ಸುಳ್ಳು, ಹಸಿಸುಳ್ಳು ಮತ್ತು ಇನ್ನಷ್ಟು ಸುಳ್ಳುಗಳು-1 : ‘ಆರ್ಥಿಕತೆ’ ಕುರಿತು ಕೊಚ್ಚುತ್ತಿರುವುದು ಸುಳ್ಳಿನ ಕಂತೆ!!

ಘೋಷಣೆಗಳು

ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಇನ್ನು ಐದು ಅಥವಾ ಹತ್ತು ವರ್ಷಗಳಲ್ಲಿ ಮೂರು ಅಥವಾ ನಾಲ್ಕನೇ  ಅತಿ ದೊಡ್ಡ ಆರ್ಥಿಕತೆಯಾಗುತ್ತದೆ  ಇತ್ಯಾದಿ……

ಜಿಡಿಪಿ ಈ ವರ್ಷ ಅಥವಾ ಆ ವರ್ಷದಲ್ಲಿ 5 ಟ್ರಿಲಿಯನ್ ಅಥವಾ 10 ಟ್ರಿಲಿಯನ್ ತಲುಪಲಿದೆ….

‘ಅಚ್ಛೇ ದಿನ್’, ‘ಅಮೃತ್ ಕಾಲ’, ‘ಶ್ರೇಷ್ಠ ಭಾರತ’ ಇತ್ಯಾದಿಗಳೆಲ್ಲ ಅಸ್ತಿತ್ವಕ್ಕೆ ಬಂದಿವೆ ಮತ್ತು ಹಾಗೆ…. ಇನ್ನೂ ಏನೇನೋ…

ವಾಸ್ತವ

ದೇಶದ ಮತ್ತು ಜಾಗತಿಕ  ಷೇರು ಮಾರುಕಟ್ಟೆ ಮತ್ತು ಕಾರ್ಪೊರೇಟ್ ಜಗತ್ತು – ಈ ರೀತಿಯ ಮಾತುಗಳನ್ನುಇಷ್ಟಪಡುತ್ತಾರೆ. ಏಕೆಂದರೆ ಇದು ಅವರಿಗೆ ಹೆಚ್ಚು ಭರಪೂರ ಲಾಭಗಳ ಸುವರ್ಣ ಅವಕಾಶಗಳನ್ನು ಸೃಷ್ಟಿಸುತ್ತದೆ.

ಜನಸಾಮಾನ್ಯರಲ್ಲಿ ಹಲವರು ಸಹ ಇಂತಹ ಪ್ರಚಾರದ ಪ್ರಭಾವಕ್ಕೆ ಒಳಗಾಗುತ್ತಾರೆ ಮತ್ತು ಭಾರತದ ಆರ್ಥಿಕತೆಯು ಗರ್ಜಿಸುತ್ತಿದೆ ಹಾಗೂ ‘ಅಚ್ಛೇ ದಿನ್’ (ಒಳ್ಳೆಯ ದಿನಗಳು) ಇನ್ನೇನು ಬಂದೇ ಬಿಡುತ್ತದೆ ಎಂದು ನಂಬಲು ಪ್ರಾರಂಭಿಸುತ್ತಾರೆ. ಇದು ಸಂಪೂರ್ಣ ಭ್ರಮೆಯಾಗಿದ್ದು, ಇದನ್ನು ಇಲಿಯನ್ನು ಹುಲಿಯೆಂದು ತೋರಿಸಬಲ್ಲ ಮೋದಿಯ ಪ್ರಚಾರಕರು ಪೋಷಿಸಿದ್ದಾರೆ.

ಹೆಚ್ಚಿನ ಜಿಡಿಪಿ ಬೆಳವಣಿಗೆ ಮತ್ತು ದೊಡ್ಡ ಆರ್ಥಿಕತೆಯೆಂದ ತಕ್ಷಣ ದೇಶದ ಸಾಮಾನ್ಯ ಜನರು ಅದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಖಂಡಿತ ಅರ್ಥವಲ್ಲ. ಆದರೆ ಜಿಡಿಪಿ ದರ ಸಹ ಅಷ್ಟೇನೂ ಸಂಭ್ರಮಿಸುವಂಥದ್ಧೇನಲ್ಲ. ವಾಸ್ತವಿಕ ಹಣದುಬ್ಬರ ದರಗಳನ್ನು ಗಣನೆಗೆ ತೆಗೆದುಕೊಂಡರೆ, 2023-24ರಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಶೇಕಡಾ 7.3 ರಿಂದ ಶೇಕಡಾ 3 ಕ್ಕಿಂತ ಕೆಳಮಟ್ಟಕ್ಕೆ ಇಳಿಯುತ್ತದೆ. ನೋಟು ಅಮಾನ್ಯೀಕರಣದ ನಂತರದ ಅವಧಿಯಲ್ಲಿ ಅಸಂಘಟಿತ ವಲಯವು  ಅನುಭವಿಸಿದ ಅಸಮಾನ ಸಂಕಷ್ಟದ ಸ್ಥಿತಿಯನ್ನು ಅಂದಾಜಿಸಲು ನಾವು ಇನ್ನೂ ಸರಿಯಾದ ಹತಾರಗಳನ್ನು ಹೊಂದಿಲ್ಲ. ಒಂದು ವೇಳೆ ನೈಜ ಚಿತ್ರಣವನ್ನು ಅಂದಾಜಿಸಿದರೆ ಪರಿಸ್ಥಿತಿ ಇನ್ನಷ್ಟು ಕೆಟ್ಟದಾಗಿರಬಹುದು.

ದೊಡ್ಡ GDP ಅಥವಾ ಹೆಚ್ಚಿನ ಬೆಳವಣಿಗೆ ಎಂದರೆ ಜನರ ಬದುಕೇನೂ ಸಮೃದ್ಧವಲ್ಲ ಎಂಬುದಕ್ಕೆ ಭಾರತ ಒಂದು ಉತ್ತಮ ಉದಾಹರಣೆಯಾಗಿದೆ. ನೀವು ಭಾರತದ ಜಿಡಿಪಿಯನ್ನು ಅದರ ಒಟ್ಟು ಜನಸಂಖ್ಯೆಯಿಂದ ಭಾಗಿಸಿದರೆ ಆಗ  ಪ್ರತಿ ವ್ಯಕ್ತಿಗೆ ಎಷ್ಟು ಜಿಡಿಪಿ ಎಂದು ಲೆಕ್ಕ ಸಿಗುತ್ತದೆ – ಆಗ ವಾಸ್ತವ ಬಯಲಾಗುತ್ತದೆ.

ಭಾರತದ ತಲಾ ವ್ಯಕ್ತಿಯ ಜಿಡಿಪಿಯನ್ನು ಲೆಕ್ಕ ಹಾಕಿದರೆ 213 ದೇಶಗಳ ಪೈಕಿ ಭಾರತ 147 ನೇ ಸ್ಥಾನದಲ್ಲಿ ನಿಲ್ಲುತ್ತದೆ. ಅಂದರೆ  ಭಾರತದ ಜಿಡಿಪಿ ಅತ್ಯಂತ ಬಡ ದೇಶಗಳ ಜಿಡಿಪಿಯ ಜೊತೆ ನಿಲ್ಲುತ್ತದೆ. ಸತ್ಯ ಏನೆಂದರೆ ಜಗತ್ತಿನ ಅತಿ ಹೆಚ್ಚಿನ ಬಡವರ ತವರು ಭಾರತ!.

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು 2016 ರಲ್ಲಿ 118 ದೇಶಗಳ ಪೈಕಿ 97 ರಿಂದ 2023 ರಲ್ಲಿ 125 ದೇಶಗಳ ಪೈಕಿ 111 ಕ್ಕೆ ಕುಸಿದಿದೆ.

ಜನರ ಏಳಿಗೆಯ ಪುರಾವೆಯಾಗಿ ಸರ್ಕಾರವು ಹೆಚ್ಚಿದ ಬ್ಯಾಂಕ್ ಖಾತೆಗಳನ್ನು ತೋರಿಸುತ್ತದೆ. 52 ಕೋಟಿ ಜನ್ ಧನ್ ಖಾತೆಗಳನ್ನು ತೆರೆಯಲಾಗಿದೆ ಎಂದು ಹೇಳಲಾಗಿದೆ, ಇದು ವಯಸ್ಕ ಭಾರತೀಯ ಜನಸಂಖ್ಯೆಯ ಅರ್ಧದಷ್ಟು. ಈ ಖಾತೆಗಳಲ್ಲಿನ ಹೊಂದಿರುವ ಠೇವಣಿಗಳು ಬ್ಯಾಂಕ್‌ಗಳ ಒಟ್ಟು ಠೇವಣಿಗಳಲ್ಲಿ 2.5 ಪ್ರತಿಶತಕ್ಕಿಂತ ಕಡಿಮೆ. ಒಟ್ಟು ಜನಗಳು ಹೊಂದಿರುವ ಉಳಿತಾಯ ಠೇವಣಿಗಳಲ್ಲಿ ಇವರ ಠೇವಣಿಯ ಪಾಲು ಕೇವಲ 4.5 ಪ್ರತಿಶತದಷ್ಟು ಮಾತ್ರ. ಜನ್ ಧನ್ ಖಾತೆಗಳಲ್ಲಿನ ಸರಾಸರಿ ಬಾಕಿ ಮೊತ್ತ ಕೇವಲ 4227 ರೂಪಾಯಿ. 4.3 ಕೋಟಿಗಿಂತ ಹೆಚ್ಚಿನ ಖಾತೆಗಳಲ್ಲಿ ಹಣವೇ ಇಲ್ಲ ಅಥವಾ ಶೂನ್ಯ ಖಾತೆಗಳು!

ಮೋದಿ ಆಡಳಿತದ ಆರಂಭದಲ್ಲಿ, ಕುಖ್ಯಾತ ರಂಗರಾಜನ್ ಸಮಿತಿಯು ನಗರ ಪ್ರದೇಶಗಳಲ್ಲಿ ದಿನಕ್ಕೆ ರೂ 47 ಕ್ಕಿಂತ ಕಡಿಮೆ ಅಥವಾ ಗ್ರಾಮೀಣ ಪ್ರದೇಶದಲ್ಲಿ ದಿನಕ್ಕೆ ರೂ 32 ಕ್ಕಿಂತ ಕಡಿಮೆ ಆದಾಯವನ್ನು ಹೊಂದಿರುವವರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ಹೇಳಿದೆ. ಈ ಹಾಸ್ಯಾಸ್ಪದ ವ್ಯಾಖ್ಯಾನವೇ ನೀತಿ ಆಯೋಗದ ಇತ್ತೀಚಿನ ಘೋಷಣೆಯ ಮೇಲೆ ಪ್ರಭಾವ ಬೀರಿದ್ದು ಅದರ ಪ್ರಕಾರ ಕೇವಲ ಶೇಕಡಾ 5 ರಷ್ಟು ಜನರು ಮಾತ್ರ ಬಡವರು.

ಅವರು ಬಡತನವನ್ನು ಹೇಗೆ ಅಳೆಯುತ್ತಾರೆ? ಆದಾಯ ಅಥವಾ ಸಂಪಾದನೆಯನ್ನು ಪರಿಗಣಿಸಿ ಅಲ್ಲ. ಅವರು ಶೌಚಾಲಯ, ಕುಡಿಯುವ ನೀರು, ಗ್ಯಾಸ್ ಸಂಪರ್ಕ, ಬ್ಯಾಂಕ್ ಖಾತೆ ಅಥವಾ ಫೋನ್ ಹೊಂದಿಲ್ಲದಿರುವ 12 ಸೂಚಕಗಳನ್ನು ಬಳಸುತ್ತಾರೆ. ಶೌಚಾಲಯಗಳ ಸಂಖ್ಯೆಯನ್ನು ಲೆಕ್ಕಹಾಕಲು ಬಹಳ ವಿಶ್ವಾಸಾರ್ಹವಲ್ಲದ ಸರ್ಕಾರದ ಅಂಕಿಅಂಶಗಳನ್ನು ಆಧರಿಸಲಾಗುತ್ತದೆ. ಉದಾಹರಣೆಗೆ, ಸರ್ಕಾರದ ಅಂಕಿಅಂಶಗಳಲ್ಲಿರುವ ಅನೇಕ ಶೌಚಾಲಯಗಳು ಅಸ್ತಿತ್ವದಲ್ಲೇ ಇರುವುದಿಲ್ಲ ಮತ್ತು ನೀರು ಸರಬರಾಜು ಅಥವಾ ಒಳಚರಂಡಿ ಮಾರ್ಗ ಲಭ್ಯವಿಲ್ಲದ ಕಾರಣ ಇನ್ನೂ ಅನೇಕವು ನಿರುಪಯುಕ್ತವಾಗಿವೆ.

ಮೊಬೈಲ್ ಫೋನ್‌ಗಳು ಈಗ ಆವಶ್ಯಕತೆಯೇ ಹೊರತು ಸಮೃದ್ಧಿಯ ಸೂಚಕವಲ್ಲ. ಉದ್ಯೋಗ ಖಾತರಿ ವೇತನಗಳು ಮತ್ತು ಸರ್ಕಾರಿ ಸವಲತ್ತುಗಳು ಇತ್ಯಾದಿಗಳನ್ನು ಪಡೆಯಲು ಬ್ಯಾಂಕ್ ಖಾತೆ ಹೊಂದುವುದು ಕಡ್ಡಾಯವಾಗಿದೆ ಹಾಗೂ ತೀವ್ರ ಬಡತನದ ಕಾರಣದಿಂದ ಅನೇಕರು ಇವುಗಳನ್ನು ಹೊಂದಿದ್ದರೂ ಬಳಸುವುದಿಲ್ಲ. ಆದಾಗ್ಯೂ, ಕಾಗದದ ಮೇಲೆ, ಬಡತನದ ‘ಕಡಿತ’ವನ್ನು ಪ್ರದರ್ಶಿಸಲು ಇವುಗಳನ್ನು (ಮೊಬೈಲ್, ಬ್ಯಾಂಕ್ ಖಾತೆ ಇತ್ಯಾದಿ) ಹೊಂದಿರುವುದನ್ನು ಬಡತನ ಹೋಗಿದೆ ಎಂದು ನಂಬಿಸಲು ಬಳಸಲಾಗುತ್ತದೆ. ಈ ವ್ಯಾಖ್ಯಾನದ ಪ್ರಕಾರ ಕೆಲವು ದಿನಗಳ ಕಾಲ ತನ್ನ ಕೆಲಸದಿಂದ ದಿನಕ್ಕೆ 240 ರೂ ಗಳಿಸುವ ಭೂರಹಿತ ಕೂಲಿಕಾರನು ಇನ್ನು ಮುಂದೆ ಬಡವನೆಂದು ಪರಿಗಣಿಸಲ್ಪಡುವುದಿಲ್ಲ!

ಶೇಕಡಾ 32 ರಷ್ಟು ಜನರು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ, 44 ಪ್ರತಿಶತ ಕುಟುಂಬಗಳು ಉತ್ತಮ ಅಡುಗೆ ಇಂಧನವನ್ನು ಬಳಸುತ್ತಿಲ್ಲ, 30 ಪ್ರತಿಶತದಷ್ಟು ಜನರು ಸರಿಯಾದ ನೈರ್ಮಲ್ಯವನ್ನು ಹೊಂದಿಲ್ಲ ಮತ್ತು 41 ಪ್ರತಿಶತದಷ್ಟು ಜನರು ಸರಿಯಾದ ವಸತಿ ಹೊಂದಿಲ್ಲ ಎಂದು ನೀತಿ ಆಯೋಗದ ವರದಿಯೇ ಒಪ್ಪಿಕೊಳ್ಳುವಂತ ಒತ್ತಾಯಕ್ಕೆ ಒಳಗಾಗಿದೆ

ಇತ್ತೀಚೆಗೆ ಬಿಡುಗಡೆಯಾದ 2022-23ರ ಬಳಕೆಯ ವೆಚ್ಚದ ಮಾಹಿತಿಯು ಗ್ರಾಮೀಣ ಪ್ರದೇಶಗಳಲ್ಲಿ, ನಾಲ್ಕು ಸದಸ್ಯರ ಕುಟುಂಬದ ಸರಾಸರಿ ಮಾಸಿಕ ವೆಚ್ಚವು 2011-12 ಬೆಲೆಗಳಲ್ಲಿ ರೂ. 8032 ಅಥವಾ ಪ್ರಸ್ತುತ ಬೆಲೆಗಳಲ್ಲಿ ರೂ. 15,092 ಎಂದು ತೋರಿಸುತ್ತದೆ. ಅದೇ ರೀತಿ, ನಗರ ಪ್ರದೇಶಗಳಲ್ಲಿ, ಅಂತಹ ಕುಟುಂಬವು 2011-12ರ ಬೆಲೆಯಲ್ಲಿ ಸರಾಸರಿ 10,520 ರೂ. ಅಥವಾ ಪ್ರಸ್ತುತ ಬೆಲೆಯಲ್ಲಿ ರೂ. 25,836 ಅನ್ನು ಖರ್ಚು ಮಾಡುತ್ತದೆ.

2018-19 ರಲ್ಲಿ ಸರ್ಕಾರದ ಸಮೀಕ್ಷೆಯು ಕೃಷಿ ಕುಟುಂಬಗಳ ಸರಾಸರಿ ಆದಾಯವು ತಿಂಗಳಿಗೆ ಕೇವಲ 10,218 ರೂ. ಅಂದರೆ, ಅವರ ವೆಚ್ಚಕ್ಕಿಂತ ಕಡಿಮೆ ಎಂದು ಬಹಿರಂಗಪಡಿಸಿದೆ. ಆದ್ದರಿಂದ ಅವರಲ್ಲಿ ಹೆಚ್ಚಿನವರು ಸಾಲದಲ್ಲಿ ಮುಳುಗಿದ್ದಾರೆ. 2022-23ರ ಆವರ್ತಕ ಕಾರ್ಮಿಕ ಪಡೆ ಸಮೀಕ್ಷೆಯು ಸಾಮಾನ್ಯ ಉದ್ಯೋಗಿಗಳು ತಿಂಗಳಿಗೆ ಸುಮಾರು 20,000 ರೂಪಾಯಿಗಳನ್ನು ಗಳಿಸಿದರೆ, ಸಾಂದರ್ಭಿಕ ಕಾರ್ಮಿಕರು ತಿಂಗಳಿಗೆ ಕೇವಲ 12,000 ರೂಪಾಯಿಗಳನ್ನು ಮತ್ತು ಸ್ವಯಂ ಉದ್ಯೋಗಿಗಳು ತಿಂಗಳಿಗೆ ಸರಾಸರಿ 13,000 ರೂಪಾಯಿಗಳನ್ನು ಗಳಿಸುತ್ತಾರೆ ಎಂದು ಹೇಳಿದೆ. ಈ ಆದಾಯಗಳು ಮೇಲೆ ತಿಳಿಸಿದ ಸರಾಸರಿ ಖರ್ಚಿಗಿಂತ ತೀರಾ ಕಡಿಮೆ.

ಭರವಸೆಯ ಹೊರತಾಗಿಯೂ ಬೆಲೆಯೇರಿಕೆಯನ್ನು ನಿಯಂತ್ರಿಸಲು ಸರಕಾರ ಮುಂದಾಗದಿರುವುದರಿಂದ ಬಡವರು ಮತ್ತಷ್ಟು ಲೂಟಿಗೆ ಒಳಗಾಗಿದ್ದಾರೆ. ಇತ್ತೀಚಿನ ಸರ್ಕಾರದ ಅಂಕಿಅಂಶಗಳ ಪ್ರಕಾರ ಗ್ರಾಹಕ ಬೆಲೆ ಸೂಚ್ಯಂಕದಲ್ಲಿ, ಜೂನ್ 2014 ಮತ್ತು ಜನವರಿ 2024ರ ನಡುವೆ, ಧಾನ್ಯಗಳು ಮತ್ತು ಅದರ ಉತ್ಪನ್ನಗಳ ಬೆಲೆಗಳು ಶೇಕಡಾ 54 ರಷ್ಟು, ಮಾಂಸ ಮತ್ತು ಮೀನಿನ ಬೆಲೆಗಳು ಶೇಕಡಾ 73 ರಷ್ಟು ಹೆಚ್ಚಾಗಿದೆ, ಮೊಟ್ಟೆಯ ಬೆಲೆ ಶೇಕಡಾ 77, ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆಗಳು ಶೇಕಡಾ 53, ಎಣ್ಣೆ ಮತ್ತು ಕೊಬ್ಬುಗಳು ಶೇಕಡಾ 48, ತರಕಾರಿಗಳು ಶೇಕಡಾ 48, ಬೇಳೆಕಾಳುಗಳು ಮತ್ತು ಅದರ ಉತ್ಪನ್ನಗಳು ಶೇಕಡಾ 82, ಮತ್ತು ಮಸಾಲೆ ಪದಾರ್ಥಗಳ ಬೆಲೆ ಶೇಕಡಾ 112 ರಷ್ಟು ಹೆಚ್ಚಾಗಿದೆ.

 ಈ ಅಗತ್ಯ ಆಹಾರ ಪದಾರ್ಥಗಳ ಹೊರತಾಗಿ, ಆರೋಗ್ಯ ವೆಚ್ಚಗಳು ಶೇಕಡಾ 71 ರಷ್ಟು ಹೆಚ್ಚಾಗಿದೆ ಮತ್ತು ಶಿಕ್ಷಣವು ಸುಮಾರು 60 ಪ್ರತಿಶತದಷ್ಟು ದುಬಾರಿಯಾಗಿದೆ. ಒಟ್ಟಾರೆ, ಈ ಅವಧಿಯಲ್ಲಿ ಸಾಮಾನ್ಯ ಬೆಲೆ ಸೂಚ್ಯಂಕವು ಸುಮಾರು 60 ಪ್ರತಿಶತದಷ್ಟು ಹೆಚ್ಚಾಗಿದೆ.

ಉದ್ದೇಶಪೂರ್ವಕವಾಗಿ ಬೆಲೆ ಏರಿಕೆ ಮಾಡುವಲ್ಲಿ ಸರ್ಕಾರದ ನೇರ ಪಾತ್ರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿಷಯದಲ್ಲಿ ಕಂಡು ಬರುತ್ತಿದೆ. ಮೇ 2014 ಮತ್ತು ಫೆಬ್ರವರಿ 2024ರ ನಡುವೆ ಕಚ್ಚಾ ತೈಲದ ಅಂತರರಾಷ್ಟ್ರೀಯ ಬೆಲೆಗಳು (ಭಾರತೀಯ ಬಾಸ್ಕೆಟ್) ಶೇಕಡಾ 18ರಷ್ಟು ಕುಸಿದಿದ್ದರೂ, ಪೆಟ್ರೋಲ್‌ನ ದೇಶೀಯ ಬೆಲೆ ಶೇಕಡಾ 35 ಮತ್ತು ಡೀಸೆಲ್ ಬೆಲೆ ಶೇಕಡಾ 62 ರಷ್ಟು ಹೆಚ್ಚಾಗಿದೆ. ಮೋದಿ ಸರ್ಕಾರವು ಭಾರೀ ತೆರಿಗೆಗಳು ಮತ್ತು ಸುಂಕಗಳನ್ನು ವಿಧಿಸಿದ ಕಾರಣದಿಂದ ಹೀಗೆ ಬೆಲೆ ಏರಿಕೆಯಾಗಿದೆ. ಇದು ಜನರ ಮೇಲೆ ಪರೋಕ್ಷವಾಗಿ ತೆರಿಗೆ ವಿಧಿಸುವ ಮಾರ್ಗವಾಗಿದೆ.

2014-15 ಮತ್ತು 2023-24ರ ಮೊದಲಾರ್ಧದಲ್ಲಿ ಪೆಟ್ರೋಲಿಯಂ ಉತ್ಪನ್ನಗಳಿಂದ ವಸೂಲಿ ಮಾಡಲಾದ ಒಟ್ಟು ತೆರಿಗೆ 28.33 ಲಕ್ಷ ಕೋಟಿ ರೂಪಾಯಿಗಳು, ಇದರಲ್ಲಿ ಶೇಕಡಾ 82ರಷ್ಟು ಕೇಂದ್ರ ಸರ್ಕಾರವು ವಿಧಿಸಿದ ಅಬಕಾರಿ ಸುಂಕ.  ಬಡವರು ಮತ್ತು ಕೆಳ ಮಧ್ಯಮ ವರ್ಗದ ಮನೆಗಳ ಮಹಿಳೆಯರು ಖಾಲಿಯಾದ ಸಿಲಿಂಡರ್‌ಗಳನ್ನು ಪುನಃ ತುಂಬಿಸಿಕೊಳ್ಳಲು ಸಾಧ್ಯವಾಗದ ಮಟ್ಟಕ್ಕೆ ಅಡುಗೆ ಅನಿಲ ಬೆಲೆಗಳು ತಲುಪಿವೆ. ಫೆಬ್ರವರಿಯಲ್ಲಿ ಪ್ರತಿ ಸಿಲಿಂಡರ್ ಬೆಲೆಯನ್ನು 25/- ಹೆಚ್ಚಿಸಲಾಗಿದೆ. ಇತ್ತೀಚೆಗಿನ ಬೆಲೆಯಲ್ಲಿನ 100 ರೂಪಾಯಿ ಇಳಿಕೆಯು ಸಹಜವಾಗಿ ಚುನಾವಣಾ ಆಮಿಷವಾಗಿದೆ.

ಬಡವರು ಏನನ್ನಾದರೂ ಖರೀದಿಸಿದಾಗ ಪ್ರತಿ ಬಾರಿ ಪಾವತಿಸುವ ಪರೋಕ್ಷ ತೆರಿಗೆಗಳು ಭಾರತದಲ್ಲಿ ಸರ್ಕಾರಿ ಆದಾಯಕ್ಕೆ ಮೂರನೇ ಎರಡರಷ್ಟು ಕೊಡುಗೆ ನೀಡುತ್ತವೆ, ಆದರೆ ಅರ್ಧಕ್ಕಿಂತ ಹೆಚ್ಚು ರಾಷ್ಟ್ರೀಯ ಆದಾಯವನ್ನು ಹೊಂದಿರುವ ಮೇಲಿನ ಶೇಕಡಾ 10ಷ್ಟು ಶ್ರೀಮಂತರು ನೇರ ತೆರಿಗೆಯಾಗಿ ದೇಶದ ಆದಾಯದ ಮೂರನೇ ಒಂದು ಭಾಗವನ್ನು ಮಾತ್ರ ಕೊಡುಗೆ ನೀಡುತ್ತಾರೆ.

2021-22ರಲ್ಲಿ ಆದಾಯ ತೆರಿಗೆ ಸಲ್ಲಿಸಿದ 9.65 ಲಕ್ಷಕ್ಕೂ ಹೆಚ್ಚು ಕಂಪನಿಗಳ ಪೈಕಿ 5.81 ಲಕ್ಷ ಕಂಪನಿಗಳು ನಷ್ಟ ಅಥವಾ ಶೂನ್ಯ ಲಾಭವನ್ನು ವರದಿ ಮಾಡಿದ್ದರೆ, ಕೇವಲ 520 ಕಂಪನಿಗಳು ಎಲ್ಲಾ ಕಂಪನಿಗಳ ಒಟ್ಟು ಆದಾಯದ 56.4 ಪ್ರತಿಶತಕ್ಕಿಂತ ಹೆಚ್ಚು ಮತ್ತು 1757 ಕಂಪನಿಗಳು 18.7 ಪ್ರತಿಶತದಷ್ಟು ಲಾಭವನ್ನು ಹೊಂದಿವೆ. . ಕಾರ್ಪೊರೇಟ್ ಲಾಭಗಳು ಸಹ ಹೆಚ್ಚು ಕೇಂದ್ರೀಕೃತವಾಗಿವೆ!

ವಾಸ್ತವವಾಗಿ, ಕಾರ್ಪೊರೇಟ್ ಜಗತ್ತು, ದೊಡ್ಡ ವ್ಯಾಪಾರಿಗಳು ಮತ್ತು ಭೂಮಾಲೀಕರು ಅಭಿವೃದ್ಧಿ ಹೊಂದುತ್ತಿರುವಾಗಲೂ ಭಾರತದ ಜನತೆ ಹೆಚ್ಚಿದ ಹಣದುಬ್ಬರ, ನಿರಂತರ ನಿರುದ್ಯೋಗ ಮತ್ತು ಕಡಿಮೆ ಆದಾಯದಿಂದ ಕರುಣೆಯೇ ಇಲ್ಲದೆ  ಹಿಂಡಲ್ಪಡುತ್ತಿದ್ದಾರೆ. ಅಮೃತ್ ಕಾಲವೆಂದರೆ ಶ್ರೀಮಂತರಿಗೆ ಮಾತ್ರವಾಗಿದ್ದು ಅವರು ಸೂಪರ್ ಲಾಭವನ್ನು ಪಡೆಯುತ್ತಿದ್ದಾರೆ.

2022 ರಲ್ಲಿ, ಭಾರತದ ಜನಸಂಖ್ಯೆಯ 10 ಪ್ರತಿಶತದಷ್ಟು ಶ್ರೀಮಂತರು ರಾಷ್ಟ್ರೀಯ ಆದಾಯದ 57 ಪ್ರತಿಶತವನ್ನು ಪಡೆದುಕೊಂಡರು, ಆದರೆ ಬಡ 50 ಪ್ರತಿಶತದಷ್ಟು ಜನರು ಕೇವಲ 13 ಪ್ರತಿಶತದಷ್ಟು ಆದಾಯವನ್ನು ಮಾತ್ರ ಪಡೆದರು ಎಂದು ವಿಶ್ವ ಅಸಮಾನತೆ ಮಾಪನದ ಅಂಕಿಅಂಶಗಳು ತಿಳಿಸಿವೆ.

ಸಂಪತ್ತಿನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ, ಶೇಕಡಾ 10ರಷ್ಟು ಶ್ರೀಮಂತರು ದೇಶದ ಖಾಸಗಿ ಸಂಪತ್ತಿನ ಸುಮಾರು 67 ಪ್ರತಿಶತವನ್ನು ಹೊಂದಿದ್ದಾರೆ, ಆದರೆ ಮಧ್ಯಮ ಮಟ್ಟದ ಸಂಪತ್ತು ಹೊಂದಿರುವ ಶೇಕಡಾ 40 ರಷ್ಟು 29.5 ಶೇಕಡಾ ಮತ್ತು ಶೇಕಡಾ 50 ಬಡವರು ಶೇಕಡಾ 6 ಕ್ಕಿಂತ ಕಡಿಮೆ ಸಂಪತ್ತಿನ ಮಾಲೀಕತ್ವ ಹೊಂದಿದ್ದಾರೆ. ಮೇಲಿನ ಶೇಕಡಾ 10 ಜನರು ಕೆಳಗಿನ ಶೇಕಡಾ 50 ಕ್ಕಿಂತ 20 ಪಟ್ಟು ಹೆಚ್ಚು ಸಂಪತ್ತನ್ನು ಗಳಿಸಿದ್ದಾರೆ.

ಆರ್ಥಿಕತೆಯ ಭಾರೀ ಬೆಳವಣಿಗೆಯ ದರವು ಬಡವರಿಗೆ ಸಹಾಯ ಮಾಡುತ್ತಿಲ್ಲ ಅಥವಾ ಉದ್ಯೋಗವನ್ನು ಹೆಚ್ಚಿಸುತ್ತಿಲ್ಲ, ಇದು ವಾಸ್ತವವಾಗಿ ಅಪಾರ ಮತ್ತು ಬೆಳೆಯುತ್ತಿರುವ ಅಸಮಾನತೆಯನ್ನು ಖಾತ್ರಿಪಡಿಸುತ್ತಿದೆ. ಏಕೆಂದರೆ ಅಭಿವೃದ್ಧಿಯ ಪ್ರಯೋಜನಗಳನ್ನು ಗಣ್ಯರ ಒಂದು ಸಣ್ಣ ವಿಭಾಗವು ಬಾಚಿಕೊಳ್ಳುತ್ತಿದೆ.

ಗ್ರಾಹಕರ ವೆಚ್ಚದ ಫಲಿತಾಂಶಗಳು ತೋರಿಸಿದಂತೆ ಕಡಿಮೆ ಆದಾಯ, ನಿರಂತರ ನಿರುದ್ಯೋಗ ಮತ್ತು ಬೆಲೆ ಏರಿಕೆಯಿಂದ ಹೆಚ್ಚಿನ ಸಂಖ್ಯೆಯ ಜನರು ಉತ್ತಮ ಆಹಾರ ಮತ್ತು ಜೀವನದ ಇತರ ಮೂಲಭೂತ ಅವಶ್ಯಕತೆಗಳ ಕಡೆ ಗಮನ ಹರಿಸುತ್ತಿಲ್ಲ. ಇದರಿಂದಾಗಿ ಅಗತ್ಯತೆಯ ಹೊರತಾಗಿಯೂ ಆರ್ಥಿಕತೆಯು ಬೇಡಿಕೆಯ ಕೊರತೆಯಿಂದ ಬಳಲುತ್ತಿದೆ. ಪರಿಣಾಮಕಾರಿ ಬೇಡಿಕೆಯ ಕೊರತೆಯಿಂದಾಗಿ 2018 ರಲ್ಲಿ ಕಾರ್ಪೊರೇಟ್ ತೆರಿಗೆಯಲ್ಲಿ ಭಾರಿ ಕಡಿತ ಮತ್ತು ಸುಮಾರು 15 ಲಕ್ಷ ಕೋಟಿ ರೂಪಾಯಿಗಳ ಬ್ಯಾಂಕ್ ಸಾಲ ಮನ್ನಾ ಸೇರಿದಂತೆ ಸರ್ಕಾರವು ಎಲ್ಲಾ ರೀತಿಯ ಉಡುಗೊರೆಗಳು, ಪ್ರೋತ್ಸಾಹ ಮತ್ತು ರಿಯಾಯಿತಿಗಳನ್ನು ನೀಡಿದರೂ ಖಾಸಗಿ ವಲಯದಿಂದ ಉತ್ಪಾದನಾ ಸೌಲಭ್ಯಗಳಲ್ಲಿ ಹೂಡಿಕೆ  ಕಂಡು ಬಂದಿಲ್ಲ.

ಆದಾಗ್ಯೂ, ಸರ್ಕಾರವು ಬಳಕೆಯ ಮೇಲೆ ವೆಚ್ಚವನ್ನು ಹೆಚ್ಚಿಸುವ ಮೂಲಕ ಆರ್ಥಿಕತೆ ಚೇತರಿಸಿಕೊಳ್ಳಲು ಬೇಕಾದ ಸಹಾಯ ಮಾಡಲು ನಿರಾಕರಿಸುತ್ತದೆ. ಮೋದಿ ಸರ್ಕಾರ ಸರ್ಕಾರದ ವೆಚ್ಚವನ್ನು ಕಡಿಮೆ ಮಾಡಬೇಕು ಮತ್ತು ಎಲ್ಲವನ್ನೂ ಖಾಸಗಿ ವಲಯಕ್ಕೆ ನಡೆಸಲು ಅವಕಾಶ ನೀಡಬೇಕು ಎಂದು ನಂಬಿದೆ. ನವ-ಉದಾರವಾದಿ ಸಿದ್ಧಾಂತದ ಮೇಲಿನ ಈ ಕುರುಡು ನಂಬಿಕೆಯು, ಸಾಂಕ್ರಾಮಿಕ ರೋಗ ಮತ್ತು ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲೂ ಸರ್ಕಾರದ ವೆಚ್ಚವು GDPಯ ಶೇಕಡಾ 10-11ನ್ನು ಮೀರದಂತೆ ಮಾಡಿದೆ.

ಕೇಂದ್ರ ಸರ್ಕಾರದ ಯೋಜನೆಗಳು/ಯೋಜನೆಗಳ ಮೇಲಿನ ವೆಚ್ಚವು 2020-21 ಮತ್ತು 2023-24ರ ನಡುವೆ GDPಯ 6.8 ಪ್ರತಿಶತದಿಂದ 4.9 ಪ್ರತಿಶತಕ್ಕೆ ಇಳಿದಿದೆ. ಕೇಂದ್ರ ಪ್ರಾಯೋಜಿತ ಯೋಜನೆಗಳ ಮೇಲಿನ ವೆಚ್ಚವೂ ಶೇ.1.9ರಿಂದ ಶೇ.1.6ಕ್ಕೆ ಇಳಿದಿದೆ.

ಕಳೆದ ಎರಡು ವರ್ಷಗಳಲ್ಲಿ, 2022-23 ಮತ್ತು 2023-24ರಲ್ಲಿ PM-ಕಿಸಾನ್, ಆಹಾರ ಸಬ್ಸಿಡಿ, ವಸತಿ (PM-AWAS) ಮತ್ತು MGNREGA ಮೇಲಿನ ವೆಚ್ಚಗಳಲ್ಲಿ ಸಂಪೂರ್ಣ ಮೊತ್ತದಲ್ಲಿ ಕಡಿತ ಮಾಡಲಾಗಿದೆ. 2023-24ರಲ್ಲಿ (ಪರಿಷ್ಕೃತ ಅಂದಾಜುಗಳು) ಈ ನಾಲ್ಕು ಪ್ರಮುಖ ಯೋಜನೆಗಳ ಮೇಲಿನ ಸಂಯೋಜಿತ ವೆಚ್ಚವು 2021-22ರಲ್ಲಿನ ವೆಚ್ಚಕ್ಕಿಂತ 24 ಪ್ರತಿಶತ ಕಡಿಮೆಯಾಗಿದೆ.

ಪ್ರಧಾನಮಂತ್ರಿ-ಉಜ್ವಲ ಯೋಜನೆಯು ಮೇ 2016ರಲ್ಲಿ ಪ್ರಾರಂಭವಾದಾಗಿನಿಂದ ಎಲ್‌ಪಿಜಿ ಸಂಪರ್ಕಗಳ ಸಂಖ್ಯೆಯನ್ನು 10 ಕೋಟಿಗೂ ಹೆಚ್ಚು ಹೆಚ್ಚಿಸಿದೆ, ಅದರಲ್ಲಿ ಸುಮಾರು 2.3 ಕೋಟಿ ಸಂಪರ್ಕಗಳನ್ನು 2020ರ ನಂತರದ ಉಜ್ವಲ 2.0 ಸಮಯದಲ್ಲಿ ಸೇರಿಸಲಾಗಿದೆ. ಈ 10 ಕೋಟಿ ಸಂಪರ್ಕಗಳು ಭಾರತದ ಎಲ್ಲಾ LPG ಸಂಪರ್ಕಗಳ ಸುಮಾರು 30 ಪ್ರತಿಶತದಷ್ಟು ಆಗುತ್ತವೆ. ಭಾರತದಲ್ಲಿ ಒಟ್ಟು LPG ಬಳಕೆಯ ಹೆಚ್ಚಳವು 2015-16 ಮತ್ತು 2019-20 ರ ನಡುವೆ 34 ಪ್ರತಿಶತದಷ್ಟು ಏರಿಕೆಯಾಗಿದೆ, ಇದು ಹಿಂದಿನ ನಾಲ್ಕು ವರ್ಷಗಳಲ್ಲಿ ನಡೆದ 28 ಶೇಕಡಾ ಹೆಚ್ಚಳಕ್ಕಿಂತ ಭಾರೀ ಹೆಚ್ಚೇನೂ ಅಲ್ಲ. ಉಜ್ವಲ 2.0 ಸಮಯದಲ್ಲಿ, ಬೆಳವಣಿಗೆಯು ಇನ್ನೂ ನಿಧಾನವಾಗಿದೆ, 2019-20 ಮತ್ತು 2023-24 ರ ನಡುವೆ ಸಂಪರ್ಕಗಳ ಹೆಚ್ಚಳವು ಕೇವಲ 11 ಪ್ರತಿಶತದಷ್ಟಿದೆ.

ಸರ್ಕಾರ ಏನು ಮಾಡಬೇಕಿತ್ತು? ಸಂಪನ್ಮೂಲಗಳನ್ನು ಸಂಗ್ರಹಿಸಲು ಶ್ರೀಮಂತರಿಗೆ ತೆರಿಗೆ ವಿಧಿಸಬೇಕಿತ್ತು ಮತ್ತು ಜನರಿಗೆ ಉತ್ತಮ ಶಿಕ್ಷಣ, ಆರೋಗ್ಯ, ಆಹಾರ ಭದ್ರತೆ ಇತ್ಯಾದಿಗಳನ್ನು ಒದಗಿಸಲು ಹಣವನ್ನು ಖರ್ಚು ಮಾಡಬೇಕಾಗಿತ್ತು. ಹೆಚ್ಚು ಮತ್ತು ಉತ್ತಮ ಉದ್ಯೋಗಗಳನ್ನು ಸೃಷ್ಟಿಸುವ ಕೈಗಾರಿಕಾ ಹೂಡಿಕೆಯನ್ನು ಹೆಚ್ಚಿಸಬೇಕಿತ್ತು. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ವಿಸ್ತರಿಸುವ ಮೂಲಕ ಹಣದುಬ್ಬರವನ್ನು ನಿಯಂತ್ರಿಸಬೇಕಿತ್ತು‌. ದಲಿತರು ಮತ್ತು ಆದಿವಾಸಿಗಳ ಸಬಲೀಕರಣಕ್ಕಾಗಿ ಹೆಚ್ಚಿನ ಕಲ್ಯಾಣ ವೆಚ್ಚವನ್ನು ಖಾತ್ರಿಪಡಿಸಬೇಕಿತ್ತು. ಬದಲಾಗಿ, ಅದು ಜನರ ಮೇಲೆ ದಾಳಿಯನ್ನು ಪ್ರಾರಂಭಿಸಿತು, ಅವರ ಮೇಲಿನ ಹೊರೆ ಮತ್ತು ಅವರ ಶೋಷಣೆ ಎರಡನ್ನೂ ಹೆಚ್ಚಿಸಿತು ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಎರಡೂ ಕಾರ್ಪೊರೇಟ್‌ಗಳ ಲಾಭ ಮತ್ತು ಶೋಷಣೆಯನ್ನು ಹೆಚ್ಚಿಸಲು ತನ್ನ ಕೈಲಾದ ಎಲ್ಲವನ್ನೂ ಮಾಡಿತು.

(ಮೂಲ: ವಿಶ್ವಬ್ಯಾಂಕ್; ನೀತಿ ಆಯೋಗ; NSSO; MoSPI; WID; ಪಾರ್ಲಿಮೆಂಟ್ ಪ್ರಶ್ನೆಗಳು.)

ಆರ್ಥಿಕತೆಯನ್ನು ಬಲಪಡಿಸಿ! ಬಡವರಿಗೆ ಪರಿಹಾರ ನೀಡಿ! ಬಿಜೆಪಿಯನ್ನು ಸೋಲಿಸಿ!

Leave a Reply

Your email address will not be published. Required fields are marked *