ಪ್ರಶ್ನೆಗಳಿಗೆ ಉತ್ತರಿಸಲು ಪ್ರಧಾನ ಮಂತ್ರಿಗಳಿಗೆ ಭಯ

ಮತ್ತೊಮ್ಮೆ ಸ್ಪಷ್ಟವಾಗಿಸಿದ ಇನ್ನೊಂದು ಅಮೋಘ ಭಾಷಣ : ಸೀತಾರಾಮ್ ಯೆಚೂರಿ

ಪ್ರಧಾನ ಮಂತ್ರಿಗಳು ಇನ್ನೊಂದು ಅಮೋಘ ಭಾಷಣ ಮಾಡಿದ್ದಾರೆ, ಅದರಲ್ಲಿ ಅನಾಣ್ಯೀಕರಣಕ್ಕೆ ಏನೇನೂ ಸಂಬಂಧ ಪಡದ ಯಾವ್ಯಾವುದೋ ವಿಷಯಗಳನ್ನಷ್ಟೇ ಎತ್ತಿದ್ದಾರೆ. ಈ ಡಿಸೆಂಬರ್ 31ರ ಭಾಷಣದ ಉದ್ದೇಶವಾದರೂ ಏನು?
ಪ್ರಶ್ನೆಗಳಿಗೆ ಉತ್ತರಿಸಲು ಅವರಿಗೆ ಭಯ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ. ನಾವು ನಿರ್ದಿಷ್ಟ ಪ್ರಶ್ನೆಗಳನ್ನು ಎತ್ತಿದ್ದೆವು. ಅವುಗಳ ಪ್ರಸ್ತಾಪವಿಲ್ಲ. ಗಮನಾರ್ಹವಾದುದೇನನ್ನೂ ಪರಿಶೀಲಿಸಿಲ್ಲ.

ಈ ಭಾಷಣ ಹಣಕಾಸು ಮಂತ್ರಿ ಸಂಸತ್ತಿನಲ್ಲಿ ಮಾಡುವ ಒಂದು ಬಜೆಟ್ ಭಾಷಣದಂತಿದೆ. ತೆರಿಗೆ ಪ್ರಸ್ತಾಪಗಳು ಮತ್ತು ಹಣ ನೀಡಿಕೆಗಳು ಸಂಸತ್ತಿನಲ್ಲಿ ಮಾತ್ರ ನಡೆಯಲು ಸಾಧ್ಯ, ಈ ರೀತಿ ಟಿವಿ ಭಾಷಣದಲ್ಲಿ ಪ್ರಕಟಿಸುವುದು ಅರ್ಥಹೀನ.
ಇದು ಬಿಹಾರ ಚುನಾವಣಾ ರ್ಯಾಲಿಗಳಲ್ಲಿ ಮೋದಿಯವರ ಚೇಷ್ಟೆಗಳನ್ನು ನೆನಪಿಗೆ ತರುತ್ತಿದೆ. ಅಲ್ಲಿ ಅವರ ಇಂತಹ ಹಣ ನೀಡಿಕೆಗಳ ಮಾತುಗಳು ಜನಗಳು ತಮ್ಮ ಮತಗಳನ್ನು ಮಾರಾಟಕ್ಕಿಟ್ಟಿದ್ದಾರೋ ಎಂಬಂತೆ ಅವರ ಮುಂದೆ ನಡೆಸುವ ‘ಹರಾಜಿ’ನಂತೆ ಕಾಣುತ್ತಿತ್ತು. ಅಲ್ಲಿ ಮತದಾರರ ತೀರ್ಪಿನ ಬಗ್ಗೆ ನಮಗೆಲ್ಲರಿಗೆ ಗೊತ್ತಿದೆ.

ಪ್ರಧಾನ ಮಂತ್ರಿಗಳು ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಮತದಾನ ನಡೆಸುವ ಬಗ್ಗೆ ಹೇಳಿದರು. ಇದು ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ಒಕ್ಕೂಟವಾದದ ನೀತಿಗೆ ವಿರುದ್ಧವಾದದ್ದು. ಭಾರತದ ಚುನಾವಣಾ ಇತಿಹಾಸ ಏಕಕಾಲದ ಚುನಾವಣೆಯೊಂದಿಗೇ ಆರಂಭವಾಗಿತ್ತು. ಆದರೆ ಕೇಂದ್ರ ಸರಕಾರ ಕಲಮು 356ನ್ನು ಬಳಸಿ ರಾಜ್ಯ ಸರಕಾರಗಳನ್ನು ವಜಾ ಮಾಡಿದ್ದರಿಂದ ಅದಕ್ಕೆ ಕುಂದುಂಟಾಯಿತು. ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶದಲ್ಲಿ ಈ ಮೋದಿ ಸರಕಾರ  ಕಲಮು 356ರ ನಗ್ನ ದುರುಪಯೋಗ ಮಾಡಿರುವಾಗ ಪ್ರಧಾನಿಗಳ ಈ ಮಾತಿನಲ್ಲಿ ಗೋಸುಂಬೆತನದ ಗಬ್ಬು ವಾಸನೆ ಹೊಡೆಯುತ್ತದೆ.

ಇದುವರೆಗೆ ಭಾರತದಲ್ಲಿ ಚುನಾವಣೆಗಳಲ್ಲಿ ಅತಿ ಹೆಚ್ಚು, ನೀರಿನಂತೆ ಹಣ ಖರ್ಚು ಮಾಡಿರುವ ಬಿಜೆಪಿ ಹಣದ ಭರಾಟೆ, ಭ್ರಷ್ಟಾಚಾರ ಮತ್ತು ರಾಜಕೀಯ ಪ್ರಕ್ರಿಯೆಯ ಬಗ್ಗೆ ಮಾತಾಡುತ್ತಿದೆ! ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆಗಳನ್ನು ನಿಷೇಧಿಸಬೇಕು ಮತ್ತು ರಾಜಕೀಯ ಪಕ್ಷಗಳು ಮಾಡುವ ಚುನಾವಣಾ ಖರ್ಚನ್ನೂ ಅಭ್ಯರ್ಥಿಗಳ ಖರ್ಚಿನ ಲೆಕ್ಕಕ್ಕೆ ಸೇರಿಸಬೇಕು ಎಂದು ಸಿಪಿಐ(ಎಂ) ಎರಡು ಪ್ರಮುಖ ಪ್ರಸ್ತಾಪಗಳನ್ನು ಮುಂದಿಟ್ಟಿದೆ. ಮೋದಿ ಭ್ರಷ್ಟಾಚಾರವನ್ನು ನಿಜವಾಗಿಯೂ ಅಷ್ಟೊಂದು ಗಂಭೀರವಾಗಿ ಕಾಣುತ್ತಿದ್ದರೆ, ಸಿಪಿಐ(ಎಂ) ಮುಂದಿಟ್ಟಿರುವ ಈ ಎರಡು ಪ್ರಮುಖ ಪ್ರಸ್ತಾಪಗಳನ್ನೇಕೆ ಸ್ವೀಕರಿಸುತ್ತಿಲ್ಲ? ಅದರ ಬದಲು, ಮೋದಿ ಸರಕಾರ ರಾಜಕೀಯ ಪಕ್ಷಗಳಿಗೆ ವಿದೇಶಿ ನಿಧಿಗೆ ಅವಕಾಶ ನೀಡುವಂತೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ ಕಳ್ಳತನದಿಂದ, ಅದೂ ಹಿಂದಿನಿಂದಲೇ ಅನ್ವಯವಾಗುವಂತೆ ತಿದ್ದುಪಡಿಗಳನ್ನು ತಂದಿರುವುದನ್ನು ನಾವು ಕಾಣುತ್ತೇವೆ.

ನವಂಬರ್ 8ರ ನಂತರ ಎಷ್ಟು ಹಣ ವ್ಯವಸ್ಥೆಯೊಳಕ್ಕೆ ವಾಪಾಸು ಬಂದಿದೆ ಮತ್ತು ಒಟ್ಟು ಎಷ್ಟು ಹಣವನ್ನು ಚಲಾವಣೆಗೆ ಕೊಡಲಾಗಿದೆ ಎಂಬುದು ಪ್ರಧಾನ ಮಂತ್ರಿಗಳಿಗೆ ತಿಳಿದಿಲ್ಲವೇ? ಈ ಸಂಗತಿಗಳನ್ನು ತಿಳಿಸಲು ಅವರಿಗೆ ಭಯವೇಕೆ? ಮರೆಮಾಚುವಂತದ್ದು ಏನಿದೆ? ಎಲ್ಲ ಹಣ ವಾಪಾಸು ಬಂದಿದ್ದರೆ, ಕಪ್ಪು ಹಣವನ್ನೆಲ್ಲ ಬಿಳಿ ಮಾಡಲಾಗಿದೆಯೇ ಅಥವ ಹೆಚ್ಚು ಹಣ ಬಂದಿದ್ದರೆ, ನಕಲಿ ಕರೆನ್ಸಿಯನ್ನೂ ಸೇರಿಸಿಕೊಂಡು ಅದು ಕಾನೂನುಬದ್ಧ ಗೊಂಡಿದೆಯೇ? ಭಾರತೀಯರಿಗೆ ಈ ಸಂಗತಿಗಳನ್ನು ತಿಳಿಯುವ ಅರ್ಹತೆ ಇದೆ.

ನವಂಬರ್ 8ರ ತುಘಲಕ್ ಫರ್ಮಾನ್ ದಿನಗೂಲಿಗಳು ಮತ್ತು ಅನೌಪಚಾರಿಕ ಆರ್ಥಿಕವನ್ನು ಹಾಳುಗೆಡವಿದೆ. ಈ ಜನಗಳಿಗೆ ಪರಿಹಾರದ ಮಾತಂತೂ ಇಲ್ಲ, ಕಾಳಜಿಯ ಒಂದು ಮಾತು ಕೂಡ ಇಲ್ಲ.

ಇದು ಕೇವಲ ಸಾಲುಗಳಲ್ಲಿ ನಿಂತಿರುವ ಜನಗಳ ಬಗ್ಗೆ ಮಾತ್ರವಲ್ಲ. ಅನಾಣ್ಯೀಕರಣದಿಂದ 100ಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಆ ಸಾವುಗಳ ಪ್ರಸ್ತಾಪವೂ ಇಲ್ಲ, ಅಥವ ಅವರಿಗೆ ಪರಿಹಾರದ ಮಾತೂ ಇಲ್ಲ.

ರೈತರು ಮತ್ತು ಬೇಗನೇ ಹಾಳಾಗುವ ಉತ್ಪನ್ನಗಳನ್ನು ತರುವ ಮೀನುಗಾರರು ಮೊದಲಾದವರು ಈ ಅನಾಣ್ಯೀಕರಣ ಮತ್ತು ಅದರಿಂದಾಗಿ ಕುಂಠಿತಗೊಂಡಿರುವ ಆರ್ಥಿಕ ವ್ಯವಸ್ಥೆಯಿಂದಾಗಿ ಕಂಗಾಲಾಗಿದ್ದಾರೆ. ರೈತರಿಗೆ ನಾಟಿ ಮಾಡುವುದು ಅಥವ ಬೆಳೆಗಳನ್ನು ಸರಿಯಾಗಿ ನೋಡಿಕೊಳ್ಳುವುದು ಅಥವ ಕನಿಷ್ಟ ಬೆಂಬಲ ಬೆಲೆಗೆ ಮಾರುವುದು ನಗದಿನ ಅಭಾವದಿಂದಾಗಿ ಸಾಧ್ಯವಾಗದೆ ಚಡಪಡಿಸುವಂತಾಗಿದೆ. ಅವರಿಗೆ ಸಾಲಗಳ ಮೇಲೆ ಎರಡು ತಿಂಗಳ ಬಡ್ಡಿ ತೆರುತ್ತೇವೆ ಎಂದು ಹೇಳಿದರೆ, ಅದರಿಂದ ಅವರ ನಷ್ಟಗಳೇನೂ ಭರ್ತಿಯಾಗುವುದಿಲ್ಲ. ಅವರಿಗೆ ಉಂಟಾಗಿರುವ ನಷ್ಟಗಳನ್ನು ಭರ್ತಿ ಮಾಡಿ ಕೊಡುವುದಿಲ್ಲವೇಕೆ?

Leave a Reply

Your email address will not be published. Required fields are marked *