ಭಾರತೀಯ ರೈಲ್ವೆಯ ಖಾಸಗೀಕರಣ, ವ್ಯಾಪಾರೀಕರಣದತ್ತ ಒಂದು ಕ್ರಮ

ರೈಲು ಬಜೆಟ್ ಸಾಮಾನ್ಯ ಬಜೆಟಿನೊಂದಿಗೆ ವಿಲೀನ

ಪ್ರತಿ ವರ್ಷ ರೈಲು ಮಂತ್ರಿಗಳು ಪ್ರತ್ಯೇಕ ರೈಲು ಬಜೆಟನ್ನು ಸಂಸತ್ತಿನಲ್ಲಿ ಮಂಡಿಸುವ ವಾಢಿಕೆಯನ್ನು ಕೈಬಿಟ್ಟು ಅದನ್ನು ಹಣಕಾಸು ಮಂತ್ರಿಗಳು ಮಂಡಿಸುವ ಸಾಮಾನ್ಯ ಬಜೆಟಿನೊಂದಿಗೆ ಸೇರಿಸಲು ಕೇಂದ್ರ ಸಂಪುಟ ನಿರ್ಧರಿಸಿದೆ.

ಇದೊಂದು ಸಂಸತ್ತಿನಲ್ಲಿ ಚರ್ಚೆ ಮಾಡದೆ  ಸರಕಾರ ಕೈಗೊಂಡಿರುವ ಏಕಪಕ್ಷೀಯ ನಿರ್ಧಾರ. ರೈಲ್ವೆ ಹಣಕಾಸಿನ ಮತ್ತು ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುವ ಅಧಿಕಾರ  ಸಂಸತ್ತಿನದ್ದು. ವಾಸ್ತವವಾಗಿ ಪ್ರತ್ಯೇಕ ರೈಲು ಬಜೆಟನ್ನು ರದ್ದು ಮಾಡಿರುವುದು ಭಾರತೀಯ ರೈಲ್ವೆಯ ವ್ಯಾಪಾರೀಕರಣ ಮತ್ತು ಖಾಸಗೀಕರಣದತ್ತ ಒಂದು ಕ್ರಮ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಟೀಕಿಸಿದೆ.

ಭಾರತೀಯ ರೈಲ್ವೆ ದೇಶದಲ್ಲಿ ಅತಿ ದೊಡ್ಡ ಸಾರ್ವಜನಿಕ ಸಾರಿಗೆ ವ್ಯವಸ್ಥೆ. ಕೋಟ್ಯಂತರ ಸಾಮಾನ್ಯ ಜನರು ಅದನ್ನು ಬಳಸುತ್ತಾರೆ. ಈ ಸಾರ್ವಜನಿಕ ಸಾರಿಗೆ ಸೇವಾ ವ್ಯವಸ್ಥೆಯನ್ನು ಕೇವಲ ವ್ಯಾಪಾರದ ದೃಷ್ಟಿಯಿಂದ ನೋಡಲು ಸಾಧ್ಯವಿಲ್ಲ.

ಸಂಸತ್ತಿನಲ್ಲಿ ಮಂಡಿಸುವ ರೈಲು ಬಜೆಟ್  ಅದರ ಹಣಕಾಸು ಮತ್ತು ಖರ್ಚುಗಳನ್ನು ಪರೀಕ್ಷಿಸಲು ಜನರ ಚುನಾಯಿತ ಪ್ರತಿನಿಧಿಗಳಿಗೆ ಒಂದು ಅವಕಾಶ ಒದಗಿಸುತ್ತಿತ್ತು. ರೈಲ್ವೆ ವ್ಯವಸ್ಥೆಯ ವಿಸ್ತರಣೆಯ ಕುರಿತು ಚರ್ಚೆ ನಡೆಸಲು ಅವಕಾಶ ಕೊಡುತ್ತಿತ್ತು. ರೈಲು ಬಜೆಟ್ ರದ್ಧತಿಯೊಂದಿಗೆ ಇವೆಲ್ಲ ಕಡಿತಗೊಳ್ಳುತ್ತವೆ ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.

ಸರಕಾರದ ಈ ನಿರ್ಧಾರ ಭಾರತೀಯ ರೈಲ್ವೆಯ ವ್ಯಾಪಾರೀಕರಣ ಮತ್ತು ಖಾಸಗೀಕರಣದ ನೀಲನಕ್ಷೆಯನ್ನು ತಯಾರಿಸಿರುವ ಬಿಬೇಕ್ ದೇವ್‍ರಾಯ್ ಸಮಿತಿಯ ಶಿಫಾರಸಿಗೆ ಅನುಗುಣವಾಗಿರುವಂತದ್ದು. ಜನತೆಯ ಮಟ್ಟಿಗೆ ಇದು ರೈಲ್ವೆ ದರಗಳಲ್ಲಿ ತೀವ್ರ ಹೆಚ್ಚಳದ ಮತ್ತು ಶ್ರೀಮಂತ ಪ್ರಯಾಣಿಕರು ಮತ್ತು ಬಡ ಪ್ರಯಾಣಿಕರಿಗೆ ದೊರೆಯುವ ಸೇವೆಗಳಲ್ಲಿ ಕಂದರ ಹೆಚ್ಚುವ ಮುನ್ಸೂಚನೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಎಚ್ಚರಿಸಿದೆ.

ಗಂಭೀರ ಪ್ರಶ್ನೆಗಳನ್ನು ಎತ್ತಿದೆ,  ದೊಡ್ಡ ಆಪತ್ತಿನ ಮುನ್ಸೂಚನೆ-ಯೆಚೂರಿ

ಸಂಸತ್ತಿಗೆ ರೈಲು ಬಜೆಟನ್ನು ಸಲ್ಲಿಸುವುದನ್ನು ತರಾತುರಿಯಿಂದ ರದ್ದು ಮಾಡಿರುವುದು ಗಂಭೀರ ಪ್ರಶ್ನೆಗಳನ್ನು ಎತ್ತಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ.

ಕಳೆದ ವರ್ಷ ರೈಲು ಬಜೆಟ್ ಮಂಡಿಸುತ್ತ ರೈಲು ಮಂತ್ರಿಗಳು ರೈಲ್ವೆ ನಿರ್ವಹಣೆಯ ಅನುಪಾತ 0.92 ಮೀರುವುದಿಲ್ಲ ಎಂದು ಭರವಸೆ ಕೊಟ್ಟಿದ್ದರು. ಅಂದರೆ ಖರ್ಚು ಆದಾಯವನ್ನು ಮೀರುವುದಿಲ್ಲ, ಪ್ರತಿ 1ರೂ. ಆದಾಯದಲ್ಲಿ 92ಪೈಸೆ ಖರ್ಚು ಮಾಡಲಾಗುವುದು ಎಂದು. ಆದರೆ ಈ ಬಾರಿ ರೈಲ್ವೆ ಸಾಗಣೆ ಪ್ರಮಾಣ ಮತ್ತು ಆದಾಯ ಎರಡೂ ತೀವ್ರವಾಗಿ ಕುಗ್ಗಿರುವುದರಿಂದ ನಿರ್ವಹಣೆಯ ಅನುಪಾತವನ್ನು ದಾಟುವ ಸಂಭವವಿದೆ, ಅಂದರೆ ಆದಾಯಕ್ಕಿಂತ ಹೆಚ್ಚು ಖರ್ಚು ಆಗುವ ಸಾಧ್ಯತೆಯಿದೆ ಎಂದು ಪರಿಣತರು ಹೇಳುತ್ತಿದ್ದಾರೆ. ಬಜೆಟ್ ಮಂಡಿಸದಿದ್ದರೆ ಇದು ಸಾರ್ವಜನಿಕ ಗಮನಕ್ಕೇ ಬರುವುದಿಲ್ಲ ಎಂದು ಯೆಚೂರಿಯವರು ಈ ಕ್ರಮದ ಹಿಂದಿರುವ ಹುನ್ನಾರದತ್ತ ಬೊಟ್ಟು ಮಾಡಿದ್ದಾರೆ.

ರೈಲ್ವೆಯನ್ನು ಸಂಸತ್ತಿನ ಮೂಲಕ ಸಾರ್ವಜನಿಕ ಪರೀಕ್ಷಣೆಯ ವ್ಯಾಪ್ತಿಯಿಂದ ಹೊರಗಿಡುವ ಮೂಲಕ ಅದರ ಖಾಸಗೀಕರಣಕ್ಕೆ ತಯಾರಿ ನಡೆದಿದೆಯೇ ಎಂದು ಯೆಚೂರಿ ಪ್ರಶ್ನಿಸಿದ್ದಾರೆ.

ರೈಲ್ವೆ ಇಲಾಖೆಯ ಒಡೆತನದಲ್ಲಿ ಅಪಾರ ಭೂಮಿಯಿದೆ. ರಿಯಲ್ ಎಸ್ಟೇಟ್ ಕುಳಗಳ ಕಣ್ಣು ಇದರ ಮೇಲಿದೆ. ಕಳ್ಳನದಿಂದ ಖಾಸಗೀಕರಣ ನಡೆಸುವ ಯಾವುದೇ ಪ್ರಯತ್ನ ಈ ಭೂಮಿಯ ಒಡೆತನದ ಮೇಲೆ ಪರಿಣಾಮ ಬೀರುತ್ತದೆ. ಪ್ರತ್ಯೇಕ ರೈಲು ಬಜೆಟ್ ಇಲ್ಲದಿದ್ದರೆ ಇದನ್ನು ಪರೀಕ್ಷಿಸುವುದು ಬಹಳ ಕಷ್ಟವಾಗುತ್ತದೆ ಎಂಬ ಸಂಗತಿಯತ್ತ ಗಮನ ಸೆಳೆದಿರುವ ಸೀತಾರಾಮ್ ಯೆಚೂರಿಯವರು, ಈಗಲೂ 95ಶೇ. ಮಂದಿ  ರಿಸರ್ವೇಶನ್ ಮಾಡದೆಯೇ ಪ್ರಯಾಣಿಸುತ್ತಿದ್ದಾರೆ, ಅವರಿಗೆ ಈ ಸಾರ್ವಜನಿಕ ಸೇವೆಯ ಅಗತ್ಯವಿದೆ ಎಂದು ನೆನಪಿಸುತ್ತಾರೆ. ಆದರೆ ಇನ್ನು ಮುಂದೆ ಸಾರ್ವಜನಿಕ ವಲಯದ ಸಾಮಾಜಿಕ ಜವಾಬ್ದಾರಿ ಇಲ್ಲದ ರೈಲ್ವೆ ಇಲಾಖೆ ಅವರ ಅಗತ್ಯಗಳತ್ತ ಗಮನ ಕೊಡದೆ ಕೇವಲ ಅತಿವೇಗದ ಬುಲೆಟ್ ರೈಲುಗಳಂತಹ ಗಿಮಿಕ್‍ಗಳಿಗೆ ಗಮನ ಕೇಂದ್ರೀಕರಿಸುವುದು ಸುಲಭವಾಗುತ್ತದೆ.

ಭಾರತದಂತಹ ದೇಶದಲ್ಲಿ ಶಿಕ್ಷಣ, ಆರೋಗ್ಯದಂತೆ ರೈಲು ಸಾರಿಗೆಯಲ್ಲೂ ಸರಕಾರ ದಪಾತ್ರ ಬಹಳ ಮಹತ್ವದ್ದು. ಈ ಹಿನ್ನೆಲೆಯಲ್ಲಿ ರೈಲು ಬಜೆಟ್ ರದ್ದು ಮಾಡಿರುವುದು ಒಂದು ದೊಡ್ಡ ಆಪತ್ತಿನ ಮುನ್ಸೂಚನೆ ದೇಶ ಭಾರೀ ದುಷ್ಪರಿಣಾಮಗಳನ್ನು ಎದುರಿಸ ಬೇಕಾಗಬಹುದು ಎಂದು ಸೀತಾರಾಮ್ ಯೆಚೂರಿ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *