯೋಗ ಸೃಷ್ಟಿಗಾಗಿ ಸಪ್ಟಂಬರ್‍ 1-7: ಅಖಿಲ ಭಾರತ ಪ್ರತಿಭಟನಾ ವಾರಾಚರಣೆಗೆ ಕರೆ

 

ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಕೇಂದ್ರ ಸಮಿತಿಯು ಆಗಸ್ಟ್ 4-6, 2023 ರಂದು ನವದೆಹಲಿಯಲ್ಲಿ ಸಭೆ ಸೇರಿ ದೇಶದ ಆಗು-ಹೋಗುಗಳ ಬಗ್ಗೆ ವಿಸ್ತಾರವಾಗಿ ಚರ್ಚೆಯ ನಂತರ  ಬೆಲೆ ಏರಿಕೆ ವಿರುದ್ಧ ಮತ್ತು ಉದ್ಯೋಗ ಸೃಷ್ಟಿಗಾಗಿ ಸಪ್ಟಂಬರ್‍ 1ರಿಂದ 7ರ ವರೆಗೆ ಅಖಿಲ ಭಾರತ ಪ್ರತಿಭಟನಾ ವಾರವನ್ನು  ಆಚರಿಸಲು ಕರೆ ನೀಡಿದೆ.

ಅಲ್ಲದೆ ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ಸಂಯುಕ್ತ ಕಿಸಾನ್ ಮೋರ್ಚಾದ ಜಂಟಿ ವೇದಿಕೆ ಘೋಷಿಸಿದ ಕಾರ್ಯಾಚರಣೆಯ  ಯೋಜನೆಗೆ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಅಕ್ಟೋಬರ್ 5, 2023 ರ ಅಖಿಲ ಭಾರತ ದೆಹಲಿ ರ್ಯಾಲಿಗೆ ಹಾಗೂ ಅರಣ್ಯ ಸಂರಕ್ಷಣಾ (ತಿದ್ದುಪಡಿ) ಕಾಯ್ದೆ 2023 ಮತ್ತು ಏಕರೂಪ ನಾಗರಿಕ ಸಂಹಿತೆಯ ವಿರುದ್ಧ ಆಗಸ್ಟ್ 9 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಆದಿವಾಸಿ ಸಂಘಟನೆಗಳ ಕರೆಗೆ ಕೇಂದ್ರ ಸಮಿತಿಯು ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ.

ಸಭೆಯ ನಂತರ ಪ್ರಕಟಿಸಿರುವ ಕೇಂದ್ರ ಸಮಿತಿಯ ಹೇಳಿಕೆಯನ್ನು ಈ ಮುಂದೆ ಕೊಡಲಾಗಿದೆ:

ಮಣಿಪುರದಲ್ಲಿ ಅರಾಜಕ ಮತ್ತು ವಿಧ್ವಂಸಕ ಸನ್ನಿವೇಶ

ಮೂರು ತಿಂಗಳಿಗೂ ಹೆಚ್ಚು ಸಮಯದಿಂದ ಮಣಿಪುರದಲ್ಲಿ ಕೋಮುವಾದಿ ಆಯಾಮಗಳೊಂದಿಗೆ ಜನಾಂಗೀಯ ಘರ್ಷಣೆಯ ಬೆಂಕಿ ಹತ್ತು ಉರಿಯುತ್ತಿರುವುದರ ಬಗ್ಗೆ ಕೇಂದ್ರ ಸಮಿತಿಯು ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದೆ. ಇದು ನೂರಾರು ಜನರನ್ನು ಸಾಯಿಸಿದೆ, ಹತ್ತಾರು ಸಾವಿರ ಮಂದಿ ಮನೆಮಾರು ಕಳಕೊಂಡು ಪರಿಹಾರ ಶಿಬಿರಗಳ ಅಮಾನವೀಯ ಬದುಕುಳಿದಿದ್ದಾರೆ. ರಾಜ್ಯ ಸರ್ಕಾರ ಇದಕ್ಕೆ ಹೊಣೆ ಎಂಬುದು ಸಾಕಷ್ಟು ಸ್ಪಷ್ಟವಾಗಿದೆ. ಪ್ರಧಾನ ಮಂತ್ರಿ ಮೋದಿಯವರ ಮೌನ ಮತ್ತು ಕೇಂದ್ರ ಸರ್ಕಾರದ ಏನೂ ಪರಿಣಾಮ ಬೀರದ ಮಧ್ಯಪ್ರವೇಶ ಸನ್ನಿವೇಶ ಹೆಚ್ಚಿನ ಅರಾಜಕತೆ ಮತ್ತು ವಿಧ್ವಂಸಕತೆಯತ್ತ ಜಾರಲು ಬಿಡುವಲ್ಲಿ ಶಾಮೀಲನ್ನು ಸೂಚಿಸುತ್ತದೆ. ಪ್ರಧಾನಿಗಳು ಸಂಸತ್ತಿಗೆ ಉತ್ತರದಾಯಿಯಾಗಬೇಕಾದ ಜವಾಬ್ದಾರಿಯನ್ನು ನಿಭಾಯಿಸಬಾರದು ಎಂಬುದನ್ನು ಆರಿಸಿಕೊಂಡಿಡಂತಿದೆ, ಇದರ ಫಲಿತಾಂಶವಾಗಿ ಸಂಸತ್ತಿನ ಕಲಾಪಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿವೆ. ಮಣಿಪುರ ಸಂಘರ್ಷವು ಈಶಾನ್ಯದ ಹತ್ತಿರದ ರಾಜ್ಯಗಳಿಗೆ ಹರಡುವುದು ಬಹಳ ಗಂಭೀರ ಪರಿಣಾಮಗಳನ್ನು ಉಂಟುಮಾಡಲಿದೆ.

ಸಾಮಾನ್ಯ ಪರಿಸ್ಥಿತಿ  ಮತ್ತು ಶಾಂತಿಯನ್ನು ಮರುಸ್ಥಾಪಿಸುವ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಗಿ, ಮುಖ್ಯಮಂತ್ರಿ ಬಿರೇನ್ ಸಿಂಗ್ ಹೋಗಲೇಬೇಕು ಎಂದು ಕೇಂದ್ರ ಸಮಿತಿಯು ಆಗ್ರಹಪಡಿಸಿದೆ.

ಕೋಮು ಧ್ರುವೀಕರಣ ತೀಕ್ಷ್ಣಗೊಳ್ಳುತ್ತಿದೆ

ಹರ್ಯಾಣ ಕೋಮು ಹಿಂಸಾಚಾರ: ಮೇವಾತ್ ಪ್ರದೇಶದಲ್ಲಿ ನೂಹ್‌ನಿಂದ ಪ್ರಾರಂಭವಾಗಿ ಗುರುಗ್ರಾಮ್ ಮತ್ತು ಇತರ ಸ್ಥಳಗಳಿಗೆ ಹರಡಿದ ಕೋಮು ಹಿಂಸಾಚಾರದ ನಂತರ ಹರಿಯಾಣ ಬಿಜೆಪಿ ಸರ್ಕಾರವು ಕ್ರೂರ ಬುಲ್ಡೋಜರ್ ರಾಜಕೀಯವನ್ನು ಹರಿಯಬಿಟ್ಟಿರುವುದನ್ನು ಕೇಂದ್ರ ಸಮಿತಿಯು ತೀವ್ರವಾಗಿ ಖಂಡಿಸಿದೆ. ಈ ಹಿಂಸಾಚಾರವನ್ನು ಸೃಷ್ಟಿಸಿದ ಅಪರಾಧಿಗಳು ಮತ್ತು ಪ್ರಚೋದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು, ಹರಿಯಾಣ ಬಿಜೆಪಿ ರಾಜ್ಯ ಸರ್ಕಾರವು ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು, ಮುಸ್ಲಿಂ ಸಮುದಾಯದವರ ಅಂಗಡಿಗಳು ಮತ್ತು ನಿವಾಸಗಳನ್ನು ಧ್ವಂಸಗೊಳಿಸುವ ದೊಡ್ಡ ಕಸರತ್ತನ್ನು ಪ್ರಾರಂಭಿಸುತ್ತಿದೆ. ಇವುಗಳಲ್ಲಿ ಹಲವು ಕಾನೂನಾತ್ಮಕ ಮಾಲೀಕತ್ವದ ದಾಖಲೆಗಳನ್ನು ಹೊಂದಿವೆ ಮತ್ತು ಕೆಲವು ನ್ಯಾಯಾಲಯದ ತಡೆಯಾಜ್ಞೆಗಳನ್ನು ಹೊಂದಿವೆ. ಹೀಗಿದ್ದರೂ ಬಿಜೆಪಿ ರಾಜ್ಯ ಸರ್ಕಾರ ಈ ಆಸ್ತಿಗಳನ್ನು ನೆಲಸಮ ಮಾಡಲು ಮುಂದಾಗಿದೆ. ಆದರೆ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಾಲ್ಕು ದಿನಗಳ ಕಾಲ ನಡೆದ ನೆಲಸಮ ಕಾರ್ಯಾಚರಣೆಗೆ  ತಡೆ ಹಾಕಿದೆ.

ದ್ವೇಷದ ಅಪರಾಧಗಳು: ರೈಲ್ವೇ ಸಂರಕ್ಷಣಾ ಪಡೆಯ ಕಾನ್‌ಸ್ಟೆಬಲ್ ಒಬ್ಬ ಅಧಿಕಾರಿ ಮತ್ತು ಮೂವರು ಮುಸ್ಲಿಂ ಪ್ರಯಾಣಿಕರನ್ನು ಭೀಕರವಾಗಿ ಹತ್ಯೆಗೈದಿರುವುದು ಅಮಾನವೀಯಗೊಳಿಸುವ ದ್ವೇಷದ ಅಪರಾಧವಾಗಿದೆ. ಮುಸ್ಲಿಂ ಸಮುದಾಯವನ್ನು ರಾಕ್ಷಸರನ್ನಾಗಿಸುವ ಬಿಜೆಪಿ-ಆರ್‌ಎಸ್‌ಎಸ್‌ನ ದುಷ್ಟ ದ್ವೇಷದ ಭಾಷಣಗಳು ಮತ್ತು ಪ್ರಚಾರದ ಪರಿಣಾಮವಾಗಿ ಇಂತಹ ಅಪರಾಧಗಳು ಬೆಳೆಯುತ್ತಿವೆ. ಹಿಂದುತ್ವ ಶಕ್ತಿಗಳ ವಿಷಕಾರಿ ಕಾರ್ಯಸೂಚಿಯು ಭಾರತೀಯ ಗಣರಾಜ್ಯದ ಜಾತ್ಯತೀತ ಪ್ರಜಾಸತ್ತಾತ್ಮಕ ಸ್ವರೂಪವನ್ನು ನಾಶಪಡಿಸುತ್ತಿದೆ ಎಂಬುದಕ್ಕೆ ಈ ಖಂಡನೀಯ ಘಟನೆಯು ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.

ಜ್ಞಾನವಾಪಿ ಮಸೀದಿ ವಿವಾದ: ಸ್ವಾತಂತ್ರ್ಯದ ನಂತರ ದೇಶದ ಎಲ್ಲಾ ಪೂಜಾ ಸ್ಥಳಗಳಿಗೆ ಸಂಬಂಧಿಸಿದಂತೆ ಯಥಾಸ್ಥಿತಿಯನ್ನು ಒದಗಿಸುವ ಪೂಜಾ ಸ್ಥಳಗಳ ಕಾಯ್ದೆ 1991 ನ್ನು ಉನ್ನತ ನ್ಯಾಯಾಂಗವು ಏಕೆ ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿಲ್ಲ ಎಂಬುದು ದಿಗ್ಭ್ರಮೆಗೊಳಿಸುವ ಮತ್ತು ನಿಗೂಢಗೊಳಿಸುವ ಸಂಗತಿ ಎಂದು ಕೇಂದ್ರ ಸಮಿತಿ ಹೇಳಿದೆ. ಈ ಶಾಸನವನ್ನು ರೂಪಿಸುವ ಸಮಯದಲ್ಲಿ ಕೊಡಮಾಡಿದ ಏಕೈಕ ಅಪವಾದವೆಂದರೆ ಅಯೋಧ್ಯೆ, ಅಲ್ಲಿ ವಿವಾದವು ನ್ಯಾಯಾಲಯದ ವಿಚಾರಣೆಯ ವಿಷಯವಾಗಿತ್ತು. ಆಗಸ್ಟ್ 3 ರ ಅಲಹಾಬಾದ್ ಹೈಕೋರ್ಟ್ ತೀರ್ಪು ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆಯನ್ನು ನಡೆಸಲು ಭಾರತದ ಪುರಾತತ್ವ ಸರ್ವೆ (ಎಎಸ್‍ಐ)ಗೆ ಅವಕಾಶ ನೀಡಿತು. ಕಾಯ್ದೆಯ ಸಿಂಧುತ್ವವನ್ನು ಪದೇ ಪದೇ ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್ ಕೂಡ ಸಮೀಕ್ಷೆಯನ್ನು ನಿಲ್ಲಿಸಿಲ್ಲ. ದೇಶದ ಕಾನೂನಾಗಿರುವ ಈ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಕೇಂದ್ರ ಸಮಿತಿ ಆಗ್ರಹಿಸಿದೆ.

ಒಕ್ಕೂಟ ತತ್ವದ ಮೇಲಿನ ದಾಳಿಗಳು

ಹಣಕಾಸು ಒಕ್ಕೂಟ ತತ್ವ: ಮೋದಿ ಸರ್ಕಾರವು ಇತ್ತೀಚೆಗೆ ಸಾರ್ವಜನಿಕ ಸಾಲಗಳ ವ್ಯಾಖ್ಯಾನವನ್ನು ಬದಲಾಯಿಸಿದೆ, ಇದು ರಾಜ್ಯ ಸರ್ಕಾರಗಳ ಹಣಕಾಸಿನ ಅವಕಾಶಗಳನ್ನು ಮತ್ತಷ್ಟು ಹಿಂಡಿ ಹಾಕಿದೆ. ರಾಜ್ಯ ಸರ್ಕಾರಗಳು ಬಜೆಟ್‌ಗೆ ಹೊರತಾದ ಮತ್ತು  ಬಜೆಟೇತರ ಸಾಲಗಳನ್ನು ಈಗ ಸಾರ್ವಜನಿಕ ಸಾಲಗಳ ಭಾಗವೆಂದು ಪರಿಗಣಿಸಬೇಕಾಗಿದೆ. ಆದರೆ, ಇದು ಕೇಂದ್ರ ಸರ್ಕಾರದ ಸಾಲಗಳಿಗೆ ಅನ್ವಯಿಸುವುದಿಲ್ಲ! ಇದಲ್ಲದೆ, ಇದನ್ನು ಪೂರ್ವಾನ್ವಯಗೊಳಿಸಲಾಗುತ್ತಿದೆ. ಕೇರಳದಂತಹ ರಾಜ್ಯಕ್ಕೆ ಇದರರ್ಥ ರೂ. 2023-24 ರ ಹಣಕಾಸು ವರ್ಷಕ್ಕೆ 17,310 ಕೋಟಿ ರೂ. ಕಡಿತ ಮಾಡಿ, ರಾಜ್ಯ ವಿಧಾನಸಭೆಯು ಅನುಮೋದಿಸಿದ ಬಜೆಟ್‌ನಲ್ಲಿ ಭಾರಿ ಕೊರತೆಯನ್ನು ಸೃಷ್ಟಿಸಿದೆ. ಇದು ರಾಜ್ಯದ ಹಕ್ಕುಗಳ ಮೇಲೆ ಗಂಭೀರವಾದ ಆಕ್ರಮಣವಾಗಿದೆ.

ದೆಹಲಿ ಸುಗ್ರೀವಾಜ್ಞೆ: ಅಧಿಕಾರಶಾಹಿಯ ನಿಯಂತ್ರಣ ಸೇರಿದಂತೆ ಆಡಳಿತದ ಪ್ರಮುಖ ಕ್ಷೇತ್ರಗಳ ಮೇಲೆ ದೆಹಲಿಯ ಚುನಾಯಿತ ಸರ್ಕಾರದ ಹಕ್ಕುಗಳನ್ನು ಎತ್ತಿಹಿಡಿಯುವ ಇತ್ತೀಚಿನ ಸುಪ್ರೀಂ ಕೋರ್ಟ್ ನ ಐವರು ಸದಸ್ಯರ ಸಂವಿಧಾನ ಪೀಠವು ನೀಡಿದ ತೀರ್ಪನ್ನು ನಿರರ್ಥಕಗೊಳಿಸಲು ಸುಗ್ರೀವಾಜ್ಞೆಯನ್ನು ಹೊರಡಿಸುವ ಲಜ್ಜೆಗೆಟ್ಟ ನಿರಂಕುಶ ಕ್ರಮವನ್ನು ಮೋದಿ ಸರ್ಕಾರವು ಕೈಗೊಂಡಿದೆ. ಇದು ನ್ಯಾಯಾಲಯದ ನಿಂದನೆಯನ್ನು ಮಾಡುವುದು ಮಾತ್ರವಲ್ಲದೆ, ಸಂವಿಧಾನದ ಒಕ್ಕೂಟ ಸ್ವರೂಪ ಮತ್ತು ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿದಂತೆ ಹೊಣೆಗಾರಿಕೆ ಮತ್ತು ಪ್ರಜಾಸತ್ತಾತ್ಮಕ ಆಳ್ವಿಕೆಯ ಮಾನದಂಡಗಳ ಮೇಲೆ ನೇರ ಆಕ್ರಮಣವಾಗಿದೆ.

ಮೋದಿ ಸರ್ಕಾರ ಲೋಕಸಭೆಯಲ್ಲಿ ತನ್ನ ಕ್ರೂರ ಬಹುಮತವನ್ನು ಬಳಸಿಕೊಂಡು ಮತ್ತು ರಾಜ್ಯಸಭೆಯಲ್ಲಿ ಬಿಜೆಡಿ ಮತ್ತು ವೈಎಸ್‌ಆರ್‌ಸಿಪಿಯಂತಹ ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಇದನ್ನು ಕಾನೂನಾಗಿ ಜಾರಿಗೊಳಿಸುತ್ತಿದೆ.

ರಾಷ್ಟ್ರೀಯ ಆಸ್ತಿಗಳ ಲೂಟಿ: ಈ ಕಾರ್ಪೊರೇಟ್-ಕೋಮುವಾದಿ ನಂಟಿನ ಅಡಿಯಲ್ಲಿ, ಹೊಸ ಕಾನೂನುಗಳನ್ನು ಮಾಡುವ ಮೂಲಕ ರಾಷ್ಟ್ರೀಯ ಆಸ್ತಿಗಳ ಲೂಟಿಯನ್ನು ಕಾನೂನುಬದ್ಧಗೊಳಿಸಲಾಗುತ್ತಿದೆ. ಸಂಸತ್ತಿನ ಅಡ್ಡಿ ಆತಂಕಗಳ ಮೂಲಕ, ರಾಷ್ಟ್ರೀಯ ಆಸ್ತಿಗಳ ಖಾಸಗೀಕರಣಕ್ಕೆ ಅನುಕೂಲವಾಗುವ ಪ್ರಮುಖ ಮಸೂದೆಗಳನ್ನು ಅಂಗೀಕರಿಸಲಾಗುತ್ತಿದೆ. ಇವುಗಳಲ್ಲಿ ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆ, 2023 ಸೇರಿದ್ದು, ಅಭಿವೃದ್ಧಿಯ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡಲು ಕಾರ್ಪೊರೇಟ್‌ಗಳಿಗೆ ಸಹಾಯ ಮಾಡುವ ಸಾರಾಸಗಟು ವಿನಾಯಿತಿ ನೀಡಲಿಕ್ಕಾಗಿ ಇದನ್ನು ತರಲಾಗಿದೆ. ಇದರಿಂದಾಗುವ ಅರಣ್ಯನಾಶವು ದೇಶದ ಹವಾಮಾನದ ಮೇಲೆ ಪ್ರತಿಕೂಲ ಪರಿಣಾಮವನ್ನು ಉಲ್ಬಣಗೊಳಿಸುತ್ತದೆ. ಲಿಥಿಯಂ ಸೇರಿದಂತೆ ನಿರ್ಧಾರಕ ಮತ್ತು ಬೆಲೆಬಾಳುವ ಖನಿಜ ಸಂಪನ್ಮೂಲಗಳ ಖಾಸಗೀಕರಣಕ್ಕೆ ಅನುಕೂಲ ಕಲ್ಪಿಸುವ ಗಣಿಗಳು ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, 2023ನ್ನು ಪಾಸು ಮಾಡಿಸಲಾಗಿದೆ. ಕಚ್ಚಾತೈಲದ ತಟದಾಚೆಗಿನ ಖಾಸಗಿ ಗಣಿಗಾರಿಕೆಗೆ ಅನುಕೂಲ ಕಲ್ಪಿಸುವ ತಟದಾಚೆಗಿನ ಪ್ರದೇಶಗಳು(ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, 2023ನ್ನು ಪಾಸು ಮಾಡಿಸಿಕೊಳ್ಳಲಾಗಿದೆ.

ಮಹಿಳೆಯರು ಮತ್ತು ಹೆಣ್ಣು ಮಕ್ಕಳ ವಿರುದ್ಧ ಬೆಳೆಯುತ್ತಿರುವ ಅಪರಾಧಗಳು: ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲಿನ ದಾಳಿಗಳು ಮತ್ತು ಅಪರಾಧಗಳಲ್ಲಿ ಬೆಳೆಯುತ್ತಿರುವ ಮತ್ತು ಆತಂಕಕಾರಿ ಪ್ರವೃತ್ತಿ ಕಾಣುತ್ತಿದೆ.

ಎನ್‌ಸಿಆರ್‌ಬಿ ಅಂಕಿಅಂಶಗಳು ತೋರಿಸುವ ಪ್ರಕಾರ, ಪ್ರತಿದಿನ ಸರಾಸರಿ 86 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ, 2021 ರಲ್ಲಿ ಮಹಿಳೆಯರ ವಿರುದ್ಧ ಗಂಟೆಗೆ 49 ಅಪರಾಧಗಳು ದಾಖಲಾಗಿವೆ. ಅತ್ಯಾಚಾರ ಪ್ರಕರಣಗಳ ಸಂಖ್ಯೆ 2020 ರಲ್ಲಿ 28,046 ರಿಂದ 2021 ರಲ್ಲಿ 31,677 ಕ್ಕೆ ಏರಿದೆ. ಮಹಿಳೆಯರ ವಿರುದ್ಧದ ಅಪರಾಧಗಳ ಸಂಖ್ಯೆ 2020 ರಲ್ಲಿ 3,71,503 ರಿಂದ 2021 ರಲ್ಲಿ 4,28,278 ಕ್ಕೆ ಏರಿಕೆಯಾಗಿದೆ. ಅನೇಕ ಪ್ರಕರಣಗಳಲ್ಲಿ ಆರೋಪಿಗಳಿಗೆ ಕೃಪಾಪೋಷಣೆಯನ್ನುನೀಡುವ ಮೋದಿ ಸರ್ಕಾರದ ಧೋರಣೆ ಅಪರಾಧಿಗಳ ನಡುವೆ ಅಭಯದ ಸಂಸ್ಕೃತಿಗೆ ಅನುವುಮಾಡಿಕೊಟ್ಟಿದೆ.

ಪ್ರಮಾಣಿತ ಅಂಕಿ-ಅಂಶಗಳ ಭಯ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ – 6 ರಲ್ಲಿ  ರಕ್ತಹೀನತೆಯ ಇರುವಿಕೆ ಮತ್ತು ಅಂಗವೈಕಲ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ತೆಗೆದುಹಾಕುವ ಬಗ್ಗೆ ಕೇಂದ್ರ ಸಮಿತಿಯು ತನ್ನ ಆಳವಾದ ಕಳವಳವನ್ನು ವ್ಯಕ್ತಪಡಿಸಿತು.

ಹಿಂದಿನ ಸಮೀಕ್ಷೆಯು ಭಾರತದಲ್ಲಿ ಶೇಕಡಾ 57 ರಷ್ಟು ಮಹಿಳೆಯರು ಮತ್ತು ಶೇಕಡಾ 67 ಕ್ಕಿಂತ ಹೆಚ್ಚು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದೆ. ತಾಯಿ ಮತ್ತು ಮಗುವಿನ ಮರಣಕ್ಕೆ ಕಾರಣವಾಗುವ ಸಂಗತಿಗಳಲ್ಲಿ ರಕ್ತಹೀನತೆ ಒಂದು ಪ್ರಮುಖ ಅಂಶವಾಗಿದೆ. ಅಂಗವೈಕಲ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ತೆಗೆದುಹಾಕುವುದು ಒಂದು ಹಿಮ್ಮುಖ ಹೆಜ್ಜೆಯಾಗಿದೆ.

ಮೋದಿ ಸರ್ಕಾರವು ಯಾವುದೇ ನಾಚಿಕೆಯಿಲ್ಲದೆ,  ನಿಖರವಾದ ದತ್ತಾಂಶಗಳ ಬಗ್ಗೆ ತಿರಸ್ಕಾರ ಮತ್ತು ಭಯವನ್ನು ಪ್ರದರ್ಶಿಸಿಕೊಂಡೇ ಬಂದಿದೆ. ಜನಗಣತಿ ಕಾರ್ಯಾಚರಣೆಯ ಮೂಲಕ ದತ್ತಾಂಶ  ಸಂಗ್ರಹಣೆಯು ಪ್ರಪಂಚದ ಬೇರೆಡೆ ನಡೆಯುತ್ತಿದ್ದರೆ, ಭಾರತದಲ್ಲಿ ಇದನ್ನು ಅನಿರ್ದಿಷ್ಟವಾಗಿ ವಿಳಂಬಗೊಳಿಸಲಾಗಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‍ಎಫ್‍ಹೆಚ್‍ಎಸ್ -NFHS) ನ್ನು ನಡೆಸುವ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸೈನ್ಸಸ್‍ (ಐಐಪಿಎಸ್‍) ನಿರ್ದೇಶಕ ಕೆ.ಎಸ್. ಜೇಮ್ಸ್ ರವರ ಅಮಾನತು ಕ್ರಮವನ್ನು ಕೇಂದ್ರ ಸಮಿತಿ ಖಂಡಿಸಿದೆ. ಎನ್‍ಎಫ್‍ಹೆಚ್‍ಎಸ್ -5 ವಿಶೇಷವಾಗಿ ಭಾರತವು “ಬಯಲು ಶೌಚ ಮುಕ್ತ” ದೇಶವಾಗಿದೆ ಎಂಬ  ಮೋದಿ ಸರ್ಕಾರದ ದಾವೆಗೆ ಸರಿಹೊಂದದ ದತ್ತಾಂಶವನ್ನು ನೀಡಿತ್ತು.

ಬುಡಕಟ್ಟು ಜನರ ಪ್ರತಿಭಟನಾ ರ್ಯಾಲಿ: ಅರಣ್ಯ ಸಂರಕ್ಷಣಾ (ತಿದ್ದುಪಡಿ) ಕಾಯ್ದೆ 2023 ಮತ್ತು ಏಕರೂಪ ನಾಗರಿಕ ಸಂಹಿತೆಯ ವಿರುದ್ಧ ಆಗಸ್ಟ್ 9 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಆದಿವಾಸಿ ಸಂಘಟನೆಗಳ ಕರೆಗೆ ಕೇಂದ್ರ ಸಮಿತಿಯು ತನ್ನ ಬೆಂಬಲವನ್ನು ನೀಡಿದೆ. ಈ ಕಾಯಿದೆಯು ಅರಣ್ಯ ಹಕ್ಕುಗಳ ಕಾಯಿದೆ ಮತ್ತು ಇತರ ಕಾನೂನುಗಳು ಖಾತರಿಪಡಿಸುವ ಹಕ್ಕುಗಳನ್ನು ನಿರಾಕರಿಸುತ್ತದೆ ಮತ್ತು ಸಾಂಪ್ರದಾಯಕ ಕಾನೂನುಗಳ ರಕ್ಷಣೆಯ ಸಾಂವಿಧಾನಿಕ ಖಾತರಿಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಕೇಂದ್ರ ಸಮಿತಿಯ ಕರೆಗಳು:

  1. ಪಕ್ಷದ ಎಲ್ಲಾ ಘಟಕಗಳು ಬೆಲೆ ಏರಿಕೆ ವಿರುದ್ಧ ಮತ್ತು ಉದ್ಯೋಗ ಸೃಷ್ಟಿಗಾಗಿ ಅಖಿಲ ಭಾರತ ಪ್ರತಿಭಟನಾ ವಾರವನ್ನು ಸಪ್ಟಂಬರ್ 1ರಿಂದ 7, 2023 ರಂದು ಆಚರಿಸುತ್ತವೆ.
  2. ಎಡಪಕ್ಷಗಳ ಸಮಾವೇಶವನ್ನು ಆದಷ್ಟು ಬೇಗ ನಡೆಸಲು ಮತ್ತು ಪರಸ್ಪರ ಒಪ್ಪಿಗೆಯ ಬೇಡಿಕೆಗಳ ಮೇಲೆ ಅಖಿಲ ಭಾರತ ಪ್ರಚಾರಕ್ಕೆ ಕರೆ ನೀಡಲು ಪ್ರಯತ್ನಿಸುವುದು.
  3. ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ಸಂಯುಕ್ತ ಕಿಸಾನ್ ಮೋರ್ಚಾದ ಜಂಟಿ ವೇದಿಕೆ ಘೋಷಿಸಿದ ಕಾರ್ಯಾಚರಣೆಯ ಯೋಜನೆಗೆ ಬೆಂಬಲ.
  4. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಅಕ್ಟೋಬರ್ 5, 2023 ರ ಅಖಿಲ ಭಾರತ ದೆಹಲಿ ರ್ಯಾಲಿಗೆ ಬೆಂಬಲ.

 

Leave a Reply

Your email address will not be published. Required fields are marked *