ಕಾನೂನು ರಕ್ಷಕ ಮುಖ್ಯಮಂತ್ರಿಯಿಂದ ಬಲವಂತದ ವಸೂಲಿ

ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಚಿತ್ರ ತಯಾರಕರಿಗೆ ಬೆದರಿಕೆ ಕುರಿತಂತೆ ಕಾನೂನು ಕ್ರಮವನ್ನು ಎತ್ತಿ ಹಿಡಿಯುವ ಬದಲು ಸಶಸ್ತ್ರ ಪಡೆಗಳ ಕಲ್ಯಾಣದ ಹೆಸರಿನಲ್ಲಿ 5 ಕೋಟಿರೂ. ಬಲವಂತದ ವಸೂಲಿಗೆ ಸೌಕರ್ಯ ಕಲ್ಪಿಸಿಕೊಡುವ ಪಾತ್ರ ವಹಿಸಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಖಂಡಿಸಿದೆ.  ಇದು ಸಶಸ್ತ್ರ ಪಡೆಗಳ ಧೈರ್ಯ, ಶೌರ್ಯಕ್ಕೆ ಮತ್ತು ಅವು ಭಾರತದ ರಕ್ಷಣೆಯಲ್ಲಿ ವಹಿಸಿರುವ ಪಾತ್ರಕ್ಕೆ ಮಾಡಿರುವ ಘೋರ ಅಪಮಾನ ಎಂದು ಅದು ಹೇಳಿದೆ.

ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಪಾಕಿಸ್ತಾನಿ ಕಲಾವಿದರೊಬ್ಬರು ನಟಿಸಿರುವ ಬಾಲಿವುಡ್ ಚಿತ್ರದ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್‍ಎಸ್) ಮತ್ತು ಆ ಚಿತ್ರದ ತಯಾರಕರ ನಡುವೆ ಒಂದು ‘ರಾಜಿಸೂತ್ರ’ ತಂದು, ಚಿತ್ರದ ತಯಾರಕರು ಸಶಸ್ತ್ರ ಪಡೆಗಳ ಕಲ್ಯಾಣ ನಿಧಿಗೆ 5ಕೋಟಿ ರೂ. ನೀಡಬೇಕು ಮತ್ತಿತರ ಎಂಎನ್‍ಎಸ್ ‘ಶರತ್ತು’ಗಳ ಮೇಲೆ  ಚಿತ್ರದ ಬಿಡುಗಡೆಗೆ ಅನುಕೂಲವಾಗುವಂತೆ ಮಾಡಿದ್ದಾರೆ, ಸಶಸ್ತ್ರ ಪಡೆಗಳ ನಡುವೆಯೂ ಈ ಬಗ್ಗೆ ಆಕ್ರೋಶ ಉಂಟಾಗಿದೆ ಎಂಬ ಸುದ್ದಿಯ ಸಂದರ್ಭದಲ್ಲಿ ಸಿಪಿಐ(ಎಂ) ಈ ಟೀಕೆ ಮಾಡಿದೆ.

ಮುಖ್ಯಮಂತ್ರಿಗಳು ಸಂವಿಧಾನವನ್ನು ಎತ್ತಿ ಹಿಡಿಯಲು ಮತ್ತು ಕಾನೂನು ಪ್ರಕಾರ ಆಳ್ವಿಕೆಗೆ ಪ್ರತಿಜ್ಞಾಬದ್ಧರಾಗಿದ್ದಾರೆ. ಆದರೆ ಈ ಕೃತ್ಯದ ಮೂಲಕ ಅವರು ಸಂವಿಧಾನ ವಿಧಿಸಿರುವ ಕರ್ತವ್ಯಕ್ಕೆ ನಕಾರ ಹೇಳಿದ್ದಾರೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕುವ ಭಯದ ವಾತಾವರಣÀವನ್ನು ಸೃಷ್ಟಿಸುತ್ತದೆ ಕೂಡ ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.

ಮುಖ್ಯಮಂತ್ರಿಗಳು ಮತ್ತು ಮಹಾರಾಷ್ಟ್ರ ಸರಕಾರ ಕಾನೂನಿನ ಆಳ್ವಿಕೆಯನ್ನು ಎತ್ತಿ ಹಿಡಿಯಲು ಪ್ರಭುತ್ವದ ಸಾಧನಗಳ ಬಳಕೆ ಮಾಡಬೇಕು. ಅದರಲ್ಲಿ ವಿಫಲವಾಗಿರುವುದನ್ನು ಕೇಂದ್ರ ಸರಕಾರ ಸಂವಿಧಾನಿಕ ಅಂಶಗಳಿಗೆ ಅನುಗುಣವಾಗಿ ಗಂಭೀರವಾಗಿ ಪರಿಗಣಿಸಬೇಕು ಎಂದು ಸಿಪಿಐ(ಎಂ) ಹೇಳಿದೆ.

Leave a Reply

Your email address will not be published. Required fields are marked *