ಪ್ರಧಾನ ಮಂತ್ರಿಗಳಿಗೆ 16 ಪ್ರಶ್ನೆಗಳು

ಪ್ರಧಾನ ಮಂತ್ರಿಗಳು 500/1000ರೂ.ಗಳ ನೋಟುಗಳ ಅನಾಣ್ಯೀಕರಣದ ಡಿಸೆಂಬರ್ 30ರ ಗಡುವು ಮುಗಿದ ನಂತರ ಹೊಸ ಪ್ರಕಟಣೆಗಳನ್ನು ಮಾಡುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೊಸ ಪ್ರಕಟಣೆಗಳನ್ನು ಮಾಡುವಾಗ ಕೆಲವು ಕ್ರಮಗಳನ್ನು ಕೈಗೊಳ್ಳಬೇಕು ಎಂದು 16 ಅಂಶಗಳನ್ನು ಪಟ್ಟಿ ಮಾಡಿದೆ. ಅವು ಹೀಗಿವೆ:

1. ಡಿಸೆಂಬರ್ 30ರ ಗಡುವು ಮುಗಿದಿರುವುದರಿಂದ, ಜನರು ಕಷ್ಟಪಟ್ಟು ಸಂಪಾದಿಸಿದ ತಮ್ಮದೇ ಹಣವನ್ನು ಪಡೆಯಲು ಹಾಕಿರುವ ಮಿತಿಗಳನ್ನೆಲ್ಲ ತಕ್ಷಣವೇ ತೆಗೆಯಬೇಕು.

* ಈ ಅನಾಣ್ಯೀಕರಣ ಸಾಕಷ್ಟು ಹೊಡೆತಗಳಿಗೆ ಒಳಗಾಗಿರುವ, ಕುಂಟುತ್ತ ಸಾಗುತ್ತಿದ್ದ ಭಾರತೀಯ ಆರ್ಥವ್ಯವಸ್ಥೆ ಮತ್ತಷ್ಟು ಗಿರಕಿ ಹೊಡೆಯುವಂತೆ ಮಾಡಿ ದಿನಗೂಲಿಯಿಂದ ಬದುಕುಳಿಯಬೇಕಾದ ಬಡವರು ಮತ್ತು ತುಳಿತಕ್ಕೊಳಗಾಗಿರುವ ಜನಗಳಿಗೆ ಅಪಾರ ಬವಣೆಗಳನ್ನು ಉಂಟು ಮಾಡಿದೆ. ಇದರ ಪರಿಣಾಮವಾಗಿ ಉಂಟಾಗಿರುವ ಹಿಂಜರಿತದ ಪ್ರವೃತ್ತಿಗಳನ್ನು ಈ ಕೆಳಗಿನ ಕ್ರಮಗಳ ಮೂಲಕ ಎದುರಿಸಬೇಕು:

2. ಸಾಮಾನ್ಯ ಕೃಷಿ ಚಟುವಟಿಕೆಗಳು ಅಸ್ತವ್ಯಸ್ತಗೊಂಡುದರಿಂದಾಗಿ ನರಳುತ್ತಿರುವ ರೈತರ ಸಾಲಗಳನ್ನು ತಕ್ಷಣವೇ ಮನ್ನಾ ಮಾಡಬೇಕು.

3. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸೇರಿರುವವರಿಗೆಲ್ಲ ನೂರು ದಿನಗಳ ಕೆಲಸ ಕೊಡಿಸಲು ಅದಕ್ಕೆ ನೀಡುವ ಹಣವನ್ನು ದ್ವಿಗುಣಗೊಳಿಸಬೇಕು.

4. ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು ಮುಖ್ಯವಾಗಿ ನಗದಿನ ಮೇಲೆಯೇ ವ್ಯವಹಾರ ನಡೆಸುವುದರಿಂದಾಗಿ ಅವುಗಳ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಳ್ಳುವಂತಾಗಿದ್ದು, ಅವುಗಳಿಗೆ ತೆರಿಗೆ ರಿಯಾಯ್ತಿ ನೀಡಬೇಕು.

5. ಸಹಕಾರಿ ಬ್ಯಾಂಕುಗಳ ಠೇವಣಿಗಳು ಮತ್ತು ನಿಕಾಲೆಗಳ ಮೇಲೆ ಹೇರಿರುವ ಎಲ್ಲ ಮಿತಿಗಳನ್ನು ತೆಗೆದು ಹಾಕಬೇಕು. ಯಾವುದೇ ಬ್ಯಾಂಕಿನ ಮೇಲೆ ನಿರ್ದಿಷ್ಟ ದುರಾಚರಣೆಯ ಕೇಸುಗಳಿದ್ದರೆ ಅವುಗಳ ವಿರುದ್ಧ ಕ್ರಿಮಿನಲ್ ಕ್ರಮಗಳನ್ನು ಕೈಗೊಳ್ಳಬೇಕು, ಆದರೆ ಅದಕ್ಕಾಗಿ ಗ್ರಾಮೀಣ ಭಾರತದ ಬೆನ್ನೆಲುಬಾಗಿರುವ ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಾಶ ಮಾಡಲು ಸಾಧ್ಯವಿಲ್ಲ.
* ಅನಾಣ್ಯೀಕರಣ ಹಲವು ರಾಜ್ಯಗಳಿಗೆ ಗಮನಾರ್ಹ ಪ್ರಮಾಣದಲ್ಲಿ ರೆವಿನ್ಯೂ ನಷ್ಟ ಉಂಟು ಮಾಡಲಿದೆ. ಈ ಗಹನ ಪ್ರಶ್ನೆಯನ್ನು ಎದುರಿಸಲು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕು:

6. ರಾಜ್ಯ ಸರಕಾರಗಳಿಗೆ ಅವುಗಳು ಅನುಭವಿಸುತ್ತಿರುವ ನಷ್ಟಗಳಿಗೆ ಪರಿಹಾರ ನೀಡಬೇಕು.

7. ಎಫ್‍ಆರ್‍ಬಿಎಂ ಕಾಯ್ದೆಯ ಪ್ರಕಾರ ರಾಜ್ಯ ಸರಕಾರಗಳು ಸಾಲ ಪಡೆಯುವುದರ ಮೇಲಿರುವ ಮಿತಿಯನ್ನು ಒಟ್ಟು ರಾಜ್ಯ ಆಂತರಿಕ ಉತ್ಪನ್ನ (ಜಿಎಸ್‍ಡಿಪಿ) ದ  3% ದಿಂದ 4%ಕ್ಕೆ ಏರಿಸಬೇಕು.
* ಪ್ರಧಾನ ಮಂತ್ರಿಗಳು ಪದೆ ಪದೇ ನಗದು ರಹಿತ ಆರ್ಥಿಕಕ್ಕೆ ಪಲ್ಲಟಗೊಳ್ಳಬೇಕು ಎಂದು ಹೇಳುತ್ತಿರುವುದರಿಂದ ಜನಗಳ ಮೇಲೆ ಹೆಚ್ಚಿನ ಖರ್ಚುಗಳ ಹೊರೆ ಹಾಕದಂತೆ ನೋಡಿಕೊಳ್ಳುವುದು ಅಗತ್ಯ. ಅದಕ್ಕಾಗಿ

8. ಎಲ್ಲ ಡಿಜಿಟಲ್ ವ್ಯವಹಾರಗಳ ಮೇಲಿನ ತೆರಿಗೆಗಳನ್ನು ತೆಗೆದು ಹಾಕಬೇಕು.

9. ಎಲ್ಲ ರೇಶನ್‍ ಕಾರ್ಡುದಾರರಿಗೆ ಪೂರೈಕೆಗಳು ಲಭ್ಯವಾಗಬೇಕು. ಆಧಾರ್‍ ಕಾರ್ಡನ್ನು ಕಡ್ಡಾಯ ಮಾಡಿರುವುದರಿಂದಾಗಿ ದೊಡ್ಡ ಸಂಖ್ಯೆಯ ಜನಗಳಿಗೆ ರೇಶನ್‍ಗಳನ್ನು ವಂಚಿಸಲಾಗುತ್ತಿದೆ.
* ಅನಾಣ್ಯೀಕರಣಗೊಳಿಸಿದ ಹಣದಲ್ಲಿ ಬ್ಯಾಂಕುಗಳಿಗೆ ಮರಳಿದ ಹಣದ ಮೊತ್ತ ಎಷ್ಟು ಎಂದು ಪ್ರಧಾನ ಮಂತ್ರಿಗಳು ಸಾರ್ವಜನಿಕವಾಗಿ ಘೋಷಿಸಬೇಕು. ಎರಡು ವಾರಗಳ ಹಿಂದೆ 82% ಹಳೆಯ ನೋಟುಗಳು ಮತ್ತೆ ಬ್ಯಾಂಕುಗಳಿಗೆ ಬಂದಿವೆ ಎಂದು ರಿಝರ್ವ್ ಬ್ಯಾಂಕ್ ಹೇಳಿತ್ತು.

10. ಎಲ್ಲ ಅನಾಣ್ಯೀಕರಣಗೊಂಡ ಹಣ ಬ್ಯಾಂಕುಗಳಿಗೆ ಮರಳಿ ಬಂದಿದೆಯೇ?
* ಬಂದಿದ್ದರೆ ಎಲ್ಲ ಕಪ್ಪು ಹಣ ಬಿಳಿಯಾಗಿರುತ್ತದೆ. ಅದಕ್ಕಿಂತಲೂ ಹೆಚ್ಚು ಬಂದಿದೆಯೆಂದರೆ ನಕಲಿ ನೋಟುಗಳೆಲ್ಲ ಕಾನೂನ ಬದ್ಧಗೊಂಡಂತಾಗಿರುತ್ತದೆ.

11. ಇದುವರೆಗೆ ಮುದ್ರಿಸಿರುವ ಹೊಸ ನೋಟುಗಳ ಪ್ರಮಾಣ ಮತ್ತು ಮೊತ್ತ ಎಷ್ಟು?

12. ಹೊಸ ನೋಟುಗಳ ಮೂಲಕ ಅನಾಣ್ಯೀಕರಣ ಗೊಂಡಿರುವ ಮೌಲ್ಯದ ಹಣ ಯಾವಾಗ ಚಲಾವಣೆಗೆ ಬರುತ್ತದೆ?
* ಪ್ರಧಾನ ಮಂತ್ರಿಗಳು ಭ್ರಷ್ಟಾಚಾರವನ್ನು ಕೊನೆಗೊಳಿಸುವ ಬಗ್ಗೆ ಬಹಳ ಮಾತಾಡುತ್ತಿದ್ದಾರೆ.

13. ವ್ಯಾಪಂ, ಸಹಾರ-ಬಿರ್ಲಾ ಮುಂತಾದ ವಿವಿಧ ಹಗರಣಗಳ ಬಗ್ಗೆ ಸರಕಾರ ವಿಚಾರಣೆಗಳನ್ನು ನಡೆಸುತ್ತಿಲ್ಲ ಏಕೆ?

14. ತಾವು ಕಷ್ಟ ಪಟ್ಟು ಗಳಿಸಿದ ಹಣವನ್ನು ಪಡೆಯುವ ಪ್ರಯತ್ನದಲ್ಲಿ ಸಾಲಿನಲ್ಲಿ ನಿಂತು 100 ಮಂದಿ ಸತ್ತಿರುವರೆಂದು ವರದಿಯಾಗಿದೆ. ಇವರ ಕುಟುಂಬಗಳಿಗೆ ತಕ್ಷಣವೇ ಸಾಕಷ್ಟು ಪರಿಹಾರಗಳನ್ನು ಕೊಡಬೇಕು.

15. ಈ ಕ್ರಮದಿಂದ ದೇಶಕ್ಕೆ ಆಗಿರುವ ಆರ್ಥಿಕ ನಷ್ಟ ಕುರಿತಂತೆ ಸರಕಾರದ ಅಂದಾಜು ಏನು?

16. ನವಂಬರ್ 8, 2016ರಂದು ಅನಾಣ್ಯೀಕರಣದ ಪ್ರಕಟಣೆಯ ನಂತರ ಎಷ್ಟು ಮಂದಿ ತಮ್ಮ ಉದ್ಯೋಗವನ್ನು, ಜೀವನಾಧಾರವನ್ನು ಕಳಕೊಂಡಿದ್ದಾರೆ ?

ಪ್ರಧಾನ ಮಂತ್ರಿಗಳು ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿದೆ ಮತ್ತು ನರಳುತ್ತಿರುವ ನಮ್ಮ ವಿಶಾಲ ಜನ ಸಮೂಹಕ್ಕೆ ಕನಿಷ್ಟ ಕೆಲವು ಪರಿಹಾರಗಳನ್ನು ಒದಗಿಸಬೇಕಾಗಿದೆ.

Leave a Reply

Your email address will not be published. Required fields are marked *