ಪಡಿತರ ಬೇಕು, ಕೂಪನ್ ಬ್ಯಾಡ: ಸಿಪಿಐ(ಎಂ) ಆಕ್ರೋಶ

ಆಹಾರ ಪದಾರ್ಥಗಳ ಬದಲಿಗೆ ನಗದು ಕೂಪನ್ ನೀಡುವ ಮೂಲಕ ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ನಾಶ ಮಾಡಿ, ಖಾಸಗಿ ಮಾರುಕಟ್ಟೆಯನ್ನು ಬಲಪಡಿಸುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಡಿಸೆಂಬರ್ 28ರಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)-ಸಿ.ಪಿಐ(ಎಂ) ಬೆಂಗಳೂರು ಉತ್ತರ ಜಿಲ್ಲಾ ಸಮಿತಿಯು ಪ್ರತಿಭಟನೆ ನಡೆಸಿತು.

ಬೆಂಗಳೂರಿನ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಕಛೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗೌರಮ್ಮರವರು ಮಾತನಾಡಿ `ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಆಹಾರ ಭದ್ರತಾ ಕಾಯಿದೆಯನ್ನು ಬಲಪಡಿಸುವ ಬದಲಾಗಿ, ನಾಶ ಮಾಡಹೊರಟಿವೆ. ಪಡಿತರ ಮೂಲಕ 67% ಜನತೆಗಿದ್ದ ಆಹಾರ ಭದ್ರತೆಯನ್ನು 40% ಗೆ ಇಳಿಸಲು ಕೇಂದ್ರ ಸಮಿತಿ ನೇಮಿಸಿದ ಶಾಂತಕುಮಾರ್ ಸಮಿತಿ ಶಿಫಾರಸ್ಸು ಮಾಡಿದೆ.

ಇನ್ನು ರಾಜ್ಯ ಸರ್ಕಾರ ಎಪಿಎಲ್ ಕಾರ್ಡುದಾರರಿಗೆ ನೀಡುವ ಆಹಾರ ಧಾನ್ಯವನ್ನು ನಿಲ್ಲ್ಲಿಸಿ ಯೂನಿಟ್ ಪದ್ಧತಿ ಜಾರಿಗೆ ತಂದಿದೆ. ಸೀಮೆಎಣ್ಣೆ ಸಹ ಸಿಗುತ್ತಿಲ್ಲ. ಅಡುಗೆ ಅನಿಲದ ಸಬ್ಸಿಡಿಯನ್ನು ನೇರ ನಗದು ರೂಪದಲ್ಲಿ ನೀಡುವ ಕ್ರಮ ಮತ್ತು ಬಯೋಮೆಟ್ರಿಕ್ ವ್ಯವಸ್ಥೆಯು ಗೊಂದಲದ ಗೂಡಾಗಿಸಿದೆ ಎಂದರು.

ಅನ್ನಬಾಗ್ಯ ಯೋಜನೆಯ ಸಬ್ಸಿಡಿಯನ್ನು ನೇರವಾಗಿ ನಗದು ರೂಪದಲ್ಲಿ ನೀಡುವುದರಿಂದ ನಗರ ಪ್ರದೇಶದಲ್ಲಿನ ನ್ಯಾಯಬೆಲೆ ಅಂಗಡಿಗಳನ್ನು ಮುಚ್ಚುವ ಪರಿಸ್ಥಿತಿ ಒಂದು ಕಡೆಯಾಗುತ್ತದೆ. ಮತ್ತೊಂದು ಕಡೆ ಮಾರುಕಟ್ಟೆ ದರದಲ್ಲಿ ಫಲಾನುಭವಿಗಳು ಆಹಾರ ಪದಾರ್ಥ ಖರೀದಿಸಲಾಗದೆ ಸಂಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳುತ್ತಾರೆ.
ಅವೈಜ್ಞಾನಿಕ ಎಪಿಎಲ್-ಬಿಪಿಎಲ್ ಮಾನದಂಡ ತೆಗೆದು ಹಾಕಬೇಕು. ಅಪೌಷ್ಟಿಕತೆ, ರಕ್ತಹೀನತೆ, ಹಸಿವಿಗೆ ಉತ್ತರವನ್ನು ಕಂಡು ಕೊಳ್ಳಲಾರದೇ ಅಭಿವೃದ್ದಿಯನ್ನು ಸಾಧಿಸುಲು ಸಾಧ್ಯವಿಲ್ಲ. ನಗದು ಕೂಪನ್ ನೀಡುವ ಕ್ರಮ ಕೈಬಿಟ್ಟು, ಬೆಲೆಏರಿಕೆ ನಿಯಂತ್ರಿಸಿ, ಕೃಷಿ ಆಹಾರ ಸ್ವಾವಲಂಬನೆಗೆ ಅದ್ಯ ಗಮನ ನೀಡಬೇಕೆಂದು ಹೇಳಿದರು.

ಸಿಪಿಐ(ಎಂ) ಪಕ್ಷದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರಿಗೆ ಮನವಿಪತ್ರ ನೀಡಿದರು. ಪ್ರತಿಭಟನೆಯಲ್ಲಿ ಸಿಪಿಐ(ಎಂ)ನ ರಾಜ್ಯ ಸಮಿತಿ ಸದಸ್ಯರಾದ ಆರ್.ಶ್ರೀನಿವಾಸ್, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಟಿ.ಲೀಲಾವತಿ ಮತ್ತು ಮುಖಂಡರು ಕಾರ್ಯಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *