ಸೆಪ್ಟೆಂಬರ್ 17ರ ಹೈದರಾಬಾದ್ ವಿಮೋಚನಾ ದಿನ : ತೆಲಂಗಾಣ ರೈತ ಸಶಸ್ತ್ರ ಹೋರಾಟದ ಹಿರಿಮೆಯನ್ನು ಮರೆಮಾಚುವ ಪ್ರಯತ್ನ : ಬಿ.ವಿ. ರಾಘುವುಲು ;

ಬಿ.ವಿ. ರಾಘುವುಲು 

(ಸಿಪಿಐ(ಎಂ) ಪೋಲಿಟ್ ಬ್ಯೂರೋ ಸದಸ್ಯರು)

 ಕಮ್ಯುನಿಸ್ಟ್ ಪಕ್ಷವು ರಾಜಕೀಯ ಸಂಘಟನೆಯಾಗಿ ಮತ್ತು ಇತರ ಪ್ರಗತಿಪರ ಶಕ್ತಿಗಳು ನಿಜಾಮನ ವಿರುದ್ಧ ಊಳಿಗಮಾನ್ಯ ವಿರೋಧಿ ಹೋರಾಟವನ್ನು ನಡೆಸಬೇಕಾಯಿತು. ಕಠಿಣ ನಿರ್ಬಂಧಗಳ ನಡುವೆಯೂ ಮಹಾನ್ ತ್ಯಾಗ ಮಾಡುವ ಮೂಲಕ ಆ ಜವಾಬ್ದಾರಿಯನ್ನು ನಿರ್ವಹಿಸಿದರು. ಈ ವೀರಾವೇಶದ ಹೋರಾಟದ ಫಲವೇ ಸೆಪ್ಟೆಂಬರ್ 17ರಂದು ನಿಜಾಮನ ಶರಣಾಗತಿ ಮತ್ತು ಹೈದರಾಬಾದ್ ಸಂಸ್ಥಾನದ ವಿಲೀನ! ಹೈದರಾಬಾದ್ ಪ್ರಾಂತ್ಯದ ವಿಲೀನಕ್ಕೂ, ವಿಮೋಚನೆಗೂ ಸಂಬಂಧವೇ ಇಲ್ಲದ ಸಂಘಪರಿವಾರ ಹಾಗೂ ಅದರ ರಾಜಕೀಯ ಸಂಘಟನೆಯಾದ ಬಿಜೆಪಿ ‘ವಿಮೋಚನಾ ದಿನ’ಕ್ಕೆ ಹರಸಾಹಸ ಪಡುತ್ತಿವೆ. ತೆಲಂಗಾಣದಲ್ಲಿ ಸಶಸ್ತ್ರ ಹೋರಾಟದ ಇತಿಹಾಸವನ್ನು ತಿರುಚುತ್ತಿದ್ದು, ಆಗ ಸೃಷ್ಟಿಸಲಾಗದ ಸಂಘರ್ಷಗಳನ್ನು ಇಂದು ಸೃಷ್ಟಿಸುವ ದುರುದ್ದೇಶವಿದೆ.  ಊಳಿಗಮಾನ್ಯ ನಿಜಾಮ್ ನವಾಬನ ವಿರುದ್ಧದ ಹೋರಾಟದಲ್ಲಿ ಕಮ್ಯುನಿಸ್ಟರ ಪಾತ್ರವನ್ನು ಬಿಆರ್‌ಎಸ್ ಅಥವಾ ಕಾಂಗ್ರೆಸ್ ಒಪ್ಪಿಕೊಳ್ಳಲು ಬಯಸುವುದಿಲ್ಲ. ಈ ಪಕ್ಷಗಳು ಕಮ್ಯುನಿಸ್ಟರ ಪಾತ್ರವನ್ನು ಗುರುತಿಸಲು ನಿರಾಕರಿಸುತ್ತವೆ.

ತೆಲಂಗಾಣದ ಸಶಸ್ತ್ರ ರೈತ ಹೋರಾಟವು ನಿಜಾಮರ ಊಳಿಗಮಾನ್ಯ ಆಳ್ವಿಕೆಯನ್ನು ಕೊನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ರೈತರು ಸ್ವಾಧೀನಪಡಿಸಿಕೊಂಡ ಹೆಚ್ಚಿನ ಭೂಮಿಯನ್ನು ಭೂಮಾಲೀಕರು ಮತ್ತೆ ವಶಪಡಿಸಿಕೊಳ್ಳುವುದನ್ನು ತಡೆಯಲಾಯಿತು. ಆದರೆ, ಊಳಿಗಮಾನ್ಯ ಪದ್ಧತಿಯನ್ನು ಬೇರು ಸಮೇತ ಕಿತ್ತೊಗೆಯುವ ಗುರಿ ತೆಲಂಗಾಣ ಮತ್ತು ದೇಶದಲ್ಲಿ ಇನ್ನೂ ಉಳಿದಿದೆ.

ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಸೆಪ್ಟೆಂಬರ್ 17 ರಂದು ಸಭೆಗಳು ಮತ್ತು ಇತರ ಕಾರ್ಯಕ್ರಮಗಳನ್ನು ನಡೆಸಿದವು. ಈ ದಿನವನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ವ್ಯಾಪಕವಾಗಿ ಆಚರಿಸಲು ತೆಲಂಗಾಣದ ಬಿಆರ್‌ಎಸ್ (ಭಾರತ್ ರಾಷ್ಟ್ರ ಸಮಿತಿ) ಸರ್ಕಾರ ಕರೆ ನೀಡಿತು. ವಿಮೋಚನಾ ದಿನದ ಹೆಸರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯ ಅತಿಥಿಯಾಗಿ ಬಿಜೆಪಿ ಸಾರ್ವಜನಿಕ ಸಭೆಯನ್ನು ಆಯೋಜಿಸಿತು. ಕಾಂಗ್ರೆಸ್ ಪಕ್ಷವೂ ಚುನಾವಣಾ ಪ್ರಚಾರದ ದಿನವೇ ಅದ್ಧೂರಿ ಸಭೆ ನಡೆಸಿತು. ಈ ಸಭೆಯಲ್ಲಿ ಸೋನಿಯಾ ಗಾಂಧಿ ಮತ್ತು ಇತರ ನಾಯಕರು ಭಾಗವಹಿಸಿದ್ದರು. ನಿಜಾಮರ ಊಳಿಗಮಾನ್ಯ ಆಳ್ವಿಕೆಯಿಂದ ತೆಲಂಗಾಣ ವಿಮೋಚನೆಗೊಂಡಿತು ಎಂದು ಸಂಭ್ರಮಿಸುವುದಕ್ಕಿಂತ, ಮುಂಬರುವ ವಿಧಾನಪರಿಷತ್ ಮತ್ತು ಸಂಸತ್ತಿನ ಚುನಾವಣೆಗಳ ಲಾಭ ಪಡೆಯುವುದೇ ಈ ಪಕ್ಷಗಳ ಆತುರದ ಹಿಂದಿನ ಕಾರಣವಾಗಿದೆ. ಆದ್ದರಿಂದಲೇ ಈ ಪಕ್ಷಗಳು ತಮ್ಮ ರಾಜಕೀಯ ಮತ್ತು ಚುನಾವಣಾ ಅಗತ್ಯಗಳಿಗೆ ತಕ್ಕಂತೆ ಸೆಪ್ಟೆಂಬರ್ 17ರ ಐತಿಹಾಸಿಕ ಸಂದರ್ಭವನ್ನು ಅರ್ಥೈಸಿ ತಿರುಚಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿವೆ. ಇದರಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಶಕ್ತಿಗಳು ಊಳಿಗಮಾನ್ಯ ಆಡಳಿತದ ವಿರುದ್ಧದ ವೀರಾವೇಶದ ಜನರ ಹೋರಾಟವನ್ನು ಸುಳ್ಳು ಮತ್ತು ವಿರೂಪಗಳೊಂದಿಗೆ ಮುಸ್ಲಿಂ ರಾಜನ ವಿರುದ್ಧ ಹಿಂದೂಗಳ ದಂಗೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿವೆ. ಇವುಗಳಿಗೆ ವ್ಯತಿರಿಕ್ತವಾಗಿ, ಕಮ್ಯುನಿಸ್ಟರು ಮಾತ್ರ ಹೈದರಾಬಾದ್ ರಾಜ್ಯವನ್ನು ನಿಜಾಮರ ಆಳ್ವಿಕೆಯಿಂದ ವಿಮೋಚನೆಗಾಗಿ ವೀರ ರೈತ ಹೋರಾಟದ ಸತ್ಯ ಮತ್ತು ಪರಂಪರೆಯನ್ನು ಸಾರ್ವಜನಿಕರ ಮುಂದೆ ತರುತ್ತಿದ್ದಾರೆ.

ಅವರು ಸೆಪ್ಟೆಂಬರ್ 17 ಅನ್ನು ಅವರವರ  ಅಭಿಪ್ರಾಯಗಳು ಮತ್ತು ಅಗತ್ಯಗಳಿಗೆ ಅನುಗುಣವಾಗಿ ವಿಲೀನ ದಿನ, ವಿಮೋಚನಾ ದಿನ, ನವಾಬನ ಶರಣಾಗತಿ ದಿನ ಎಂದು ಅರ್ಥೈಸುತ್ತಾರೆ. ಈ ಎಲ್ಲಾ ವ್ಯಾಖ್ಯಾನಗಳಲ್ಲಿ ಸ್ವಲ್ಪ ಸತ್ಯ ಇರಬಹುದು. ಸೆಪ್ಟೆಂಬರ್ 17 ರಂದು, ನಿಜಾಮರ ಪಡೆಗಳು ಒಕ್ಕೂಟದ ಪಡೆಗಳಿಗೆ ಶರಣಾದವು. ಹೈದರಾಬಾದ್ ರಾಜ್ಯವನ್ನು ಭಾರತೀಯ ಒಕ್ಕೂಟದಲ್ಲಿ ವಿಲೀನಗೊಳಿಸಲು ನಿಜಾಮರು ಒಪ್ಪಿಕೊಂಡರು. ಆ ಮೂಲಕ ಹೈದರಾಬಾದಿನ ಜನತೆಗೆ ನಿಜಾಮರ ಆಡಳಿತದಿಂದ ಮುಕ್ತಿ ದೊರಕಿತು. ಇದನ್ನು ಯಾರೂ ಅಲ್ಲಗಳೆಯುವುದಿಲ್ಲ. ಈ ವಿವರಗಳನ್ನು ಮಾತ್ರ ಉಲ್ಲೇಖಿಸುವುದು ತೆಲಂಗಾಣ ರೈತ ಸಶಸ್ತ್ರ ಹೋರಾಟದ ಹಿರಿಮೆಯನ್ನು ಮರೆಮಾಚುವ ಪ್ರಯತ್ನವಾಗುತ್ತದೆ. ಇನ್ನೂ ಮುಂದುವರಿದು, ಬಿಜೆಪಿ ಮತ್ತು ಸಂಘಪರಿವಾರದ ಶಕ್ತಿಗಳು ಸೆಪ್ಟೆಂಬರ್ 17 ರ ಕುರಿತು ಮಾಡುತ್ತಿರುವ ತಪ್ಪು ಮಾಹಿತಿ ಮತ್ತು ತಿರುಚುವಿಕೆಗಳು ತೆಲಂಗಾಣ ರೈತರ ತ್ಯಾಗವನ್ನು ಅವಮಾನಿಸುತ್ತಿವೆ.

ಆರ್ ಎಸ್ ಎಸ್ ಗೂ ವಿಮೋಚನೆಗೂ ಸಂಬಂಧವಿಲ್ಲ 

ಹೈದರಾಬಾದ್ ಪ್ರಾಂತ್ಯದ ವಿಲೀನಕ್ಕೂ, ವಿಮೋಚನೆಗೂ ಸಂಬಂಧವೇ ಇಲ್ಲದ ಸಂಘಪರಿವಾರ ಹಾಗೂ ಅದರ ರಾಜಕೀಯ ಸಂಘಟನೆಯಾದ ಬಿಜೆಪಿ ‘ವಿಮೋಚನಾ ದಿನ’ಕ್ಕೆ ಹರಸಾಹಸ ಪಡುತ್ತಿವೆ. ಸೆಪ್ಟೆಂಬರ್ 17ರ ಬಗ್ಗೆ ಅವರು ಮಾಡುತ್ತಿರುವ ಪ್ರಚಾರ ಅಸಹ್ಯಕರವಾಗಿದೆ. ಯಾರು ಯಾರಿಂದ ವಿಮೋಚನೆಗೊಂಡಿದ್ದಾರೆ? ವಿಮೋಚನಾ ಚಳವಳಿಯಲ್ಲಿ ಪಾಲ್ಗೊಂಡವರು ಯಾರು? ಅದಕ್ಕಾಗಿ ತ್ಯಾಗ ಮಾಡಿದವರು ಯಾರು? ಇಂತಹ ಪ್ರಶ್ನೆಗಳನ್ನು ಕೇಳಿದರೆ ಅವರದು ಒಂದೇ ಉತ್ತರ. ನಿಜಾಮ ನವಾಬನು ಮುಸಲ್ಮಾನನಾಗಿದ್ದರಿಂದ ಮತ್ತು ರಾಜ್ಯದ ಬಹುಪಾಲು ಜನರು ಹಿಂದೂಗಳಾಗಿದ್ದರಿಂದ, ಸೆಪ್ಟೆಂಬರ್ 17 ರಂದು ನಿಜಾಮರ ಆಳ್ವಿಕೆ ಕೊನೆಗೊಂಡಿತು, ಆದ್ದರಿಂದ ಹಿಂದೂ ಜನರು ಮುಸ್ಲಿಂ ರಾಜನಿಂದ ವಿಮೋಚನೆಗೊಂಡರು ಎಂದು ಹೇಳುತ್ತಾರೆ. ಇದು ಅಗ್ಗದ ವಾದ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಆಗಸ್ಟ್ 15ರ ದಿನವನ್ನು ಇಂಗ್ಲೆಂಡ್ ರಾಣಿ ವಿಕ್ಟೋರಿಯಾಳ ಆಳ್ವಿಕೆಯಿಂದ ಹಿಂದೂ ಜನರು ವಿಮೋಚನೆಗೊಂಡ ದಿನವೆಂದು ಪ್ರಕಟಿಸಿದರೆ ಎಷ್ಟು ವಿಕೃತವಾಗಿ ಇರುತ್ತದೆಯೋ, ತೆಲಂಗಾಣ ವಿಮೋಚನೆ ಕುರಿತು ಬಿಜೆಪಿ ವಾದ ಕೂಡ ಅದೇ ರೀತಿ ಇದೆ.

ಕಾಶ್ಮೀರವನ್ನು ಹೈದರಾಬಾದ್‌ಗಿಂತ ಮೊದಲು ಅಕ್ಟೋಬರ್ 26, 1947 ರಂದು ಒಕ್ಕೂಟಕ್ಕೆ ಸೇರಿಸಲಾಯಿತು. ಆದರೆ ಬಿಜೆಪಿ ಕಾಶ್ಮೀರದಲ್ಲಿ ವಿಮೋಚನಾದಿನವನ್ನು ಆಚರಿಸುವುದಿಲ್ಲ. ಹಾಗೆ ಆಚರಿಸಿದರೆ, ಅಲ್ಲಿ ಮುಸ್ಲಿಂ ಜನರಿಗೆ ಹಿಂದೂ ರಾಜನಿಂದ ಮುಕ್ತಿ ಸಿಕ್ಕಿತು ಎಂದು ಹೇಳಬೇಕಾಗುತ್ತದೆ. ಕಮ್ಯುನಿಸ್ಟರ ನೇತೃತ್ವದಲ್ಲಿ ನಡೆದ ಸಂಘಟಿತ ಹೋರಾಟದಿಂದಾಗಿ ತಿರುವಾಂಕೂರು ರಾಜ್ಯವು 30 ಜೂನ್ 1947 ರಂದು ಒಕ್ಕೂಟದೊಂದಿಗೆ ವಿಲೀನಗೊಂಡಿತು. ಬಿಜೆಪಿಯ ವ್ಯಾಖ್ಯಾನದ ಪ್ರಕಾರ, ಹಿಂದೂ ರಾಜನ ವಿರುದ್ಧದ ಹೋರಾಟದಲ್ಲಿ ಹಿಂದೂ ಜನರು ಭಾಗವಹಿಸಿದರು ಎಂದು ಹೇಳಬೇಕು. ಕಮ್ಯುನಿಸ್ಟ್ ನೇತೃತ್ವದ ಸಶಸ್ತ್ರ ಹೋರಾಟದ ಪರಿಣಾಮವಾಗಿ ತ್ರಿಪುರಾ ರಾಜ್ಯವು ಸೆಪ್ಟೆಂಬರ್ 9, 1949 ರಂದು ದೇಶದೊಂದಿಗೆ ವಿಲೀನಗೊಂಡಿತು. ಅಲ್ಲಿನ ಬುಡಕಟ್ಟು ರಾಜಪ್ರಭುತ್ವದ ವಿರುದ್ಧ ಬುಡಕಟ್ಟು ಜನರು ಕಮ್ಯುನಿಸ್ಟರ ನೇತೃತ್ವದಲ್ಲಿ ಬಂಡಾಯವೆದ್ದರು ಎಂದೇ ಹೇಳಬೇಕು. ಬಿಜೆಪಿಯವರು ಇವುಗಳ ಬಗ್ಗೆ ಮಾತನಾಡುವುದಿಲ್ಲ. ಏಕೆಂದರೆ ಧಾರ್ಮಿಕ ವಿರೂಪಗಳೊಂದಿಗೆ ಮಾತನಾಡಲು ಸಾಧ್ಯವಿಲ್ಲ.

ಎಲ್ಲ ಸಾಮಾಜಿಕ ಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ …

ನಿಜಾಮರ ಆಡಳಿತದ ವಿರುದ್ಧ ಹೋರಾಡಿ ಬಲಿದಾನ ಮಾಡಿದವರಲ್ಲಿ ಹಿಂದೂಗಳೂ ಸೇರಿದ್ದಾರೆ, ಮುಸ್ಲಿಮರಿದ್ದಾರೆ, ಎಲ್ಲ ಧರ್ಮದವರೂ ಇದ್ದಾರೆ. ಗ್ರಾಮೀಣ ಸಮಾಜದಲ್ಲಿ ಎಲ್ಲ ಜಾತಿ, ಸಮುದಾಯಗಳಿವೆ. ಎಲ್ಲಾ ರೀತಿಯ ಭಾಷೆಗಳಿವೆ. ನಿಜಾಮನ ಊಳಿಗಮಾನ್ಯ ಆಳ್ವಿಕೆಯ ಅನ್ಯಾಯ ಮತ್ತು ಅಕ್ರಮಗಳು ಯಾವುದೇ ವರ್ಗವನ್ನು ಬಿಡಲಿಲ್ಲ. ಎಲ್ಲ ಸಾಮಾಜಿಕ ಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ವಿರೋಧಿಸಿದರು. ಈ ಏಕತೆಯನ್ನು ಸಾಧಿಸುವಲ್ಲಿ, ದೇಶಾದ್ಯಂತ ಭುಗಿಲೆದ್ದ ಸ್ವಾತಂತ್ರ್ಯ ಚಳವಳಿಯಿಂದ ಪ್ರಭಾವಿತರಾದ ರಾಷ್ಟ್ರೀಯವಾದಿಗಳು, ಆಂಧ್ರ ಮಹಾಸಭಾ ಮತ್ತು ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸಿದರು. ಈ ಹೋರಾಟದಲ್ಲಿ ಆರ್‌ಎಸ್‌ಎಸ್ ಎಲ್ಲಿಯೂ ಕಾಣಿಸುತ್ತಿಲ್ಲ. ಆರ್‌ಎಸ್‌ಎಸ್ ದೇಶದ ಆಳವಾದ ರಾಷ್ಟ್ರೀಯ ಚಳುವಳಿಯಿಂದ ದೂರವಿದೆ. ಆರ್‌ಎಸ್‌ಎಸ್ ಬ್ರಿಟಿಷ್ ಸರ್ಕಾರದ ಭದ್ರಕೋಟೆಯಾಯಿತು. ಅದು ದೇಶದಲ್ಲಿ ವಸಾಹತುಶಾಹಿಗಳ ಪರವಾಗಿ ನಿಂತಿತು. ರಾಜವಂಶಸ್ಥ ನಿಜಾಮನ ವಿರುದ್ಧದ ಹೋರಾಟದಲ್ಲಿ ಆರ್ ಎಸ್ ಎಸ್ ಎಲ್ಲಿಯೂ ಕಾಣಸಿಗದಿರುವುದು ಕಾಕತಾಳೀಯವೇನಲ್ಲ. ಆಗ ಕಾಂಗ್ರೆಸ್ ಕೂಡ ಜಮೀನ್ದಾರಿ ಮತ್ತು ವಸಾಹತುಶಾಹಿ ಪ್ರದೇಶಗಳಲ್ಲಿ ಚಳುವಳಿಗಳನ್ನು ನಿರುತ್ಸಾಹಗೊಳಿಸಿತು. ಕಾಂಗ್ರೆಸ್ ಭಾಗವಹಿಸದಿರಲು ನಿರ್ಧರಿಸಿತು. ಹಾಗಾಗಿಯೇ ತೆಲಂಗಾಣ ಹೋರಾಟದಲ್ಲಿ ಕಾಂಗ್ರೆಸ್ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ. ಕಮ್ಯುನಿಸ್ಟ್ ಪಕ್ಷವು ರಾಜಕೀಯ ಸಂಘಟನೆಯಾಗಿ ಮತ್ತು ಇತರ ಪ್ರಗತಿಪರ ಶಕ್ತಿಗಳು ನಿಜಾಮನ ವಿರುದ್ಧ ಊಳಿಗಮಾನ್ಯ ವಿರೋಧಿ ಹೋರಾಟವನ್ನು ನಡೆಸಬೇಕಾಯಿತು. ಕಠಿಣ ನಿರ್ಬಂಧಗಳ ನಡುವೆಯೂ ಮಹಾನ್ ತ್ಯಾಗ ಮಾಡುವ ಮೂಲಕ ಆ ಜವಾಬ್ದಾರಿಯನ್ನು ನಿರ್ವಹಿಸಿದರು. ಈ ವೀರಾವೇಶದ ಹೋರಾಟದ ಫಲವೇ ಸೆಪ್ಟೆಂಬರ್ 17ರಂದು ನಿಜಾಮನ ಶರಣಾಗತಿ ಮತ್ತು ಹೈದರಾಬಾದ್ ಸಂಸ್ಥಾನದ ವಿಲೀನ!

Seventy_Years_for_TELANGANA_ARMED_PEASANT_STRUGGLE1

ಸಂಫು ಪರಿವಾರದ ಶಕ್ತಿಗಳು ಖಾಸಿಂ ರಜ್ವಿ ನಿಜಾಮನ ರಜಾಕರಿಗಿಂತ ಕಮ್ಯುನಿಸ್ಟರನ್ನು ದುಷ್ಟರೆಂದು ಬಿಂಬಿಸುತ್ತಿವೆ. ರೈತರು, ಕಾರ್ಮಿಕರು, ವೃತ್ತಿಪರರು, ದಲಿತರು ಮತ್ತು ಮಹಿಳೆಯರ ಮೇಲೆ ಭೂಮಾಲೀಕರು ಮತ್ತು ಅವರ ಗೂಂಡಾಗಳು ನಡೆಸುವ ದೌರ್ಜನ್ಯಗಳು ಅವರಿಗೆ ಕಾಣುವುದಿಲ್ಲ. ನಿಜಾಮರ ಊಳಿಗಮಾನ್ಯ ಆಳ್ವಿಕೆಯಲ್ಲಿ ಬಹುತೇಕ ಜಮೀನ್ದಾರರು ಮತ್ತು ಜಾಗೀರದಾರರು ಹಿಂದೂಗಳಾಗಿದ್ದರು ಎಂದು ಅವರು ಉಲ್ಲೇಖಿಸುವುದಿಲ್ಲ. ಊಳಿಗಮಾನ್ಯ ಶೋಷಣೆಯಲ್ಲಿ ಧರ್ಮಕ್ಕೆ ಬಣ್ಣವಿಲ್ಲ ಎಂದು ಗೊತ್ತಿದ್ದರೂ ಅದನ್ನು ಗಮನಿಸದೆ ನಟಿಸುತ್ತಾರೆ. ಏಕೆಂದರೆ ಊಳಿಗಮಾನ್ಯ ಶೋಷಣೆ ಮತ್ತು ದಬ್ಬಾಳಿಕೆಯನ್ನು ಬೆಂಬಲಿಸುವವರು ಭೂಮಾಲೀಕರನ್ನು ರಕ್ಷಿಸಲು ಧಾರ್ಮಿಕ ಭಿನ್ನತೆಗಳು ಪರಿಣಾಮಕಾರಿ ಸಾಧನವೆಂದು ನಂಬುತ್ತಾರೆ.

ಸಶಸ್ತ್ರ ಹೋರಾಟದ ಇತಿಹಾಸವನ್ನು ತಿರುಚುತ್ತಿದ್ದಾರೆ 

ನಿಜಾಮ ಆಡಳಿತದ ವಿರುದ್ಧ ಹೋರಾಡಿದ್ದು ಕಮ್ಯುನಿಸ್ಟರಲ್ಲ ಆರ್ಯ ಸಮಾಜ ಎಂದು ಹೇಳುವ ಮೂಲಕ ಇತಿಹಾಸವನ್ನು ತಿರುಚುವ ಪ್ರಯತ್ನ ನಡೆದಿದೆ. ಆರ್ಯ ಸಮಾಜವು ಹೆಚ್ಚಾಗಿ ಹೈದರಾಬಾದ್ ರಾಜ್ಯದ ಮರಾಠವಾಡ ಪ್ರದೇಶಗಳಲ್ಲಿ ಕೆಲಸ ಮಾಡಿತು. ಶುದ್ಧೀಕರಣ ಕಾರ್ಯಕ್ರಮಗಳು, ಹಿಂದೂ ಧಾರ್ಮಿಕ ಹಕ್ಕುಗಳಿಗಾಗಿ ಕಾರ್ಯಕ್ರಮಗಳು ಮತ್ತು ಹಿಂದೂ ಧಾರ್ಮಿಕ ಪುನರುಜ್ಜೀವನ ಕಾರ್ಯಕ್ರಮಗಳನ್ನು ಆಯೋಜಿಸಿದರು. ರಜಾಕಾರರ ಬೆಂಬಲದೊಂದಿಗೆ ಮುಸ್ಲಿಂ ಧಾರ್ಮಿಕ ಶಕ್ತಿಗಳೂ ಸಕ್ರಿಯವಾಗಿದ್ದವು. ಈ ಪರಿಸ್ಥಿತಿಯು ಧಾರ್ಮಿಕ ಸಂಘರ್ಷಗಳಿಗೆ ಕಾರಣವಾಯಿತು. ಸೆಪ್ಟೆಂಬರ್ 17 ರ ನಂತರ, ಈ ವಾತಾವರಣವು ತೀವ್ರ ಕೋಮು ಘರ್ಷಣೆಗೆ ಕಾರಣವಾಯಿತು. ಸುಂದರ್‌ಲಾಲ್ ಸಮಿತಿಯ ವರದಿಯ ಪ್ರಕಾರ ಈ ಘರ್ಷಣೆಗಳಲ್ಲಿ 40 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆರ್ಯಸಮಾಜವು ಎಂದು ಭೂಮಾಲೀಕರ ವಿರುದ್ದ ಹೋಗಲಿಲ್ಲ. ಬಿಟ್ಟಿ ಚಾಕರಿ , ಉಪಪತ್ನಿಯರು ಮತ್ತು ದೇವದಾಸಿ ಪದ್ಧತಿ ಬಗ್ಗೆ ಮಾತನಾಡಲಿಲ್ಲ. ಆರ್ಯಸಮಾಜವು ಹಿಂದೂ-ಮುಸ್ಲಿಂ ಭಿನ್ನತೆಯನ್ನು ಮುಂದೆ ತಂದಿತು. ಇದಕ್ಕೆ ತದ್ವಿರುದ್ಧವಾಗಿ, ತೆಲಂಗಾಣದಲ್ಲಿ ಯಾವುದೇ ಕೋಮು ಕಲಹ ಇರಲಿಲ್ಲ. ಏಕೆಂದರೆ ಜನರು ಒಗ್ಗೂಡಿ ಊಳಿಗಮಾನ್ಯ ಆಡಳಿತದ ವಿರುದ್ಧ ಹೋರಾಡಿದರು. ಹತ್ಯಾಕಾಂಡವಿಲ್ಲ. ಇಂದಿಗೂ ಧಾರ್ಮಿಕ ಸೌಹಾರ್ದತೆಯ ವಾತಾವರಣ ಮುಂದುವರಿಯಲು ಆ ಪರಂಪರೆಯೇ ಕಾರಣ. ಸಂಘಪರಿವಾರದ ಶಕ್ತಿಗಳು ಇತಿಹಾಸವನ್ನು ತಿರುಚುತ್ತಿದ್ದು, ಆಗ ಸೃಷ್ಟಿಸಲಾಗದ ಸಂಘರ್ಷಗಳನ್ನು ಇಂದು ಸೃಷ್ಟಿಸುವ ದುರುದ್ದೇಶವಿದೆ.

Armed_peasants_-_Telangana_armed_struggle

ಕಮ್ಯುನಿಸ್ಟರ ಪಾತ್ರವನ್ನು ಗುರುತಿಸಲು ನಿರಾಕರಿಸುತ್ತಾರೆ 

ಊಳಿಗಮಾನ್ಯ ನಿಜಾಮ್ ನವಾಬನ ವಿರುದ್ಧದ ಹೋರಾಟದಲ್ಲಿ ಕಮ್ಯುನಿಸ್ಟರ ಪಾತ್ರವನ್ನು ಬಿಆರ್‌ಎಸ್ ಅಥವಾ ಕಾಂಗ್ರೆಸ್ ಒಪ್ಪಿಕೊಳ್ಳಲು ಬಯಸುವುದಿಲ್ಲ. ಅವು ಭೂಮಾಲೀಕರಿಗೆ ಆಸಕ್ತಿಯ ಪಕ್ಷಗಳು. ಹೋರಾಟದ ಸಮಯದಲ್ಲಿ, ಕಮ್ಯುನಿಸ್ಟರು ಹಳ್ಳಿಗಳಲ್ಲಿ ಭೂಮಾಲೀಕರು, ದೇಶಮುಖರು ಮತ್ತು ಜಾಗೀರದಾರರ ಭೂಮಿಯಲ್ಲಿ ಸಾವಿರಾರು ಎಕರೆಯನ್ನು ಕಿತ್ತುಕೊಂಡು ರೈತರಿಗೆ ಹಂಚಿದರು. ಕೌಲ್ದಾರರ ಜಗಳ ನಿಲ್ಲಿಸಲಾಯಿತು. ವೆಟ್ಟಿಚಾಕರಿ ದೂರವಾಯಿತು. ಬಿಟ್ಟಿ ಚಾಕರಿ, ಉಪಪತ್ನಿಯರು ಮತ್ತು ದೇವದಾಸಿ ಪದ್ಧತಿಯನ್ನು ರದ್ದುಗೊಳಿಸಲಾಯಿತು. ಜಾತಿ ತಾರತಮ್ಯ ತಡೆಯಲಾಯಿತು. ಜನಾಂದೋಲನಕ್ಕೆ ಹೆದರಿ ಪಟ್ಟಣಗಳಿಗೆ ಗುಳೆ ಹೋಗಿದ್ದ ಜಮೀನ್ದಾರರು ಸೆ. 17ರಂದು ಟೋಪಿ ಮಾರ್ಚ್ ಬಳಿಕ ಧೈರ್ಯ ಮಾಡಿ ಹಳ್ಳಿಗಳಿಗೆ ಬಂದು, ಭಾರತದ ಸೇನೆಯ ಸಹಾಯದಿಂದ ರೈತರಿಂದ ಭೂಮಿಯನ್ನು ವಶಪಡಿಸಿಕೊಂಡರು. ರೈತರು ಗಳಿಸಿದ ಹಕ್ಕುಗಳನ್ನು ರಕ್ಷಿಸಲು ಕಮ್ಯುನಿಸ್ಟರು 1951 ರವರೆಗೆ ಪ್ರತಿರೋಧವನ್ನು ಮುಂದುವರೆಸಿದರು. ಕಮ್ಯುನಿಸ್ಟರ ನೆರವಿನಿಂದ ರೈತರು ಪ್ರತಿರೋಧ ವ್ಯಕ್ತಪಡಿಸಿದರು. ದೊಡ್ಡ ಭೂಮಾಲೀಕರಿಂದ ಲಕ್ಷಾಂತರ ಎಕರೆಗಳನ್ನು ಅವರು ಪಡೆದುಕೊಳ್ಳಲು ಸಾಧ್ಯವಾಯಿತು. ಊಳಿಗಮಾನ್ಯ ಶಕ್ತಿಗಳನ್ನು ಬೆಂಬಲಿಸುವ ಇಂತಹ ಪಕ್ಷಗಳಿಗೆ ಈ ಹೋರಾಟ ಇಷ್ಟವಾಗುತ್ತದೆ ಎಂದು ಹೇಳಲಾಗದು. ಆದ್ದರಿಂದಲೇ ಈ ಪಕ್ಷಗಳು ಕಮ್ಯುನಿಸ್ಟರ ಪಾತ್ರವನ್ನು ಗುರುತಿಸಲು ನಿರಾಕರಿಸುತ್ತವೆ.

ನಿಜಾಮರ ಊಳಿಗಮಾನ್ಯ ಆಡಳಿತದ ವಿರುದ್ಧದ ಹೋರಾಟವು ದೇಶದಾದ್ಯಂತ ಪ್ರಾರಂಭವಾದ ಹೋರಾಟಗಳ ಅಲೆಯ ಮೇಲ್ಬಾಗದಲ್ಲಿತ್ತು. ವಿಶೇಷವಾಗಿ ಪುನ್ನಪ್ರ ವಯಲಾರ್, ತೆಭಾಗ, ವರ್ಲಿ ಮತ್ತು ತ್ರಿಪುರಾ ಹೋರಾಟಗಳು ಈ ವರ್ಗಕ್ಕೆ ಸೇರುತ್ತವೆ. ಇವೆಲ್ಲವುಗಳಲ್ಲಿ ಕಮ್ಯುನಿಸ್ಟ್ ಪಕ್ಷವು ಪ್ರಮುಖ ಪಾತ್ರ ವಹಿಸಿದೆ. ಈ ಎಲ್ಲಾ ಹೋರಾಟಗಳು ಮತ್ತು ಸಂಸ್ಥೆಗಳು ದೇಶದಲ್ಲಿ ಏಕೀಕರಣದ ಜಾಗವನ್ನು ಸೃಷ್ಟಿಸಿವೆ. ಭೂ ಸಮಸ್ಯೆ, ಒಕ್ಕೂಟ ರೂಪದ ಅವಶ್ಯಕತೆ, ಭಾಷಾವಾರು ರಾಜ್ಯಗಳ ರಚನೆ ಮತ್ತು ಕೌಲ್ದಾರಿ ಸಂರಕ್ಷಣಾ ಕ್ರಮಗಳ ಅಗತ್ಯವನ್ನು ರಾಜಕೀಯ ಅಜೆಂಡಾದಲ್ಲಿ ತರಲಾಯಿತು. ಈ ರೀತಿ ಪ್ರಮುಖ ಪಾತ್ರವನ್ನು ಕಮ್ಯೂನಿಸ್ಟ್ ಪಕ್ಷವು ವಹಿಸಿದ್ದರಿಂದಲೇ ದೇಶದಲ್ಲಿ ಮೊದಲ ಬಾರಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜನತೆ ಕಮ್ಯೂನಿಸ್ಟರಿಗೆ ಹೆಚ್ಚಿನ ಬೆಂಬಲ ಕೊಟ್ಟರು. ಅತಿ ಹೆಚ್ಚು ಬಹುಮತದಿಂದ ಜನಪ್ರತಿನಿಧಿಗಳಾಗಿ ಗೆದ್ದು ಬಂದರು. ತೆಲಂಗಾಣದಲ್ಲೂ ಸಹಾ ಕಮ್ಯುನಿಸ್ಟರು ಸ್ಪರ್ಧಿಸಿದ ಪಿಡಿಎಫ್‌ಗೆ ಅತಿ ಹೆಚ್ಚು ಸ್ಥಾನಗಳು ಬಂದಿರುವುದು ಕಾಕತಾಳೀಯವಲ್ಲ. ಕಮ್ಯುನಿಸ್ಟರ ಬಗ್ಗೆ ಮಾತನಾಡುತ್ತಿದ್ದ ಮತ್ತು ಈಗ ಸೆಪ್ಟೆಂಬರ್ 17 ರ ಪರಂಪರೆಯ ಬಗ್ಗೆ ಮೆಲುಕು ಹಾಕುತ್ತಿರುವ ಪಕ್ಷಗಳು ಇದನ್ನು ನೆನಪಿಟ್ಟುಕೊಳ್ಳುವುದು ಒಳ್ಳೆಯದು.

ತೆಲಂಗಾಣದ ಸಶಸ್ತ್ರ ರೈತ ಹೋರಾಟವು ನಿಜಾಮರ ಊಳಿಗಮಾನ್ಯ ಆಳ್ವಿಕೆಯನ್ನು ಕೊನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ರೈತರು ಸ್ವಾಧೀನಪಡಿಸಿಕೊಂಡ ಹೆಚ್ಚಿನ ಭೂಮಿಯನ್ನು ಭೂಮಾಲೀಕರು ಮತ್ತೆ ವಶಪಡಿಸಿಕೊಳ್ಳುವುದನ್ನು ತಡೆಯಲಾಯಿತು. ಆದರೆ, ಊಳಿಗಮಾನ್ಯ ಪದ್ಧತಿಯನ್ನು ಬೇರು ಸಮೇತ ಕಿತ್ತೊಗೆಯುವ ಗುರಿ ಇನ್ನೂ ತೆಲಂಗಾಣ ಮತ್ತು ದೇಶದಲ್ಲಿ ಉಳಿದಿದೆ.

 

 

 

ReplyReply allForward

Leave a Reply

Your email address will not be published. Required fields are marked *